ರಾಷ್ಟ್ರೀಯ ಹೆಣ್ಣುಮಕ್ಕಳ ದಿನ | ಹೆಣ್ಣು ಮಗುವನ್ನು ಉಳಿಸಿ, ದೇಶವನ್ನು ಬೆಳೆಸಿ

Date:

ಪುರುಷಪ್ರಧಾನ ಸಮಾಜವು ಜೈವಿಕವಾಗಿ ಹೆಣ್ಣು ಎನ್ನುವ ಕಾರಣಕ್ಕಾಗಿ ಹುಡುಗಿಯರು ಮತ್ತು ಮಹಿಳೆಯರ ವಿಷಯದಲ್ಲಿ ಹಲವು ರೂಪಗಳಲ್ಲಿ ದಿನನಿತ್ಯದ ಬದುಕಿನಲ್ಲಿ ಲಿಂಗತಾರತಮ್ಯವನ್ನು ತೋರಿಸುತ್ತದೆ. ಇದರಿಂದ ಹೆಣ್ಣುಮಕ್ಕಳು ಅವಕಾಶ, ಸೌಲಭ್ಯ ಮತ್ತು ಹಕ್ಕುಗಳಿಂದ ನಿರಂತರವಾಗಿ ವಂಚಿತರಾಗುತ್ತಿದ್ದಾರೆ.

ನಾಳೆಯ ಉತ್ತಮ ಭವಿಷ್ಯಕ್ಕಾಗಿ ಹುಡುಗಿಯರನ್ನು ಉಳಿಸುವುದು, ಬೆಳೆಸುವುದು ಮತ್ತು ಸಬಲೀಕರಣಗೊಳಿಸುವುದು ಇಂದಿನ ತುರ್ತು ಆಗಿದೆ. ಹೆಣ್ಣುಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿರುವುದರಿಂದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಭಾರತದಲ್ಲಿ ಪ್ರತಿ ವರ್ಷ ಜನವರಿ 24ರಂದು ಆಚರಿಸಲಾಗುತ್ತಿದೆ. ಲಿಂಗ ಅಸಮಾನತೆ, ಪುರುಷ ಪ್ರಾಧಾನ್ಯತೆಯಿಂದಾಗಿ ದಶಕದಿಂದ ದಶಕಕ್ಕೆ ಹೆಣ್ಣುಮಕ್ಕಳ ಲಿಂಗಾನುಪಾತದಲ್ಲಿ ಕುಸಿತವುಂಟಾಗುತ್ತಿರುವುದರಿಂದಾಗಿ ಸಮಾಜ ಅನೇಕ ಸಂಕಷ್ಟ ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ.

