ಹಗಲು ರೈಲ್ವೆ ಉದ್ಯೋಗಿ, ಸಂಜೆ ಶಿಕ್ಷಕ; ಇದು ಹಳ್ಳಿ ಮೇಷ್ಟ್ರು ವೀರಪ್ಪರ ಕಥೆ!

Date:

ಊರಲ್ಲಿ ಹುಟ್ಟಿ-ಬೆಳೆದು, ಶಿಕ್ಷಣ ಪಡೆದು ನೌಕರಿ ಗಿಟ್ಟಿಸಿದ ಬಳಿಕ ಹೆಚ್ಚಿನವರು ನಗರಕ್ಕೆ ತೆರಳಿ ಆರಾಮದಾಯಕ ಬದುಕು ಕಟ್ಟಿಕೊಳ್ಳುವುದನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಸರ್ಕಾರಿ ಮೇಷ್ಟ್ರು ಆ ದಾರಿಯನ್ನು ಆರಿಸಿಕೊಳ್ಳಲಿಲ್ಲ. ನೌಕರಿಯ ಜೊತೆಗೆ ತಮ್ಮ ಹಳ್ಳಿಯ ಮಕ್ಕಳ ಭವಿಷ್ಯದ ಹೊಣೆ ಹೊತ್ತು, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ತಲುಪಬೇಕು ಎಂಬ ಉದ್ದೇಶದಿಂದ ʼಹಳ್ಳಿರಂಗ ಶಾಲೆʼ ಆರಂಭಿಸಿದರು. ಇಲ್ಲಿ ಗೋಡೆಗಳಿಲ್ಲದ ತರಗತಿಗಳಲ್ಲಿ ಅಕ್ಷರಜ್ಞಾನದಿಂದ ಬದುಕಿನ ಮೌಲ್ಯಗಳವರೆಗೆ ಮಕ್ಕಳಿಗೆ ಕಲಿಸುತ್ತಾ, ʼನಾನು ಓದಲು ಬಲ್ಲೆʼ ಎಂಬ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸುತ್ತಿದ್ದಾರೆ. ಆರಾಮದ ಬದುಕಿನ ಬದಲು ಅರ್ಥಪೂರ್ಣ ಬದುಕನ್ನು ಆಯ್ದುಕೊಂಡ ಅವರ ಈ ಪ್ರಯತ್ನ, ಊರಿಗೆ ಬೆಳಕಾಗಿದೆ. ಅವರೇ ಮೇಷ್ಟ್ರು ವೀರಪ್ಪ ತಾಳದವರ.

ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದವರಾದ ವೀರಪ್ಪ ತಾಳದವರ, 2008ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಪೊಲೀಸ್ ಹುದ್ದೆಗೆ ನೇಮಕವಾಗಿ ಸೇವೆ ಆರಂಭಿಸಿದವರು. ನಂತರ ರೈಲ್ವೆ ಇಲಾಖೆಯಲ್ಲಿ ಸಹಾಯಕ ನಿರ್ವಾಹಕರಾಗಿ ಬಾಗಲಕೋಟೆಯಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಆದರೆ ನೌಕರಿಯ ಭದ್ರತೆ ಮತ್ತು ನಗರಜೀವನದ ಅವಕಾಶಗಳ ನಡುವೆ ಅವರ ಮನಸ್ಸು ಯಾವತ್ತೂ ಹುಟ್ಟಿ ಬೆಳೆದ ಊರಿನತ್ತಲೇ ಇತ್ತು. ಬದುಕು ಕೊಟ್ಟ ಮಣ್ಣಿಗೆ ಏನಾದರೂ ಮರಳಿಸಿ ಕೊಡಬೇಕೆಂಬ ಕನಸು ಅವರೊಳಗೆ ಬೆಳೆದಿತ್ತು. “ಊರಿಗೆ ಮರಳುವುದಾದರೆ ಖಾಲಿಹಸ್ತದಿಂದಲ್ಲ, ಕೊಡುಗೆಯೊಂದಿಗೆ” ಎಂಬ ಆಲೋಚನೆ ಅವರ ಬದುಕಿನ ದಿಕ್ಕು ರೂಪಿಸಿತು. ಊರಿನ ಮಕ್ಕಳ ಭವಿಷ್ಯಕ್ಕೆ ಬೆಳಕಾಗುವ ಸಂಕಲ್ಪ ಅಂದೇ ಅವರ ಹೃದಯದಲ್ಲಿ ಗಟ್ಟಿಗೊಳಿಸಿಕೊಂಡರು.

