ಮ.ಗಾ.ರಾ.ಗ್ರಾ.ಉದ್ಯೋಗ ಖಾತರಿ ಕಾನೂನಿನಲ್ಲಿ ಜನರಿಗೆ ಬೇಕಾದಾಗ, ಅವರು ಅರ್ಜಿ ಹಾಕಿದಾಗ ಕೆಲಸ ನೀಡುವುದು ಸರಕಾರದ ಕರ್ತವ್ಯವಾಗಿದೆ. ಯಾವುದೇ ಗ್ರಾಮೀಣ ವ್ಯಕ್ತಿ ತನಗೆ ಅಕುಶಲ ಕೆಲಸ ಬೇಕೆಂದು ಅರ್ಜಿ ಹಾಕಿದರೆ 15 ದಿನಗಳೊಳಗೆ ಅವರಿಗೆ ಉದ್ಯೋಗ ಕೊಡಬೇಕು. ತಪ್ಪಿದರೆ ನಿರುದ್ಯೋಗ ಭತ್ಯೆ ಕೊಡಬೇಕಾಗುತ್ತದೆ. ಕೊಡಬೇಕಾದ ಕೂಲಿ ಹಣವು ಸಂಪೂರ್ಣವಾಗಿ ಕೇಂದ್ರ ಸರಕಾರದಿಂದಲೇ ಬರುವಂಥದ್ದು. ಆದರೆ ಈ ʻವಿಬಿ ಜಿ ರಾಮ್ ಜಿʼ ಹೇಳುವುದೇನು?
ಕೇಂದ್ರ ಸರಕಾರವು ʻವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕಾ ಮಿಶನ್ (ಗ್ರಾಮೀಣ್) ಬಿಲ್ 2025 (ವಿಬಿ- ಜಿ ರಾಮ್ ಜಿ) ಎಂಬ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸುವ ಪ್ರಯತ್ನದ ಮೂಲಕ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾನೂನನ್ನು ಹರಿದೊಗೆಯಲು ಪ್ರಯತ್ನ ನಡೆಸಿದೆ.
ಈ ಮಸೂದೆಯನ್ನು ಯಾವುದೇ ಕೂಲಿಕಾರರ ಸಂಘಟನೆಯನ್ನಾಗಲೀ, ಕಾನೂನಿಗಾಗಿ ದುಡಿದ ಜನರನ್ನಾಗಲೀ ಕೇಳದೆ, ಚರ್ಚೆ ಮಾಡದೇ ಧಿಡೀರೆಂದು ಹೊಸ ಕಾನೂನು ತರುವ ಪ್ರಯತ್ನ ನಡೆದಿದೆ. ರಾಷ್ಟ್ರಪಿತನ ಹೆಸರು ತೆಗೆದುಹಾಕುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸಂಚಷ್ಟೇ. ಒಂದು ಹಕ್ಕು ಆಧಾರಿತ ಕಾನೂನನ್ನು ಕೇಂದ್ರ ಸರಕಾರದ ಪರವಾನಿಗಿ ಪಡೆದು, ಅದರ ಬಜೆಟ್ಟಿಗೆ ತಕ್ಕಂತೆ, ಅದು ಹೇಳಿದಲ್ಲಿ ಮಾತ್ರ ಕೆಲಸ ಕೊಡುವಂಥ ಒಂದು ಕಾನೂನನ್ನಾಗಿ ಪರಿವರ್ತಿಸುವ ಒಳಗಿನ ಪ್ರಯತ್ನ ಇದು.
