ತಜ್ಞರು ಹೇಳುವಂತೆ, ಭಾರತದ ಮಹಿಳಾ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 38-45% ಮಂದಿ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸೈಬರ್ ಕಿರುಕುಳಕ್ಕೆ ಒಳಗಾಗಿದ್ದಾರೆ. ಹಲವು ಬಾರಿ ಕಿರುಕುಳ, ಕಿರಿಕಿರಿ ಎಲ್ಲವೂ ಮನಸ್ಸಿನಾಳದಲ್ಲೇ ಹುದುಗಿ ಹೋಗುತ್ತದೆ. ದಾಖಲೆಗಳವರೆಗೆ ಬರುವುದೇ ಇಲ್ಲ.
ಅತೀ ಎನಿಸುವಷ್ಟು ವೇಗವಾಗಿ ಜಗತ್ತು ಬೆಳೆಯುತ್ತಿರುವುದು ಗೊತ್ತೇ ಇದೆ. ಇದಕ್ಕೆ ಕಾರಣ ತಂತ್ರಜ್ಞಾನ, ಹೊಸ ಆವಿಷ್ಕಾರಗಳು, ಬದಲಾದ ಜೀವನಶೈಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಗಳು ಜೀವನವನ್ನು ಸುಲಭಗೊಳಿಸುತ್ತಿರುವುದರ ಜೊತೆಗೆ ಸಂಕೀರ್ಣ ಸಮಸ್ಯೆಗಳಿಗೂ ಮೂಲವಾಗುತ್ತಿವೆ. ವಿಶೇಷವಾಗಿ ಮಹಿಳೆಯರಿಗೆ. ನೆಲದ ಮೇಲೆ ನಡೆಯುವ ಹಿಂಸೆ ಈಗ ಡಿಜಿಟಲ್ ಬಾಗಿಲು ತೆರೆದು ಪರದೆಗಳ ಒಳಗಿಂದ ತೂರಿ ಬರುತ್ತಿದೆ. ಡಾಕ್ಸಿಂಗ್, ಸ್ಟಾಕಿಂಗ್, ಅಶ್ಲೀಲ ಕಂಟೆಂಟ್‌ಗಳ ಹಂಚಿಕೆ, ಮಾರ್ಫಿಂಗ್, ಡೀಪ್‌ಫೇಕ್ – ಇವೆಲ್ಲವೂ ಆನ್‌ಲೈನ್ ಕಿರುಕುಳದ ಮುಖಗಳು. ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಮಸ್ಯೆಗಳ ಸುಳಿಯೊಳಗೆ ಬೀಳಿಸಲಾಗುತ್ತದೆ. ಗೊತ್ತಿದ್ದೂ, ಕೆಲವೊಮ್ಮೆ ಗೊತ್ತಿಲ್ಲದೆಯೂ!
ನಿಯಂತ್ರಣದ ಕ್ರಮಗಳು ಜಾರಿಯಾಗುತ್ತಲೂ ಸೈಬರ್ ಅಪರಾಧಗಳ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಇತ್ತೀಚೆಗೆ National Cyber Crime Reporting Portalನ ದತ್ತಾಂಶ ಈ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. 2020ರಲ್ಲಿ ದೇಶಾದ್ಯಂತ ಸೈಬರ್ ಕಿರುಕುಳಕ್ಕೆ ಸಂಬಂಧಿಸಿದಂತೆ 10.29 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತವೆ. 