ಎಸ್ ಜಿ ಸುಶೀಲಮ್ಮ 1975ರಲ್ಲಿ ಬರೀ 15 ರೂಪಾಯಿ ಬಂಡವಾಳದೊಂದಿಗೆ ಬೆಂಗಳೂರಿನ ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ 'ಸುಮಂಗಲಿ ಸೇವಾ ಆಶ್ರಮ'ವನ್ನು ಸ್ಥಾಪಿಸಿದರು. ಇದೀಗ ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರು ಮತ್ತು ವೃದ್ಧರಿಗೆ ಆಶ್ರಯ ನೀಡಿ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿಯ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯವನ್ನು ಸುಶೀಲಮ್ಮ ತಮ್ಮ 'ಸುಮಂಗಲಿ ಸೇವಾ ಆಶ್ರಮ'ದ ಮೂಲಕ ಮಾಡುತ್ತಿದ್ದಾರೆ.
ಸುಮಾರು ಐದು ದಶಕಗಳಿಗೂ ಅಧಿಕ ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿರುವ, ಮಹಿಳಾ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಸೇವಕಿ, ಎಸ್ ಜಿ ಸುಶೀಲಮ್ಮ ಅವರಿಗೆ ʼಪದ್ಮಶ್ರೀʼ ಗೌರವ ಧಕ್ಕಿದೆ. ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರಿಗೆ ಆಸರೆಯಾಗಿದ್ದು ಮಾತ್ರವಲ್ಲದೆ ಸುಮಾರು 40 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಅಭಿಯಾನದ ನೇತೃತ್ವ ವಹಿಸಿದವರು ನಮ್ಮ ರಾಜ್ಯದ, ಹೆಮ್ಮೆಯ ಬೆಂಗಳೂರಿನ ಸುಶೀಲಮ್ಮ.
1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದ ಸುಶೀಲಮ್ಮ ಅವರು ಸಾಂಪ್ರದಾಯಿಕ ನೇಯ್ಗೆ ಕುಟುಂಬಕ್ಕೆ ಸೇರಿದವರು. ಇವರ ತಂದೆ ಗಣೇಶಪ್ಪ ಮತ್ತು ತಾಯಿ ಚೆನ್ನಮ್ಮ. ಒಟ್ಟು 14 ಮಕ್ಕಳಲ್ಲಿ ಒಬ್ಬರು ಸುಶೀಲಮ್ಮ. ತಾವು 9ನೇ ತರಗತಿಯಲ್ಲಿದ್ದಾಗ, ಹಳೆಯ ವಿದ್ಯಾರ್ಥಿಗಳ ನಿಧಿಯಿಂದ ಸಂಗ್ರಹಿಸಿದ ಪಠ್ಯಪುಸ್ತಕಗಳನ್ನು ಪಡೆಯಲು ಬಡ ವಿದ್ಯಾರ್ಥಿಗಳು ನಿಂತಿದ್ದ ಸರದಿ ಸಾಲಿನಲ್ಲಿ ತಾವೂ ನಿಂತಿದ್ದಾಗ ತಾವೂ ಭವಿಷ್ಯದಲ್ಲಿ ಸಂಪಾದನೆ ಮಾಡಲು ಆರಂಭಿಸಿದಾಗ ಸಮಾಜಕ್ಕಾಗಿ ಉತ್ತಮ ಕಾರ್ಯ ಮಾಡುವುದಾಗಿ ದೃಢ ಸಂಕಲ್ಪ ಮಾಡಿದವರು ಸುಶೀಲಮ್ಮ.
ಇದನ್ನು ಓದಿದ್ದೀರಾ? ಪದ್ಮ ಪಶಸ್ತಿ 2026 | ಕರ್ನಾಟಕದ ಅಂಕೇಗೌಡ, ವೈದ್ಯ ಸುರೇಶ್, ಸುಶೀಲಮ್ಮಗೆ ಗೌರವ
ಬೆಂಗಳೂರಿನ ವಾಣಿ ವಿಲಾಸ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ಅದಾದ ಬಳಿಕ ನೆರೆಹೊರೆಯ ಮಕ್ಕಳಿಗೆ ಪಾಠ ಮಾಡಿ ಬಂದ ಹಣದಿಂದ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ತಮ್ಮ ಪದವಿಪೂರ್ವ (PUC) ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಸುಮಾರು 15 ವರ್ಷಗಳ ಕಾಲ ಬಿ.ಇ.ಎಚ್.ಎಲ್ (BHEL) ಕಾರ್ಖಾನೆಯಲ್ಲಿ ಕೆಲಸ ಮಾಡಿದ ಸುಶೀಲಮ್ಮ ಸಮಾಜ ಸೇವೆಗಾಗಿ ತಮ್ಮ ವೃತ್ತಿಜೀವನಕ್ಕೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.
1975ರಲ್ಲಿ ಬರೀ 15 ರೂಪಾಯಿ ಬಂಡವಾಳದೊಂದಿಗೆ ಬೆಂಗಳೂರಿನ ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ ‘ಸುಮಂಗಲಿ ಸೇವಾ ಆಶ್ರಮ’ವನ್ನು ಸ್ಥಾಪಿಸಿದರು. ಸಮಾಜ ಸೇವಕಿ ಎಂ. ಕಾಂತಮ್ಮ ಕೂಡಾ ಸುಶೀಲಮ್ಮ ಅವರೊಂದಿಗೆ ಕೈಜೋಡಿಸಿದ್ದು ಸುಮಂಗಲಿ ಸೇವಾಶ್ರಮದ ಸಹ-ಸಂಸ್ಥಾಪಕರಾಗಿದ್ದಾರೆ ಮತ್ತು ಪ್ರಸ್ತುತ ಕಾರ್ಯದರ್ಶಿಯಾಗಿದ್ದಾರೆ.
