ಒಂದು ಕಾಲದಲ್ಲಿ ಅಸ್ಸಾಂನ ಮೂಲೆಮೂಲೆಗಳಲ್ಲೂ ನವ ಜಾಗೃತಿ ಮೂಡಿಸಿ ಅತಿ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದ ಪ್ರಫುಲ್ಲ ಕುಮಾರ್ ಮಹಂತ ಅವರ ಕಥೆ ರೋಚಕ ಹಾಗೂ ಅಷ್ಟೇ ವಿಷಾದನೀಯ. ಅಸ್ಸಾಂನ ಮೂಲನಿವಾಸಿಗಳ ಹಿತರಕ್ಷಣೆಗಾಗಿ ಹೋರಾಡಿದ ಯುವಕನೊಬ್ಬ, ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಎದುರಿಸಿದ ಆಡಳಿತಾತ್ಮಕ ವೈಫಲ್ಯಗಳು, ಮಾನವ ಹಕ್ಕುಗಳ ಉಲ್ಲಂಘನೆಯ ಕಳಂಕ ಮತ್ತು ನಿರಂತರವಾಗಿ ಬದಲಾದ ರಾಜಕೀಯ ಸಮೀಕರಣಗಳಿಂದಾಗಿ ಇಂದು ಸ್ವಂತ ಪಕ್ಷದಲ್ಲೇ ಅನಾಥರಾಗಿದ್ದಾರೆ
ಅಸ್ಸಾಂ ರಾಜಕಾರಣದಲ್ಲಿ ದಶಕಗಳ ಕಾಲ ಅನಭಿಷಿಕ್ತ ದೊರೆಯಂತೆ ಮೆರೆದಿದ್ದ, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿ ಗದ್ದುಗೆಗೇರಿದ್ದ ಪ್ರಫುಲ್ಲ ಕುಮಾರ್ ಮಹಂತ ಅವರ ರಾಜಕೀಯ ಬದುಕು ಇಂದು ಬಹುತೇಕ ಅಸ್ತಮಯದ ಅಂಚಿಗೆ ಬಂದು ನಿಂತಿದೆ. ಒಮ್ಮೆ ಇಡೀ ರಾಜ್ಯದ ಜನತೆಯ ಆಶಾಕಿರಣವಾಗಿದ್ದ ನಾಯಕ, ಇಂದು ತಾವು ಕಟ್ಟಿ ಬೆಳಸಿದ ‘ಅಸೋಮ್ ಗಣ ಪರಿಷತ್’(ಎಜಿಪಿ) ಪಕ್ಷದಿಂದಲೇ ಮೂಲೆಗುಂಪಾಗಿದ್ದಾರೆ. 2021ರ ವಿಧಾನಸಭೆ ಚುನಾವಣೆಯಲ್ಲಿ 1991ರಿಂದ ಸತತ 6 ಬಾರಿ(ಸುಮಾರು ಮೂರು ದಶಕಗಳು) ತಾವು ಪ್ರತಿನಿಧಿಸಿದ್ದ ‘ಬರ್ಹಾಂಪುರ’ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನಿರಾಕರಿಸಲ್ಪಟ್ಟಿದ್ದು, ಅವರ ಸುದೀರ್ಘ ರಾಜಕೀಯ ವೃತ್ತಿಜೀವನದ ದುರಂತಮಯ ಪತನದ ಸ್ಪಷ್ಟ ದ್ಯೋತಕವಾಗಿದೆ.