WhatsApp Image 2026 03 11 at 4.40.51 PM 1

2019ರಲ್ಲಿ ಬಾಗಲಕೋಟೆಯಲ್ಲಿ ಸೇವೆಯಲ್ಲಿದ್ದ ವೀರಪ್ಪ ತಾಳದವರು ಪದೋನ್ನತಿ ಪಡೆದು, ಊರಿಗೆ ಹತ್ತಿರದ ಗದಗ ಜಿಲ್ಲೆಯ ಹೊಂಬಳ ರೈಲ್ವೆ ಸ್ಟೇಷನ್‌ಗೆ ವರ್ಗಾವಣೆಗೊಂಡು ಬಂದರು. ಊರಿಗೆ ಸಮೀಪವಾಗಿದ್ದ ಈ ದಿನಗಳಲ್ಲಿ ಅವರು ಊರ ಓಣಿಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿರುವ ಮಕ್ಕಳನ್ನು ಗಮನಿಸುತ್ತಿದ್ದರು. ಈ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಕ್ಕರೆ ಅವರ ಬದುಕೇ ಬದಲಾಗಬಹುದಲ್ಲವೆ? ಎಮದುಕೊಂಡರು. ಆ ಚಿಂತನೆಯಿಂದಲೇ ಅವರು ತಮ್ಮ ಮನೆಯಲ್ಲಿಯೇ ‘ಹಳ್ಳಿರಂಗ ಶಾಲೆ’ ಆರಂಭಿಸಿದರು. ಹಗಲಿನಲ್ಲಿ ರೈಲ್ವೆ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಸಂಜೆ ಆಗುತ್ತಿದ್ದಂತೆ ಮೇಷ್ಟ್ರಾಗಿ ರೂಪಾಂತರಗೊಂಡು, ಗ್ರಾಮೀಣ ಮಕ್ಕಳಿಗೆ ಅಕ್ಷರಜ್ಞಾನದಿಂದ ಬದುಕಿನ ಪಾಠಗಳವರೆಗೆ ಕಲಿಸುವ ಕಾರ್ಯಕ್ಕೆ ತೊಡಗಿದರು. ನೌಕರಿಯ ಜೊತೆಗೆ ಸಮಾಜದ ಹೊಣೆ ಹೊತ್ತ ಅವರ ಈ ಪ್ರಯತ್ನ, ಹಳ್ಳಿಯ ಮಕ್ಕಳ ಭವಿಷ್ಯಕ್ಕೆ ಹೊಸ ದಿಕ್ಕು ನೀಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಳ್ಳಿರಂಗ ಶಾಲೆಗೆ ಬರುವ ಮಕ್ಕಳು ಯಾವುದೇ ರೀತಿಯ ಶುಲ್ಕ ಕಟ್ಟಬೇಕಾಗಿಲ್ಲ. ಎಲ್ಲ ಮಕ್ಕಳಿಗೂ ಇಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಸಿಗುತ್ತದೆ. ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಕಲಿಕೆಗೆ ಸಮಾನ ಮಹತ್ವ ನೀಡಲಾಗುತ್ತಿದ್ದು, ಮಕ್ಕಳೊಳಗಿನ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದೇ ಹಳ್ಳಿರಂಗ ಶಾಲೆಯ ಉದ್ದೇಶ. ಕಥೆ ಹೇಳಿಕೆ, ಕವನ ರಚನೆ, ಚಿತ್ರಕಲೆ, ಹಾಡು, ನಾಟಕ, ಜನಪದ ಕಲೆಗಳ ಮೂಲಕ ಮಕ್ಕಳ ಸೃಜನಶೀಲತೆಯನ್ನು ಬೆಳೆಸಲಾಗುತ್ತಿದೆ. ʼಪ್ರತಿ ಮಗು ವಿಶೇಷ; ಆ ವಿಶೇಷತೆಯನ್ನು ಹೊರತರುವುದೇ ನಮ್ಮ ಪ್ರಯತ್ನʼ ಎಂದು ವೀರಪ್ಪ ತಾಳದವರು ಹೇಳುವಂತೆ, ಹಳ್ಳಿರಂಗ ಶಾಲೆ ಪಾಠಶಾಲೆಯಷ್ಟೇ ಅಲ್ಲ, ಮಕ್ಕಳ ಪ್ರತಿಭೆ ಅರಳುವ ಸೃಜನಶೀಲ ಆವರಣವಾಗಿಯೂ ರೂಪುಗೊಂಡಿದೆ.

