ಪರಕಾಲ ಪ್ರಭಾಕರ್ ಸಂದರ್ಶನ ಭಾಗ-2: ಬಲಿಷ್ಠರು, ಬಹುಸಂಖ್ಯಾತರನ್ನು ಮೇಲಿಟ್ಟು, ಉಳಿದವರನ್ನು ಅವರ ಮುಂದೆ ಕೈಚಾಚಿ ನಿಲ್ಲಿಸಲಾಗುತ್ತಿದೆ

Date:

ನಮ್ಮ ಗತಕಾಲದ ಸಮಾಜ ಅದ್ಭುತವಾದದ್ದು, ಅಲ್ಲಿಗೇ ನಾವು ವಾಪಸು ಹೋಗಬೇಕಿದೆಯೆಂದೂ, ಸಾವಿರಾರು ವರ್ಷಗಳ ಉಜ್ವಲ ಇತಿಹಾಸದಲ್ಲಿ ಕಳೆದ 70 ವರ್ಷಗಳ ಅವಧಿ ಮಾರ್ಗಚ್ಯುತಿ ಅಥವಾ ದಾರಿತಪ್ಪಿದ್ದು ಎಂಬ ಕಥೆ ಕಟ್ಟಲಾಗಿದೆ. ನೂರಾರು ವರ್ಷಗಳ ಹಿಂದೆ ಜಾರಿಯಲ್ಲಿದ್ದ ಅಸಮಾನತೆ ಅನ್ಯಾಯದ ವ್ಯವಸ್ಥೆಗೆ ಹಿಂದಿರುಗಬೇಕೇ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಪ್ರಶ್ನಿಸಿದ್ದಾರೆ.

‘ಈ ದಿನ’ ಯೂಟ್ಯೂಬ್ ಚಾನೆಲ್‌ ಬ್ಯಾಂಕಿಂಗ್ ತಜ್ಞ ವೆಂಕಟ್ ಶ್ರೀನಿವಾಸನ್ ಅವರು ಪರಕಾಲ ಪ್ರಭಾಕರ್ ಅವರು ನಡೆಸಿಕೊಟ್ಟ ಸಂದರ್ಶನದ ಎರಡನೆಯ ಮತ್ತು ಅಂತಿಮ ಭಾಗದ ಮುಖ್ಯಾಂಶಗಳ ಕನ್ನಡ ಅನುವಾದವಿದು. ‘The Crooked Timber of New India’ ಕೃತಿಯ ಹಿನ್ನೆಲೆಯಲ್ಲಿ ಈ ಸಂದರ್ಶನ ಮೂಡಿ ಬಂದಿದೆ.

ಪರಕಾಲ ಪ್ರಭಾಕರ್ ಅವರು ದೇಶದ ಹೆಸರಾಂತ ಸಾಮಾಜಿಕ ವ್ಯಾಖ್ಯಾನಕಾರರು ಮತ್ತು ರಾಜಕೀಯ ಅರ್ಥಶಾಸ್ತ್ರಜ್ಞರು. ಉತ್ಪಾದನೆ, ವ್ಯಾಪಾರವಾಣಿಜ್ಯ ಮತ್ತು ಕಾನೂನು- ಸರ್ಕಾರದೊಂದಿಗೆ ಅವುಗಳ ಸಂಬಂಧದ ಅಧ್ಯಯನವೇ ಪೊಲಿಟಿಕಲ್ ಎಕಾನಮಿ. ಪರಕಾಲ ದೆಹಲಿಯ ಜವಾಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ಓದಿದವರು. London School of Economicsನಿಂದ ಡಾಕ್ಟರೇಟ್ ಪಡೆದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘The Crooked Timber of New India’ ಪರಕಾಲ ಅವರ ಇತ್ತೀಚಿನ ಮಹತ್ವದ ಕೃತಿ. ಭಾರತ ಗಣರಾಜ್ಯ ತೀವ್ರ ಸಂಕಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಮೌನ ವಹಿಸುವುದು ಸರಿಯಾದ ಆಯ್ಕೆಯಲ್ಲ ಎಂಬುದು ಈ ಕೃತಿಯ ಸಂದೇಶ. ಕಾಯಿಲೆ ಬಿದ್ದಿರುವ ದೇಶದ ಹಣಕಾಸು ಸ್ಥಿತಿಯ ನರಳಾಟದ ಮಗ್ಗುಲುಗಳ ಕುರಿತು ಹರಿತ ಒಳನೋಟಗಳನ್ನು ನೀಡಿದ್ದಾರೆ. ಬಡತನ ಮತ್ತು ನಿರುದ್ಯೋಗ ಕುರಿತ ವಾಸ್ತವಾಂಶಗಳನ್ನು ಮೋದಿ ಸರ್ಕಾರ ಅದುಮಿಟ್ಟಿದೆ, ಈ ಸರ್ಕಾರದಡಿ ದೇಶದ ಅಂಕಿ ಅಂಶದ ಸಮಗ್ರತೆಗೆ ಧಕ್ಕೆ ಒದಗಿದೆ ಎನ್ನುತ್ತಾರೆ. ಪರಕಾಲ ಅವರು ದೇಶದ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಪತಿ ಕೂಡ.

