ಬಿಜೆಪಿ ಮತ್ತು ದೂರುದಾರರು ಎಷ್ಟೇ ಅಪಪ್ರಚಾರ ಮಾಡಿದರೂ, ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿದೆ ಎಂದು ಸಾಬೀತುಪಡಿಸಲು ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಅಲ್ಲಿ ನಡೆದದ್ದೇನಿದ್ದರೂ ಅದು ಐತಿಹಾಸಿಕ ಪರಂಪರೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವಷ್ಟೇ
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವಿರುವ ‘ನ್ಯಾಷನಲ್ ಹೆರಾಲ್ಡ್’ ಪ್ರಕರಣವನ್ನು ಮುಂದಿಟ್ಟುಕೊಂಡು, ಕೇಂದ್ರದ ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣದ ಹೊಸ ಅಧ್ಯಾಯವನ್ನೇ ಬರೆಯುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ತೇಜೋವಧೆ ಮಾಡುವುದನ್ನೇ ಏಕೈಕ ಗುರಿಯಾಗಿಸಿಕೊಂಡಿರುವ ಬಿಜೆಪಿ, ಇತ್ತೀಚೆಗೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ತನ್ನ ರಾಜಕೀಯ ದ್ವೇಷವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಬಿಜೆಪಿಯ ಈ ಹಗೆ ಸಾಧನೆ ಇಂದು ನಿನ್ನೆಯದಲ್ಲ; ಸುಮಾರು ಮೂರು ವರ್ಷಗಳ ಹಿಂದೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇ.ಡಿ ವಿಚಾರಣೆಗೆ ಕರೆಸಿ ಅವಮಾನಿಸಲಾಗಿತ್ತು. ಸಂಸತ್ತಿನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆ ನಡೆ, ಬಿಜೆಪಿಯ ಅಧಿಕಾರ ದರ್ಪ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಅಗೌರವಕ್ಕೆ ಹಿಡಿದ ಕೈಗನ್ನಡಿಯಂತಿತ್ತು. ಅಂದಿನಿಂದ ಇಂದಿನವರೆಗೂ ತನಿಖಾ ಸಂಸ್ಥೆಗಳನ್ನು ತಮ್ಮ ‘ಕೈ ಬೊಂಬೆ’ಗಳಂತೆ ಬಳಸಿಕೊಳ್ಳುತ್ತಿರುವ ಮೋದಿ ಸರ್ಕಾರ, ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲು ‘ಅಘೋಷಿತ ತುರ್ತುಪರಿಸ್ಥಿತಿ’ ಯ ಮಾದರಿಯ ದೌರ್ಜನ್ಯ ನಡೆಸುತ್ತಿದೆ. ಕೇವಲ ರಾಜಕೀಯ ವಿರೋಧಿಗಳನ್ನು ಹಣಿಯಲು ಹೆಣೆಯಲಾದ ಈ ಷಡ್ಯಂತ್ರದ ಸುಳಿಯಲ್ಲಿ, ಅಸಲಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಸತ್ಯಾಸತ್ಯತೆಗಳೇನು? ಇತಿಹಾಸವನ್ನು ತಿರುಚಿ ಹೇಳುತ್ತಿರುವ ಬಿಜೆಪಿಯ ಬಣ್ಣ ಬಯಲು ಮಾಡಲು ಇದರ ವಾಸ್ತವವನ್ನು ಅರಿಯಲೇಬೇಕಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಕೆದಕಿದರೆ ಅಲ್ಲಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ಹೆಸರು ಸುವರ್ಣಾಕ್ಷರಗಳಲ್ಲಿ ರಾರಾಜಿಸುತ್ತದೆ. ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಧ್ವನಿಯಾಗಿದ್ದ ಪತ್ರಿಕೆಯೊಂದು, ಇಂದು ಸ್ವತಂತ್ರ ಭಾರತದಲ್ಲಿ ರಾಜಕೀಯ ಷಡ್ಯಂತ್ರದ ಸುಳಿಯಲ್ಲಿ ಸಿಲುಕಿರುವುದು ವಿಪರ್ಯಾಸವೇ ಸರಿ. ಕಾಂಗ್ರೆಸ್ ನಾಯಕರು ದೇಶದ ಪರಂಪರೆಯನ್ನು ಉಳಿಸಿಕೊಳ್ಳಲು ನಡೆಸಿದ ಪ್ರಾಮಾಣಿಕ ಪ್ರಯತ್ನವನ್ನು ‘ಅಪರಾಧ’ ಎಂದು ಕೇಂದ್ರದ ಬಿಜೆಪಿ ಸರ್ಕಾರ ಬಿಂಬಿಸುತ್ತಿದೆ.
