ಅಲ್ಪಸಂಖ್ಯಾತರನ್ನು ಹೊರಹಾಕುವುದೇ ಸೂಕ್ತ ಎಂದು ಪ್ರತಿಪಾದಿಸುತ್ತದೆ ಆರೆಸ್ಸೆಸ್ ಸಿದ್ಧಾಂತ

Date:

‘ದಿ ಕ್ಯಾರವಾನ್’ ನಡೆಸಿದ RSS ಕುರಿತ ವಿಶೇಷ ತನಿಖಾ ವರದಿಯ ಅನುವಾದ ಮಾಲಿಕೆ ಆರು ಕಂತುಗಳಲ್ಲಿ ‘ಈ ದಿನ’ ದಲ್ಲಿ ಪ್ರಕಟವಾಗಲಿದೆ. ಮೊದಲ ಮೂರು ಕಂತುಗಳು ಈಗಾಗಲೇ ಪ್ರಕಟವಾಗಿವೆ. ಇಲ್ಲಿದೆ ನಾಲ್ಕನೇ ಕಂತು.

ಅತ್ಯಂತ ಮುಖ್ಯವಾದ ಸಂಗತಿಯೆಂದರೆ, ತಾನು ಏನಾಗಿದ್ದೇನೆ ಮತ್ತು ತನ್ನನ್ನು ತಾನು ಹೇಗೆ ನೋಡಿಕೊಳ್ಳುತ್ತೇನೆ ಎಂಬ ಬಗ್ಗೆ ಸ್ವತಃ ಆರ್‌ಎಸ್‌ಎಸ್‌ಗೆ ಮೊದಲಿನಿಂದಲೂ ಸ್ಪಷ್ಟ ಅರಿವಿದೆ. ವಾಸ್ತವವಾಗಿ, ಸಂಘದ ಈ ಜಾರಿಕೊಳ್ಳುವ ತಂತ್ರಗಳಿಗೆ ಮರುಳಾಗದೆ, ಅದರ ಆಂತರಿಕ ಪ್ರಕಟಣೆಗಳಲ್ಲಿ ಅಡಕವಾಗಿರುವ ಸಂದೇಶದ ತಿರುಳನ್ನು ಗಮನಿಸಿದರೆ, ಒಂದೇ ರಾಜಕೀಯ ಘಟಕವಾಗಿ ಅವುಗಳ ನಡುವಿನ ಒಗ್ಗಟ್ಟು ಸ್ಪಷ್ಟವಾಗುತ್ತದೆ.

ಉದಾಹರಣೆಗೆ, ಸಂಘದ ಹಿತೈಷಿ ಕೆ. ಜಯಪ್ರಸಾದ್ ಇದನ್ನು ಸ್ಪಷ್ಟವಾಗಿ ಹೀಗೆ ವಿವರಿಸುತ್ತಾರೆ: “ಈ ಎಲ್ಲಾ ಸಹವರ್ತಿ ಒತ್ತಡ ಹೇರುವ ಗುಂಪುಗಳು (pressure groups) ಆರ್‌ಎಸ್‌ಎಸ್‌ನಿಂದ ನಿಯಂತ್ರಿಸಲ್ಪಡುತ್ತವೆ. ಈ ಗುಂಪುಗಳಿಗೆ ಎರಡು ಪಾತ್ರಗಳಿವೆ: ಮೊದಲನೆಯದಾಗಿ, ಇವು ಆರ್‌ಎಸ್‌ಎಸ್‌ನ ವಿಚಾರಧಾರೆಗಳನ್ನು ಪ್ರಚಾರ ಮಾಡುತ್ತವೆ; ಎರಡನೆಯದಾಗಿ, ತಮ್ಮ ಸಂಘಟನೆಗಳ ಹಿತಾಸಕ್ತಿಗಳನ್ನು ಕಾಪಾಡುತ್ತವೆ… ದೈನಂದಿನ ಚಟುವಟಿಕೆಗಳಲ್ಲಿ ಈ ಸಂಸ್ಥೆಗಳು ತಮ್ಮದೇ ಆದ ನಾಯಕತ್ವ ಮತ್ತು ಹಣಕಾಸಿನೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಅಂತಿಮವಾಗಿ ಇವು ಆರ್‌ಎಸ್‌ಎಸ್‌ನ ನಿಯಂತ್ರಣ ಮತ್ತು ಮಾರ್ಗದರ್ಶನದಲ್ಲೇ ಇರುತ್ತವೆ”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದೇ ರೀತಿ, ಆದಿವಾಸಿ ರಾಜಕಾರಣದೊಂದಿಗೆ ಆರ್‌ಎಸ್‌ಎಸ್‌ಗಿರುವ ಸಂಬಂಧವನ್ನು ಚರ್ಚಿಸುವಾಗ, ಸಂಘದ ವಿಶ್ಲೇಷಕ ಎಂ.ಜಿ. ಚಿತ್ಕಾರ ಅವರು ಹೀಗೆ ಹೇಳುತ್ತಾರೆ: “ಅದು ಕೇವಲ ಒಂದು ರಾಜಕೀಯೇತರ ಎನ್‌ಜಿಒ ಆಗಿರುವುದಕ್ಕಿಂತ ಹೆಚ್ಚಾಗಿ, ಆದಿವಾಸಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ತಡೆಯಲೆಂದೇ ‘ವನವಾಸಿ ಕಲ್ಯಾಣ ಆಶ್ರಮ’ವನ್ನು (VKA) ಸ್ಥಾಪಿಸಲಾಯಿತು. ಇತರ ಯಾವುದೇ ಆರ್‌ಎಸ್‌ಎಸ್ ಅಂಗಸಂಸ್ಥೆಯಂತೆಯೇ, ವನವಾಸಿ ಕಲ್ಯಾಣ ಆಶ್ರಮ ಕೂಡ ಆರ್‌ಎಸ್‌ಎಸ್‌ನ ತರಬೇತಿ ಪಡೆದ ಕಾರ್ಯಕರ್ತರಿಂದಲೇ ಸಂಘಟಿಸಿ, ನಡೆಸಲಾಗುತ್ತದೆ.”

ಸಮಾಜದ ಕುರಿತಾದ ‘ಸಾವಯವ ಸಿದ್ಧಾಂತ’ದ (organicist vision) ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಂಘವು (ಸಂಘ ಪರಿವಾರ) ತನ್ನನ್ನು ತಾನು ಅತ್ಯಗತ್ಯ ಭಾಗವೆಂದು ಪರಿಗಣಿಸುತ್ತದೆ. ಸಾವಯವ ವಾದವು ಅಂತರ್ಗತವಾಗಿ ಒಂದು ತೀವ್ರ ಬಲಪಂಥೀಯ ಸಿದ್ಧಾಂತವಾಗಿದೆ. ಈ ಸಿದ್ಧಾಂತದಲ್ಲಿ, ಸಮಾಜವನ್ನು ಒಂದು ನೈಸರ್ಗಿಕ, ಅವಿಭಾಜ್ಯ ಮತ್ತು ವ್ಯವಸ್ಥಿತ ಜೀವಿಯಂತೆ (organism) ನೋಡಲಾಗುತ್ತದೆ. ಅದೇ ರೀತಿ ಅಲ್ಪಸಂಖ್ಯಾತರು ಅಥವಾ ‘ವಿದೇಶಿಯರು’ ಅಸ್ವಾಭಾವಿಕರು ಮತ್ತು ಅವರನ್ನು ಹೊರಹಾಕುವುದೇ ಸೂಕ್ತ ಎಂದು ಈ ಸಿದ್ಧಾಂತ ಪ್ರತಿಪಾದಿಸುತ್ತದೆ.

ಮುಖ್ಯವಾಗಿ, ಸಮಾಜವೆಂಬ ಈ ‘ಜೀವಿ’ ಅಥವಾ ‘ದೇಹ’ವು ರೋಗಗ್ರಸ್ತವಾಗಿದೆ ಮತ್ತು “ರಾಷ್ಟ್ರೀಯ ಪುನರುಜ್ಜೀವನ” ಸಾಧಿಸಲು ಅದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂದು ಆಗಾಗ್ಗೆ ಕಲ್ಪಿಸಿಕೊಳ್ಳಲಾಗುತ್ತದೆ. ಸಮಾಜವು “ಕಲುಷಿತ ರಕ್ತ”ದಿಂದ (ಪ್ರಮುಖ ಆರ್‌ಎಸ್‌ಎಸ್ ಚಿಂತಕ ಏಕನಾಥ್ ರಾನಡೆ ಅವರ ಪ್ರಕಾರ), “ಗಾಯ”ದಿಂದ (ಚಿತ್ಕಾರ ಅವರ ಪ್ರಕಾರ) ಅಥವಾ “ಕುರು”ಗಳಿಂದ (ಗೋಳವಲ್ಕರ್ ಪ್ರಕಾರ) ಬಳಲುತ್ತಿರಲಿ; ಅಂಗಾಂಗಗಳು, ಜೀವಕೋಶಗಳು ಮತ್ತು ಸ್ನಾಯುಗಳಿಂದ ಮಾಡಲ್ಪಟ್ಟಿರುವ ಆರ್‌ಎಸ್‌ಎಸ್‌ನ ‘ರೋಗನಿರೋಧಕ ಗುಣ’ಗಳಿಂದ (immunological properties) ಮಾತ್ರ ಅದನ್ನು ಗುಣಪಡಿಸಲು ಸಾಧ್ಯ ಎಂಬುದು ಅವರ ವಾದ. ಈ ‘ಜೀವಿ’ಯನ್ನು (ಸಮಾಜವನ್ನು) ಶುದ್ಧೀಕರಿಸುವುದು ಮತ್ತು ನಂತರ ತಾನೇ ಆ ಜೀವಿಯಾಗಿ ಬದಲಾಗುವುದು ಸಂಘವು ಸದಾಕಾಲ ಘೋಷಿಸಿಕೊಂಡ ಬಂದಿರುವ ಸ್ಪಷ್ಟವಾದ ಗುರಿಯಾಗಿದೆ. ಹಿಂದೂಗಳ ದೌರ್ಬಲ್ಯ ಮತ್ತು ಅನೈಕ್ಯತೆ ಎಂದು ಹೇಳಲಾಗುವ ಸಂಗತಿಗಳನ್ನು ಮೀರಿ ಬೆಳೆಯಲು, ‘ಸಂಘಟನೆ’ಗೆ ಬದ್ಧರಾಗಿರುವುದು ಅತ್ಯಗತ್ಯ ಎಂದು ಆರ್‌ಎಸ್‌ಎಸ್ ನಾಯಕರು ದೀರ್ಘಕಾಲದಿಂದ ಪ್ರತಿಪಾದಿಸುತ್ತಿದ್ದಾರೆ. ಸಂಘದ ಪಾಲಿಗೆ, ‘ಸಂಘಟನೆ’ ಎಂಬುದು ಸಾಧನವೂ ಹೌದು ಮತ್ತು ಗುರಿಯೂ ಹೌದು; ಅದುವೇ ಹಿಂದೂ ರಾಷ್ಟ್ರದತ್ತ ಸಾಗುವ ಮಾರ್ಗ.