ಪ್ರಫುಲ್ಲ ಕುಮಾರ್ ಮಹಂತ ಅವರು ಡಿಸೆಂಬರ್ 23, 1952 ರಂದು ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಬಳಿಯ ‘ಉಲುವೋನಿ’ ಎಂಬ ಹಳ್ಳಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ದೇವ ಕಾಂತ ಮಹಂತ ಮತ್ತು ಲಕ್ಷ್ಮೀ ಪ್ರಭಾ ಮಹಂತ ದಂಪತಿಯ ಪುತ್ರನಾಗಿ ಜನಿಸಿದರು. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಉನ್ನತ ವ್ಯಾಸಂಗಕ್ಕಾಗಿ ಗುವಾಹಟಿ ವಿಶ್ವವಿದ್ಯಾಲಯವನ್ನು ಸೇರಿದಾಗ ಅವರ ಬದುಕಿಗೆ ಅತಿದೊಡ್ಡ ತಿರುವು ಸಿಕ್ಕಿತು. ಅಲ್ಲಿ ಅವರು ವಿಜ್ಞಾನ ಹಾಗೂ ಕಾನೂನು ಪದವಿಗಳನ್ನು ಪೂರೈಸುವುದರ ಜೊತೆಗೆ ವಿದ್ಯಾರ್ಥಿ ರಾಜಕಾರಣದಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ಇದೇ ವೇಳೆ ನೆರೆಯ ಬಾಂಗ್ಲಾದೇಶದಿಂದ ಅಸ್ಸಾಂಗೆ ಹರಿದುಬರುತ್ತಿದ್ದ ಅಕ್ರಮ ವಲಸಿಗರ ಸಮಸ್ಯೆಯನ್ನು ಹಾಗೂ ಅದರಿಂದ ಸ್ಥಳೀಯರ ಮೇಲಾಗುತ್ತಿದ್ದ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿದ ಅವರು, 1979ರಲ್ಲಿ ಪ್ರಭಾವಿ ‘ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ’ದ (AASU) ಅಧ್ಯಕ್ಷರಾಗಿ ಆಯ್ಕೆಯಾದರು. ಕೇವಲ ಒಬ್ಬ ಸಾಮಾನ್ಯ ಕಾನೂನು ವಿದ್ಯಾರ್ಥಿಯಾಗಿದ್ದ ಮಹಂತ, ತಮ್ಮ ಈ ವಿದ್ಯಾರ್ಥಿ ದೆಸೆಯಲ್ಲೇ ಆರು ವರ್ಷಗಳ ಸುದೀರ್ಘ ‘ಅಸ್ಸಾಂ ಚಳವಳಿ’ಯ ನಿರ್ವಿವಾದ ನಾಯಕರಾಗಿ ಹೊಮ್ಮಿ, ತಮ್ಮ ಭವಿಷ್ಯದ ಬೃಹತ್ ರಾಜಕೀಯ ಬದುಕಿಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಭದ್ರ ಬುನಾದಿ ಹಾಕಿಕೊಂಡರು.
ನೆರೆಯ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುತ್ತಿದ್ದ ವಲಸಿಗರಿಂದ ಅಸ್ಸಾಂನ ಮೂಲನಿವಾಸಿಗಳ ಜನಸಂಖ್ಯಾಶಾಸ್ತ್ರೀಯ ಸ್ವರೂಪಕ್ಕೆ, ಸಂಸ್ಕೃತಿಗೆ ಹಾಗೂ ಆರ್ಥಿಕತೆಗೆ ಭಾರಿ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ‘ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ’ ಬೃಹತ್ ಹೋರಾಟವನ್ನು ಆರಂಭಿಸಿತ್ತು. ಈ ಪ್ರಭಾವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಮಹಂತ, ತಮ್ಮ ತೀಕ್ಷ್ಣ ಹೋರಾಟದ ಮೂಲಕ ಇಡೀ ಈಶಾನ್ಯ ಭಾರತದ ಅತ್ಯಂತ ಪ್ರಮುಖ ಹಾಗೂ ಗುರುತಿಸಬಲ್ಲ ಪ್ರಾದೇಶಿಕ ನಾಯಕರಾಗಿ ಕ್ಷಿಪ್ರಗತಿಯಲ್ಲಿ ಬೆಳೆದು ನಿಂತರು.