ಸ್ವಾತಂತ್ರ ಚಳವಳಿಯ ಧ್ವನಿಯಾಗಿದ್ದ ನ್ಯಾಷನಲ್ ಹೆರಾಲ್ಡ್
ನ್ಯಾಷನಲ್ ಹೆರಾಲ್ಡ್ ಕೇವಲ ಸುದ್ದಿಯನ್ನು ಮುದ್ರಿಸುವ ಕಾಗದದ ಹಾಳೆಯಾಗಿರಲಿಲ್ಲ; ಅದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದು ನಿಂತ ಭಾರತೀಯರ ಅಸ್ಮಿತೆಯಾಗಿತ್ತು. 1937ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ, ಸರ್ದಾರ್ ಪಟೇಲ್, ಆಚಾರ್ಯ ನರೇಂದ್ರ ದೇವ್, ರಫಿ ಅಹಮದ್ ಕಿದ್ವಾಯಿ ಅವರಂತಹ ಮಹಾನ್ ನಾಯಕರು ಸೇರಿ ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್’ (AJL) ಮೂಲಕ ಈ ಪತ್ರಿಕೆಯನ್ನು ಆರಂಭಿಸಿದರು.
1938ರಲ್ಲಿ ಇಂಗ್ಲಿಷ್ ಭಾಷೆಯ ‘ನ್ಯಾಷನಲ್ ಹೆರಾಲ್ಡ್’, ಹಿಂದಿಯ ‘ನವಜೀವನ್’ ಮತ್ತು ಉರ್ದುವಿನ ‘ಕ್ವಾಮಿ ಆವಾಜ್’ ಪತ್ರಿಕೆಗಳು ಪ್ರಕಟಣೆಗೊಂಡವು. 1942-45ರ ‘ಕ್ವಿಟ್ ಇಂಡಿಯಾ’ ಚಳವಳಿಯ ಸಂದರ್ಭದಲ್ಲಿ ಈ ಪತ್ರಿಕೆಯ ಬರಹಗಳು ಬ್ರಿಟಿಷರ ನಿದ್ದೆಗೆಡಿಸಿದ್ದವು. ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಪತ್ರಿಕೆಯನ್ನು ನಿಷೇಧಿಸಿತು. ಸ್ವತಃ ಮಹಾತ್ಮ ಗಾಂಧಿಯವರೇ, “ಈ ಪತ್ರಿಕೆಯ ಮೇಲಿನ ನಿಷೇಧ ರಾಷ್ಟ್ರೀಯ ಚಳವಳಿಗೆ ಮಾರಕ,” ಎಂದು ವಿಷಾದ ವ್ಯಕ್ತಪಡಿಸಿದ್ದರು. ಇಂತಹ ಅಭೂತಪೂರ್ವ ಇತಿಹಾಸವಿರುವ ಸಂಸ್ಥೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿತ್ತು.
