"ಅಲೆಮಾರಿಗಳ ಬದುಕು ಇಂದಿಗೂ ಟೆಂಟ್‌ಗಳಲ್ಲೇ ಇದೆ. ಒಳಮೀಸಲಾತಿಯಲ್ಲಿ ಅನ್ಯಾಯ ಎಸಗುವ ಮೂಲಕ ಸರ್ಕಾರ ಅವರ ಬದುಕನ್ನು ಮತ್ತಷ್ಟು ಕಾಲ ಟೆಂಟ್‌ಗೆ ದೂಡಿದೆ" ಎಂಬುದನ್ನು ಸಂಕೇತಿಸಲು ಟೆಂಟ್‌ಗಳ ಟೇಪ್ ಕಟ್ ಮಾಡಲಾಯಿತು.
ರಾಜ್ಯದ ಮೂಲೆಮೂಲೆಯಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಅಲೆಮಾರಿಗಳು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನೆರೆದಿದ್ದರು. ತಾವು ಭಿಕ್ಷಾಟನೆಗಾಗಿ ತೊಡುವ ವೇಷಭೂಷಣಗಳನ್ನು, ಬಣ್ಣಗಳನ್ನು ಹಾಕಿಕೊಂಡು ಕೂತ ಅವರ ಕಣ್ಣುಗಳಲ್ಲಿ ಸರ್ಕಾರದ ವಿರುದ್ಧ ಸಿಟ್ಟಿತ್ತು. ನಂಬಿದ ನಾಯಕತ್ವವೇ ಅನ್ನದ ಬಟ್ಟಲು ಕಿತ್ತುಕೊಂಡ ನೋವಿತ್ತು. “ನಾವು ಕೇಳುತ್ತಿರುವುದು ಭಿಕ್ಷೆಯಲ್ಲ. ನಮ್ಮ ಬದುಕಿನ ಹಕ್ಕು, ನಮ್ಮ ಮಕ್ಕಳ ಭವಿಷ್ಯದ ಬದುಕು” ಎಂಬುದು ಅವರ ಒಕ್ಕೊರಲಿನ ದನಿಯಾಗಿತ್ತು.
“ಅಂದಿನ ದುಡಿಮೆ, ಅಂದಿನ ಹಸಿವು ತಣಿಸಲು ಮಾತ್ರ” ಎನ್ನುವಂತೆ ಬದುಕುವ ಅಲೆಮಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ರಾಜಧಾನಿಯತ್ತ ಧಾವಿಸಿದ್ದರು. ಇಂದು ಹೋರಾಡದಿದ್ದರೆ, ಮುಂದಿನ ಬದುಕು ದುಸ್ತರ ಎಂಬ ಆತಂಕ, ದುಗುಡ, ಎಚ್ಚರಿಕೆ ಈ ತಬ್ಬಲಿ ಸಮುದಾಯಗಳಲ್ಲಿ ಮೂಡಿದೆ. ಈ ಪ್ರಜ್ಞೆಯ ಭಾಗವಾಗಿ ನಡೆದ ‘ಬೆಂಗಳೂರು ಚಲೋ’ ಸರ್ಕಾರಕ್ಕೆ ತಮ್ಮ ಒಡಲ ಸಂಕಟವನ್ನು ದಾಟಿಸುವ ಪ್ರಯತ್ನ ಮಾಡಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆಗೆ ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಆಯೋಗವು ನೀಡಿದ್ದ ಶಿಫಾರಸ್ಸನ್ನು ಮೂಲೆಗೆ ತಳ್ಳಿ, 59 ಅಸ್ಪೃಶ್ಯ- ಅಲೆಮಾರಿ ಸಮುದಾಯಗಳನ್ನು ಬಲಾಢ್ಯ ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಮಾಡಲಾಗಿರುವ ಚಾರಿತ್ರಿಕ ಪ್ರಮಾದದ ವಿರುದ್ಧ ಅಲೆಮಾರಿಗಳು ಸಿಡಿದು ನಿಂತಿದ್ದಾರೆ. ಅಸಹಾಯಕತೆಯ ನಡುವೆಯೇ ಬೃಹತ್ ಹೋರಾಟ ನಡೆಸಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡಮಟ್ಟದ ಪ್ರತಿಭಟನೆಯನ್ನು ಅಲೆಮಾರಿಗಳು ಈವರೆಗೆ ಸಂಘಟಿಸಿರಲಿಲ್ಲ. ಆದರೆ ಹಸಿವಿನ ಪ್ರಶ್ನೆಯು ಅವರನ್ನು ರಾಜ್ಯದ ಮೂಲೆಮೂಲೆಯಿಂದ ಕರೆತಂದು ಬೀದಿಗೆ ಕೂರಿಸಿತ್ತು.
