ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ʼರೀಲ್ಸ್‌ʼ ಗೀಳು; ಬೇಕಿದೆ ಕಡಿವಾಣ

Date:

ಓದು, ಕಲಿಕೆ, ಪರಿಶ್ರಮ ಇವ್ಯಾವೂ ಇಂದು ಲೆಕ್ಕಕ್ಕೇ ಇಲ್ಲ. ಕ್ಯಾಮೆರಾ ಮುಂದೆ ಕೆಲ ಸೆಕೆಂಡುಗಳ ಪ್ರದರ್ಶನ ಮಾಡುವುದೇ ದೊಡ್ಡದು. ಅದು ಒಳ್ಳೆಯದೋ ಕೆಟ್ಟದೋ ಅದೂ ಬೇಕಿಲ್ಲ. ಇದು ಚಿಂತಿಸಬೇಕಾದ ವಿಷಯ ಅಲ್ಲವೇ? ಇದರಲ್ಲಿ ತಪ್ಪು ಯಾರದ್ದು ಅನ್ನೋ ಪ್ರಶ್ನೆಗೂ ಉತ್ತರ ಹುಡುಕಬೇಕಲ್ಲವೇ?

ಕಾಲವೊಂದಿತ್ತು! ಸಮಾಜದಲ್ಲಿ ಒಂದಿಬ್ಬರಿಗಾದರೂ ತಮ್ಮ ಹೆಸರು ಪರಿಚಿತವಾಗಬೇಕೆಂದರೆ, ಏನಾದರೊಂದು ಸಾಧನೆ ಮಾಡಬೇಕಿತ್ತು. ಇಂದು ಹಾಗಿಲ್ಲ. ಹೆಸರು ಬೇಕೆಂದರೆ ಇನ್ಸ್ಟಾಗ್ರಾಮಿಗೆ ಹಾಕಲು ಒಂದು ರೀಲ್ ಸಾಕು. ಸೋಷಿಯಲ್‌ ಮೀಡಿಯಾವನ್ನೂ ಬೆನ್ನಮೇಲೆ ಕೂರಿಸಿಕೊಂಡು ಫೇಮಿನ ಹಿಂದೆ ಎದ್ದೂ ಬಿದ್ದೂ ಓಡುತ್ತಿರುವ ಈ ಸಮಾಜ ಅದಕ್ಕೆ ತೆರಬೇಕಾದ ಭಾರೀ ಮೊತ್ತವನ್ನು ಗಮನಿಸದಂತಿಲ್ಲ. ರಾತ್ರೋ ರಾತ್ರಿ ಫೇಮಸ್‌ ಆಗಿಬಿಡಬೇಕು ಎನ್ನುವ ಹುಚ್ಚು ಗೀಳು ಇತ್ತೀಚೆಗೆ ಸಾಮಾಜಿಕ ವ್ಯಸನವಾಗಿ ಮಾರ್ಪಟ್ಟಿದೆ. ಈ ಅತಿರೇಕದ ಹೊಡೆತಕ್ಕೆ ಸಿಲುಕಿರುವವರಲ್ಲಿ ಹೆಣ್ಣುಮಕ್ಕಳೇ ಹೆಚ್ಚಿರುವುದು ಇನ್ನಷ್ಟು ಆತಂಕಕಾರಿ.

ವೈರಲ್‌ ಆಗುವ ಸ್ಪರ್ಧೆಗೆ ಬಿದ್ದವರಂತೆ ಕೆಲವರು ತಮ್ಮ ನಡೆ, ನಡವಳಿಕೆ, ಭಾಷೆ, ದೇಹಭಾಷೆ ಎಲ್ಲವನ್ನೂ ಮೂಟೆಕಟ್ಟಿ ಅಟ್ಟ ಸೇರಿಸಿಬಿಟ್ಟಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಲು ಬೇಕಾದ ಎಲ್ಲಾ ರೀತಿಯ ತ್ಯಾಗ ಮಾಡುತ್ತಿರುವ ದೃಶ್ಯಗಳು ಪ್ರತಿದಿನವೂ ಮೊಬೈಲ್‌ ಪರದೆಗಳಲ್ಲಿ ಕಾಣಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಹಾವಭಾವ, ಅಪಾಯಕಾರೀ ಸ್ಟಂಟ್ಸ್‌, ಲೈಂಗಿಕ ಅರ್ಥ ತುಂಬಿದ ಸಂಕೇತಗಳು, ಅವರ ಮೇಲೆ ಇವರು, ಇವರ ಮೇಲೆ ಅವರು ಬೈದಾಡಿಕೊಳ್ಳುವುದು, ಕುಟುಂಬ, ಸಂಬಂಧಗಳ ಬಗ್ಗೆ ಅವಮಾನಕಾರಿಯಾಗಿ ಮಾತಾಡುವುದು, ತಿಂದಿದ್ದು, ತೇಗಿದ್ದು, ಕುಡಿದದ್ದು.. ಇವೆಲ್ಲವೂ ʼಕಂಟೆಂಟ್‌ʼ ಅಂತೆ! ಇದೆಂಥಾ ಅವಸ್ಥೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ವಾತಂತ್ರ್ಯ ಸ್ವೇಚ್ಛಾಚಾರವಾದಾಗ..

