ಸಾವಿರಾರು ಸಂಖ್ಯೆಯಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ವೈದ್ಯರಾಗುವ ಕನಸನ್ನು ಕಟ್ಟಿಕೊಂಡು ನೀಟ್ ಪರೀಕ್ಷೆ ತಯಾರು ಮಾಡಿ ಪರೀಕ್ಷೆ ಬರೆಯುತ್ತಾರೆ. ಆದರೆ ಟ್ಯೂಷನ್ ಮಾಫಿಯಾ, ನೀಟ್ ಹಗರಣ, ಸರ್ಕಾರದ ಇಂತಹ ನೀತಿಗಳಿಂದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ.
ವಿಜಯಪುರದಲ್ಲಿ ಎರಡು ತಿಂಗಳಿಂದ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಆಗ್ರಹಿಸಿ, ಸರಕಾರಿ ಆಸ್ಪತ್ರೆ ಉಳಿಸಲು ಮತ್ತು ಪಿಪಿಪಿ (Public–private partnership) ಕೈ ಬಿಡಲು ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಇದೀಗ ರಾಜ್ಯದ ಗಮನಸೆಳೆಯುತ್ತಿದೆ ಮತ್ತು ಇದೇ ಹೋರಾಟ ಇದೀಗ ದಾವಣಗೆರೆ, ತುಮಕೂರು, ಕೋಲಾರಗಳಿಗೂ ವ್ಯಾಪಿಸಿದೆ. ಅಷ್ಟೇ ಅಲ್ಲ ಈ ಹೋರಾಟ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ಪರಿಸ್ಥಿತಿಯ ದರ್ಶನ ಮಾಡಿಸಿದೆ.
ನಮ್ಮನ್ನಾಳುವ ಸರ್ಕಾರಗಳು ಬಡವರಿಗೆ ಸಿಗಬೇಕಿದ್ದ ಶಿಕ್ಷಣ, ಆರೋಗ್ಯದಂತಹ ಇದ್ದ ಸೌಲಭ್ಯಗಳನ್ನು ಕೂಡ ಇವತ್ತು ಖಾಸಗಿಕರಣ ಮಾಡಿ ಬಡವರನ್ನು ಇನ್ನಷ್ಟು ನಿರ್ಗತಿಕರನ್ನಾಗಿ ಮಾಡಲು ಹೊರಟಿದೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬರಲಿ ನಿಮ್ಮ ಸೇವೆಗೆ ಸದಾ ನಾವಿರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬರುತ್ತವೆ. ಬಂದ ನಂತರ ಜನರು ಕಣ್ಣಿಗೆ ಕಾಣುವುದೇ ಇಲ್ಲ. ಬದಲಾಗಿ ತಮ್ಮ ಆಡಂಬರದ ಮಾತುಗಳನ್ನೇ ಬಿಗಿಯುತ್ತಾರೆ. ದೇಶ ನಿಜವಾಗಿಯೂ ಅಭಿವೃದ್ಧಿಯಾಗಬೇಕಾದರೆ ಒಬ್ಬ ಕಟ್ಟಕಡೆಯ ನಿರ್ಗತಿಕನಿಗೂ ಆರೋಗ್ಯ, ವಸತಿ, ಶಿಕ್ಷಣ, ಉದ್ಯೋಗ ಇಂತಹವುಗಳು ಸರ್ಕಾರದಿಂದ ಸಿಗುವಂತಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರದ ಅಧೀನದಲ್ಲಿರುವ ಎಲ್ಲವನ್ನೂ ಖಾಸಗಿಯವರಿಗೆ ಧಾರೆ ಎರೆಯುವುದರಿಂದಲ್ಲ.
