ಮಾರಿಕೊಂಡ ಮಾಧ್ಯಮಗಳ ನಡುವೆ, ಯಾವುದೇ ಒಂದು ಧರ್ಮದ ಪರ ನಿಲ್ಲದೆ, ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ದಾಖಲಿಸಿ, ಪತ್ರಿಕಾ ಧರ್ಮವನ್ನು ಗೌರವಿಸಿದ್ದಾರೆ ಲೇಖಕ ಇರ್ಷಾದ್.
ವರ್ಗ ವ್ಯವಸ್ಥೆಯೊಳಗೆ ಸಂಪತ್ತಿದ್ದಲ್ಲಿ ಶೋಷಣೆ, ಹಿಂಸೆಯಿರುತ್ತದೆ. ಹಾಗೆಯೇ ಸೌಹಾರ್ದ ಸಂಪತ್ತು ತುಂಬಿದ್ದ ಕರಾವಳಿಯಲ್ಲಿ ಮತೀಯವಾದ ಎಂಬ ರಾಕ್ಷಸನನ್ನು ಹುಟ್ಟಿಸಿ, ಬೆಳೆಸಲು ನಮ್ಮ ನಾಡಿನ ವ್ಯವಸ್ಥೆ ನಡೆಸಿದ ಪ್ರಯತ್ನ, ಬಲಿತೆಗೆದುಕೊಂಡ ಸಾಕ್ಷಿಗಳನ್ನು, ನೊಂದವರ, ಕೊಂದವರ ಎಲ್ಲರೆದುರು ತೆರೆದಿಟ್ಟಿದೆ ಲೇಖಕ, ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿಯವರ ಕರಾವಳಿಯ ರಕ್ತ ಕಣ್ಣೀರು.
ಕಳೆದ ಒಂದು ದಶಕದಲ್ಲಿ ಮನುಜ ಮತದ ಮೇಲೆ ಕೋಮುದ್ವೇಷದ ಸವಾರಿ ಮಾಡಿದ ಹತ್ತಾರು ಕೃತ್ಯಗಳು ಈ ಪುಸ್ತಕದಲ್ಲಿ ಆಧಾರವಾಗಿದೆ. ಸೌಹಾರ್ದತೆ, ಕಾರುಣ್ಯ ತುಂಬಿದ್ದ ದಕ್ಷಿಣಕನ್ನಡದಲ್ಲಿ ಹಿಂದೂ ಮತ್ತು ಮುಸಲ್ಮಾನ ಮತೀಯವಾದಿಗಳು ಆ ನೆಲದ ಚಿತ್ರಣವನ್ನು ಬದಲಿಸಲು ಬಲಿತೆಗೆದುಕೊಂಡಿದ್ದು ತಮ್ಮವರನ್ನೇ. ಕೋಮುದ್ವೇಷ ತನ್ನ ರಕ್ತದಾಹ ತೀರಿಸಿಕೊಳ್ಳಲು ಬಡವರ ಮಕ್ಕಳು, ಅಮಾಯಕರನ್ನು ಶಸ್ತ್ರವಾಗಿ ಬಳಸಿಕೊಂಡು ಅವರ ಬದುಕುಗಳನ್ನು ಬಲಿಪಡೆದು ಕುಟುಂಬಗಳನ್ನು ಅನಾಥ ಮಾಡಿದೆ. ಆ ರಾಕ್ಷಸನನ್ನು ಹುಟ್ಟು ಹಾಕಿ, ಸಲಹುತ್ತಿರುವ ಕಾಣದ ಕೈಗಳು ಯಾವುವು ಎಂಬುದನ್ನು ಈ ಲೇಖನಗಳು ಹುಡುಕಾಟಕ್ಕೆ ಹಚ್ಚುತ್ತವೆ.