1951ರಲ್ಲಿ 946ರಷ್ಟು ಇದ್ದ ಲಿಂಗಾನುಪಾತ ನಂತರದ ವರ್ಷಗಳಲ್ಲಿ ಕುಸಿಯುತ್ತಾ ಸಾಗಿತು 1991ಕ್ಕೆ 927ಕ್ಕೆ ಕುಸಿತಗೊಂಡು ಸಾಮಾಜಿಕ ಚಿಂತಕರಿಗೆ, ನೀತಿ ನಿರೂಪಕರಿಗೆ ಅಭಿವೃದ್ಧಿಯ ತಜ್ಞರಿಗೆ, ಸಾಮಾಜಿಕ ಮತ್ತು ಮಹಿಳಾ ಹೋರಾಟಗಾರರಿಗೆ ಆಂತಕವನ್ನು ಸೃಷ್ಟಿಸಿತು. ನೈಸರ್ಗಿಕವಾಗಿ ಹೆಣ್ಣುಮಕ್ಕಳ ಜನನ ದರ ಹೆಚ್ಚು ಏಕೆಂದರೆ XX ಕ್ರೊಮೊಸೋಮ್‌ಗಳ ಕೂಡುವಿಕೆಯ ಸಂಭವನೀಯತೆ ಹೆಚ್ಚಿರುತ್ತದೆ. ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು ಇರುವುದು ನೈಸರ್ಗಿಕ ನಿಯಮವು ಹೌದು ಆದರೆ ಪುರುಷಪ್ರಧಾನ ಸಾಮಾಜಿಕ ರಚನೆಯ ಕಾರಣದಿಂದಾಗಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಮುಂತಾದ ವಲಯಗಳಲ್ಲಿ ಅಂಚಿಗೆ ತಳ್ಳಲ್ಪಡುತ್ತಾರೆ. ಲಿಂಗಾನುಪಾತ ಕುಸಿತದಿಂದ ಸಮಾಜ ಅನೇಕ ರೀತಿಯ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ. ಅದರಲ್ಲಿ ಮದುವೆಗೆ ಹೆಣ್ಣುಗಳ ಕೊರತೆ, ಫಲವತತ್ತೆ ದರದಲ್ಲಿ ಕುಸಿತ, ಲಿಂಗಾನುಪಾತದ ಅಸಮತೋಲನ, ಹೆಣ್ಣುಮಕ್ಕಳ ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಹೆಣ್ಣುಶಿಶು ಹತ್ಯೆ ಮತ್ತು ಭ್ರೂಣ ಹತ್ಯೆ, ಅತ್ಯಾಚಾರ, ಬಾಲೆಯರು ಗರ್ಭಿಣಿಯಾಗುತ್ತಿರುವುದು ಹೀಗೆ ಇನ್ನು ಮುಂತಾದ ಸಮಸ್ಯೆಗಳು ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1960 ಮತ್ತು 1970ರ ದಶಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ ಮತ್ತು ಹೆಣ್ಣುಮಕ್ಕಳ ಸ್ಥಾನಮಾನ, ಹಕ್ಕುಗಳ ಕುರಿತಾದ ಚರ್ಚೆಗಳು ಸ್ತ್ರೀವಾದ, ಮಹಿಳಾ ಚಳವಳಿಯ ಕಾರಣದಿಂದಾಗಿ ಹುಟ್ಟಿಕೊಂಡವು. ಈ ಚರ್ಚೆಗಳು ಹೆಣ್ಣುಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣದ ಕಡೆಗೆ ದೃಷ್ಟಿ ಹರಿಸುವಂತೆ ಮಾಡಿದವು. ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಸ್ಥಾನಮಾನ, ಹಕ್ಕುಗಳು, ಶಿಕ್ಷಣ ಮತ್ತು ಅಭಿವೃದ್ಧಿಯ ಮಹತ್ವವನ್ನು ಜನರಿಗೆ ತಿಳಿಸುವ ಸಲುವಾಗಿ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು ಅಕ್ಟೊಬರ್ 11 ಅನ್ನು ಹೆಣ್ಣುಮಕ್ಕಳ ದಿನವನ್ನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ವಿಶ್ವಸಂಸ್ಥೆಯು ಕರೆ ನೀಡಿದೆ. ಭಾರತದಲ್ಲಿ 2008ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಭಾರತದ ಮಹಿಳಾ ಪ್ರಧಾನಿ ಅಧಿಕಾರ ಸ್ವೀಕರಿಸಿದ ಹಿನ್ನಲೆಯ ನೆನಪಿನಲ್ಲಿ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲು ಪ್ರಾರಂಭಿಸಿತು.

girl child 5

ಪುರುಷಪ್ರಧಾನ ಸಮಾಜವು ಜೈವಿಕವಾಗಿ ಹೆಣ್ಣು ಎನ್ನುವ ಕಾರಣಕ್ಕಾಗಿ ಹುಡುಗಿಯರು ಮತ್ತು ಮಹಿಳೆಯರ ವಿಷಯದಲ್ಲಿ ಹಲವು ರೂಪಗಳಲ್ಲಿ ದಿನನಿತ್ಯದ ಬದುಕಿನಲ್ಲಿ ಲಿಂಗ ತಾರತಮ್ಯವನ್ನು ತೋರಿಸುತ್ತದೆ. ಇದರಿಂದ ಹೆಣ್ಣುಮಕ್ಕಳು ಅವಕಾಶ, ಸೌಲಭ್ಯ ಮತ್ತು ಹಕ್ಕುಗಳಿಂದ ನಿರಂತರವಾಗಿ ವಂಚಿತರಾಗುತ್ತಿದ್ದಾರೆ. ಲಿಂಗ ತಾರತಮ್ಯವನ್ನು ತೊಲಗಿಸುವ ಮತ್ತು ಹುಡುಗಿಯರನ್ನು ಸಬಲೀಕರಣಗೊಳಿಸುವ ಹಾಗೂ ಅಭಿವೃದ್ಧಿ ಹೊಂದಬಹುದಾದ ಪರಿಸರವನ್ನು ಸೃಷ್ಟಿಸುವ ಸಲುವಾಗಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಮಾಡಲಾಗುತ್ತದೆ.

