ರಾಮಚಂದ್ರ ಗುಹಾ: ಯುವ ಇತಿಹಾಸಕಾರನ ಪ್ರಬಂಧಕ್ಕೆ ಹಿರಿಯ ಇತಿಹಾಸಕಾರನ ಮೆಚ್ಚುಗೆ!

Date:

2020ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಬಂಧಿಯಾಗಿ, ಯಾವುದೇ ವಿಚಾರಣೆಯೂ ಇಲ್ಲದೆ, ಜಾಮೀನು ದೊರೆಯದೆ ಕಳೆದ 5 ವರ್ಷಗಳಿಂದ ಜೈಲಿನಲ್ಲಿರುವ ಡಾ ಉಮರ್‌ ಖಾಲಿದ್‌ ಅವರು 2018ರಲ್ಲಿ ಡಾಕ್ಟರೇಟ್‌ ಪ್ರಬಂಧವನ್ನು ಸಲ್ಲಿಸಿದ್ದರು. ಆ ಪ್ರಬಂಧವನ್ನು ಹಿರಿಯ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಓದಿದ್ದಾರೆ. ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಂಕಣ ಬರೆದಿದ್ದಾರೆ. 'ದಿ ಕ್ವಿಂಟ್‌'ನಲ್ಲಿ ಪ್ರಕಟಗೊಂಡ ಲೇಖನದ ಕನ್ನಡಾನುವಾದ ಇಲ್ಲಿದೆ

ಆರಂಭಿಕ ರೊಮ್ಯಾಂಟಿಕ್ ಪ್ರೇಮಾಕರ್ಷಣೆಗಳು ಅಪರೂಪವಾಗಿ ಉಳಿಯುತ್ತವೆ. ಆದರೆ, ಆರಂಭಿಕ ವಿದ್ವತ್ತಿನ ಆಸಕ್ತಿಗಳು ಹೆಚ್ಚಾಗಿ ಅಚ್ಚಳಿಯದೆ ಉಳಿದುಬಿಡುತ್ತವೆ. ನಾನು ನನ್ನ ವೃತ್ತಿಜೀವನವನ್ನು ಆರಂಭಿಸಿದ್ದು; ಬ್ರಿಟಿಷ್ ವಸಾಹತು ಆಡಳಿತದಿಂದ ತೀವ್ರವಾಗಿ ಬಾಧಿಸಲ್ಪಟ್ಟಿದ್ದ ಅರಣ್ಯವಾಸಿ ಸಮುದಾಯಗಳ ಇತಿಹಾಸವನ್ನು ಹುಡುಕುವ ಮೂಲಕ. ನಂತರ ನಾನು ಇತರ ದಿಕ್ಕುಗಳಲ್ಲಿ ಸ್ವಲ್ಪ ವಿಚಲಿತನಾದರೂ, ನಾನು ವೃತ್ತಿ ಆರಂಭಿಸಿದ ಕ್ಷೇತ್ರದೊಂದಿಗೆ ನಿರಂತರ ಸಂಪರ್ಕ ಉಳಿಸಿಕೊಂಡಿದ್ದೇನೆ. ವಾಸ್ತವವಾಗಿ, ನಾನು ಕಳೆದ ವಾರ ನನ್ನ ದಿನಗಳನ್ನು ಯುವ ವಿದ್ವಾಂಸರೊಬ್ಬರ ಡಾಕ್ಟರೇಟ್ ಪ್ರಬಂಧವನ್ನು ಓದುವುದರಲ್ಲಿ ಕಳೆದೆ. ಜಾರ್ಖಂಡ್ ರಾಜ್ಯದ ಸಾಮಾಜಿಕ ಮತ್ತು ಪರಿಸರ ಇತಿಹಾಸವನ್ನು ಸಂಶೋಧಿಸಿರುವ ಪ್ರಬಂಧವದು. ಪ್ರಬಂಧ ಎಷ್ಟು ಉತ್ತಮವಾಗಿದೆ ಎಂದರೆ, ಅದು ನನ್ನನ್ನು ಆಶ್ಚರ್ಯಚಕಿತಗೊಳಿಸಿತು. ಈ ಅಂಕಣವನ್ನು ಬರೆಯುವಂತೆ ಪ್ರರೇಪಿಸಿತು.