ಅನಿಸಿದ್ದನ್ನ ಹೇಳಲು, ನಮ್ಮ ಪ್ರತಿಭೆ ತೋರಿಸಲು ಒಂದು ವೇದಿಕೆಯನ್ನ ಸೋಷಿಯಲ್‌ ಮೀಡಿಯಾ ಕಲ್ಪಿಸಿಕೊಟ್ಟಿತು. ಅದು ಒಳ್ಳೆಯದೇ ನಿಜ. ಆದರೆ, ಈಗ ಅದೇ ಸ್ವಾತಂತ್ರ್ಯ ʼಏನು ಬೇಕಾದರೂ ಮಾಡಬಹುದು, ಯಾರೂ ಪ್ರಶ್ನಿಸೋಲ್ಲʼ ಅನ್ನೋ ಭಾವನೆಗೆ ತಿರುಗುತ್ತಿದೆ. ವಿಶೇಷವಾಗಿ ಕಿಶೋರಿಯರು ಮತ್ತು ಯುವತಿಯರ ಮೇಲೆ ಇದರ ಪರಿಣಾಮ ಹೆಚ್ಚು. ʼಒಂದು ರೀಲ್‌ ವೈರಲ್‌ ಆದರೆ ಸಾಕು, ಲೈಫ್‌ ಸೆಟಲ್ʼ ಅನ್ನೋ ಭ್ರಮೆಗೆ ಒಳಗಾಗಿದೆ ಇಂದಿನ ಜನಸಮುದಾಯ. ಓದು, ಕಲಿಕೆ, ಪರಿಶ್ರಮ ಇವ್ಯಾವೂ ಲೆಕ್ಕಕ್ಕೇ ಇಲ್ಲ. ಕ್ಯಾಮೆರಾ ಮುಂದೆ ಕೆಲ ಸೆಕೆಂಡುಗಳ ಪ್ರದರ್ಶನ ಸಾಕಾಗುತ್ತಿದೆ. ಅದು ಒಳ್ಳೆಯದೋ ಕೆಟ್ಟದೋ ಅದೂ ಬೇಕಿಲ್ಲ. ಇದು ಚಿಂತಿಸಬೇಕಾದ ವಿಷಯ ಅಲ್ಲವೇ? ಇದರಲ್ಲಿ ತಪ್ಪು ಯಾರದ್ದು ಅನ್ನೋ ಪ್ರಶ್ನೆಗೂ ನಾವು ಉತ್ತರ ಹುಡುಕಬೇಕಿದೆಯಲ್ಲವೇ?

image 2026 01 21T175955.644

ಸೋಷಿಯಲ್‌ ಮೀಡಿಯಾ, ರೀಲ್ಸ್‌ ಗೀಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅದೆಷ್ಟು ಮಂದಿ ಜೀವ ಕಸಿದಿದೆ ಲೆಕ್ಕವಿಲ್ಲ. ಜ.18ರಂದು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದು ಹರಿದಾಡಿತ್ತು. ಅದರಿಂದ ವಿಡಿಯೋದಲ್ಲಿದ್ದ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು. ಇದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಗೋವಿಂದಪುರಂ ನಿವಾಸಿ ದೀಪಕ್ (42) ಅವರ ಕತೆ. ಫುಲ್​ ರಶ್​​ ಇದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಿಂಜಿತಾ ಎಂಬ ಮಹಿಳೆ ವಿಡಿಯೋ ರೆಕಾರ್ಡ್ ಮಾಡಿ, ಅದರಲ್ಲಿ ದೀಪಕ್ ತನ್ನನ್ನು ಅನುಚಿತವಾಗಿ ಮುಟ್ಟಿದ್ದರು ಎಂದು ಆರೋಪಿಸಿದ್ದರು. ಈ ವಿಡಿಯೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿತ್ತು. ಅದಾದ ಎರಡೇ ದಿನಕ್ಕೆ ದೀಪಕ್ ನೇಣಿಗೆ ಕೊರಳೊಡ್ಡಿದ್ದರು. ದೀಪಕ್‌ ಸಾವಿನ ಬಳಿಕ ಪರ ವಿರೋಧ ಚರ್ಚೆಗಳು ತೀವ್ರವಾಗಿವೆ. ಅದೂ ಕೂಡ ಸೋಷಿಯಲ್‌ ಮೀಡಿಯಾದಲ್ಲೇ ಎನ್ನುವುದು ವಿಪರ್ಯಾಸ.