ಎಸ್ ಜಿ ಸುಶೀಲಮ್ಮ ಸಾಧನೆಗಳು
ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರು ಮತ್ತು ವೃದ್ಧರಿಗೆ ಆಶ್ರಯ ನೀಡಿ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿಯ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯವನ್ನು ಸುಶೀಲಮ್ಮ ತಮ್ಮ ‘ಸುಮಂಗಲಿ ಸೇವಾ ಆಶ್ರಮ’ದ ಮೂಲಕ ಮಾಡುತ್ತಿದ್ದಾರೆ. ಹಾಗೆಯೇ ಬಸವಾನಂದ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮೂಲಕ ಸಾವಿರಾರು ಬಡ ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಿದ್ದಾರೆ.
ಪರಿಸರ ಕಾಳಜಿಯೂ ಹೊಂದಿರುವ ಸುಶೀಲಮ್ಮ ಅವರು ಈವರೆಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಅಭಿಯಾನದ ನೇತೃತ್ವ ವಹಿಸಿದ್ದಾರೆ. ಒಂದು ಕೋಟಿ ಗಿಡಗಳನ್ನು ನೆಡುವ ಮಹತ್ವಾಕಾಂಕ್ಷೆಯ ಹೊಂದಿರುವ ಸುಶೀಲಮ್ಮ, ಮುಂದಿನ ಎರಡು ವರ್ಷಗಳಲ್ಲಿ ಉಳಿದ 60 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಿದ್ದಾರೆ. ಬಂಡೀಪುರ ಮತ್ತು ಮಾಗಡಿ ಭಾಗದ ಜನರಿಗೆ ತೆಂಗಿನ ಸಸಿಗಳನ್ನು ವಿತರಿಸುವ ಕಾರ್ಯವನ್ನು ಮಾಡಿದ್ದಾರೆ. ಸದ್ಯ ಸುಮಂಗಲಿ ಸೇವಾ ಆಶ್ರಮದ ಮೂಲಕ ಪರಿಸರ ಸುಧಾರಣೆಗಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಜಾರಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಸಾವಯವ ಕೃಷಿಗೆ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ನಿಧನ
ಮಾಗಡಿ ಭಾಗದ ಬುಡಕಟ್ಟು ಸಮುದಾಯಗಳ, ವಿಶೇಷವಾಗಿ ಇರುಳಿಗ ಜನಾಂಗದ ಅಭಿವೃದ್ಧಿಗಾಗಿ ಗಣನೀಯ ಸೇವೆ ಸಲ್ಲಿಸಿದವರು ಸುಶೀಲಮ್ಮ. ಬುಡಕಟ್ಟು ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಸುವರ್ಣಮುಖಿ ಶಾಲೆಯನ್ನು ಸ್ಥಾಪಿಸಿದ್ದಾರೆ. ಹಾಗೆಯೇ ಬುಡಕಟ್ಟು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯ ಮಾಡುವ ನಿಟ್ಟಿನಲ್ಲಿ ಸ್ತ್ರೀಶಕ್ತಿ ಸಂಘಗಳ ರಚನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು, ಭೂಮಿ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಇನ್ನು ಮಹಿಳಾ ಸಬಲೀಕರಣಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ಡಾ. ಎಸ್.ಜಿ. ಸುಶೀಲಮ್ಮ. ಅವರು ಸ್ಥಾಪಿಸಿದ ಆಶ್ರಮವು ಇಂದು ನೂರಾರು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಸರೆಯಾಗಿದೆ. ಮಹಿಳೆಯರಿಗೆ ವಿವಿಧ ಕರಕುಶಲ ತರಬೇತಿ, ವೃತ್ತಿಪರ ಕೋರ್ಸ್‌ಗಳು, ಮತ್ತು ಉದ್ಯಮ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ನೆರವಾಗಿದ್ದಾರೆ. ಆಟೋ-ರಿಕ್ಷಾ ಚಾಲನಾ ತರಬೇತಿಯಂತಹ ವಿಶಿಷ್ಟ ಉಪಕ್ರಮಗಳನ್ನೂ ನಡೆಸಿದ್ದಾರೆ. ಆಶ್ರಮದ ಮೂಲಕವೇ ಮಹಿಳೆಯರಿಗೆ ಕಾನೂನು ನೆರವು ಮತ್ತು ಉನ್ನತ ಶಿಕ್ಷಣಕ್ಕಾಗಿ ಸಹಾಯ ನೀಡಲಾಗುತ್ತಿದೆ. ಮದ್ಯಪಾನ ಮತ್ತು ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಕುಗಳ ವಿರುದ್ಧದ ಹೋರಾಟಗಳಿಗೆ ಕೈಜೋಡಿಸಿದ್ದಾರೆ.
ಸುಶೀಲಮ್ಮ ಅವರ ನಿಸ್ವಾರ್ಥ ಸೇವೆಗಾಗಿ ಇದೀಗ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಈ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಜಾನಕಿದೇವಿ ಬಜಾಜ್ ಪುರಸ್ಕಾರ, ರಾಷ್ಟ್ರೀಯ ಮಕ್ಕಳ ಕಲ್ಯಾಣ ಪ್ರಶಸ್ತಿ, ಡಾ. ದುರ್ಗಾಬಾಯಿ ದೇಶಮುಖ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡಾ ದೊರೆತಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




