ಜನರ ಪ್ರಶ್ನೆಗಳಿಗೆ ಸೂಕ್ತ ಹಾಗೂ ತೃಪ್ತಿಕರ ಉತ್ತರವನ್ನು ಆರೆಸ್ಸೆಸ್ ಎಂದಿಗೂ ಕೊಟ್ಟಿಲ್ಲ. 23 ಜುಲೈ 2016ರಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗೋವಾದಲ್ಲಿ ಪತ್ರಕರ್ತರಿಗೆ, “ನೋಂದಣಿಯಾಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ” ಎಂದಿದ್ದರು.
ಜರ್ಮನಿಯ ಸರ್ವನಾಶಕ್ಕೆ ಮೊದಲು ಅಲ್ಲಿ ನಾಜಿಗಳು ಹುಟ್ಟುಹಾಕಿದ ಬಲಪಂಥೀಯ ಭಯೋತ್ಪಾದಕ ಸಂಘಟನೆಯ ಕುರಿತು ನಮಗೆ ತಿಳಿದಿದೆ. ಅದೇ ಮಾದರಿಯಲ್ಲಿ ಭಾರತದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯವಾದಿ ಚಿತ್ಪಾವನ ಬ್ರಾಹ್ಮಣರು ಹುಟ್ಟು ಹಾಕಿರುವ ಆರ್‌ಎಸ್‌ಎಸ್ (RSS) ಮತ್ತು ಅದರ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಅನೇಕ ಊಹಾಪೋಹಗಳಿವೆ. 2018, ಜುಲೈ 20ರ ‘ಜನತಾ ಕಾ ರಿಪೋರ್ಟರ್’ ಹೆಸರಿನ ವೆಬ್ ಜರ್ನಲ್ ನಲ್ಲಿ ಅಂಕಣಕಾರ ರವಿ ನಾಯರ್ ಅವರು ಆರ್‌ಎಸ್‌ಎಸ್ ನ ಅಕ್ರಮ ಅಸ್ತಿತ್ವದ ಕುರಿತು ಸುದೀರ್ಘ ಲೇಖನವೊಂದನ್ನು ಬರೆದಿದ್ದಾರೆ. ಆ ಅಂಕಣವನ್ನು ಆಧಾರವಾಗಿಟ್ಟುಕೊಂಡು ನಾನು ಆರ್‌ಎಸ್‌ಎಸ್ ಕುರಿತು ಅನೇಕ ಸಂಗತಿಗಳನ್ನು ಇಲ್ಲಿ ಚರ್ಚಿಸಿದ್ದೇನೆ.
ಇಡೀ ಅಂಕಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ನೋಂದಾಯಿತ ಸಂಸ್ಥೆಯೆ ಎನ್ನುವ ಸಾಮಾನ್ಯ ಜನರ ಮನದಲ್ಲಿನ ಪ್ರಶ್ನೆಯನ್ನು ಆಧಾರವಾಗಿಟ್ಟುಕೊಂಡು ರವಿ ನಾಯರ್ ಅವರು ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ. ಆದರೆ ಜನರ ಪ್ರಶ್ನೆಗಳಿಗೆ ಸೂಕ್ತ ಹಾಗು ತೃಪ್ತಿಕರ ಉತ್ತರವನ್ನು ಆರೆಸ್ಸೆಸ್ ಎಂದಿಗೂ ಕೊಟ್ಟಿಲ್ಲ. 23 ಜುಲೈ 2016ರಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗೋವಾದಲ್ಲಿ ಪತ್ರಕರ್ತರಿಗೆ, “ನೋಂದಣಿಯಾಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ” ಎಂದಿದ್ದರು. ಮುಂದುವರೆದು ಸಿಂಗ್ ಅವರು “ಆರ್‌ಎಸ್‌ಎಸ್ ಅನ್ನು ನಿಷೇಧಿಸುವ ಕುರಿತು ನೀವು ಎಷ್ಟು ಬಾರಿ ಕೇಳುತ್ತೀರಿ, ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆ ಅಲ್ಲ ಎಂದು ನಿಮಗೆ ತಿಳಿದಿದೆಯಲ್ಲ” ಎಂದು ಪ್ರತಿಕ್ರಿಯಿಸಿದ್ದರು.