2024ರಲ್ಲಿ ರೀಲ್ಸ್, ಇನ್ಸ್ಟಾಗ್ರಾಮ್, ಗೇಮ್​ ಗೀಳಿಗೆ ಬಿದ್ದ ಬಾಗಲಕೋಟೆಯ ಬಾಲಕನೊಬ್ಬ ಪೋಷಕರು ಐಫೋನ್ ಕೊಡಿಸಲಿಲ್ಲ ಎಂದು ಮನೆ ಬಿಟ್ಟು ಹೋಗಿದ್ದ ಘಟನೆ ನಡೆದಿತ್ತು. ಅದೇ ವರ್ಷ ಉಡುಪಿಯ ಕಾರ್ಕಳದಲ್ಲಿ ರೀಲ್ಸ್‌ ಹುಚ್ಚಿದ್ದ ಮಹಿಳೆಯೊಬ್ಬರು ತನ್ನ ಇನ್ಸ್ಟಾಗ್ರಾಮ್‌ ಗೆಳೆಯನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದಿದ್ದರು. ಅದೇ ಉಡುಪಿಯಲ್ಲಿ ಕಿರಣ್ ಉಪಾಧ್ಯ ಎಂಬಾತ ಪತ್ನಿ ಜಯಶ್ರೀಯನ್ನು ಹತ್ಯೆ ಮಾಡಿದ್ದ. ಮೃತ ಜಯಶ್ರೀ ಸದಾ ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಿದ್ದರಂತೆ. ರೀಲ್ಸ್ ಮಾಡೋ ಹುಚ್ಚು ಇದ್ದ ಜಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್‌ ಮಾಡಿದ್ದರು. ಪತ್ನಿಯ ಈ ಮೊಬೈಲ್‌ ಗೀಳು ಪತಿ, ಪತ್ನಿಯ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇನ್ನು ಇಂಥದ್ದೇ ಘಟನೆ ಮಂಡ್ಯದಲ್ಲೂ ನಡೆದಿತ್ತು. ಪರಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತಿ ಶ್ರೀನಾಥ ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಪೂಜಾಳನ್ನು ಕೊಲೆಗೈದು ಪೊಲೀಸರಿಗೆ ಶರಣಾಗಿದ್ದ. ರೀಲ್ಸ್ ಮಾಡುವುದರ ಜೊತೆಗೆ ಸ್ನೇಹಿತರೊಂದಿಗೆ ಚಾಟಿಂಗ್ ಹುಚ್ಚು ಹೆಚ್ಚಾಗಿತ್ತು. ಇದರಿಂದಲೇ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಶುರುವಾಗಿತ್ತು ಎಂದು ಆತ ಆರೋಪಿಸಿದ್ದ. ಹೀಗೆ ಹೇಳುತ್ತಲೇ ಇದ್ದರೆ, ಮುಗಿಯದಷ್ಟು ಪ್ರಕರಣಗಳು ನಮ್ಮ ಕಣ್ಮುಂದಿವೆ. ಈ ರೀಲ್ಸ್‌ ಹುಚ್ಚಿನಿಂದಾಗಿ ಪ್ರಾಣ ಕಳೆದುಕೊಂಡವರಿಗೆ ಲೆಕ್ಕವೇ ಇಲ್ಲ. ಅಷ್ಟಾದರೂ ಅದರ ಗೀಳು ಸ್ವಲ್ಪವಾದರೂ ಕಡಿಮೆಯಾಗಿದೆಯೇ ಎಂದರೆ, ಇಲ್ಲ. ಇನ್ನೂ ಹೆಚ್ಚಾಗಿದೆ.