ಆರು ವರ್ಷಗಳ ಕಾಲ ನಡೆದ ಸುದೀರ್ಘ ಹಾಗೂ ಅನೇಕ ರಕ್ತಪಾತಗಳನ್ನು ಕಂಡ ಈ ಆಂದೋಲನವು ಅಂತಿಮವಾಗಿ 1985ರ ಆಗಸ್ಟ್ 15ರಂದು ಐತಿಹಾಸಿಕ ‘ಅಸ್ಸಾಂ ಒಪ್ಪಂದ’ಕ್ಕೆ ಸಹಿ ಹಾಕುವ ಮೂಲಕ ಅಂತ್ಯಗೊಂಡಿತು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ನಡೆದ ಈ ಒಪ್ಪಂದದ ಪ್ರಮುಖ ರೂವಾರಿಯಾಗಿದ್ದ ಮಹಂತ, 1971ರ ಮಾರ್ಚ್ 24ರ ಮೊದಲು ಅಸ್ಸಾಂಗೆ ಬಂದು ನೆಲೆಸಿದವರಿಗೆ ಮಾತ್ರ ಭಾರತದ ಪೌರತ್ವ ನೀಡಬೇಕು ಮತ್ತು ಆ ದಿನಾಂಕದ ಬಳಿಕ ಗಡಿ ದಾಟಿ ಬಂದವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸಿ, ಅವರನ್ನು ಹುಡುಕಿ ಅವರ ದೇಶಕ್ಕೇ ವಾಪಸ್ ಕಳುಹಿಸಬೇಕು ಎಂಬ ಪ್ರಮುಖ ನಿಯಮವನ್ನು ಕೇಂದ್ರ ಸರ್ಕಾರದಿಂದ ಒಪ್ಪಿಸುವಲ್ಲಿ ಯಶಸ್ವಿಯಾದರು.
ಅಸ್ಸಾಂ ಒಪ್ಪಂದದ ಯಶಸ್ಸಿನ ಬೆನ್ನಲ್ಲೇ, ಹೋರಾಟಗಾರರೆಲ್ಲರೂ ಸೇರಿ 1985ರ ಅಕ್ಟೋಬರ್‌ನಲ್ಲಿ ‘ಅಸೋಮ್ ಗಣ ಪರಿಷತ್’ (ಎಜಿಪಿ) ಎಂಬ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತಂದರು. ಅಸ್ಸಾಂನ ಜನತೆ ಈ ಯುವ ನಾಯಕರ ಹೋರಾಟಕ್ಕೆ ತೀವ್ರ ಭಾವನಾತ್ಮಕವಾಗಿ ಸ್ಪಂದಿಸಿದರು. ಪರಿಣಾಮವಾಗಿ, ಸ್ಥಾಪನೆಯಾದ ಕೆಲವೇ ತಿಂಗಳುಗಳಲ್ಲಿ ನಡೆದ 1985ರ ವಿಧಾನಸಭಾ ಚುನಾವಣೆಯಲ್ಲಿ ಎಜಿಪಿ ಪಕ್ಷವು 67 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆ ವೇಳೆ ಕೇವಲ 33 ವರ್ಷ ವಯಸ್ಸಿನ ಯುವಕನಾಗಿದ್ದ ಪ್ರಫುಲ್ಲ ಕುಮಾರ್ ಮಹಂತ ಅವರು ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದು ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅತಿ ಕಿರಿಯ ವಯಸ್ಸಿನಲ್ಲಿ ರಾಜ್ಯವೊಂದರ ಮುಖ್ಯಮಂತ್ರಿಯಾದ ಅಪರೂಪದ ದಾಖಲೆಯಾಗಿದೆ.
