ಕರ್ನಾಟಕದ ದೀರ್ಘಕಾದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಗೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಅವರು ಸರಿಗಟ್ಟಿದ್ದಾರೆ. ಇದೇ ಸಂದರ್ಭದಲ್ಲಿ, ಅರಸು ಮತ್ತು ಸಿದ್ದರಾಮಯ್ಯ ಅವರ ಆಡಳಿತಗಳಿಗೆ ಹೋಲಿಕೆ ಮಾಡಿ, ಚಿಂತಕ ಎ ನಾರಾಯಣ್ ಅವರು 'ದೇವರಾಜ ಅರಸು-ಸಿದ್ದರಾಮಯ್ಯ: ಸಾಧನೆಯಲ್ಲಿ ಸಮಾನತೆ ಇದೆಯೇ?' ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು. ಈ ಲೇಖನಕ್ಕೆ ಗಿರೀಶ್ ತಾಳಿಕಟ್ಟೆ ಅವರು ಪ್ರತಿಕ್ರಿಯೆ ಬರೆದಿದ್ದಾರೆ. ಅವರ ಪ್ರತಿಕ್ರಿಯೆಯ ಬರಹ ಇಲ್ಲಿದೆ!
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆದದ್ದನ್ನು ನಾವು ಅದೃಷ್ಟ ಎನ್ನಬಹುದು; ಜೆ.ಎಚ್ ಪಟೇಲರು, ಕುಮಾರಸ್ವಾಮಿ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಕೂಡಾ ಮುಖ್ಯಮಂತ್ರಿ ಆದದ್ದನ್ನು ನಾವು ಅದೃಷ್ಟ ಎನ್ನಬಹುದು. ಆದರೆ, ಬಂಗಾರಪ್ಪ ಸಿಎಂ ಆದದ್ದನ್ನು, ವೀರಪ್ಪ ಮೊಯ್ಲಿ, ಧರಂಸಿಂಗ್, ಸಿದ್ದರಾಮಯ್ಯ ಸಿಎಂ ಆದದ್ದನ್ನು ಅದೃಷ್ಟ ಎನ್ನಬಹುದೇ? ಈ ಪ್ರಶ್ನೆಯಲ್ಲಿ ಮೊಯ್ಲಿ ಮತ್ತು ಧರಂ ಸಿಂಗ್ ಸಿಎಂ ಆದದ್ದು ಅದೃಷ್ಟ ಎಂದು ನಿಸ್ಸಂಶಯವಾಗಿ ಬಹಳಷ್ಟು ಮಂದಿ ವಾದಿಸಬಹುದು. ಬಹುಪಾಲು ಜನರಿಗೆ ಅದು ಸರಿ ಅಂತಲೂ ಅನ್ನಿಸಬಹುದು. ಆದರೆ, ರಾಜಕಾರಣದ ಮಟ್ಟಿಗೆ ‘ಅದೃಷ್ಟ’ ಎನ್ನುವ ಎಣಿಕೆ ‘ಅನಾಯಾಸವಾಗಿ ಒದಗಿಬಂದ ಅಧಿಕಾರಕ್ಕಷ್ಟೆ’ಸೀಮಿತ’ವಾಗಿರುವುದಿಲ್ಲ, ಅದರ ಹಿಂದೆ ಜಾತಿಯ ಪ್ರಭಾವವೂ ಅವಿತುಕೊಂಡಿರುತ್ತದೆ.