ಈ ದಿನವು ಹುಡುಗಿಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಾಗ ಮತ್ತು ಲಿಂಗ ಪಕ್ಷಪಾತದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೆ ಇವರಿಗೆ ಸಮಾನ ಅವಕಾಶ, ಪ್ರೋತ್ಸಾಹ ಮತ್ತು ಬೆಂಬಲವನ್ನು ಒದಗಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ. ಹುಡುಗಿಯರ ಬಗೆಗಿನ ಸಾಮಾಜಿಕ ಮನೋಭಾವಗಳನ್ನು ಬದಲಾಯಿಸುವುದು, ಹೆಣ್ಣು ಭ್ರೂಣ ಹತ್ಯೆಯಂತಹ ಸಮಸ್ಯೆಗಳನ್ನು ಪರಿಹರಿಸುವುದು, ಕ್ಷೀಣಿಸುತ್ತಿರುವ ಲಿಂಗ ಅನುಪಾತದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಮಗುವಿಗೆ ಸಮಾನ ವಾತಾವರಣವನ್ನು ಒದಗಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಹೆಣ್ಣು ಮಕ್ಕಳ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಏಕೆಂದರೆ ಇದು ಅವರ ವೈಯಕ್ತಿಕ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ಒಟ್ಟಾರೆ ಸಮಾಜದ ಪ್ರಗತಿಗೂ ಸಹ ಹೆಣ್ಣು ಮಕ್ಕಳು ನಿರ್ಣಾಯಕರಾಗಿದ್ದಾರೆ. ಇದನ್ನು ನಿರ್ದಿಷ್ಟವಾಗಿ ಹೇಳುವುದಾದರೆ, ಲಿಂಗ ಸಮಾನ ಸಮಾಜದ ರಚನೆಗೆ ಹೆಣ್ಣು ಮತ್ತು ಗಂಡುಮಕ್ಕಳಿಬ್ಬರಿಗೂ ಮುಖ್ಯವಾಗಿದೆ. ಲಿಂಗವ್ಯವಸ್ಥೆಯ ಕಾರಣದಿಂದಾಗಿ ಹೆಣ್ಣುಮಗುವಿನ ಜನನವನ್ನು ಸ್ವಾಗತಿಸುವುದಕ್ಕಿಂತ ನಿರಾಕರಿಸುವುದೇ ಹೆಚ್ಚು. ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಿದ ಪ್ರಕರಣ ಮಂಡ್ಯದ ಅಲೆಮನೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಆಶ್ಚರ್ಯ ಮತ್ತು ದಿಗ್ಬ್ರಾಂತರನ್ನಾಗಿ ಮಾಡಿದೆ ಅಲ್ಲದೆ ಕರ್ನಾಟಕದ ಎರಡು ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಸಹ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ನಡೆಯುತ್ತಿರುವುದಕ್ಕೆ ಅಲ್ಲಿಯ ಲಿಂಗಾನುಪಾತ ಮತ್ತು ವರದಿಯಾದ ಪ್ರಕರಣಗಳನ್ನು ಅವಲೋಕಿಸಿದರೆ ತಿಳಿಯುತ್ತದೆ. ನಗರೀಕರಣ, ಸಂತಾನೋತ್ಪತ್ತಿ ತಂತ್ರಜ್ಞಾನ ಬೆಳವಣಿಗೆಯ ಅಡ್ಡ ಪರಿಣಾಮಗಳಲ್ಲಿ ಹೆಣ್ಣು ಭ್ರೂಹತ್ಯೆಯು ಸೇರಿದೆ. ಸಮಾನತೆಯ ಸಮಾಜವನ್ನು ನಿರ್ಮಿಸಲು ಹುಡುಗಿಯರ ಹಕ್ಕುಗಳು ಮತ್ತು ಅವಕಾಶಗಳನ್ನು ಗುರುತಿಸುವುದು, ಎತ್ತಿಹಿಡಿಯುವುದು ಮತ್ತು ಅವುಗಳನ್ನು ಪ್ರತಿಯೊಬ್ಬ ಹೆಣ್ಣುಮಗುವಿಗೂ ಒದಗಿಸುವುದು ಅತ್ಯಗತ್ಯವಾಗಿದೆ. ಈ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆ, ನೀತಿ, ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ಪ್ರಮುಖವಾದವುಗಳು.