ದೇಶದಲ್ಲಿ ಹಸಿವಿನ ಸಮಸ್ಯೆಯನ್ನು ಕ್ಷುಲ್ಲಕಗೊಳಿಸಲಾಗುತ್ತಿದೆ. ಹಸಿವಿನ ಸಂಕಟ ಇಲ್ಲದೇ ಇದ್ದರೆ, 85 ಕೋಟಿ ಜನತೆಗೆ ಮುಂದಿನ ಐದು ವರ್ಷಗಳ ತನಕ ಉಚಿತ ಪಡಿತರ ನೀಡುತ್ತೇವೆಂದು ಪ್ರಧಾನಿ ಹೇಳಿದ್ದಾದರೂ ಯಾಕೆ?
ವಾಸ್ತವತೆಯನ್ನು ತಿರುಚಿ, ಭಿನ್ನ ಬಗೆಯ ಹುಸಿ ವಾಸ್ತವತೆಯ ಮೂಲಕ ಭ್ರಮೆಗಳನ್ನು ನಿರ್ಮಿಸಲಾಗುತ್ತಿದೆ.

ಜಿ-20ಯಂತಹ ಸಾಧಾರಣ ವಿದ್ಯಮಾನವನ್ನು ಅಸಾಧಾರಣ ಎಂದು ಬಿಂಬಿಸಲಾಯಿತು. ಅದಕ್ಕಾಗಿ ಅಪಾರ ವೆಚ್ಚ ಮಾಡಲಾಯಿತು. ಭಾರತಕ್ಕೆ ಮುನ್ನ ಇಂಡೋನೇಷ್ಯಾದಂತಹ ದೇಶಗಳಲ್ಲಿ ನಡೆದಿತ್ತು. ಭಾರತದ ನಂತರ ಈ ಸಲ ಬ್ರೆಝಿಲ್‌ನಲ್ಲಿ ನಡೆಯಲಿದೆ.

ಜಿ-20ಯ ಸಂದೇಶವೆಂದು ಸಾರಿದ ‘ವಸುಧೈವ ಕುಟುಂಬಕಂ’ ಎಂಬ ಘೋಷಣೆಯನ್ನೇ ನೋಡೋಣ. ಮಹೋಪನಿಷತ್ತಿನಲ್ಲಿ ಬಂದು ಹೋಗುವ ಶ್ಲೋಕವಿದು. ಹತ್ತು ಮುಖ್ಯ ಉಪನಿಷತ್ತುಗಳ ಸಾಲಿಗೆ ಮಹೋಪನಿಷತ್ತು ಸೇರುವುದಿಲ್ಲ.

“ಇವರು ನಮ್ಮವರು, ಅವರು ಪರಕೀಯರು ಎಂಬುದು ಸಂಕುಚಿತ ಮನೋಭಾವ. ಆದರೆ ವಿಶಾಲ ಮನೋಭಾವ ಹೊಂದಿದವರು ಹಾಗೆ ಬಗೆಯುವುದಿಲ್ಲ. ಭೂಮಿಯ ಮೇಲೆ ಜೀವಿಸಿರುವ ಎಲ್ಲರನ್ನೂ, ಎಲ್ಲವನ್ನೂ ತಮ್ಮದೇ ಕುಟುಂಬ ಎಂದು ಭಾವಿಸುತ್ತಾರೆ” ಎಂಬುದು ಈ ಶ್ಲೋಕದ ಅರ್ಥ.

