ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಮಾತಾಡಿರುವ ಎ ಆರ್ ರೆಹಮಾನ್ ಅವರು, “ಹಿಂದಿ ಚಿತ್ರರಂಗದಲ್ಲಿ ನನಗೆ ಸಿಗಬೇಕಾದ ಅವಕಾಶಗಳು ಕಳೆದ ಎಂಟು ವರ್ಷಗಳಿಂದ ಕೈ ತಪ್ಪುತ್ತಿದ್ದು, ಇದು ಕೋಮುವಾದಿ ಮನಸ್ಥಿತಿ ಇರಬಹುದು. ನಾನು ಮುಸಲ್ಮಾನ ಎಂಬ ಕಾರಣಕ್ಕೆ ನನಗೆ ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಸಿಗುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಭಾರತೀಯ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಅಪರೂಪದ ಪ್ರತಿಭೆಗಳಲ್ಲಿ ಎ ಆರ್ ರೆಹಮಾನ್ ಪ್ರಮುಖರು. ಕಳೆದ 4 ದಶಕಗಳಿಂದಲೂ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿರುವ ಅವರು ಆಸ್ಕರ್‌ನಂತಹ ಪ್ರತಿಷ್ಠಿತ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಹಿಟ್ ಹಾಡುಗಳನ್ನ ನೀಡಿರುವ ಅವರು ಕಳೆದ ಎಂಟು ವರ್ಷಗಳಿಂದ ಅವಕಾಶ ಸಿಗದೇ ವಂಚಿತರಾಗಿದ್ದಾರೆ.
ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಮಾತಾಡಿರುವ ಎ ಆರ್ ರೆಹಮಾನ್ ಅವರು, “ಹಿಂದಿ ಚಿತ್ರರಂಗದಲ್ಲಿ ನನಗೆ ಸಿಗಬೇಕಾದ ಅವಕಾಶಗಳು ಕಳೆದ ಎಂಟು ವರ್ಷಗಳಿಂದ ಕೈ ತಪ್ಪುತ್ತಿದ್ದು, ಇದು ಕೋಮುವಾದಿ ಮನಸ್ಥಿತಿ ಇರಬಹುದು. ನಾನು ಮುಸಲ್ಮಾನ ಎಂಬ ಕಾರಣಕ್ಕೆ ನನಗೆ ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಸಿಗುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ.
“ಹಿಂದಿ ಚಿತ್ರರಂಗದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅಧಿಕಾರದ ಹರಿವು ಬದಲಾಗಿದೆ. ಸೃಜನಶೀಲತೆಯಿಲ್ಲದ ಜನರ ಕೈಯಲ್ಲಿ ಈಗ ಅಧಿಕಾರವಿದೆ. ಇದು ಕೋಮುವಾದ ವಿಷಯವೂ ಆಗಿರಬಹುದು. ಆದರೆ, ಅದು ನನ್ನ ಮುಖದ ಮೇಲೆ ನೇರವಾಗಿ ಕಾಣಿಸುತ್ತಿಲ್ಲ. ಯಾರೋ ಕಿವಿಮಾತು ಹೇಳಿದಂತೆ ನನಗೆ ವಿಷಯಗಳು ತಿಳಿಯುತ್ತವೆ. ಈಗ ನನ್ನ ಕುಟುಂಬದ ಜತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿದೆ. ನಾನು ಕೆಲಸ ಹುಡುಕಾಟದಲ್ಲಿಲ್ಲ. ನಾನು ಕೆಲಸವನ್ನು ಹುಡುಕಲು ಬಯಸುವುದಿಲ್ಲ. ನನ್ನ ಅರ್ಹತೆ, ಪ್ರಾಮಾಣಿಕತೆಯಿಂದ ನಾನು ಕೆಲಸ ಪಡೆಯುತ್ತೇನೆ” ಎಂದು ಹೇಳಿದ್ದಾರೆ.
“ನನ್ನನ್ನೇ ಚಿತ್ರಕ್ಕೆ ಕೆಲವೊಮ್ಮೆ ಆಯ್ಕೆ ಮಾಡಿರುತ್ತಾರೆ. ಆದರೆ, ಸ್ವಲ್ಪ ಸಮಯದ ನಂತರ ಬೇರೆ ಐವರು ಸಂಗೀತ ನಿರ್ದೇಶಕರನ್ನ ನೇಮಕ ಮಾಡಿಕೊಳ್ಳುತ್ತಾರೆ. ಇದನ್ನ ಕೇಳಿದಾಗ ನನಗೆ ನಗು ಬರುತ್ತದೆ” ಎಂದರು.