girls

ಬಾಲ್ಯ ವಿವಾಹ ನಿಷೇಧ ಕಾಯ್ದೆ, 1929ರಿಂದ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸಿದರೂ ಸಹ ಬಾಲ್ಯವಿವಾಹಗಳು ನಡೆಯುತ್ತಲೇಇದ್ದವು. ಬಾಲ್ಯವಿವಾಹದಿಂದ ಹೆಣ್ಣುಮಕ್ಕಳ ಬದುಕೇ ಸಂಕಷ್ಟಕ್ಕೆ ತುತ್ತಾಗುತ್ತದೆ ಎಂಬುದನ್ನು ಹಲವು ಅಧ್ಯಯನ ಮತ್ತು ವರದಿಗಳು ತಿಳಿಸಿದವು ಪರಿಣಾಮ ಇತ್ತೀಚಿಗೆ ಕರ್ನಾಟಕ ಸರಕಾರವು 2025ರಲ್ಲಿ ಮತ್ತೆ 2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿ ಹಲವು ಕಠಿಣ ಕ್ರಮಗಳನ್ನು ಸೇರ್ಪಡೆ ಮಾಡಿದೆ. ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡುವ ಗುರಿ ಸಾಧಿಸಲು ಕಾರ್ಯಪ್ರವೃತ್ತವಾಗಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO ಕಾಯ್ದೆ, 2012): ಇದು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು ಇರುವ ಕಾನೂನು̤ ಅದರ ಅನುಷ್ಠಾನವನ್ನು ಹೆಚ್ಚಿಸಲು 2020ರಲ್ಲಿ ನವೀಕರಿಸಿದ ನಿಯಮಗಳೊಂದಿಗೆ ಜಾರಿ ಮಾಡಲಾಗಿದೆ. ಇದರ ಜೊತೆ ಬಾಲ ನ್ಯಾಯ ಕಾಯ್ದೆ, 2015, ಅಗತ್ಯವಿರುವ ಮಕ್ಕಳಿಗೆ ಆರೈಕೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಮಿಷನ್ ವಾತ್ಸಲ್ಯವು ಮಕ್ಕಳ ಸಹಾಯವಾಣಿ ಮತ್ತು ಕಾಣೆಯಾದ ಮಕ್ಕಳಿಗೆ ಸಹಾಯ ಮಾಡಲು ಟ್ರ್ಯಾಕ್ ಚೈಲ್ಡ್ ಪೋರ್ಟಲ್‌ ನಂತಹ ಸೇವೆಗಳೊಂದಿಗೆ ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಪೋರ್ಟಲ್ ಪೊಲೀಸ್ ಠಾಣೆಗಳಲ್ಲಿ ವರದಿಯಾಗುವ ‘ಕಾಣೆಯಾದ’ ಮಕ್ಕಳನ್ನು ಮಕ್ಕಳ ಆರೈಕಾ ಸಂಸ್ಥೆಗಳಲ್ಲಿ ವಾಸಿಸುವ ಹಾಗೂ ಪತ್ತೆಯಾದ ಮಕ್ಕಳನ್ನು ಅವರ ಪಾಲಕ ಅಥವಾ ಪೋಷಕರಿಗೆ ಜೊತೆಯಾಗಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ NIMHANS ಮತು E-SAMPARK ಕಾರ್ಯಕ್ರಮದ ಸಹಯೋಗವು ಮಾನಸಿಕ ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ. ಈ ಪ್ರಯತ್ನಗಳು ಸಮಾಜದಲ್ಲಿ ಹುಡುಗಿಯರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತವೆ.