ಭಾರತದ ರಾಜಕಾರಣದಲ್ಲಿ ಒಬ್ಬ ವ್ಯಕ್ತಿಯ ಜಾತಿಯನ್ನು ಹೊರಗಿಟ್ಟು ಕೇವಲ ‘ಅನಾಯಾಸ’ದ ಮಾನದಂಡದಲ್ಲಿ ಅದೃಷ್ಟವನ್ನು ವ್ಯಾಖ್ಯಾನಿಸಲು ಮುಂದಾಗುವುದು ಸಮಂಜಸವೆನಿಸದು. ಜಾತಿಯೇ ಅರ್ಹತೆಯಾಗಿರುವ ಇಲ್ಲಿ ಒಬ್ಬ ಮೇಲ್ಜಾತಿ ರಾಜಕಾರಣಿಗೆ ‘ಅದೃಷ್ಟ’ ಸಲೀಸಾಗಿ ದಕ್ಕುವ ಸರಕು. ಆದರೆ ಹಿಂದುಳಿದ ಜಾತಿಯ ನಾಯಕದವನು, ಸಮಾಜದ ಕಣ್ಣಿಗೆ ಅನಾಯಾಸವಾಗಿ ದಕ್ಕಿದಂತೆ ಕಾಣುವ ‘ಅದೃಷ್ಟ’ವನ್ನು ಹೊಂದಲು ಸಾಕಷ್ಟು ಹೊಂದಾಣಿಕೆಗಳಿಗೆ ತೆರೆದುಕೊಂಡಿರಬೇಕಾಗುತ್ತದೆ. ಬಹಳಷ್ಟು ಸಲ ಅಂತಹ ಹೊಂದಾಣಿಕೆ ಆತನನ್ನು ಬೇರೊಬ್ಬರ ಕೈಗೊಂಬೆಯಾಗುವಂತೆ ಮಾಡಿರುತ್ತದೆ. ಹಾಗಾಗಿ generalised ಅದೃಷ್ಟದ ವ್ಯಾಖ್ಯಾನೆಯಲ್ಲಿ ನಾವು ಅಳೆಯುವ ಹಿಂದುಳಿದ ಸಮುದಾಯದ ಅದೃಷ್ಟವಂತ ನಾಯಕರು ಬಹುಪಾಲು ‘ಕೈಗೊಂಬೆ’ ನಾಯಕರಂತೆ ನಮಗೆ ಗೋಚರಿಸುತ್ತಾರೆ. ಆ ಅದೃಷ್ಟವನ್ನು ಸಂಪಾದಿಸಿಕೊಳ್ಳಲು ಅವರು ತೆತ್ತ ಬೆಲೆ ಅದಾಗಿರುತ್ತದೆ. ಹಾಗಂತ, ಮೇಲ್ಜಾತಿಯ ಅದೃಷ್ಟವಂತ ರಾಜಕಾರಣಿಗಳು ‘ಕೈಗೊಂಬೆ’ಗಳಾಗಿಲ್ಲವೇ? ಎಂದು ನೀವು ಕೇಳಬಹುದು. ಖಂಡಿತ ಹೌದು. ಸದಾನಂದ ಗೌಡ, ಶೆಟ್ಟರ್, ಬೊಮ್ಮಾಯಿ ಇವರೆಲ್ಲ ಮೇಲ್ಜಾತಿ ಅದೃಷ್ಟವಂತ-ಕಂ-ಕೈಗೊಂಬೆ ನಾಯಕರಾಗಿ ಗೋಚರಿಸಿದರೂ ಅದು ಅವರ ವೈಯಕ್ತಿಕ ವ್ಯಕ್ತಿತ್ವದಲ್ಲಿನ ದಿಟ್ಟತೆಯ ಕೊರತೆಯಾಗಿರುತ್ತದೆಯೇ ಹೊರತು, ಜಾತಿ ಎಂಬ ಸಾಮಾಜಿಕ ಆಯಾಮದ ಊನತೆಯಾಗಿರುವುದಿಲ್ಲ.