ಸ್ವತಃ ಕವಿಯಾಗಿರುವ ಅವರು ರಚಿಸಿದ ಕವಿತೆಗಳನ್ನು ಮಕ್ಕಳಿಗೆ ಓದಿಸಿ, ಕಲ್ಪನಾಶಕ್ತಿಯನ್ನು ಬೆಳೆಸುತ್ತಾರೆ; ಜೊತೆಗೆ ಚಿತ್ರ ಬಿಡಿಸುವ ಕೌಶಲ್ಯವನ್ನೂ ಕಲಿಸುತ್ತಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳ ಕುರಿತು ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಜಾಗತಿಕ ಅರಿವು ಮೂಡಿಸಲಾಗುತ್ತದೆ. ಈ ಸಮಗ್ರ ಕಲಿಕೆಯು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗುವುದರೊಂದಿಗೆ, ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕುವ ಧೈರ್ಯವನ್ನು ಮಕ್ಕಳಲ್ಲಿ ತುಂಬುವ ಕಾರ್ಯವನ್ನು ಹಳ್ಳಿರಂಗ ಶಾಲೆ ಮಾಡುತ್ತಿದೆ.

ಹಳ್ಳಿರಂಗ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ಭೇದಭಾವವಿಲ್ಲದೆ ಸಮವಸ್ತ್ರ ಒದಗಿಸಲಾಗಿದ್ದು, ಸಮಾನತೆ ಮತ್ತು ಶಿಸ್ತಿನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದಂತಹ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಹಬ್ಬಗಳ ಸಂದರ್ಭದಲ್ಲಿ, ಹಳ್ಳಿರಂಗ ಶಾಲೆಯ ಮಕ್ಕಳು ಶಿಸ್ತುಬದ್ಧವಾಗಿ ಸಮವಸ್ತ್ರ ಧರಿಸಿ ಗ್ರಾಮದಲ್ಲಿ ಪೆರೇಡ್ ನಡೆಸಿ ಸಂಚರಿಸುವ ದೃಶ್ಯ ನೋಡುಗರ ಮನ ಸೆಳೆಯುತ್ತದೆ. ಈ ಆಚರಣೆಗಳು ಮಕ್ಕಳಲ್ಲಿ ದೇಶಭಕ್ತಿ, ಒಗ್ಗಟ್ಟು ಮತ್ತು ಜವಾಬ್ದಾರಿಯ ಭಾವವನ್ನು ಗಟ್ಟಿಗೊಳಿಸುವುದರೊಂದಿಗೆ, ಗ್ರಾಮೀಣ ಪರಿಸರದಲ್ಲಿಯೇ ಒಂದು ಸಶಕ್ತ ಹಾಗೂ ಶಿಸ್ತಿನ ಶಿಕ್ಷಣ ಸಂಸ್ಕೃತಿಯನ್ನು ರೂಪಿಸುತ್ತಿವೆ.

