2025 ಸೆಪ್ಟೆಂಬರ್‌ನಲ್ಲಿ ನಡೆದ ಜೆನ್ ಝಿ ಕ್ರಾಂತಿಯ ರೂವಾರಿ ಬಾಲೆನ್ ಶಾ ಅವರು ಯುವಕರ ಪ್ರತಿಭಟನೆಯ ಮುಂದಾಳುವಾಗಿದ್ದರು. ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದ ವಿರುದ್ಧ ಸಿಡಿದೆದ್ದ ಅವರು ಅಂದಿನ ಪ್ರಧಾನಿ ಓಲಿ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಪ್ರಧಾನಮಂತ್ರಿಯ ರಾಜೀನಾಮೆಯ ನಂತರ ಮಧ್ಯಂತರ ಅವಧಿಗೆ ಬಾಲೆನ್ ಶಾ ಅವರನ್ನು ನೇಮಿಸುವುದು ಜೆನ್ ಝಿ ಬೇಡಿಕೆಯಾಗಿತ್ತು.
ನೇಪಾಳದ ಜೆನ್ ಝೀ ಕ್ರಾಂತಿಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಾಲೇಂದ್ರ ಶಾ ನಾಯಕತ್ವದ ಆರ್‌ಎಸ್‌ಪಿ ಪಕ್ಷವು ದಾಖಲೆಯ ಗೆಲುವು ಸಾಧಿಸಿದೆ. ಈ ಮೂಲಕ 35 ವರ್ಷದ ಬಾಲೇಂದ್ರ ಶಾ ನೇಪಾಳದ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.
‘ಬಾಲೆನ್’ ಎಂದೇ ಪರಿಚಿತರಾಗಿರುವ ಬಾಲೇಂದ್ರ ಶಾ ಜನಿಸಿದ್ದು ಏಪ್ರಿಲ್ 27 1990ರಂದು ನೇಪಾಳದ ಕಠ್ಮಂಡುವಿನ ನಾರಾದೇವಿಯಲ್ಲಿ. ಇವರ ತಂದೆ ರಾಮ್ ನಾರಾಯಣ್ ಶಾ ಸರ್ಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರಾಗಿದ್ದರು.
ತಮ್ಮ ಆರಂಭಿಕ ಶಿಕ್ಷಣವನ್ನು ನೇಪಾಳದಲ್ಲಿ ಪಡೆದುಕೊಂಡ ಬಾಲೆನ್, ಹಿಮಾಲಯನ್ ವೈಟ್‌ಹೌಸ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ, ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಸ್ಟ್ರಕ್ಚರಲ್ ಇಂಜಿನಿಯರಿಂಗ್ ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.
ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೊದಲು ಸಂಗೀತ ಬಾಲೇಂದ್ರ ಶಾ ಆಸಕ್ತಿಯ ಕ್ಷೇತ್ರವಾಗಿತ್ತು, 2012ರಲ್ಲಿ ʼಸಡಕ್ ಬಾಲಕ್ʼ ಎಂಬ ಹಾಡಿನೊಂದಿಗೆ ತಮ್ಮ ಸಂಗೀತ ಜೀವನ ಆರಂಭಿಸಿದ ಇವರು ʼರಾ ಬಾರ್ಜ್ʼ ಎಂಬ ಯೂಟ್ಯೂಬ್ ರ್ಯಾಪ್ ಸರಣಿಯ ಮೂಲಕ ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿದರು. ಸಂಗೀತದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡು ತಮ್ಮ ವೃತ್ತಿ ಹಾಗೂ ಹವ್ಯಾಸ ಎರಡೂ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿದ ಬಾಲೆನ್ ರಾಜಕೀಯ ರಂಗ ಪ್ರವೇಶ ಮಾಡಿದ್ದು 2022ರಲ್ಲಿ.