2024ರಲ್ಲಿ ಈ ಅಂಕಿ 22.68 ಲಕ್ಷ ದಾಟುತ್ತದೆ. ಈ ಅಂಕಿ ಅಂಶಗಳು ಕೇವಲ ನೋಂದಾಯಿತ ದೂರುಗಳನ್ನು ಪ್ರತಿನಿಧಿಸುತ್ತವಷ್ಟೇ. ವಾಸ್ತವದಲ್ಲಿ ಮಹಿಳೆಯರು, ಯುವತಿಯರು ಅನುಭವಿಸುವ ಸೈಬರ್ ಸಂಬಂಧೀ ಹಿಂಸೆಯ ತೀವ್ರತೆ ಅಂಕಿಗಳನ್ನೂ ಮೀರಿದೆ. ಬಹುತೇಕರು ಕೌಟುಂಬಿಕ ಒತ್ತಡ, ಸಮಾಜದಿಂದ ತಿರಸ್ಕೃತರಾಗುವ ಆತಂಕ, ಅಜ್ಞಾತ ಅಪಾಯದ ಭಯದಿಂದಲೇ ದೂರು ನೀಡಲು ಮುಂದೆ ಬರುವುದಿಲ್ಲ. ಅಸ್ಸಾಂನ NLU ಹಾಗೂ IJFMR ಸಂಸ್ಥೆಯ ಅಧ್ಯಯನದ ವರದಿಗಳು, ಭಾರತದಲ್ಲಿ ಆನ್‌ಲೈನ್ ಕಿರುಕುಳ ಅನುಭವಿಸುವ ಮಹಿಳೆಯರಲ್ಲಿ ಶೇ.60ಕ್ಕಿಂತ ಹೆಚ್ಚು ಮಂದಿ ಪೊಲೀಸರ ಬಳಿ ಹೋಗಿ ದೂರು ನೀಡಲು ಹೆದರುತ್ತಾರೆ ಎನ್ನುತ್ತವೆ. ತಜ್ಞರು ಹೇಳುವಂತೆ, ಭಾರತದ ಮಹಿಳಾ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 38-45% ಮಂದಿ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸೈಬರ್ ಕಿರುಕುಳಕ್ಕೆ ಒಳಗಾಗಿದ್ದಾರೆ. ಹಲವು ಬಾರಿ ಕಿರುಕುಳ, ಕಿರಿಕಿರಿ ಎಲ್ಲವೂ ಮನಸ್ಸಿನಾಳದಲ್ಲೇ ಹುದುಗಿ ಹೋಗುತ್ತದೆ. ದಾಖಲೆಗಳವರೆಗೆ ಬರುವುದೇ ಇಲ್ಲ.

ಫ್ರೀಯಾಗಿ ಸಿಗುವ AI ತಂತ್ರಜ್ಞಾನ ಬಳಸಿಕೊಂಡು ಯಾರದ್ದೋ ಮುಖವನ್ನ ಇನ್ಯಾರದ್ದೋ ದೇಹಕ್ಕೆ ಅಂಟಿಸಿ ವಿಕೃತಿ ಮೆರೆಯುತ್ತಿರುವ ಡೀಪ್‌ಫೇಕ್ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಈ ಡೀಪ್‌ಫೇಕ್ ಪೋರ್ನೋಗ್ರಫಿ ಈಗ ಜಾಗತಿಕ ಮಟ್ಟದಲ್ಲಿ ಭಯಾನಕ ರೂಪ ಪಡೆದುಕೊಳ್ಳುತ್ತಿದೆ. ಹಲವು ಸಂಶೋಧನೆಗಳು ಎಚ್ಚರಿಸುವಂತೆ, ಮಹಿಳೆಯರ, ಮಕ್ಕಳ, ಯುವತಿಯರ ಚಿತ್ರಪಟಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಸುರಕ್ಷಿತವಾಗಿರಿಸಿದರೂ ಕೇವಲ ಒಂದು ಡಿಪಿ ಅಥವಾ 5 ಸೆಕೆಂಡಿನ ವಿಡಿಯೋ ಸಾಕು. ಅಷ್ಟನ್ನೇ ಇಟ್ಟುಕೊಂಡು ಆಕೆಯ ಇಡೀ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕುಕೃತ್ಯಗಳು ನಡೆಯುತ್ತಿವೆ.
ʼಡೀಪ್‌ಫೇಕ್ʼ ಗಂಭೀರವಾಗಿ ಪರಿಗಣಿಸಬೇಕಾದ ತಂತ್ರಜ್ಞಾನದ ಕತ್ತಲೆ ಮುಖ. ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾನ್ಯರು, ಅಷ್ಟೇ ಯಾಕೆ ಪ್ರಧಾನಿ ಹುದ್ದೆ ಅಲಂಕರಿಸಿದವರನ್ನೂ ಅದು ಬಿಟ್ಟಿಲ್ಲ. ಜಾಲತಾಣಗಳಲ್ಲಿ ಹರಿದಾಡುವ ನಕಲಿ ವಿಡಿಯೋಗಳು, ತಂತ್ರಜ್ಞಾನದ ದುರ್ಬಳಕೆ ಎಷ್ಟು ಭಯಾನಕ ರೂಪ ತಾಳಿದೆ ಎಂಬುದಕ್ಕೆ ನೇರ ಉದಾಹರಣೆ. ಸುಮ್ಮನೆ ಪೋಸ್ಟ್ ಮಾಡುವ ಫೋಟೋಗಳು, ವಿಡಿಯೋಗಳು, ರೀಲ್‌ಗಳೇ ಡೀಪ್‌ಫೇಕ್ ಸೃಜಿಸುವ ಖದೀಮರಿಗೆ ಆಹಾರ. ಹೀಗೆ ಸೃಷ್ಟಿಯಾಗುವ ನಕಲಿ ಫೋಟೋಗಳು ಒಂದು ಕುಟುಂಬವನ್ನೇ ಛಿದ್ರ ಮಾಡಬಲ್ಲವು. ಅಶ್ಲೀಲ-ತಿರುಚಿದ ವಿಡಿಯೋಗಳು ಸಂಬಂಧಗಳಲ್ಲಿ ಗಾಢ ಬಿರುಕು ಮೂಡಿಸಬಲ್ಲ ಸಾಮರ್ಥ್ಯ ಹೊಂದಿವೆ. ಇದು ಅಸಲಿಯೋ ನಕಲಿಯೋ ಎಂದು ಗುರುತಿಸುವುದೇ ದೊಡ್ಡ ಸವಾಲು. ನಿಮ್ಮದಲ್ಲದಿರುವ ದೇಹ, ಧ್ವನಿ, ಹಾವ-ಭಾವಗಳು ನಿಮ್ಮವೇ ಎನ್ನುವಷ್ಟು ಬದಲಾಯಿಸಿಬಿಟ್ಟಿರುತ್ತವೆ.
2024ರಲ್ಲಿ ಮಂಗಳೂರು ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದು, ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಆಕೆಯ ಅಣ್ಣ ಮತ್ತು ಸ್ನೇಹಿತರಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. 2023ರ ಮೇ ತಿಂಗಳಿನಲ್ಲಿ ಕೇರಳದ ಹೋಟೆಲ್‌ನಲ್ಲಿ ಅಥಿರಾ ವಿಎಂ ಎಂಬ 26ರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿತ್ತು. ಪ್ರಚೋದಿಸಿದ್ದ ಮಾಜಿ ಸಂಗಾತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಅಂದಿನ ಕಾಲಕ್ಕೆ ಭಾರೀ ಸಂಚಲನ ಮೂಡಿಸಿತ್ತು ಹಾಗೂ ಘಟನೆ ಹಿಂದಿದ್ದು ಇದೇ ಸೈಬರ್ ಕಿರುಕುಳ. ಇದೇ ವರ್ಷ ಮಾರ್ಚ್‌ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರದ ಬೀಡಿ ನಿವಾಸಿಗಳಾದ ಡಿಯಾಂಗೋ ನಜರತ್(83) ಹಾಗೂ ಪ್ಲೇವಿಯಾನಾ ನಜರತ್(79) ವೃದ್ಧ ದಂಪತಿಗಳು ಇದೇ ಸೈಬರ್ ವಂಚಕರ ಬಲೆಗೆ ಬಿದ್ದು ಇಳಿವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆಗ್ರಾದ ಮಾಲತಿ ವರ್ಮಾ ಎಂಬ 58 ವರ್ಷದ ಮಹಿಳೆ ಇದೇ ಸೈಬರ್ ಘಾತುಕರ ಮಾತು ಕೇಳಿ ಹೃದಯ ಸ್ತಂಭನವಾಗಿ ಪ್ರಾಣ ಕಳೆದುಕೊಂಡರು. ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಘಟನೆಗಳು ಸೈಬರ್ ಕಿರುಕುಳ ಈಗ ಕೇವಲ ಡಿಜಿಟಲ್ ಸಮಸ್ಯೆ ಅಲ್ಲ, ಅದೊಂದು ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದ ಪರಿಸ್ಥಿತಿಗೆ ದೂಡುವ ಅಜ್ಞಾತ ಭೂತ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಸೈಬರ್ ಅಟ್ಯಾಕಿಂಕ್ ಕುರಿತು ಪ್ರತಿಕ್ರಿಯಿಸಿದ ಬಾದಾಮಿ ಪಿಎಸ್‌ಐ ವಿಜಯ್ ಕುಮಾರ್ ರಾಥೋಡ್ ಅವರು, “ಹೆಚ್ಚು ತಂತ್ರಜ್ಞಾನ ಬಳಕೆ ಮಾಡುವವರು, ಮೆಟ್ರೋ ಪಾಲಿಟನ್ ನಗರಗಳಲ್ಲಿ ಕೆಲಸ ಮಾಡುವವರು ಈ ಸೈಬರ್ ವಂಚಕರ ಬಲೆಗೆ ಬೀಳುವುದು ಹೆಚ್ಚು. ಸಾಮಾನ್ಯವಾಗಿ ಎಫ್‌ಬಿ, ಇನ್ಸ್ಟಾಗಳಂತಹ ಮಾಧ್ಯಮಗಳಿಂದ ಮಾಹಿತಿ ಕಳುವು ಮಾಡಿ ಡಿಜಿಟಲ್ ಬೆದರಿಕೆ ಒಡ್ಡುತ್ತಾರೆ. ಪ್ರೇಮ ವೈಫಲ್ಯ ಆದವರು ರಿವೇಂಜ್‌ಗಾಗಿ, ಕೆಲವರು ಹಣಕ್ಕೆ ಬೇಡಿಕೆ ಇಡುವ ಉದ್ದೇಶದಿಂದ, ಇನ್ನೂ ಕೆಲವರು ಮೋಜಿಗಾಗಿಯೂ ಮಾಡಬಹುದು. ಬೇಧಿಸಲೂ ಆಗದಿರುವಷ್ಟು ಕ್ಲಿಷ್ಟವಾದ ಪ್ರಕರಣಗಳ ಉದಾಹರಣೆಗಳೂ ಇವೆ. ಸೈಬರ್ ವಂಚಕರು ಹೆಚ್ಚಾಗಿ ತಂತ್ರಜ್ಞಾನ ತಿಳಿದವರಾಗಿರುತ್ತಾರೆ. ಒಂಟಿಯಾಗಿ ಬೆಳೆದವರು, ಬಾಲ್ಯದಲ್ಲಿ ಆಘಾತಗಳಿಗೆ ಒಳಗಾದವರು, ಸಾಮಾಜಿಕವಾಗಿ ಹೆಚ್ಚು ಬೆರೆಯಲಾಗದ ಮನಸ್ಥಿತಿ ಉಳ್ಳವರು, ಸಾಮಾಜಿಕ ತಿರಸ್ಕಾರಕ್ಕೆ ಒಳಗಾದವರು, ಪ್ರೀತಿ-ವಾತ್ಸಲ್ಯ ವಂಚಿತರು ಸೈಬರ್ ವಂಚಕರಾಗಿ ಮಾರ್ಪಡುವ ಸಂಭವ ಹೆಚ್ಚು. ಅಪರಾಧಿಗಳನ್ನು ಗುರುತಿಸುವುದೂ ಕೆಲವೊಮ್ಮೆ ದೊಡ್ಡ ಸವಾಲಾಗುತ್ತದೆ. ಹಾಗಾಗಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮೊದಲು ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುವುದು ಕಡಿಮೆಯಾದರೂ ಜಾಗೃತಿ ಇಲ್ಲದೆ ಸೋಷಿಯಲ್ ಮೀಡಿಯಾವನ್ನು ಬಳಸುವುದು ಎಲ್ಲಾ ಪ್ರದೇಶದವರಿಗೂ ಅಪಾಯ. ಇಂಟರ್ನೆಟ್ ಎನ್ನುವುದು ಒಂದು ಪುಸ್ತಕ ಅಥವಾ ಪಾಠವಲ್ಲ; ಒಮ್ಮೆ ಓದಿ ಮುಗಿಸುವುದಕ್ಕೂ ಆಗುವುದಿಲ್ಲ. ಪ್ರತಿದಿನ ಅಪ್‌ಡೇಟ್ ಆಗುತ್ತಿರುತ್ತದೆ. ಕಾನೂನುಗಳು ಎಷ್ಟೇ ಕಠಿಣವಾಗಿದ್ದರೂ, ಅಧಿಕಾರಿಗಳು ಎಷ್ಟೇ ಜಾಗೃತರಾಗಿದ್ದರೂ ಘಟನೆಗಳು ನಡೆಯುತ್ತಲೇ ಇರುತ್ತವೆ. ತಂತ್ರಜ್ಞಾನ ಬಳಕೆಯಲ್ಲಿ ಅನುಕೂಲ, ಅನಾನುಕೂಲಗಳೆರಡೂ ಇವೆ. ಕೆಟ್ಟದಕ್ಕೆ ಬದಲಾಗಿ ಒಳ್ಳೆಯದಕ್ಕೆ ಬಳಸಬೇಕೆಂಬ ಅರಿವು ನಮಗಿರಬೇಕು. ಅದೊಂದೇ ಇಂಥವುಗಳಿಗೆ ಪರಿಹಾರ” ಎಂದರು.
ಹಾಗಾದರೆ ಆನ್‌ಲೈನ್ ಕಿರುಕುಳದಿಂದ ತಪ್ಪಿಸಿಕೊಳ್ಳಲು ದಾರಿ ಇಲ್ಲವೇ? ಖಂಡಿತ ಇದೆ. ತಮ್ಮ ವೈಯಕ್ತಿಕ ಮಾಹಿತಿಯನ್ನು ಜಾಣ್ಮೆಯಿಂದ ನಿರ್ವಹಿಸುವುದು ಮಹಿಳೆಯರು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು, ಲೊಕೆಷನ್, ಕೌಟುಂಬಿಕ ವಿವರಗಳು ಸೇರಿದಂತೆ ಖಾಸಗಿ ಮಾಹಿತಿಗಳನ್ನು ಯಾರಿಗೂ ಕಾಣದಂತೆ ಪ್ರೈವಸಿ ಸೆಟ್ಟಿಂಗ್‌ಗಳನ್ನಿಟ್ಟು ಗೌಪ್ಯವಾಗಿಡುವುದು. ಕಠಿಣ ಪಾಸ್‌ವರ್ಡ್ ಹಾಗೂ ಎರಡು ಹಂತದ ಸುರಕ್ಷತಾ ಕ್ರಮ ಬಳಸುವುದು ಖಾತೆ ಹ್ಯಾಕ್ ಆಗುವುದನ್ನು ತಡೆಯುತ್ತದೆ. ಅಪರಿಚಿತರಿಂದ ಬಂದ ಸಂದೇಶಗಳು, ಲಿಂಕ್‌ಗಳು ಅಥವಾ ಅನುಮಾನಾಸ್ಪದ ಫೈಲ್‌ಗಳನ್ನು ತೆರೆಯದಿರುವುದು ಅತ್ಯಂತ ಪರಿಣಾಮಕಾರಿ ರಕ್ಷಣಾಮಾರ್ಗ.
ಇದನ್ನೂ ಓದಿ: ಡಿಜಿಟಲ್ ಡಿಟಾಕ್ಸ್ | ಪರದೆಯಾಚೆಗಿನ ಬದುಕ ಬದುಕೋಣ!