ರವಿ ನಾಯರ್ ಅವರು ಓದುಗರ ಮುಂದೆ ಆರ್‌ಎಸ್‌ಎಸ್ ಕುರಿತು ಒಂದಷ್ಟು ಮಹತ್ವದ ಪ್ರಶ್ನೆಗಳನ್ನಿಟ್ಟಿದ್ದಾರೆ. ಇಂದಿನ ರಾಜಕೀಯ ವಾತಾವರಣದಲ್ಲಿ ನಿಜವಾಗಿಯೂ ಇಂತಹ ಮಹತ್ವದ ಟೀಕೆಗಳಿಗೆ ಆರ್‌ಎಸ್‌ಎಸ್ ಅಥವಾ ಅದರ ರಾಜಕೀಯ ವೇದಿಕೆಯಾಗಿರುವ ಬಿಜೆಪಿ ಏತಕ್ಕೆ ಪ್ರತಿಕ್ರಿಯಿಸುದಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ನಾಯರ್ ಅವರು ಈಗ ಅಂತಿಮವಾಗಿ ಪ್ರಶ್ನೆ ಕೇಳುವ ಸಮಯ ಬಂದಿದೆ ಎಂದು ನಿರ್ಧಾರಯುತ ನಿಲುವು ತಾಳುತ್ತಾರೆ. ನಾಯರ್ ಅವರ ಮುಖ್ಯ ಪ್ರಶ್ನೆಗಳೆಂದರೆ:
1. ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯೇ?
2. ಇಲ್ಲದಿದ್ದರೆ, ಆ ಸಂಸ್ಥೆಯ ಹಣಕಾಸಿನ ಮೂಲ ಮತ್ತು ಹಣ ಸಂಗ್ರಹದ ಮಾರ್ಗ ಯಾವುದು?
3. ನೋಂದಣಿಯಾಗದ ಸಂಸ್ಥೆಯು ತನ್ನ ಅರೆಸೇನಾ ತರಬೇತಿ ಶಾಖೆಗಳನ್ನು ದೇಶದ ಉದ್ದಗಲಕ್ಕೂ ನಡೆಸಿಕೊಂಡು ತನ್ನನ್ನು ತಾನು ಸಾಂಸ್ಕೃತಿಕ ಸಂಸ್ಥೆ ಎಂದು ಕರೆದುಕೊಳ್ಳುವುದರ ಕಾನೂನುಬದ್ಧತೆ ಏನು?
ರವಿ ನಾಯರ್ ಅವರು ತಾವು ಹಾಕಿರುವ ಒಂದೊಂದೇ ಪ್ರಶ್ನೆಗಳ ಸುತ್ತ ತಮ್ಮ ಚರ್ಚೆಯನ್ನು ಮುಂದುವರೆಸುತ್ತಾರೆ. ಮೊದಲ ಪ್ರಶ್ನೆ ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯಾಗಿದ್ದರೆ ಅದು ಯಾವಾಗ, ಎಲ್ಲಿ ಮತ್ತು ದೇಶದ ಯಾವ ಕಾನೂನಿನ ಅಡಿಯಲ್ಲಿ ನೊಂದಾವಣಿಯಾಗಿದೆ ಎಂದು ಮರು ಪ್ರಶ್ನೆಯನ್ನು ಹಾಕುತ್ತಾರೆ.

ಆರ್‌ಎಸ್‌ಎಸ್ ಈಗಾಗಲೇ ನೋಂದಾವಣಿಯಾಗಿದ್ದು ಅದರ ನೋಂದಣಿ ಸಂಖ್ಯೆ 08-D 0018394 ಆಗಿದ್ದು ನೋಂದಣಿಯ ಅಂಕಿ ಕೋಡ್ 94910 ಇದ್ದು ನೋಂದಣಿಯನ್ನು ಭಾರತೀಯ ಸರ್ಕಾರ ಮತ್ತು ಸೊಸೈಟಿ ನೋಂದಣಿ ಕಾನೂನು 1950ರ ಸೆಕ್ಷನ್ 1860ರ ಅಡಿಯಲ್ಲಿ ನೀಡಲಾಗಿದೆ ಎಂಬ ವಾಟ್ಸಪ್ ಸಂದೇಶವು ಇತ್ತೀಚೆಗೆ ಬಲಪಂಥೀಯರ ಸಾಮಾಜಿಕ ಜಾಲತಾಣ ಗುಂಪುಗಳಲ್ಲಿ ವೈರಲ್ ಆಗಿದೆಯಂತೆ. ನಂತರ ಟ್ವಿಟರ್‌ಗೂ ಇದು ಹೋಗಿದ್ದು ಈ ಸಂದೇಶವು ಜನರನ್ನು ತಪ್ಪು ದಾರಿಗೆಳೆವಂತಿದೆ. ಆ ಕುರಿತು ನಾಯರ್ ಅವರು ಜನಾರ್ದನ್ ಮೂನ್ ಎಂಬ ನಿವೃತ್ತ ಶಾಲಾ ಶಿಕ್ಷಕ, ಸಾಮಾಜಿಕ ಕಾರ್ಯಕರ್ತ ಮತ್ತು ಆರ್‌ಎಸ್‌ಎಸ್ ಪ್ರಧಾನ ಕಚೇರಿ ಇರುವ ನಾಗಪುರದ ಮಾಜಿ ಕಾರ್ಪೊರೇಟ್ ಒಬ್ಬರು ಆರ್‌ಎಸ್‌ಎಸ್ ಕುರಿತು ಎತ್ತಿರುವ ತಕರಾರನ್ನು ಇಲ್ಲಿ ಉಲ್ಲೇಖಿಸಿದ್ದಾರೆ. 