” ‘ರೋಜಾ’, ‘ಬಾಂಬೆ’ ಮತ್ತು ‘ದಿಲ್ ಸೇ’ ಅಂತಹ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿದರೂ, ತಮಗೆ ಬಾಲಿವುಡ್‌ನಲ್ಲಿ ದೀರ್ಘಕಾಲದವರೆಗೆ ಒಬ್ಬ ‘ಹೊರಗಿನವ’ ಎಂಬ ಭಾವನೆಯೇ ಇತ್ತು ಎಂದು ರೆಹಮಾನ್ ಹೇಳಿದ್ದಾರೆ. ಸುಭಾಷ್ ಘಾಯ್ ಅವರ ‘ತಾಲ್’ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಉತ್ತರ ಭಾರತದ ಮನೆಮಾತಾಗಲು ಸಾಧ್ಯವಾಯಿತು” ಎಂದಿದ್ದಾರೆ.
ಇದಲ್ಲದೆ, ಬಾಲಿವುಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಹಿಂದಿ ಮಾತನಾಡದಿರುವುದು ಹೇಗೆ ತಡೆಗೋಡೆಯಾಯಿತು ಎಂಬುದರ ಕುರಿತು ಅವರು ಮಾತನಾಡಿದ್ದಾರೆ. ತಮಿಳು ವ್ಯಕ್ತಿಗೆ ಹಿಂದಿ ಮಾತನಾಡುವುದು ಕಷ್ಟ. ಆದರೆ, ಸುಭಾಷ್ ಘಾಯ್ ಅವರ ಸಲಹೆಯಂತೆ ಹಿಂದಿ ಕಲಿತು, ನಂತರ ಉರ್ದು ಮತ್ತು ಪಂಜಾಬಿ ಭಾಷೆಗಳ ಪ್ರಭಾವವನ್ನೂ ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.
ಸಂದರ್ಶನದಲ್ಲಿ ಹಲವಾರು ಅಂಶಗಳನ್ನ ಎ ಆರ್ ರೆಹಮಾನ್ ಬಿಚ್ಚಿಟ್ಟಿದ್ದಾರೆ. ಸದ್ಯ ರೆಹಮಾನ್ ಅವರ ಈ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
‘ಮೊಜಾರ್ಟ್ ಆಫ್ ಮದ್ರಾಸ್’ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವ ಎ ಆರ್ ರೆಹಮಾನ್ ಅವರು ಎರಡು ಅಕಾಡೆಮಿ ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು BAFTA ಪ್ರಶಸ್ತಿ, ಒಂದು ಗೋಲ್ಡನ್ ಗ್ಲೋಬ್, ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಾಲಿವುಡ್, ಕಾಲಿವುಡ್, ಹಾಲಿವುಡ್ ನಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ‘ಸ್ಲಮ್ ಡಾಗ್ ಮಿಲಿಯನೇರ್‘ ಚಿತ್ರಕ್ಕೆ ಎ ಆರ್ ರೆಹಮಾನ್ ಅವರು ಅದ್ಭುತ ಸಂಗೀತ ಸಂಯೋಜನೆ ನೀಡಿದ್ದರು. ‘ಜೈ ಹೋ‘ ಎಂಬ ಹಾಡು ಆ ಚಿತ್ರಕ್ಕೆ ಜಾಗತಿಕ ಯಶಸ್ಸು ತಂದುಕೊಟ್ಟಿತ್ತು. ಈ ಹಾಡು ಬಂದು 10 ವರ್ಷ ಕಳೆದರೂ ಜನರ ಮನಸ್ಸಲ್ಲಿ ಈ ಹಾಡು ನೆಲೆಯೂರಿದೆ.

ರೆಹಮಾನ್ ಅವರು ಕೇವಲ ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲದೆ, ನಿರ್ಮಾಪಕ, ನಿರ್ದೇಶಕ, ಶಿಕ್ಷಕ ಮತ್ತು ದೃಶ್ಯ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಮಾಡುತ್ತಿದ್ದಾರೆ. ಇದೀಗ, ಮೊದಲ ಬಾರಿಗೆ ಬಣ್ಣ ಹಚ್ಚಲು ಸಜ್ಜಾಗಿರುವ ಅವರು ಪ್ರಭುದೇವ ಅಭಿನಯದ ಕಾಮಿಡಿ ಚಿತ್ರ ‘ಮೂನ್ ವಾಕ್’ ಮೂಲಕ ಎ ಆರ್ ರೆಹಮಾನ್ ಅವರು ನಟರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಪ್ರತಿ ಪ್ರಾಜೆಕ್ಟ್‌ನಲ್ಲಿಯೂ ಎ.