ತಮ್ಮ ಸಮಸ್ಯೆ ಬಂದಾಗ ಒಂದಾಗಿ ನಿಲ್ಲಬೇಕಾದ ರೈತರು ಈಗ, ತುಮಕೂರು ವರ್ಸಸ್ ಕುಣಿಗಲ್ ರೈತರು ಎಂದು ಗುದ್ದಾಟಕ್ಕೆ ಅಣಿಯಾಗಿದ್ದಾರೆ. ಇವೆಲ್ಲವನ್ನು ಕೂತು ಕಾಣುವ ಬಿಜೆಪಿ ತನ್ನ ದಾಳವನ್ನು ಬಲು ಚಾಣಾಕ್ಷ್ಯತನದಿಂದ ಪ್ರಯೋಗಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರತಿಷ್ಠೆಯ ಆಟಕ್ಕೆ ಬಿಜೆಪಿ ರೈತರನ್ನು ಎತ್ತಿಕಟ್ಟುವ ಕೊಳಕು ರಾಜಕೀಯದ ಪೆಟ್ಟು ಕೊಡುತ್ತಿದೆ.
ನೀರಿಗಾಗಿ ಹೋರಾಟ ಹೊಸದಲ್ಲ. ಅದು ಹಿಂದೆಯೂ ನಡೆದಿದೆ, ಈಗಲೂ ನಡೆಯುತ್ತಿದೆ, ಮುಂದೆಯೂ ಮುಂದುವರೆಯುತ್ತದೆ. ಆದರೆ ಪರಿಹಾರ, ತಾರ್ಕಿಕ ಅಂತ್ಯ, ಪರ್ಯಾಯ ವ್ಯವಸ್ಥೆ, ವೈಜ್ಞಾನಿಕ ದಿಕ್ಸೂಚಿಗಾಗಿ ಶ್ರಮ, ಕಾರ್ಯಪ್ರವೃತ್ತರಾಗುವುದು ಮುಖ್ಯ. ಸ್ಥಳೀಯ ರಾಜಕಾರಣಿಗಳಿಗೆ, ಸರ್ಕಾರಕ್ಕೆ ನೀರಿನ ಸಮಸ್ಯೆ ಆದ್ಯತೆಯಾಗುವುದೂ ಅಗತ್ಯ. ಇವೆಲ್ಲವನ್ನೂ ದಾಟಿ ಅತ್ತ ಪ್ರತಿಷ್ಠೆ, ಇತ್ತ ರಾಜಕೀಯದ ನಡುವೆ ಸಿಲುಕಿ ನಲುಗುತ್ತಿರುವುದು ಹೇಮಾವತಿ ನದಿ ನೀರು ಮತ್ತು ಅದನ್ನು ನಂಬಿಕೊಂಡು ಬದುಕುತ್ತಿರುವ ರೈತರು, ಜನರು.
ಹೇಮಾವತಿ ಲಿಂಕ್ ಕೆನಾಲ್ ವಿವಾದಕ್ಕೆ ಈಗಾಗಲೇ ರಾಜಕೀಯದ ಸೋಂಕು ತಗುಲಿದೆ. ವಿವಾದದ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನು ತಮ್ಮ ರಾಜಕೀಯದಾಟಕ್ಕೆ ಬಳಸುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸದ್ಯ ಹೇಮಾವತಿ ಲಿಂಕ್ ಕೆನಾಲ್ ಬರೀ ವಿವಾದವಾಗಿ ಉಳಿದಿಲ್ಲ, ಮತಬ್ಯಾಂಕ್‌ನ ಸರಕಾಗಿ ಬದಲಾಗುತ್ತಿದೆ. ತಮ್ಮ ಸಮಸ್ಯೆ ಬಂದಾಗ ಒಂದಾಗಿ ನಿಲ್ಲಬೇಕಾದ ರೈತರು ಈಗ, ತುಮಕೂರು ವರ್ಸಸ್ ಕುಣಿಗಲ್ ರೈತರು ಎಂದು ಗುದ್ದಾಟಕ್ಕೆ ಅಣಿಯಾಗಿದ್ದಾರೆ. ಇವೆಲ್ಲವನ್ನು ಕೂತು ಕಾಣುವ ಬಿಜೆಪಿ ತನ್ನ ದಾಳವನ್ನು ಬಲು ಚಾಣಾಕ್ಷ್ಯತನದಿಂದ ಪ್ರಯೋಗಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರತಿಷ್ಠೆಯ ಆಟಕ್ಕೆ ಬಿಜೆಪಿ ರೈತರನ್ನು ಎತ್ತಿಕಟ್ಟುವ ಕೊಳಕು ರಾಜಕೀಯದ ಪೆಟ್ಟು ಕೊಡುತ್ತಿದೆ. ಉಭಯ ಪಕ್ಷಗಳಿಗೂ ಇದೊಂದು ಮುಗಿಸ ಬಯಸದ ಕಾದಂಬರಿಯಾಗಿ ಬಳಕೆಯಾಗುತ್ತಿದೆ.