2017 ಎಪ್ರಿಲ್‌ನಲ್ಲಿ, ಮೂನ್ ಅವರು ತಮ್ಮ ಪ್ರಕಟಣೆಯ ಮೂಲಕ ಕೆಲವು ಪ್ರಶ್ನೆಗಳನ್ನು ಎತ್ತಿದ್ದರಂತೆ. ಮೂನ್ ಅವರು ನಾಗರಿಕ್ ಹಕ್ ಸಂರಕ್ಷಣ್ ಸಂಸ್ಥೆಗೆ ಸೇರಿದವರಾಗಿದ್ದು ಅದು ಸ್ಥೂಲವಾಗಿ ಪೀಪಲ್ಸ್ ರೈಟ್ಸ್ / ನಾಗರಿಕ ಹಕ್ಕುಗಳ ರಕ್ಷಣೆಯ ಕಾರ್ಯವನ್ನು ಮಾಡುತ್ತದೆ. ಹೀಗೆ ಮೂನ್ ಅವರು ಎತ್ತಿರುವ ಮೂಲಭೂತ ಪ್ರಶ್ನೆಗಳನ್ನು ಆರ್‌ಎಸ್‌ಎಸ್ ಮತ್ತು ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಕಳುಹಿಸಿˌ ಸಂಘವು ತಪ್ಪಿತಸ್ಥವೆಂದು ಕಂಡುಬಂದರೆ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಾರೆ. ಜನಾರ್ದನ ಮೂನ್ ಅವರು ಎತ್ತಿರುವ ಏಳು ಮಹತ್ವದ ಪ್ರಶ್ನೆಗಳೆಂದರೆ:
1. ಆರ್‌ಎಸ್‌ಎಸ್ ಗೆ ಯಾವುದೇ ನೋಂದಣಿ ಅಗತ್ಯವಿಲ್ಲವೇ?
2. ಆರ್‌ಎಸ್‌ಎಸ್ ಒಂದು ಸಂಸ್ಥೆಯೇ, ವ್ಯಕ್ತಿಯೇ, ಕಂಪನಿಯೇ ಅಥವಾ ಇನ್ನೇನು ಆಗಿದೆ?
3. ಆರ್‌ಎಸ್‌ಎಸ್ ನ 56,000 ಶಾಖೆಗಳಿಗೆ ಹಣಕಾಸಿನ ಮೂಲ ಯಾವುದು?
4. ಅದರ ವಾರ್ಷಿಕ ಕಾರ್ಯಕ್ರಮ/ಉತ್ಸವಗಳು ಮತ್ತು ಇತರ ಚಟುವಟಿಕೆಗಳಿಗೆ ಹರಿದು ಬರುವ ಹಣದ ಮೂಲ ಯಾವುದು?
5. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭದ್ರತೆಗೆ ದೇಶದ ಬಡ ತೆರಿಗೆದಾರರಿಂದ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದು ಹೇಗೆ?
6. ಆರ್‌ಎಸ್‌ಎಸ್‌ನ ಮಹಲ್ ಮೂಲದ ಆಸ್ತಿ ಎಂ ಡಿ ದೇವರಸ್‌ಗೆ ಸೇರಿದೆ. ಸಿಐಎಫ್ಎಸ್ (CIFS) ಅದನ್ನು ಏಕೆ ರಕ್ಷಿಸುತ್ತಿದೆ?
7. ಭಾರತ ಸರಕಾರವು ಇತ್ತೀಚೆಗೆ ಸಂಘ ಸಂಸ್ಥೆಗಳನ್ನು ಗುರುತಿಸುವ ಮಾನದಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಯಾವ ವರ್ಗಗಳಲ್ಲಿ ಆರ್‌ಎಸ್‌ಎಸ್ ಹೊಂದಿಕೊಳ್ಳುತ್ತದೆ?
