ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ನಾವು ಶ್ರಮವಹಿಸಲೇಬೇಕು. ಅನರ್ಹರನ್ನು, ದೂರದೃಷ್ಠಿ ಇಲ್ಲದವರನ್ನು ಚುನಾಯಿಸಿ ಕಳಿಸಿದ್ದರಿಂದ, ಅವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗೆ ಜನರೂ ಪರೋಕ್ಷ ಕಾರಣ ಎಂದು ಕುವೆಂಪು ಹೇಳುತ್ತಾರೆ.
ಕನ್ನಡದ ಸಾಕ್ಷಿ ಪ್ರಜ್ಞೆಯಾದ ಕುವೆಂಪು ತಮ್ಮ ವೈಚಾರಿಕ ಆಶಯದ ಮೂಲಕ ವಿಶ್ವ ಕವಿಯಾದವರು. ಅವರ ವಿಚಾರಧಾರೆಗಳನ್ನು ಜಗತ್ತಿನ ಸಾಮಾಜಿಕ ಸಂರಚನೆಗೆ ಅಳವಡಿಸಿಕೊಂಡು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. 1974ರ ಡಿಸೆಂಬರ್ 7ರಂದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇವರು ಮಾಡಿದ ಘಟಿಕೋತ್ಸವದ ಭಾಷಣವು ಯುವಜನತೆ ನಡೆಯಬೇಕಾದ ದಾರಿ ಹಾಗೂ ರೂಪಿಸಿಕೊಳ್ಳಬೇಕಾದ ವೈಚಾರಿಕ ಪ್ರಜ್ಞೆಯ ಬಗ್ಗೆ ಸದಾ ಎಚ್ಚರಿಸುತ್ತದೆ.
ಇಂದು ಕುವೆಂಪು ಜನ್ಮದಿನ. ಈ ದಿನವನ್ನು ವಿಶ್ವಮಾನವ ದಿನ ಎಂದು ಆಚರಣೆ ಮಾಡುತ್ತಿದ್ದೇವೆ. ಈ ಹೊತ್ತಿನಲ್ಲಿ ಕುವೆಂಪು ಕಲ್ಪಿಸಿದ ಕನ್ನಡ ಜಗತ್ತನ್ನು ರೂಪಿಸಲು ನಾವೆಷ್ಟು ಶ್ರಮಿಸುತ್ತಿದ್ದೇವೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ಸಮಕಾಲೀನ ಸಮಸ್ಯೆಗಳಿಗೆ ಕುವೆಂಪು ಹೇಳಿದ ವಿಚಾರ ಕ್ರಾಂತಿಯನ್ನು ಅನ್ವಯಿಸಿ ನೋಡಬೇಕು. ಎಲ್ಲಾ ಕ್ರಾಂತಿಗೂ ಮೂಲ ‘ವಿಚಾರ ಕ್ರಾಂತಿ’ ಎಂಬದನ್ನು ಮನನ ಮಾಡಿಕೊಳ್ಳಬೇಕು. ಯುವಜನರಲ್ಲಿ ಸದಾ ವಿಚಾರ ಕ್ರಾಂತಿ ಆಗುವ ವಾತಾವರಣವೊಂದನ್ನು ನಿರ್ಮಿಸಬೇಕಿರುವುದು ಆರೋಗ್ಯವಂತ ಸಮಾಜದ ಕನಸು ಕಾಣುತ್ತಿರುವ ನಮ್ಮೆಲ್ಲರ ಕರ್ತವ್ಯ.
ಇದನ್ನು ಓದಿದ್ದೀರಾ? ಕನ್ನಡ ನಾಡು ನುಡಿಯ ಭವಿಷ್ಯಕ್ಕಾಗಿ ಕಾಳಜಿಯ ವೇದಿಕೆ- ಸಮಾಜಮುಖಿ ಸಾಹಿತ್ಯ ಸಮ್ಮೇಳನ
ಮೂಢನಂಬಿಕೆ ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳ ವಿರುದ್ಧ ಮಾತನಾಡುತ್ತಾ, ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ, ದುರಂತಗಳ ಪ್ರಸ್ತಾಪಗಳನ್ನು ಒಳಗೊಂಡಿರುವ ಮತ್ತು ಇವುಗಳನ್ನು ಸುಧಾರಿಸಲು ಬಯಸುವ ಆಶಯಗಳು ಕುವೆಂಪು ಅವರ ಭಾಷಣದಲ್ಲಿದ್ದವು. ಮಾನಸಿಕ ಮತ್ತು ಬೌದ್ಧಿಕ ವಿಚಾರ ಕ್ರಾಂತಿಯಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬುದು ಕುವೆಂಪು ಅವರ ಧೃಡವಾದ ನಂಬಿಕೆ.
ಜನರಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವಿಜ್ಞಾನ ಬುದ್ಧಿ ನೆಲೆಯೂರದಿದ್ದರಿಂದ ಮೌಢ್ಯದಲ್ಲಿ ಮುಳುಗಿದ್ದಾರೆ. ಜಾತಿ, ಮತಗಳ ಭ್ರಾಂತಿಯಲ್ಲಿ ಸಿಲುಕಿದ್ದಾರೆ ಎಂದು ಹೇಳುವ ಕುವೆಂಪು, ಚುನಾವಣಾ ಪದ್ಧತಿಯಲ್ಲಿ ಬದಲಾವಣೆಗಳನ್ನು ತರಲು ಉಗ್ರ ಕ್ರಾಂತಿಯನ್ನು ಮಾಡಬೇಕಾಗಿ ಬಂದರೂ, ಅದಕ್ಕೆ ನಾವು ಸಿದ್ಧರಿರಬೇಕು ಎಂದು ಹೇಳುತ್ತಾರೆ.
ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ನಾವು ಶ್ರಮವಹಿಸಲೇಬೇಕು. ಅನರ್ಹರನ್ನು, ದೂರದೃಷ್ಠಿ ಇಲ್ಲದವರನ್ನು ಚುನಾಯಿಸಿ ಕಳಿಸಿದ್ದರಿಂದ, ಅವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗೆ ಜನರೂ ಪರೋಕ್ಷ ಕಾರಣ ಎಂದು ಕುವೆಂಪು ಹೇಳುತ್ತಾರೆ. ಪ್ರಸ್ತುತ, ರಾಜಕೀಯ ಅಂದರೆ ಕೆಟ್ಟದ್ದು ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ನಮ್ಮ ಪ್ರತಿಯೊಂದು ಆಗು-ಹೋಗುಗಳನ್ನು ನಿರ್ಧರಿಸುವ ರಾಜಕಾರಣದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿದೆ. ಹೀಗಾಗಿ, ರಾಜಕಾರಣದ ಹೊಸ ಮಾದರಿ ಕಟ್ಟಬೇಕಿರುವುದು ಇಂದಿನ ತುರ್ತು.
ಪ್ರಸ್ತುತ ಸರ್ಕಾರಗಳ ನೀತಿ ನಿರೂಪಣೆಗಳು ಹಾಗೆಯೇ ಆಗಿವೆ. ಪರೀಕ್ಷೆಗಳ ಫಲಿತಾಂಶ ಬಂದಾಗ, ಮುಂದೆ ಏನು ಆಗಬಯಸುವೆ ಎಂದು ಕೇಳಿದರೆ, ಬಹುಪಾಲು ಮಂದಿ ಐಎಎಸ್, ಐಪಿಎಸ್, ಕೆಎಎಸ್ ಎಂದು ಸರ್ಕಾರಿ ಉದ್ಯೋಗದ ಗುರಿಯನ್ನೇ ಹೇಳುತ್ತಾರೆ. ನಾನು ಲೀಡರ್ ಆಗಬೇಕು. ರಾಜಕಾರಣಿ ಆಗಬೇಕು ಎಂದು ಯಾರೂ ಹೇಳುವುದಿಲ್ಲ. ರಾಜಕಾರಣವೆಂದರೆ ಹಣ, ತೋಳುಬಲ, ಜಾತಿಬಲ ಎಂಬ ಪೂರ್ವಗ್ರಹ ಎಲ್ಲರಲ್ಲೂ ತುಂಬಿಹೋಗಿದೆ. ಈ ಹೊತ್ತಿನಲ್ಲಿ ಕುವೆಂಪು ಹೇಳಿದ ವಿಚಾರ ಕ್ರಾಂತಿ ಆಗಲೇಬೇಕು. ಚುನಾವಣಾ ರಾಜಕೀಯದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು.