ಸುಮ್ಮನೆ ಯೋಚಿಸಿ ನೋಡಿ… ಕನ್ನಡದ ಮಟ್ಟಿಗೇ ತೆಗೆದುಕೊಂಡರೆ, ಒಳ್ಳೆಯ ಕಂಟೆಂಟ್‌ ಕೊಡುವವರು ಎಷ್ಟು ಮಂದಿ ನೆನಪಿದ್ದಾರೆ? ಅದೇ ಅರ್ಥವಿಲ್ಲದ ಅಸಂಬದ್ಧ ವಿಡಿಯೋಗಳಿಂದ ಫೇಮಸ್‌ ಆದವರು? ವ್ಯತ್ಯಾಸ ನಮಗೇ ಗೊತ್ತಿದೆ. ಇಲ್ಲಿ ಕೇವಲ ಕಂಟೆಂಟ್‌ ಕ್ರಿಯೇಟರ್‌ಗಳನ್ನು ದೂರುವುದು ಅರ್ಥಹೀನವಾದೀತು. ಏಕೆಂದರೆ ನೋಡುವವರೇ ಬೇಡಿಕೆ ಸೃಷ್ಟಿಸುತ್ತಿದ್ದಾರೆ. ಅದೇ ವಿಡಿಯೋ ನೋಡಿ ಲೈಕ್‌ ಮಾಡೋದು, ಫಾಲೋ ಮಾಡೋದು. ಕಮೆಂಟಿನಲ್ಲಿ ಬಾಯಿಗೆ ಬಂದದ್ದು ಕುಟ್ಟುವುದು. ಈ ದ್ವಂದ್ವ ನೀತಿ ಅನುಸರಿಸುವವರು ನಮ್ಮ ನಡುವೆಯೇ ಇದ್ದಾರೆ. ಇಂದಿನ ಜನರಿಗೆ ಒಳ್ಳೆ ಕಂಟೆಂಟ್‌ ಬೇಕಾಗಿಯೇ ಇಲ್ಲ. ಸಮಾಜಮುಖಿ ವಿಚಾರಗಳು, ಸಂವೇದನಾಶೀಲ ವರದಿಗಳು, ಜ್ಞಾನಾಧಾರಿತ ವಿಡಿಯೋಗಳು ಅಥವಾ ಸೃಜನಶೀಲ ಪ್ರಯತ್ನಗಳಿಗಿಂತಲೂ ಕ್ರೈಂ, ಅಶ್ಲೀಲತೆ, ಅತಿರೇಕ, ಅವಮಾನ ಮತ್ತು ಸಂಚಲನವೇ ಹೆಚ್ಚು ಗಮನ ಸೆಳೆಯುತ್ತದೆ. ಇದೇ ಕಾರಣಕ್ಕೆ ಇಂತಹ ಕಂಟೆಂಟ್‌ ಸೃಷ್ಟಿಸುವವರು ಕೆಟ್ಟ ಕಮೆಂಟುಗಳಿಗೆ ತಲೆ ಕೆಡಿಸಿಕೊಳ್ಳದೆ ಸಲೀಸಾಗಿ ಫೇಮಸ್‌ ಆಗುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ʼಜನ ಏನು ನೋಡುತ್ತಾರೆ ಅದನ್ನೇ ಇನ್ನಷ್ಟು ತೋರಿಸಬೇಕುʼ ಎನ್ನುವ ಆಲ್ಗರಿದಮ್‌ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ. ಪರಿಣಾಮವಾಗಿ ಕ್ರೈಂ ದೃಶ್ಯಗಳು, ಅಶ್ಲೀಲ ಅಂಶಗಳು, ದ್ವೇಷಭರಿತ ಮಾತುಗಳು ಮತ್ತು ಸಂಚಲನಕಾರಿ ವಿಡಿಯೋಗಳಿಗೆ ಹೆಚ್ಚು ವೀವ್ಸ್‌, ಶೇರ್‌ಗಳು ಮತ್ತು ಕಮೆಂಟ್ಸ್‌ ಬರುತ್ತವೆ. ಆಲ್ಗರಿದಮ್‌ ಅದನ್ನೇ ʼಜನರಿಗೆ ಇಷ್ಟವಾದ ಕಂಟೆಂಟ್‌ʼ ಎಂದು ಗುರುತಿಸಿ ಮತ್ತಷ್ಟು ಜನರಿಗೆ ತಳ್ಳುತ್ತದೆ. ಹೀಗೆ ರೋಗಗ್ರಸ್ತ ಚಕ್ರ (vicious cycle) ತಿರುಗುತ್ತಲೇ ಇರುತ್ತದೆ.

ಈ ಪ್ರವೃತ್ತಿಯ ಗಂಭೀರ ಪರಿಣಾಮಗಳು ಮಕ್ಕಳ ಮತ್ತು ಯುವಜನರ ಮೇಲೆ ಕಾಣಿಸುತ್ತಿವೆ. ಅವರು ನೋಡುವ ಕಂಟೆಂಟೇ ಅವರ ಯೋಚನೆಗಳನ್ನು ರೂಪಿಸುತ್ತದೆ. ಅಪರಾಧವನ್ನು ಗ್ಲಾಮರೈಸ್‌ ಮಾಡುವ ವಿಡಿಯೋಗಳು, ಮಹಿಳೆಯರನ್ನು ವಸ್ತುವಿನಂತೆ ತೋರಿಸುವ ದೃಶ್ಯಗಳು, ಹಿಂಸೆಯನ್ನು ಸಾಮಾನ್ಯಗೊಳಿಸುವ ರೀಲ್ಸ್‌.. ಇವೆಲ್ಲವೂ ನಿಧಾನವಾಗಿ ಅವರ ಮನಸ್ಸಿನಲ್ಲಿ ತಪ್ಪನ್ನೇ ಸರಿಯೆಂದು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸುತ್ತವೆ. ಇದರ ಅಂತಿಮ ಫಲವಾಗಿ ಮಾನಸಿಕ ಅಸಂವೇದನೆ, ಹಿಂಸಾತ್ಮಕ ಪ್ರವೃತ್ತಿ ಮತ್ತು ನೈತಿಕ ಗೊಂದಲಗಳು ಹೆಚ್ಚಾಗುತ್ತಿವೆ. ಇದರ ನಡುವೆ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿರುವುದು ಪ್ರೇಕ್ಷಕ ಸಮುದಾಯ. ಒಂದು ಅಶ್ಲೀಲ ಅಥವಾ ಕ್ರೈಂ ಕಂಟೆಂಟ್‌ ನೋಡದೇ ಬಿಟ್ಟರೆ, ಲೈಕ್‌ ಮಾಡದೇ ಬಿಟ್ಟರೆ, ಶೇರ್‌ ಮಾಡದೇ ಬಿಟ್ಟರೆ, ಅದು ಅಷ್ಟೇ ಬೇಗ ಸತ್ತು ಹೋಗುತ್ತದೆ. ಆದರೆ ನಾವು ಅದನ್ನೇ ವೈರಲ್‌ ಮಾಡುತ್ತೇವೆ; ನಂತರ ಸಮಾಜ ಹಾಳಾಗಿದೆ ಎಂದು ದೂರುತ್ತೇವೆ.