ಕರ್ನಾಟಕದ ಒಳಮೀಸಲಾತಿ ವಂಚಿತ 49 ಅಲೆಮಾರಿ ಮತ್ತು 10 ಸೂಕ್ಷ್ಮ ಸಮುದಾಯಗಳ ಐಕ್ಯ ಸಂಘಟನೆಯಾಗಿ ಹೊಮ್ಮಿರುವ ‘ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ’ವು ಸರ್ಕಾರದ ಮುಂದೆ ತಮ್ಮ ಆಗ್ರಹಗಳನ್ನು ಮುಂದಿಟ್ಟಿದೆ. ಈ ಸಮುದಾಯಗಳೊಂದಿಗೆ ಎಡಗೈ, ಬಲಗೈ ಅಸ್ಪೃಶ್ಯ ಸಮುದಾಯಗಳು ಮತ್ತು ಕರ್ನಾಟಕದ ಪ್ರಗತಿಪರ, ಜನಪರ ಸಂಘಟಕರು ಒಗ್ಗೂಡಿದ್ದಾರೆ.

ದೊಂಬರು ಸಮುದಾಯದ ಪ್ರೊ. ಎ.ಎಸ್.ಪ್ರಭಾಕರ, ಬುಡ್ಗ ಜಂಗಮ ಸಮುದಾಯದ ಬಾಲಗುರುಮೂರ್ತಿ, ಹಂದಿಜೋಗಿ ಸಮುದಾಯದ ವೆಂಕಟರಮಣಯ್ಯ, ರಾಜೇಂದ್ರಕುಮಾರ್, ಸಿಂಧೊಳ್ಳು ಜನಾಂಗದ ಹನುಮಂತಪ್ಪ, ಗೋಸಂಗಿ ಸಮುದಾಯದ ಚಾವಡಿ ಲೋಕೇಶ್, ಬುಡ್ಗ ಜಂಗಮರಾದ ಶೇಷಪ್ಪ, ಸಣ್ಣಮಾರಪ್ಪ, ಅಗೇರ್ ಸಮುದಾಯದ ಜಗದೀಶ್, ಘಂಟಿಚೋರ್ ಸಮುದಾಯದ ಸುರೇಶ್, ಮಾಂಗ್ ಗಾರುಡಿ ಸಮುದಾಯದ ಅನಿಲ್ ಕುಮಾರ್ ಕಾಂಬ್ಳೆ, ಅರುಂಧತಿಯಾರ್ ಸಮಾಜದ ಆರ್.ಕೃಷ್ಣ, ಶಿಳ್ಳೇಕ್ಯಾತ ಸಮುದಾಯದ ಮಂಜುನಾಥ್, ದಕ್ಕಲಿಗ ಸಮುದಾಯದ ಶಾಂತರಾಜು, ಸುಡುಗಾಡು ಸಿದ್ದ ಸಮುದಾಯದ ಲೋಹಿತಾಶ್ವ- ಹೀಗೆ ಅವಕಾಶ ವಂಚಿತ ಅಲೆಮಾರಿ, ಅತೀ ಸೂಕ್ಷ್ಮ ಅಸ್ಪೃಶ್ಯ ಸಮುದಾಯದ ಮುಖಂಡರು ಹೋರಾಟವನ್ನು ಪ್ರತಿನಿಧಿಸಿ, ತಮ್ಮ ಹಕ್ಕು ನೀಡಲೇಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಚಾರಿತ್ರಿಕ ಹೋರಾಟ
ದೊಂಬರು ಸಮುದಾಯದ ದನಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ಎಸ್.ಪ್ರಭಾಕರ ಅವರು ಆಶಯ ನುಡಿಗಳನ್ನಾಡಿ, “ಸಂತೋಷ ಮತ್ತು ದುಃಖ ಒಟ್ಟಿಗೆ ಆಗುತ್ತಿದೆ” ಎಂದು ತಿಳಿಸಿದರು.