ಇದನ್ನು ಓದಿದ್ದೀರಾ? ಕುವೆಂಪು ಭಾಷಣ | ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡವೇ ಸಾರ್ವಭೌಮ ಭಾಷೆ
ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ಸಾಮಾಜಿಕ, ರಾಜಕೀಯ ಮತ್ತು ಮತಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು ಎಂದು ಕುವೆಂಪು ಎಚ್ಚರಿಸಿದ್ದಾರೆ. ಮನುಜಮತ ವಿಶ್ವ ಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿಗಳ ಮೂಲಕ ಜಾತಿ, ಮತ, ಭೇದ ಭಾವಗಳು ದೂರಾಗಿ, ನಿಜವಾದ ಪ್ರಜಾಸತ್ತೆ ಸಮಾಜವಾದ ಸ್ಥಾಪನೆಯಾಗಲಿ ಎಂದು ಹೇಳಿದ್ದಾರೆ. ಇಂದಿಗೂ ಮರ್ಯಾದೆಗೇಡು ಹತ್ಯೆ, ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ, ಮುಸ್ಲಿಮರ ಮೇಲೆ ಸುಳ್ಳು ಸುದ್ದಿ ಹರಡಿ ದ್ವೇಷ ಹಬ್ಬಿಸುವ ‘ವಾಟ್ಸ್‌ಅಪ್ ಯೂನಿವರ್ಸಿಟಿಗಳು ಹೆಚ್ಚುತ್ತಲೇ ಇವೆ. ಈ ಎಲ್ಲವನ್ನು ಬುಡಮಟ್ಟ ಕೀಳಬೇಕಾದರೇ ಕುವೆಂಪು ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು.

ಆ ಸಂದರ್ಭದಲ್ಲಿ ಭಾರತ, ಕರ್ನಾಟಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಿಕ್ಕಟ್ಟುಗಳು ಉಂಟಾಗಿದ್ದವು. ಈ ಬಿಕ್ಕಟ್ಟುಗಳ ಪರಿಹಾರಕ್ಕೆ ಪ್ರಯತ್ನಗಳೂ ನಡೆದಿದ್ದವು. ಕರ್ನಾಟಕದಲ್ಲಿ ಬಿ. ಬಸವಲಿಂಗಪ್ಪ ಜಾರಿಗೊಳಿಸಿದ್ದ ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಹಾಗೂ ಅವರದ್ದೇ ಒಂದು ಹೇಳಿಕೆಯಿಂದ ಪ್ರಾರಂಭವಾದ ‘ಬೂಸ’ ಚಳವಳಿ, ಹಾವನೂರು ವರದಿ ಜಾರಿಯಾದದ್ದು, 1961 ಭೂ ಸುಧಾರಣೆ ಕಾನೂನು ಪರಿಷ್ಕರಣೆಯಂತಹ ಬದಲಾವಣೆ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕುವೆಂಪು ಅವರ ವಿಚಾರಕ್ರಾಂತಿಗೆ ಆಹ್ವಾನವನ್ನು ಗ್ರಹಿಸಬೇಕು. ಹಾಗೇ ಪ್ರಸ್ತುತ ಕಾನೂನುಗಳು, ಚಳವಳಿಗಳು, ಸಮಕಾಲೀನ ಸಮಸ್ಯೆಗಳನ್ನು ಇಟ್ಟು ವಿಚಾರಕ್ರಾಂತಿಗೆ ಆಹ್ವಾನ ಭಾಷಣವನ್ನು ಅನ್ವಯಿಸಿ ಅರ್ಥೈಸಿಕೊಳ್ಳುವ ಮತ್ತು ಸಮಸ್ಯೆಗಳ ಮೂಲವನ್ನು ಹುಡುಕುವ ಪ್ರಯತ್ನವನ್ನೂ ಅವಶ್ಯವಾಗಿ ನಾವೆಲ್ಲ ಮಾಡಬೇಕು.