2022ರ ಮೇಯರ್ ಚುನಾವಣೆಯಲ್ಲಿ ಕಠ್ಮಂಡುವಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನೇಪಾಳ ಕಾಂಗ್ರೆಸ್ ಹಾಗೂ ಸಿಪಿಎನ್ ಯುಎಂಎಲ್ ನ ಘಟಾನುಘಟಿ ನಾಯಕರನ್ನು ಭಾರಿ ಅಂತರದಿಂದ ಸೋಲಿಸಿದರು. ತಮ್ಮ ಕ್ಷೇತ್ರದಲ್ಲಿ ಮೇಯರ್ ಆಗಿ ಅವರು ಸಲ್ಲಿಸಿದ ಸೇವೆಗೆ ಡಿಸೆಂಬರ್ 2025 ರಲ್ಲಿ ಡೆಮಾಕ್ರಸಿ ಲೋಕಲ್ ಅವರನ್ನು ವರ್ಷದ ಮೇಯರ್ ಎಂದು ಪುರಸ್ಕರಿಸಿತು. ಜೊತೆ ಜೊತೆಗೆ ವಿವಾದಗಳು ಇವರ ಬೆನ್ನೇರಿದವು. ಬೀದಿಬದಿ ವ್ಯಾಪಾರಿಗಳು ಮತ್ತು ಭೂರಹಿತರನ್ನು ಬಲವಂತವಾಗಿ ಸ್ಥಳಾಂತರಗೊಳಿಸಿ ʼಬುಲ್ಡೋಜರ್ ಮೇಯರ್ʼ ಎಂಬ ಕುಖ್ಯಾತಿಯನ್ನು ಪಡೆದರು.
ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿವಾದ ಸೃಷ್ಟಿಸಿಕೊಂಡಿ ಬಾಲೆನ್
2025ರಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರಲ್ಲಿ ಚೀನಾ, ಅಮೆರಿಕ, ಭಾರತವನ್ನು ಕಟುವಾಗಿ ಟೀಕಿಸಿ ತರುವಾಯ ಪೋಸ್ಟ್ ಡಿಲೀಟ್ ಮಾಡಿ ಸುದ್ದಿಯಾಗಿದ್ದರು.
2023 ರಲ್ಲಿ ಸೀತೆ ಭಾರತದ ಮಗಳು ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಭಾರತದ ಚಲನಚಿತ್ರವನ್ನು ನೇಪಾಳದಲ್ಲಿ ನಿಷೇಧಿಸಬೇಕೆಂದು ಹೇಳಿಕೆ ನೀಡಿದ ಬಾಲೆನ್, ಅದೇ ವರ್ಷದಲ್ಲಿ ಅಖಂಡ ಭಾರತದ ಭಿತ್ತಿಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಗ್ರೇಟರ್ ನೇಪಾಳ ನಕ್ಷೆಯನ್ನು ತಮ್ಮ ಕಚೇರಿಯಲ್ಲಿ ಪ್ರದರ್ಶಿಸಿದ್ದರು.