ಧಾರವಾಡದ ರಂಗಾಯಣದಲ್ಲಿ ನಡೆದ ರಂಗ ಮಹೋತ್ಸವದಲ್ಲಿ ವೀರಪ್ಪ ತಾಳದವರು ‘ಎಲ್ಲಿ ಹೋದವು ಆ ದಿನಗಳು’ ಎಂಬ ನಾಟಕವನ್ನು ನಿರ್ದೇಶಿಸಿ, ಹಳ್ಳಿರಂಗ ಶಾಲೆಯ ಮಕ್ಕಳ ಮೂಲಕವೇ ಅದನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಗ್ರಾಮೀಣ ಮಕ್ಕಳ ಅಭಿನಯ, ಶಿಸ್ತು ಮತ್ತು ವಿಷಯದ ಗಂಭೀರತೆ ರಂಗಾಸಕ್ತರ ಗಮನ ಸೆಳೆದು, ಹಳ್ಳಿಯ ಮಕ್ಕಳಲ್ಲೂ ವೇದಿಕೆಯ ಸಾಮರ್ಥ್ಯ ಅಡಗಿದೆ ಎಂಬುದನ್ನು ಈ ಪ್ರದರ್ಶನ ಸಾಬೀತುಪಡಿಸಿತು. ಹಳ್ಳಿರಂಗ ಶಾಲೆ ಕೇವಲ ಪಾಠಶಾಲೆಯಲ್ಲ, ಮಕ್ಕಳ ಪ್ರತಿಭೆ ರಾಷ್ಟ್ರೀಯ ಮಟ್ಟದ ವೇದಿಕೆಗೂ ತಲುಪಿಸಬಲ್ಲ ಸೃಜನಶೀಲ ಪ್ರಯೋಗಶಾಲೆ ಎಂಬುದನ್ನು ಈ ನಾಟಕ ಸ್ಪಷ್ಟಪಡಿಸಿತು.

WhatsApp Image 2026 03 11 at 4.40.52 PM

ಹಳ್ಳಿರಂಗ ಶಾಲೆಯ ಮಕ್ಕಳಲ್ಲಿ ಓದು ಮತ್ತು ಸಾಹಿತ್ಯದ ಅಭಿರುಚಿ ಮೂಡಿಸಬೇಕು ಎಂಬ ಉದ್ದೇಶದಿಂದ ವೀರಪ್ಪ ತಾಳದವರು ತಮ್ಮದೇ ಮುಂದಾಳತ್ವದಲ್ಲಿ ಒಂದು ಸಣ್ಣ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ದಿನನಿತ್ಯ ಕತೆ, ಕವನ, ಕಾದಂಬರಿಗಳನ್ನು ಮನೆಗೆ ತೆಗೆದುಕೊಂಡು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಜೊತೆಗೆ ದಿನಪತ್ರಿಕೆಗಳನ್ನು ಓದುವ ಮೂಲಕ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ವಿದ್ಯಮಾನಗಳ ಕುರಿತು ಅರಿವು ಪಡೆಯುತ್ತಿದ್ದಾರೆ. ಈ ಗ್ರಂಥಾಲಯ ಮಕ್ಕಳಿಗೆ ಅಕ್ಷರಜ್ಞಾನವಷ್ಟೇ ಅಲ್ಲ, ಚಿಂತನೆ, ಪ್ರಶ್ನಿಸುವ ಮನೋಭಾವ ಮತ್ತು ಜಾಗೃತ ನಾಗರಿಕತ್ವವನ್ನು ಬೆಳೆಸುವ ಜೀವಂತ ಕಲಿಕಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಗದಗ | ದೊಡ್ಡೂರ ಗ್ರಾಮ ಪಂಚಾಯಿತಿಯಲ್ಲಿ ಉಚಿತ ಆರೋಗ್ಯ ಶಿಬಿರ 