ಡಿಜಿಟಲ್‌ ಗೀಳಿನ ಕುರಿತು ಬರಹಗಾರ, ಆಪ್ತಸಮಾಲೋಚಕ ವಸಂತ್‌ ನಡಹಳ್ಳಿ ಅವರು ಈದಿನಕ್ಕೆ ಪ್ರತಿಕ್ರಿಯಿಸಿ, “ಡಿಜಿಟಲ್‌ ಯುಗ ಇಂದು ಮನುಷ್ಯನ ಮನಸ್ಸಿನ ಮೇಲೆ ಅತ್ಯಂತ ಅಪಾಯಕಾರಿ ಹಿಡಿತ ಸಾಧಿಸುತ್ತಿದೆ ಎಂಬುದು ಕಟು ವಾಸ್ತವ. ಮೊಬೈಲ್‌, ಸೋಷಿಯಲ್‌ ಮೀಡಿಯಾ ಮತ್ತು ಆಪ್‌ಗಳನ್ನ ಯಾವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದರೆ, ಬಳಕೆದಾರನು ಅದಕ್ಕೆ ವ್ಯಸನಿಯಾಗುವುದೇ ಅದರ ಅಂತಿಮ ಗುರಿಯಾಗಿದೆ. ಮಾನವ ಮೆದುಳಿನ ಕಾರ್ಯವಿಧಾನವನ್ನೇ ಬದಲಾಯಿಸುವ ಸಾಮರ್ಥ್ಯವಿರುವ ತಂತ್ರಜ್ಞಾನ, ಇದೊಂದು ವ್ಯವಸ್ಥಿತ ಮನೋವೈಜ್ಞಾನಿಕ ತಂತ್ರ. ರೀಲ್ಸ್‌, ಲೈಕ್ಸ್‌, ವ್ಯೂಸ್‌, ನೋಟಿಫಿಕೇಷನ್‌ಗಳು ಇವೆಲ್ಲವೂ ಮನುಷ್ಯನ ಮೆದುಳಿನಲ್ಲಿರುವ ಡೋಪಮಿನ್‌ ವ್ಯವಸ್ಥೆಯನ್ನು ಉದ್ದೀಪನಗೊಳಿಸುವಂತೆ ಡಿಸೈನ್‌ ಮಾಡಲಾಗಿರುತ್ತದೆ. ಒಂದು ಲೈಕ್‌ ಬಂದಾಗ ಸಿಗುವ ಕ್ಷಣಿಕ ಸಂತೋಷ, ಮತ್ತೆ ಮತ್ತೆ ಅದೇ ಅನುಭವ ಬೇಕೆಂಬ ಹಂಬಲಕ್ಕೆ ದೂಡುತ್ತದೆ. ಹೀಗಾಗಿ ʼಏನೋ ಒಂದು ಮಾಡಿ ರೀಲ್‌ ಮಾಡಬೇಕು, ಲೈಕ್‌ ಬರಬೇಕುʼ ಎಂಬ ಮಾನಸಿಕ ಒತ್ತಡ ಹುಟ್ಟುತ್ತದೆ. ಇದು ನಿಧಾನವಾಗಿ ಬೆಳೆಸಿಕೊಳ್ಳುವ ಡಿಜಿಟಲ್‌ ಭ್ರಮೆ.