ಆದ್ದರಿಂದ, ಈ ‘ಸಾವಯವ ವಾದ’ವು ಕೇವಲ ಒಂದು ರೂಪಕವಷ್ಟೇ ಅಲ್ಲ. ಇದೊಂದು ಪರಿಸರ ವ್ಯವಸ್ಥೆಯ ಮಾದರಿಯ ಸಂಘಟನಾ ತತ್ವವಾಗಿದೆ ಮತ್ತು “ಸಂಘ್ ಸಮಾಜ್ ಬನೇಗಾ” (ಸಂಘವೇ ಸಮಾಜವಾಗಲಿದೆ) ಎಂಬ ಸಂಘದ ಘೋಷಿತ ಗುರಿಯ ಭಾಗವಾಗಿದೆ. ವೈವಿಧ್ಯಮಯ ಸಂಸ್ಥೆಗಳನ್ನು ಹುಟ್ಟುಹಾಕುವುದು, ತನ್ನ ‘ಏಕರೂಪದ ಸಾಂಸ್ಥಿಕ ಅಸ್ತಿತ್ವ’ಕ್ಕೆ (organisational singularity) ಎಂದಿಗೂ ವಿರೋಧಾಭಾಸವಲ್ಲ ಎಂಬುದನ್ನು ಆರ್‌ಎಸ್‌ಎಸ್ ಅರ್ಥಮಾಡಿಕೊಂಡಿದೆ. ಆರ್‌ಎಸ್‌ಎಸ್ ನಾಯಕರು ಪದೇ ಪದೇ ಇದನ್ನು ಸ್ಪಷ್ಟಪಡಿಸಿದ್ದಾರೆ.

ಹೆಡಗೇವಾರ್ ಅವರ ಮಾತುಗಳಲ್ಲಿ: “ಕಾಲ ಕಳೆದಂತೆ, ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೆ.ಬಿ. ಹೆಡಗೇವಾರ್ ಅವರ ನಿರ್ದೇಶನದಂತೆ, ಆರ್‌ಎಸ್‌ಎಸ್ ಸಮಾಜದ ಒಳಗಿನ ಒಂದು ಸಂಘಟನೆಯಾಗಬಾರದು, ಬದಲಾಗಿ ಅದು ಇಡೀ ಸಮಾಜದ ಸಂಘಟನೆಯಾಗಬೇಕು”.

keshav baliram hedgewar

ಗೋಳವಲ್ಕರ್ ಅವರ ಮಾತುಗಳಲ್ಲಿ: “ಸಮಾಜದೊಳಗೆ ಒಂದು ಪ್ರತ್ಯೇಕ ಮತ್ತು ಭಿನ್ನ ಘಟಕವಾಗಿ ಸಂಘಟನೆಯನ್ನು ಕಟ್ಟುವ ಆಲೋಚನೆಯನ್ನು ಸಂಘವು ಎಂದಿಗೂ ಹೊಂದಿಲ್ಲ. ಆರಂಭದಿಂದಲೂ ಸಂಘವು ಇಡೀ ಸಮಾಜವನ್ನು ಸಂಘಟಿತ ಅಸ್ತಿತ್ವವನ್ನಾಗಿ ರೂಪಿಸುವುದನ್ನು ತನ್ನ ಗುರಿಯನ್ನಾಗಿ ಇರಿಸಿಕೊಂಡಿದೆಯೇ ಹೊರತು, ಸಮಾಜದ ಯಾವುದೋ ಒಂದು ಭಾಗವನ್ನಲ್ಲ.”

