ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಳಪೆ ಸಾಧನೆ ತೋರಿದಾಗ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕ್ರೀಡಾ ತಂಡಗಳ ಪ್ರದರ್ಶನಕ್ಕೆ ತರಬೇತುದಾರರು ಮತ್ತು ವ್ಯವಸ್ಥಾಪಕರು ಜವಾಬ್ದಾರರಾಗಿರುತ್ತಾರೆ. ಸರ್ಕಾರಿ ಅಧಿಕಾರಿಗಳೂ ಇದೇ ರೀತಿಯ ಪರಿಶೀಲನೆಗೆ ಒಳಗಾಗುತ್ತಾರೆ. ಆದರೆ, ಕರ್ನಾಟಕದಲ್ಲಿ ಸಮಾನ ಅಭಿವೃದ್ಧಿಯ ಕೊರತೆ ಮತ್ತು ಅನೇಕ ಜಿಲ್ಲೆಗಳು ಇಂದಿಗೂ ಹಿಂದುಳಿದಿರುವುದಕ್ಕೆ ಯಾರು ಹೊಣೆ? ಜನರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಖಾತ್ರಿಪಡಿಸಬೇಕಾದ ಸತತ ಸರ್ಕಾರಗಳು, ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಈ ವೈಫಲ್ಯದ ಹೊಣೆ ಹೊರಬೇಕಲ್ಲವೇ?
ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಆರಂಭಿಸಿ ಸುಮಾರು ಎರಡು ದಶಕಗಳೇ ಕಳೆದಿವೆ. ಆದರೂ, ಈ ವಾರದ ಆರಂಭದಲ್ಲಿ ಸಲ್ಲಿಕೆಯಾದ ಡಾ. ಎಂ. ಗೋವಿಂದ ರಾವ್ ಸಮಿತಿಯ ವರದಿಯು, ಕೆಲವು ಪ್ರಯತ್ನಗಳ ಹೊರತಾಗಿಯೂ ಪ್ರಾದೇಶಿಕ ಅಸಮಾನತೆ ಮುಂದುವರಿದಿದೆ ಎಂಬುದನ್ನು ಒತ್ತಿಹೇಳಿದೆ. ನಂಜುಂಡಪ್ಪ ಸಮಿತಿಯು 2002ರಲ್ಲಿ ವರದಿ ನೀಡಿತ್ತು ಮತ್ತು ಅದರ ಶಿಫಾರಸುಗಳನ್ನು 2007-08ರಿಂದ ವಿಶೇಷ ಅಭಿವೃದ್ಧಿ ಯೋಜನೆಗಳ (SDP) ಮೂಲಕ ಜಾರಿಗೆ ತರಲಾಗುತ್ತಿದೆ.
ಸರ್ಕಾರದಿಂದ ಇನ್ನೂ ಬಿಡುಗಡೆಯಾಗದ ಗೋವಿಂದ ರಾವ್ ವರದಿಯು, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳು ತೀವ್ರವಾಗಿ ಹಿಂದುಳಿದಿವೆ ಎಂಬ ಕಠೋರ ವಾಸ್ತವವನ್ನು ಎತ್ತಿ ತೋರಿಸುತ್ತದೆ. ಕರ್ನಾಟಕವು ದೊಡ್ಡ ರಾಜ್ಯಗಳ ಪೈಕಿ ಎರಡನೇ ಅತಿ ಹೆಚ್ಚು ತಲಾದಾಯದೊಂದಿಗೆ (NSDP) ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದರೂ, ಅದು ರಾಜ್ಯದಾದ್ಯಂತ ಜನರ ಆದಾಯದ ಸಮಾನ ಹಂಚಿಕೆಯಾಗಿ ಪರಿವರ್ತಿತವಾಗಿಲ್ಲ. ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ಹಿಂದುಳಿದ ತಾಲೂಕು ಮತ್ತು ಜಿಲ್ಲೆಗಳು ಅತಿ ಹೆಚ್ಚು ಹಿಂದುಳಿದಿವೆ. ಆದಾಯದಲ್ಲಿ ಅಸಮಾನತೆ ಎದ್ದುಕಾಡುತ್ತಿದೆ.
ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಲು ಗಣನೀಯ ಹಣವನ್ನು ಮೀಸಲಿಟ್ಟಿದ್ದರೂ, ಅಂತರವು ಮತ್ತಷ್ಟು ಹೆಚ್ಚಾಗಿದೆ. ಹಿಂದುಳಿದ ತಾಲೂಕುಗಳ ಪ್ರಮಾಣವು 2001-02ರಲ್ಲಿ 65% ರಷ್ಟಿದ್ದರೆ, ಅದು 2022-23ರ ವೇಳೆಗೆ 72.8%ಗೆ ಏರಿದೆ. ಈ ಸಮಸ್ಯೆಯು ಮುಖ್ಯವಾಗಿ ಅನುಷ್ಠಾನದ ವೈಫಲ್ಯ ಮತ್ತು ಹಣ ಖರ್ಚು ಮಾಡುವಲ್ಲಿನ ವಿವೇಚನಾಧಿಕಾರದ ಬಳಕೆಯಿಂದ ಉಂಟಾದಂತಿದೆ. ಸಮಿತಿಯು ವಿವಿಧ ಪಾಲುದಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ನಂಜುಂಡಪ್ಪ ಸಮಿತಿಯ ಶಿಫಾರಸುಗಳ ಅನುಷ್ಠಾನವನ್ನು ವಿವರವಾಗಿ ವಿಶ್ಲೇಷಿಸಿದೆ. ಅಸಮಾನತೆ ಮುಂದುವರಿಯಲು ಕಾರಣಗಳನ್ನು ಅಧ್ಯಯನ ಮಾಡಿದೆ. ಈ ಅಂತರವನ್ನು ಕಾಲಮಿತಿಯಲ್ಲಿ ಹೋಗಲಾಡಿಸಲು ಸಮಿತಿಯು ಹಲವಾರು ನಿರ್ದಿಷ್ಟ ಕ್ರಮಗಳನ್ನು ಸೂಚಿಸಿದೆ.
ಸಮಿತಿ ಸೂಚಿಸಿರುವ ಕ್ರಮಗಳ ಕುರಿತು ಮಾಹಿತಿ ಹೊಂದಿರುವವರು ಹೇಳುವಂತೆ, ಮುಂದಿನ ಐದು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಕೌಶಲ ಅಭಿವೃದ್ಧಿ, ನೀರಾವರಿ ಹಾಗೂ ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಾಮಾನ್ಯ ಬಜೆಟ್ ಹೊರತಾಗಿ ಸುಮಾರು 43,914 ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಗೆ ನೀಡುವ ಅನುದಾನವನ್ನು 2030-31ರ ವೇಳೆಗೆ 5,000 ಕೋಟಿಯಿಂದ 6,380 ಕೋಟಿ ರೂ.ಗೆ ಹೆಚ್ಚಿಸಲು ಸೂಚಿಸಿದೆ.
ವಿವೇಚನೆಯ ಆಧಾರದಲ್ಲಿ ಅನುದಾನ ಹಂಚಿಕೆ ಮಾಡುವುದನ್ನು ಬದಿಗಿಟ್ಟು, ಹಿಂದುಳಿದಿರುವಿಕೆಯ ಸೂಚ್ಯಂಕಗಳ ಆಧಾರದ ಮೇಲೆ ಹಣ ಹಂಚಿಕೆಗೆ ಸ್ಪಷ್ಟ ಮಾನದಂಡಗಳನ್ನು ರೂಪಿಸಲು ವರದಿ ಸೂಚಿಸಿದೆ. ಇತರ ಪ್ರದೇಶಗಳಲ್ಲಿ ಸಾಮಾನ್ಯ ವೆಚ್ಚವೆಂದು ಪರಿಗಣಿಸಲಾಗುವ ಖರ್ಚುಗಳನ್ನು ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚುವರಿ ವೆಚ್ಚವೆಂದು ಪರಿಗಣಿಸುತ್ತಿರುವುದು ಕಂಡುಬಂದಿದೆ. ಕಲ್ಯಾಣ ಕರ್ನಾಟಕದಲ್ಲಿ ಮೂಲಸೌಕರ್ಯ ಕೊರತೆಯನ್ನು ನೀಗಿಸಲು ಕೆ.ಕೆ.ಆರ್.ಡಿ.ಬಿ (KKRDB) ಹಣವನ್ನು ಬಳಸಲಾಗುತ್ತಿದ್ದರೆ, ಇತರ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಸಾಮಾನ್ಯ ಬಜೆಟ್‌ನಲ್ಲೇ ಹಣ ನೀಡಲಾಗುತ್ತಿದೆ ಎಂದು ಸಮಿತಿ ಗಮನಿಸಿದೆ.