ಈ ಥೀಸಿಸ್ ಬ್ರಿಟಿಷ್ ಆಳ್ವಿಕೆಯಡಿ ಸಿಂಗ್ಭೂಮ್ ಪ್ರದೇಶದಲ್ಲಿ ಆದಿವಾಸಿ ಸಮುದಾಯದ ಮೇಲಾದ ಪರಿಣಾಮ ಮತ್ತು ಪರಿವರ್ತನೆಗಳ ಮೇಲೆ ಕೇಂದ್ರೀಕರಿಸಿದೆ. ಮೊದಲು ಈಸ್ಟ್ ಇಂಡಿಯಾ ಕಂಪನಿ ಆ ಪ್ರದೇಶದ ಮೇಲೆ ಸೈನಿಕ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ಹಂತಹಂತವಾಗಿ ಹೇಗೆ ಹೇರಿತು ಎಂಬುದನ್ನು ದಾಖಲಿಸುತ್ತದೆ. ನಂತರ ವಸಾಹತುಶಾಹಿ ಆಡಳಿತದಲ್ಲಿ ಸಿಂಗ್ಭೂಮ್ ಪ್ರದೇಶದಲ್ಲಿ ನೈಸರ್ಗಿಕ ಭೂದೃಶ್ಯ, ಕಾನೂನು ಚೌಕಟ್ಟು, ಆರ್ಥಿಕ ಮತ್ತು ರಾಜಕೀಯ ರಚನೆಗಳು ಯಾವ ರೀತಿಯಲ್ಲಿ ಅಮೂಲಾಗ್ರವಾಗಿ ಮರುರೂಪುಗೊಂಡಿತು ಎಂಬುದನ್ನು ವಿವರಿಸುತ್ತದೆ.

ಪ್ರಮುಖ ವಿಷಯಗಳಲ್ಲಿ ವಸಾಹತು ಅರಣ್ಯ ನೀತಿಯ ವಾಣಿಜ್ಯ ಪಕ್ಷಪಾತಗಳು, ಹೊಸ ವ್ಯವಸ್ಥೆಯೊಂದಿಗೆ ಮಾತುಕತೆ ನಡೆಸಬೇಕಾದ ಗ್ರಾಮ ಮುಖಂಡರ ಬದಲಾಗುತ್ತಿರುವ ಸ್ಥಾನಮಾನ ಹಾಗೂ ವಸಾಹತು ಆಡಳಿತದಿಂದ ತಮ್ಮ ಜೀವನದಲ್ಲಿ ಉಂಟಾದ ಪರಿವರ್ತನೆಗಳಿಗೆ ಆದಿವಾಸಿ ಸಮುದಾಯಗಳ ಪ್ರತಿಕ್ರಿಯೆಗಳು ಹೇಗಿದ್ದವು ಎಂಬುದರ ಮೇಲೆ ಪ್ರಬಂಧ ಬೆಳಕು ಚೆಲ್ಲಿದೆ. ಪರಿಸರ ವಿಜ್ಞಾನ, ಸಮಾಜ ಮತ್ತು ರಾಜಕೀಯದ ಮೇಲೆ ಪ್ರಬಂಧವು ಕೇಂದ್ರೀಕರಿಸಿದ್ದರೂ, ಈ ವಿದ್ವಾಂಸರು ಬೌದ್ಧಿಕ ಇತಿಹಾಸಕ್ಕೂ ಯಥೋಚಿತ ಗಮನ ನೀಡಿದ್ದಾರೆ; ಸಿಂಗ್ಭೂಮ್‌ನ ಆದಿವಾಸಿಗಳ ಬಗ್ಗೆ ಯುರೋಪಿಯನ್ ಅಧಿಕಾರಿಗಳು ಮತ್ತು ಭಾರತೀಯ ಮಾನವಶಾಸ್ತ್ರಜ್ಞರ ಕೃತಿಗಳ ತೀಕ್ಷ್ಣ ವಿಶ್ಲೇಷಣೆಗಳನ್ನು ಪ್ರಸ್ತುತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಯುವ ಇತಿಹಾಸಕಾರರ ಪ್ರಬಂಧವು ಒಳಗೊಂಡಿರುವ ಆರು ಮಹತ್ವದ ಗುಣಲಕ್ಷಣಗಳನ್ನು ನಾನು ಕೆಳಗೆ ಚರ್ಚಿಸುತ್ತೇನೆ:

ಮೊದಲನೆಯದು, ಝಾರ್ಖಂಡ್‌ನ ಬುಡಕಟ್ಟುಗಳ ಬಗ್ಗೆಯೇ ಆಗಿರಲಿ ಅಥವಾ ಭಾರತದ ಇತರ ಭಾಗಗಳ ಬುಡಕಟ್ಟುಗಳ ಬಗ್ಗೆಯೇ ಆಗಿರಲಿ, ಪ್ರಸಿದ್ಧ ಬರಹಗಾರರದ್ದೇ ಆಗಿರಲಿ ಅಥವಾ ಹೆಚ್ಚು ಪ್ರಸಿದ್ಧರಲ್ಲದ ಬರಹಗಾರರು ಬರೆದ ಸಾಹಿತ್ಯದ ಮೇಲೆ ಅಧಿಕಾರಯುತವಾದ ಆಳವಾದ ಜ್ಞಾನ.

ಎರಡನೆಯದು, ವಿವಿಧ ಮೂಲಗಳ ಪ್ರಾಥಮಿಕ ದಾಖಲೆಗಳನ್ನು ಹುಡುಕಿ ಬಳಸಿಕೊಳ್ಳುವ ಸಾಮರ್ಥ್ಯ. ಈ ಪ್ರಬಂಧವು ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ದಾಖಲೆಗಳಲ್ಲಿ ನಡೆಸಿದ ಬೃಹತ್ ಪ್ರಮಾಣದ ಸಂಶೋಧನೆಯ ಮೇಲೆ ನಿಂತಿದೆ; ಜೊತೆಗೆ ಶತಮಾನಕ್ಕೂ ಹೆಚ್ಚು ಹಿಂದೆ ಪ್ರಕಟವಾದ  ಹೆಚ್ಚು ಗಮನ ಸೆಳೆಯದೇ ಉಳಿದಿದ್ದ ಲೇಖನಗಳು ಮತ್ತು ಪುಸ್ತಕಗಳ ಅವಲೋಕನಗಳನ್ನು ಒಳಗೊಂಡಿದೆ.

ಮೂರನೆಯದು, ಅಧ್ಯಯನ ನಡೆದಿದ್ದ ಪ್ರದೇಶದಲ್ಲಿ ಕ್ಷೇತ್ರಕಾರ್ಯದ ಮೂಲಕ ಪೂರಕ ಜ್ಞಾನವನ್ನು ಪಡೆಯುವ ಇಚ್ಛಾಶಕ್ತಿ. ಮಹಾನ್ ಫ್ರೆಂಚ್ ಇತಿಹಾಸಕಾರ ಮಾರ್ಕ್ ಬ್ಲಾಚ್ ಅವರ ‘ಇತಿಹಾಸಕಾರನಿಗೆ ದಪ್ಪ ನೋಟ್‌ಬುಕ್‌ಗಳಷ್ಟೇ ಅಲ್ಲ, ದಪ್ಪ ಬೂಟುಗಳೂ ಬೇಕು’ ಎಂಬ ಮಾತನ್ನು ಈ ವಿದ್ವಾಂಸರು ಹೃದಯಕ್ಕೆ ತೆಗೆದುಕೊಂಡಂತೆ ತೋರುತ್ತದೆ.

ನಾಲ್ಕನೆಯದು, ತನ್ನ ತರ್ಕ ಮತ್ತು ವಾದಗಳನ್ನು ವಿವರಿಸಲು ಪ್ರಾಥಮಿಕ ಮೂಲಗಳಿಂದ ರೋಚಕವಾದ ಉಲ್ಲೇಖಗಳನ್ನು ಆಯ್ಕೆ ಮಾಡುವ ದೃಷ್ಟಿ. ಉದಾಹರಣೆಗೆ, 19ನೇ ಶತಮಾನದಲ್ಲಿ ಅರಣ್ಯಗಳಲ್ಲಿ ನಡೆದ ಬೇಟೆಯ ಬಗ್ಗೆ ಬರೆಯುತ್ತಾ, ಯಾವಾಗಲೂ ಬದಲಾಗದಂತೆ ಕಾಣುವ ಆದಿವಾಸಿ ಜೀವನದ ಬಣ್ಣಬಣ್ಣದ ಚಿತ್ರಣವನ್ನು ನೀಡುತ್ತಾ ಒಬ್ಬ ಬ್ರಿಟಿಷ್ ಅಧಿಕಾರಿ ಹೀಗೆ ಬರೆದಿದ್ದಾರೆ: “ಇಲ್ಲಿ ಹೂವುಗಳು ಮತ್ತು ಗರಿಗಳಿಂದ ಅಲಂಕರಿಸಲ್ಪಟ್ಟ ಸೊಂಟಾಲರು, ಬೋರಾಭೂಮ್‌ನ ಲಕ್ಕಿಸಿನ್ನಿ ಬೆಟ್ಟಗಳಿಂದ ಬಂದ ಕಾಡು ಕುರ್ರಿಯಾಗಳು ಅಥವಾ ಬೆಟ್ಟದ ಪುರುಷರು; ಕೂರ್ಮಿಗಳು, ಟೌಂಟಿಗಳು, ಸೂಂಡೀಸ್, ಗ್ವಲ್ಲಾಸ್, ಭೂಮಿಜ್‌ಗಳು ಇತ್ಯಾದಿ ಜನರು ಪಿತ್‌ನಿಂದ ಮಾಡಿದ ಸ್ಟ್ರೀಮರ್‌ಗಳಿಂದ ಅಲಂಕರಿಸಲ್ಪಟ್ಟ ಕೊಳಲುಗಳು, ‘ಡಮ್ಮಾಗಳು’ ಅಥವಾ ಕೆಟಲ್ ಡ್ರಮ್‌ಗಳ ಸಂಗೀತದೊಂದಿಗೆ ಹಾಡುತ್ತಾ ಕುಣಿಯುವುದರ ಜೊತೆಗೆ, ಕತ್ತಿಗಳು, ಬುಲ್ವಾಗಳು ಹಾಗೂ ಬಿಲ್ಲು-ಬಾಣಗಳಿಂದ ಶಸ್ತ್ರಸಜ್ಜಿತರಾಗಿದ್ದಾರೆ; ಅವರು ಸರಳ ಮತ್ತು ಆಡಂಬರವಿಲ್ಲದವರು. ಆದರೆ ಅತಿ ಭಾರವಾದ ಆಟದ ಚೀಲಗಳನ್ನು ಹೊಂದಿದ್ದಾರೆ…”

ಇನ್ನೊಂದು ಉಲ್ಲೇಖವು ಒಂದು ಶತಮಾನದ ಹಿಂದಿನ ಆರ್ಕೈವ್‌ಗಳಿಂದ ಪಡೆದುಕೊಂಡದ್ದು, 1920ರ ದಶಕದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದ ಒಬ್ಬರು ಹೀಗೆ ಹೇಳಿದ್ದಾರೆ (ಅನುವಾದದಲ್ಲಿ): “ಸ್ವರಾಜ್ಯ ಈಗ ಸಾಧಿಸಲ್ಪಟ್ಟಿದೆ ಮತ್ತು ಗಾಂಧೀಜಿ ಅದರ ಮುಖ್ಯಸ್ಥರಾಗಿದ್ದಾರೆ. ಇಂಗ್ಲಿಷರು ದೇಶವನ್ನು ಬಿಟ್ಟು ಹೋಗುತ್ತಿದ್ದಾರೆ ಮತ್ತು ಚೈಬಾಸದಲ್ಲಿರುವ ಕೆಲವು ಇಂಗ್ಲಿಷರು ಮೂರು ನಾಲ್ಕು ತಿಂಗಳಲ್ಲಿ ಓಡಿಹೋಗುತ್ತಾರೆ. ಯಾವುದೇ ಬಾಡಿಗೆ ಕಟ್ಟಬೇಕಿಲ್ಲ. ಗಾಂಧಿ ಮಹಾತ್ಮರು ಒಂದು ಶಾಲೆಯನ್ನು ಸ್ಥಾಪಿಸುತ್ತಾರೆ ಮತ್ತು ಬ್ರಿಟಿಷ್‌ ಸರ್ಕಾರದ ಶಾಲೆಗಳನ್ನು ನಾಶಮಾಡಲಾಗುತ್ತದೆ. ಗಾಂಧಿಯವರ ಶಾಲೆಯಲ್ಲಿ ಯಾವುದೇ ಶುಲ್ಕ ಕಟ್ಟಬೇಕಾಗಿಲ್ಲ”.