‘ವಸುಧೈವ ಕುಟುಂಬಕಂ’ ಘೋಷಣೆ ಭಾರತದ ಮಣ್ಣಿನ ಮತ ಸಿದ್ಧಾಂತ ಅಥವಾ ಸೂತ್ರ ಸಂಗ್ರಹವೇನೂ ಅಲ್ಲ. ಸನಾತನ ಧರ್ಮವು ಸಾರುವ ಸಮರ್ಥನೆಯೂ ಅಲ್ಲ. ಆದರೆ ಹಾಗೆಂದು ಇದನ್ನು ನಂಬಿಸಿ ‘ಮಾರಾಟ’ ಮಾಡಲಾಗುತ್ತಿದೆ. ‘ಇಡೀ ವಿಶ್ವವೇ ನಮ್ಮ ಕುಟುಂಬ’ ಎಂದು ನೀವು ನಿಜವಾಗಿಯೂ ಭಾವಿಸಿದ್ದಲ್ಲಿ, ಈ ಘೋಷಣೆಯೇ ನಿಮ್ಮ ಮತಸಿದ್ಧಾಂತವಾಗಿದ್ದಲ್ಲಿ, ಇವರು ನಮ್ಮ ಜನ, ಅವರು ನಮ್ಮವರಲ್ಲ ಎಂದು ಭಾರತೀಯರನ್ನು ತಾರತಮ್ಯದಿಂದ ಯಾಕೆ ನಡೆಸಿಕೊಳ್ಳುತ್ತೀರಿ? ಈ ಶ್ಲೋಕದ ಮೊದಲ ಅರ್ಧ ಸುಂಕುಚಿತ ಮನೋಭಾವದ ಕುರಿತದ್ದು. ಅದು ನಿಮಗೆ (ದೇಶವನ್ನು ಆಳುತ್ತಿರುವವರಿಗೆ) ಅನ್ವಯಿಸುತ್ತದೆ. ದೇಶವನ್ನು ಕಾಡುತ್ತಿರುವ ನಿಜವಾದ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸುಳ್ಳು ಠಕ್ಕುಗಳನ್ನು ಹರಡಲಾಗುತ್ತಿದೆ.

ಮಣಿಪುರಕ್ಕೆ ಬೆಂಕಿ ಬಿದ್ದಿರುವ ಬೆಂಕಿ ಇನ್ನೂ ಆರಿಲ್ಲ. ಆದರೆ ಮೀಡಿಯಾದ ತಲೆಬರೆಹಗಳಲ್ಲಿ ಮಂದಿರ, ಮಾಲ್ದೀವ್ಸ್‌ಗಳೇ ಮೆರೆದಿವೆ. ನೂರು ದಿನಗಳ ನಂತರವೂ ಮಣಿಪುರದ ಕಿಚ್ಚು ಆರಿಲ್ಲ. ಈ ರಾಜ್ಯ ದೇಶದ ಅಂಗ ಅಲ್ಲವೇನು? ಅದನ್ನು ರಾಷ್ಟ್ರೀಯ ಪ್ರಜ್ಞೆಯಿಂದ ಹೇಗೆ ಹೊರತಳ್ಳುತ್ತೀರಿ? ಎಲ್ಲ ಸಹಜ- ಸ್ವಾಭಾವಿಕವಾಗಿದೆ. ಮಾಮೂಲು ಎಂದು ಹೇಗೆ ಬಿಂಬಿಸುತ್ತೀರಿ? ಮಣಿಪುರ ಅದೆಲ್ಲೋ ದೂರ ದೂರದಲ್ಲಿದೆ ಎಂಬ ಆಲೋಚನೆ ತರವಲ್ಲ. ಹಾಗೆ ಆಲೋಚಿಸಲು ಹೊರಟರೆ ಆಂಧ್ರಪ್ರದೇಶದಲ್ಲೆಲ್ಲೋ ನಡೆಯುತ್ತಿದೆ ನಮಗೆ ಸಂಬಂಧವಿಲ್ಲವೆಂದು ಕರ್ನಾಟಕದ ಜನರೂ, ಕರ್ನಾಟಕದಲ್ಲಿ ನಡೆಯುತ್ತಿದೆ ನಮಗೇನು ಸಂಬಂಧ ಎಂದು ಆಂಧ್ರದ ಜನರೂ ಕೈ ಕೊಡವಿಕೊಂಡಾರು. ಆದರೆ ಕಾಲಕ್ರಮೇಣ ಎಲ್ಲವೂ ಎಲ್ಲರನ್ನೂ ತಟ್ಟಲಿದೆ.