“ನಾವು ಬೆಂಬಲಿಸುವ, ನಮ್ಮೆಲ್ಲರ ಪ್ರೀತಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿಗಳ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ನಿರೀಕ್ಷೆ ಇತ್ತು. ಅವರು ಮಾಮೂಲಿ ರಾಜಕಾರಣಿಯಲ್ಲ, ಈ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಭಿನ್ನವಾದ ನಾಯಕ, ಗಟ್ಟಿಯಾದ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ಅವರು ಅಲೆಮಾರಿಗಳ ಪರ ನಿಲುವು ತೆಗೆದುಕೊಳ್ಳುತ್ತಾರೆಂಬ ನಿರೀಕ್ಷೆ ಹುಸಿಯಾಯಿತು. ಅದಕ್ಕೆ ಬಹಳ ದುಃಖವಾಗುತ್ತಿದೆ. ನನ್ನನ್ನೂ ಒಳಗೊಂಡಂತೆ ಎಲ್ಲ ಅಲೆಮಾರಿಗಳು ನಿರಾಶರಾಗಿದ್ದಾರೆ. ಸಂತೋಷ ಏಕೆಂದರೆ- 49 ಅಲೆಮಾರಿ ಸಮುದಾಯದವರಾದ ನಾವು ಬಿಡಿಬಿಡಿಯಾಗಿ ಈವರೆಗೆ ಹೋರಾಟ ಮಾಡಿದ್ದೇವೆ. ಆದರೆ ಇಂದು ಬೃಹತ್ ಚಳವಳಿ ಕೈಗೊಂಡಿದ್ದೇವೆ. ಸಾಂವಿಧಾನಿಕ ಹಕ್ಕುಗಳಿಗಾಗಿ ದನಿ ಎತ್ತಿರುವ ಈ ದಿನವು ಚರಿತ್ರೆಗೆ ಸೇರಬೇಕಿದೆ” ಎಂದು ಹೇಳಿದರು.
ಇದನ್ನೂ ಓದಿರಿ: ಮಾದಿಗರು ಅಲೆಮಾರಿಗಳ ಹಿತ ಕಾಯುತ್ತೇವೆ: ಎಚ್. ಆಂಜನೇಯ
“ಪರಿಶಿಷ್ಟರನ್ನು ಮೂರು ಗುಂಪುಗಳನ್ನಾಗಿ ಮಾಡಿ, ಮೂರನೇ ಗುಂಪಿಗೆ ಅಲೆಮಾರಿಗಳನ್ನು ಸೇರಿಸಿ ಅನ್ಯಾಯ ಎಸಗಲಾಗಿದೆ. ಈ ಅನ್ಯಾಯವನ್ನು ಸರ್ಕಾರ ಮರುಪರಿಶೀಲನೆ ಮಾಡಬೇಕು. ಅಲೆಮಾರಿಗಳಿಗೆ ಪ್ರತ್ಯೇಕವಾದ ಪ್ರವರ್ಗವನ್ನು ಸೃಷ್ಟಿ ಮಾಡಿ ನಮಗೆ ಶೇ.1ರಷ್ಟು ಮೀಸಲಾತಿ ಕೊಡಬೇಕು. ತಮಿಳುನಾಡು ರಾಜ್ಯದಲ್ಲಿ ಅರುಂಧತಿಯಾರ್ ಸಮುದಾಯವನ್ನು ಪ್ರತ್ಯೇಕವಾಗಿ ಪರಿಗಣಿಸಿ 2008-09ರಲ್ಲಿ ಶೇ.3ರಷ್ಟು ಮೀಸಲಾತಿಯನ್ನು ನೀಡಲಾಯಿತು. ತೆಲಂಗಾಣದಲ್ಲಿ ಇದೇ ವರ್ಷ ಒಳಮೀಸಲಾತಿ ಜಾರಿಗೊಳಿಸಿದ್ದು, ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ಕೊಡಲಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ನಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
ಟೆಂಟ್‌ಗಳ ಟೇಪ್ ಕಟ್ ಮಾಡಿ ಹೋರಾಟಕ್ಕೆ ಚಾಲನೆ
ಅಲೆಮಾರಿಗಳ ಬದುಕು ಇಂದಿಗೂ ಟೆಂಟ್‌ಗಳಲ್ಲೇ ಇದೆ. ಸರಿಯಾದ ಸೂರು ಕಟ್ಟಿಕೊಳ್ಳಲು ಈ ನೊಂದ ಸಮುದಾಯಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಒಳಮೀಸಲಾತಿಯಲ್ಲಿ ಅನ್ಯಾಯ ಎಸಗುವ ಮೂಲಕ ಸರ್ಕಾರ ಅವರ ಬದುಕನ್ನು ಮತ್ತಷ್ಟು ಕಾಲ ಟೆಂಟ್‌ಗೆ ದೂಡಿದೆ. ಇದನ್ನು ಸಾಂಕೇತಿಕವಾಗಿ ಧ್ವನಿಸುವ ನಿಟ್ಟಿನಲ್ಲಿ ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ಟೆಂಟ್‌ಗಳನ್ನು ಉದ್ಘಾಟಿಸಲಾಯಿತು. ಆ ಮೂಲಕ ಸರ್ಕಾರದ ನಡೆಯನ್ನು ಅಣಕ ಮಾಡಲಾಯಿತು.

ಹೋರಾಟವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್, “ಹಲವು ಜನ ಎಡ ಮತ್ತು ಬಲ ಸಮುದಾಯಗಳ ಸಚಿವರಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಿಂದ ಈ ನಿರ್ಧಾರವನ್ನು ನಾವು ನಿರೀಕ್ಷಿಸಿರಲಿಲ್ಲ. ಮತಗಳ ಸಂಖ್ಯೆಯಿಂದ, ಸಂಖ್ಯಾವಾರು ಬಲದ ಮೇಲೆ ಇಂತಹ ನಿರ್ಧಾರಗಳನ್ನು ಮಾಡಬಾರದು. ಸಂಖ್ಯೆಯ ಆಧಾರದಲ್ಲಿ ಸಾಮಾಜಿಕ ನ್ಯಾಯವನ್ನು ನೋಡಲಾಗದು” ಎಂದು ಚಾಟಿ ಬೀಸಿದರು.
“ಡಾ.ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆಯುವಾಗ, ಅವಕಾಶ ವಂಚಿತರು, ಅಬಲರು, ಪ್ರಾತಿನಿಧ್ಯ ಪಡೆಯದವರಿಗೆ ಪಾಲು ಸಿಗಬೇಕು ಎಂಬ ಕಾರಣಕ್ಕೆ ಮೀಸಲಾತಿ ತತ್ವವನ್ನು ಅಳವಡಿಸಿದರು. ಸಮಾನರ ಜೊತೆ ಅಸಮಾನರು ಇದ್ದ ಕಾರಣ ಕೆಲವು ಸಮುದಾಯಗಳು ಹೆಚ್ಚು ಅನುಕೂಲ ಪಡೆದರೆ, ಕೆಲವು ಕಡಿಮೆ ಅನುಕೂಲ ಪಡೆದವು. ಆದರೆ ಏನನ್ನೂ ಪಡೆಯದ ಅಲೆಮಾರಿಗಳ ಪರಿಸ್ಥಿತಿ ಈ ಸರ್ಕಾರಕ್ಕೆ ಗೊತ್ತಿಲ್ಲವಾ? ಇಲ್ಲಿ ರಾಜಕಾರಣ ಮಾತ್ರ ನೋಡಬಾರದು, ಇಂತಹ ವಿಚಾರವನ್ನು ಅಂತಃಕರಣದಿಂದ ಗ್ರಹಿಸಬೇಕು. ಸಿದ್ದರಾಮಯ್ಯನವರು ಸಮಾಜವಾದಿ ಮತ್ತು ಬಡವರ ಪರ ಇರುವವರು. ಅಲೆಮಾರಿಗಳನ್ನು ಅವರು ಅಂತಃಕರಣದಿಂದ ನೋಡಬೇಕಿತ್ತೇ ಹೊರತು, ರಾಜಕಾರಣದ ಒತ್ತಡದಿಂದ ಅಲ್ಲ” ಎಂದು ಅಭಿಪ್ರಾಯಪಟ್ಟರು.