ಪ್ರಸ್ತುತ ಆರ್‌ಎಸ್‌ಎಸ್ ವಕ್ತಾರ ಸುನಿಲ್ ಅಂಬೇಕರ್ ಅವರ ಮಾತುಗಳಲ್ಲಿ: “ಸಂಘವು ಜಾಲಗಳ ಒಂದು ಜಾಲವಾಗಿದೆ (Network of networks). ಹಸ್ತಕ್ಷೇಪದ ಅಗತ್ಯವಿರುವ ಸಮಾಜದ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಬೆಂಬಲ ನೀಡುವ ನಿಟ್ಟಿನಲ್ಲಿ, ಎಷ್ಟು ಬೇಕಾದರೂ ಸಂಸ್ಥೆಗಳನ್ನು ಹುಟ್ಟುಹಾಕಲು ಯಾವುದೇ ಮಿತಿಯಿಲ್ಲ.”

ವಾಸ್ತವವಾಗಿ, ಸಂಘವು ತನ್ನ ಸದಸ್ಯರನ್ನು ಉದ್ದೇಶಿಸಿ ಬರೆಯುವಾಗ, ತನ್ನ ಆಂತರಿಕ ಸಂಸ್ಥೆಗಳ ನಡುವೆ ಯಾವುದೇ ಭೇದವನ್ನು ಮಾಡುವುದಿಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ‘ಆರ್ಗನೈಸರ್’ ಪತ್ರಿಕೆಯ ಲೇಖನವೊಂದರಲ್ಲಿ ‘ವಿದ್ಯಾ ಭಾರತಿ ಪಂಜಾಬ್’ ಹೆಸರನ್ನು ಅದರ ಅಂಗಸಂಸ್ಥೆಯಾದ ‘ಸರ್ವಹಿತಕಾರಿ ಶಿಕ್ಷಾ ಸಮಿತಿ’ಯೊಂದಿಗೆ ಅದಲುಬದಲು ಮಾಡಿ ಬಳಸಿರುವುದಿರಬಹುದು; ಯುಕೆ (UK) ಯಲ್ಲಿರುವ ಹಿಂದೂ ಸ್ವಯಂಸೇವಕ ಸಂಘ (HSS) ಹೊರತಂದ ಸ್ಮರಣ ಸಂಚಿಕೆಯಲ್ಲಿ, ಸದಸ್ಯರು ‘ನ್ಯಾಷನಲ್ ಹಿಂದೂ ಸ್ಟೂಡೆಂಟ್ಸ್ ಫೋರಂ’ನಲ್ಲಿ ತಾವು ಮಾಡಿದ ಕೆಲಸವನ್ನು ಸಂಘದ ಕೆಲಸವೆಂದು ಹೇಳಿಕೊಂಡಿರಬಹುದು; ಆರ್‌ಎಸ್‌ಎಸ್‌ನ ಹಿರಿಯ ಚಿಂತಕ ರಾಕೇಶ್ ಸಿನ್ಹಾ ಅವರು “ವಿದ್ಯಾ ಭಾರತಿ ನಡೆಸುತ್ತಿರುವ ಭಾರತದ ಅತಿದೊಡ್ಡ ಶಾಲಾ ಜಾಲವು ಆರ್‌ಎಸ್‌ಎಸ್‌ಗೆ ಸೇರಿದ್ದು” ಎಂದು ಹೇಳಿಕೊಂಡಿರಬಹುದು; ಅಥವಾ ‘ಸೇವಾ ಸಾಧನ’ ಪ್ರಕಟಿಸಿದ ಪಟ್ಟಿಯಲ್ಲಿ ಸಕ್ಷಮ್, ವಿಎಚ್‌ಪಿ, ವಿದ್ಯಾ ಭಾರತಿ, ವನವಾಸಿ ಕಲ್ಯಾಣ ಆಶ್ರಮ, ಭಾರತ ವಿಕಾಸ ಪರಿಷತ್, ರಾಷ್ಟ್ರ ಸೇವಿಕಾ ಸಮಿತಿ, ಎಬಿವಿಪಿ ಮತ್ತು ದೀನದಯಾಳ್ ರಿಸರ್ಚ್ ಇನ್‌ಸ್ಟಿಟ್ಯೂಟ್ – ಇವೆಲ್ಲವನ್ನೂ “ರಾಷ್ಟ್ರೀಯ ಸ್ವಯಂಸೇವಕ ಸಂಘ: ಸೇವಾ ವಿಭಾಗ” ಎಂಬ ಒಂದೇ ಶೀರ್ಷಿಕೆಯಡಿ ತಂದಿರಬಹುದು.

sunil ambekar
ಸುನಿಲ್ ಅಂಬೇಕರ್

ಇಡೀ ಸಂಘದ ಜಾಲವನ್ನು ಒಂದೇ ಸಾಂಸ್ಥಿಕ ಘಟಕವಾಗಿ ಗ್ರಹಿಸಿದಾಗ, ಅದನ್ನು ಅರ್ಥಮಾಡಿಕೊಳ್ಳುವ ಹೊಸ ಮಾರ್ಗಗಳು ಗೋಚರಿಸುತ್ತವೆ. ಈ ಯೋಜನೆಗಾಗಿ, ನಾನು 2022ರಲ್ಲಿ ‘ಕಾಂಟೆಂಪರರಿ ಸೌತ್ ಏಷ್ಯಾ’ (Contemporary South Asia) ಜರ್ನಲ್‌ಗಾಗಿ ಬರೆದ ಲೇಖನದಲ್ಲಿ ಪ್ರಸ್ತಾಪಿಸಿದ ವ್ಯಾಖ್ಯಾನವನ್ನೇ ನಮ್ಮ ತಂಡವು ಅನುಸರಿಸಿದೆ. ಆ ವ್ಯಾಖ್ಯಾನದ ಪ್ರಕಾರ ಸಂಘವೆಂದರೆ, “ಯಾವುದೇ ಬಲವಂತವಿಲ್ಲದೆ (without coercion) ಮತ್ತು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಸಂವಹನ ವಾಹಿನಿಗಳ ಮೂಲಕ, ಸಂಘದ ಕೇಂದ್ರ ನಾಯಕತ್ವವು ಅಧಿಕಾರ ಚಲಾಯಿಸಬಲ್ಲ ಸಾಂಸ್ಥಿಕ ನೆಲೆಗಳ ಒಂದು ಸಮೂಹ”. ಈ ಜಾಲ-ಕೇಂದ್ರಿತ (network-centric) ವಿಧಾನವು, ಕೇವಲ ಹಿಂದುತ್ವವನ್ನು ಪ್ರತಿಪಾದಿಸುವ ಸಂಸ್ಥೆಗಳ ನಕ್ಷೆಯನ್ನು ತಯಾರಿಸುವುದಕ್ಕಿಂತ ಭಿನ್ನವಾಗಿ, ಸಂಘದ ಒಂದು ನಿರ್ದಿಷ್ಟ ಭೌತಿಕ ಮತ್ತು ಸಾಂಸ್ಥಿಕ ಜಾಲದ ನಕ್ಷೆಯನ್ನು ರೂಪಿಸಲು ಕರೆ ನೀಡಿತು.

ಮೇಲೆ ಪ್ರಸ್ತಾಪಿಸಿದಂತೆ, ಈ ಚಳವಳಿಗಳಲ್ಲಿ ಭಾಗವಹಿಸುವವರನ್ನು ಗುರುತಿಸಲು ಅಥವಾ ಅವರ ಕಾರ್ಯ ವೈಖರಿಯನ್ನು ಅರ್ಥ ಮಾಡಿಕೊಳ್ಳಲು, ಕೇವಲ ತೀವ್ರ ಬಲಪಂಥೀಯ ಸೈದ್ಧಾಂತಿಕ ಬದ್ಧತೆಯ ಅಭಿವ್ಯಕ್ತಿಗಳನ್ನು ಮಾನದಂಡವನ್ನಾಗಿ (diagnostic tools) ಪರಿಗಣಿಸುವುದು ಸಾಲದು. ಉದಾಹರಣೆಗೆ, ವೇದ್ ಮಂದಿರ ಸಂಕೀರ್ಣದಲ್ಲಿರುವ ಬಹುತೇಕ ಸಂಸ್ಥೆಗಳನ್ನು ಕೇವಲ ಗೋಚರವಾಗುವ ತೀವ್ರ ಬಲಪಂಥೀಯ ಸೈದ್ಧಾಂತಿಕ ಬದ್ಧತೆಯ ಒರೆಗಲ್ಲಿಗೆ ಹಚ್ಚಿ ನೋಡಿದರೆ ಅವು ಉತ್ತೀರ್ಣರಾಗಲಾರವು. ಆದರೆ, ಅವೆಲ್ಲವೂ ಸ್ವಇಚ್ಛೆಯಿಂದಲೇ ಹಾಗೂ ನಿರ್ದಿಷ್ಟ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಜಾಲಗಳ ಮೂಲಕ ಆರ್‌ಎಸ್‌ಎಸ್ ನಾಯಕತ್ವದ ಅಧಿಕಾರಕ್ಕೆ ಒಳಪಟ್ಟಿವೆ ಎಂಬುದು ವಾಸ್ತವ.