ಅಲುಗಿಸುವುದೇ ದಿಟ. ಕೊಳ ಅಥವಾ ಕೆರೆಯೊಂದಿದ್ದರೆ ಅದರ ಒಂದು ಭಾಗದ ನೀರನ್ನು ಮಲಿನಗೊಳಿಸಿ, ಉಳಿದ ಭಾಗ ಸ್ವಚ್ಛವಾಗಿರುತ್ತದೆಂದು ಭಾವಿಸುವುದು ಮೂರ್ಖತನ. ಒಂದು ಭಾಗದ ಕೊಳೆ ಇಡೀ ಕೊಳವನ್ನು ಆವರಿಸಿಯೇ ತೀರುತ್ತದೆ. ಮಲಿನಗೊಂಡ ನೀರನ್ನು ಪ್ರತ್ಯೇಕಗೊಳಿಸಿ ಖಾಲಿ ಮಾಡುವುದೂ ಸಾಧ್ಯವಿಲ್ಲ.

ಇದನ್ನು ಓದಿದ್ದೀರಾ? ಈ ದಿನ Exclusive ಸಂದರ್ಶನ | ದೇಶಕ್ಕೆ ಸಾಮೂಹಿಕ ಜೋಮು ಹಿಡಿದಿದೆ; ಹೊಸ ಭ್ರಮೆಗಳ ಕಟ್ಟಲಾಗುತ್ತಿದೆ: ಪರಕಾಲ ಪ್ರಭಾಕರ್

ಈಗಾಗಲೆ ಹೇಳಿದಂತೆ ರಾಜಕೀಯ ಮತ್ತು ಅರ್ಥಶಾಸ್ತ್ರ ಪ್ರತ್ಯೇಕ ಅಲ್ಲ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ನವ ಉದಾರವಾದ ಎಂಬುದೊಂದು ಸಡಿಲ ಆರ್ಥಿಕ ಸಂರಚನೆ. ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಈ ನೀತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

‘ಹಣವಂತರು ಮತ್ತಷ್ಟು ಸಿರಿವಂತರಾದಾಗ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಮತ್ತು ಆದಾಯ ಕೆಳಮುಖವಾಗಿ ತಳಸ್ತರಕ್ಕೆ ಹನಿಯುತ್ತದೆ. ಆದ ಕಾರಣ ಬಲಿಷ್ಠರನ್ನು ರಕ್ಷಿಸಬೇಕು ಮತ್ತು ಹೆಚ್ಚು ಹಣವಂತರಾಗುವ ಅವಕಾಶ ಕಲ್ಪಿಸಬೇಕು. ಅವರು ಹಣವಂತರಾದರೆ ಉಳಿದವರೂ ಹಣವಂತರಾಗುತ್ತಾರೆ. ತಳಸ್ತರ ಅವರ ಔದಾರ್ಯಕ್ಕೆ ಕಾಯಬೇಕು’ ಎಂಬುದು ಇಂದಿನ ನವಉದಾರವಾದಿ ತಿಳಿವಳಿಕೆಯ ಸ್ಥೂಲ ರೂಪ.

ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನವಿದು. ಇದು ಆರ್ಥಿಕ ಮುಖದ ರಾಜಕೀಯ ಆಯಾಮವನ್ನು ನೋಡೋಣ. ಹಿಂದುಗಳು ಒಳ್ಳೆಯವರು, ಅವರು ಒಳ್ಳೆಯವರೆಂದು ಒಪ್ಪಿಕೊಂಡರೆ, ಅವರಿಗೆ ಅಧೀನರಾಗಿ ಬದುಕಿದರೆ ಸಮಸ್ಯೆಯಿಲ್ಲ ಎಂಬ ಕಥಾನಕ ಸೃಷ್ಟಿಸಲಾಗಿದೆ. ಬಲಿಷ್ಠರು, ಬಹುಸಂಖ್ಯಾತರನ್ನು ಮೇಲಿಟ್ಟು, ಉಳಿದವರು ಅವರ ಔದಾರ್ಯಕ್ಕಾಗಿ ಕೈಚಾಚಿ ನಿಲ್ಲುವಂತೆ ಮಾಡಲಾಗುತ್ತಿದೆ.