image 2026 01 21T180155.578
ವಸಂತ್‌ ನಡಹಳ್ಳಿ

ಇಂದು ಜನ ಬಸ್‌, ಹೋಟೆಲ್‌,ರಸ್ತೆ, ಸಿನಿಮಾ ಹಾಲ್‌ ಎಲ್ಲೇ ಇದ್ದರೂ ಪಕ್ಕದಲ್ಲಿರುವ ಮನುಷ್ಯರನ್ನು ಬಿಟ್ಟು ಮೊಬೈಲ್‌ ಪರದೆಯಲ್ಲೇ ತಲೆ ತೂರಿಸಿಕೊಂಡಿರುತ್ತಾರೆ. ಹ್ಯೂಮನ್‌ ಇಂಟರಾಕ್ಷನ್‌ ಕಣ್ಮರೆಯಾಗುತ್ತಿದೆ. ಮಾತುಕತೆ ಕಡಿಮೆಯಾಗುತ್ತಿದೆ, ಸಂಬಂಧಗಳ ನಡುವೆ ಕಂದಕ ಏರ್ಪಡುತ್ತಿದೆ. ಆದರೆ ಪರದೆಯ ಮೇಲಿನ ನಕಲಿ ಜಗತ್ತು ಮಾತ್ರ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ. ಈ ವ್ಯಸನದ ಅತ್ಯಂತ ಅಪಾಯಕಾರಿ ಪರಿಣಾಮ ಯುವಜನರಲ್ಲಿ ಕಾಣಿಸುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಆಗುವ ಹೋಲಿಕೆ, ಟ್ರೋಲಿಂಗ್‌, ಅವಮಾನಕಾರಿ ಕಮೆಂಟ್ಸ್‌, ವೈರಲ್‌ ಆಗಬೇಕೆಂಬ ಒತ್ತಡ ಇವೆಲ್ಲವೂ ಮಕ್ಕಳ ಮತ್ತು ಕಿಶೋರರ ಮಾನಸಿಕ ಆರೋಗ್ಯದ ಮೇಲೆ ಭಾರೀ ಹೊಡೆತ ನೀಡುತ್ತಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಸೋಷಿಯಲ್‌ ಮೀಡಿಯಾ ಪ್ರಭಾವದಿಂದ 16 ವರ್ಷದೊಳಗಿನ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಆತಂಕಕಾರಿಯಾಗಿವೆ.

ಈ ಅಪಾಯವನ್ನು ಅರಿತ ಕೆಲವು ರಾಷ್ಟ್ರಗಳು ಈಗಾಗಲೇ ಕ್ರಮಕ್ಕೆ ಮುಂದಾಗಿವೆ. ಆಸ್ಟ್ರೇಲಿಯಾದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಷಿಯಲ್‌ ಮೀಡಿಯಾ ಬಳಸುವಂತಿಲ್ಲ ಎಂಬ ಕಾನೂನು ಜಾರಿಗೆ ಬಂದಿದೆ. ಇಂತಹ ಕ್ರಮಗಳು ಜಾಗತಿಕವಾಗಿ ಜಾರಿಯಾದರೆ ಡಿಜಿಟಲ್‌ ವ್ಯಸನಕ್ಕೆ ಕಡಿವಾಣ ಹಾಕಲು ಸಾಧ್ಯ. ಆದರೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ವಿಷಯದ ಬಗ್ಗೆ ಸರ್ಕಾರದ ಸ್ಪಷ್ಟ ಮತ್ತು ಗಟ್ಟಿಯಾದ ನಿಲುವು ಇನ್ನೂ ಕಾಣಿಸುತ್ತಿಲ್ಲ. ತಂತ್ರಜ್ಞಾನ ಕಂಪನಿಗಳ ಲಾಭಾಸಕ್ತಿ, ರಾಜಕೀಯ ನಿರ್ಲಕ್ಷ್ಯ ಮತ್ತು ನೀತಿ ರೂಪಿಸುವಲ್ಲಿ ವಿಳಂಬಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ. ಈ ವ್ಯಸನಕ್ಕೆ ಕಡಿವಾಣ ಹಾಕಬೇಕಾಗಿರುವುದು ಪೋಷಕರ ಜೊತೆಗೆ ಸರ್ಕಾರ, ನೀತಿತಜ್ಞರು, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜದ ಒಟ್ಟಾರೆ ಜವಾಬ್ದಾರಿ. ಡಿಜಿಟಲ್‌ ತಂತ್ರಜ್ಞಾನವನ್ನು ಸಂಪೂರ್ಣ ತಳ್ಳಿಹಾಕುವುದು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿತವಾಗಿ, ಜವಾಬ್ದಾರಿಯುತವಾಗಿ ಬಳಸುವ ವ್ಯವಸ್ಥೆ ನಿರ್ಮಿಸುವುದು ಅತ್ಯಾವಶ್ಯಕ” ಎಂದರು.