ಅಂಗನವಾಡಿ ಸೇವೆಗಳ ಯೋಜನೆಯಡಿಯಲ್ಲಿ ಗರ್ಭಧರಿಸಿದ ಮಹಿಳೆಗೆ ಮತ್ತು ಹಾಲುಣ್ಣುಸುತ್ತಿರುವ ತಾಯಂದಿಯರಿಗೆ ಹಾಗೂ ಆರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಶಾಲಾಪೂರ್ವ ಶಿಕ್ಷಣ ಸೇವೆಯನ್ನು ಒದಗಿಸುತ್ತಿದೆ. ಇದಕ್ಕೆ ಪೂರಕವಾಗಿ ಲಸಿಕೆ, ಆರೋಗ್ಯ ಪರೀಕ್ಷೆ, ಹೆಚ್ಚಿನ ಸೇವೆಗಾಗಿ ಶಿಫಾರಸ್ಸು ಮಾಡುವ ಸೇವೆಗಳನ್ನು ಒದಗಿಸುತ್ತಿದೆ. ಇದರ ಆರೋಗ್ಯ ಸೇವೆಗಳಲ್ಲಿ ಆರೋಗ್ಯ ಇಲಾಖೆಯ ಸಹಭಾಗಿತ್ವವು ಇದೆ.

ಒನ್ ಸ್ಟಾಪ್ ಕೇಂದ್ರಗಳು ಮತ್ತು ಮಹಿಳಾ ಸಹಾಯವಾಣಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನದಲ್ಲಿ ತೆರೆದ ಒನ್ ಸ್ಟಾಪ್ ಸೆಂಟರಗಳು ಸಖಿ ಕೇಂದ್ರಗಳಾಗಿ ಜನಪ್ರಿಯವಾಗಿವೆ. ಇವುಗಳು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಪೋಲಿಸ್, ವೈದ್ಯಕೀಯ, ಕಾನೂನು ಸಹಾಯ, ಆಪ್ತಸಮಾಲೋಚನೆ, ತಾತ್ಕಾಲಿಕ ವಸತಿ ಸೌಲಭ್ಯವನ್ನು ಒದಗಿಸುತ್ತದೆ. ಮಹಿಳಾ ಸಹಾಯವಾಣಿಯು 24 ಗಂಟೆಗಳ ತುರ್ತು ಮತ್ತು ತುರ್ತೇತರ ಸೇವೆಗಳನ್ನು ಒದಗಿಸುತ್ತಿದೆ. ಮಹಿಳೆಯರು 112 ಅಥವಾ 181ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಸ್ವಧಾರಾ ಗೃಹ ಯೋಜನೆ: ಇದು ಕೇಂದ್ರ ಸರಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ಯಾವುದಾದರೂ ತೊಂದರೆಗೆ ಒಳಗಾದ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಗೆ ಸಾಂಸ್ಥಿಕ ನೆರವನ್ನು ಒದಗಿಸುತ್ತದೆ ಅಲ್ಲದೆ ಘನತೆಯಿಂದ ಬದುಕನ್ನು ನಡೆಸಲು ಪುನರವಸತಿ ಸೌಲಭ್ಯವನ್ನು ಕಲ್ಪಿಸುತ್ತದೆ.

ಉಜ್ವಲಾ ಯೋಜನೆ : ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಾನವ ಕಳ್ಳಸಾಗಣೆ ತಡೆಗಟ್ಟುವಿಕೆ ಮತ್ತು ವಾಣಿಜ್ಯ ಹಾಗೂ ಲೈಂಗಿಕ ಉದ್ದೇಶದಿಂದ ಕಳ್ಳಸಾಗಣೆಗೆ ಒಳಗಾದವರ ರಕ್ಷಣೆ, ಪುನರ್ವಸತಿ, ಮರು-ಏಕೀಕರಣ ಮತ್ತು ವಾಪಸ್ಸಾತಿಗಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ

ಹದಿಹರೆಯದ ಬಾಲಕಿಯರ ಯೋಜನೆ ಅಥವಾ ಕಿಶೋರಿ ಯೋಜನೆ: 11ರಿಂದ-14 ವರ್ಷ ವಯಸ್ಸಿನ ಶಾಲೆಯಿಂದ ಹೊರಗುಳಿದ ಬಾಲಕಿಯರಿಗೆ ಪೌಷ್ಟಿಕಾಂಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪೌಷ್ಟಿಕಾಂಶದ ಅಡಿಯಲ್ಲಿ ಅವರ ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಥಿತಿಯನ್ನು ಸುಧಾರಿಸಲು ಮತ್ತು ಔಪಚಾರಿಕ ಶಾಲಾ ಶಿಕ್ಷಣಕ್ಕೆ ಮರಳಲು ಅವರನ್ನು ಪ್ರೇರೇಪಿಸುತ್ತದೆ ಅಲ್ಲದೆ ಜೀವನ ಕೌಶಲ್ಯ ತರಬೇತಿ, ಸಾರ್ವಜನಿಕ ಸೇವೆಗಳನ್ನು ಪ್ರವೇಶಿಸಲು ಪ್ರೇರೇಪಿಸುತ್ತದೆ.