ಜನಸಾಮಾನ್ಯರಿಗೆ ಕೆಲವು ಅಡುಗೆ ಅನಿಲ ಸಿಲಿಂಡರುಗಳು, ಐದು ಕೇಜಿ ಪಡಿತರವನ್ನು ಕೊಟ್ಟು, ಗೆಳೆಯನಿಗೆ ವಿಮಾನ ನಿಲ್ದಾಣಗಳನ್ನು, ಹೆದ್ದಾರಿಗಳನ್ನು ಬಂದರುಗಳನ್ನು, ಭಾರೀ ಸಾರ್ವಜನಿಕ ಉದ್ದಿಮೆಗಳನ್ನು ಅಗ್ಗದ ಬೆಲೆಗೆ ಹಸ್ತಾಂತರ ಮಾಡಲಾಗಿದೆ.ಉದ್ಯಮಿಗಳು ಪಡೆದ 25 ಲಕ್ಷ ಕೋಟಿಯಷ್ಟು ಸಾಲಗಳನ್ನು ಮನ್ನಾ ಮಾಡುವ ಅನ್ಯಾಯ ನಡೆದಿದೆ.

ಈ ದೇಶ ಮತ್ತು ಈ ದೇಶದ ಅರ್ಥಸ್ಥಿತಿಯ ಒಡೆತನ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದು, ತಮ್ಮ ಜನಕ್ಕೆ ಸೇರಿದ್ದು ಎಂಬ ಸ್ಥೂಲ ಚಿತ್ರವನ್ನು ಕಳೆದ ಹತ್ತು ವರ್ಷಗಳಿಂದ ಬಿಡಿಸಿ ಇಡಲಾಗುತ್ತಿದೆ.

ನಮ್ಮ ಗತಕಾಲದ ಸಮಾಜ ಅದ್ಭುತವಾದದ್ದು, ಅಲ್ಲಿಗೇ ನಾವು ವಾಪಸು ಹೋಗಬೇಕಿದೆಯೆಂದೂ, ಸಾವಿರಾರು ವರ್ಷಗಳ ಉಜ್ವಲ ಇತಿಹಾಸದಲ್ಲಿ ಕಳೆ 70 ವರ್ಷಗಳ ಅವಧಿ ಮಾರ್ಗಚ್ಯುತಿ ಅಥವಾ ದಾರಿತಪ್ಪಿದ್ದು ಎಂಬ ಕಥೆ ಕಟ್ಟಲಾಗಿದೆ. ನಿಜವಾಗಲೂ ಹಾಗೆ ವಾಪಸು ಹೋಗಬೇಕಿದ್ದರೆ ಸವನ್ನಾ ಹುಲ್ಲುಗಾವಲಿನ ಪಶುಪಾಲನೆ ಸಂಸ್ಕೃತಿಯ ಕಾಲಕ್ಕೆ ಹೋಗಬೇಕು. ಆದರೆ ನಾವು ಇಂದು ಪುನರುಜ್ಜೀವನ ಮತ್ತು ವೈಜ್ಞಾನಿಕ ಸಂಶೋಧನೆಗಳ ಪರಿಣಾಮವಾಗಿ ವಿಕಾಸದ ಒಂದು ಹಂತವನ್ನು ನಾವು ತಲುಪಿದ್ದೇವೆ.

ಒಂದು ಕಾಲದಲ್ಲಿ ಭೂಮಿ ಚಪ್ಪಟೆಯಾಗಿದೆ ಎಂದು ಜನ ನಂಬಿದ್ದರು. ಆ ದಿನಗಳಿಗೆ ವಾಪಸಾಗಬೇಕೇ ನಾವು?
ನಮ್ಮಲ್ಲಿ ವರ್ಣಾಶ್ರಮ ಧರ್ಮ ಬಹುಕಾಲ ಜಾರಿಯಲ್ಲಿತ್ತು. ಬಹುಕಾಲ ಜಾರಿಯಲ್ಲಿತ್ತು ಎಂದ ಮಾತ್ರಕ್ಕೆ ಅತ್ಯುತ್ತಮ ಜೀವನ ವಿಧಾನವೆಂದು ವರ್ಣಾಶ್ರಮ ಧರ್ಮವನ್ನು ಸಮರ್ಥಿಸಲು ಬರುತ್ತದೆಯೇ? ಬ್ರಾಹ್ಮಣನು ಮುಖದಿಂದಲೂ, ಬಾಹುಗಳಿಂದ ಕ್ಷತ್ರಿಯನೂ, ಕಾಲುಗಳಿಂದ ವೈಶ್ಯನೂ, ಪಾದದಿಂದ ಶೂದ್ರನೂ ಜನಿಸಿದರು ಎಂದು ವರ್ಣಾಶ್ರಮ ಹೇಳಿತ್ತು. ಈ ಏಣಿಶ್ರೇಣಿ ವ್ಯವಸ್ಥೆಯ ವಿರುದ್ಧ ಕಳೆದ 100-150 ವರ್ಷಗಳಿಂದ ಸಮಾನತೆಯ ಹಂಬಲಿಸಿ ನಿರಂತರ ಹೋರಾಟಗಳು ನಡೆದಿವೆ.