ಮೊಬೈಲ್‌ ಗೀಳಿನ ಬಗ್ಗೆ ತಮ್ಮ ಎಫ್‌ಬಿ ಖಾತೆಯಲ್ಲಿ ವಸಂತ್‌ ಅವರು ಹೀಗೆ ಬರೆದುಕೊಂಡಿದ್ದಾರೆ.. “ಎಂಟು ವರ್ಷದ ಹೆಣ್ಣು ಮಗುವೊಂದು ಮೊಬೈಲ್‌ನಲ್ಲಿ ಆಟವಾಡುತ್ತಿದ್ದಾಗ ಯಾವುದೋ ಅಶ್ಲೀಲ ಜಾಲತಾಣವೊಂದರ ಜಾಹೀರಾತು ಪರದೆಯ ಮೂಲೆಯಲ್ಲಿ ಕಾಣಿಸಿಕೊಂಡಿದೆ. ಕುತೂಹಲದಿಂದ ಅದನ್ನು ಒತ್ತಿದಾಗ ನೀಲಿಚಿತ್ರಗಳು ತೆರೆದುಕೊಂಡಿವೆ. ಏನನ್ನೂ ಅರಿಯದ ಮುಗ್ಧ ಮಗು ಸುಮ್ಮನೆ ಅದನ್ನು ನೋಡುತ್ತಿರುವುದು ತಾಯಿಯ ಗಮನಕ್ಕೆ ಬಂದು ಅವರು ಭೂಮಿ ಆಕಾಶ ಒಂದಾಗುವಂತೆ ಮಗುವಿನ ಮೇಲೆ ಎಗರಿ ಬಿದ್ದಿದ್ದಾರೆ. ಪೂರ್ಣ ಗೊಂದಲಕ್ಕೊಳಗಾಗಿರುವ ಮಗು ನಂತರ ತಂದೆಯ ಬಳಿ ಹೋಗಲು ಕೂಡ ಹೆದರಿಕೊಳ್ಳುತ್ತಿದೆ. ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂದು ಅರಿವಿಲ್ಲದ ಪೋಷಕರು ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದರೇ ಹೊರತು ತಜ್ಞರ ಸಹಾಯ ಕೇಳುವುದಕ್ಕೆ ಹಿಂಜರಿಯುತ್ತಿದ್ದರು. ಲೈಂಗಿಕತೆಯ ಬಗೆಗೆ ಮಗುವಿನ ಮನಸ್ಸಿನಲ್ಲಿ ಮೂಡಿಸುವ ಭಯ ಮುಂದೆ ಅವಳ ಕೌಟುಂಬಿಕ ಬದುಕಿಗೆ ತೊಂದರೆಯಾಗಬಹುದೇ ಎನ್ನುವುದನ್ನೂ ಯೋಚಿಸಲಾರದ ಆತಂಕದ ಪರಿಸ್ಥಿತಿಯಲ್ಲಿ ಅವರಿದ್ದರು.

image 2026 01 21T180036.483

ಎಲ್ಲಿದೆ ಇದಕ್ಕೆಲ್ಲಾ ಪರಿಹಾರ?

ದೂರಸಂಪರ್ಕದ ಉದ್ದೇಶಕ್ಕಾಗಿ ಆವಿಷ್ಕಾರವಾದ ಮೊಬೈಲ್ ತಂತ್ರಜ್ಞಾನ ಇವತ್ತು ಮೂಲ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ಅರ್ಧಕ್ಕಿಂತ ಕಡಿಮೆ ಇರಬಹುದು. ಗೇಮಿಂಗ್, ಸಂಗೀತ, ಕ್ಯಾಮೆರಗಳನ್ನೆಲ್ಲಾ ತುಂಬಿದ್ದು ಗ್ರಾಹಕರ ಅನುಕೂಲಕ್ಕಾಗಿ ಎಂದು ಕಂಪನಿಗಳು ಬಿಂಬಿಸುತ್ತಿರಬಹುದು. ಆದರೆ ಇದರಲ್ಲಿ ಕಂಪನಿಗಳ ಹಣಮಾಡುವ ಹುನ್ನಾರಗಳೇ ಹೆಚ್ಚಾಗಿರುತ್ತವೆ. ರಸ್ತೆಗಳಲ್ಲಿ ಹೋಗುವಾಗಲೆಲ್ಲಾ ಹಾಡುಗಳನ್ನು ಕೇಳದಿದ್ದರೆ, ಕಂಡಕಂಡಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸದಿದ್ದರೆ, ಗೇಮ್‌ಗಳಿಂದ ನಮ್ಮನ್ನು ರಂಜಿಸಿಕೊಳ್ಳದಿದ್ದರೆ ನಾವೆಲ್ಲಾ ಆದಿ ಮಾನವರೋ ಅಥವಾ ಕೀಳು ವ್ಯಕ್ತಿತ್ವದ ಮನುಷ್ಯರೋ ಆಗುತ್ತಿರಲಿಲ್ಲ. ಆದರೆ ಇವೆಲ್ಲವನ್ನೂ ಮಾಡಿದಾಗ ಮುಂದುವರೆದವರೂ ಅಭಿವೃದ್ಧಿ ಹೊಂದಿದವರೋ ಆಗುತ್ತೇವೆಂಬ ಭ್ರಮೆಯನ್ನು ಕಂಪನಿಗಳು ಜಾಹೀರಾತುಗಳ ಮೂಲಕ ನಮ್ಮ ತಲೆಯಲ್ಲಿ ತುಂಬಿವೆ. ನಾವೆಲ್ಲಾ ಕುರಿಮಂದೆಯಂತೆ ಅವರು ಹೇಳಿದ್ದನ್ನು ಒಪ್ಪಿಕೊಂಡು ಅವರ ದಾಸ್ಯಕ್ಕೆ ಬಿದ್ದಿದ್ದೇವೆ. ವೈಜ್ಞಾನಿಕ ಸಂಶೋಧನೆಗಳಿಂದ ಮಾನವ ಕುಲಕ್ಕೆ ಭಾರೀ ಉಪಕಾರವಾಗುತ್ತದೆ ಎಂದು ಬಿಂಬಿಸುತ್ತಾ ಅವುಗಳನ್ನು ತಮ್ಮ ಹಣ ಮಾಡುವ ಹಿಕ್ಮತ್ತುಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಬಳಸುತ್ತಿವೆ.