ಆರ್ಥಿಕ ಬಿಕ್ಕಟ್ಟು ಮತ್ತು ಕಾಂಗ್ರೆಸ್ ಪಕ್ಷದ ನೆರವಿನ ಹಸ್ತ
ಕಾಲಕ್ರಮೇಣ, ಬದಲಾದ ತಂತ್ರಜ್ಞಾನ, ಜಾಹೀರಾತು ಆದಾಯದ ಕೊರತೆ ಮತ್ತು ನಿರ್ವಹಣಾ ವೆಚ್ಚದ ಏರಿಕೆಯಿಂದಾಗಿ ಎಜೆಎಲ್ (AJL) ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಎಷ್ಟರಮಟ್ಟಿಗೆ ಎಂದರೆ, ಉದ್ಯೋಗಿಗಳಿಗೆ ಸಂಬಳ ನೀಡಲೂ ಸಾಧ್ಯವಾಗದ ಸ್ಥಿತಿಗೆ ತಲುಪಿತು. , 2007ರ ಏಪ್ರಿಲ್ 1ರಂದು ‘ನ್ಯಾಷನಲ್ ಹೆರಾಲ್ಡ್’ ಸೇರಿದಂತೆ ಎಲ್ಲ ಪತ್ರಿಕೆಗಳ ಪ್ರಕಟಣೆಯನ್ನು ಶಾಶ್ವತವಾಗಿ ನಿಲ್ಲಿಸಬೇಕಾಯಿತು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಮರಣಾರ್ಥವಾಗಿ ಸ್ಥಾಪಿತವಾದ ಈ ಐತಿಹಾಸಿಕ ಸಂಸ್ಥೆ ಸಾಯಬಾರದು ಎಂಬ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮುಂದೆ ಬಂದಿತು. 2002ರಿಂದ 2011ರವರೆಗಿನ ಒಂಭತ್ತು ವರ್ಷಗಳ ಅವಧಿಯಲ್ಲಿ ಪಕ್ಷವು ಸುಮಾರು ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಬಡ್ಡಿರಹಿತ ಸಾಲವಾಗಿ ಒಟ್ಟು ಸುಮಾರು 90 ಕೋಟಿ ರೂಪಾಯಿಗಳನ್ನು AJLಗೆ ನೀಡಿತು. ಇದರಿಂದ ಸಂಸ್ಥೆಯನ್ನು ಉಳಿಸುವ ಪ್ರಯತ್ನ ಮಾಡಲಾಯಿತು.

90 ಕೋಟಿ ರೂ. ಬಗ್ಗೆ ಸ್ಪಷ್ಟ ಉತ್ತರ
ಕಾಂಗ್ರೆಸ್ ಪಕ್ಷವು AJLಗೆ ನೀಡಿದ 90 ಕೋಟಿ ರೂ.ಗಳ ಬಳಕೆ ಪೂರ್ತಿ ಪಾರದರ್ಶಕವಾಗಿದೆ ಮತ್ತು ಪಕ್ಷದ ಅಧಿಕೃತ ಲೆಕ್ಕಪತ್ರಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ಮೊತ್ತದಲ್ಲಿ ಸುಮಾರು 67 ಕೋಟಿ ರೂಪಾಯಿಗಳು ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸಿಬ್ಬಂದಿ ಸಂಬಳ, ತುಟ್ಟಿಭತ್ಯೆ ಮತ್ತು ಸ್ವಯಂ ನಿವೃತ್ತಿ ಯೋಜನೆ (VRS) ಪ್ಯಾಕೇಜ್‌ಗಳಿಗೆ ಖರ್ಚಾದವು. ಉಳಿದ ಸುಮಾರು 23 ಕೋಟಿ ರೂಪಾಯಿಗಳು ವಿದ್ಯುತ್ ಬಿಲ್, ಕಟ್ಟಡ ಬಾಡಿಗೆ, ಆಸ್ತಿ ತೆರಿಗೆ, ಮುದ್ರಣಾಲಯ ಹಾಗೂ ಕಚೇರಿಗಳ ನಿರ್ವಹಣಾ ವೆಚ್ಚಗಳಿಗೆ ವಿನಿಯೋಗವಾಯಿತು. ಈ ಎಲ್ಲ ವ್ಯವಹಾರಗಳೂ ಕಾಂಗ್ರೆಸ್‌ನ ವಾರ್ಷಿಕ ಆಡಿಟ್ ಲೆಕ್ಕಗಳಲ್ಲಿ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಗಳಲ್ಲಿ ತೋರಿಸಲಾಗಿದ್ದು, ಯಾವುದೇ ಗುಪ್ತ ಅಥವಾ ಅಕ್ರಮ ಹಣ ವರ್ಗಾವಣೆ ನಡೆದಿಲ್ಲ ಎಂಬುದು ದಾಖಲೆಗಳಿಂದ ಸಾಬೀತಾಗುತ್ತದೆ.