“ಒಳಮೀಸಲಾತಿಗಾಗಿ 35 ವರ್ಷ ಕಾಲ ನಡೆದ ಹೋರಾಟಕ್ಕೆ ಮೇಲುಗೈ ಆಗಿದೆ. ಆದರೆ ಈ ಹೊತ್ತಿನಲ್ಲೇ ನಮ್ಮ ದುಗುಡ ಹೆಚ್ಚಾಗಿದೆ. ಕರ್ನಾಟಕ ಸರ್ಕಾರಕ್ಕೆ ಕಿವಿ ಮತ್ತು ಕಣ್ಣಿದೆ ಎಂದು ಭಾವಿಸುತ್ತೇನೆ. ಸಿದ್ದರಾಮಯ್ಯನವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ಅದರ ಬಗ್ಗೆ ನಮಗೆಲ್ಲ ಪಾಠ ಹೇಳಿಕೊಟ್ಟವರು ಸಿದ್ದರಾಮಯ್ಯ. ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡಲೇಬೇಕು. ನಾವು ಅಲೆಮಾರಿಗಳ ಜೊತೆ ಸದಾ ಇರುತ್ತೇವೆ” ಎಂದು ಘೋಷಿಸಿದರು.
ಇದನ್ನೂ ಓದಿರಿ: ಅಸ್ಪೃಶ್ಯ ಅಲೆಮಾರಿ ಒಳಮೀಸಲಾತಿ ಹೋರಾಟ; ಮಳೆಗೆ ಟೆಂಟ್ ಧ್ವಂಸ
ಚಿಂತಕ ಶಿವಸುಂದರ್ ಮಾತನಾಡಿ, “ಕಟ್ಟಕಡೆಯ ವ್ಯಕ್ತಿಗೆ ಮೊದಲು ಅವಕಾಶ ಕಲ್ಪಿಸಿ ಎನ್ನುವವರು ಮಾತ್ರ ಮನುಷ್ಯರು. ಆಗಿರುವ ಅನ್ಯಾಯದ ವಿರುದ್ಧ ಹಲ್ಲು ಕಚ್ಚಿ ಹೋರಾಡುತ್ತಿರುವ ನಿಮಗೆಲ್ಲರಿಗೂ ವಂದನೆಗಳು. ಅಂಬೇಡ್ಕರ್ ಅವರು ಹೇಳಿದಂತೆ ಇದು ನಿಜವಾದ ಸ್ವಾತಂತ್ರ್ಯ ಹೋರಾಟ. ಬಡತನದ ವಿರುದ್ಧ, ಜಾತಿ ಅಸಮಾನತೆಯ ವಿರುದ್ಧ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟ” ಎಂದು ಬಣ್ಣಿಸಿದರು.
ಬರೆಹಗಾರ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, “ಸರ್ಕಾರ ಅಲೆಮಾರಿಗಳ ಹೋರಾಟಕ್ಕೆ ಮಣಿಯದಿದ್ದರೆ, ಅಲೆಮಾರಿಗಳು ತಮ್ಮ ವೇಷಧರಿಸಿ ದೆಹಲಿಗೆ ಹೋಗಲಿದ್ದಾರೆ. ರಾಹುಲ್ ಗಾಂಧಿಯವರನ್ನು ಅಲೆಮಾರಿಗಳ ನಿಯೋಗ ಭೇಟಿಯಾಗಲಿದೆ” ಎಂದು ಮುನ್ನೆಚ್ಚರಿಕೆ ನೀಡಿದರು.
ನಟ, ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿ, “ಮುಖ್ಯಮಂತ್ರಿಯವರೇ ನಾಟಕ ಆಡುತ್ತಿದ್ದೀರಾ? ಮಲಗಿರುವವರನ್ನು ಎಬ್ಬಿಸಬಹುದು, ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಆಗಲ್ಲ. ಅಹಿಂದ ಎನ್ನುತ್ತೀರಾ, ಅಲೆಮಾರಿಗಳು ನಿಮಗೆ ಕಾಣಿಸುತ್ತಿಲ್ಲವೇ?” ಎಂದು ಕುಟುಕಿದರು.
ಲೇಖಕ ಹುಲಿಕುಂಟೆ ಮೂರ್ತಿ ಮಾತನಾಡಿ, “ಆಗಸ್ಟ್ 19ನೇ ತಾರೀಖಿನಿಂದ ಸಿದ್ದರಾಮಯ್ಯನವರಿಗೆ ನಿದ್ದೆ ಇಲ್ಲ. ಅವರ ಮನಃಸಾಕ್ಷಿಗೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಬೇಗನೆ ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ಕೊಟ್ಟು, ನೆಮ್ಮದಿಯಾಗಿರಿ” ಎಂದು ಆಶಿಸಿದರು.