ಹಳ್ಳಿರಂಗ ಶಾಲೆ ಮೂಲಕ ಮಕ್ಕಳಿಗೆ ಪಾಠದ ಜೊತೆಗೆ ಸೃಜನಶೀಲತೆಯನ್ನೂ ಕಲಿಸುತ್ತಿರುವ ವೀರಪ್ಪ ತಾಳದವರ ನಿಸ್ವಾರ್ಥ ಸೇವೆಯನ್ನು ಪ್ರಜಾವಾಣಿ ಗುರುತಿಸಿ, ಅವರಿಗೆ ʼಪ್ರಜಾವಾಣಿ ಸಾಧಕರುʼ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗ್ರಾಮೀಣ ಮಕ್ಕಳಲ್ಲಿ ಅಕ್ಷರಜ್ಞಾನ, ಕಲಾತ್ಮಕತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಅವರ ಈ ವಿಭಿನ್ನ ಶಿಕ್ಷಣ ಪ್ರಯೋಗವು ಸಮಾಜದ ಮೆಚ್ಚುಗೆಗೂ ಪಾತ್ರವಾಗಿದ್ದು, ಒಬ್ಬ ಮೇಷ್ಟ್ರು ಬಯಸಿದರೆ ಒಂದು ಹಳ್ಳಿಯ ಭವಿಷ್ಯವನ್ನೇ ರೂಪಿಸಬಹುದು ಎಂಬುದಕ್ಕೆ ವೀರಪ್ಪ ತಾಳದವರು ಜೀವಂತ ಉದಾಹರಣೆಯಾಗಿದ್ದಾರೆ.

ಗದಗ ಜಿಲ್ಲೆಯಾದ್ಯಂತ ಹಳ್ಳಿರಂಗ ಶಾಲೆ ಮನೆಮಾತಾಗಿದ್ದು, ವೀರಪ್ಪ ತಾಳದವರ ಶಿಕ್ಷಣ ಪ್ರಯೋಗ ಗ್ರಾಮೀಣ ಸಮಾಜಕ್ಕೆ ಹೊಸ ದಿಕ್ಕು ನೀಡಿದೆ. ಊರಲ್ಲೇ ಹುಟ್ಟಿ, ಬೆಳೆದು, ಶಿಕ್ಷಣ ಪಡೆದು, ಬದುಕು ಕಟ್ಟಿಕೊಳ್ಳಲು ಊರಿನಿಂದಲೇ ಎಲ್ಲವನ್ನೂ ಪಡೆದು ವಿದ್ಯಾವಂತರಾಗಿ ನಗರಗಳಲ್ಲಿ ನೆಲೆಸಿರುವವರು, ಕವಿ ವೀರಪ್ಪ ತಾಳದವರಂತೆ ಮತ್ತೆ ಹಳ್ಳಿಯತ್ತ ಮುಖ ಮಾಡಿ ಗ್ರಾಮೀಣ ಮಕ್ಕಳಿಗೆ ಅಕ್ಷರ ಕಲಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾದ ಅಗತ್ಯವಿದೆ. ಮಹಾತ್ಮ ಗಾಂಧಿ ಅವರು ಹೇಳಿದಂತೆ, “ಹಳ್ಳಿಗಳು ಉದ್ದಾರವಾಗದೇ ದೇಶ ಉದ್ಧಾರವಾಗಲು ಸಾಧ್ಯವಿಲ್ಲ”. ಆ ಮಾತಿಗೆ ಅರ್ಥ ತುಂಬುವಂತೆ ಹಳ್ಳಿಯ ಮಕ್ಕಳಿಗೆ ಶಿಕ್ಷಣ, ಆತ್ಮವಿಶ್ವಾಸ ಮತ್ತು ಭವಿಷ್ಯದ ಕನಸುಗಳನ್ನು ನೀಡುತ್ತಿರುವ ವೀರಪ್ಪ ತಾಳದವರು ನಮ್ಮ ಕಾಲದ ನಿಜವಾದ ಮಾದರಿಯಾಗಿದ್ದಾರೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...