‘ಯಂಗ್ ಇಂಡಿಯನ್’ ರಚನೆ ಮತ್ತು ಸಾಲದ ಇತ್ಯರ್ಥ
AJL ಸಂಸ್ಥೆಯು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕಿದ್ದ 90 ಕೋಟಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ, ಸಾಲದ ಮೊತ್ತವನ್ನು ಷೇರುಗಳನ್ನಾಗಿ (Equity) ಪರಿವರ್ತಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಆದರೆ, ರಾಜಕೀಯ ಪಕ್ಷವೊಂದು ವಾಣಿಜ್ಯ ಕಂಪನಿಯ ಷೇರುಗಳನ್ನು ಹೊಂದುವಂತಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಮತ್ತು ಎಜೆಎಲ್ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲು, 2010-11ರಲ್ಲಿ ‘ಯಂಗ್ ಇಂಡಿಯನ್’ (Young Indian – YI) ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ಶೇ. 38 ಷೇರುಗಳನ್ನು ಹೊಂದಿದ್ದರೆ, ಉಳಿದ ಷೇರುಗಳನ್ನು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಹೊಂದಿದ್ದರು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ‘ಯಂಗ್ ಇಂಡಿಯನ್’ ಒಂದು “ಸೆಕ್ಷನ್ 25 ಕಂಪನಿ” (Section 25 Company). ಅಂದರೆ, ಇದು ಲಾಭ-ರಹಿತ (Not-for-Profit) ಸಂಸ್ಥೆಯಾಗಿದೆ. ಭಾರತದ ಕಂಪನಿ ಕಾಯ್ದೆಯ ಪ್ರಕಾರ, ಲಾಭರಹಿತ ಕಂಪನಿಯ ಸದಸ್ಯರು, ನಿರ್ದೇಶಕರು ಅಥವಾ ಷೇರುದಾರರು ಕಂಪನಿಯಿಂದ ಒಂದು ರೂಪಾಯಿಯನ್ನೂ ಲಾಭಾಂಶವಾಗಿ (Dividend) ಅಥವಾ ಸಂಬಳವಾಗಿ ಪಡೆಯುವಂತಿಲ್ಲ. ಹೀಗಿರುವಾಗ, ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರು ಈ ವ್ಯವಹಾರದಿಂದ ವೈಯಕ್ತಿಕವಾಗಿ ಹಣ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿಯ ಆರೋಪವು ಹಾಸ್ಯಾಸ್ಪದವಾಗಿದೆ.
ಬಿಜೆಪಿ ನಾಯಕರ ಸುಳ್ಳಿನ ಗೋಪುರ ಮತ್ತು ವಾಸ್ತವ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012ರಲ್ಲಿ ಈ ಪ್ರಕರಣವನ್ನು “2000 ಕೋಟಿ ಆಸ್ತಿ ಕಬಳಿಕೆ ಹಗರಣ” ಎಂದು ಆರೋಪಿಸಿದರೂ, ದಾಖಲೆಗಳು ಇದಕ್ಕೆ ತದ್ವಿರುದ್ಧ ಎಂದು ಹೇಳುತ್ತವೆ. “ರಾಜಕೀಯ ಪಕ್ಷಕ್ಕೆ ಸಾಲ ಕೊಡಲು ಅವಕಾಶವಿಲ್ಲ” ಎಂಬ ಆರೋಪ ಸುಳ್ಳು. ಚುನಾವಣಾ ಆಯೋಗವೇ 06-11-2012ರ ಪತ್ರದಲ್ಲಿ ಸ್ವಾಮಿಯವರಿಗೆ “ರಾಜಕೀಯ ಪಕ್ಷಗಳು ತಮ್ಮ ಉದ್ದೇಶ ಪೂರೈಸಲು ಹಣ ಖರ್ಚು ಮಾಡಲು ಅಥವಾ ಸಾಲ ನೀಡಲು ಯಾವ ಕಾನೂನು ನಿರ್ಬಂಧವೂ ಇಲ್ಲ” ಎಂದು ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೃತದೇಹದೊಂದಿಗೇ ಯುವತಿ ಮದುವೆ; ಮರ್ಯಾದೆಗೇಡು ಹತ್ಯೆಗಳಿಗೆ ಕೊನೆ ಎಂದು?