ಇವು ಜನಾರ್ದನ್ ಮೂನ್ ಅವರು ಎತ್ತಿರುವ ಪ್ರಮುಖ ಪ್ರಶ್ನೆಗಳು. ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಕಚೇರಿಯು ಈ ಪ್ರಶ್ನೆಗಳನ್ನು ನಾಗಪುರ ಜಂಟಿ ಚಾರಿಟಿ ಕಮಿಷನರ್ ಅವರ ಕಚೇರಿಗೆ ರವಾನಿಸಿˌ ವಿಶೇಷವಾಗಿ ಆರ್‌ಎಸ್‌ಎಸ್ ನೋಂದಣಿ ಕುರಿತ ಆರೋಪಗಳನ್ನು ಪರಿಶೀಲಿಸಲು ಆದೇಶಿಸಿತ್ತಂತೆ. ನಾಗಪುರದ ಜಂಟಿ ಚಾರಿಟಿ ಕಮಿಷನರ್ ಕಚೇರಿಯು ಜನಾರ್ದನ್ ಮೂನ್ ಅವರಿಗೆ ಈ ಕೆಳಗಿನಂತೆ ಉತ್ತರಿಸಿದೆಯಂತೆ: ಅರ್ಜಿದಾರರ ಪತ್ರಗಳಲ್ಲಿ ಉಲ್ಲೇಖಿಸಿದ ಪ್ರಶ್ನೆಗಳಿಗೆ ಉತ್ತರವಾಗಿ ನಮ್ಮ ಕಚೇರಿಯ ಅಧಿಕೃತ ದಾಖಲೆಗಳ ಪ್ರಕಾರ, ಆರ್‌ಎಸ್‌ಎಸ್ ಹೆಸರಿನ ಸಂಘಟನೆಯು ನಾಗಪುರ ಚಾರಿಟಿ ಕಮಿಷನರ್ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ. ಆದ್ದರಿಂದ ದಿನಾಂಕ 24-05-2017ರ ಅರ್ಜಿಯಂತೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲವೆಂದು ಹೇಳಿದ್ದರಂತೆ. ಜನಾರ್ದನ್ ಮೂನ್ ಮತ್ತು ಅವರ ಸಂಗಡಿಗರು 28 ಆಗಸ್ಟ್ 2017ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನಲ್ಲಿ ಸೊಸೈಟಿ ನೋಂದಣಿ ಕಾಯ್ದೆ 1860, ಸೆಕ್ಷನ್ 20ರ ಅಡಿಯಲ್ಲಿ ಹೊಸ ಸಾರ್ವಜನಿಕ ಚಾರಿಟಬಲ್ ಸೊಸೈಟಿಯನ್ನು ಸ್ಥಾಪಿಸಲು ಅದೇ ಕಚೇರಿಯಲ್ಲಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುತ್ತಾರೆ ಮತ್ತು ಬೇರೆ ಯಾವುದೇ ಸಂಸ್ಥೆ ಆ ಹೆಸರಿನಲ್ಲಿ ನೋಂದಣಿಯಾಗಿಲ್ಲದ ಕಾರಣ ಅವರ ಅರ್ಜಿಯನ್ನು ನೋಂದಣಿ ಸಂಸ್ಥೆ ಸ್ವೀಕರಿಸುತ್ತದೆ. ಮೂನ್ ಅವರ ಸೇವಾ ವಿನಂತಿ ಸಂಖ್ಯೆ (SRN) NGP/20606/1860/17 ಆಗಿದೆ.

ಆರ್‌ಎಸ್‌ಎಸ್ ಪರವಾಗಿ ವಕೀಲ ರಾಜೇಂದ್ರ ಗುಂಡಾಳ್ವಾರ್ ಎಂಬ ವ್ಯಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರನ್ನು ಮೂನ್ ಗುಂಪಿಗೆ ನೀಡುವುದಕ್ಕೆ ತರಕಾರು ಅರ್ಜಿ ಸಲ್ಲಿಸಿದ ವಿಷಯ ಈ ಪ್ರಕರಣವು ಸಾಕಷ್ಟು ಆಸಕ್ತಿದಾಯಕ ತಿರುವನ್ನು ಪಡೆದುಕೊಳ್ಳಲು ಕಾರಣವಾಗಿದೆ. ಏಕೆಂದರೆ ಅಂತಹ ಹೆಸರಿನ ಸಂಸ್ಥೆಯನ್ನು ಈಗಾಗಲೇ ಚಂದ್ರಾಪುರದಲ್ಲಿ ಭಾರತ ಸರ್ಕಾರದ ಸೊಸೈಟಿ ನೋಂದಣಿ ಕಾನೂನು1950, ಸೆಕ್ಷನ್ 1860ರ ಅನ್ವಯ ‘ಧಾರ್ಮಿಕ ಸಂಘಟನೆ’ ಯ ಅಡಿಯಲ್ಲಿ ನೋಂದಾಯಿಸಲಾಗಿದ್ದು ಅದರ ನೋಂದಣಿ ಸಂಖ್ಯೆ 08-D 0018394 ಯ ವಿವರ ಕೂಡ ಆ ಗುಂಡ್ವಾಳರ್ ನೀಡಿದ್ದರಂತೆ. ಅಂದು ಟೈಮ್ಸ್ ಆಫ್ ಇಂಡಿಯಾ ನಾಗಪುರ್ ಆವೃತ್ತಿಯಲ್ಲಿ ಪ್ರಕಟಗೊಂಡ ವರದಿಯಂತೆ ಆರ್‌ಎಸ್‌ಎಸ್ ಆ ಸಂಸ್ಥೆಯ ನೋಂದಣಿಯ ಅಂಕಿ ಕೋಡ್ 94910 ಆಗಿತ್ತು. ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯಾಗಿರುವುದರಿಂದ ಅದರ ಹಣಕಾಸು ವ್ಯವಹಾರಗಳ ಕುರಿತು ಲೆಕ್ಕಪರಿಶೋಧಕರ ವರದಿ ಏಕೆ ಸಲ್ಲಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ, ಗುಂಡಾಳ್ವಾರ್ ಧಾರ್ಮಿಕ ಸಂಸ್ಥೆಗಳಿಗೆ ಅದರಿಂದ ವಿನಾಯಿತಿ ನೀಡಲಾಗಿದೆ ಎಂದಿದ್ದರಂತೆ. ಇಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ ದತ್ತಿ ಆಯುಕ್ತರ ಕಚೇರಿಯು ಅರ್ಜಿದಾರ ಜನಾರ್ದನ್ ಮೂನಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನ ಸಂಘಟನೆಯು ನೋಂದಾಯಿಸಿಲ್ಲ ಮತ್ತು ಆ ಹೆಸರು ನೋಂದಣಿಗೆ ಲಭ್ಯವಿದೆ ಎಂದು ತಿಳಿಸಿತ್ತು. ಆದರೆ, ಆರೆಸ್ಸೆಸ್ ಪ್ರತಿನಿಧಿಯು ಈ ಸಮರ್ಥನೆಯನ್ನು ವಿರೋಧಿಸಿದರು.
ಸ್ಥಳೀಯ ಸುದ್ದಿ ವೆಬ್‌ಸೈಟ್ ನಾಗಪುರ ಟುಡೇ ಮೂನ್ ಗುಂಪು ಸಲ್ಲಿಸಿದ ಪತ್ರದ ಜೊತೆಗೆ ಗುಂಡಾಲ್ವಾರ್ ಅವರ ವಿರೋಧವನ್ನು ವಿವರವಾಗಿ ಪ್ರಕಟಿಸಿತ್ತಂತೆ. ಈ ಘಟನಾವಳಿಯ ವಿಚಿತ್ರ ತಿರುವು ಏನೆಂದರೆ ಈ ಮೊದಲು ಆ ಹೆಸರಿನ ಸಂಸ್ಥೆ ನೋಂದಣಿಗೆ ಲಭ್ಯವಿದೆ ಎಂದು ಮೂನ್ ಗುಂಪಿನ ಅರ್ಜಿ ಸ್ವೀಕರಿಸಿದ್ದ ಚಾರಿಟಿ ಆಯುಕ್ತರ ಕಚೇರಿ ನಾಟಕೀಯವಾಗಿ ಗುಂಡಾಲ್ವಾರ್ ಅವರ ತಕರಾರು ಅರ್ಜಿಯನ್ನು ಉಲ್ಲೇಖಿಸಿ ಮೂನ್ ಗುಂಪಿನ ಅರ್ಜಿಯನ್ನು ತಿರಸ್ಕರಿಸಿತು. ಮೂನ್ ಮತ್ತು ಇತರ ನಾಲ್ವರು ಆಯುಕ್ತರ ಈ ನಿರ್ಧಾರವನ್ನು ವಿರೋಧಿಸಿದರು. ಅಂತಹ ಹೆಸರಿನ ಸಂಸ್ಥೆ ಈಗಾಗಲೇ ನೋಂದಾಯಿಸಿದ್ದರೆ, ನೋಂದಾಯಿತ ಪಟ್ಟಿಯಲ್ಲಿ ಆ ಸಂಸ್ಥೆಯ ಹೆಸರನ್ನು ಏಕೆ ಉಲ್ಲೇಖಿಸಿಲ್ಲ ಮತ್ತು ಆರ್‌ಎಸ್‌ಎಸ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಲು ತಮ್ಮ ಆನ್‌ಲೈನ್ ಅರ್ಜಿಯನ್ನು ಮೊದಲ ಸ್ಥಾನದಲ್ಲಿ ಹೇಗೆ ಸ್ವೀಕರಿಸಲಾಯಿತು ಎಂದು ಪ್ರಶ್ನಿಸಿದ್ದರು. ಜಂಟಿ ಚಾರಿಟಿ ಕಮಿಷನರ್ ಕರುಣಾ ಎಂ ಪತ್ರೆಲ್ ಅವರ ಈ ನಿರ್ಧಾರವನ್ನು ಜನಾರ್ದನ್ ಮೂನ್ ಮತ್ತು ಅವರ ಗುಂಪು ಅಕ್ಟೋಬರ್ 2017ರಲ್ಲಿ ಮುಂಬೈ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತು. ನ್ಯಾಯಾಲಯವು ಕಕ್ಷಿದಾರರಿಗೆ ನೋಟಿಸ್‌ಗಳನ್ನು ಕಳುಹಿಸಿದ್ದರೂ ಕೂಡ ಸಂಬಂಧಿಸಿದ ಕಕ್ಷಿದಾರರಿಂದ ಇಲ್ಲಿಯವರೆಗೆ ಯಾವುದೇ ಉತ್ತರ ನೀಡಲಾಗಿಲ್ಲ ಎಂದು ಮೂನ್ ಗುಂಪು ಅಪಾದಿಸಿತ್ತು. ಸುಮಾರು ಒಂಬತ್ತು ತಿಂಗಳಿನಿಂದ ಈ ಪ್ರಕರಣದ ವಿಚಾರಣೆಯನ್ನು ಏಕೆ ಮುಂದುವರಿಸಿಲ್ಲ ಎಂದು ಮೂನ್ ಗುಂಪು ಪ್ರಶ್ನಿಸಿತ್ತು.
ಆಗ, ಗುಂಡಾಲ್ವಾರ್ ಅವರು ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಮತ್ತು ತಮ್ಮದೇ ಆದ ಆರ್‌ಎಸ್‌ಎಸ್ ನ ಮೊದಲ ವಾರ್ಷಿಕೋತ್ಸವ ಆಚಾರಣೆಯಲ್ಲಿ ನಿರತರಾಗಿದ್ದು ಮುಂದಿನ ದಿನಗಳಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತ್ತು. ಆರ್‌ಎಸ್‌ಎಸ್ ಒಂದು ನೋಂದಾಯಿತ ಸಂಸ್ಥೆಯೇ ಎಂದು ಮಾಹಿತಿ ಕೇಳಿದ್ದ ಮೂನ್ ಗುಂಪಿನ ಅರ್ಜಿಯನ್ನು ಸ್ವೀಕರಿಸಲಾಗಿತ್ತು. ಜಂಟಿ ದತ್ತಿ ಆಯುಕ್ತರ ಕಚೇರಿ ಮಹಾರಾಷ್ಟ್ರ ಸಿಎಂ ಕಚೇರಿಯ ಪರವಾಗಿ ಲಿಖಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್ ನೋಂದಣಿಯಾಗದ ಸಂಘಟನೆಯಾಗಿದ್ದು ಅದರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿರುವುದರಿಂದ ಜನಾರ್ದನ್ ಮೂನ್ ಅವರ ಗುಂಪು ಆರ್‌ಎಸ್‌ಎಸ್ ಹೆಸರನ್ನು ಬಹಿರಂಗವಾಗಿ ಬಳಸಲಾರಂಭಿಸಿತು. ಆರ್‌ಎಸ್‌ಎಸ್ ಹೆಸರಿನ ಮೇಲೆ ವಿಸಿಟಿಂಗ್ ಕಾರ್ಡ್‌ಗಳು ಮತ್ತು ಲೆಟರ್‌ಹೆಡ್‌ಗಳಲ್ಲಿ ಬಹಿರಂಗವಾಗಿ ಬಳಸಲಾರಂಭಿಸಿತು. ಆರ್‌ಎಸ್‌ಎಸ್ ಹೆಸರಿನ ಲೆಟರ್‌ಹೆಡ್‌ನಲ್ಲಿ ಮೂನ್ ಗುಂಪು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದು ನಾಗಪೂರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯು ಯಾವುದೇ ನೋಂದಣಿ ಮತ್ತು ಹೊಣೆಗಾರಿಕೆಯಿಲ್ಲದೆ “ಕಾನೂನುಬಾಹಿರವಾಗಿ” ಕಾರ್ಯನಿರ್ವಹಿಸುತ್ತಿದೆ ಮತ್ತು ಆದ್ದರಿಂದ ತಮ್ಮ ಗುಂಪು ಅದೇ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಲು ಮನವಿ ಸಲ್ಲಿಸಿದೆ ಎಂದು ವಾದಿಸಿತ್ತು.