ಇದನ್ನು ಓದಿದ್ದೀರಾ? ಭುಗಿಲೆದ್ದ ಹೇಮಾವತಿ ಕೆನಾಲ್ ವಿವಾದ; ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಏನಿದು ಹೇಮಾವತಿ ಕೆನಾಲ್ ಯೋಜನೆ ವಿವಾದ
ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ತುಮಕೂರಿಗೆ ಹೇಮಾವತಿ ನಾಲೆಯೇ ಜೀವನಾಡಿ. ಹಾಸನದಿಂದ ತುಮಕೂರಿಗೆ ಹೇಮಾವತಿ ನೀರು ತರುವಲ್ಲಿ ಹಿರಿಯ ರಾಜಕಾರಣಿ ವೈ.ಕೆ ರಾಮಯ್ಯ, ಹುಚ್ಚಮಾಸ್ತೀಗೌಡ ಅವರ ಪಾತ್ರ ದೊಡ್ಡದು. ಈ ಯೋಜನೆಯ ಮುಂದುವರೆದ ಭಾಗವೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕನಸಿನ ಯೋಜನೆ ಹೇಮಾವತಿ ಲಿಂಕ್ ಕೆನಾಲ್. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈಗಿನ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕರ್ನಾಟಕ ಮುಖ್ಯಮಂತ್ರಿಯಾಗಿದ್ದಾಗ 2019ರಲ್ಲಿ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿತ್ತು. ಈ ಯೋಜನೆಗಾಗಿ 600 ಕೋಟಿ ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು.
ಇದಕ್ಕೂ ಹತ್ತು ವರ್ಷ ಮುನ್ನವೇ ಅಂದರೆ, 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕುಣಿಗಲ್ ಮೂಲಕ ಮಾಗಡಿ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ತೆರೆದ ನಾಲೆ ಕಾಮಗಾರಿ ಶುರುವಾಗಿತ್ತು. ವರ್ಷಗಳ ಹಿಂದೆಯೇ ಕಾಮಗಾರಿ ಮುಗಿದಿತ್ತು. ಆದರೆ ಈ ನಾಲೆ ಮೂಲಕ ಮಾತ್ರ ನೀರು ಹರಿಯಲೇ ಇಲ್ಲ. ಹೀಗಾಗಿ 2018-19ರಲ್ಲಿ ನೀರಾವರಿ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ನೀರು ಹರಿಸಲು ಮುಂದಾದರು. ಆದರೆ, ನಂತರದ ದಿನಗಳಲ್ಲಿ ಕಾಮಗಾರಿ ಸ್ಥಗಿತವಾಯಿತು. ಈಗ ಮತ್ತೆ ನೀರಾವರಿ ಖಾತೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ಡಿ.ಕೆ ಶಿವಕುಮಾರ್, ಯೋಜನೆಯನ್ನು ಪುನರಾರಂಭಿಸಿದ್ದಾರೆ. ಯೋಜನೆಗಾಗಿ ಅನುದಾನವನ್ನು 1 ಸಾವಿರ ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಕಾಮಗಾರಿ ಈಗಾಗಲೇ ಆರಂಭವಾಗಿದೆ. ಆದರೆ, ತುಮಕೂರಿನ ಜನರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುತ್ತಿದ್ದಾರೆ. 2008ರಲ್ಲಿ ತನ್ನ ಸರ್ಕಾರವೇ ಜಾರಿಗೆ ತಂದಿದ್ದ ಯೋಜನೆಯನ್ನೀಗ ವಿರೋಧಿಸಲು ಬಿಜೆಪಿ ಪ್ರತಿಭಟನೆಯ ನೇತೃತ್ವ ಪಡೆದುಕೊಳ್ಳಲು ಮುಂದಾಗಿದೆ.