ಐದನೆಯದು, ತನ್ನ ವಿಷಯವನ್ನು ಕಡಿಮೆ ಶೈಕ್ಷಣಿಕ ಪರಿಭಾಷೆಯೊಂದಿಗೆ ಸ್ಪಷ್ಟವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಬರೆಯುವ ಸಾಮರ್ಥ್ಯ.

ಆರನೆಯದು, ತನ್ನ ವಾದಗಳ ಸೂಕ್ಷ್ಮ ಮತ್ತು ನಯವಾದ ವಿವರಣೆ ಮತ್ತು ವಿಸ್ತರಣೆ. ಈ ವಿದ್ವಾಂಸರು ವಸಾಹತು ಅಧಿಕಾರಿಗಳು ಮತ್ತು ಸಮಕಾಲೀನ ಕಾರ್ಯಕರ್ತರಲ್ಲಿ ಸಾಮಾನ್ಯವಾಗಿರುವ ಆದಿವಾಸಿ ಜೀವನದ ಸ್ಟೀರಿಯೊಟೈಪ್‌ಗಳ ಪುನರಾವರ್ತನೆಯಾದಂತೆ ವಿಶೇಷ ಎಚ್ಚರ ವಹಿಸಿದ್ದಾರೆ. ವಸಾಹತು ಯುಗದ ಆದಿವಾಸಿ ಪ್ರತಿಭಟನೆಗಳು ಮತ್ತು ಪ್ರಸ್ತುತ ಕಾಲದ ಹೋರಾಟಗಳ ನಡುವೆ ನೇರ ರೇಖೆ ಎಳೆಯುವ ಬರಹಗಳ ಚಿಂತನಶೀಲ ವಿಮರ್ಶೆಯನ್ನು ಪ್ರಸ್ತುತಪಡಿಸಿದ್ದಾರೆ. – “ಆಧುನಿಕ ರಾಜ್ಯವು ಹಿಂದೆ ಇದ್ದ ಆದಿವಾಸಿಗಳ ಆದರ್ಶಮಯ ಆಚರಣೆಗಳಿಂದ ಪ್ರೇರಿತವಾಗಿ ಘಾಸಿಗೊಂಡಿದೆ” ಎಂದು ಚಿತ್ರಿಸುವ ಬರಹಗಳನ್ನು ಆಲೋಚನಾಪೂರ್ವಕವಾಗಿ ವಿಮರ್ಶಿಸಿದ್ದಾರೆ. ಆ ಬರಹಗಳು “ಆದಿವಾಸಿಗಳನ್ನು ಪ್ರಾಚೀನ ಮತ್ತು ಬದಲಾಗದ ಪದ್ಧತಿಗಳು ಹಾಗೂ ಸಂಪ್ರದಾಯಗಳ ಮೂಲಕ ಕಾರ್ಯನಿರ್ವಹಿಸುವ ಏಕರೂಪದ ಸಮುದಾಯಗಳಾಗಿ ಮೂಲಭೂತಗೊಳಿಸಿ ಯಾವ ರೀತಿಯಲ್ಲಿ ತಪ್ಪಿಗೆ ಒಳಗಾಗಿವೆ” ಎಂಬುದರ ಕುರಿತು ವಿದ್ವಾಂಸರು ಚರ್ಚಿಸಿದ್ದಾರೆ. ಮತ್ತೊಂದೆಡೆ, ಅವರ ಸ್ವಂತ ಸಂಶೋಧನೆಯು “ಅನೇಕ ಆದಿವಾಸಿಗಳು ರಾಜ್ಯದ (ಸರ್ಕಾರ) ಆಕ್ರಮಣಗಳನ್ನು ವಿರೋಧಿಸುತ್ತಾರೆ” ಎಂದು ತೋರಿಸುತ್ತದೆ. ಆದರೂ, “ಆದಿವಾಸಿಗಳ ಇತರ ವಿಭಾಗಗಳು ರಾಜ್ಯದೊಂದಿಗೆ ಸಹಕರಿಸುತ್ತವೆ; ಕೆಲವರು ತಮ್ಮ ಸಮುದಾಯವು ಇತರರಿಗೆ ಹೋಲಿಸಿದರೆ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಮಾತುಕತೆ ನಡೆಸುತ್ತಾರೆ”.