ಬಾಲೆನ್ ಗೆಲುವಿನ ಬೆನ್ನಲ್ಲೇ ನೆಟ್ಟಿಗರಿಂದ ಪರ ವಿರೋಧ ಮಾತುಗಳು ಕೇಳಿ ಬರುತ್ತಿವೆ. “ಒಬ್ಬ ಕಲಾವಿದ ರಾಜಕೀಯದ ಆಳ ಅಗಲ ಅರಿಯದವ ದೇಶವನ್ನು ಹೇಗೆ ಮುನ್ನಡೆಸುತ್ತಾನೆ” ಎಂಬ ಅಭಿಪ್ರಾಯ ಹರಿದಾಡುತ್ತಿದ್ದು. ನೆರೆಯ ಪ್ರಬಲ ದೇಶಗಳಾದ ಭಾರತ ಹಾಗೂ ಚೀನಾಗಳೊಂದಿಗೆ ಸಮತೋಲಿತ ಬಾಂಧವ್ಯ ರಚಿಸಿಕೊಳ್ಳಲು ಇವರಿಂದ ಸಾಧ್ಯವೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಇನ್ನೊಂದೆಡೆ ನೇಪಾಳದ ಜೆನ್ ಝಿ ಮತದಾರರು ತಮ್ಮ ಯುವ ಪ್ರಧಾನಿಯ ಗೆಲುವನ್ನು ಸಂಭ್ರಮಿಸಿದ್ದಾರೆ. ದಶಕಗಳಿಂದ ಜಡವಾಗಿಯೇ ಉಳಿದಿದ್ದ ದೇಶದ ರಾಜಕಾರಣದಲ್ಲಿ ಹೊಸತನ ಕಾಣುವ ಆಕಾಂಕ್ಷೆ ಹೊತ್ತ ನೇಪಾಳಿಗರು ಬಾಲೆನ್ ಈ ತಲೆಮಾರಿನ ಉತ್ತಮ ನಾಯಕನೆಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನು ಬಾಲೆನ್ ಶಾ ರಾಜಕೀಯ ಜೀವನ ಹಲವು ತಿರುವುಗಳಿಂದ ಕೂಡಿದ್ದು ರ್ಯಾಪರ್ ಆಗಿದ್ದವರು ಮೇಯರ್ ತರುವಾಯ ನೇಪಾಳದ ಪ್ರಧಾನಿ ಆಗಲಿದ್ದಾರೆ. ಈ ನಡುವೆ ತಮ್ಮ ಹಲವು ಹೇಳಿಕೆಗಳಲ್ಲಿ ನೇಪಾಳದ ಎಲ್ಲಾ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದ ಬಾಲೆನ್ ಶಾ ಹಿಂದೊಮ್ಮೆ ಆರ್‌ಎಸ್‌ಪಿ ಪಕ್ಷದ ನಿಲುವುಗಳನ್ನು ಕಠಿಣವಾಗಿ ವಿರೋಧಿಸಿದ್ದರು.
2026 ರಲ್ಲಿ ಮೇಯರ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಬಳಿಕ ರಬಿ ಲಮಿಚಾನೆ ಸ್ಥಾಪನೆ. ಅದೇ ಪಕ್ಷದಿಂದಲೇ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ನೇಪಾಳದಲ್ಲಿ ಪ್ರಬಲವಾದ ಅಸ್ಮಿತೆ ಕಾಯ್ದುಕೊಂಡಿದ್ದ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷರಾಗಿದ್ದ ಕೆ ಪಿ ಶರ್ಮಾ ಓಲಿ ಅವರನ್ನು 50,000 ಮತಗಳ ಅಂತರದಿಂದ ಸೋಲಿಸಿ ಭಾರಿ ಗೆಲುವು ಸಾಧಿಸಿದ್ದಾರೆ. ಇದು ಅವರ ರಾಜಕೀಯ ಬದುಕಿನ ಪಲ್ಲಟಗಳಿಗೆ ಸಾಕ್ಷಿ. ಝಾಪ-5 ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲೆನ್ 68,348 ಮತಗಳನ್ನು ಪಡೆದರೆ, ಓಲಿ 18,734 ಮತಗಳನ್ನು ಪಡೆದಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 138 ಕ್ಷೇತ್ರಗಳ ಪೈಕಿ 107 ರಲ್ಲಿ ಆರ್‌ಎಸ್‌ಪಿ ಗೆಲುವು ಸಾಧಿಸಿದೆ. ನೇಪಾಳಿ ಕಾಂಗ್ರೆಸ್ ಪಕ್ಷವು 17 ಸ್ಥಾನಗಳನ್ನು ಕಾಯ್ದುಕೊಂಡು ಎರಡನೆಯ ಸ್ಥಾನದಲ್ಲಿದೆ.