ಇದನ್ನು ಓದಿದ್ದೀರಾ? ಗುಜರಾತ್ | ಮತ್ತೊಂದು ಮನರೇಗಾ ಹಗರಣ ಬಯಲಿಗೆ
ಇಡೀ ದೇಶದ ಯಾವುದೇ ಹಳ್ಳಿಯ ಕುಟುಂಬದವರು ಉದ್ಯೋಗ ಅರಸಿ ಬಂದರೆ ಅವರಿಗೆ ಉದ್ಯೋಗ ಕೊಡಬೇಕೆಂಬ ಕಾನೂನು ಮ.ಗಾ.ರಾ.ಗ್ರಾ.ಉದ್ಯೋಗ ಖಾತರಿ. ಅಂದರೆ ಕೆಲಸ ಬೇಕಾದವರು ಕೇಳಿ ಪಡೆಯುವ ಹಕ್ಕುಳ್ಳ ಕಾನೂನು. ಆದರೆ ಈ ʻಜಿ ರಾಮ್ ಜಿ ಮಸೂದೆʼಯಲ್ಲಿನ ಪರಿಚ್ಛೇದ 5(1) ಹೇಳುತ್ತದೆ: ‘ಕೇಂದ್ರ ಸರಕಾರವು ನೋಟಿಫೈ ಮಾಡಿರುವ ಪ್ರದೇಶದಲ್ಲಿನ ಪ್ರತಿಯೊಂದು ಕುಟುಂಬದ ವಯಸ್ಕ ಜನರು ಅಕುಶಲ ಕೆಲಸ ಮಾಡಲು ಬಯಸಿದರೆ ಅವರಿಗೆ 125 ದಿನಗಳ ಕೆಲಸವನ್ನು ಕೊಡಬೇಕು’. ಅಂದರೆ ಒಂದು ಪ್ರದೇಶ ಕೇಂದ್ರ ಸರಕಾರದಿಂದ ನೋಟಿಫೈ ಆಗಿರದಿದ್ದರೆ ಆ ಪ್ರದೇಶದಲ್ಲಿನ ಜನರಿಗೆ ಉದ್ಯೋಗದ ಹಕ್ಕು ಇರುವುದಿಲ್ಲ. ಇಡೀ ದೇಶಕ್ಕೂ ಸಿಕ್ಕಿದ್ದ ಒಂದು ಹಕ್ಕು ಆಧಾರಿತ ಕಾರ್ಯಕ್ರಮ ಈಗ ಆಯ್ದ ಪ್ರದೇಶಗಳ ಜನರಿಗೆ ಮಾತ್ರ ಸಿಗುವಂತಾಗಲಿದೆ.
ಮ.ಗಾ.ರಾ.ಗ್ರಾ.ಉದ್ಯೋಗ ಖಾತರಿ ಕಾನೂನಿನಲ್ಲಿ ಜನರಿಗೆ ಬೇಕಾದಾಗ, ಅವರು ಅರ್ಜಿ ಹಾಕಿದಾಗ ಕೆಲಸ ನೀಡುವುದು ಸರಕಾರದ ಕರ್ತವ್ಯವಾಗಿದೆ. ಯಾವುದೇ ಗ್ರಾಮೀಣ ವ್ಯಕ್ತಿ ತನಗೆ ಅಕುಶಲ ಕೆಲಸ ಬೇಕೆಂದು ಅರ್ಜಿ ಹಾಕಿದರೆ 15 ದಿನಗಳೊಳಗೆ ಅವರಿಗೆ ಉದ್ಯೋಗ ಕೊಡಬೇಕು. ತಪ್ಪಿದರೆ ನಿರುದ್ಯೋಗ ಭತ್ಯೆ ಕೊಡಬೇಕಾಗುತ್ತದೆ. ಕೊಡಬೇಕಾದ ಕೂಲಿ ಹಣವು ಸಂಪೂರ್ಣವಾಗಿ ಕೇಂದ್ರ ಸರಕಾರದಿಂದಲೇ ಬರುವಂಥದ್ದು.