ಮೂನ್ ಗುಂಪು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತುತ ಮೋಹನ ಭಾಗವತ ನೇತೃತ್ವದ ಆರ್‌ಎಸ್‌ಎಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು. ಆದರೆ ಪ್ರಧಾನಿ ಕಚೇರಿಯಾಗಲಿ ಅಥವಾ ರಾಷ್ಟ್ರಪತಿ ಕಚೇರಿಯಾಗಲಿ ಮೂನ್ ಗುಂಪಿನ ಪತ್ರಗಳಿಗೆ ಇಲ್ಲಿಯವರೆಗೆ ಉತ್ತರಿಸಿಲ್ಲ ಎಂದು ಮೂನ್ ಅವರು ‘ಜನತಾ ಕಾ ರಿಪೋರ್ಟನ್’ ನ ವರದಿಗಾರರಿಗೆ ತಿಳಿಸಿದ್ದಾರಂತೆ. ಆರ್‌ಎಸ್‌ಎಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿರ್ಧಾರದ ಬಗ್ಗೆ ಅಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಈ ಮೂನ್ ಗುಂಪು ಎಚ್ಚರಿಕೆಯನ್ನು ನೀಡಿ ಅಕ್ರಮ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಹಾಜರಾಗುವ ಮೂಲಕ ಅದಕ್ಕೆ ಅನಗತ್ಯ ಮಾನ್ಯತೆ ನೀಡಬೇಡಿ ಎಂದು ಕೇಳಿಕೊಂಡಿದ್ದರಂತೆ. ಚಾರಿಟಿ ಕಮಿಷನರ್ ಕಚೇರಿಯು ಪಟ್ಟಿಮಾಡಿದ ಫೋನ್ ಸಂಖ್ಯೆಗಳಿಗೆ (0716 2565350 / 2544991) ಜನತಾ ಕಾ ರಿಪೋರ್ಟರ್ ನ ವರದಿಗಾರ ಮೇಲಿಂದ ಮೇಲೆ ಕರೆಗಳು ಮಾಡಿದರೂ ಉತ್ತರಿಸಲಿಲ್ಲ ಹಾಗೂ ರಾಜೇಂದ್ರ ಗುಂಡಾಲ್ವಾರ್ ಅವರ ಮೊಬೈಲ್ ಸಂಖ್ಯೆಯು ನಿರಂತರವಾಗಿ ಸ್ವಿಚ್ ಆಫ್ ಆಗಿರುತ್ತದೆ ಅಥವಾ ಲಭ್ಯವಿಲ್ಲ ಎನ್ನುವ ಉತ್ತರ ಬರುತ್ತಿತ್ತಂತೆ. ಏತನ್ಮಧ್ಯೆ, ಎನ್ ಜಿ ಓ ಡೈರೆಕ್ಟರಿ ಮತ್ತು ಡೇಟಾ ಪಟ್ಟಿಯನ್ನು ಸರಳವಾಗಿ ಪರಿಶೀಲನೆ ಮಾಡಿದಾಗ ಮಹಾರಾಷ್ಟ್ರದಲ್ಲಿ ನೋಂದಾಯಿತ ಮತ್ತು ಪ್ರಸ್ತುತ ಸಕ್ರಿಯವಾಗಿರುವ 6381 ಎನ್‌ಜಿಒಗಳು / ಚಾರಿಟಬಲ್ ಟ್ರಸ್ಟ್‌ಗಳು / ಚಾರಿಟಬಲ್ ಸೊಸೈಟಿಗಳಿದ್ದು ಅವುಗಳಲ್ಲಿ 13 ಸಂಸ್ಥೆಗಳ ಹೆಸರು ರಾಷ್ಟ್ರೀಯ ಎಂಬ ಶಬ್ದದಿಂದ ಆರಂಭವಾಗುತ್ತಿದ್ದರೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಎನ್ನುವ ಹೆಸರಿನ ಯಾವುದೇ ನೋಂದಾಯಿತ ಸಂಸ್ಥೆ ಕಾಣಸಿಗುವುದಿಲ್ಲ.