“ನಮ್ಮ ಅಲೆಮಾರಿಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ವಿಧಾನಸಭಾ ಚುನಾವಣೆಗಳಲ್ಲಿ ಕೆಲವರು 2,000 ಅಥವಾ 3,000 ಮತಗಳಲ್ಲಿ ಸೋಲುತ್ತಾರೆ. ಆ ಮತಗಳು ನಮ್ಮವೇ ಆಗಿರುತ್ತವೆ” ಎಂದು ಗುಡುಗಿದರು.
ದಲಿತ ಮುಖಂಡ ಬಿ.ಗೋಪಾಲ್ ಮಾತನಾಡಿ, “ತಾಯಿಯೊಬ್ಬಳಿಗೆ ಹುಟ್ಟಿದ ಎರಡು ಮಕ್ಕಳಲ್ಲಿ ಒಬ್ಬ ಕುಂಟನಾಗಿದ್ದರೆ, ಆತನಿಗೆ ವಿಶೇಷ ಸವಲತ್ತನ್ನು ಆಕೆ ಕೊಡುತ್ತಾಳೆ. ಸಿದ್ದರಾಮಯ್ಯನವರು ಮಾಡಿದ್ದು ಅನ್ಯಾಯ. ಅಲೆಮಾರಿಗಳು ಕುಂಟುತ್ತಿರುವವರು. ಅವರನ್ನು ಕಾಲು ಕೈ ಚೆನ್ನಾಗಿ ಇರುವವರ ಜೊತೆ ಬಿಟ್ಟಿದ್ದೀರಿ. ಸಿದ್ದರಾಮಯ್ಯನವರ ಮೀಸಲು ನೀತಿ ಭಿಕ್ಷುಕರನ್ನು ಮಹಾಭಿಕ್ಷುಕರನ್ನಾಗಿಸಿದೆ” ಎಂದು ಹರಿಹಾಯ್ದರು.
ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ಅಲೆಮಾರಿಗಳ ಮನೆಗಳಲ್ಲಿ ಅಂಬೇಡ್ಕರ್ ಫೋಟೋಗಳಿವೆ. ನಿಜವಾದ ಅಂಬೇಡ್ಕರ್‌ವಾದಿಗಳವರು. ಅಲೆಮಾರಿಗಳು ತಮ್ಮ ವಾದನಗಳನ್ನು ಎತ್ತಿಕೊಂಡು ರಾಜಧಾನಿಯ ಬೀದಿಯಲ್ಲಿ ನಡೆದರೆ ಸರ್ಕಾರ ಧಿಕ್ಕೆಟ್ಟು ಹೋಗುತ್ತದೆ” ಎಂದರು.
ಇದನ್ನೂ ಓದಿರಿ: ಅಲೆಮಾರಿಗಳ ಶೇ.1 ಮೀಸಲಾತಿಗಾಗಿ ರಾಹುಲ್ ಭೇಟಿಗೆ ನಿರ್ಧಾರ
ಸಾಮಾಜಿಕ ಕಾರ್ಯಕರ್ತ ಡಾ.ವಾಸು ಎಚ್.ವಿ. ಅವರು ಮಾತನಾಡಿ, “1947ರ ಆಗಸ್ಟ್ 15 ಮತ್ತು 1950ರ ಜನವರಿ 26ರಂದು ಪ್ರಜಾಪ್ರಭುತ್ವ ಜಾರಿಗೆ ಬರಲಿಲ್ಲ. ನಿರಂತರ ಹೋರಾಟಗಳ ಕಾರಣಕ್ಕೆ ಹಂತಹಂತವಾಗಿ ಡೆಮಾಕ್ರಸಿ ಜಾರಿಗೆ ಬಂದಿತು. ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಇಂದಿಗೂ ಪ್ರಜಾಪ್ರಭುತ್ವ ಸಿಕ್ಕಿಲ್ಲ ಎಂಬುದನ್ನು ಸಚಿವ ಸಂಪುಟ ಮತ್ತು ಸರ್ಕಾರ ತೋರಿಸಿವೆ. ಸರ್ಕಾರದ ನಿಲುವು ಹೊರಬಿದ್ದಾಗ ಆರಂಭದಲ್ಲಿ ಹೋರಾಟಗಾರರು ಸಂಭ್ರಮಾಚರಣೆ ಮಾಡಿದರು. ಆದರೆ ಆ ಸಂಭ್ರಮ ಮೂರ್ನಾಲ್ಕು ನಿಮಿಷಗಳಲ್ಲಿ ನಿಂತು ಹೋಯಿತು. ಅಲೆಮಾರಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಚಳವಳಿಗಾರರು ನಿಲುವು ತೆಗೆದುಕೊಂಡರು. ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡುವವರೆಗೂ ನ್ಯಾಯದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಹಕ್ಕು ಈ ಸರ್ಕಾರಕ್ಕೆ ಇರುವುದಿಲ್ಲ” ಎಂದು ಟೀಕಿಸಿದರು.