ಎಡಿಟ್‌’ ಮಾಡುವವರಿಗಾಗಿ ಕಾಯುತ್ತಿದೆ!

ಈ ಪ್ರಬಂಧವು ಹೆಚ್ಚು ವಿಷಯಗಳನ್ನು ಒಳಗೊಂಡಿದ್ದರೂ, ದೋಷಗಳಿಂದ ಮುಕ್ತವಾಗಿಲ್ಲ. ವಿದ್ವಾಂಸರು ತಮ್ಮ ಕಾರ್ಯಗಳಿಗೆ ನೇರವಾಗಿ ಸಂಬಂಧಿಸಿದ ಭಾರತೀಯ ಮಾನವಶಾಸ್ತ್ರದ ಇತಿಹಾಸದ ಕುರಿತು ಟಿ ಎನ್ ಮದನ್ ಅವರ ಬರಹಗಳಂತಹ ಕೆಲವು ನಿರ್ಣಾಯಕ ದ್ವಿತೀಯಕ ಮೂಲಗಳನ್ನು ಕಡೆಗಣಿಸಿದ್ದಾರೆ. ಪ್ರಾಥಮಿಕ ಮೂಲಗಳಿಂದ ಬಂದ ಎಲ್ಲ ಉಲ್ಲೇಖಗಳು ನಾನು ಈ ಅಂಕಣದಲ್ಲಿ ಹೈಲೈಟ್ ಮಾಡಿದಷ್ಟನ್ನೇ ಹೇಳುತ್ತಿರಲಿಲ್ಲ. ಕೆಲವು ತುಂಬಾ ಉದ್ದವಾಗಿದ್ದವು, ಇದರಿಂದ ನಿರೂಪಣೆಯೂ ದುರ್ಬಲಗೊಂಡಿತ್ತು.

ಈ ಲೇಖನ ಓದಿದ್ದೀರಾ?: ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್‌ಗೆ ಒಂದು ನ್ಯಾಯ, ಉಮರ್‌ಗೆ ಮತ್ತೊಂದೇ?

ಆದಾಗ್ಯೂ, ಈ ಪ್ರಬಂಧವು ನಾನು ಓದಿದ ಭಾರತೀಯರೊಬ್ಬರ ಅತ್ಯುತ್ತಮ ಡಾಕ್ಟರೇಟ್ ಪ್ರಬಂಧಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಈ ಗುಣಮಟ್ಟದ ಪ್ರಬಂಧವನ್ನು ಕೆಲವು ವರ್ಷಗಳ ನಂತರ ಪುಸ್ತಕವಾಗಿ ಪ್ರಕಟಿಸಲಾಗುತ್ತದೆ. ಅದರ ನ್ಯೂನತೆಗಳನ್ನು ಉತ್ತಮ ಸಂಪಾದಕರು ಸರಿಪಡಿಸುತ್ತಾರೆ. ಪರಿಸರ/ಸಾಮಾಜಿಕ ಕ್ಷೇತ್ರದಲ್ಲಿ ಹೋಲಿಸಬಹುದಾದ ಕೃತಿಗಳಾದ ನಂದಿನಿ ಸುಂದರ್ ಅವರ ‘ಸಬಾಲ್ಟರ್ನ್ಸ್ ಅಂಡ್ ಸಾವರಿನ್ಸ್’ ಮತ್ತು ಮಹೇಶ್ ರಂಗರಾಜನ್ ಅವರ ‘ಫೆನ್ಸಿಂಗ್ ದಿ ಫಾರೆಸ್ಟ್’ಅನ್ನು ಗಮನಿಸಬಹುದು. ಇವರಿಬ್ಬರ ಪ್ರಬಂಧ ಸಲ್ಲಿಕೆ ಮತ್ತು ಪುಸ್ತಕ ಪ್ರಕಟಣೆಯ ನಡುವೆ ಕೆಲವೇ ವರ್ಷಗಳ ಅಂತರವಿತ್ತು. ಭವಾನಿ ರಾಮನ್, ಆದಿತ್ಯ ಬಾಲಸುಬ್ರಮಣಿಯನ್, ನಿಖಿಲ್ ಮೆನನ್ ಹಾಗೂ ದಿನ್ಯಾರ್ ಪಟೇಲ್ ಅವರ ಇತ್ತೀಚಿನ ಐತಿಹಾಸಿಕ ಗ್ರಂಥಗಳೂ ಇದೇ ರೀತಿಯ ಸಮಯದ ಅಂತರವನ್ನು ಕಂಡಿವೆ. ಇವೆಲ್ಲವೂ ಡಾಕ್ಟೋರಲ್ ಥೀಸಿಸ್‌ಗಳಾಗಿ ಬಂದು, ಗ್ರಂಥಗಳಾದವು.