ಇದನ್ನು ಓದಿದ್ದೀರಾ? ತುಳುನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ “ಕರಾವಳಿಯ ರಕ್ತ ಕಣ್ಣೀರು”
ಮಹಿಳೆ, ರಾಣಿ ಅಬ್ಬಕ್ಕ ಜತೆಯಾಗಿ ನಿಂತು ಪೋರ್ಚುಗೀಸ್ ಸೈನ್ಯಕ್ಕೆ ಒಗ್ಗಟ್ಟಿನ ಪಾಠ ಕಲಿಸಿದ ಇಲ್ಲಿನ ಹಿಂದೂ ಮುಸಲ್ಮಾನರು ತಮ್ಮವರದ್ದೇ ಕೋಮುದ್ವೇಷದ ಎದುರು ಕಂಗಾಲಾಗಿದ್ದಾರೆ. ಎಲ್ಲರ ಅಂಗಳದಲ್ಲಿ ಯಾರಿಗೂ ಅಂಜದೆ ಬೆಳಗುತ್ತಿದ್ದ ದೀಪಗಳು ಮತೀಯವಾದಿಗಳ ದ್ವೇಷ ದಳ್ಳುರಿಗೆ ನಲುಗಿರುವುದಕ್ಕೆ ಹಲವು ಸನ್ನಿವೇಷಗಳು ಇಲ್ಲಿ ಕಣ್ಣಿಗೆ ರಾಚುತ್ತವೆ.
ಕರಾವಳಿ ತಾಯಂದಿರ ರಕ್ತಕಣ್ಣೀರಿಗೆ, ಕುಟುಂಬದವರಿಗಾದ ಮಾಸದ ಗಾಯಗಳಿಗೆ ಕಾರಣ ಮತೀಯವಾದಿಗಳು ಮಾತ್ರವಲ್ಲ. ಮತೀಯವಾದಿಗಳಿಗೆ ಕಡಿವಾಣ ಹಾಕುವ ಬದಲು, ತನ್ನವರು, ತನ್ನ ನೆರೆಹೊರೆಯವರು, ತನ್ನಂತೆಯೇ ಇರುವವರು, ಕಡೆಗೆ ತನ್ನನ್ನೂ ತಾನು ಹತ್ಯೆ ಮಾಡಿಕೊಳ್ಳುವ ಕ್ರೌರ್ಯ ಮೆರೆಯಲು, ಸ್ವತಂತ್ರವಾಗಿ ಬಿಟ್ಟ ಪೊಲೀಸ್ ಇಲಾಖೆ. ಘಟನೆಗಳು ಹೆಚ್ಚುತ್ತಿದ್ದರೂ ಆ ನೆಲದಲ್ಲಿ ಶಾಂತಿ ನೆಲೆಸಲು ಕ್ರಮಕೈಗೊಳ್ಳುವುದನ್ನು ಬಿಟ್ಟು, ಧರ್ಮ ರಾಜಕಾರಣ ನಡೆಸಿದ ಸರ್ಕಾರಗಳು.

ತನ್ನ ಕಣ್ಣ ಮುಂದೆಯೇ ಸಂವಿಧಾನ ವಿರೋಧಿ ಕೋಮು ಕೃತ್ಯಗಳು ನಡೆದಿದ್ದರೂ, ಹಿಂದೂ ಮುಸ್ಲಿಂ ಮತೀಯವಾದಿಗಳನ್ನು ಮೆರೆಯಲು ಬಿಟ್ಟು ಬಲಿಪಶುಗಳಿಗೆ ನ್ಯಾಯ ನಿರಾಕರಣೆ ಮಾಡಿದ ಈ ನೆಲದ ನ್ಯಾಯಾಲಯಗಳು. ಮಾತ್ರವಲ್ಲ ತನ್ನ ಅಸ್ತಿತ್ವವನ್ನೇ ಮಾರಿಕೊಂಡಿರುವ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿದು ಒಬ್ಬ ವ್ಯಕ್ತಿ, ಒಂದು ಪ್ರದೇಶದಲ್ಲಿ ಪರಿಹರಿಸಿಕೊಳ್ಳಬಹುದಾದ ಸಮಸ್ಯೆಯನ್ನು ರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಿ, ಹಬ್ಬಿಸಿ, ದೇಶದ ಹಲವೆಡೆ ಹಿಂದೂ ಮುಸಲ್ಮಾನರನ್ನು ಒಡೆದು ಹಾಕಲು ಮಾಡಿದ ಸಮಾಜಘಾತುಕ ಕೆಲಸ.