ಕುವೆಂಪು, ಪರಂಪರೆಯನ್ನು ಪ್ರಶ್ನಿಸದೇ ಅನುಸರಿಸುವ ಮನೋಭಾವವೇ ಸಮಾಜದ ಹಿನ್ನಡೆಗೆ ಕಾರಣ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಮಾನವನು ಸ್ವತಂತ್ರ ಚಿಂತನೆಯ ಮೂಲಕ ಹೊಸ ದಾರಿಯನ್ನು ನಿರ್ಮಿಸಬೇಕು ಎಂಬ ಸಂದೇಶವನ್ನು ಅವರು ನೀಡುತ್ತಾರೆ. ಪ್ರಸ್ತುತ ಸಮಾಜದಲ್ಲಿ ಕಿರಿಯರು ಹಿರಿಯರನ್ನು ಪ್ರಶ್ನಿಸಬಾರದು. ವಿದ್ಯಾರ್ಥಿ ಅಧ್ಯಾಪಕರನ್ನು, ಬಡವ ಶ್ರೀಮಂತನನ್ನು, ಮಹಿಳೆ ಪುರುಷನನ್ನು,ಕಾರ್ಮಿಕ ಮಾಲೀಕನನ್ನ ಪ್ರಶ್ನಿಸಬಾರದು ಎಂಬ ಪಾರಂಪರಿಕ ಅಂದಾನುಕರಣೆಯು ಅಲಿಖಿತವಾಗಿ ಜಾರಿಯಲ್ಲಿದೆ. ಇದರಿಂದಾಗಿ ನಮ್ಮ ಪ್ರಶ್ನಿಸುವ ಮನೋಭಾವವೇ ಬತ್ತಿಹೋಗುತ್ತಿದೆ. ಪ್ರತಿ ಹೆಜ್ಜೆಯಲ್ಲೂ ಮೌನ ಸಂಸ್ಕೃತಿ ಪ್ರತಿಷ್ಠಾಪನೆ, ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಕವೇ ನಡೆಯುತ್ತಿದೆ. ಮಕ್ಕಳು ಸದಾ ಮೌನವಾಗಿರಬೇಕು, ಮಾತನಾಡಲೇ ಬಾರದು ಎಂಬ ಮನೋಭಾವನೆಯನ್ನು ಇದು ಹರಡುತ್ತಿದೆ. ಈಗಿದ್ದಾಗ ವಿಚಾರಕ್ರಾಂತಿ ಮಾಡುವುದಾರೂ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇಂದು, ಈ ಮೌನ ಸಂಸ್ಕೃತಿಯನ್ನು ಕೆಡವಿ ವಿಚಾರಗಳ ಕ್ರಾಂತಿಯನ್ನು ಉಂಟುಮಾಡುವುದು ನಮ್ಮೆಲ್ಲರ ಜವಾಬ್ದಾರಿ.
ಕುವೆಂಪು ಅವರು ವಿಚಾರ ಕ್ರಾಂತಿಯಲ್ಲಿ, ‘ಸಮಾಜವಾದವೇ ನಮ್ಮ ಗುರಿ ಎಂದು ಘೋಷಿಸಿದೆವು, ಪ್ರಜಾಸತ್ತೆಯೆ ನಮ್ಮ ವಿಧಾನ ಮಾರ್ಗ ಎಂದು ಸಾರಿ ಸಾರಿ ಪ್ರತಿಜ್ಞೆ ಮಾಡಿದ್ದೆವು. ಆದರೂ, ಹೀಗಾಯಿತಲ್ಲ ಏಕೆ..’ ಎಂದು ಪ್ರಶ್ನಿಸುತ್ತ, ‘ಇತರ ದೇಶಗಳು ಶತಮಾನಗಳ ವಿಕಾಸದಿಂದ ಸಾವಧಾನವಾಗಿ ಆದರೂ ಸದೃಢವಾಗಿ ಸಾಧಿಸಿದನ್ನು ನಾವು ತಕ್ಷಣವೇ ಸಾಧಿಸಲು ಹೊರಟದ್ದು ನಮಗೊದಗಿರುವ ಅಪಘಾತಕ್ಕೆ ಮೂಲ ಕಾರಣವಾಯಿತು’ ಎಂದು ಹೇಳುತ್ತಾರೆ. ಹೌದು ಈ ವಿಚಾರ ಯೋಚಿಸಿದಾಗ, ಕೇಳಲು ಕಟು