ಒಬ್ಬ ವಿದ್ಯಾರ್ಥಿ ಎಂಬಿಬಿಎಸ್ ಓದಲು ಕೋಟಿಗಟ್ಟಲೆ ಹಣ ವ್ಯಯ ಮಾಡಿ, ಮುಂದೆ ತಾನು ಹುದ್ದೆಯಲ್ಲಿದ್ದಾಗ, ತಾನು ಹೇಗೆ ಜನರ ಸೇವೆ ಮಾಡಲಿ ಎಂದು ಯೋಚಿಸುವುದನ್ನು ಬಿಟ್ಟು, ಎಷ್ಟು ಕೋಟಿ ಗಳಿಸಲಿ! ಆ ಹಣದಿಂದ ನಾನು ಯಾವ ರೀತಿ ಐಶಾರಾಮಿ ಜೀವನ ಮಾಡಲಿ ಎಂದು ಯೋಚಿಸುತ್ತಾನೆ. ಇಂತಹ ಸ್ವಾರ್ಥ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿದೆ. ಸಮಾಜದಲ್ಲಿ ಎಲ್ಲ ವರ್ಗದ ಜನರಿಗೆ ಆರೋಗ್ಯದ ಸೌಲಭ್ಯ ಸಿಗಬೇಕಾದರೆ ಸರ್ಕಾರಿ ವೈದ್ಯಕೀಯ ಕಾಲೇಜು ಅತ್ಯವಶ್ಯಕ. ಇನ್ನೊಂದೆಡೆ ಈ ನೆಲದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಮತ್ತು ಸಮಾಜ ಸುಧಾರಕರಾದ ಕುದ್ಮುಲ್ ರಂಗರಾಯರು, ಜ್ಯೋತಿಬಾ ಫುಲೆರಂತಹ ಮಹಾನ್ ವ್ಯಕ್ತಿಗಳು ‘ಸಮಾಜದಲ್ಲಿ ಬದುಕುವ ಪ್ರತಿಯೊಬ್ಬನಿಗೂ ಶಿಕ್ಷಣ ಆರೋಗ್ಯ ಉದ್ಯೋಗ ವಸತಿಯಂತಹ ಸೌಲಭ್ಯಗಳು ಸರ್ಕಾರವೇ ಕೊಡಬೇಕು’ ಎಂದು ಆಶಯ ವ್ಯಕ್ತಪಡಿಸಿದ್ದರು.

“ಸರ್ಕಾರವು, ಯಾವುದೇ ಹಂತದಲ್ಲಿ ಕೂಡ ಉನ್ನತ ಶಿಕ್ಷಣದ ಅನುದಾನವನ್ನು ಹಿಂತೆಗೆದುಕೊಳ್ಳಬೇಕೆಂಬುದನ್ನು ಈ ದೇಶದ ಯಾವ ಹಿತಚಿಂತಕನೂ ಕೂಡ ಬಯಸುವುದಿಲ್ಲ. ಶಿಕ್ಷಣವನ್ನು ಎಲ್ಲೆಡೆ ತಲುಪಿಸುವಲ್ಲಿ ಇದು ಹಾನಿಯುಂಟು ಮಾಡುತ್ತದೆ. ಶಿಕ್ಷಣವು ಸಾರ್ವತ್ರಿಕವಾಗಿರಬೇಕು ಮತ್ತು ಅದೆಷ್ಟೇ ಸಂಖ್ಯೆಯಿದ್ದರೂ, ಅದು ಎಲ್ಲರನ್ನೂ ತಲುಪುವಂತಿರಬೇಕು. ಇಲ್ಲಿಯೂ ಕೂಡ ಇದೇ ರೀತಿ ಆಗಬೇಕೆಂದು ನಾನು ಬಯಸುತ್ತೇನೆ.” ಎಂದು ಜ್ಯೋತಿಬಾ ಫುಲೆ ಅವರು ಬ್ರಿಟಿಷರ ಕಾಲದಲ್ಲಿಯೇ ಹೇಳಿದ್ದರು. ಆದರೆ ಮನುಷ್ಯನ ಮೂಲಭೂತ ಅವಶ್ಯಕತೆಯಾದ ವೈದ್ಯಕೀಯ ಕ್ಷೇತ್ರದಲ್ಲೂ ಪಿಪಿಪಿಯಂತಹ ನೀತಿಗಳನ್ನು ಜಾರಿ ಮಾಡಿ ಸ್ವತಃ ಸರ್ಕಾರಗಳೇ ಆರೋಗ್ಯ ಕ್ಷೇತ್ರವನ್ನು ಜನರ ಕೈಗೆಟುಕದ ಸ್ಥಿತಿಗೆ ತಳ್ಳುತ್ತಿವೆ.