AJLನ ಸಾವಿರಾರು ಕೋಟಿ ಮೌಲ್ಯದ ಭೂಮಿ-ಕಟ್ಟಡಗಳು ಇಂದಿಗೂ AJL ಹೆಸರಿನಲ್ಲೇ ಇದೆ. ಯಂಗ್ ಇಂಡಿಯನ್ ಅಥವಾ ಗಾಂಧಿ ಕುಟುಂಬ ಒಂದು ಇಂಚು ಜಾಗವನ್ನೂ ಮಾರಿಲ್ಲ ಅಥವಾ ತಮ್ಮ ಹೆಸರಿಗೆ ವರ್ಗಾಯಿಸಿಲ್ಲ. ಲಾಭರಹಿತ ಸಂಸ್ಥೆಯಾಗಿ AJLಗೆ ಆಸ್ತಿ ಮಾರಿ ಲಾಭ ಮಾಡುವ ಹಕ್ಕು ಇಲ್ಲ. “50 ಲಕ್ಷಕ್ಕೆ 90 ಕೋಟಿ ಸಾಲ ಮನ್ನಾ ಮಾಡಿಸಿದರು” ಎಂಬುದು ಕೇವಲ ಸಾಲವನ್ನು ಈಕ್ವಿಟಿಯಾಗಿ ಬದಲಾಯಿಸಿದ ಲೆಕ್ಕಪತ್ರದ ಪ್ರಕ್ರಿಯೆ. ಯಾರ ಜೇಬಿಗೂ ಹಣ ಹೋಗಿಲ್ಲ; ಕಾಂಗ್ರೆಸ್ ತನ್ನ ಐತಿಹಾಸಿಕ ಸಂಸ್ಥೆಯನ್ನು ಬದುಕಿಸಲು ಮಾಡಿದ ತ್ಯಾಗ ಮಾತ್ರ.
ತನಿಖಾ ಸಂಸ್ಥೆಗಳ ದುರ್ಬಳಕೆ ಮತ್ತು ರಾಜಕೀಯ ದ್ವೇಷ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ED), ಆದಾಯ ತೆರಿಗೆ ಇಲಾಖೆ (IT) ಮತ್ತು ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರನ್ನು ಹಣಿಯಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. 2015ರಲ್ಲೇ ಇಡಿ (ED) ಈ ಪ್ರಕರಣದಲ್ಲಿ ತಾಂತ್ರಿಕವಾಗಿ ಹುರುಳಿಲ್ಲ ಎಂದು ತನಿಖೆಯನ್ನು ನಿಲ್ಲಿಸುವ ಹಂತಕ್ಕೆ ಬಂದಿತ್ತು. ಆದರೆ, ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಹುಲ್ ಗಾಂಧಿಯವರು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಲು ಆರಂಭಿಸಿದಾಗ, ರಾಜಕೀಯ ದ್ವೇಷ ಸಾಧನೆಗಾಗಿ ಮುಚ್ಚಿಹೋಗಿದ್ದ ಕಡತಗಳನ್ನು ಮತ್ತೆ ತೆರೆಯಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ದಿನಗಟ್ಟಲೆ ವಿಚಾರಣೆಗೆ ಕರೆಸಿ, ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನವನ್ನು ಇ.ಡಿ ಮಾಡಿತು. ಆದರೆ, ರಾಹುಲ್ ಗಾಂಧಿಯವರು ಇ.ಡಿಯ ಎದುರು ತಲೆ ಎತ್ತಿ ನಿಂತು, ಸತ್ಯವನ್ನು ಪ್ರತಿಪಾದಿಸಿದ್ದು ಅವರ ನೈತಿಕ ಸ್ಥೈರ್ಯಕ್ಕೆ ಸಾಕ್ಷಿಯಾಗಿದೆ. “ನನ್ನ ಬಳಿ ಮುಚ್ಚಿಡಲು ಏನೂ ಇಲ್ಲ, ನಾನು ಸಾವರ್ಕರ್ ಅಲ್ಲ, ಗಾಂಧಿ,” ಎಂಬ ರಾಹುಲ್ ಅವರ ಮಾತು, ಸುಳ್ಳಿನ ರಾಜಕೀಯ ಮಾಡುತ್ತಿರುವವರಿಗೆ ತೀಕ್ಷ್ಣ ಉತ್ತರವಾಗಿತ್ತು.