ಕಾವೇರಿ ನ್ಯಾಯಾಧೀಕರಣದ ಆದೇಶದ ಪ್ರಕಾರ ಹೇಮಾವತಿ ನಾಲಾ ವಲಯ ಮತ್ತು ತುಮಕೂರಿಗೆ ವಾರ್ಷಿಕ ಒಟ್ಟು 25.31 ಟಿಎಂಸಿ ನೀರು ಹಂಚಿಕೆಯಾಗಬೇಕು. ಆದರೆ ಈವರೆಗೂ ಅಷ್ಟು ಪ್ರಮಾಣದ ನೀರು ತುಮಕೂರಿಗೆ ಹರಿದುಬಂದಿಲ್ಲ. ಕುಣಿಗಲ್‌ಗೆ ಮೂರು ಟಿಎಂಸಿ ನೀರು ನಿಗದಿಯಾಗಿದೆ. ಆದರೆ, ಇದುವರೆಗೂ ಅಷ್ಟು ನೀರು ಪಡೆಯಲು ಸಾಧ್ಯವಾಗಿಲ್ಲ. ತುಮಕೂರಿಗೆ ಹೇಮಾವತಿ ಯೋಜನೆ ಮೂಲಕ 2020-202ರಲ್ಲಿ 25.270 ಟಿಎಂಸಿ ನೀರು ಲಭಿಸಿದೆ. ಅದುವೇ ಅತೀ ಹೆಚ್ಚು. ಯಾವತ್ತೂ ಅಗತ್ಯವಿರುವ 25.31 ಟಿಎಂಸಿ ನೀರು ಬಂದಿಲ್ಲ. ಹೀಗಿರುವಾಗ ಬೇರೆ ಜಿಲ್ಲೆಗೆ (ಮಾಗಡಿ-ಬೆಂಗಳೂರು ದಕ್ಷಿಣ) ನೀರು ಹರಿಸಿದರೆ ನಮ್ಮ ಜಿಲ್ಲೆಯ ಗತಿಯೇನು ಎಂಬುದು ತುಮಕೂರು ಜಿಲ್ಲೆಯ ಜನರ, ರೈತರ ಪ್ರಶ್ನೆ.
ಇದನ್ನು ಓದಿದ್ದೀರಾ? ತುಮಕೂರು | ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಡಿ. 7 ರಂದು ಸಂಯುಕ್ತ ಕಿಸಾನ್ ಕರ್ನಾಟಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಇನ್ನೊಂದೆಡೆ ಈಗಾಗಲೇ ಕಾಮಗಾರಿಗೆ ವ್ಯಯಿಸುವ ವೆಚ್ಚ, ಈಗ ಮತ್ತಷ್ಟು ಖರ್ಚು ಮಾಡುವುದರ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಹತ್ತು ವರ್ಷದ ಹೋರಾಟ ನಡೆಸಿದ ಫಲವಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸಿದ್ಧವಾದ ತೆರೆದ ನಾಲೆಗೆ ನೀರು ಹರಿಸಲಾಗಿಲ್ಲ. ಆ ನಾಲೆ ನಿರುಪಯುಕ್ತವಾಗಿದೆ. ‘ಈ ನಾಲೆ ಮೂಲಕವೇ ಪಂಪ್ ಮಾಡಿ ನೀರು ಪಡೆಯಬಹುದು, ಇನ್ನಷ್ಟು ಹಣವನ್ನು ವೆಚ್ಚ ಮಾಡುವ ಅಗತ್ಯವಿಲ್ಲ’ ಎಂಬುದು ಕೆಲವರ ವಾದ. ‘ಗುಬ್ಬಿ, ಕುಣಿಗಲ್‌ನಿಂದ ನೈಸರ್ಗಿಕವಾಗಿ ನಾಲೆಗಳ ಮೂಲಕವೇ ಮಾಗಡಿಗೆ ನೀರು ಹರಿಸಲಿ, ಮಾಗಡಿಗೆ ಕುಣಿಗಲ್ ಮೂಲಕ ನೀರು ಹರಿಸಲು ದೊಡ್ಡ ಸ್ಟೀಲ್ ಪೈಪ್ ಬಳಸಿದರೆ ತುಮಕೂರು ಜಿಲ್ಲೆಗೆ ಈಗ ಸಿಗುವ ನೀರೂ ಸಿಗದಂತೆ ಆಗುತ್ತದೆ’ ಎಂಬುದು ತುಮಕೂರು ಅದರಲ್ಲೂ ಗುಬ್ಬಿ ರೈತರ ಆತಂಕ. ಆದರೆ ‘ಈ ನಾಲೆ ಮೂಲಕ ಅತೀ ವೇಗವಾಗಿ ನೀರು ತಲುಪಿಸಲು ಸಾಧ್ಯವಿಲ್ಲ’ ಎಂಬ ವಾದ ಸರ್ಕಾರದ್ದು. ಆದರೆ ಇದನ್ನು ರೈತರಿಗೆ ಸರಿಯಾಗಿ ಅರ್ಥಮಾಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ಎಡವಿರುವುದು ಖಚಿತ.
ಕುಣಿಗಲ್ ರೈತರು ವರ್ಸಸ್ ತುಮಕೂರು ರೈತರು
2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರವಿದ್ದಾಗ ಹೇಮಾವತಿ ಯೋಜನೆ ಜಾರಿಗೆ ಬಂದಿತು. ಕಾಮಗಾರಿ ನಿಂತು ಹೋಗಿದ್ದ ಯೋಜನೆಯನ್ನು 2023ರ ನಂತರ ಕಾಂಗ್ರೆಸ್ ಮತ್ತೆ ಕೈಗೆತ್ತಿಕೊಂಡಿದೆ. ಯೋಜನೆಯ ವಿವಾದ ರಾಜಕೀಯವಾಗಿ ಬಳಕೆಯಾಗುತ್ತಿದೆ. ಜೆಡಿಎಸ್-ಬಿಜೆಪಿ ಜೊತೆಯಾಗಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿವೆ. ರೈತರನ್ನು ಜೊತೆ ಸೇರಿಸಿಕೊಂಡಿವೆ. ಅಲ್ಲಲ್ಲಿ ರೈತರನ್ನು ಪರಸ್ಪರ ಎತ್ತಿಕಟ್ಟಲಾಗಿದೆ. ಹಾಲು ಮಾರಾಟವನ್ನೂ ತಡೆಯಲಾಗುತ್ತಿದೆ. ತುಮಕೂರು ರೈತರು ಕುದೂರು ಮತ್ತು ಬೆಂಗಳೂರಿನ ರಾಜಾಜಿನಗರದವರೆಗೂ ಹಾಲು ಸರಬರಾಜು ಮಾಡುತ್ತಾರೆ. ಆದರೆ ಕೆಲವೆಡೆ ಹಾಲು ಮಾರಾಟ ನಿಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ‘ನೀವು ತರುವ ಹಾಲನ್ನು ನಾವು ನಿಲ್ಲಿಸಿದರೆ ನಿಮಗೆ ಎಷ್ಟು ತೊಂದರೆಯಾಗುತ್ತದೆ ಎಂದು ನಿಮಗೂ ತಿಳಿಯಬೇಕು. ತುಮಕೂರು ಹಾಲನ್ನು ನಮ್ಮ ಭಾಗದಲ್ಲಿ ಮಾರಾಟ ಮಾಡದಂತೆ ತಡೆಯುವ ಕಾರ್ಯ ಮಾಡಬೇಕಾಗುತ್ತದೆ’ ಎಂದು ರಾಮನಗರ ರೈತರು ಎಚ್ಚರಿಕೆ ನೀಡಿದ್ದಾರೆ. ಹಾಲು ಮಾತ್ರವಲ್ಲ ರೈತರ ನಡುವಿನ ಈ ‘ಕೃಷಿ ವ್ಯಾಪಾರ ದ್ವೇಷ’ ತರಕಾರಿ, ಮೊದಲಾದ ಉತ್ಪನ್ನಗಳಿಗೂ ಹಬ್ಬುತ್ತಿದೆ. ಒಬ್ಬ ರೈತನಿಗೆ ಅನ್ಯಾಯವಾದರೂ ಜೊತೆಯಾಗಿ ನಿಂತು ಧನಿ ಎತ್ತಬೇಕಾದ ರೈತರೀಗ ಪರಸ್ಪರ ದ್ವೇಷಪಡುವಂತಾಗಿದೆ. ಸಮಸ್ಯೆಯನ್ನು ಎತ್ತಿ ತೋರಿಸಲು ನಡೆಯಬೇಕಾದ ಹೋರಾಟ ಇದೀಗ ದ್ವೇಷ ಹುಟ್ಟಿಸುವ ಹೋರಾಟವಾಗಿದೆ.
ಇನ್ನೊಂದೆಡೆ ಬಿಜೆಪಿ ನಾಯಕರ ನಡುವೆಯೇ ಗೊಂದಲಗಳಿವೆ. ರಾಮನಗರದ ಬಿಜೆಪಿ ನಾಯಕರು “ನಾವು ಹೇಮಾವತಿ ನೀರು ತಂದೇ ತರುತ್ತೇವೆ” ಎಂದರೆ, ತುಮಕೂರು ಬಿಜೆಪಿ ನಾಯಕರು “ನಾವು ಯಾವುದೇ ಕಾರಣಕ್ಕೂ ನಮ್ಮ ನೀರನ್ನು ರಾಮನಗರ ಜಿಲ್ಲೆಗೆ ಹರಿಸಲು ಬಿಡುವುದಿಲ್ಲ” ಎಂದು ಹೇಳುತ್ತಾರೆ. ‘ಕಾಲಕ್ಕೆ ತಕ್ಕ ಕೋಲ’ ಎಂಬಂತೆ ಚುನಾವಣೆ ವೇಳೆ ಆಯಾ ಸ್ಥಳಕ್ಕೆ ತಕ್ಕುದಾಗಿ ತನ್ನ ನಿಲುವನ್ನೇ ಮಗುಚಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದಾರಿಯಲ್ಲೇ ಬಿಜೆಪಿ ನಾಯಕರು ಸಾಗುತ್ತಿದ್ದಾರೆ. ಸ್ಥಳೀಯರನ್ನು ಓಲೈಕೆ ಮಾಡುವ ಸಲುವಾಗಿ ರಾಮನಗರ ಬಿಜೆಪಿ ಮತ್ತು ತುಮಕೂರು ಬಿಜೆಪಿ ನಾಯಕರ ನಿಲುವು ತದ್ವಿರುದ್ಧವಾಗಿದೆ. ಕಾಂಗ್ರೆಸ್ ಸ್ಥಿತಿಯೂ ಅದೇ ಆಗಿದೆ.
ಈ ಹೇಮಾವತಿ ವಿವಾದವನ್ನೇ ಮುಂದಿಟ್ಟುಕೊಂಡು ಎಷ್ಟೋ ರಾಜಕಾರಣಿಗಳು ಮತ ಪಡೆದಿದ್ದಾರೆ, ಗೆದ್ದಿದ್ದಾರೆ. ಆದರೆ ಈವರೆಗೂ ವಿವಾದ ಮಾತ್ರ ಬಗೆಹರಿದಿಲ್ಲ. ಬದಲಾಗಿ ತಾವು ಅಧಿಕಾರದಲ್ಲಿದ್ದಾಗ ಯೋಜನೆ ಪರ, ತಾವು ಅಧಿಕಾರದಲ್ಲಿ ಇಲ್ಲದಿದ್ದಾಗ ಯೋಜನೆ ವಿರೋಧವೆಂಬ ನಾಟವಾಡುತ್ತಿದ್ದಾರೆ. ಇದರಿಂದ ಜೆಡಿಎಸ್ ಕೂಡಾ ಹೊರತಾಗಿಲ್ಲ. ತಮ್ಮ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಯನ್ನು ಇದೀಗ ಜೆಡಿಎಸ್ ನಾಯಕರು ವಿರೋಧಿಸುತ್ತಿರುವುದು ಅಭಾಸ.