ದೇಶದಲ್ಲಿಯೇ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬರಿ ಬೆರಳೆಣಿಕೆಯಲ್ಲಿ̧ವೆ ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳು ಬಹುದೊಡ್ಡ ಸಂಖ್ಯೆಯಲ್ಲಿವೆ. ದೇಶದಲ್ಲಿ ಒಟ್ಟು 704 ವೈದ್ಯಕೀಯ ಕಾಲೇಜುಗಳಿವೆ. ಅದರಲ್ಲಿ ಹೆಚ್ಚು ಮೆಡಿಕಲ್ ಕಾಲೇಜು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಒಟ್ಟು 70 ಮೆಡಿಕಲ್ ಕಾಲೇಜುಗಳಿವೆ. ಅದರಲ್ಲಿ ಕೇವಲ 24 ಕಾಲೇಜುಗಳು ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಉಳಿದವೆಲ್ಲವೂ ಖಾಸಗಿ ಕಾಲೇಜುಗಳೇ.
ಅದರಲ್ಲೂ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವು ದೇಶದಲ್ಲಿಯೇ ದುಬಾರಿ ಇದೆ. ಉತ್ತರ ಭಾರತದ ಹಲವು ರಾಜ್ಯಗಳ ಶುಲ್ಕಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ. ಹೀಗಿರುವಾಗ ಇರುವ ಸರಕಾರಿ ವೈದ್ಯಕೀಯ ಕಾಲೇಜಿನ ಶುಲ್ಕವೇ ಕೈಗೆಟುಕದಂತಿರುವಾಗ, ಯಾವುದೇ ಲಂಗು ಲಗಾಮಿಲ್ಲದ ಖಾಸಗಿ ಕಾಲೇಜುಗಳಲ್ಲಿ ಬಡವರು ಶಿಕ್ಷಣ ಪಡೆಯಲು ಸಾಧ್ಯವೇ? ಇಷ್ಟು ಸಾಲದೆಂಬಂತೆ ಸರಕಾರ ಮತ್ತೆ 15% NRI (Non- Resident Indian) ಕೋಟಾವನ್ನು ಜಾರಿಗೊಳಿಸಿ, ಪ್ರತಿ ಸೀಟಿಗೆ 25 ಲಕ್ಷ ರೂ. ಗಳ ಶುಲ್ಕದೊಂದಿಗೆ ಸೀಟುಗಳನ್ನು ಶ್ರೀಮಂತರಿಗೆ ಮಾರಾಟ ಮಾಡಲು ಹೊರಟಿದೆ.
ಸಾವಿರಾರು ಸಂಖ್ಯೆಯಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ವೈದ್ಯರಾಗುವ ಕನಸನ್ನು ಕಟ್ಟಿಕೊಂಡು ನೀಟ್ ಪರೀಕ್ಷೆ ತಯಾರು ಮಾಡಿ ಪರೀಕ್ಷೆ ಬರೆಯುತ್ತಾರೆ. ಆದರೆ ಟ್ಯೂಷನ್ ಮಾಫಿಯಾ, ನೀಟ್ ಹಗರಣ, ಸರ್ಕಾರದ ಇಂತಹ ನೀತಿಗಳಿಂದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ‘ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಯಾವುದೇ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ’. ಆದರೆ ಕೇವಲ ಶ್ರೀಮಂತ ವಿದ್ಯಾರ್ಥಿಗಳಿಗೆ ಎನ್ಆರ್ ಐ ಸೀಟುಗಳನ್ನು ಮೀಸಲಿಟ್ಟು, ಖಾಸಗಿ ಸಭಾಗಿತ್ವ (ಪಿಪಿಪಿ) ಮಾದರಿಯನ್ನು ಜಾರಿಗೊಳಿಸಿ ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ.