ಸೈದ್ಧಾಂತಿಕ ನಿಲುವುಗಳು—ಅವು ಬಹಿರಂಗವಾಗಿ ವ್ಯಕ್ತಪಡಿಸಿದ್ದಾಗಿರಲಿ ಅಥವಾ ಆಂತರಿಕವಾಗಿ ನಂಬಿದ್ದಾಗಿರಲಿ—ತೀವ್ರ ಬಲಪಂಥೀಯ ಸಂಘಟನೆಯನ್ನು (mobilisation) ವಿಶ್ವಾಸಾರ್ಹವಾಗಿ ಗುರುತಿಸಲು ವಿಫಲವಾದಾಗ, ನಮ್ಮ ಗಮನವನ್ನು ಅನಿವಾರ್ಯವಾಗಿ ‘ಭೌತಿಕ ಸಂಬಂಧ’ಗಳ ಕಡೆಗೆ ಹರಿಸಬೇಕಾಯಿತು. ಸಂಘದ ದಾಖಲೆಗಳನ್ನೇ ಪ್ರಮುಖ ಆಧಾರವನ್ನಾಗಿ ಇಟ್ಟುಕೊಂಡು; ಮಾನವ ಸಂಪನ್ಮೂಲ, ಭೌತಿಕ ಆಸ್ತಿಗಳು, ಹಣಕಾಸು ಮತ್ತು ಆಡಳಿತಾತ್ಮಕ ನಿರ್ವಹಣೆಯ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಿದೆವು.

ಆರ್‌ಎಸ್‌ಎಸ್ ಅಧಿಕೃತವಾಗಿ ಒಪ್ಪಿಕೊಂಡಿರುವ ಮೂರು ಡಜನ್ ಸಂಘಟನೆಗಳಿಂದಲೇ ನಮ್ಮ ಕಾರ್ಯವನ್ನು ಆರಂಭಿಸಿದೆವು. ಹೆಚ್ಚುವರಿ ಸಂಸ್ಥೆಗಳನ್ನು ಗುರುತಿಸುವ ಸಲುವಾಗಿ, ಈ ಘಟಕಗಳು ಸೃಷ್ಟಿಸಿರುವ ಸಾಂಸ್ಥಿಕ ದಾಖಲೆಗಳು, ಆತ್ಮಚರಿತ್ರೆಗಳು, ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಂತಹ ಬೃಹತ್ ಮಾಹಿತಿಯ ಕಣಜವನ್ನೇ ನಮ್ಮ ತಂಡ ಜಾಲಾಡಿತು. ವಿವಾದಾತ್ಮಕ ಬರಹಗಳು, ಅತ್ಯಂತ ನೀರಸವಾದ ಸಾಂಸ್ಥಿಕ ಆತ್ಮಚರಿತ್ರೆಗಳು ಮತ್ತು ಅನೇಕ ಬಾರಿ ಹಸಿ ಸುಳ್ಳುಗಳ ರಾಶಿಯನ್ನೇ ಶೋಧಿಸಿ, ಅವುಗಳ ನಡುವಿನಿಂದ ಉಪಯುಕ್ತ ಮಾಹಿತಿಯ ಸಣ್ಣ ತುಣುಕುಗಳನ್ನು ಹುಡುಕಿ ತೆಗೆಯುವುದು ನಮ್ಮ ಮುಂದಿದ್ದ ಸವಾಲಾಗಿತ್ತು. ಈ ಪ್ರಕ್ರಿಯೆಯು ಸಂಘದ ‘ಸಂಭಾವ್ಯ’ ಸಂಸ್ಥೆಗಳೆಂದು ಪರಿಗಣಿಸಬಹುದಾದ ದ್ವಿತೀಯ ಸ್ತರದ ಸಂಸ್ಥೆಗಳ ಪಟ್ಟಿಯೊಂದನ್ನು ನೀಡಿತು. ಆದರೆ, ಸಂಘದ ಮೂಲಗಳಲ್ಲಿ ಸಿಕ್ಕ ಮಾಹಿತಿಯನ್ನು ಶೈಕ್ಷಣಿಕ ಸಾಹಿತ್ಯ, ಹಣಕಾಸು ವರದಿಗಳು, ಸರ್ಕಾರಿ ದಾಖಲೆಗಳು ಮತ್ತು ಸಂಘದ ಇತರೆ ಆಕರಗಳೊಂದಿಗೆ ತಾಳೆ ನೋಡುವ (multisource triangulation) ಮೂಲಕ ಖಚಿತಪಡಿಸಿಕೊಂಡ ನಂತರವೇ ಈ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. (ಸಂಶೋಧಕರು ಸಂಗ್ರಹಿಸಿದ ಪ್ರತಿಯೊಂದು ದತ್ತಾಂಶವನ್ನೂ ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳಿಂದಲೇ ಪಡೆಯಲಾಗಿತ್ತು ಮತ್ತು ಸಂಘದ ಸ್ವಂತ ದಾಖಲೆಗಳಿಗೇ ನಮ್ಮ ಅಧ್ಯಯನದಲ್ಲಿ ಕೇಂದ್ರ ಸ್ಥಾನವನ್ನು ನೀಡಲಾಗಿತ್ತು).