ಕೋಟ್ಯಂತರ ರೂಪಾಯಿ ಗುರುದಕ್ಷಿಣೆ ಲೆಕ್ಕ ಕೊಡದ ‘ಸಂಘ’ವೇ ಸ್ವಯಂ ಭ್ರಷ್ಟವಾಗಿದೆ
ಅಲ್ಲದೆ, ರಾಜೇಂದ್ರ ಗುಂಡಾಲ್ವಾರ್ ಅವರು ಸಮರ್ಥಿಸಿಕೊಂಡಿರುವಂತೆ ಧಾರ್ಮಿಕ ಎನ್‌ಜಿಒಗಳ ಹಣಕಾಸಿನ ವ್ಯವಹಾರಗಳುˌ ಆದಾಯˌ ಖರ್ಚುಗಳ ಕುರಿತು ಲೆಕ್ಕಪರಿಶೋಧನೆಗೆ ವಿನಾಯಿತಿ ನೀಡಲಾಗಿದೆ ಎಂಬ ವಾದದಲ್ಲಿ ಯಾವುದೇ ಅರ್ಥವಿಲ್ಲ. ಈ ಕುರಿತು ಆರೆಸ್ಸೆಸ್ ಮತ್ತು ಬಿಜೆಪಿಯ ಮೌನ ಈ ಪ್ರಕರಣದ ಅಕ್ರಮ ಸಂಗತಿಯನ್ನು ಹೇಳುತ್ತಿದೆ ಎಂದು ನಾಯರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಆರ್‌ಎಸ್‌ಎಸ್ ಇಷ್ಟು ವರ್ಷಗಳಿಂದ ಕಾನೂನುಬಾಹಿರವಾಗಿ ಮತ್ತು ಯಾವುದೇ ಹೊಣೆಗಾರಿಕೆಯಿಲ್ಲದೆ ನಿರ್ಲಜ್ಜವಾಗಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ. ನಾಗಪೂರದ ಜಂಟಿ ಚಾರಿಟಿ ಕಮಿಷನರ್ ಕಚೇರಿಯ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಚೇರಿಯು ನೀಡಿದ ಉತ್ತರವು ಇನ್ನೂ ಹೆಚ್ಚು ಕುತೂಹಲಕಾರಿ ಪ್ರಶ್ನೆಯೊಂದನ್ನು ಹುಟ್ಟುಹಾಕುತ್ತದೆ. ಒಂದು ಗುಂಪಿನ ಜನರು ನೋಂದಾಯಿಸದ ಸಂಘಟನೆಯೊಂದರ ಹೆಸರಿನಲ್ಲಿ ಧಾರ್ಮಿಕ ಮತ್ತು ದತ್ತಿ ಕಾರ್ಯಗಳ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಈಗ ಅಸ್ತಿತ್ವದಲ್ಲಿರುವ ನಮ್ಮ ಕಾನೂನುಗಳು ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ಈ ಬೆಳವಣಿಗೆಯು ದೇಶದ ಸೌಹಾರ್ದತೆ, ಸಮಗ್ರತೆಗೆ ತುಂಬಾ ಅಪಾಯಕಾರಿ ಮತ್ತು ಭಯಾನಕವಾಗಿದೆ.
RSS- ದೇಶಭಕ್ತರ ಸಂಘಟನೆಯೇ! ಯಶವಂತ್ ಶಿಂದೆ ಅಫಿಡವಿಟ್ ಹೇಳುತ್ತಿರುವುದೇನು?
ಸ್ವಾತಂತ್ರ್ಯ ನಂತರ 75 ವರ್ಷಗಳು ಕಳೆದಿದ್ದರೂ ನೋಂದಣಿ ಮತ್ತು ಕನಿಷ್ಠ ಹೊಣೆಗಾರಿಕೆಯಿಲ್ಲದೆ ಆರ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿರುವುದು ಆಶ್ಚರ್ಯದ ಸಂಗತಿ ಎನ್ನುತ್ತಾರೆ ರವಿ ನಾಯರ್. ಜನಾರ್ದನ್ ಮೂನ್ ಅವರ ಗುಂಪು ಆರ್‌ಎಸ್‌ಎಸ್ ಎಂಬ ಅಪಾಯಕಾರಿ ಸಂಸ್ಥೆಯ ಬೆನ್ನಹಿಂದೆ ಬಿದ್ದು ಇಷ್ಟೊಂದು ರಚನಾತ್ಮಕ ಕೆಲಸ ಮಾಡಿದರೂ ಕೂಡ ಮೋದಿ ಆಡಳಿತದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗಗಳು ಒಂದು ಕಾನೂನು ಬಾಹಿರ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಮೌನವಾಗಿರುವುದು ನೋಡಿದರೆ ರವಿ ನಾಯರ್ ಅವರು ಪ್ರಸ್ತಾಪಿಸಿರುವ ಆರ್‌ಎಸ್‌ಎಸ್ ಕುರಿತ ಎಲ್ಲಾ ಸಂಗತಿಗಳು ಸತ್ಯವೆಂದು ನಂಬಬಹುದಾಗಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