ಅಲ್ಲದೆ ಕಳೆದ ವರ್ಷ ನೀಟ್ ಹಗರಣದಲ್ಲಿ, 67 ವಿದ್ಯಾರ್ಥಿಗಳನ್ನು ಪೂರ್ಣ ಅಂಕ ಕೊಟ್ಟು ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಯಿತು. ಪಾಲಕರು ತಮ್ಮ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ಬಯಸಿ ಕೋಚಿಂಗ್ ಸೆಂಟರ್‌ಗಳಿಗೆ ಮೊರೆ ಹೋಗುತ್ತಾರೆ. ಅದಕ್ಕಂತಲೇ ಲಕ್ಷಗಟ್ಟಲೆ ಶುಲ್ಕ ತುಂಬಿ ಕೋಚಿಂಗ್‌ಗಳಿಗೆ ಸೇರಿಸುತ್ತಾರೆ. ಪ್ರಶ್ನೆ ಪತ್ರಿಕೆ ಸೋರಿಕೆಗಳಿಂದ ಅನೇಕ ವಿದ್ಯಾರ್ಥಿಗಳು ಆತಂಕ, ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕೋಚಿಂಗ್ ಸೆಂಟರ್‌ಗಳು ತಮ್ಮ ಲಾಭಗಳಿಂದ ಪಾಲಕರ ರಕ್ತ ಹೀರುತ್ತವೆ. ವಿದ್ಯಾರ್ಥಿಗಳ ಜೀವ ಬಲಿ ತೆಗೆದುಕೊಳ್ಳುತ್ತಿವೆ. ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ NEET ಮತ್ತು JEE ಗೆ ತಯಾರಾಗುತ್ತಿರುವ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಘೋರ ಸಂಗತಿ ಎಂದರೆ ಎನ್‌ಸಿಆರ್‌ಬಿ ವರದಿಯೇ ಹೇಳುವಂತೆ 2023 ಒಂದರಲ್ಲೆ 13,892 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ದಿನ ಒಂದಕ್ಕೆ 38 ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಇಂಥ ಸಮಸ್ಯೆಗಳ ಆಳಕ್ಕೂ ಸರಕಾರ ಇಳಿದು ಪರಿಹಾರ ಕಂಡುಕೊಳ್ಳಬೇಕಿದೆ.
ಒಂದೆಡೆ ಪರೀಕ್ಷೆಗಳ ಹಗರಣ ನಡೆದರೆ ಇನ್ನೊಂದೆಡೆ ನೀಟ್, ಜೆಇ ಕೋಚಿಂಗ್ ಸೆಂಟರ್‌ಗಳು ಕೋಟಿಗಟ್ಟಲೆ ದುಡ್ಡು ಗಳಿಸುವ ನೆಪದಲ್ಲಿ ಬಡವ ಮದ್ಯಮ ವರ್ಗದ ಜನರ ಬದುಕನ್ನು ಬೀದಿಗೆ ತಳ್ಳುತ್ತಿವೆ. ಆದುದರಿಂದ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ಎಲ್ಲ ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ತುಂಬಿದಾಗ ಮಾತ್ರವೇ ಇಂತಹ ವಿದ್ಯಾರ್ಥಿಗಳ ಜೀವ ಮತ್ತು ಜೀವನ ಉಳಿಸಬಹುದು. ಇಲ್ಲದಿದ್ದರೆ ಸ್ವತಃ ಸರಕಾರ ಕುಳಿತೇ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡಿ ಅವರ ಆತ್ಮಹತ್ಯೆಗೂ ಸರಕಾರವೇ ಕಾರಣವಾದಂತಾಗುತ್ತದೆ.

ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲ ಬಡ, ಮಧ್ಯಮ ವರ್ಗದವರು, ಇವರಿಗೂ ಅತ್ಯುತ್ತಮ ಆರೋಗ್ಯದ ಸೇವೆ ಒದಗಿಸಲು ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಿಸುತ್ತೇವೆ ಎಂದು ಮಾನ್ಯ ಮುಖ್ಯಮಂತ್ರಿಗಳು ಇತ್ತೀಚೆಗೆ ಹೇಳಿದರು. ಆದರೆ ದುರಂತವೆಂದರೆ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜುಗಳನ್ನು ನಿರ್ಮಿಸಿ, ಇದ್ದ ಸರ್ಕಾರಿ ಆಸ್ಪತ್ರೆಗಳನ್ನು ಕೂಡ ಖಾಸಗೀಕರಣದ ಕಡೆಗೆ ತಳ್ಳಲು ಹೊರಟಿದ್ದಾರೆ.
ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯದ ಸೌಲಭ್ಯ ಒದಗಿಸುವುದು ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯಾಗಬೇಕು. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬೋಧಕರಿಲ್ಲದೆ ಸೊರಗುತ್ತಿವೆ. ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇವೆ. ಜನರ ಜೀವ ಕಾಪಾಡುವ ವೈದ್ಯರನ್ನು ತಯಾರಿಸಲು ಅವಶ್ಯಕವಿರುವ ಸೌಲಭ್ಯಗಳನ್ನು ಕೊಟ್ಟು ಅವುಗಳನ್ನ ಬಲಪಡಿಸಬೇಕು ಅದನ್ನು ಬಿಟ್ಟು 15% ಎನ್‌ಆರ್‌ಐ ಕೋಟಾ ಜಾರಿಗೊಳಿಸುವುದರಿಂದ, ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯನ್ನು ಜಾರಿಗೊಳಿಸುವುದರಿಂದ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ಹಣ ಹರಿದು ಬರುತ್ತದೆ ಎಂದು ಸರ್ಕಾರ ಹೇಳಿಕೊಂಡರೂ, ವಾಸ್ತವದಲ್ಲಿ ಬಡವರ ಅಮೂಲ್ಯವಾದ ವೈದ್ಯಕೀಯ ಸೀಟುಗಳನ್ನು ದುಡ್ಡಿದ್ದವರಿಗೆ ಹರಾಜು ಹಾಕುವ ಪ್ರಯತ್ನವಾಗಿದೆ.
ವೈದ್ಯಕೀಯ ಶಿಕ್ಷಣ ಇಂದು ದುಡ್ಡುಳ್ಳವರ ಸವಲತ್ತಾಗಿದೆಯಾದರೂ, ಆಗಾಗ ಈ ಹಿಂದಿನ ವಿದ್ಯಾರ್ಥಿ ಚಳವಳಿಗಳ ಫಲಶೃತಿಯಾಗಿ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳು ಇರುವುದರಿಂದಾಗಿ ಅಲ್ಲೊಬ್ಬ ಇಲ್ಲೊಬ್ಬ ಬಡ ವಿದ್ಯಾರ್ಥಿ ಡಾಕ್ಟರ್ ಆಗಲು ಸಾಧ್ಯವಾಗಿದೆ. ಆದರೆ, ಪಿಪಿಪಿ ಹೆಸರಿನಲ್ಲಿ ಇಡೀ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯಕ್ಷೇತ್ರವನ್ನೇ ಸಂಪೂರ್ಣ ಖಾಸಗಿ ಒಡೆತನಕ್ಕೆ ಧಾರೆ ಎರೆದರೆ ವೈದ್ಯಕೀಯ ಶಿಕ್ಷಣ ಜನಸಾಮಾನ್ಯರ ಮಕ್ಕಳಿಗೆ ಕನಸಿನಲ್ಲಿಯೂ ಸಿಗಲಾರದಂತಾಗುತ್ತದೆ ಮತ್ತು ವೈದ್ಯಕೀಯ ಸೌಲಭ್ಯವನ್ನು ಜನ ಸಾಮಾನ್ಯರಿಂದ ಕಿತ್ತುಕೊಂಡಂತಾಗುತ್ತದೆ. ಪ್ರಾಥಮಿಕ ಶಿಕ್ಷಣವನ್ನು ಒಂದು ಹಕ್ಕನ್ನಾಗಿಸಿ ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳಲಾಗದು. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈದ್ಯಕೀಯದಂತಹ ಉನ್ನತ ಶಿಕ್ಷಣವೂ ಸರ್ಕಾರದ ಜವಾಬ್ದಾರಿಯೇ, ಇದರಿಂದ ಸರ್ಕಾರ ನುಣುಚಿಕೊಳ್ಳುವ ಬದಲಿಗೆ ಶಿಕ್ಷಣಕ್ಕೆ ಕೇಂದ್ರ ಬಜೆಟ್ ನಲ್ಲಿ 10%ರಷ್ಟನ್ನು ಮತ್ತು ರಾಜ್ಯ ಬಜೆಟ್ ನಲ್ಲಿ 30% ರಷ್ಟನ್ನು ಮೀಸಲಿಟ್ಟಾಗ ಉತ್ತಮ ಶೈಕ್ಷಣಿಕ ವ್ಯವಸ್ಥೆ ಸೃಷ್ಟಿಯಾಗುತ್ತದೆ. ಒಂದು ಆರೋಗ್ಯವಂತ ಸಮಾಜವನ್ನು ಸೃಷ್ಟಿ ಮಾಡಬೇಕೆಂದರೆ ವೈದ್ಯಕೀಯದಂತಹ ಉನ್ನತ ಶಿಕ್ಷಣವೂ ಸರ್ಕಾರದ ಜವಾಬ್ದಾರಿಯೇ.