ಬೇಟಿ ಬಚಾವೋ ಬೇಟಿ ಪಡಾವೋ : ಕುಸಿಯುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತ ಹಾಗೂ ಹುಡುಗಿಯರ ಮತ್ತು ಮಹಿಳೆಯರ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಜನವರಿ 22, 2015 ರಂದು ಪ್ರಾರಂಭಿಸಲಾಗಿದೆ. ಭ್ರೂಣ ಲಿಂಗ ಆಯ್ಕೆಯನ್ನು ತಡೆಗಟ್ಟುವುದು, ಹೆಣ್ಣು ಮಗುವಿನ ಉಳಿವು ಮತ್ತು ರಕ್ಷಣೆಯನ್ನು ಖಚಿತಪಡಿಸುವುದು. ಹೆಣ್ಣು ಮಗುವಿನ ಶಿಕ್ಷಣ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವುದಾಗಿದೆ. ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಮೂಲಕ ಗ್ರಾಮೀಣ ಹೆಣ್ಣುಮಕ್ಕಳನ್ನು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವ ದಿಕ್ಕಿನೆಡೆಗೆ ಸಾಗುತ್ತಿದೆ.

ಇಂತಹ ಹಲವು ಯೋಜನೆಗಳ ಜೊತೆಗೆ ಲಿಂಗಸಮಾನತೆ, ಲಿಂಗಸೂಕ್ಷ್ಮತೆ, ಮಹಿಳಾ ಅಭಿವೃದ್ಧಿ ಮತ್ತು ಸಬಲೀಕರಣದ ಕುರಿತು ಅರಿವು, ಜಾಗೃತಿಯನ್ನು ಮೂಡಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಮಹಿಳಾ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಅಧ್ಯಯನ ಕೇಂದ್ರಗಳು ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಮೂಲಕ ಲಿಂಗಸಮಾನತೆಯ ಸಾಕಾರಕ್ಕಾಗಿ ಕಾರ್ಯನಿರ್ವಹಿಸುತ್ತವೆ. ರಾಜ್ಯ ಸರಕಾರವು ಹೆಣ್ಣುಮಕ್ಕಳ ಉನ್ನತಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ, ವಿದ್ಯಾಸಿರಿ ವಿದ್ಯಾರ್ಥಿವೇತನ, ವಸತಿನಿಲಯಗಳ ಸೌಲಭ್ಯವನ್ನು ಒದಗಿಸುತ್ತಿದೆ. ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆ, ಹೆಣ್ಣುಮಕ್ಕಳ ಮತ್ತು ಮಹಿಳೆಯರ ಸಂಚಲನೆಯನ್ನು ಸುಲಭಗೊಳಿಸಲು ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಸರಕಾರ ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಜಾರಿಗೊಳಿಸಿದೆ. ಮಹಿಳಾ ಕಾನೂನು ಪದವೀಧರರಿಗೆ ಧನ ಸಹಾಯ ಒದಗಿಸುತ್ತಿದೆ.

ಸರಕಾರ ಹೀಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಮಾತ್ರವಲ್ಲದೆ ಅವರ ಸಮಗ್ರ ಅಭಿವೃದ್ಧಿಯನ್ನು ಮಾಡಲು ಕಾರ್ಯನಿರ್ವಹಿಸುತ್ತಿದೆ. ಆದರೆ ಇಷ್ಟೆಲ್ಲಾ ಯೋಜನೆಗಳು ಇದ್ದರೂ ರಾಷ್ಟ್ರೀಯ ಅಪರಾಧ ಬ್ಯುರೋದ ವರದಿಗಳ ಪ್ರಕಾರ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಮೇಲೆ ಹಿಂಸೆ, ದೌರ್ಜನ್ಯ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಂಕಿ-ಸಂಖ್ಯೆಗಳು ತೋರಿಸುತ್ತವೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಅಲೆಮನೆಗಳಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣ ಮತ್ತು ದೇಶಾದ್ಯಂತ ಸದ್ದು ಮಾಡಿದ ಉನ್ನಾವೊ ಪ್ರಕರಣ ಹೆಣ್ಣಿನ ಕುರಿತು ಇರುವ ಸಾಮಾಜಿಕ ಮನೋಭಾವವನ್ನು ತೋರಿಸುತ್ತದೆ.