ಇದನ್ನೂ ಓದಿ: ಬಿಗ್‌ ಬಾಸ್‌ | ರಿಯಾಲಿಟಿ ಶೋಗಳೂ, ಜನಪ್ರಿಯತೆಯ ಭ್ರಮೆಯೂ…

ಮಕ್ಕಳು ಬೆಳೆಯುತ್ತಾ ಬಂದಂತೆ ತಮ್ಮ ಸ್ವಂತಿಕೆಯ ಹುಡುಕಾಟದಲ್ಲಿರುತ್ತಾರೆ. ಹಾಗಾಗಿ ಪೋಷಕರಿಗೆ ಅವರನ್ನು ತಮ್ಮ ಬುದ್ಧಿವಾದ ಶಿಸ್ತು ನೀತಿ ನಿಯಮಗಳ ಮೂಲಕ ಹಿಡಿತದಲ್ಲಿಡುವುದು ಅಸಾಧ್ಯ. ಮೇಲು ನೋಟಕ್ಕೆ ಅವರು ಪೋಷಕರು ಹೇಳಿದ್ದನ್ನು ಒಪ್ಪಿಕೊಂಡಂತೆ ತೋರಿದರೂ ನಿಯಮಗಳನ್ನು ಪಾಲಿಸದೆ ಮೌನ ಪ್ರತಿಭಟನೆ (ಪ್ಯಾಸ್ಯೂ ಅಗ್ರೆಸ್ಯೂ ಬಿಹೇವಿಯರ್) ತೋರಿಸುತ್ತಿರುತ್ತಾರೆ. ಇದರಿಂದ ಪೋಷಕರ ಹತಾಶೆ ಸಿಟ್ಟು ಹೆಚ್ಚಾದಂತೆ ಮಕ್ಕಳಿಂದ ಅವರು ಮಾನಸಿಕವಾಗಿ ದೂರ ಸರಿಯುತ್ತಾರೆ. ಆಗ ಇಡೀ ಕುಟುಂಬ ಗೊಂದಲದ ಗೂಡಾಗುತ್ತದೆ ಎಂದು ವಿವರಿಸುತ್ತಾರವರು.

ಸೋಷಿಯಲ್‌ ಮೀಡಿಯಾ ಶುದ್ಧಿಯಾಗಬೇಕಾದರೆ ಮೊದಲು ನೋಡುವವರ ಮನಸ್ಸು ಶುದ್ಧವಾಗಬೇಕು. ಲೈಕ್‌ ಒತ್ತುವ ಮುನ್ನ, ಶೇರ್‌ ಮಾಡುವ ಮುನ್ನ, ʼಇದು ಸಮಾಜಕ್ಕೆ ಏನು ಕೊಡುತ್ತಿದೆ?ʼ ಎಂದು ಕೇಳಿಕೊಳ್ಳುವುದು ಇಂದಿನ ಅತ್ಯಂತ ದೊಡ್ಡ ನಾಗರಿಕ ಜವಾಬ್ದಾರಿ. ಇಲ್ಲವಾದರೆ ಕ್ರೈಂ ಮತ್ತು ಅಶ್ಲೀಲತೆಯೇ ನಮ್ಮ ಡಿಜಿಟಲ್‌ ಗುರುತಾಗಿ ಉಳಿದೀತು. ಅದಕ್ಕೆ ತಕ್ಕಂತೆ ಸರ್ಕಾರ ಕಠಿಣ ಕಾನೂನು ರೂಪಿಸಬೇಕು. ಬೇಡದ ಕಂಟೆಂಟ್‌ ಸೃಷ್ಟಿಸಿ ಸಮಾಜ ಹಾಳು ಮಾಡುವವರ ಜೊತೆಗೆ ಅದನ್ನ ನೋಡಿ ಹಾಳಾಗುವವರ ಮೇಲೂ ಕ್ರಮ ಕೈಗೊಂಡರೆ, ಬಹುಶಃ ಈ ಗೀಳು ಕ್ರಮೇಣ ಕಡಿಮೆಯಾಗಬಹುದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...