ಅದಕ್ಕೆ ಸ್ಪಷ್ಟ ಉದಾಹರಣೆ ಅಮಾಯಕ ಪ್ರವೀಣ್ ನೆಟ್ಟಾರು ಹತ್ಯೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ರಾಜ್ಯದ ಜನರ ಪ್ರತಿನಿಧಿ ಎಂಬುದಕ್ಕೆ ಎಳ್ಳು ನೀರು ಬಿಟ್ಟು, ಪ್ರವೀಣ್ ಅವರ ಮನೆಗೆ ಮಾತ್ರ ಭೇಟಿ ನೀಡುತ್ತಾರೆ. ಈ ಕೊಲೆಯನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು, ಒಂದು ಧರ್ಮದ ಜನರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಅಂದಿನ ಬಿಜೆಪಿ ಶಾಸಕರು, ನಾಯಕರು ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಎತ್ತಿ ಕಟ್ಟಿ, ಕೋಮು ಸೌಹಾರ್ದತೆ ಕದಡಲು ಸಕಲ ಪ್ರಯತ್ನಗಳನ್ನೂ ಮಾಡಿದ್ದಾರೆ. ಇದೇ ನೆಲದ ಸಚಿವೆಯೊಬ್ಬರು, ತನ್ನವರ ದುರ್ಬರ ಹತ್ಯೆಗಳಿಂದ ದಿಕ್ಕುಗೆಟ್ಟ ಹತ್ತಾರು ತಾಯಂದಿರ, ಹೆಣ್ಣು ಮಕ್ಕಳೆದುರು ಮತೀಯ ವಿಷಕಾರಿ, ಹೆಣ್ಣು ಎಂಬ ಶೋಭೆಗೆ ಕಳಂಕ ತಂದಿದ್ದರು. ಪರಿಣಾಮ ಕರಾವಳಿಯಲ್ಲಿ ನಡೆದ ಕೃತ್ಯದ ಕುರಿತು ಬೇರೆ ಜಿಲ್ಲೆಗಳಲ್ಲಿಯೂ ಹಿಂದೂ ಮುಸಲ್ಮಾನರು ಪರಸ್ಪರ ಬುಸುಗುಟ್ಟುವ, ದುರುಗುಟ್ಟುವ, ಅನುಮಾನಿಸುವ ವಿಷಮ ಸ್ಥಿತಿ ಎದುರಿಸಬೇಕಾಯಿತು. ಪ್ರವೀಣ್ ಕೊಲೆಯ ಘಟನೆಯನ್ನು ಓದುವಾಗ ಇವೆಲ್ಲಾ ಕಣ್ಣ ಮುಂದೆ ಹಾದುಹೋಗುತ್ತದೆ.
ಸಣ್ಣ, ಸ್ಥಳೀಯ ಘಟನೆಗಳಿಗೂ ಕೋಮು ಬಣ್ಣ ಬಳಿದ ದುಷ್ಟ ಶಕ್ತಿಗಳ ನಡುವೆಯೂ, ತನ್ನ ಕುಟುಂಬದ ದೀಪ ಆರಿಸಿದವರ ಕೇಡು ಬಯಸದ ‘ಮನುಷ್ಯ’ರು ಇನ್ನೂ ಇದ್ದಾರೆ. ಅಂತಃಕರಣ ಕಲಕುವ ಕರುಣೆ, ಸಹಾನುಭೂತಿ, ಪ್ರೀತಿ ಈ ನೆಲದ ಮೂಲಗುಣ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಮಾರಿಕೊಂಡ ಮಾಧ್ಯಮಗಳ ನಡುವೆ, ಯಾವುದೇ ಒಂದು ಧರ್ಮದ ಪರ ನಿಲ್ಲದೆ, ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ದಾಖಲಿಸಿ, ಪತ್ರಿಕಾ ಧರ್ಮವನ್ನು ಗೌರವಿಸಿದ್ದಾರೆ ಲೇಖಕ ಇರ್ಷಾದ್.