ಇದನ್ನು ಓದಿದ್ದೀರಾ? ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ವಿರೋಧ; ತುಮಕೂರು ಜಿಲ್ಲಾ ಬಂದ್ ಯಶಸ್ವಿ
ಸಣ್ಣ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕ ಜೆಸಿ ಮಾಧುಸ್ವಾಮಿ ಅವರು ಎಕ್ಸ್‌ಪ್ರೆಸ್ ಲಿಂಕ್ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಯೋಜನೆ ಸ್ಥಗಿತಗೊಂಡ ಕಾರಣ ಯೋಜನೆಗಿಟ್ಟಿದ್ದ ಹಣವನ್ನು ಸಂಪುಟ ಸಭೆ ಮುಂದೆ ತಂದು ತುಮಕೂರು ಶಾಖಾ ನಾಲೆ ಆಧುನೀಕರಣ ಹಾಗೂ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಯೋಜನೆಯನ್ನು ಬಿಜೆಪಿ ಈಗ ವಿರೋಧಿಸುತ್ತಿರುವಾಗ ಯಾವುದೇ ಬಹಿರಂಗ ಹೇಳಿಕೆಗಳನ್ನೂ ಮಾಧುಸ್ವಾಮಿ ನೀಡುತ್ತಿಲ್ಲ.
ಇದರಂತೆಯೇ ಕೇಂದ್ರ ಸಚಿವ ವಿ.ಸೋಮಣ್ಣ ಅವರೂ. ತಮ್ಮ ಮೇಲೆ ಒತ್ತಡ ಹೆಚ್ಚಾದಂತೆ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯನ್ನು ಕೂಡಲೇ ನಿಲ್ಲಿಸಿ, ಹೋರಾಟ ನಡೆಸುತ್ತಿರುವ ರೈತರು, ಸಾರ್ವಜನಿಕರು, ಮಠಾಧೀಶರುಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಹೇಮಾವತಿ ಯೋಜನೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೆನಾಲ್ ಬಳಿ ಪ್ರತಿಭಟನೆಗೆ ಇಳಿದಿರುವಾಗ, ಹಿರಿಯ ಬಿಜೆಪಿ ನಾಯಕ ಸೊಗಡು ಶಿವಣ್ಣ ಮಾತ್ರ ಪ್ರತ್ಯೇಕವಾಗಿ ಪ್ರತಿಭಟಿಸುತ್ತಿದ್ದಾರೆ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರು, ಮಾಜಿ ಸಚಿವರಾದ ಸೊಗಡು ಶಿವಣ್ಣ ಜಿಲ್ಲಾಧಿಕಾರಿಯವರ ಕಚೇರಿಯ ಮುಂದೆ ಅಮರಣಾಂತ ಸತ್ಯಾಗ್ರಹ ಆರಂಭಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಹಾಕಿರುವ ಎಫ್‌ಐಆರ್ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕುಣಿಗಲ್‌ಗೆ ಹೆಚ್ಚು ಅನ್ಯಾಯ