ಈ ಕಾರಣಕ್ಕೆ ಒಬ್ಬ ಮೇಲ್ಜಾತಿ ನಾಯಕನಿಗೆ ಸಿಗುವ ಅನಾಯಾಸ ಅಧಿಕಾರವನ್ನು ನಾವು ‘ಅದೃಷ್ಟ’ ಎಂದು ಕರೆದ ಮಾನದಂಡದಲ್ಲೆ, ಹಿಂದುಳಿದ ಸಮುದಾಯಗಳ ನಾಯಕರ ಅದೃಷ್ಟವನ್ನು ತೂಗಲು ಸಾಧ್ಯವಿಲ್ಲ. ಯಾವ ಪ್ರತಿರೋಧವಿಲ್ಲದೆ, ಪ್ರತಿಕೂಲ ಪರಿಣಾಮಗಳಿಗೆ ಎರವಾಗದೆ ಅಧಿಕಾರ ತ್ಯಾಗಕ್ಕೆ ಸಿದ್ದನಾಗಬೇಕಾದ ಅಲಿಖಿತ ಪೂರ್ವಭಾವಿ ಸಾಮಾಜಿಕ ಒಪ್ಪಂದದ ಬೆಲೆ ತೆತ್ತೇ ಆತ ಆ ಅದೃಷ್ಟವನ್ನು ಸಂಪಾದಿಸಿಕೊಂಡಿರುತ್ತಾನೆ. ಯಡಿಯೂರಪ್ಪನವರಿಗೆ ಅಧಿಕಾರ ವಂಚನೆಯಾದಾಗ ಭುಗಿಲೆದ್ದಂತಹ ರಾಜಕೀಯ ಆಕ್ರೋಶ, ಧರಂಸಿಂಗ್ ಸಟ್ಟನೆ ಅಧಿಕಾರ ಕಳೆದುಕೊಂಡಾಗ ಭುಗಿಲೇಳುವುದಿಲ್ಲ. ಇದಕ್ಕೆ ಕಾರಣ ಜಾತಿ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಧರಂಸಿಂಗ್ ಬದಲು ಖರ್ಗೆಯವರನ್ನು ಯಾಕೆ ಅದೃಷ್ಟ ಆಯ್ಕೆ ಮಾಡಿಕೊಳ್ಳಲಿಲ್ಲ? ಅದೃಷ್ಟಕ್ಕಾಗಿ ಧರಂಸಿಂಗ್ ತೆತ್ತ ಬೆಲೆಯನ್ನು ಈ ಪ್ರಶ್ನೆ ನಮಗೆ ಅರ್ಥ ಮಾಡಿಸುತ್ತದೆ. ಹಾಗಿರುವಾಗ ರಾಜಕಾರಣದಲ್ಲಿ ಅದೃಷ್ಟವನ್ನು ವ್ಯಾಖ್ಯಾನಿಸುವಾಗಲೂ ನಾವು ಜಾತಿ ಎನ್ನುವ ಸಂಗತಿಯನ್ನು ಉಪೇಕ್ಷಿಸುವುದು ಸೂಕ್ತವೇ?
ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಜಾತಿಸಂಕೀರ್ಣತೆಗೆ ಹೋಲಿಸಿದಾಗ ನಮ್ಮದೆ ದೇವೇಗೌಡರು ಪ್ರಧಾನಿ ಆದದ್ದು ಕೂಡಾ ಅದೃಷ್ಟ ಎನಿಸಿಕೊಳ್ಳದು. ಬಹುಶಃ ಜಾತಿಯ ಜೊತೆಗೆ ಬೆರೆತ ಅದೃಷ್ಟ ರಾಜಕಾರಣವನ್ನು ಅರಿಯುವಲ್ಲಿ ದೇವೆಗೌಡರ ಪ್ರಕರಣವೇ ಒಂದು critical exemplar ಎನ್ನಬಹುದು. ಕರ್ನಾಟಕದ ಮಟ್ಟಿಗೆ ದೇವೆಗೌಡರ ಬೆನ್ನಿಗಿರುವುದು ಪ್ರಭಾವಿ ಜಾತಿ. ಆದರೆ ರಾಷ್ಟ್ರಮಟ್ಟದಲ್ಲಿ ಆ ಜಾತಿಯ ಪ್ರಭಾವ ನಗಣ್ಯ. ಹಾಗಾಗಿ ಪ್ರಧಾನಿ ಹುದ್ದೆಯಿಂದ ಅವರನ್ನು ಇಳಿಸಿದಾಗ ಪ್ರತಿರೋಧ ಹುಟ್ಟಲಿಲ್ಲ. ಒಂದುವೇಳೆ ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಅದೇ ರೀತಿ ಕೆಳಗೆ ಇಳಿಸಿದ್ದರೆ ರಾಜಕೀಯ ಆಕ್ರೋಶ ಹೇಗಿರುತ್ತಿತ್ತು? ಪ್ರತಿರೋಧ-ರಹಿತ ಪದತ್ಯಾಗಕ್ಕೆ ಸೂಕ್ತ ಎಂಬ ಕಾರಣಕ್ಕೇ ರಾಷ್ಟ್ರ ರಾಜಕಾರಣದಲ್ಲಿ ಅವರಿಗೆ ಪ್ರಧಾನಿ ಹುದ್ದೆಯ ಅದೃಷ್ಟ ಒಲಿದು ಬಂತು. ಆದರೆ ರಾಜ್ಯ ರಾಜಕಾರಣದಲ್ಲಿ ಅವರಿಗೆ ಒಲಿದ ಸಿಎಂ ಹುದ್ದೆಯನ್ನು ಇದೇ ಮಾನದಂಡದಲ್ಲಿ ನೋಡಲಾಗದು. ಇದು, ಜಾತಿಯನ್ನು ಆವರಿಸಿಕೊಂಡ ಅದೃಷ್ಟದ ವ್ಯಾಖ್ಯಾನೆಯಲ್ಲಿರುವ ವ್ಯತ್ಯಯ. ಈ ಸೂಕ್ಷ್ಮವನ್ನು ಗ್ರಹಿಸಿಯೆ ನಾವು ಅದೃಷ್ಟಗಳನ್ನು ಆರೋಪಿಸಬೇಕಾಗುತ್ತದೆ.
ಈಗ ಯೋಚಿಸೋಣ; ಹಿಂದುಳಿದ ರಾಜಕೀಯ ನೇತಾರರ ಪಾಲಿಗೆ ಅದೃಷ್ಟ ಎನ್ನುವುದು ಇಷ್ಟೆಲ್ಲ ಬೆಲೆ ಕೇಳುತ್ತಿರುವಾಗ, ಒಬ್ಬ ಹಿಂದುಳಿದ ಸಮುದಾಯದ ನಾಯಕ/ಕಿ, ಮೇಲ್ನೋಟಕ್ಕೆ ಗೋಚರಿಸುವಂತೆ external factorಗಳ synergyಯಿಂದಾಗಿ ಅಧಿಕಾರಕ್ಕೇರಿದಂತೆ ಕಂಡುಬಂದಾಗ್ಯೂ ಆತ/ಆಕೆ ಯಾರದೋ ಕೈಗೊಂಬೆಯಾಗದಂತೆ, ಪ್ರತಿರೋಧ ಮತ್ತು ಪ್ರತಿಕೂಲ ಪರಿಣಾಮಗಳ ಸಾಧ್ಯತೆಯನ್ನು ಮುಕ್ತವಾಗಿಟ್ಟುಕೊಂಡು ಆ ಅಧಿಕಾರವನ್ನು ಚಲಾಯಿಸುತ್ತಾನೆ/ಳೆಂದಾದರೆ ಅದನ್ನು ಅದೃಷ್ಟ ಎನ್ನಲು ಸಾಧ್ಯವೇ?
ಅಲ್ಲದೇ, ಅದೃಷ್ಟ ಎನ್ನುವ ಸಂಗತಿ ಒಮ್ಮೆಯೋ, ಅಥವಾ ಹೆಚ್ಚೆಂದರೆ ಎರಡನೇ ಸಲವೋ ವ್ಯಕ್ತಿಯೊಬ್ಬನ ಕೈಹಿಡಿಯಬಲ್ಲದು. ಆದರೆ ಮುರ‍್ನಾಲ್ಕು ದಶಕಗಳ ಕಾಲ ನಿರಂತರವಾಗಿ ಒಬ್ಬ ವ್ಯಕ್ತಿ ಉನ್ನತಿಗೇರುತ್ತಲೇ ಬರುತ್ತಿದ್ದಾನೆ, ಅದೂ ಹಲವು ಅಪಾಯಕಾರಿ ಅಡೆತಡೆಗಳ ಹೊರತಾಗಿಯೂ ಎಂದಾಗ, ಆತನ ಪರಿಶ್ರಮ-ತಂತ್ರಗಾರಿಕೆ-ಚಾಣಾಕ್ಷತೆಗಳನ್ನು ಬದಿಗಿರಿಸಿ ಅದನ್ನು ‘ಅದೃಷ್ಟ’ವೆಂದು ಕರೆಯುವುದು ಎಷ್ಟು ಸರಿಯಾದೀತು?