ಲಂಬಾಣಿಗಳು ಅಲೆಮಾರಿಗಳಲ್ಲ: ಎಸ್. ಮಾರೆಪ್ಪ
“ಲಂಬಾಣಿಗಳು ತಮ್ಮನ್ನು ಅಲೆಮಾರಿಗಳೆಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. 36,000 ಉದ್ಯೋಗಗಳನ್ನು ಪಡೆದುಕೊಂಡಿದ್ದೀರಿ. ನೀವು ಹೇಗೆ ಅಲೆಮಾರಿಗಳಾಗುತ್ತೀರಿ. ಅಲೆಮಾರಿಗಳಲ್ಲಿ 600ಕ್ಕೂ ಹೆಚ್ಚು ಜನ ಉದ್ಯೋಗ ಪಡೆದಿಲ್ಲ. 12 ಸಮುದಾಯಗಳು ಒಂದೇ ಒಂದು ಸವಲತ್ತನ್ನೂ ತೆಗೆದುಕೊಂಡಿಲ್ಲ” ಎಂದು ಒಳಮೀಸಲಾತಿ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ ವಿವರಿಸಿದರು.
“ಲಂಬಾಣಿಗಳು ಅಲೆಮಾರಿಗಳಲ್ಲ. ಅಲೆಮಾರಿಗಳಿಗೂ ನಿಮಗೂ ಸಂಬಂಧವಿಲ್ಲ. ನೀವು ಅಡವಿಯಲ್ಲಿ ಇದ್ದಿರಬಹುದು. ನಿಮಗೆ ಸಂಪತ್ತು, ಭೂಮಿ, ಹಣ್ಣು ಹಂಪಲು ಇತ್ತು. ನೀವು ಅಲೆಮಾರಿಗಳಾಗಲ್ಲ. ನಾವು ಅಲೆಮಾರಿಗಳೆಂದು ಹೇಳಿಕೊಂಡು ಐದು ಪರ್ಸೆಂಟ್ ಗುಳುಂ ಮಾಡಲು ಟ್ರೈ ಮಾಡಬೇಡಿ” ಎಂದು ಎಚ್ಚರಿಸಿದರು.
“ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಲೆಮಾರಿಗಳಿಗೆ ಪಾಲು ಸಿಗುತ್ತದೆ ಎಂದು ಭಾವಿಸಬಾರದು. ಅಷ್ಟು ಸುಲಭವಾಗಿ ಅಲೆಮಾರಿಗಳ ಹಕ್ಕು ದೊರಕುವುದಿಲ್ಲ. ಜನಸಂಖ್ಯೆ ಇದ್ದರೂ ಮಾದಿಗರು 30 ವರ್ಷ ಹೋರಾಟ ಮಾಡಿದರು. ಈ ಹೋರಾಟ ದೀರ್ಘಕಾಲೀನವಾಗಿ ಇರಬೇಕು. ಚಳಿಗಾಲದ ಅಧಿವೇಶನದವರೆಗೂ ಹೋರಾಟ ಸತತವಾಗಿ ನಡೆಯಬೇಕು. ಖಂಡಿತವಾಗಿಯೂ ಇದು ಸಾಧ್ಯವಿದೆ. ದಿನನಿತ್ಯ ಅನುಭವಿಸುವ ಕಷ್ಟದ ಮುಂದೆ ಈ ಮೂರು ತಿಂಗಳ ಸಂಕಷ್ಟ ಏನೂ ಅಲ್ಲ” ಎಂದು ಸಲಹೆ ನೀಡಿದರು.