ಈ ಯೋಜನೆ ಬಗ್ಗೆ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿರುವ ಗ್ರಾಮ ಸ್ವರಾಜ್ಯ ಕರ್ನಾಟಕ ಸಂಘಟನೆಯ ಕಾಡಶೆಟ್ಟಿಹಳ್ಳಿ ಸತೀಶ್ ಅವರು “ಹೇಮಾವತಿ ಕೆನಾಲ್ ಯೋಜನೆಯಿಂದ ಬಹಳ ಅನ್ಯಾಯವಾಗುತ್ತೆ. ಕುಣಿಗಲ್‌ಗೂ ಅನ್ಯಾಯವಾಗುತ್ತದೆ. ರಾಮನಗರವನ್ನು ನಗರವನ್ನಾಗಿ ಮಾಡಿಕೊಳ್ಳಲು ನೀರಿನ ವ್ಯವಸ್ಥೆಯನ್ನು ಈ ಯೋಜನೆ ಮೂಲಕ ಮಾಡಲಾಗುತ್ತಿದೆ. ಈ ಯೋಜನೆಯಿಂದ ಸಾಕಷ್ಟು ತೊಂದರೆಯಾಗಲಿದೆ ಎಂದು ಇಂಜಿನಿಯರ್‌ಗಳೇ ಹೇಳುತ್ತಿದ್ದಾರೆ. ಈ ಬಗ್ಗೆ ನನ್ನ ತಾಂತ್ರಿಕ ವಿವರಗಳೂ ಇದೆ. ಕುಣಿಗಲ್‌ನವರು ತೀವ್ರ ನೀರಿನ ಸಂಕಷ್ಟಕ್ಕೆ ಸಿಲುಕುತ್ತಾರೆ” ಎಂದು ಹೇಳಿದ್ದಾರೆ.
“ತುಮಕೂರು ಮತ್ತು ನಾಗಮಂಗಲ ಸೇರಿ 24.5 ಟಿಎಂಸಿ ನೀರು ಹಂಚಿಕೆಯಾಗಿದೆ. ನಾಗಮಂಗಲಕ್ಕೆ ಒಂಬತ್ತು ಟಿಎಂಸಿ ಉಳಿದದ್ದು ತುಮಕೂರು ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಅದರಲ್ಲೇ ಕುಣಿಗಲ್‌ಗೆ ಮೂರು ಟಿಎಂಸಿ ಸೇರಿದೆ. ಮೂಲ ಯೋಜನೆಯಲ್ಲಿ ಕುಣಿಗಲ್‌ಗೆ ಇರಲಿಲ್ಲ. ವೈಕೆ ರಾಮಯ್ಯ ಅವರೆಲ್ಲ ಹೋರಾಟ ಮಾಡಿ ಕುಣಿಗಲ್‌ಗೂ ನೀರು ಹಂಚಿಕೆಯಾಗಿದೆ. ಈಗ ಮಾಗಡಿಗೆ ಕುಣಿಗಲ್‌ಗೆ ನೀಡಿರುವ ನೀರಿನಲ್ಲೇ ಒಂದು ಟಿಎಂಸಿ ನೀರು ನೀಡಲಾಗುತ್ತದೆ. ಇದರಿಂದಾಗಿ ಮತ್ತೆ ಕುಣಿಗಲ್‌ಗೆ ಅನ್ಯಾಯವಾಗುತ್ತದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಗುಬ್ಬಿ | ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಬೃಹತ್ ಪಾದಯಾತ್ರೆಗೆ ತೀರ್ಮಾನಿಸಿದ ಹೋರಾಟ ಸಮಿತಿ
“ಸದ್ಯ ಇದ್ದ ಕಾಲುವೆಯಲ್ಲಿ ನೀರು ಹೋಗುತ್ತಿತ್ತು. ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈಗ ರಾಮನಗರಕ್ಕೆ ನೀರು ಸರಬರಾಜು ಮಾಡಲು ಎಕ್ಸ್‌ಪ್ರೆಸ್ ಕೆನಾಲ್ ಮಾಡುತ್ತಿದ್ದಾರೆ. ರಾಮನಗರವನ್ನು ನಗರವನ್ನಾಗಿ ಮಾಡುವುದೇ ಇದರ ಹಿಂದಿರುವ ಉದ್ದೇಶ. ಆದರೆ ಅಷ್ಟರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಇದನ್ನು ಕೈಬಿಟ್ಟರು. ಈಗ ಮತ್ತೆ ಕಾಂಗ್ರೆಸ್ ಆರಂಭಿಸಿದೆ. ಕಾವೇರಿ ನೀರಾವರಿ ನಿಗಮ ಎಂಡಿ ಕೆ. ಜಯಪ್ರಕಾಶ್ ಅವರೇ ಈ ಹಿಂದೆ ಈ ಯೋಜನೆ ಅವೈಜ್ಞಾನಿಕವೆಂದು ಹೇಳಿದ್ದರು” ಎಂದು ತಿಳಿಸಿದ್ದಾರೆ.