ನ್ಯಾಷನಲ್ ಹೆರಾಲ್ಡ್: ಅಗ್ನಿಪರೀಕ್ಷೆಯ ನಂತರದ ಉದಯ
ಬಿಜೆಪಿ ಮತ್ತು ದೂರುದಾರರು ಎಷ್ಟೇ ಅಪಪ್ರಚಾರ ಮಾಡಿದರೂ, ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿದೆ ಎಂದು ಸಾಬೀತುಪಡಿಸಲು ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಕಾರಣ, ಅಲ್ಲಿ ಅಕ್ರಮವೇ ನಡೆದಿಲ್ಲ. ನಡೆದದ್ದೇನಿದ್ದರೂ ಅದು ಐತಿಹಾಸಿಕ ಪರಂಪರೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವಷ್ಟೇ. ನ್ಯಾಷನಲ್ ಹೆರಾಲ್ಡ್ ಪ್ರಕರಣವು ಕೇವಲ ಕಾನೂನು ಹೋರಾಟವಲ್ಲ, ಇದು ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ. ಇಲ್ಲಿನ ಉದ್ದೇಶ ಸ್ವಾತಂತ್ರ್ಯ ಹೋರಾಟದ ಪತ್ರಿಕೆಯನ್ನು ಉಳಿಸುವುದು. ವ್ಯವಹಾರವು ಪಾರದರ್ಶಕವಾಗಿದ್ದು, ಬ್ಯಾಂಕ್ ಮೂಲಕವೇ ಎಲ್ಲ ವಹಿವಾಟು ನಡೆದಿದೆ. ಲಾಭರಹಿತ ಸಂಸ್ಥೆಯಾದ್ದರಿಂದ ಯಾರೂ ಹಣ ಗಳಿಸಿಲ್ಲ.
ಬಿಜೆಪಿಯ ನಾಯಕರು ಮತ್ತು ಸುಬ್ರಮಣಿಯನ್ ಸ್ವಾಮಿಯಂತಹ ವ್ಯಕ್ತಿಗಳು ರಾಜಕೀಯ ಲಾಭಕ್ಕಾಗಿ ಹೆಣೆದ ಈ ಸುಳ್ಳಿನ ಬಲೆಯು ನ್ಯಾಯಾಲಯದ ಅಂಗಳದಲ್ಲಿ ಮತ್ತು ಜನತಾ ನ್ಯಾಯಾಲಯದಲ್ಲಿ ಮುರಿದು ಬೀಳುವುದು ಖಚಿತ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ತ್ಯಾಗ ಮಾಡಿದ ಕುಟುಂಬವೊಂದರ ಮೇಲೆ ಆಧಾರರಹಿತ ಆರೋಪಗಳನ್ನು ಹೊರಿಸುವ ಮೂಲಕ ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ.
ನ್ಯಾಷನಲ್ ಹೆರಾಲ್ಡ್ ಪ್ರಕರಣವು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಒಡ್ಡಲಾದ ಅಗ್ನಿಪರೀಕ್ಷೆಯಾಗಿದೆ. ಕಾಂಗ್ರೆಸ್ ನಾಯಕರು ಈ ಸುಳ್ಳು ಆರೋಪಗಳಿಂದ ಮುಕ್ತರಾಗಿ ಇನ್ನಷ್ಟು ಶಕ್ತಿಯುತವಾಗಿ ಹೊರಬರುತ್ತಾರೆ. ದ್ವೇಷದ ರಾಜಕಾರಣ ಮಾಡುವವರ ಮುಖವಾಡ ಕಳಚಿ ಬೀಳಲಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಮತ್ತೆ ತನ್ನ ಗತವೈಭವದೊಂದಿಗೆ ತಲೆ ಎತ್ತಿ ನಿಲ್ಲಲಿದೆ ಮತ್ತು ಪ್ರಜಾಪ್ರಭುತ್ವದ ಕಾವಲುಗಾರನಂತೆ ತನ್ನ ಕರ್ತವ್ಯವನ್ನು ಮುಂದುವರಿಸಲಿದೆ ಎಂಬುದು ಆಶಾದಾಯಕ ಸಂಗತಿ.