‘ಕೀಳು ಕುಲ’ದವರೆಂಬ ಕಾರಣಕ್ಕಾಗಿ ಕೆಲವು ವರ್ಗಗಳ ಜನರನ್ನು ದೇವಸ್ಥಾನಗಳಿಗೆ ಬಿಟ್ಟುಕೊಳ್ಳುತ್ತಿರಲಿಲ್ಲ, ದೇವಾಲಯಗಳ ಸುತ್ತಮುತ್ತಲ ರಸ್ತೆಗಳಲ್ಲಿ ನಡೆಯಗೊಡುತ್ತಿರಲಿಲ್ಲ. ಸಮಾಜ ಆ ಕಾಲಕ್ಕೆ ವಾಪಸು ಹೋಗಬೇಕೆಂದು ಬಯಸುತ್ತೀರಾ? ಕೆಲವು ಜಾತಿಗಳು ಮಾತ್ರವೇ ಗರ್ಭಗುಡಿಯನ್ನು ಪ್ರವೇಶಿಸಬಹುದಿತ್ತು. ಕೆಲವು ಜಾತಿಗಳನ್ನು ಗರ್ಭಗುಡಿಯ ಹೊಸ್ತಿಲ ಹೊರಗೆ ಅವಕಾಶ ನೀಡಲಾಗಿತ್ತು. ದೇವತಾಮೂರ್ತಿಯಿಂದ 10 ಅಡಿ, 12 ಅಡಿ, 15 ಅಡಿ, 17 ಅಡಿ 19 ಅಡಿಗಳ ದೂರಕ್ಕೆ ಇನ್ನು ಕೆಲವು ಜಾತಿಗಳು ನಿಲ್ಲಬೇಕಿತ್ತು. ಉಳಿದವರಿಗೆ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಿಗೂ ಪ್ರವೇಶ ಇರುತ್ತಿರಲಿಲ್ಲ. ಈ ಪರಿಸ್ಥಿತಿ ದೀರ್ಘಕಾಲ ನೆಲೆಸಿತ್ತು.

ಎಂಟು ವರ್ಷದ ಹುಡುಗಿಗೆ ಮದುವೆ ಮಾಡಲಾಗುತ್ತಿತ್ತು. ಈ ವಯಸ್ಸನ್ನು ಕೇವಲ ಒಂದು ವರ್ಷ ಹೆಚ್ಚಿಸಲು ಕೂಡ ಭಾರೀ ವಿರೋಧವಿತ್ತು. ವಿವಾಹ, ವಿಚ್ಛೇದನ, ದತ್ತಕ, ಉತ್ತರಾಧಿಕಾರದ ಅನ್ಯಾಯಗಳ ವಿರುದ್ಧ ಆಂದೋಲನಗಳು ನಡೆದು ಮುಂದೆ ಬಂದಿದ್ದೇವೆ. ಅದೇ ಹಳೆಯ ದಿನಗಳಿಗೆ ಹಿಂದಿರುಗಲು ಬಯಸುತ್ತೀರಾ? ಇಂತಹ ಅಸಮಾನತೆ ಅನ್ಯಾಯದ ವ್ಯವಸ್ಥೆ ನೂರಾರು ಅಥವಾ ಸಾವಿರಾರು ವರ್ಷಗಳ ಕಾಲ ಜಾರಿಯಲ್ಲಿತ್ತು ಎಂದ ಮಾತ್ರಕ್ಕೆ ಅದನ್ನು ನ್ಯಾಯಬದ್ಧ ಅಥವಾ ಅತ್ಯುತ್ತಮ ಎಂದು ಕರೆಯಲು ಬರುತ್ತದೆಯೇ?
ಹೀಗಾಗಿ ಕಳೆದ 70, 100 ವರ್ಷಗಳಲ್ಲಿ ನಡೆದಿರುವುದು ಮಾರ್ಗಚ್ಯುತಿ ಅಲ್ಲ, ಬದಲಾಗಿ ನಮ್ಮ ನಾಗರಿಕತೆಯ ವಿಕಾಸ. ಸುದೀರ್ಘ ಹೋರಾಟದ ನಂತರ ಮತ್ತೊಬ್ಬ ಮಾನವಜೀವಿಯನ್ನು ಜಾತಿ, ಧರ್ಮಗಳಿಂದ ಮೇಲೆದ್ದು ಸಮಾನಳೆಂದು ಗೌರವಿಸುವ ಹಂತ ತಲುಪಿದ್ದೇವೆ.