ಇವು ಗ್ರಂಥಗಳಾಗಿ ಪ್ರಕಟಗೊಂಡ ಬಳಿಕ ಹೆಚ್ಚು ಜನರನ್ನು ತಲುಪಿವೆ ಮತ್ತು ಮೆಚ್ಚುಗೆ ಪಡೆದಿವೆ. ನಾನು ಈಗಷ್ಟೇ ಓದಿದ ಪ್ರಬಂಧವು ಪುಸ್ತಕವಾಗಿ ಪ್ರಕಟವಾದಾಗ ವ್ಯಾಪಕವಾಗಿ ಮೆಚ್ಚುಗೆ ಪಡೆಯುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ದುರಂತವೆಂದರೆ, ಪ್ರಬಂಧವನ್ನು 2018ರಲ್ಲಿ ಸಲ್ಲಿಸಲಾಗಿದ್ದರೂ, ಅದು ಇನ್ನೂ ಪುಸ್ತಕ ರೂಪದಲ್ಲಿ ಕಾಣಿಸಿಕೊಂಡಿಲ್ಲ. ಏಕೆಂದರೆ ವಿದ್ವಾಂಸರ ಹೆಸರು ಉಮರ್ ಖಾಲಿದ್. ನಿಧಾನಗತಿಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರೂರ ಮತ್ತು ಶಿಕ್ಷಾರ್ಹ ಸರ್ಕಾರವು ಈ ಪ್ರತಿಭಾನ್ವಿತ ಇತಿಹಾಸಕಾರನನ್ನು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇರಿಸಿದೆ. ವಿಚಾರಣೆಯೂ ಇಲ್ಲದೆ, ಜಾಮೀನು ದೊರೆಯದೆ ಜೈಲಿನಲ್ಲಿ ಕೂಡಿಹಾಕಿದೆ.

ನಾನು ಡಾ. ಉಮರ್ ಖಾಲಿದ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಅಥವಾ ಅವರೊಂದಿಗೆ ಮಾತನಾಡಿಲ್ಲ. ಆದಾಗ್ಯೂ, 2019ರ ಡಿಸೆಂಬರ್‌ನಲ್ಲಿ, ಒಂದು ದಿನ, ನಾವಿಬ್ಬರೂ ತಾರತಮ್ಯದ ಕಾನೂನಿನ ವಿರುದ್ಧ ದೇಶಾದ್ಯಂತ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಅವರು ದೆಹಲಿಯಲ್ಲಿಯೂ, ನಾನು ಬೆಂಗಳೂರಿನಲ್ಲಿಯೂ ಭಾಗವಹಿಸಿದ್ದೆವು. ನಂತರದ ವರ್ಷಗಳಲ್ಲಿ, ನಮ್ಮ ಜೀವನವು ತೆಗೆದುಕೊಂಡ ವಿಭಿನ್ನ ಮಾರ್ಗಗಳು ಮತ್ತು ಅವುಗಳ ಹಿಂದಿನ ಕಾರಣಗಳ ಬಗ್ಗೆ ನಾನು ಕೆಲವೊಮ್ಮೆ ಆಶ್ಚರ್ಯ ಪಡುತ್ತೇನೆ. ನನ್ನ ಮೊದಲ ಹೆಸರು ಉಮರ್ ಅಲ್ಲ, ರಾಮಚಂದ್ರ ಎಂದಿರುವುದರಿಂದ ನನ್ನ ಸಂಶೋಧನೆ ಮತ್ತು ಬರವಣಿಗೆಯನ್ನು ಮುಂದುವರಿಸಲು ನನಗೆ ಸಾಧ್ಯವಾಗಿದೆಯೇ?