ಮೊದಲು ರೈತರೊಂದಿಗೆ ಸಭೆ ನಡೆಸಿ
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ತುಮಕೂರು ಜಿಲ್ಲೆಯ ರೈತರಿಗೆ ಅನಾನುಕೂಲ ಹೌದು. ಆದರೆ ಕುಣಿಗಲ್‌ನ, ರಾಮನಗರದ ರೈತರೂ ಸಂಕಷ್ಟದಲ್ಲಿದ್ದಾರೆ, ಅವರಿಗೂ ನೀರು ಬೇಕು. ಇಲ್ಲಿ ವೈಜ್ಞಾನಿಕ ಆಲೋಚನೆ, ಪರಿಹಾರ ಅಗತ್ಯ. ಬಿಜೆಪಿ-ಕಾಂಗ್ರೆಸ್ ರಾಜಕೀಯದಾಟಕ್ಕೆ ರೈತರನ್ನು ಬಲಿಕೊಡುವುದು ಎಷ್ಟು ಸರಿ? ರಾಜಕೀಯ-ಪ್ರತಿಷ್ಠೆಯನ್ನು ಸರ್ಕಾರ, ವಿಪಕ್ಷ ಬದಿಗೊತ್ತಿ ತುಮಕೂರು, ಕುಣಿಗಲ್ ರೈತರೊಂದಿಗೆ ಸಭೆ ನಡೆಸಲೇಬೇಕು. ಮತದ ಬೆನ್ನತ್ತಿದ ರಾಜಕಾರಣಿಗಳ ಬಲೆಯಲ್ಲಿ ರೈತರು ಸಿಲುಕದಿರಲಿ.
ಇವೆಲ್ಲವುದರ ನಡುವೆ ತಮ್ಮ ಕರ್ತವ್ಯ ಮರೆತು ಮಲಗಿರುವ ಸರ್ಕಾರವೂ ಎಚ್ಚೆತ್ತುಕೊಳ್ಳುವುದು ಮುಖ್ಯ. ರೈತರನ್ನೇ ಪರಸ್ಪರ ಎತ್ತಿಕಟ್ಟಲಾಗುತ್ತಿರುವಾಗ ಸರ್ಕಾರ ಮಧ್ಯಪ್ರವೇಶಿಸುವುದು ಈ ನಾಡಿನ ಹಿತದೃಷ್ಟಿಯಿಂದ ಅನಿವಾರ್ಯ. ಕೋಮು ದ್ವೇಷದಿಂದ ರಾಜ್ಯದೆಲ್ಲೆಡೆ ವಿಂಗಡಣೆಯಾಗುತ್ತಿರುವ ಈ ಸಂದರ್ಭದಲ್ಲಿ ರೈತರೂ ಪರಸ್ಪರ ವಿರೋಧಿಗಳಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ರೈತರಲ್ಲಿ ಸೌಹಾರ್ದತೆ ಗಟ್ಟಿಗೊಳಿಸಲಿ. ಇಲ್ಲದಿದ್ದರೆ ಒಡೆದು ಆಳುವ ನೀತಿಯಲ್ಲಿ ಕಾಂಗ್ರೆಸ್ ಪಾಳೂ ಇದ್ದಂತೆ. ಸರ್ಕಾರ ಕುಣಿಗಲ್, ಗುಬ್ಬಿ ರೈತರನ್ನು ಸೇರಿಸಿ ಸಭೆ ನಡೆಸಲಿ. ಅನ್ಯಾಯವನ್ನು ಬೊಟ್ಟು ಮಾಡಿ ತೋರಿಸುವಾಗ ರೈತರೆಲ್ಲರೂ ಜೊತೆಯಾಗಿರಲಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