ಉತ್ತರ ಕರ್ನಾಟಕ ಪ್ರದೇಶದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದುಳಿದ ಜಿಲ್ಲೆಗಳೂ ಕೊಂಚ ಅಭಿವೃದ್ಧಿ ಕಾಣುತ್ತಿವೆ. ಆದರೆ ಅಭಿವೃದ್ಧಿಯ ವೇಗವು ಗಂಭೀರ ಕಳವಳಕಾರಿಯಾಗಿದೆ. ಪ್ರಗತಿಯನ್ನು ಚುರುಕುಗೊಳಿಸಲು ಸರ್ಕಾರದ ಕಡೆಯಿಂದ ದೊಡ್ಡ ಮಟ್ಟದ ಉತ್ತೇಜನದ ಅಗತ್ಯವಿದೆ. ಅಲ್ಲದೆ, ಪ್ರದೇಶದ ಒಳಗೂ ಅಭಿವೃದ್ಧಿಯಲ್ಲಿ ತಾರತಮ್ಯವಿದೆ. ಕಲಬುರಗಿಯಂತಹ ನಗರಗಳಲ್ಲಿ ಉತ್ತಮ ಸರ್ಕಾರಿ ಆರೋಗ್ಯ ಸೌಲಭ್ಯಗಳು, ಬೆಳೆಯುತ್ತಿರುವ ಖಾಸಗಿ ವಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ, ಗ್ರಾಮೀಣ ಭಾಗಗಳು ಇವುಗಳಿಂದ ವಂಚಿತವಾಗಿವೆ.
ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಈ ಭಾಗದ ದೊಡ್ಡ ಸಂಖ್ಯೆಯ ಜನರು, ವಿಶೇಷವಾಗಿ ಕಾರ್ಮಿಕರು ಕೆಲಸ ಹುಡುಕಿಕೊಂಡು ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ನಗರಗಳಲ್ಲಿ ಅವರ ದಯನೀಯ ಜೀವನ ಪರಿಸ್ಥಿತಿಯು ಈ ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ. ಉತ್ತರ ಕರ್ನಾಟಕ ಭಾಗಕ್ಕೆ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಮಾತ್ರ ಇದನ್ನು ಸರಿಪಡಿಸಲು ಸಾಧ್ಯ. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆಯಾದರೂ, ಸಾಗಬೇಕಾದ ಹಾದಿ ಇನ್ನೂ ದೀರ್ಘವಾಗಿದೆ.
ಈ ಲೇಖನ ಓದಿದ್ದೀರಾ?: ಮಕ್ಕಳ ಲೈಂಗಿಕ ಅಪರಾಧಿ Epstein ಜೊತೆಗೆ ರಾಜಮನೆತನಗಳ ಸಂಬಂಧವೇನು ?
ಯಾವುದೇ ವರದಿಯ ಯಶಸ್ಸು ಅದರ ಅನುಷ್ಠಾನದಲ್ಲಿದೆ. ಮುಂದಿನ ತಿಂಗಳು ತಮ್ಮ 17ನೇ ಬಜೆಟ್ ಮಂಡಿಸಲು ಸಿದ್ಧರಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಿಂದ ರಾವ್ ಸಮಿತಿಯ ಶಿಫಾರಸುಗಳನ್ನು ಬಜೆಟ್‌ನಲ್ಲಿ ಸೇರಿಸಿಕೊಳ್ಳಬಹುದು, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಗಳಿವೆ.
ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವಾಗ ಹಳೆಯ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಅಗತ್ಯ. ರಾಯಚೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಅವರ ಪ್ರಕಾರ, “ಅಭಿವೃದ್ಧಿಗೆ ಸ್ಪಷ್ಟ ಚೌಕಟ್ಟು ಇಲ್ಲದಿದ್ದರೆ ಈ ವರದಿಯೂ ಹಳೆಯ ವರದಿಗಳ ಹಾದಿಯನ್ನೇ ಹಿಡಿಯಬಹುದು. ಸರ್ಕಾರಿ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು, ಹಿರಿಯ ಅಧಿಕಾರಿಗಳನ್ನು ಈ ಪ್ರದೇಶಗಳಲ್ಲೇ ಕೆಲಸ ಮಾಡುವಂತೆ ನೇಮಿಸುವ ಮೂಲಕ ವಿಕೇಂದ್ರೀಕರಣ ಮಾಡಬೇಕು ಹಾಗೂ ಯೋಜನೆಗಳ ಪರಿಣಾಮಕಾರಿ ಜಾರಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದಿದ್ದಾರೆ.
ಈ ಭಾಗದ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಯಲ್ಲಿನ ತೀವ್ರ ವ್ಯತ್ಯಾಸಕ್ಕೆ ಕಾರಣಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹಿಂದುಳಿದ ಪ್ರದೇಶಗಳಿಗೆ ಈಗ ಗರಿಷ್ಠ ಮಟ್ಟದ ಉತ್ತೇಜನದ ಅಗತ್ಯವಿದೆ.
ಮೂಲ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ




