ಕರ್ನಾಟಕದಲ್ಲಿ ‘ಯುವಜನ ಆಯೋಗ’ದ ಅಗತ್ಯ: ಭವಿಷ್ಯದ ದಿಕ್ಸೂಚಿ

Date:

ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳಲ್ಲಿ ಯುವಜನರಿಗೆ ಭರಪೂರ ಭರವಸೆಗಳನ್ನು ನೀಡುತ್ತವೆ. ಆದರೆ ಅಧಿಕಾರಕ್ಕೆ ಬಂದ ನಂತರ ಅವು ಮೂಲೆಗುಂಪಾಗುತ್ತವೆ. ಈ ಭರವಸೆಗಳನ್ನು ಪ್ರಶ್ನಿಸುವ ಮತ್ತು ಸರ್ಕಾರದ ಯೋಜನೆಗಳ ಆಡಿಟ್ ನಡೆಸುವ ಅಧಿಕಾರವುಳ್ಳ ಸಂಸ್ಥೆಯೊಂದು ಬೇಕಿದೆ.

ಕರ್ನಾಟಕವು ಯುವಜನರ ರಾಜ್ಯವೆಂದೇ ಹೇಳಬಹುದು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 15 ರಿಂದ 35 ವಯಸ್ಸಿನ ಯುವಜನರು ಸದ್ಯ 2.1 ಕೋಟಿಯಷ್ಟು ಮಹತ್ತರ ಸಂಖ್ಯೆಯನ್ನು ಹೊಂದಿದ್ದಾರೆ. ಹೀಗಾಗಿ ಇದು ರಾಜ್ಯದ ಅತಿದೊಡ್ಡ ಸಮುದಾಯವಾಗಿದೆ. ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ನಾವೀಗ ‘ಜನಸಂಖ್ಯಾ ಲಾಭಾಂಶ’ದ ಸುವರ್ಣ ಕಾಲಘಟ್ಟದಲ್ಲಿದ್ದೇವೆ. ಅಂದರೆ ದುಡಿಯುವ ವಯಸ್ಸಿನವರ ಸಂಖ್ಯೆ ಗರಿಷ್ಠ ಮಟ್ಟದಲ್ಲಿದೆ. ಮುಂದಿನ 20-25 ವರ್ಷಗಳ ನಂತರ ವಯಸ್ಸಾದವರ ಸಂಖ್ಯೆ ಹೆಚ್ಚಾಗಲಿದ್ದು, ಈಗಿರುವ ಈ ಬೃಹತ್ ಮಾನವ ಸಂಪನ್ಮೂಲವನ್ನು ನಾವು ಸಮರ್ಥವಾಗಿ ಬಳಸಿಕೊಳ್ಳದಿದ್ದರೆ, ಇದೇ ಯುವಸಮೂಹ ಮುಂದೆ ರಾಜ್ಯಕ್ಕೆ ಹೊರೆಯಾಗುವ ಅಪಾಯವೂ ಇದೆ. ಆದ್ದರಿಂದ, ಯುವಜನರ ಸಮಸ್ಯೆಗಳನ್ನು ಗುರುತಿಸಿ, ಪರಿಹರಿಸಿ, ಅವರನ್ನು ಸಮರ್ಥ ನಾಯಕತ್ವದತ್ತ ನಡೆಸಲು ಒಂದು ವಿಶೇಷ ವೇದಿಕೆಯಾಗಿ ‘ಯುವಜನ ಆಯೋಗ’ದ ಅಗತ್ಯವಿದೆ.

ಯುವಜನರು ಇಂದು ತಾರತಮ್ಯ, ದೌರ್ಜನ್ಯ, ಮಾನಸಿಕ ಒತ್ತಡ, ಕೌಟುಂಬಿಕ ಹಾಗೂ ಸಾಮಾಜಿಕ ಬಿಕ್ಕಟ್ಟಿನಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಗಳ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಯುವಜನರೇ ಮುಂಚೂಣಿಯಲ್ಲಿದ್ದಾರೆ ಮತ್ತು ಅದರಲ್ಲಿ ಕರ್ನಾಟಕದ ಸ್ಥಾನ ಆತಂಕಕಾರಿಯಾಗಿದೆ. ಶೈಕ್ಷಣಿಕ ಒತ್ತಡ, ನಿರುದ್ಯೋಗ, ಮೌಲ್ಯಗಳ ಗೊಂದಲ, ಮಾದಕ ವ್ಯಸನ, ಸೈಬರ್ ಅಪರಾಧ ಮತ್ತು ಬದುಕಿನ ಕೌಶಲ್ಯಗಳ ಕೊರತೆ ಯುವಜನರನ್ನು ಹತಾಶೆಗೆ ದೂಡುತ್ತಿದೆ. ಇಂತಹ ಸಂದರ್ಭದಲ್ಲಿ, ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮಾಹಿತಿ, ಕೌಶಲ್ಯ ಮತ್ತು ಹಕ್ಕು ರಕ್ಷಣೆಯ ಅಗತ್ಯ ಹೆಚ್ಚಾಗಿದೆ. ಯುವಜನರ ಪರವಾಗಿ ಗಟ್ಟಿಯಾಗಿ ಕೆಲಸ ಮಾಡುವ ಸಾಂವಿಧಾನಿಕ ಸಂಸ್ಥೆಯ ಕೊರತೆ ಎದ್ದು ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ಸರ್ಕಾರ ಹಲವಾರು ಯುವಕೇಂದ್ರಿತ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅವುಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಸಮನ್ವಯದ ಕೊರತೆಯಿದೆ. ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳಲ್ಲಿ ಯುವಜನರಿಗೆ ಭರಪೂರ ಭರವಸೆಗಳನ್ನು ನೀಡುತ್ತವೆ. ಆದರೆ ಅಧಿಕಾರಕ್ಕೆ ಬಂದ ನಂತರ ಅವು ಮೂಲೆಗುಂಪಾಗುತ್ತವೆ. ಈ ಭರವಸೆಗಳನ್ನು ಪ್ರಶ್ನಿಸುವ ಮತ್ತು ಸರ್ಕಾರದ ಯೋಜನೆಗಳ ಆಡಿಟ್ ನಡೆಸುವ ಅಧಿಕಾರವುಳ್ಳ ಸಂಸ್ಥೆಯೊಂದು ಬೇಕಿದೆ.

