ಕರ್ನಾಟಕ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಬಗ್ಗೆ ಹೊರಬಿದ್ದಿರುವ ಇತ್ತೀಚಿನ ವರದಿಯೊಂದ ಗಂಭೀರ ಚಿಂತನೆಗೆ ಕಾರಣವಾಗಿದೆ. 2025–26ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಆರೋಗ್ಯ ತಪಾಸಣೆಯಲ್ಲಿ, ರಾಜ್ಯದ ಸುಮಾರು 5.77 ಲಕ್ಷ ವಿದ್ಯಾರ್ಥಿಗಳಲ್ಲಿ ರಕ್ತದೊತ್ತಡ (ಹೈಪರ್‌ಟೆನ್ಶನ್) ಲಕ್ಷಣಗಳು ಪತ್ತೆಯಾಗಿವೆ. ತಪಾಸಣೆಗೆ ಒಳಗಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 12.5ರಷ್ಟು ಮಕ್ಕಳಲ್ಲಿ ಜೀವನಶೈಲಿ ಸಂಬಂಧಿತ ರೋಗಗಳು ವೇಗವಾಗಿ ಹೆಚ್ಚುತ್ತಿವೆ ಎಂದಿದೆ ವರದಿ.
ಈ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK)ದಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಒಟ್ಟು 46,27,368 ವಿದ್ಯಾರ್ಥಿಗಳು ತಪಾಸಣೆಗೆ ಒಳಗಾಗಿದ್ದರು. ಈ ಪೈಕಿ 5,77,260 ವಿದ್ಯಾರ್ಥಿಗಳಲ್ಲಿ ರಕ್ತದೊತ್ತಡ ಕಂಡುಬಂದಿದೆ ಎಂಬ ಮಾಹಿತಿಯನ್ನು ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ವಿಧಾನ ಪರಿಷತ್ತಿನಲ್ಲಿ ಬಹಿರಂಗಪಡಿಸಿದ್ದಾರೆ.
ಜಿಲ್ಲಾವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ತದೊತ್ತಡ ಪತ್ತೆಯಾಗಿದೆ. ತಪಾಸಣೆಗೆ ಒಳಗಾದ 2,08,902 ವಿದ್ಯಾರ್ಥಿಗಳಲ್ಲಿ 53,073 ಮಂದಿಗೆ ರಕ್ತದೊತ್ತಡದ ಲಕ್ಷಣಗಳಿರುವುದು ಕಂಡುಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ 5,28,103 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗಿದ್ದು, 50,940 ಮಂದಿಯಲ್ಲಿ ಈ ಸಮಸ್ಯೆ ಗುರುತಿಸಲಾಗಿದೆ. ರಾಯಚೂರು (48,598), ಕಲಬುರಗಿ (45,368), ದಾವಣಗೆರೆ (38,355), ತುಮಕೂರು (35,952) ಹಾಗೂ ಮಂಡ್ಯ (33,345) ಜಿಲ್ಲೆಗಳು ಹೆಚ್ಚಿನ ಪ್ರಕರಣಗಳನ್ನು ಹೊಂದಿವೆ.
ಶೇಕಡಾವಾರು ನೋಡುವುದಾದರೆ, ದಾವಣಗೆರೆ ಜಿಲ್ಲೆ ಅತ್ಯಂತ ಆತಂಕಕಾರಿ ಸ್ಥಿತಿಯಲ್ಲಿದೆ. ತಪಾಸಣೆಗೊಳಗಾದ ವಿದ್ಯಾರ್ಥಿಗಳಲ್ಲಿ ಶೇ.31.3 ಮಕ್ಕಳಿಗೆ ಅಧಿಕ ರಕ್ತದೊತ್ತಡ ಕಂಡುಬಂದಿದೆ. ಮಂಡ್ಯ- 29.9%, ರಾಯಚೂರು-25.8%, ವಿಜಯಪುರ-25.4%, ಕಲಬುರಗಿ-18.1% ಮತ್ತು ಬಾಗಲಕೋಟೆಯಲ್ಲಿ 18% ವಿದ್ಯಾರ್ಥಿಗಳಿಗೆ ರಕ್ತದೊತ್ತಡ ಇರುವ ಲಕ್ಷಣಗಳು ಕಂಡುಬಂದಿವೆ. ಇತ್ತ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣ ದಾಖಲಾಗಿದ್ದು, ತಪಾಸಣೆಗೊಳಗಾದ 67,669 ವಿದ್ಯಾರ್ಥಿಗಳಲ್ಲಿ ಕೇವಲ ಶೇ.1.9 ರಷ್ಟು ವಿದ್ಯಾರ್ಥಿಗಳಲ್ಲಿ ಮಾತ್ರ ಹೈ ಬಿಪಿ ಲಕ್ಷಣ ಕಂಡುಬಂದಿದೆ.