ವಿಶೇಷವೆಂದರೆ ರಾಜ್ಯದಲ್ಲಿನ ಖಾಸಗಿ ಕಾಲೇಜುಗಳು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕರ ಅಥವಾ ಅವರ ಸಂಬಂಧಿಗಳಿಗೆ ಸೇರಿದ್ದು. ಈ ಸಂಸ್ಥೆಗಳು ಸೇವಾ ಮನೋಭಾವಕ್ಕಿಂತ ಹೆಚ್ಚಾಗಿ ವ್ಯಾಪಾರೀ ಮನೋಭಾವವನ್ನೇ ಹೊಂದಿವೆ ಮತ್ತು ಈ ವ್ಯಾಪಾರಿ ಸಂಸ್ಥೆಗಳ ಮಾಲೀಕರ ಲಾಭಿಯ ಅಟ್ಟಹಾಸಕ್ಕೆ ಸರ್ಕಾರ ಮೂಕ ಸಾಕ್ಷಿಯಾಗುತ್ತಿದೆ ,ಇಲ್ಲವೇ ಅವರ ಲಾಭಿಗೆ ಮಣಿಯುತ್ತಿದೆ. ಜನರ ಹಿತಾಸಕ್ತಿ ಕಾಪಾಡಬೇಕಿದ್ದ ಸರ್ಕಾರಗಳೇ ಈ ಸಂಸ್ಥೆಗಳ ಪಾಲಕ ಪೋಷಕವಾಗುತ್ತಿರುವುದು ದೊಡ್ಡ ದುರಂತವಾಗಿದೆ. ಜನತೆ ಎಚ್ಚೆತ್ತು ಈ ಕಾರ್ಪೋರೇಟ್ ಮನೆತನಗಳ ಹಾಗೂ ಎಡಬಿಡಂಗಿ ಸರ್ಕಾರಗಳ ವಿರುದ್ದ ಹೋರಾಟಕ್ಕೆ ಒಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇದನ್ನೂ ಓದಿ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ- ಒಂದು ಅನನ್ಯ ಮಾದರಿ
ಒಬ್ಬ ಅಸಹಾಯಕನಿಗೆ ಆರೋಗ್ಯದಲ್ಲಿ ಏರುಪೇರು ಆದಾಗ ಅವನ ಪಾಲಿಗೆ ದೇವರಾಗಿರುವ ಸರ್ಕಾರಿ ಆಸ್ಪತ್ರೆಯೇ ಗತಿ. ಪಿಪಿಪಿ ಜಾರಿಯಾಗಿ ಇಲ್ಲಿ ಖಾಸಗಿ ಒಡೆತನ ಬಂದರೆ ಸರ್ಕಾರಿ ಆಸ್ಪತ್ರೆಗಳು ಸಂಪೂರ್ಣವಾಗಿ ಖಾಸಗೀಕರಣವಾಗುತ್ತವೆ. ಬಡವರ ಆಶಾವಾದವೇ ಸತ್ತು ಹೋಗುತ್ತದೆ. ಈ ಸತ್ಯವನ್ನರಿತುಕೊಂಡು ಜಿಲ್ಲೆಗೆ ಸರಕಾರಿ ಸ್ವಾಮ್ಯತ್ವದ ವೈದ್ಯಕೀಯ ಕಾಲೇಜು ಆರಂಭಿಸಲು ಆಗ್ರಹಿಸಿ, ಸರಕಾರಿ ಜಿಲ್ಲಾ ಆಸ್ಪತ್ರೆಯನ್ನು ಉಳಿಸಿ, ಉದ್ದೇಸಿತ ಪಿಪಿಪಿ ನೀತಿ ಕೈಬಿಡಲು ಒತ್ತಾಯಿಸಿ ವಿಜಯಪುರದ ಜನತೆ ಕಳೆದ 50 ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಕೂಡಲೇ ಎಚ್ಚೆತ್ತುಕೊಂಡು ಈ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಭವಿಷ್ಯದಲ್ಲಿ ಬಹುದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ.

ಕಾವೇರಿ ರಜಪೂತ
AIDSO ಜಿಲ್ಲಾ ಕಾರ್ಯದರ್ಶಿಗಳು
ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಸದಸ್ಯರು, ವಿಜಯಪುರ