ಈ ನಿಟ್ಟಿನಲ್ಲಿ ನೆರೆಯ ಕೇರಳ ರಾಜ್ಯ ಯುವಜನ ಆಯೋಗ ನಮಗೆ ಮಾದರಿಯಾಗಬಲ್ಲದು. ಅಲ್ಲಿ ಆಯೋಗವು ‘ಯುವ ಅದಾಲತ್’ ಗಳನ್ನು ನಡೆಸುವ ಮೂಲಕ, ಯುವಕರು ಸಂಬಳ ಸಮಸ್ಯೆ, ಉದ್ಯೋಗದಲ್ಲಿನ ಕಿರುಕುಳ ಅಥವಾ ಇತರೆ ದೂರುಗಳನ್ನು ನೇರವಾಗಿ ಸಲ್ಲಿಸಲು ವೇದಿಕೆ ಕಲ್ಪಿಸಿದೆ ಮತ್ತು ತ್ವರಿತ ಪರಿಹಾರ ನೀಡುತ್ತಿದೆ. ಕರ್ನಾಟಕದ ಆಯೋಗವೂ ಇಂತಹ ಕ್ರಿಯಾಶೀಲ ಮಾದರಿಯನ್ನು ಅಳವಡಿಸಿಕೊಳ್ಳಬೇಕಿದೆ.

ಯುವಜನ ಆಯೋಗವು ಕೇವಲ ಸಲಹೆ ನೀಡುವ ಸಂಸ್ಥೆಯಾಗಬಾರದು. ಅದಕ್ಕೆ ‘ಅರೆ-ನ್ಯಾಯಿಕ ಅಧಿಕಾರ’ (Quasi-judicial powers) ಇರಬೇಕು. ಅಂದರೆ, ಅನ್ಯಾಯಕ್ಕೊಳಗಾದ ಯುವಜನರ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸುವ, ದಾಖಲೆಗಳನ್ನು ಪರಿಶೀಲಿಸುವ ಮತ್ತು ತನಿಖೆ ನಡೆಸುವ ಸಿವಿಲ್ ನ್ಯಾಯಾಲಯದ ಅಧಿಕಾರ ಅದಕ್ಕೆ ಬೇಕು. ಇಲ್ಲದಿದ್ದರೆ ಆಯೋಗವು ‘ಹಲ್ಲಿಲ್ಲದ ಹಾವಿನಂತಾಗುತ್ತದೆ’.

IT–BT ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ಗ್ರಾಮೀಣ ಭಾಗದ ಯುವಜನರಿಗೆ ಉದ್ಯೋಗಾವಕಾಶಗಳು ಮರೀಚಿಕೆಯಾಗಿವೆ. ಆಯೋಗವು ಉದ್ಯೋಗ ಮೇಳಗಳು, ಕೌಶಲ್ಯ ತರಬೇತಿ ಮತ್ತು ಸ್ಟಾರ್ಟ್–ಅಪ್‌ಗಳಿಗೆ ವ್ಯವಸ್ಥಿತ ಮಾರ್ಗದರ್ಶನ ನೀಡಬೇಕು. ಮುಖ್ಯವಾಗಿ, ಆಯೋಗದ ಕಾರ್ಯವ್ಯಾಪ್ತಿಯು ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಗ್ರಾಮೀಣ ಯುವಕರು ಮಾತ್ರವಲ್ಲದೆ, ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು, ವಿಕಲಚೇತನ ಯುವಕರು ಮತ್ತು ಲೈಂಗಿಕ ಅಲ್ಪಸಂಖ್ಯಾತರ (LGBTQ+) ಹಕ್ಕುಗಳು ಮತ್ತು ಅಗತ್ಯಗಳಿಗೆ ಆಯೋಗ ವಿಶೇಷ ಆದ್ಯತೆ ನೀಡಬೇಕಿದೆ.