ದಸಂಸ ಮುಖಂಡ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, “ದಸಂಸ ಮೂವತ್ತೊಂದು ಜಿಲ್ಲೆಯಲ್ಲೂ ಅಲೆಮಾರಿಗಳೊಂದಿಗೆ ಇರುತ್ತದೆ. ಹೊಲೆಯ ಮಾದಿಗರೊಂದಿಗೆಯೇ ಅಲೆಮಾರಿಗಳು ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಿರುವಾಗ ಭೋವಿ, ಲಂಬಾಣಿ, ಕೊರಚ, ಕೊರಮರ ಜೊತೆ ಸ್ಪರ್ಧಿಸಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕೊಡಲೇಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿರಿ: ಅಲೆಮಾರಿ ಸಮುದಾಯಗಳಿಗಾಗಿರುವ ಘೋರ ಅನ್ಯಾಯ ಸರಿಪಡಿಸಿ: 277 ಸಮಾನ ಮನಸ್ಕರಿಂದ ಸಿಎಂಗೆ ಮನವಿ
ನಾಗಮೋಹನ್ ದಾಸ್ ಅವರ ಆಯೋಗದಲ್ಲಿ ಕೆಲಸ ಮಾಡಿರುವ ಚಂದ್ರಶೇಖರ್ ಮಾತನಾಡಿ, “ಈ ರೀತಿಯ ಸಂದರ್ಭ ಸೃಷ್ಟಿ ಮಾಡಿರುವ ಸರ್ಕಾರಕ್ಕೆ ಮತ್ತು ಕ್ಯಾಬಿನೆಟ್‌ಗೆ ಅವಮಾನ ಆಗಬೇಕು. ಈ ಸಂದರ್ಭದಲ್ಲಿ ನಮಗೂ ನಾಚಿಕೆ ಆಗಬೇಕು. ಯಾಕೆಂದರೆ ಬೇರೆಬೇರೆ ಸಂದರ್ಭಗಳಲ್ಲಿ ಈ ಸರ್ಕಾರಗಳ ಪರವಾಗಿ ನಾವು ವಕಾಲತ್ತು ವಹಿಸಿದ್ದೇವೆ. ಅಲೆಮಾರಿಗಳು ಬೀದಿಗೆ ಬರಲು ನಾವು ಕಾರಣವಾಗಿದ್ದೇವೆ” ಎಂದು ವಿಷಾದಿಸಿದರು.
“ಅಲೆಮಾರಿಗಳಿಗೆ ಒಂದು ಪರ್ಸೆಂಟ್‌ಗಿಂತ ಹೆಚ್ಚು ಸಿಗಬೇಕಿತ್ತು. ಆದರೆ ಒಂದಕ್ಕಿಂತ ಹೆಚ್ಚು ಕೊಟ್ಟರೆ ತಾಂತ್ರಿಕ ಕಾರಣದಿಂದ ಉಳಿಯುವುದಿಲ್ಲ ಎಂದು ನಾಗಮೋಹನ ದಾಸ್ ಅವರು ನಿರ್ಧರಿಸಿ ಒಂದು ಪರ್ಸೆಂಟ್ ಕೊಟ್ಟರು. ಆದರೆ ಆ ಒಂದು ಪರ್ಸೆಂಟ್ ಮೀಸಲಾತಿಯನ್ನು ಅಕ್ರಮ ಮಾರ್ಗದಿಂದ ಕಸಿದುಕೊಳ್ಳಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಒಳಮೀಸಲಾತಿ ಹೋರಾಟಗಾರ ಬಸವರಾಜ ಕೌತಾಳ್, ಕರಿಯಪ್ಪ ಗುಡಿಮನಿ, ಶಿವರಾಯ ಅಕ್ಕರಕಿ, ಚಂದ್ರು ತರಹುಣಸೆ ಸೇರಿದಂತೆ ಹತ್ತಾರು ಹೋರಾಟಗಾರರು ಇದ್ದರು. ಹತ್ತು ಸಾವಿರಕ್ಕೂ ಹೆಚ್ಚು ಅಲೆಮಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.