ಆರ್. ರೆಹಮಾನ್ ತಮ್ಮದೇ ಆದ ಸ್ಪರ್ಶವನ್ನು ನೀಡುತ್ತಾರೆ. ಅದು ಅವರ ಇತ್ತೀಚಿನ ವರ್ಚುವಲ್ ರಿಯಾಲಿಟಿ ಥ್ರಿಲ್ಲರ್ ಚಲನಚಿತ್ರ ‘ಲೇ ಮಸ್ಕ್’ ಆಗಿರಲಿ, ಹಿಂದಿ ಮತ್ತು ತಮಿಳು ಚಿತ್ರಗಳಿಗೆ ನೀಡಿರುವ ಅಸಂಖ್ಯಾತ ಸಂಗೀತ ಸಂಯೋಜನೆಗಳಾಗಿರಲಿ, ‘ಜೈ ಹೋ’ ಎಂಬ ಜಾಗತಿಕ ಟಾಪ್ ಹಿಟ್ ಹಾಡಾಗಿರಲಿ ಅಥವಾ ಮಿಕ್ ಜಾಗರ್, ಡೇವ್ ಸ್ಟುವರ್ಟ್, ಜಾಸ್ ಸ್ಟೋನ್ ಹಾಗೂ ಡೇಮಿಯನ್ ಮಾರ್ಲಿ ಅವರಂತಹ ವಿಶ್ವಪ್ರಸಿದ್ಧ ಕಲಾವಿದರ ಜೊತೆಗಿನ ಸಹಯೋಗವಾಗಿರಲಿ — ಎಲ್ಲೆಂದರಲ್ಲಿ ಅವರ ಸಂಗೀತದ ಮಾಯಾಜಾಲ ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಸುದ್ದಿ ಓದಿದ್ದೀರಾ? 2025ರಲ್ಲಿ ಕೋಮುದ್ವೇಷ ತೀವ್ರ ಏರಿಕೆ; ಮುಸ್ಲಿಮರೇ ಹೆಚ್ಚು ಗುರಿ: ವರದಿ
ಎ ಆರ್ ರೆಹಮಾನ್ ಅವರು ಭಾರತದ ಅತ್ಯಂತ ದುಬಾರಿ ಸಂಗೀತ ಸಂಯೋಜಕ. ಅವರು ಸಖತ್ ಬ್ಯುಸಿ ಕೂಡ ಹೌದು. ದೇಶ-ವಿದೇಶದಲ್ಲಿ ಅವರು ಸಾಕಷ್ಟು ಕಾನ್ಸರ್ಟ್‌ಗಳನ್ನು ಮಾಡುತ್ತಿರುತ್ತಾರೆ. ರೆಹಮಾನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದರೆ ಅದು ದೊಡ್ಡ ಚಾಲೆಂಜ್ ಆಗಿತ್ತು. ಈ ಹಿಂದೆ ನಟಿ ಶ್ರೀದೇವಿ ಅವರ ಕೊನೆಯ ಸಿನಿಮಾ ‘ಮಾಮ್’ ಎನ್ನುವ ಚಲನಚಿತ್ರದಲ್ಲಿ ರೆಹಮಾನ್ ಅವರನ್ನ ಸಂಗೀತ ಸಂಯೋಜಕರಾಗಿ ಕರೆತರುವುದಕ್ಕೆ, ರೆಹಮಾನ್ ಅವರು ತಂಡದಲ್ಲಿ ಇರಬೇಕು ಎನ್ನುವುದಕ್ಕೆ 70 ಲಕ್ಷ ರೂಪಾಯಿ ನೀಡಿದ್ದರು ಎನ್ನುವ ಸುದ್ದಿ ಇದೆ. ಶ್ರೀದೇವಿ ಅವರು ತಮ್ಮ ಸಂಭಾವನೆಯಲ್ಲಿ 70 ಲಕ್ಷ ಹಣ ನೀಡಿ ಬೋನಿ ಕಪೂರ್‌ಗೆ ರೆಹಮಾನ್ ಕರೆತರುವಂತೆ ತಿಳಿಸಿದ್ದರು.
ಎ.ಆರ್. ರೆಹಮಾನ್ ಅವರ ಹೇಳಿಕೆಗಳು ಕೇವಲ ವೈಯಕ್ತಿಕ ಅಸಮಾಧಾನವಲ್ಲ, ಬದಲಾಗಿ ಭಾರತೀಯ ಚಿತ್ರರಂಗದಲ್ಲಿ ನಡೆಯುತ್ತಿರುವ ಭೇದ ಭಾವವನ್ನು ಸೂಚಿಸುತ್ತದೆ. ಇಲ್ಲಿ ಕಲೆಗೆ ಬೆಲೆ ಇಲ್ಲವೇ ಇಲ್ಲ ಎನ್ನುವುದು ರೆಹಮಾನ್ ಅವರ ಮಾತುಗಳಿಂದ ತಿಳಿಯುತ್ತದೆ. ಸೃಜನಶೀಲತೆ, ಸಮಾನತೆ ಮತ್ತು ಕಲೆಗೆ ನೀಡುವ ಗೌರವವೇ ಕಲಾರಂಗದ ಮೂಲಭೂತ ಮೌಲ್ಯಗಳಾಗಬೇಕು. ಧರ್ಮ, ಗುರುತು ಅಥವಾ ಮನಸ್ಥಿತಿಗಳಿಂದ ಕಲಾವಿದರಿಗೆ ಅವಕಾಶಗಳು ಸಿಗುವುದಾದರೇ, ಕಲೆಗೆ ಸ್ವಾತಂತ್ರ್ಯ ಎಲ್ಲಿದೆ?