ಯುವಜನರು ಸಮಾಜದ ಪರಿವರ್ತನೆಯ ಶಕ್ತಿ. ಹಿಂಸಾಚಾರ, ಮಾದಕ ವ್ಯಸನ, ರಸ್ತೆ ಅಪಘಾತಗಳಂತಹ ಸಮಸ್ಯೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕಲು ಆಯೋಗವು ಸಂಶೋಧನೆಗಳನ್ನು ಕೈಗೊಳ್ಳಬೇಕು. ಪ್ರಸ್ತುತ ಸರ್ಕಾರ ಮತ್ತು ಯುವಕರ ನಡುವೆ ಸಂವಹನದ ಅಂತರ ದೊಡ್ಡದಾಗಿದೆ. ನೇಮಕಾತಿ ಅಕ್ರಮಗಳ ವಿರುದ್ಧ ಬೀದಿಗಿಳಿದು ಹೋರಾಡುವ ಯುವಜನರು ದ್ವನಿಯನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಇಂತಹ ಸಮಯದಲ್ಲಿ, ಯುವಜನರ ಪ್ರತಿನಿಧಿಯಾಗಿ ಸರ್ಕಾರದ ಜೊತೆ ಚರ್ಚಿಸಲು ಆಯೋಗವು ಸೇತುವೆಯಾಗಬಲ್ಲದು.

ಯುನೈಟೆಡ್ ನೇಷನ್ಸ್ ಯೂತ್ ರಿಪೋರ್ಟ್ ಮತ್ತು ಕಾಮನ್ ವೆಲ್ತ್ ಯೂತ್ ಪ್ರೋಗ್ರಾಮ್‌ಗಳಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಯುವ ಸಬಲೀಕರಣಕ್ಕೆ ಸಮರ್ಪಿತ ಸಂಸ್ಥೆಗಳ ಅಗತ್ಯವನ್ನು ಪ್ರತಿಪಾದಿಸಿವೆ. ಈಗಾಗಲೇ ಅಸ್ಸಾಂ, ಮಿಜೋರಂ, ಕೇರಳ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಲ್ಲಿ ಯುವಜನ ಆಯೋಗಗಳು ಅಸ್ತಿತ್ವದಲ್ಲಿವೆ. ಕರ್ನಾಟಕದಲ್ಲಿಯೂ ಕಳೆದ 6-7 ವರ್ಷಗಳಿಂದ ಸಮಾಜಪರ ಸಂಸ್ಥೆಗಳು ಮತ್ತು ಚಿಂತಕರು ಕರಡು ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೂ ಸರ್ಕಾರ ವಿಳಂಬ ಮಾಡುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಮಹಾ ಆಘಾತ: ಡಾರ್ಕ್ ವೆಬ್‌ನಲ್ಲಿ 1.75 ಕೋಟಿ ಜನರ ಖಾಸಗಿ ಮಾಹಿತಿ ಬಹಿರಂಗ?

ಒಟ್ಟಿನಲ್ಲಿ, ಕರ್ನಾಟಕದಲ್ಲಿ ಯುವಜನ ಆಯೋಗದ ರಚನೆ ಕೇವಲ ಒಂದು ಕಟ್ಟಡ ಅಥವಾ ಕೆಲವು ಹುದ್ದೆಗಳ ಸೃಷ್ಟಿಯಲ್ಲ, ಅದು ಹತಾಶೆಯಲ್ಲಿರುವ ಯುವಜನರಿಗೆ “ಸರ್ಕಾರ ನನ್ನೊಂದಿಗಿದೆ” ಎಂಬ ಭರವಸೆ ನೀಡುವ ಸಾಂವಿಧಾನಿಕ ದ್ವನಿಯಾಗಬೇಕು. ರಾಜ್ಯದ ಭವಿಷ್ಯವನ್ನು ದೃಢಗೊಳಿಸುವ ಈ ನೀತಿ ತಂತ್ರದ ಹೆಜ್ಜೆಯನ್ನು ಸರ್ಕಾರ ತಕ್ಷಣವೇ ಇಡಬೇಕು. ರಾಜ್ಯದ ಯುವ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು ಮತ್ತು ಪ್ರಜ್ಞಾವಂತ ನಾಗರಿಕರು ಒಗ್ಗೂಡಿ ಇದನ್ನು ಕೇವಲ ಮನವಿಯನ್ನಾಗಿಸದೆ, ಒಂದು ಬಲವಾದ ಹಕ್ಕೊತ್ತಾಯವನ್ನಾಗಿ ರೂಪಿಸಬೇಕಾದ ಸಮಯ ಈಗ ಬಂದಿದೆ.

ಶರಣು
ಜಿ. ಎಸ್. ಶರಣು
+ posts

ಪತ್ರಿಕೋದ್ಯಮ ಪದವೀಧರ, ಕುಷ್ಟಗಿ

ಪೋಸ್ಟ್ ಹಂಚಿಕೊಳ್ಳಿ:

ಜಿ. ಎಸ್. ಶರಣು
ಜಿ. ಎಸ್. ಶರಣು
ಪತ್ರಿಕೋದ್ಯಮ ಪದವೀಧರ, ಕುಷ್ಟಗಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...