ಜೆನ್ ಝಿ ತಲೆಮಾರಿನ ಮಿಲೇನಿಯಲ್ ನಾಯಕ: 2025 ಸೆಪ್ಟೆಂಬರ್‌ನಲ್ಲಿ ನಡೆದ ಜೆನ್ ಝಿ ಕ್ರಾಂತಿಯ ರೂವಾರಿ ಬಾಲೆನ್ ಶಾ ಜೆನ್ ಝಿ ಯುವಕರ ಪ್ರತಿಭಟನೆಯ ಮುಂದಾಳುವಾಗಿದ್ದರು. ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದ ವಿರುದ್ಧ ಸಿಡಿದೆದ್ದ ಬಾಲೆನ್ ಅಂದಿನ ಪ್ರಧಾನಿ ಓಲಿ ಅವರ ರಾಜಿನಾಮೆಗೆ ಆಗ್ರಹಿಸಿದ್ದರು. ಪ್ರಧಾನಮಂತ್ರಿಯ ರಾಜಿನಾಮೆಯ ನಂತರ ಮಧ್ಯಂತರ ಅವಧಿಗೆ ಬಾಲೆನ್ ಶಾ ಅವರನ್ನು ನೇಮಿಸುವುದು ಜೆನ್ ಝಿ ಬೇಡಿಕೆಯಾಗಿತ್ತು. ಆದರೆ ಸುಶೀಲ ಕರ್ಕಿ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಪ್ರಸ್ತುತ ಅವರ ಬೇಡಿಕೆಯಂತೆ ಜೆನ್ ಝಿ ತಲೆಮಾರು ತಮ್ಮ ಮಿಲೇನಿಯಲ್ ನಾಯಕನನ್ನು ಪ್ರಧಾನಿಯಾಗಿ ಚುನಾಯಿಸಿದೆ. ಜೆನ್ ಝಿ ಹೋರಾಟ ಮೇಲ್ನೋಟಕ್ಕೆ ಸಾಮಾಜಿ ಜಾಲತಾಣಗಳ ನಿರ್ಭಂದದ ಕುರಿತ ಆಕ್ರೋಶವಾಗಿ ಕಂಡುಬಂದರೂ ಈ ಪ್ರತಿಭಟನೆಯ ಹಿಂದೆ ಓಲಿ ಸರ್ಕಾರದ ಆಡಳಿತ ವೈಫಲ್ಯ, ಆರ್ಥಿಕ ಅಸ್ಥಿರತೆ ಮತ್ತು ಭ್ರಷ್ಟಾಚಾರದ ವಿರುದ್ಧದ ಅಸಹನೆಯು ಕಾರಣವಾಗಿತ್ತು ಎನ್ನಲಾಗಿದೆ.
ಬಾಲೆನ್ ಶಾ ಪ್ರಧಾನಿಯಾದರೆ ನೇಪಾಳದ ಮಾಧೇಶಿ ಸಮುದಾಯದ ಮೊದಲ ಪ್ರಧಾನಿ ಹಾಗೂ ನೇಪಾಳದ ಸಂಸತ್ತಿನ ಇತಿಹಾಸದಲ್ಲೇ ಈ ಸ್ಥಾನ ಏರಲಿರುವ ಮೊದಲ ಕಿರಿಯ ವ್ಯಕ್ತಿ ಎಂಬ ಗರಿಮೆಗೆ ಪಾತ್ರವಾಗಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಲೆನ್ ಶಾ ಹಾಗೂ ನೇಪಾಳದ ಜನತೆಯನ್ನು ಅಭಿನಂದಿಸಿದ್ದಾರೆ. ʼನೇಪಾಳದ ಪ್ರಜಾಪ್ರಭುತ್ವದ ಪಯಣದಲ್ಲಿ ಈ ಐತಿಹಾಸಿಕ ಮೈಲಿಗಲ್ಲು ಹೆಮ್ಮೆಯ ಕ್ಷಣವಾಗಿದೆ. ರಾಜಕೀಯ ಅಸ್ಥಿರತೆ ಎದುರಿಸಿದ್ದ ಅಲ್ಲಿ ಸ್ಥಿರ ಸರ್ಕಾರ ರಚನೆಯಾಗುವ ವಿಶ್ವಾಸವನ್ನು ಭಾರತ ಹೊಂದಿದೆʼ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.