ಆದರೆ ಈ ʻವಿಬಿ ಜಿ ರಾಮ್ ಜಿʼ ಮಸೂದೆಯ ಪರಿಚ್ಛೇದ 4(5) ರ ಪ್ರಕಾರ, ʻಪ್ರತಿಯೊಂದು ವಿತ್ತ ವರ್ಷಕ್ಕೂ ಕೇಂದ್ರ ಸರಕಾರವು ಆಯಾ ರಾಜ್ಯಕ್ಕೆ ಎಷ್ಟು ಹಣವನ್ನು ಕೊಡ ಮಾಡಲಾಗುತ್ತದೆ ಎಂದು ನಿರ್ಧರಿಸುತ್ತದೆ. ಅದು ಯಾವ ಅಳತೆಗೋಲಿನ ಆಧಾರದ ಮೇಲೆ ಎಂಬುದನ್ನೂ ಕೇಂದ್ರ ಸರಕಾರವೇ ನಿರ್ಧರಿಸುತ್ತದೆʼ ಮುಂದುವರೆಯುತ್ತ, ಪರಿಚ್ಛೇದ 4(6)ರಲ್ಲಿ ಹೀಗೆ ಹೇಳಿದೆ: ʻತನಗೆ ನೀಡಿದ ಬಜೆಟ್ಟಿಗಿಂತ ಹೆಚ್ಚಿನ ಖರ್ಚನ್ನು ಯಾವುದೇ ರಾಜ್ಯ ಮಾಡಿದ್ದರೆ, ಆ ಹೆಚ್ಚಿನ ಖರ್ಚನ್ನು ಆ ರಾಜ್ಯ ಸರಕಾರವೇ ನಿಭಾಯಿಸತಕ್ಕದ್ದು.ʼ ಅಂದರೆ ಯಾವ ರಾಜ್ಯಕ್ಕೆ ಯಾವ ವಿತ್ತ ವರ್ಷದಲ್ಲಿ ಎಷ್ಟು ಹಣವನ್ನು ಕೊಡಬೇಕೆಂಬುದನ್ನು ನಿರ್ಧರಿಸುವ ಅಧಿಕಾರವನ್ನು ಕಾನೂನಿನ ಈ ಸೆಕ್ಷನ್, ಕೇಂದ್ರ ಸರಕಾರಕ್ಕೆ ಕೊಡುತ್ತದೆ. ತನ್ಮೂಲಕ ಒಂದೊಂದು ರಾಜ್ಯದಲ್ಲೂ ಎಷ್ಟು ದಿನಗಳ ಕೆಲಸವನ್ನು ಕೊಡಬಹುದೆಂಬುದನ್ನೂ ಕೇಂದ್ರ ಸರಕಾರವೇ ನಿರ್ಧರಿಸಿದಂತಾಯಿತು. ಅಂದರೆ ಉದ್ಯೋಗ ಖಾತರಿ ಕಾನೂನಿನಲ್ಲಿ ಇದ್ದ, ʻಬೇಡಿಕೆ ಇದ್ದಲ್ಲಿ ಕೆಲಸ ಕೊಡು, ಕೂಲಿಕೊಡುʼ ಎನ್ನುವುದು ಹೋಗಿ ಬಜೆಟ್ಟಿದ್ದರೆ ಮಾತ್ರ ಕೆಲಸ ಎಂದಾಗುತ್ತದೆ.
ಇದನ್ನು ಓದಿದ್ದೀರಾ? ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
ಕೂಲಿಕಾರರಿಗೆ ಕೊಡಬೇಕಾದ ಹಣ ಮತ್ತು ಸಾಧನ ಸಲಕರಣೆಗಳ ವೆಚ್ಚದ 75% ಹಣವನ್ನು ಕೇಂದ್ರ ಸರಕಾರವೇ ಭರಿಸಬೇಕು ಎಂದು ಮ.ಗಾ.ರಾ.ಗ್ರಾ.ಉ.ಖಾ. ಕಾನೂನು ಹೇಳುತ್ತದೆ. ಅಂದರೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವೆಚ್ಚ ಹಂಚಿಕೆ, 90:10 ರಷ್ಟಿತ್ತು. ಮಸೂದೆಯ ಪರಿಚ್ಛೇದ 22(2) ರ ಪ್ರಕಾರ, ʻಜಿ ರಾಮ್ ಜಿʼ ಯಲ್ಲಿ ʻಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವೆಚ್ಚ ಹಂಚಿಕೆಯು ಈಶಾನ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 90:10 ಇದ್ದರೆ, ಇನ್ನುಳಿದ ರಾಜ್ಯಗಳಿಗೆ ವೆಚ್ಚದ ಹಂಚಿಕೆಯು 60:40 ಇರುತ್ತದೆ.ʼ ಇದು ರಾಜ್ಯ ಸರಕಾರಗಳ ಮೇಲೆ ಹಣದ ಹೊರೆಯನ್ನು ಹೊರಿಸುತ್ತದೆ. ಉದ್ಯೋಗ ಕೊಡುವುದು ರಾಜ್ಯ ಸರಕಾರಗಳ ಕರ್ತವ್ಯ, ಕೂಲಿ ಕೊಡುವುದು ಕೇಂದ್ರ ಸರಕಾರದ ಹೊಣೆ ಆಗಿತ್ತು. ಅಕಸ್ಮಾತ್ ಉದ್ಯೋಗ ಕೊಡದಿದ್ದರೆ ನಿರುದ್ಯೋಗ ಭತ್ಯೆಯನ್ನು ರಾಜ್ಯ ಸರಕಾರ ಭರಿಸಬೇಕಾಗಿತ್ತು. ಈಗ ಉದ್ಯೋಗ ಕೊಟ್ಟು ಕೂಲಿಯನ್ನು ಕೊಡುವುದು ಕೂಡ ರಾಜ್ಯಸರಕಾರದ ಹೊಣೆಯಾಗುತ್ತದೆ.