ಇದನ್ನೂ ಓದಿ ಮುಟ್ಟಿನ ರಜೆಗೆ ಪುರುಷ ನೌಕರರ ವಿರೋಧ; ಸರ್ಕಾರಕ್ಕೆ ಪತ್ರ: ‘ಲಿಂಗ ಸಂವೇದನಾಶೀಲ ತರಬೇತಿ ಅತ್ಯಗತ್ಯ’ ಎಂದ ಮಹಿಳಾಪರ ಹೋರಾಟಗಾರರು

ಕಾನೂನು ಶಿಕ್ಷೆ ಕೊಡುಬಹುದೇ ಹೊರತು ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಿಲ್ಲ. ಅರಿವು, ಜಾಗೃತಿಯನ್ನು ಮೂಡಿಸುವ ಮೂಲಕ ಬದಲಾವಣೆ ಸಾದ್ಯವಿದೆ. ಹೆಣ್ಣುಮಗುವಿನ ಮಹತ್ವ ಕೇವಲ ಇಂದಿಗೆ ಮಾತ್ರ ಸೀಮಿತವಾಗುವುದಿಲ್ಲ ಭವಿಷ್ಯದ ರಾಷ್ಟ್ರಕ್ಕೂ ಅಗತ್ಯವಾಗಿದೆ. ಹೆಣ್ಣುಮಕ್ಕಳ ಕುರಿತು ಇರುವ ಸಾಮಾಜಿಕ ಗ್ರಹಿಕೆ ಬದಲಾಗಬೇಕು, ಹೆಣ್ಣು ಹೆಂಡತಿಯಾಗಿ, ತಾಯಿಯಾಗಿ ಬೇಕು, ಆದರೆ ಮಗಳಾಗಿ ಯಾಕೆ ಬೇಕಿಲ್ಲ. ಸಮಾಜದ ಅಳಿವು ಉಳಿವು ಹೆಣ್ಣಿನ ಕೈಯಲ್ಲಿ ಹೆಣ್ಣಿನ ಅಳಿವು ಉಳಿವು ಸಮಾಜದ ಕೈಯಲ್ಲಿ ಇದೆ. ಪುರುಷಪ್ರಧಾನತೆ, ಮಹಿಳಾ ಪ್ರಧಾನತೆ ಎನ್ನುವುದಕ್ಕಿಂತ ಸಮಾನತೆಯ ಸಮಾಜ ಕಟ್ಟುವಿಕೆ ಎಲ್ಲರ ಜವಾಬ್ದಾರಿಯಾಗಬೇಕು. ಸಮಾನತೆ ಕೇವಲ ಅಧಿಕಾರ ಮಾತ್ರವಲ್ಲದೆ ಅದು ಸಮಾಜದ ಪ್ರತಿವ್ಯಕ್ತಿಯ ಜವಾಬ್ದಾರಿಯಾದರೆ ಹೆಣ್ಣುಮಕ್ಕಳ ಅಭಿವೃದ್ಧಿ ಮತ್ತು ಸಬಲೀಕರಣದ ಕಡೆಗೆ ಹೆಜ್ಜೆ ಇರಿಸಲು ಹಾಗೂ ಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ.

?s=150&d=mp&r=g
ಡಾ. ಸರೋಜಾ ಸಂತಿ
+ posts

ಸಹಸಂಶೋಧಕರು,
ಮಹಿಳಾ ಅಧ್ಯಯನ ಕೇಂದ್ರ,
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ವಿಜಯಪುರ

ಪೋಸ್ಟ್ ಹಂಚಿಕೊಳ್ಳಿ:

ಡಾ. ಸರೋಜಾ ಸಂತಿ
ಡಾ. ಸರೋಜಾ ಸಂತಿ
ಸಹಸಂಶೋಧಕರು, ಮಹಿಳಾ ಅಧ್ಯಯನ ಕೇಂದ್ರ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...