ಆದರೆ, ಈ ಅಂಕಿ–ಅಂಶಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ಖಚಿತ ರೋಗ ನಿರ್ಣಯವೆಂದು ಪರಿಗಣಿಸಬಾರದು ಎಂದೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. RBSK ಯೋಜನೆಯ ಹಿರಿಯ ಅಧಿಕಾರಿಯೊಬ್ಬರು “ಮಕ್ಕಳಲ್ಲಿ ರಕ್ತದೊತ್ತಡ ಹಲವು ಕಾರಣಗಳಿಂದ ತಾತ್ಕಾಲಿಕವಾಗಿ ಏರಿಳಿತಗೊಳ್ಳಬಹುದು. ಒಂದೇ ಬಾರಿ ಮಾಡಿದ ತಪಾಸಣೆಯಿಂದ ರಕ್ತದೊತ್ತಡವನ್ನು ಖಚಿತಪಡಿಸಲು ಸಾಧ್ಯವಿಲ್ಲ. ಕನಿಷ್ಠ ಮೂರು ಅಥವಾ ನಾಲ್ಕು ಬಾರಿ ತಪಾಸಣೆ ಮಾಡಿದ ಬಳಿಕವೇ ನಿಖರ ನಿರ್ಧಾರಕ್ಕೆ ಬರಬಹುದು. ಮುಂದಿನ ಹಂತದ ತಪಾಸಣೆ ನಂತರ ಈ ಸಂಖ್ಯೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಶಂಕಿತ ಪ್ರಕರಣಗಳನ್ನು ಮುಂದಿನ ಚಿಕಿತ್ಸೆಗಾಗಿ ವೈದ್ಯರಲ್ಲಿಗೆ ರವಾನಿಸಲಾಗುತ್ತಿದೆ” ಎಂದೂ ಅವರು ಸ್ಪಷ್ಟಪಡಿಸಿರುವುದಾಗಿ ʼದ ಹಿಂದೂʼ ವರದಿ ಮಾಡಿದೆ.

“ಮಕ್ಕಳಲ್ಲಿ ರಕ್ತದೊತ್ತಡವನ್ನು ಅಳೆಯುವ ವಿಧಾನದಲ್ಲೂ ಸಮಸ್ಯೆಗಳಿವೆ. ವಯಸ್ಕರಲ್ಲಿ 140/90 ಮಿತಿಗಿಂತ ಹೆಚ್ಚಿದ್ದರೆ ರಕ್ತದೊತ್ತಡ ಎನ್ನಲಾಗುತ್ತದೆ. ಆದರೆ ಮಕ್ಕಳಿಗೆ ಅಂತಹ ನಿಖರ ಮಾನದಂಡಗಳಿಲ್ಲ. ಓದಿನ ಒತ್ತಡ, ಪರೀಕ್ಷಾ ಭಯ, ದೈಹಿಕ ಚಟುವಟಿಕೆಯ ಕೊರತೆ, ಬಾಲ್ಯದಲ್ಲೇ ಹೆಚ್ಚುತ್ತಿರುವ ಸ್ಥೂಲತೆ ಸೇರಿದಂತೆ ಹಲವು ಅಂಶಗಳು ಮಕ್ಕಳಲ್ಲಿ ರಕ್ತದೊತ್ತಡ ಹೆಚ್ಚಲು ಕಾರಣವಾಗಬಹುದು. ಕುಟುಂಬದಲ್ಲಿ ರಕ್ತದೊತ್ತಡದ ಇತಿಹಾಸವಿದ್ದರೆ, ಮಕ್ಕಳಲ್ಲೂ ಚಿಕ್ಕ ವಯಸ್ಸಿನಲ್ಲೇ ಬಿಪಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸುಮಾರು ಶೇ.95 ರಷ್ಟು ಪ್ರಕರಣಗಳಲ್ಲಿ ಈ ಸಮಸ್ಯೆಗೆ ಕಾರಣಗಳು ಸ್ಪಷ್ಟವಾಗಿಲ್ಲ. ಈ ಮಕ್ಕಳಲ್ಲಿ ಎಂಡೋಕ್ರೈನ್, ಥೈರಾಯ್ಡ್, ಕಿಡ್ನಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳೂ ಇವೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ” ಎಂದು ಹೃದಯರೋಗ ತಜ್ಞ, ಜಯದೇವ ಹೃದಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ, ಸಂಸದ ಡಾ. ಸಿಎನ್ ಮಂಜುನಾಥ್ ಅಭಿಪ್ರಾಯಪಟ್ಟಿರುವುದಾಗಿ ಹಾಗೂ “ಅತಿಯಾಗಿ ಸಂಸ್ಕರಿಸಿದ ಆಹಾರ, ಹೆಚ್ಚು ಉಪ್ಪು ಮತ್ತು ಸಕ್ಕರೆಯಿರುವ ಆಹಾರ ಪದ್ಧತಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಪಾಯದ ಗುಂಪಿನ ಮಕ್ಕಳಲ್ಲಿ ಈಗಲೇ ರಕ್ತದೊತ್ತಡ ಗುರುತಿಸಲಾಗುತ್ತಿದೆ. ಸ್ಥೂಲತೆಯಿರುವ ಮಕ್ಕಳಲ್ಲಿ ರಕ್ತದೊತ್ತಡ ಮತ್ತು ಮುಂಚಿತ ಮಧುಮೇಹದ ಅಪಾಯ ಹೆಚ್ಚಿರುತ್ತದೆ” ಎಂದು ಬೆಂಗಳೂರು ಖಾಸಗಿ ಆಸ್ಪತ್ರೆಯ ಮಕ್ಕಳ ವೈದ್ಯ ಹಾಗೂ ನವಜಾತ ಶಿಶು ತಜ್ಞ ಡಾ. ರಾಜತ್ ಆತ್ರೇಯ ಎಚ್ಚರಿಸುವುದಾಗಿ ʼದ ಹಿಂದೂʼ ಉಲ್ಲೇಖಿಸಿದೆ.
ಮಕ್ಕಳ ತಜ್ಞೆ ಡಾ. ಶ್ಯಾಮಲಾ ಈ ದಿನಕ್ಕೆ ಪ್ರತಿಕ್ರಿಯಿಸಿ, “ಮೊದಲೆಲ್ಲಾ 40 ವಯಸ್ಸಿನ ನಂತರ ಬಿಪಿ, ಶುಗರ್, ಒಬೆಸಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಜೀವನಶೈಲಿ, ಆಹಾರ ಕ್ರಮ, ಒತ್ತಡಗಳಿಂದ ಚಿಕ್ಕ ಮಕ್ಕಳಲ್ಲಿಯೂ ಬಿಪಿ, ಶುಗರ್ ಕಾಣಿಸಿಕೊಳ್ಳುತ್ತಿದೆ. ನಗರ ಪ್ರದೇಶಗಳ ಖಾಸಗೀ ಶಾಲಾ ಮಕ್ಕಳಿಗಷ್ಟೇ ಈ ಜಂಕ್ ಫುಡ್ ಮಾದರಿ ಸೀಮಿತವಾಗಿಲ್ಲ. ಗ್ರಾಮೀಣ ಭಾಗಗಳಲ್ಲಿಯೂ ಸರ್ಕಾರಿ ಶಾಲೆ ಮಕ್ಕಳು ಕರಿದ ತಿಂಡಿ, ಚಿಪ್ಸ್, ಐಸ್ ಕ್ಯಾಂಡಿ, ಫ್ರೈಸ್‌ಗಳನ್ನು ತಿನ್ನುವುದು ಹೆಚ್ಚಾಗಿದೆ. ದೊಡ್ಡವರನ್ನ ನೋಡಿ ಮದ್ಯಪಾನ, ಧೂಮಪಾನ ಮಾಡುವುದನ್ನು ಕಲಿಯುತ್ತಿರುವುದು ಅತ್ಯಂತ ಆಘಾತಕಾರಿ. ಇದೂ ಕೂಡ ಮಕ್ಕಳಲ್ಲಿ ಹೈ ಬಿಪಿ ಬರಲು ಮುಖ್ಯ ಕಾರಣವಾಗಿದೆ. ಈಗಿನ ಮಕ್ಕಳು ಮೈದಾನಕ್ಕೆ ಕಾಲಿಡುವುದೇ ಕಡಿಮೆ. ಬರೀ ಮೊಬೈಲ್, ಟಿವಿ, ವಿಡಿಯೋ ಗೇಮ್ಸ್ ಗಳಲ್ಲೇ ಮುಳುಗಿರುತ್ತವೆ. ತಿನ್ನುವಾಗಲೂ ಮೊಬೈಲ್ ನೋಡಿಕೊಂಡೇ ತಿನ್ನುವ ಪ್ರವೃತ್ತಿ. ಇದರಿಂದ ದೈಹಿಕ ಚಟುವಟಿಕೆ ಇಲ್ಲದೇ ಒಬೆಸಿಟಿಯಂತಹ ಸಮಸ್ಯೆಗಳು ಬರುತ್ತವೆ. ಇದು ಬದಲಾಗಬೇಕು. ಮುಖ್ಯಾವಾಗಿ ಪೋಷಕರು ಮಕ್ಕಳ ಆಹಾರ ಕ್ರಮದ ಮೇಲೆ ನಿಗಾ ಇಡಬೇಕು. ಮಧ್ಯಾಹ್ನದ ಊಟಕ್ಕೆ ದುಡ್ಡು ಕೊಟ್ಟು ಕಳಿಸುವ ಬದಲು ಮನೆ ಊಟದ ಡಬ್ಬಿ ಕೊಡಬೇಕು. ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆ ಉಂಟಾಗುವಂತೆ ಮಾಡಬೇಕು. ಇತರರೊಂದಿಗೆ ಹೋಲಿಸುವುದನ್ನು ಬಿಡಬೇಕು. ಮನೆಯಲ್ಲಿ ತಂದೆ ತಾಯಿ, ಹಿರಿಯರ, ಸಹೋದರರ ನಡವಳಿಕೆಗಳೂ ಚಿಕ್ಕವರ ಮೇಲೆ ಪ್ರಭಾವ ಬೀರುತ್ತವೆ. ದೊಡ್ಡವರ ಹವ್ಯಾಸಗಳು ಆರೋಗ್ಯಕರವಾಗಿದ್ದರೆ ಮಕ್ಕಳೂ ಅದನ್ನು ನೋಡಿ ಕಲಿಯುತ್ತಾರೆ. ರೋಗ ಬಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕಿಂತ ಮೊದಲೇ ಎಚ್ಚೆತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಇದರಿಂದ ಅನುವಂಶೀಯವಾಗಿ ಬರಬಹುದಾದ ರೋಗಗಳನ್ನೂ ನಿಯಂತ್ರಿಸಬಹುದು” ಎಂದರು.

ಡಾ. ಉಮಾಕಾಂತ್ ಅಡಿಗ, “ನಿರ್ದಿಷ್ಟ ಕಾಯಿಲೆ, ಕಾರಣವಿಲ್ಲದೆಯೂ ಬರುವ ಅಧಿಕ ರಕ್ತದೊತ್ತಡವನ್ನು ಎಸೆನ್ಷಿಯಲ್ ಹೈಪರ್ ಟೆನ್ಶನ್ ಎನ್ನಲಾಗುತ್ತದೆ. ಪ್ರೈಮರಿ ಹೈಪರ್ ಟೆನ್ಶನ್ ಎಂದೂ ಕರೆಯಲಾಗುವ ಇದು ಅನುವಂಶೀಯತೆ, ಅತಿಯಾದ ಬೊಜ್ಜು, ಒತ್ತಡ, ಹೆಚ್ಚು ಉಪ್ಪಿನಂಶವಿರುವ ಆಹಾರಗಳ ಸೇವನೆಯಿಂದ ಬರುತ್ತದೆ. ಮೊದಲಲ್ಲೇ ಎಚ್ಚೆತ್ತುಕೊಳ್ಳದಿದ್ದರೆ ಕೇವಲ 30+ ವಯಸ್ಸಿಗೇ ಹೃದಯಾಘಾತ, ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳಿಗೆ ತುತ್ತಾಗಬೇಕಾದೀತು. ಕೆಲವೊಮ್ಮೆ ಕಿಡ್ನಿ ಸಂಬಂಧಿತ ಸಮಸ್ಯೆ, ಹಾರ್ಮೋನಲ್ ಇಂಬ್ಯಾಲೆನ್ಸ್ ಇದ್ದಾಗಲೂ ಹೈಪರ್ ಟೆನ್ಶನ್‌ಗೆ ಒಳಗಾಗಬೇಕಾಗುತ್ತದೆ. ಸಾಮಾನ್ಯವಾಗಿ ನಾವು 12-13ರೊಳಗಿನ ಮಕ್ಕಳಲ್ಲಿ ಬಿಪಿ ಚೆಕ್ ಮಾಡುವ ಗೋಜಿಗೇ ಹೋಗುವುದಿಲ್ಲ. ಒಮ್ಮೆ ಪರಿಶೀಲಿಸಿ ಒಂದು ನಿರ್ಧಾರಕ್ಕೆ ಬರುವುದೂ ಸಾಧ್ಯವಿಲ್ಲ. ರೋಗ ಲಕ್ಷಣ ಇದ್ದವರನ್ನು ಎರಡು ಮೂರು ಬಾರಿ ಚೆಕ್ ಮಾಡಿದ ಬಳಿಕವಷ್ಟೇ ರೋಗ ನಿರ್ಣಯಕ್ಕೆ ಬರಲಾಗುತ್ತದೆ. ಮಕ್ಕಳಲ್ಲಿ ಸುಗರ್ ಕಂಟೆಂಟ್ ಹೆಚ್ಚಿರುವ, ಪ್ರೊಸೆಸ್ಡ್ ಫುಡ್ ತಿನ್ನುವ ಹವ್ಯಾಸ ಹೆಚ್ಚು. ಕೇಳುತ್ತಾರೆಂದು ಅಂತಹ ಜಂಕ್ ಫುಡ್‌ಗಳನ್ನು ಕೊಟ್ಟುಬಿಡುತ್ತೇವೆ. ಆಗ ಅದು ಯಾರಿಗೂ ಗಂಭೀರ ಸಮಸ್ಯೆಯಾಗಿ ಕಾಣುವುದಿಲ್ಲ. ಒಮ್ಮೆಗೇ ಅದು ದೊಡ್ಡದಾದಾಗ ಮರುಗುತ್ತೇವೆ. ಇದಾಗಕೂಡದು. ದೊಡ್ಡವರಂತೆ ಮಕ್ಕಳನ್ನೂ ನಿಯಮಿತ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಕನಿಷ್ಠ ಒಂದೆರಡು ವರ್ಷಗಳಿಗಾದರೂ ಒಮ್ಮೆ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸಬೇಕು. ಶಾಲೆಗಳಲ್ಲಿಯೂ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿರಬೇಕು. ಬಿಪಿ, ಶುಗರ್, ಒಬೆಸಿಟಿಯಂತಹ ಸಮಸ್ಯೆಗಳು ಸೈಲೆಂಟ್ ಕಿಲ್ಲರ್ ರೀತಿ. ಮೇಲೆ ಚೆನ್ನಾಗಿಯೇ ಇರುತ್ತೇವೆ. ಆದರೆ ದೇಹದ ಒಳಗೆ ಗಂಭೀರ ಸಮಸ್ಯೆ ಸೃಷ್ಟಿಸಿರುತ್ತವೆ. ಆರೋಗ್ಯಕರ ಆಹಾರ ಸೇವನೆ, ಉತ್ತಮ ಜೀವನ ಶೈಲಿ, ಹೆಚ್ಚು ದೈಹಿಕ ಚಟುವಟಿಕೆಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಸಾಧ್ಯವಾದಷ್ಟು ದೂರವಿರುವುದು, ಇವೇ ಇಂತಹ ಸಮಸ್ಯೆಗಳಿಗೆ ಮದ್ದು” ಎಂದರು.