ಆದರೆ, ಕೇವಲ ವಿದ್ಯಾರ್ಥಿ ನಾಯಕರಾಗಿದ್ದುಕೊಂಡು ಬೀದಿಗಿಳಿದು ಹೋರಾಟ ಮಾಡುವುದಕ್ಕೂ, ಒಂದು ಸಂಕೀರ್ಣ ಗಡಿ ರಾಜ್ಯದ ಆಡಳಿತ ಯಂತ್ರವನ್ನು ಮುನ್ನಡೆಸುವುದಕ್ಕೂ ಇರುವ ಅಜಗಜಾಂತರ ವ್ಯತ್ಯಾಸವು ಶೀಘ್ರದಲ್ಲೇ ಈ ಯುವ ಪಡೆಗೆ ಅರಿವಾಯಿತು. ಮಹಂತ ಅವರ ಮೊದಲ ಅಧಿಕಾರಾವಧಿಯಲ್ಲಿ (1985-1990) ಆಡಳಿತಾತ್ಮಕ ಅನನುಭವ ಮತ್ತು ಅಪರಿಪಕ್ವತೆ ಎದ್ದು ಕಾಣುತ್ತಿತ್ತು. ಇದೇ ವೇಳೆ ಸಶಸ್ತ್ರ ತೀವ್ರಗಾಮಿ ಸಂಘಟನೆಯಾದ ‘ಉಲ್ಫಾ’ ಪ್ರಬಲವಾಗಿ ತಲೆ ಎತ್ತಿತು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ, ನವೆಂಬರ್ 1990ರಲ್ಲಿ ಮಹಂತ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಜೊತೆಗೆ ಅಧಿಕಾರದ ದರ್ಪದಿಂದಾಗಿ ಎಜಿಪಿ ನಾಯಕರ ನಡುವೆ ಅಹಂಕಾರದ ಘರ್ಷಣೆಗಳು ಶುರುವಾಗಿ ಪಕ್ಷದಲ್ಲಿ ಬಿರುಕು ಮೂಡಲು ಕಾರಣವಾಯಿತು. 1991ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಇದನ್ನು ಒದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಆದರೆ ಈ ಎಲ್ಲ ಹಿನ್ನಡೆಯ ನಡುವೆಯೂ ಪಕ್ಷದ ಭಿನ್ನಬಣಗಳು ಮತ್ತೆ ಒಂದಾಗಿ 1996ರ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದವು. ಈ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ ಮಹಂತ, 1996ರಿಂದ 2001ರವರೆಗೆ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಬಾರಿ ಅವರು ಉಲ್ಫಾ ತೀವ್ರಗಾಮಿಗಳ ವಿರುದ್ಧ ತೀವ್ರ ಕಠಿಣ ನಿಲುವು ತಳೆದರು ಹಾಗೂ ತೀವ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿದರು. ಆದರೆ, ಈ ಐದು ವರ್ಷಗಳ ಅಧಿಕಾರಾವಧಿಯು ಅವರ ರಾಜಕೀಯ ಬದುಕಿಗೆ ಮತ್ತು ಅಸ್ಸಾಂನ ಇತಿಹಾಸಕ್ಕೆ ಅತಿದೊಡ್ಡ ಕಪ್ಪುಚುಕ್ಕೆಯಾಗಿ ಪರಿಣಮಿಸಿತು.

ಮಹಂತ ಅವರ ಎರಡನೇ ಅವಧಿಯಲ್ಲಿ ನಡೆದ “ಗುಪ್ತ ಹತ್ಯೆಗಳ” ಸರಣಿಯು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತು. ಉಲ್ಫಾ ತೀವ್ರವಾದಿ ಮುಖಂಡರು ಹಾಗೂ ಕಾರ್ಯಕರ್ತರ ಮುಗ್ಧ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ಅಪರಿಚಿತ ಬಂದೂಕುಧಾರಿಗಳು ರಾತ್ರೋರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾರಂಭಿಸಿದರು. 1998ರಿಂದ 2001ರ ಅವಧಿಯಲ್ಲಿ ನಡೆದ ಈ ಹತ್ಯೆಗಳ ಹಿಂದೆ ರಾಜ್ಯ ಸರ್ಕಾರದ ಬೆಂಬಲಿತ ಪೊಲೀಸರು ಮತ್ತು ಶರಣಾದ ಉಲ್ಫಾ ತೀವ್ರಗಾಮಿಗಳ ಕೈವಾಡವಿದೆ ಎಂಬ ಗಂಭೀರ ಆರೋಪಗಳು ವ್ಯಾಪಕವಾಗಿ ಕೇಳಿಬಂದವು. ಇದು ಮಹಂತ ಮತ್ತು ಎಜಿಪಿ ಪಕ್ಷದ ವರ್ಚಸ್ಸನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿತು.
2001ರ ವಿಧಾನಸಭಾ ಚುನಾವಣೆಯಲ್ಲಿ ತರುಣ್ ಗೊಗೊಯ್ ನೇತೃತ್ವದ ಕಾಂಗ್ರೆಸ್ ಪಕ್ಷವು ಇದೇ “ಗುಪ್ತ ಹತ್ಯೆಗಳ” ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಎಜಿಪಿ ವಿರುದ್ಧ ಭಾರಿ ಜಯ ಸಾಧಿಸಿತು. ಒಮ್ಮೆ ಕಾಂಗ್ರೆಸ್ ವಿರೋಧಿ ಅಲೆಯ ಮೂಲಕವೇ ಉದಯಿಸಿದ್ದ ಮಹಂತ, ಅದೇ ಕಾಂಗ್ರೆಸ್ ಎದುರು ಧೂಳೀಪಟವಾದರು. ಹೀಗೆ ಅಧಿಕಾರ ಕಳೆದುಕೊಂಡ ಅವರು, ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆಹೊತ್ತು ಎಜಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತದನಂತರ ಪಕ್ಷದ ಆಂತರಿಕ ಭಿನ್ನಮತವು ಮತ್ತಷ್ಟು ಸ್ಫೋಟಗೊಂಡು, 2005ರಲ್ಲಿ ಅವರು ಎಜಿಪಿ ಯಿಂದ ಹೊರಬಂದು ‘ಎಜಿಪಿ (ಪ್ರೊಗ್ರೆಸಿವ್)’ ಎಂಬ ಪ್ರತ್ಯೇಕ ಬಣವನ್ನು ರಚಿಸಿದರು. ಇದು ಅವರ ರಾಜಕೀಯ ಅಸ್ತಿತ್ವದ ಅವನತಿಯ ಸ್ಪಷ್ಟ ಆರಂಭವಾಗಿತ್ತು.
2008ರಲ್ಲಿ ಅವರು ತಮ್ಮ ಪ್ರತ್ಯೇಕ ಬಣವನ್ನು ವಿಸರ್ಜಿಸಿ ಮತ್ತೆ ಮಾತೃಪಕ್ಷ ಎಜಿಪಿಗೆ ಮರಳಿ, ತರುವಾಯ ಅದರ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಆದರೆ, ಅಸ್ಸಾಂ ಜನತೆಯ ದೃಷ್ಟಿಯಲ್ಲಿ ಎಜಿಪಿಯ ವಿಶ್ವಾಸಾರ್ಹತೆ ಆಗಲೇ ತೀವ್ರವಾಗಿ ಕ್ಷೀಣಿಸಲಾರಂಭಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಿದ ಎಲ್ಲ ಸ್ಥಾನಗಳಲ್ಲೂ ಸೋತು, ಒಂದೇ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾದಾಗ, ಮಹಂತ ಮತ್ತೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು. 2016ರಲ್ಲಿ ಎಜಿಪಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತಾದರೂ, ನೂತನ ನಾಯಕತ್ವವು ಮಹಂತ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿತು.
ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಾದಾತ್ಮಕ ‘ಪೌರತ್ವ ತಿದ್ದುಪಡಿ ಕಾಯ್ದೆ’ (CAA-2019) ವಿರುದ್ಧ ಮಹಂತ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ತ್ವರಿತಗತಿಯಲ್ಲಿ ಪೌರತ್ವ ನೀಡುವ ಈ ಕಾಯ್ದೆಯು 1985ರ ಅಸ್ಸಾಂ ಒಪ್ಪಂದದ ಆಶಯಗಳಿಗೆ ತದ್ವಿರುದ್ಧವಾಗಿದೆ ಎಂದು ಅವರು ವಾದಿಸಿದರು. 1971ರ ನಂತರ ಬಂದ ಯಾವುದೇ ಅಕ್ರಮ ವಲಸಿಗರಿಗೆ (ಅವರು ಹಿಂದೂಗಳೇ ಆಗಿರಲಿ, ಮುಸ್ಲಿಮರೇ ಆಗಿರಲಿ) ಅಸ್ಸಾಂನಲ್ಲಿ ಜಾಗವಿಲ್ಲ ಎಂದು ಪ್ರತಿಪಾದಿಸಿ ‘ಅಸೋಮ್ ಆಂದೋಲನ್ ಸಂಗ್ರಾಮಿ ಮಂಚ’ ಎಂಬ ವೇದಿಕೆ ಹುಟ್ಟುಹಾಕಿ ತಮ್ಮ ಹಳೆಯ ಹೋರಾಟದ ದಿನಗಳನ್ನು ಮರುಸೃಷ್ಟಿಸಲು ಪ್ರಯತ್ನಿಸಿದರು. ಆದರೆ ರಾಜಕೀಯ ವಿದ್ಯಮಾನಗಳು ಬದಲಾಗಿದ್ದ ಕಾರಣ ರಾಜ್ಯದ ಜನತೆ ಮಹಂತ ಅವರ ಮಾತನ್ನು ಕೇಳಿಸಿಕೊಳ್ಳಲಿಲ್ಲ. 2021ರ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇಲ್ಲ ಎಂಬ ಕಾರಣ ನೀಡಿ, ಅವರದೇ ಎಜಿಪಿ ಪಕ್ಷವು ಬಿಜೆಪಿಯ ಒತ್ತಡದ ಮೇರೆಗೆ ಅವರಿಗೆ ಬರ್ಹಾಂಪುರದಿಂದ ಸ್ಪರ್ಧಿಸಲು ಅವಕಾಶ ನಿರಾಕರಿಸಿತು. ಕೊನೆಗೆ ತಮ್ಮ ರಾಜಕೀಯ ವಿರೋಧಿಯಾಗಿದ್ದ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದೊಂದಿಗೆ ಕೈಜೋಡಿಸುವ ಅವರ ಕೊನೆಯ ಯತ್ನವೂ ವಿಫಲವಾಯಿತು.
ಒಂದು ಕಾಲದಲ್ಲಿ ಅಸ್ಸಾಂನ ಮೂಲೆಮೂಲೆಗಳಲ್ಲೂ ನವ ಜಾಗೃತಿ ಮೂಡಿಸಿ ಅತಿ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದ ಪ್ರಫುಲ್ಲ ಕುಮಾರ್ ಮಹಂತ ಅವರ ಕಥೆ ರೋಚಕ ಹಾಗೂ ಅಷ್ಟೇ ವಿಷಾದನೀಯ. ಅಸ್ಸಾಂನ ಮೂಲನಿವಾಸಿಗಳ ಹಿತರಕ್ಷಣೆಗಾಗಿ ಹೋರಾಡಿದ ಯುವಕನೊಬ್ಬ, ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಎದುರಿಸಿದ ಆಡಳಿತಾತ್ಮಕ ವೈಫಲ್ಯಗಳು, ಮಾನವ ಹಕ್ಕುಗಳ ಉಲ್ಲಂಘನೆಯ ಕಳಂಕ ಮತ್ತು ನಿರಂತರವಾಗಿ ಬದಲಾದ ರಾಜಕೀಯ ಸಮೀಕರಣಗಳಿಂದಾಗಿ ಇಂದು ಸ್ವಂತ ಪಕ್ಷದಲ್ಲೇ ಅನಾಥರಾಗಿದ್ದಾರೆ. ಇದು ಕೇವಲ ಒಬ್ಬ ಪ್ರಭಾವಿ ನಾಯಕನ ಪತನವಷ್ಟೇ ಅಲ್ಲ, ಒಂದು ಕಾಲದ ಪ್ರಬಲ ಪ್ರಾದೇಶಿಕ ಪಕ್ಷವೊಂದು ರಾಷ್ಟ್ರೀಯ ಪಕ್ಷದ ನೆರಳಿನಲ್ಲಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿರುವ ನೈಜ ಚಿತ್ರಣವಾಗಿದೆ.