ಪ್ರಬಂಧದಲ್ಲಿನ ಆಳ ಮತ್ತು ಶ್ರೀಮಂತಿಕೆ

ಆಧುನಿಕ ಭಾರತದ ಇತಿಹಾಸಕಾರನಾಗಿ, ಡಾ. ಖಾಲಿದ್‌ ಅವರ ವಿದ್ವತ್‌ಪೂರ್ಣ ಕೆಲಸದ ಆಳ ಮತ್ತು ಶ್ರೀಮಂತಿಕೆಯನ್ನು ಮೆಚ್ಚುವ ಸ್ಥಾನದಲ್ಲಿದ್ದೇನೆ ಎಂಬ ಕಾರಣಕ್ಕಾಗಿ ನಾನು ಇಲ್ಲಿ ಬರೆದಿದ್ದೇನೆ. ಆದರೆ, ನಾನು ಈ ಪ್ರಬಂಧವನ್ನು ಮುಚ್ಚುವಾಗ, ಅವರು (ಖಾಲಿದ್‌) ರಾಜಕೀಯ ನಾಯಕರ ಆದೇಶದ ಮೇರೆಗೆ ತರಾತುರಿಯಲ್ಲಿ ಪೊಲೀಸರು ದಾಖಲಿಸಿದ ಸಂಶಯಾಸ್ಪದ ಆರೋಪಗಳ ಅಡಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವ ಅನೇಕ ಉತ್ತಮ ಪುರುಷರು ಮತ್ತು ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ ಎಂಬುದನ್ನು ನಾನು ಗಮನಿಸಬೇಕು. ಈ ಭಾರತೀಯರಲ್ಲಿ ಕೆಲವರು ವಿದ್ವಾಂಸರು ಮತ್ತು ಸಂಶೋಧಕರೂ ಇದ್ದಾರೆ. ಇತರರು ಸಾಮಾಜಿಕ ಕಾರ್ಯಕರ್ತರು.

ಅವರೆಲ್ಲರೂ ತಮ್ಮ ಜೀವನ ಮತ್ತು ಕೆಲಸದಲ್ಲಿ ಅಹಿಂಸೆ ಮತ್ತು ಭಾರತೀಯ ಸಂವಿಧಾನದ ಸ್ಥಾಪಕ ಮೌಲ್ಯಗಳಿಗೆ ದೃಢತೆ ಮತ್ತು ಬದ್ಧರಾಗಿದ್ದಾರೆಂದು ತೋರಿಸಿದ್ದಾರೆ. ಬಹುತ್ವ ಮತ್ತು ಪ್ರಜಾಪ್ರಭುತ್ವಕ್ಕೆ ಅವರ ಬದ್ಧತೆಯೇ ಹೊರತು ಬೇರೇನೂ ಬೇಕಿಲ್ಲ. ಅವರನ್ನು ಆಡಳಿತವು ತಮ್ಮ ಸರ್ವಾಧಿಕಾರಿ ಮತ್ತು ಬಹುಸಂಖ್ಯಾತ ಪ್ರವೃತ್ತಿಗಳಿಗೆ ಬಲಿಯಾಗುವಂತೆ ಮಾಡಿದೆ. ಆದ್ದರಿಂದ, ನಮ್ಮ ಗಣರಾಜ್ಯದ ಸಮಾಜಕ್ಕೆ ಅಪಾರ ಕೊಡುಗೆ ನೀಡಬಹುದಾದ ನಮ್ಮ ಯುವ ದೇಶವಾಸಿಗಳು ಕತ್ತಲೆಯಿಂದ ಕೂಡಿದ ಹಾಗೂ ಅನಾರೋಗ್ಯಕರ ಜೈಲುಗಳಲ್ಲಿ ತಮ್ಮ ಅತ್ಯುತ್ತಮ ವರ್ಷಗಳನ್ನು ಕಳೆಯುವಂತಾಗಿದೆ. ಅವರೆಲ್ಲರಿಗೂ ನಿರಾಕರಿಸಲ್ಪಟ್ಟ ಸ್ವಾತಂತ್ರ್ಯವನ್ನು ನೀಡುವ ಸಭ್ಯತೆ ಮತ್ತು ಧೈರ್ಯವನ್ನು ನಮ್ಮ ನ್ಯಾಯಾಧೀಶರು ಕಂಡುಕೊಳ್ಳುವ ಸಮಯವಿದು.

ಬರಹ: ರಾಮಚಂದ್ರ ಗುಹಾ
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...