ʻವಿಬಿ ಜಿ ರಾಮ್ ಜಿʼಯ ಶೆಡ್ಯೂಲ್ 1 ಕ್ಲಾಸ್ 6(4) ಹೇಳುವ ಪ್ರಕಾರ, ʻವಿಕಸಿತ ಭಾರತದ ಗ್ರಾಮೀಣ ಮೂಲಸೌಕರ್ಯ ಘಟಕವು ಎಲ್ಲಾ ರಾಜ್ಯ, ಜಿಲ್ಲೆ, ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಎಂತಹ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು, ಯಾವ ರೀತಿ ಮಾಡಬೇಕು ಎನ್ನುವುದನ್ನು ಹೇಳುತ್ತ ಸಾರ್ವಜನಿಕ ಹಣವು ಸರಿಯಾಗಿ ಬಳಕೆ ಆಗುವಂತೆ ಮಾಡುವುದುʼ ಎಂದು ಹೇಳುವ ಮೂಲಕ ಎಲ್ಲದಕ್ಕೂ ಕೇಂದ್ರ ಸರಕಾರದ ಅನುಮತಿಯೇ ಬೇಕೆಂದು ಈ ಮಸೂದೆ ಸ್ಪಷ್ಟವಾಗಿ ಹೇಳುತ್ತದೆ. ʻರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಘಟಕʼಕ್ಕೇ ಆದ್ಯತೆ ಕೊಡುವ ಮೂಲಕ ಸಂವಿಧಾನದ 73ನೇ ತಿದ್ದುಪಡಿಯ ಮೂಲ ಉದ್ದೇಶಕ್ಕೇ ಕೊಡಲಿ ಹಾಕುತ್ತದೆ.
ಕೃಷಿ ಕೆಲಸ ಮಾಡುವವರಿಗೆ ಮಣ್ಣಿನಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಕೈಬೆರಳಿನ ಗುರುತು ಸರಿಯಾಗಿ ಬರುವುದಿಲ್ಲ ಎಂದು ಎಷ್ಟೋ ಅಧ್ಯಯನಗಳು ಮತ್ತು ಸ್ಥಳೀಯ ವರದಿಗಳು ಸಾರಿ ಹೇಳಿವೆ. ಕಾರ್ಮಿಕರ ಬಯೋಮೆಟ್ರಿಕ್, ಎನ್.ಎಮ್.ಎಮ್.ಎಸ್., ಎಬಿಪಿಎಸ್ ನಂತಹ ಜನವಿರೋಧಿ ತಂತ್ರಜ್ಞಾನಗಳನ್ನು ಹಿಂತೆಗೆದುಕೊಳ್ಳಿ ಎಂದು ಕೂಲಿಕಾರರ ಸಂಘಟನೆಗಳು ಸರಕಾರಕ್ಕೆ ಒಂದೇ ಸಮ ಒತ್ತಾಯಿಸುತ್ತಲೇ ಇವೆ. ಹಾಗಿದ್ದೂ ಕೂಡ, ಈಗ ʻವಿಬಿ ಜಿ ರಾಮ್ ಜಿʼ ಮಸೂದೆಯು ತಂತ್ರಜ್ಞಾನದಿಂದ ಜನರ ಮೇಲೆ ಸದಾ ಕಣ್ಗಾವಲಿಡುವ, ಕೂಲಿಕಾರರಿಗೆ ಬಯೋಮೆಟ್ರಿಕ್‌ನ್ನು ಕಡ್ಡಾಯಗೊಳಿಸುವ ಇದರ ಜೊತೆಗೆ ಕೆಲಸದ ಜಾಗದ ಮೇಲೆ ಕೂಡ ಕಣ್ಗಾವಲನ್ನಿಡುವ ತಂತ್ರಗಾರಿಕೆಯನ್ನು ಅಳವಡಿಸಬೇಕೆಂದು ಹೇಳುತ್ತದೆ.