ಜನತಾಂತ್ರಿಕ ಸ್ವರೂಪದ ವ್ಯವಸ್ಥೆ ಹುಟ್ಟಿದೆ, ಈ ವ್ಯವಸ್ಥೆಯ ಮುಂದೆ ಎಲ್ಲ ನಾಗರಿಕರೂ ಸಮಾನರು ಎಂಬ ಮಟ್ಟ ಮುಟ್ಟಿದ್ದೇವೆ. ಈ ಸಮಾನತೆಯ ಭಾವದ ಬೇರಿಗೆ ಕೊಡಲಿಯೇಟು ಹಾಕಬೇಕೇ? ಒಂದು ಧರ್ಮ ಅಥವಾ ಜಾತಿ, ಇಲ್ಲವೇ ಒಂದು ಪ್ರದೇಶ, ಒಂದು ಭಾಷೆ ಶ್ರೇಷ್ಠವೆಂದೂ, ಉಳಿದವರೆಲ್ಲ ಅಡಿಯಾಳುಗಳಾಗಿ ಬದುಕಬೇಕೆಂದೂ ವಿಧಿಸುವುದು ಹಿಮ್ಮುಖ ಅಥವಾ ಪ್ರಗತಿವಿರೋಧಿ ನಡೆ. ನಮ್ಮ ಗಣರಾಜ್ಯ ಒಕ್ಕೂಟದ ಆಶಯಗಳಿಗೆ, ಸಾರಸರ್ವಸ್ವಕ್ಕೆ ವಿರುದ್ಧವಾದ ಚಲನೆ. ಸಮಾನತೆ ಈಗಲೂ ಎಲ್ಲಿದೆ ಎಂದು ಕೇಳಬಹುದು. ಅಸಮಾನತೆಯ ನಿರ್ಮಿತಿಗಳು ಅಲ್ಲಲ್ಲಿ ಉಳಿದಿವೆ. ಅವುಗಳನ್ನು ವಿರೋಧಿಸುವ ಮತ್ತು ಹೋರಾಡುವ ಅವಕಾಶವಿದೆ. ಆದರೆ ಅಸಮಾನತೆ ಒಳ್ಳೆಯದು, ಅದನ್ನೇ ಇಟ್ಟುಕೊಳ್ಳೋಣ ಎಂದು ಹೇಳುವುದು ಸರಿಯೇ? ಅಸಮಾನತೆ ಒಳ್ಳೆಯದು ಮತ್ತು ಅದು ಮುಂದುವರೆಯಬೇಕು ಎಂದು ಹೇಳುವ ಜನರಿಗಿಂತ ಅದರ ವಿರುದ್ಧ ಹೋರಾಡುವ ಜನ ಒಳ್ಳೆಯವರು. ಅಸಮಾನತೆಯನ್ನು ವಿರೋಧಿಸುತ್ತೀರಾ, ಅದರ ವಿರುದ್ಧ ಹೋರಾಡುತ್ತೀರಾ ಎಂಬುದು ಮುಖ್ಯ.