ಈ ಲೇಖನ ಓದಿದ್ದೀರಾ?: ದೇವರಾಜ ಅರಸು-ಸಿದ್ದರಾಮಯ್ಯ: ಸಾಧನೆಯಲ್ಲಿ ಸಮಾನತೆ ಇದೆಯೇ?
ಇತ್ತೀಚೆಗೆ, ಅಧಿಕಾರಾವಧಿಯ ಮಾನದಂಡದಲ್ಲಿ ದೇವರಾಜ ಅರಸು ಅವರನ್ನು ಹಿಂದಿಕ್ಕಿದ ಸಿದ್ದರಾಮಯ್ಯನವರ ದಾಖಲೆಯನ್ನು ವಿಶ್ಲೇಷಿಸುತ್ತಾ ಹಿರಿಯ ಪತ್ರಕರ್ತರು, ವಿಶ್ಲೇಷಕರೂ ಆದ ಎ ನಾರಾಯಣ ಅವರು ‘ಈ ದಿನ’ ವೆಬ್‌ನಲ್ಲಿ ಬರೆದ ಒಂದು ವಿಶ್ಲೇಷಣೆಯಲ್ಲಿ ಸಿದ್ದರಾಮಯ್ಯನವರನ್ನು ಅದೃಷ್ಟವಂತ ರಾಜಕಾರಣಿ ಎಂದು ಕರೆದಿದ್ದಾರೆ. ಆದರೆ ಮೇಲಿನ ಆಯಾಮಗಳನ್ನು ಒಳಗೊಂಡು ನೋಡಿದಾಗ ಸಿದ್ದರಾಮಯ್ಯನವರನ್ನು ಅದೃಷ್ಟವಂತ ರಾಜಕಾರಣಿ ಎಂದು ಲೇಬಲ್‌ಗೊಳಪಡಿಸುವುದು ಸಮಂಜಸ ಎನಿಸದು. ಒಳಿತು-ಕೆಡುಕು-ಇತಿ-ಮಿತಿಗಳೇನೆ ಇರಬಹುದು, ಆದರೆ ಇವತ್ತಿಗೂ ಹಿಂದುಳಿದ ನಾಯಕರ ಪಾಲಿಗೆ ಕಬ್ಬಿಣದ ಕೋಟೆಯಾಗಿರುವ ರಾಜಕಾರಣದಲ್ಲಿ ಸಿದ್ದರಾಮಯ್ಯನವರಂತಹ ಒಬ್ಬ ನಾಯಕನ ಬೆಳವಣಿಗೆಯನ್ನು ‘ಅದೃಷ್ಟ’ ಎಂದು ಕರೆದುಬಿಡುವುದು, ಮುಂಬರುವ ಆ ಸಮುದಾಯಗಳ ಪೀಳಿಗೆಗೆ ಅಗೋಚರ ತಡೆಗೋಡೆಯಾಗುವ ಅಪಾಯವಿದೆ. ಅದೃಷ್ಟದ ಹೊರತಾಗಿ ಒಬ್ಬ ಹಿಂದುಳಿದ ನಾಯಕ ತನ್ನ ಸ್ವಂತ ಪರಿಶ್ರಮದಿಂದ, ಶೋಷಿತ ವರ್ಗಗಳ ದನಿಯಾಗಿ, ಸೈದ್ದಾಂತಿಕ ನೆಲೆಗಟ್ಟಿನ ಮೇಲೆ ಸಾಮುದಾಯಿಕ ನಾಯಕನಾಗಿ ಬೆಳೆಯಲು ಸಾಧ್ಯವಿಲ್ಲ ಎಂಬ ಸಂದೇಶ ಇಲ್ಲಿ ರವಾನೆಯಾಗುವ ಅಪಾಯವಿದೆ. ಅಲ್ಲದೇ, ಸಿದ್ದರಾಮಯ್ಯನವರು ಪ್ರತಿಪಾದಿಸುತ್ತಿರುವ ಮತ್ತು ಅವರನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ `ಅಹಿಂದ ರಾಜಕಾರಣ’ದ ಪ್ರಭಾವವನ್ನು ಅಲ್ಲಗಳೆಂತಾಗುತ್ತದೆ, ಆ ಮೂಲಕ ಅದರ ರಾಜಕೀಯ ಭವಿಷ್ಯವನ್ನೇ ಕುಂದಿಸಿದಂತಾಗುತ್ತದೆ.
ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಇದ್ದುದೇ ಸಿದ್ದರಾಮಯ್ಯನವರ ಅದೃಷ್ಟದ ಗುಟ್ಟು ಎನ್ನುವಂತೆ ನಾರಾಯಣ ಅವರು ವಿವರಿಸುತ್ತಾರೆ. ಯೋಚಿಸಿ ನೋಡಿ, ಇವತ್ತಿಗೂ ಭಾರತದ ರಾಜಕಾರಣದಲ್ಲಿ ಬಲಾಢ್ಯ ಜಾತಿಯನ್ನು ತನ್ನ ಪ್ರಭಾವವಾಗಿ ಬೆಳೆಸಿಕೊಳ್ಳದ ಒಬ್ಬ ಹಿಂದುಳಿದ ಜಾತಿಯ ನಾಯಕ ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಲಭ್ಯವಾಗುತ್ತಾ ಸಾಗುವುದು ಅಷ್ಟು ಸುಲಭವೇ? ಅದನ್ನು ಅದೃಷ್ಟದ ಹೆಸರಿನಿಂದ ಸಮೀಕರಿಸಿಬಿಡಬಹುದೇ?
ಸಿದ್ದರಾಮಯ್ಯನವರು ಲೋಪಗಳಿಲ್ಲದ ಪರಿಪೂರ್ಣ ವ್ಯಕ್ತಿಯಲ್ಲ. ಅಂತಹ ಪರಿಪೂರ್ಣ ವ್ಯಕ್ತಿ ಇರಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಒಂದಷ್ಟು ಸಂಗತಿಗಳನ್ನು ನಾರಾಯಣ ಅವರು ತಮ್ಮ ಬರಹದಲ್ಲಿ ಚರ್ಚಿಸಿದ್ದಾರೆ. ಅವುಗಳು ನಿಜಕ್ಕೂ ಚರ್ಚೆಗೆ ಯೋಗ್ಯವಾದಂತವು. ಅವುಗಳ ಬೇರೆಬೇರೆ ಮಗ್ಗುಲುಗಳು ಚರ್ಚೆಯಾಗಿ, ಓರೆಕೋರೆಗಳು ಸಪಾಟಾಗಲೇಬೇಕು. ಆದರೆ ಅವರ ಇಡೀ ರಾಜಕಾರಣವನ್ನೇ ‘ಅದೃಷ್ಟದ’ ತಕ್ಕಡಿಯಲ್ಲಿಡುವ ಮುನ್ನ ನಾವು ನಮ್ಮನ್ನೇ ಒಂದುಬಾರಿ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಅಂತಹ ಅಭಿಪ್ರಾಯದ ಮೂಲಕ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಶೋಷಿತ ಸಮುದಾಯಗಳ ಮುಂದಿನ ಪೀಳಿಗೆಗೆ ಎಂತಹ ಸುಪ್ತ ಪಾಠವನ್ನು ರವಾನಿಸುತ್ತೇವೆ? ಮೇಲ್ಜಾತಿ ರಾಜಕಾರಣ ಇದನ್ನು ಹೇಗೆಲ್ಲ ಬಳಸಿಕೊಳ್ಳಬಹುದು.