ಇದನ್ನೂ ಓದಿ: ʼಗೃಹ ಆರೋಗ್ಯ ಯೋಜನೆʼ | ರಾಜ್ಯ ಸರ್ಕಾರದ ಆರೋಗ್ಯ ಕ್ರಾಂತಿ!
ವಯಸ್ಸಾದ ಮೇಲೆ ಕಾಣಿಸಿಕೊಳ್ಳುತ್ತಿದ್ದ ಬಿಪಿ, ಶುಗರ್ ಸಮಸ್ಯೆಗಳು ಈಗ ಬಾಲ್ಯದಲ್ಲೇ ಕಾಣಿಸಿಕೊಳ್ಳುತ್ತಿರುವುದು ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಹೆಚ್ಚುತ್ತಿರುವ ಸ್ಕ್ರೀನ್ ಟೈಮ್ ಮತ್ತು ಮಾನಸಿಕ ಒತ್ತಡಗಳ ಪರಿಣಾಮ ಎನ್ನುವುದು ಸ್ಪಷ್ಟವಾಗಿದೆ. ಜಂಕ್ ಫುಡ್, ಉಪ್ಪು–ಸಕ್ಕರೆಯ ಅಧಿಕ ಬಳಕೆ, ಮೈದಾನಕ್ಕೆ ಬದಲಾಗಿ ಮೊಬೈಲ್–ಟಿವಿಯತ್ತ ಒಲವು ಮಕ್ಕಳ ಆರೋಗ್ಯವನ್ನು ನಿಧಾನವಾಗಿ ಕುಗ್ಗಿಸುತ್ತಿದೆ. ಈ ಹಂತದಲ್ಲಿ ಪೋಷಕರು, ಶಿಕ್ಷಕರು, ಆರೋಗ್ಯ ವ್ಯವಸ್ಥೆ ಮತ್ತು ಸಮಾಜ ಒಟ್ಟಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ. ನಿಯಮಿತ ಹಾಗೂ ವೈಜ್ಞಾನಿಕ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರದ ಅಭ್ಯಾಸ, ಮಕ್ಕಳಿಗೆ ಆಟ–ವ್ಯಾಯಾಮಕ್ಕೆ ಸೂಕ್ತ ಅವಕಾಶ, ಗ್ಯಾಜೆಟ್ ಬಳಕೆಗೆ ನಿಯಂತ್ರಣ ಮತ್ತು ಆರೋಗ್ಯಕರ ಕುಟುಂಬ ವಾತಾವರಣ ನಿರ್ಮಾಣವೇ ಮುಂದಿನ ತಲೆಮಾರನ್ನು ರಕ್ಷಿಸುವ ಮಾರ್ಗ. ರೋಗ ಬಂದ ಬಳಿಕ ಚಿಕಿತ್ಸೆಗಿಂತ, ರೋಗ ಬರದಂತೆ ತಡೆಯುವ ಜೀವನಶೈಲಿಯೇ ಉತ್ತಮ ಮಾರ್ಗ.