ಆನ್‌ಲೈನ್‌ನಲ್ಲಿ ಕಿರುಕುಳ, ಬೆದರಿಗೆ ಅಥವಾ ಅಸಭ್ಯ ಸಂದೇಶಗಳು ಬಂದಾಗ ಭಯಪಡುವ ಬದಲು, ಅವುಗಳ ಸ್ಕ್ರೀನ್‌ಶಾಟ್, ಲಿಂಕ್ ಮತ್ತು ಸಂಭಾಷಣೆಯ ಸಾಕ್ಷ್ಯಗಳನ್ನು ಉಳಿಸಿಕೊಳ್ಳುವುದು ಜಾಣತನ. ಬಳಿಕ ಸಂಬಂಧಿತ ಖಾತೆಯನ್ನು ತಕ್ಷಣವೇ ಬ್ಲಾಕ್ ಮಾಡುವುದು ಮತ್ತು ಪ್ಲಾಟ್‌ಫಾರ್ಮ್‌ನ Report ಆಪ್ಷನ್ ಬಳಸಿ ದೂರು ಸಲ್ಲಿಸುವುದು ಮೊದಲ ಕ್ರಮವಾಗಬೇಕು. ಗಂಭೀರ ಪ್ರಕರಣಗಳಲ್ಲಿ cybercrime.gov.in ಪೋರ್ಟಲ್ ಮೂಲಕ ಅಧಿಕೃತ ದೂರು ಸಲ್ಲಿಸಬಹುದು. ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೂ ಭೇಟಿ ನೀಡಬಹುದು. ಪೊಲೀಸರು ಮತ್ತು ಸೈಬರ್ ಸೆಲ್‌ಗಳು ಇಂತಹ ಪ್ರಕರಣಗಳಿಗೆ ವಿಶೇಷ ವಿಭಾಗಗಳನ್ನು ಹೊಂದಿರುತ್ತವೆ. ಅಲ್ಲದೆ ಮಹಿಳೆಯರು ಡಿಜಿಟಲ್ ಸ್ವಯಂರಕ್ಷಣೆಯ ಅರಿವು ಬೆಳೆಸಿಕೊಳ್ಳುವ ಮೂಲಕ, ಸಾಮಾಜಿಕ ಜಾಲತಾಣಗಳ ಸುರಕ್ಷತಾ ಟೂಲ್‌ಗಳನ್ನು ಬಳಸುವ ಮೂಲಕ ಮತ್ತು ಮನೋಸ್ಥೈರ್ಯ ಕಾಪಾಡಿಕೊಳ್ಳುವ ಮೂಲಕ ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಡಿಜಿಟಲ್ ಜಗತ್ತಿನ ವೇಗದಷ್ಟೇ ಸೈಬರ್ ಕಿರುಕುಳದ ರೂಪಗಳು ಗಾಢಗೊಳ್ಳುತ್ತಿವೆ. ಈ ಹಿಂಸೆಯಿಂದಾಗುವ ಮಾನಸಿಕ, ಸಾಮಾಜಿಕ, ಆರ್ಥಿಕ ಪರಿಣಾಮಗಳು ಅಂಕೆಗೆ ನಿಲುಕದ್ದು. ಕಾನೂನುಗಳ ಬಲವಿದ್ದರೂ ಸಮಸ್ಯೆ ಸಂಪೂರ್ಣವಾಗಿ ತಾರ್ಕಿಕ ಅಂತ್ಯ ಕಾಣದಿರುವುದು ಆತಂಕಕಾರಿ. ಆದರೆ, ಮಹಿಳೆಯರು ತಮ್ಮನ್ನು ತಾವು ಜಾಗೃತಗೊಳಿಸಿಕೊಂಡಾಗ, ಜಾಣ್ಮೆಯಿಂದ ಬಳಸಿದಾಗ ಸುರಕ್ಷತೆಯನ್ನು ಬಲಪಡಿಸಿಕೊಳ್ಳಬಹುದು. ಸುರಕ್ಷತಾ ಸೆಟ್ಟಿಂಗ್‌ಗಳು, ಸೈಬರ್ ಹೈಜಿನ್, ದೂರು ಸಲ್ಲಿಸುವ ಧೈರ್ಯ ಮತ್ತು ಡಿಜಿಟಲ್ ಶಿಸ್ತೇ ಈ ಹಿಂಸೆಯ ವಿರುದ್ಧದ ಮೊದಲ ಮತ್ತು ಪ್ರಮುಖ ಅಸ್ತ್ರ. ತಂತ್ರಜ್ಞಾನವನ್ನು ನಿಲ್ಲಿಸಲು ಸಾಧ್ಯವಿಲ್ಲ; ಆದರೆ ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಲು ಕಲಿಯುವುದು ಸಾಧ್ಯವಿದೆ.