‘ಸಂಭಾವ್ಯ’ ಸಂಸ್ಥೆಗಳಿಂದ ‘ಖಚಿತ’ ಸಂಸ್ಥೆಗಳ ಹಂತಕ್ಕೆ ತಲುಪಲು, ನಾವು ಒಂದು ಪ್ರಮಾಣೀಕೃತ ಮಾನದಂಡವನ್ನು ಅಭಿವೃದ್ಧಿಪಡಿಸಿದೆವು. ಅಂದರೆ, ಸಂಸ್ಥೆಯೊಂದನ್ನು ಪ್ರತ್ಯೇಕವಾಗಿ ಅಥವಾ ಒಂಟಿಯಾಗಿ ಮೌಲ್ಯಮಾಪನ ಮಾಡುವುದಲ್ಲ; ಅದರ ಬದಲಿಗೆ ಸಂಘದ ಸಂಪರ್ಕ ಜಾಲದೊಳಗೆ (connective tissue) ಅದು ಹೊಂದಿಕೊಳ್ಳುತ್ತದೆಯೇ, ಹಾಗಿದ್ದರೆ ಹೇಗೆ ಮತ್ತು ಎಷ್ಟರ ಮಟ್ಟಿಗೆ ಎಂಬ ಆಧಾರದ ಮೇಲೆ ಅದನ್ನು ನಿರ್ಧರಿಸಲಾಯಿತು. ನಾವು ಆಯಾ ಸಂಸ್ಥೆಗಳ ಹೇಳಿಕೆಗಳು ಮತ್ತು ಚಟುವಟಿಕೆಗಳಿಗಿಂತ ಹೆಚ್ಚಾಗಿ; ಅವು ಹಂಚಿಕೊಂಡಿರುವ ಸಿಬ್ಬಂದಿ, ಕಚೇರಿಗಳು, ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮಗಳು ಮತ್ತು ಹಣಕಾಸಿನ ಹರಿವಿನ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆವು. ಏಕೆಂದರೆ, ಬಹಿರಂಗವಾಗಿ ಒಪ್ಪಿಕೊಳ್ಳದ ಈ ನಂಟುಗಳೇ ಸಂಘದ ಜಾಲವನ್ನು ವ್ಯಾಖ್ಯಾನಿಸುವ ಅಂತರ-ಸಾಂಸ್ಥಿಕ ಸಂಬಂಧಗಳ ತಿರುಳಾಗಿವೆ.

ಫರಿದಾಬಾದ್‌ನ ದೋನಿ ಪೋಲೊ ಛಾತ್ರಾವಾಸ್ ಅನ್ನು ಪರಿಶೀಲಿಸಿದಾಗ, ಅದರ ಆವರಣದಲ್ಲಿ ಗೋಳವಲ್ಕರ್ ಮತ್ತು ಹೆಡ್ಗೇವಾರ್ ಫೋಟೋಗಳು ಕಂಡವು. ಹಾಸ್ಟೆಲ್‌ನ ಕೊಠಡಿಗಳಿಗೆ ಸಂಘದ ಪ್ರಮುಖ ವ್ಯಕ್ತಿಗಳ ಹೆಸರು ಇರಿಸಲಾಗಿತ್ತು ಮತ್ತು ಹತ್ತಿರದ ಆಟದ ಮೈದಾನದಲ್ಲಿ ಶಾಖಾ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ವನವಾಸಿ ಕಲ್ಯಾಣ ಆಶ್ರಮದ ಹರಿಯಾಣ ಪ್ರಧಾನ ಕಚೇರಿ ಎಂದು ಪಟ್ಟಿ ಮಾಡಲಾದ ವಿಳಾಸದಿಂದಲೇ ಇದು ಕಾರ್ಯನಿರ್ವಹಿಸುತ್ತಿತ್ತು.