ಮ.ಗಾ. ರಾ.ಗ್ರಾ. ಉದ್ಯೋಗ ಖಾತರಿಯಲ್ಲಿ ಯಾವುದೇ ಗ್ರಾಮೀಣ ಕುಟುಂಬವು ವರ್ಷದ ಯಾವುದೇ ತಿಂಗಳಿನ ಯಾವುದೇ ದಿನದಲ್ಲೂ ಕೆಲಸ ಕೇಳಲು ಅವಕಾಶ ನೀಡಿತ್ತು. ಈ ʻಜಿ ರಾಮ್ ಜಿʼ ಮಸೂದೆಯಲ್ಲಿ ʻಕೃಷಿ ಕೆಲಸ ಜೋರಿದ್ದಾಗ ಅಂದರೆ ಬಿತ್ತುವ, ಸುಗ್ಗಿಯಂತಹ ಕೆಲಸ ಜೋರಿರುವ ಎರಡು ತಿಂಗಳನ್ನು ಬಿಟ್ಟು ಇನ್ನಾವುದೇ ಸಮಯದಲ್ಲಿ ಯಾವಾಗ ಕೆಲಸಕ್ಕೆ ಬರಬಹುದೆಂದು ಮುಂಚಿತವಾಗಿ ಜಾಹೀರು ಪಡಿಸಬೇಕು. ಕೃಷಿಯ ಕೆಲಸವಿರುವ ಎರಡು ತಿಂಗಳು ʻಜಿ ರಾಮ್ ಜಿʼಯ ಕೆಲಸ ಮಾಡುವಂತಿಲ್ಲ.ʼ ಅಂದರೆ, ವರ್ಷಕ್ಕೆ ಹತ್ತು ತಿಂಗಳು ಮಾತ್ರ ಕೆಲಸ ಕೇಳಬಹುದು. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮಸೂದೆಯಿದು. ಕಾರ್ಮಿಕರು, ಗ್ರಾಮಸಭೆ, ರಾಜ್ಯಗಳಿಗೆ ಇದ್ದ ಎಲ್ಲಾ ನಿಯಂತ್ರಣವನ್ನೂ ಕಿತ್ತುಕೊಂಡು ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯದ ಬುಡಕ್ಕೇ ಕೊಡಲಿಯಿಕ್ಕಿದೆ.
ಕೂಲಿಕಾರ್ಮಿಕರು ಬಹುಕಾಲ ಹೋರಾಡಿ ತಂದಿರುವ ಕಾನೂನಿನಲ್ಲಿ ಸುಧಾರಣೆ ತರುತ್ತೇವೆನ್ನುತ್ತ ಅದರೊಳಗಿರುವ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಅಂಶಗಳನ್ನು ತೆಗೆದುಹಾಕಿ, ಕೇಂದ್ರ ಸರಕಾರದ ಇಚ್ಛೆಗನುಗುಣವಾಗಿ, ಅದು ಇಟ್ಟಿರುವ ಬಜೆಟ್ಟಿಗನುಗುಣವಾಗಿ, ಅದರ ಕಣ್ಗಾವಲಿನಲ್ಲಿ ನಡೆಯುವ ಒಂದು ಕಾರ್ಯಕ್ರಮವಾಗಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರದ ಪ್ರಯತ್ನವನ್ನು ಜನರು ಒಕ್ಕೊರಲಿನಿಂದ ತಿರಸ್ಕರಿಸಬೇಕು. ದೇಶದ ಲಕ್ಷಾಂತರ ಕೂಲಿಕಾರರಿಗೆ ಜೀವದಾಸರೆಯಾಗಿರುವ ಈ ಹಕ್ಕು ಆಧರಿತ ಕಾನೂನನ್ನು ಬುಡಮೇಲು ಮಾಡಹೊರಟಿರುವ ಪ್ರಯತ್ನವನ್ನು ಆಗಗೊಡಬಾರದು. ಸಂಸತ್ತಿನಲ್ಲಿ ಮಂಡಿಸಲೂ ಬಿಡಬಾರದು.

ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.