ಅಸಮಾನತೆಯನ್ನು ಯಾವುದಾದರೊಂದು ರೂಪದಲ್ಲಿ ವೇಷ ಮರೆಸಿ ಪುನಃ ಜಾರಿಗೆ ತರಬೇಕು ಎಂಬ ಪ್ರಯತ್ನಗಳನ್ನು ವಿರೋಧಿಸಬೇಕಿದೆ. ತಾರತಮ್ಯ ಭೇದಭಾವ ಇರಲೇ ಇಲ್ಲವೆಂದು ವಾದಿಸುವುದುಂಟು. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಪರಾಶರ ಸ್ಮೃತಿ ಏನು ಹೇಳುತ್ತದೆ? ಯಾರು ಯಾರನ್ನು ಮದುವೆಯಾಗಬೇಕು, ವಾರಸುದಾರಿಕೆ ಅರ್ಹತೆಗಳೇನು, ಗಂಡ ಸತ್ತಾಗ ಹೆಣ್ಣು ಹೇಗೆ ಜೀವಿಸಬೇಕು, ಬೇರೆ ಬೇರೆ ವರ್ಣಾಶ್ರಮಗಳಿಗೆ ಸೇರಿದವರು ವಿವಾಹವಾದಾಗ ಅವರನ್ನು ಅವರ ಸಂತತಿಯನ್ನು ಹಾಗೆ ನಡೆಸಿಕೊಳ್ಳಬೇಕು ಮುಂತಾದ ತಾರತಮ್ಯಗಳನ್ನು ನಿಚ್ಚಳವಾಗಿ ಕೊರೆದು ಸ್ಥಾಪಿಸಲಾಗಿದೆ. ಇವುಗಳನ್ನು ಪುನಃ ಆಲಿಂಗಿಸಬೇಕೇ? ಈ ಕುರಿತು ಇಂದು ಚರ್ಚೆ ನಡೆದು ಸ್ಪಷ್ಟ ಉತ್ತರಗಳನ್ನು ಕಂಡುಕೊಳ್ಳಬೇಕಿದೆ.

ಮಂದಿರ ನಿರ್ಮಾಣ, ಹಳೆಯ ಮೌಲ್ಯಗಳಿಗೆ ಹಿಂತಿರುಗಬೇಕು, 70 ವರ್ಷಗಳ ದಾರಿತಪ್ಪುವಿಕೆ, ಉದಾರ ಮತ್ತು ಜಾತ್ಯತೀತ ತತ್ವಗಳು ಪರಕೀಯ, ಈ ದೇಶ ಹಿಂದೂಗಳಿಗೆ ಮಾತ್ರವೇ ಸೇರಿದ್ದು ಎಂಬ ಮಾತುಗಳನ್ನು ಹತ್ತು ಹನ್ನೆರಡು ವರ್ಷಗಳ ಹಿಂದೆ ಇಂದಿನಷ್ಟು ಮುಕ್ತವಾಗಿ ಆಡುತ್ತಿರಲಿಲ್ಲ. ಮುಸುಕು ಮುಖವಾಡಗಳು ಇಂದು ಕಳಚಿ ಬಿದ್ದಿವೆ. ಇಂತಹ ಪೊಲಿಟಿಕಲ್ ಎಕಾನಮಿ ಮುಂದುವರೆಯಬೇಕೇ? ಹಳೆಯ ದಮನಕಾರಿ, ತಾರತಮ್ಯ ನಿರ್ಮಿತಿಗಳನ್ನು ಪುನಃ ಜಾರಿಗೆ ತರಲು ಬಿಡಬೇಕೇ ಅಥವಾ ತಡೆದು ನಿಲ್ಲಿಸಬೇಕೇ ಎಂಬ ಪ್ರಶ್ನೆಗಳನ್ನು ನಾವು ಎದಿರುಗೊಳ್ಳಬೇಕಿದೆ. ಹೀಗೆ ಪಡೆದುಕೊಳ್ಳುವ ಉತ್ತರಗಳು ನಮ್ಮ ಸಾರ್ವಜನಿಕ ಕ್ರಿಯೆಗಳಿಗೆ ದಾರಿ ತೋರಬೇಕಿದೆ.

ಸ್ವಾತಂತ್ರ್ಯ ಮತ್ತು ಸಮೃದ್ಧಿ ಪರಸ್ಪರ ಪೂರಕವೇ ವಿನಾ ವಿರುದ್ಧವಲ್ಲ. ಒಂದರಿಂದ ಮತ್ತೊಂದನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಸಮೃದ್ಧಿ ಬೇಕೆಂದರೆ ಸ್ವಾತಂತ್ರ್ಯವನ್ನು ಬಲಿಕೊಡಬೇಕೆಂಬ ವಾದ ಸರಿಯಲ್ಲ. ಜಗತ್ತಿನಾದ್ಯಂತ ಮತ್ತೆ ಮತ್ತೆ ರುಜುವಾತಾಗಿರುವ ಸತ್ಯವಿದು. ಇಂದಿನ ಸನ್ನಿವೇಶದಲ್ಲಿ ಭಿನ್ನಾಭಿಪ್ರಾಯ -ಅಸಮ್ಮತಿಗಳನ್ನು ಪ್ರಕಟಿಸಲು ಹಿಂಜರಿಯಕೂಡದು.

ಸಂದರ್ಶನದ ವಿಡಿಯೋ(ಭಾಗ-1)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...