ಅದೇ ರೀತಿ, ಮಲೇಷ್ಯಾದಲ್ಲಿ ಮೇಲ್ನೋಟಕ್ಕೆ ನಿರುಪದ್ರವಿಯಂತೆ ಕಾಣುವ ಹಿಂದೂ ಸೇವೈ ಸಂಗಮ್‌ ತನ್ನ  ಪ್ರಕಟಣೆಗಳಲ್ಲಿ ‘ಕಾರ್ಯವಾಹ’ ಮತ್ತು ‘ಸಹ ಸಂಘಚಾಲಕ’ನಂತಹ ಸಂಘದ ನಿರ್ದಿಷ್ಟ ಶೀರ್ಷಿಕೆಗಳನ್ನು ಬಳಸುತ್ತಿದ್ದುದು ಅನುಮಾನ ಹುಟ್ಟುಹಾಕಿತು, ತಮಿಳು ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿ ಈ ಪದಗಳು ವಿಚತ್ರವೆನಿಸುತ್ತಿದ್ದವು. ಹೆಚ್ಚಿನ ಹುಡುಕಾಟ ನಡೆಸಿದಾಗ, ಗೋಳವಲ್ಕರ್ ಅವರ ಉಲ್ಲೇಖಗಳು ಮತ್ತು ಆರ್‌ಎಸ್‌ಎಸ್ ಶೈಲಿಯ ಶಾಖೆಗಳನ್ನು ಹೋಲುವ ಫೋಟೋಗಳು ಕಂಡುಬಂದವು. ಅಂತಿಮವಾಗಿ, ಈ ‘ಹಿಂದೂ ಸೇವೈ ಸಂಗಮ್’ ಬೇರೇನೂ ಅಲ್ಲ, ಅದು ‘ಹಿಂದೂ ಸ್ವಯಂಸೇವಕ ಸಂಘ’ದ (HSS) ಮಲೇಷ್ಯಾ ಅವತಾರ ಎಂದು ನಾವು ತೀರ್ಮಾನಿಸಿದೆವು.

ಗೋಳವಲ್ಕರ್ ಅವರ ಆಪ್ತ ಸಹಾಯಕರ ಹೆಸರಿನಲ್ಲಿರುವ ‘ಡಾ. ಆಬಾಜಿ ಥತ್ತೆ ಸೇವಾ ಮತ್ತು ಅನುಸಂಧಾನ ಸಂಸ್ಥೆ’ ನಮ್ಮ ಗಮನ ಸೆಳೆಯಿತು. ಇದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸಂಘದ ನಂಟು ಸ್ಪಷ್ಟವಾಯಿತು. ಇದರ ಪ್ರಧಾನ ಕಾರ್ಯದರ್ಶಿ ಶೈಲೇಶ್ ಜೋಗ್ಲೇಕರ್ ಒಬ್ಬ ಆರ್‌ಎಸ್‌ಎಸ್ ಸದಸ್ಯರಾಗಿದ್ದು, ಇವರು ಹಿಂದೆ ಬಜರಂಗದಳದ ವಿದರ್ಭ ಘಟಕದ ಅಧ್ಯಕ್ಷರಾಗಿದ್ದರು. ಇವರು ಭೋಂಸಲಾ ಮಿಲಿಟರಿ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರು. ಸಂಘದ ನಾಯಕರೂ ಆಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಬ್ಬರೂ ಅದರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದು ಬಂತು. ಈ ಸಾಕ್ಷ್ಯಗಳು, ಈ ಸಂಸ್ಥೆಯು ಸಂಘದ ಜಾಲದೊಳಗೆ ದೃಢವಾಗಿ ಹುದುಗಿಕೊಂಡಿರುವುದನ್ನು ಖಚಿತಪಡಿಸಿದವು. 

ಅನುವಾದ ಮಾಲಿಕೆ – 3 ಸಂಘದ ಕಣ್ಕಟ್ಟು ಅಥವಾ ಮರೆಮಾಚುವ ತಂತ್ರಗಳನ್ನು (smoke and mirrors) ದಾಟಿ ನೋಡಬೇಕಿದೆ’

ಸಂಘದ ಪ್ರಕಟಿತ ಸಾಹಿತ್ಯದ ಆಳವಾದ ಮತ್ತು ಸಮಗ್ರ ಅಧ್ಯಯನದ ಆಧಾರದ ಮೇಲೆ, ನಮ್ಮ ತಂಡವು ಆರ್‌ಎಸ್‌ಎಸ್ ಜಾಲದ ಸದಸ್ಯತ್ವವನ್ನು ಗುರುತಿಸಲು ನೆರವಾಗುವ ಸಾಮಾನ್ಯ ಮಾದರಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿತು. ಈ ಪಟ್ಟಿಯನ್ನು ಮತ್ತಷ್ಟು ಪರಿಷ್ಕರಿಸಲು, ಭಾರತದ ವಿದ್ವಾಂಸರು, ಪತ್ರಕರ್ತರು ಮತ್ತು ತಳಮಟ್ಟದ ಹೋರಾಟಗಾರರೊಂದಿಗೆ ಸುಮಾರು ಎರಡು ವರ್ಷಗಳ ಕಾಲ ಸಮಾಲೋಚನೆ ನಡೆಸಲಾಯಿತು. ಈ ತಜ್ಞರು ತಮ್ಮ ವೃತ್ತಿಜೀವನದಲ್ಲಿ ಗಮನಿಸಿದ, ಸಂಘದೊಂದಿಗೆ ಹಾಸುಹೊಕ್ಕಾಗಿರುವ ಸಂಬಂಧವನ್ನು ದೃಢಪಡಿಸುವ ವಿವಿಧ ಸಾಕ್ಷ್ಯಗಳ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಅನುವಾದ – ಚೇತನಾ ತೀರ್ಥಹಳ್ಳಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...