ಎನಿಸಿದರು ಇದು ಸತ್ಯವೇ. ಏಕೆಂದರೆ, ಅಭಿವೃದ್ಧಿ ಎಂಬ ಹೆಸರಿನಲ್ಲಿ ದಟ್ಟಾರಣ್ಯಗಳನ್ನು ಕಡಿದು ಕಾರ್ಖಾನೆಗಳ ಕಟ್ಟಡಗಳನ್ನು ನಿರ್ಮಿಸಿದರೆ ಮಾತ್ರವೇ ಅಭಿವೃದ್ಧಿ ಎನಿಸುವುದೇ..? ಏಕೆ.. ದೇಶದ ಗಡಿತೀರದ ಹಳ್ಳಿಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಪೊರೈಸಿ, ಅಲ್ಲಿನ ಜನರನ್ನು ಅಕ್ಷರಸ್ತರನ್ನಾಗಿಸಿ, ಸಮಾಜದ ಪ್ರತಿ ಹಂತದಲ್ಲೂ ಸಮಾನ ಅವಕಾಶ ಕಲ್ಪಿಸಿ ಅವರನ್ನು ಮತಮೌಢ್ಯ ಎಂಬ ನಿತ್ಯರೋಗದಿಂದ ಹೊರತಂದು ಜಾಗೃತರನ್ನಾಗಿಸಿದರೆ ಅದು ಅಭಿವೃದ್ಧಿಯಲ್ಲವೇ…? ನಮ್ಮ ದೇಶಕ್ಕೆ ತೋರಿಕೆಯ ಅಭಿವೃದ್ಧಿಗಿಂತ ನೈಜ ಅಭಿವೃದ್ಧಿಯ ಅನಿವಾರ್ಯತೆ ಇದೆ.
ಕುವೆಂಪು ತಮ್ಮ ಭಾಷಣದಲ್ಲಿ ಹೇಳಿರುವ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಮೆಟ್ರೋ, ಟನಾಲ್ ರಸ್ತೆ, ವಿಮಾನ ನಿಲ್ದಾಣ, ನಗರ ಕೇಂದ್ರಿತ ಅಭಿವೃದ್ಧಿ ಮಾದರಿಗಳು ಅಷ್ಟೇ ಅಭಿವೃದ್ಧಿ ಅಲ್ಲ ಎಂಬುದನ್ನು ಆಳುವ ಸರ್ಕಾರಗಳ ಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕಿದೆ. ಅವರೂ ವಿಚಾರಕ್ರಾಂತಿಗೆ ಆಹ್ವಾನ ಭಾಷಣವನ್ನೊಮ್ಮೆ ಓದಬೇಕಿದೆ.
‘ಯುವಜನತೆ ಎಚ್ಚೆತ್ತುಕೊಂಡು ಧೀರ್ಘ ದೃಷ್ಟಿಯಿಂದಲೂ, ವಿಶಾಲ ಹೃದಯದಿಂದಲೂ, ಚಿರನವೀನವಾದ ಆತ್ಮನ ಚಿರಂತನ ‘ದರ್ಶನ’ವನ್ನು ಪಡೆದು ತಮ್ಮನ್ನೂ, ದೇಶವನ್ನೂ ಉದ್ಧಾರ ಮಾಡಿಕೊಳ್ಳಬೇಕಾಗಿದೆ’ ಎಂಬ ಕುವೆಂಪು ಅವರ ಮಾತಿನ ಆದರ್ಶದೊಂದಿಗೆ ನಾವೆಲ್ಲರೂ ಮುನ್ನಡೆಯಬೇಕಾಗಿದೆ. ವಿಚಾರ ಕ್ರಾಂತಿ ನಿರಂತರವಾಗಿ ಆಗಬೇಕಿದೆ. ಹೊಸತಾದ ಆಧ್ಯಾತ್ಮದ ಚಿಂತನೆ ದರ್ಶನದಿಂದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ.

ವರ್ಷಿತ ಎಂ ನಾಗರಾಜ್
ಮೂಲತಃ ಹಾಸನದವರು. ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.




