RSS- ದೇಶಭಕ್ತರ ಸಂಘಟನೆಯೇ! ಯಶವಂತ್ ಶಿಂದೆ ಅಫಿಡವಿಟ್ ಹೇಳುತ್ತಿರುವುದೇನು?

Date:

2022ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಮಾಜಿ ಪ್ರಚಾರಕ ಯಶವಂತ್‌ ಶಿಂದೆ, ನಂದೇಡ್ ನ್ಯಾಯಾಲಯದಲ್ಲಿ ಒಂದು ಅಫಿಡವಿಟ್ ಸಲ್ಲಿಸಿ, “ಆರೆಸ್ಸೆಸ್‌ ಯುವಕರಿಗೆ ಬಾಂಬ್‌ ತಯಾರಿಕೆ ತರಬೇತಿ ಕೊಟ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಮುಸ್ಲಿಂ ದ್ವೇಷ ಹರಡಿ, ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ನೆರವಾಗುವುದು ಆರೆಸ್ಸೆಸ್‌ನ ಉದ್ದೇಶ” ಎಂದು ಕೋರ್ಟ್‌ಗೆ ತಿಳಿಸಿದ್ದರು.

“ಸರ್ಕಾರಕ್ಕೆ ಸೇರಿರುವ ಶಾಲೆ, ಕಾಲೇಜು, ಮುಜರಾಯಿ ದೇವಸ್ಥಾನಗಳಲ್ಲಿ ಆರೆಸ್ಸೆಸ್‌ ಚಟುವಟಿಕೆಗಳನ್ನು ನಡೆಸಲು ನಿಷೇಧ ಹೇರಬೇಕು” ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. “ಆರೆಸ್ಸೆಸ್‌ ದೇಶಭಕ್ತರ ಸಂಘಟನೆ. ದೇಶಪ್ರೇಮವನ್ನು ಯುವ ಸಮೂಹದಲ್ಲಿ ಉದ್ದೀಪನಗೊಳಿಸುವ ಕೆಲಸ ಮಾಡುತ್ತಿದೆ” ಎಂದು ಬಿಜೆಪಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಆರೆಸ್ಸೆಸ್‌ ಬೆಂಬಲಿತ ಬಿಜೆಪಿ ಇಡೀ ದೇಶದಲ್ಲಿ ಕೋಮುಗಲಭೆ, ಮುಸ್ಲಿಂ ದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿದೆ. ಮುಸ್ಲಿಮರ ಆಹಾರ ಸ್ವಾತಂತ್ರ್ಯ, ಉಡುಗೆ, ಧಾರ್ಮಿಕ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಭಾರತದಲ್ಲಿ ಬಲಪಂಥೀಯ ಸಂಘಟನೆಗಳು ಕೃತಕ ಬುದ್ಧಿಮತ್ತೆ(AI) ಬಳಸಿ ಇಸ್ಲಾಮೊಫೋಬಿಯಾ ಹಬ್ಬಿಸುತ್ತಿವೆ ಎಂದು ಇತ್ತೀಚಿಗೆ ವರದಿಯೊಂದು ಬಹಿರಂಗಪಡಿಸಿದೆ. ಮುಸ್ಲಿಮರೆಂದರೆ ಭಯೋತ್ಪಾದಕರು, ಬಾಂಬ್‌ ಹಾಕುವವರು, ದೇಶದ್ರೋಹಿಗಳು, ಪಾಕಿಸ್ತಾನದ ಬೆಂಬಲಿಗರು ಎಂದು ಹೇಳುತ್ತಾ ಅಂತಹ ಕೆಲಸವನ್ನು ತಾವೇ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದನ್ನು ಮಾಜಿ ಆರೆಸ್ಸೆಸ್‌ ಮುಖಂಡರೇ ಹೇಳುತ್ತಿದ್ದಾರೆ. ಅನೇಕರು ಮನ ಪರಿವರ್ತನೆಯಾಗಿ ಹೊರಬಂದು ಸತ್ಯ ಸಂಗತಿಯನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಮಹಾರಾಷ್ಟ್ರದ ಯಶವಂತ್‌ ಶಿಂದೆ ಅಂತಹ ಪಾಪಪ್ರಜ್ಞೆಯಿಂದ ಹೊರ ಬಂದವರಲ್ಲಿ ಒಬ್ಬರು.

ಯಶವಂತ್ ಶಿಂದೆ (Yashwant Shinde) ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಪ್ರಚಾರಕ. ಅವರು ಸುಮಾರು 25 ವರ್ಷಗಳ ಕಾಲ ಆರೆಸ್ಸೆಸ್‌, ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ಮತ್ತು ಬಜರಂಗ ದಳದಂತಹ ಹಿಂದುತ್ವವಾದಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಹಿಂದುತ್ವದ ಪ್ರತಿಪಾದಕರಾಗಿದ್ದ ಅವರು, ಸಂಘಟನೆಗಳ ಭಯೋತ್ಪಾದಕ ಚಟುವಟಿಕೆಗಳನ್ನು ವಿರೋಧಿಸಿ, 2022ರಲ್ಲಿ ನಂದೇಡ್ ನ್ಯಾಯಾಲಯದಲ್ಲಿ ಒಂದು ಅಫಿಡವಿಟ್ ಸಲ್ಲಿಸಿ, “ಆರೆಸ್ಸೆಸ್‌ ದೇಶದಲ್ಲಿ ಬಾಂಬ್‌ ತಯಾರಿಕೆ ತರಬೇತಿ ಕೊಡುತ್ತಿರುವುದರ ಬಗ್ಗೆ ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಮುಸ್ಲಿಮರ ತಲೆಗೆ ಕಟ್ಟುವ ಉದ್ದೇಶ ಹೊಂದಿದೆ. ಬಿಜೆಪಿಗೆ ಚುನಾವಣೆಗಳಲ್ಲಿ ಗೆಲುವಿಗೆ ನೆರವಾಗುವುದು ಆರೆಸ್ಸೆಸ್‌ನ ಉದ್ದೇಶ” ಎಂದು ಆರೋಪಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯಶವಂತ್ ಶಿಂದೆ ಮಹಾರಾಷ್ಟ್ರದವರು. 1994ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ಹಲ್ಲೆಗಳ ಸುದ್ದಿ ಕೇಳಿ, ಅಲ್ಲಿ ಸ್ವಯಂ ಸೇವೆ ಸಲ್ಲಿಸಲು ತೆರಳಿರುತ್ತಾರೆ. ಅಲ್ಲಿ ಆರೆಸ್ಸೆಸ್‌ ಸಂಪರ್ಕಕ್ಕೆ ಬರುತ್ತಾರೆ. ರಜೌರಿ ಮತ್ತು ಜವಾಹರ್ ನಗರದ ವಿಸ್ತಾರಕರಾಗಿ ನೇಮಕಗೊಳ್ಳುತ್ತಾರೆ. 1995ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಗೆ ಕೋಪಗೊಂಡು, ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕಾಗಿ ರಜೌರಿ ಪೊಲೀಸರು ಬಂಧಿಸುತ್ತಾರೆ. 12 ದಿನಗಳಲ್ಲಿ ಜಾಮೀನಿನಲ್ಲಿ ಬಿಡುಗಡೆಯಾದರೂ, ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿಯಲ್ಲಿ ಮತ್ತೊಮ್ಮೆ ಬಂಧನವಾಗಿ ನಾಲ್ಕು ತಿಂಗಳ ನಂತರ ಹೊರಬರುತ್ತಾರೆ. ಆರ್‌ಎಸ್‌ಎಸ್‌ನಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಮಟ್ಟದ ತರಬೇತಿ ಪಡೆದು, ಉಧಂಪುರ ಜಿಲ್ಲೆಯ ಪ್ರಚಾರಕರಾಗುತ್ತಾರೆ. ನಂತರ ಮುಂಬೈಗೆ ವಾಪಾಸ್‌ ಬಂದು, ಬಜರಂಗ ದಳದ ಮುಖ್ಯಸ್ಥರಾಗುತ್ತಾರೆ.

YashwantShinde

1999ರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಇಂದ್ರೇಶ್ ಕುಮಾರ್ ಅವರ ಸೂಚನೆಯಂತೆ, ಹಿಮಾಂಶು ಪನಸೆ ಮತ್ತು ಏಳು ಮಂದಿ ಸ್ನೇಹಿತರನ್ನು ಜಮ್ಮುಗೆ ಕರೆತಂದು, ಭಾರತೀಯ ಸೇನಾ ಯೋಧರಿಂದ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ಕೊಡಿಸುತ್ತಾರೆ. ಅವರು ವಿವಿಧ ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾಗಿ ಕೆಲಸ ಮಾಡಿ, 2012-13ರಿಂದ ಸಕ್ರಿಯ ಭಾಗವಹಿಸುವಿಕೆಯಿಂದ ದೂರ ಉಳಿಯುತ್ತಾರೆ. ಅದಾಗಿ ಹತ್ತು ವರ್ಷಗಳ ನಂತರ ಅವರು ಆರೆಸ್ಸೆಸ್‌ನ ಷಡ್ಯಂತ್ರಗಳನ್ನು ಬಯಲಿಗೆಳೆಯುವ ತೀರ್ಮಾನ ಮಾಡುತ್ತಾರೆ.

ಕೋರ್ಟಿಗೆ ಅಫಿಡವಿಟ್‌ ಸಲ್ಲಿಕೆ

ಯಶವಂತ್ ಶಿಂದೆಯವರು 2022ರ ಆಗಸ್ಟ್‌ನಲ್ಲಿ ಮಹಾರಾಷ್ಟ್ರದ ನಂದೇಡ್ ನ್ಯಾಯಾಲಯದಲ್ಲಿ ಆರೆಸ್ಸೆಸ್‌ನ ವಿಧ್ವಂಸಕ ಚಟುವಟಿಕೆಗಳ ಕುರಿತು ಅಫಿಡವಿಟ್‌ ಸಲ್ಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿ ಸಂಘಪರಿವಾರಕ್ಕೆ ಭಾರೀ ಮುಜುಗರ ಉಂಟು ಮಾಡಿದ್ದರು. ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಬಿಜೆಪಿ 2000ದ ದಶಕದಲ್ಲಿ ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಿ, ಮುಸ್ಲಿಮರನ್ನು ಆರೋಪಿಸಿ, 2014ರ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆದವು. ನಂದೇಡ್ (2006), ಜಲ್ನಾ, ಪಾರ್ಭಣಿ ಸಹಿತ ಹಲವು ಸ್ಫೋಟಗಳಲ್ಲಿ ಸಂಘಟನೆಯ ಭಾಗವಹಿಸುವಿಕೆ ಇದೆ ಎಂದು ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

2003ರಲ್ಲಿ, 2004ರ ಚುನಾವಣೆಗಳ ಮುನ್ನ, ಮಿಲಿಂದ್ ಪರಂದೆ (ವಿಎಚ್‌ಪಿ ಸಾಮಾನ್ಯ ಕಾರ್ಯದರ್ಶಿ) ಅವರ ನೇತೃತ್ವದಲ್ಲಿ ಬಾಂಬ್ ತಯಾರಿಕೆ ಮತ್ತು ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ. ಈ ತರಬೇತಿಯಲ್ಲಿ ರಾಕೇಶ್ ಧಾವಡೆ ಮತ್ತು ರವಿ ದೇವ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.

ಮಿಲಿಂದ್ ಪರಂದೆ, ರಾಕೇಶ್ ಧಾವಡೆ ಮತ್ತು ರವಿ ದೇವ್ ಅವರನ್ನು ಆರೋಪಿಗಳಾಗಿ ಸೇರಿಸುವಂತೆ ಮತ್ತು ತಮ್ಮನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಆದರೆ 2023ರಲ್ಲಿ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತು. 16 ವರ್ಷಗಳ ನಂತರ ಸಾಕ್ಷ್ಯ ನೀಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಎಂದು ನ್ಯಾಯಾಲಯ ಹೇಳಿತ್ತು.

ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ “ಸಮಾಜ ಮತ್ತು ರಾಷ್ಟ್ರದ ವಿರುದ್ಧ ಕೆಲಸ ಮಾಡುತ್ತಿದೆ. ಹಿಂದುತ್ವದ ಸಿದ್ಧಾಂತವನ್ನು ಮುಸ್ಲಿಮರ ವಿರುದ್ಧ ದ್ವೇಷ ಹರಡಲು ದುರ್ಬಳಕೆ ಮಾಡುತ್ತಿದ್ದಾರೆ” ಎಂದು ಶಿಂದೆ ಅವರು ಗಂಭೀರ ಆರೋಪ ಮಾಡಿದ್ದರು.

ಈ ಆರೋಪಗಳು ಭಾರೀ ವಿವಾದಗಳನ್ನು ಉಂಟುಮಾಡಿದ್ದವು. ಕಾಂಗ್ರೆಸ್ ಪಕ್ಷ ಇದನ್ನು ಬಳಸಿಕೊಂಡು ಟೀಕಿಸಿದ್ದರೂ, ಆರೆಸ್ಸೆಸ್‌ ಅಥವಾ ಬಿಜೆಪಿ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ದೇಶಾದ್ಯಂತ ಭಾರೀ ಚರ್ಚೆಗೆ ಈ ಅಫಿಡವಿಟ್‌ ಕಾರಣವಾಗಿದೆ. ಆಗಾಗ ಈ ಚರ್ಚೆ ಮೇಲೆದ್ದು ಬರುತ್ತಿದೆ.

ಅಫಿಡವಿಟ್‌ನಲ್ಲಿರುವ ಪ್ರಮುಖ ಆರೋಪಗಳು

  1. 1999- ಇಂದ್ರೇಶ್ ಕುಮಾರ್ (RSS ಹಿರಿಯ ನಾಯಕ) ಸೂಚನೆಯ ಮೇರೆಗೆ, ಹಿಮಾಂಶು ಪನ್ಸೆ ಮತ್ತು ಏಳು ಮಂದಿ ಸ್ನೇಹಿತರನ್ನು ಜಮ್ಮುಗೆ ಕರೆತರಲಾಯಿತು. ಅಲ್ಲಿ ಭಾರತೀಯ ಸೇನಾ ಯೋಧರಿಂದ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಯಿತು. ಉದ್ದೇಶ-ಪಾಕಿಸ್ತಾನದಲ್ಲಿ ಗುಪ್ತ ಕಾರ್ಯಾಚರಣೆಗಳಿಗೆ ತಯಾರಿ.
  1. 2003- ಪುಣೆಯ ಸಿಂಹಗಡ್ ಬಳಿ ಬಾಂಬ್ ತಯಾರಿಕೆ ತರಬೇತಿ ಶಿಬಿರ. ಶಿಂದೆ ಮತ್ತು ಪನ್ಸೆ ಭಾಗವಹಿಸಿದ್ದರು. ತರಬೇತಿಯಲ್ಲಿ ಟೈಮ್‌ ಬಾಂಬ್‌ಗಳನ್ನು ಸ್ಫೋಟಿಸುವ ಪರೀಕ್ಷೆಗಳು ನಡೆದವು. ಉದ್ದೇಶ- ದೇಶದಾದ್ಯಂತ ಬಾಂಬ್ ಸ್ಫೋಟಗಳ ಯೋಜನೆ.
  2. 2003-06 ಮರಾಠವಾಡಾ ಪ್ರದೇಶದಲ್ಲಿ ಮೂರು ಸ್ಫೋಟಗಳನ್ನು ನಡೆಸಲಾಯಿತು. 2006ರಲ್ಲಿ ನಂದೇಡ್‌ನಲ್ಲಿ ಪನ್ಸೆ ಮತ್ತು ಇನ್ನೊಬ್ಬರು ಬಾಂಬ್ ತಯಾರಿಕೆಯ ಸಂದರ್ಭದಲ್ಲಿ ಸಾವನ್ನಪ್ಪಿದರು. ಇದು ಔರಂಗಾಬಾದ್ ಮಸೀದಿ ದಾಳಿಗೆ ಸಂಬಂಧಿಸಿತ್ತು. ಆರೋಪಿಗಳು- ಹಿಮಾಂಶು ಪನ್ಸೆ, ರಾಕೇಶ್ ಧಾವಡೆ. ಉದ್ದೇಶ- ಮಸೀದಿಗಳ ಮೇಲೆ ದಾಳಿ ಮಾಡಿ ಮುಸ್ಲಿಮರನ್ನು ಆರೋಪಿಗಳನ್ನಾಗಿಸುವುದು.
  3. 2004ರ ಮೊದಲು ವಿಎಚ್‌ಪಿ ನಾಯಕರು ಯುವಕರನ್ನು ಆಯ್ಕೆ ಮಾಡಿ ಬಾಂಬ್ ತರಬೇತಿ ನೀಡಿದರು. ಶಿಂದೆ ಅವರನ್ನು 500ಕ್ಕೂ ಹೆಚ್ಚು ಸ್ಫೋಟಗಳಿಗೆ ತೊಡಗಿಸಲು ಕೋರಲಾಯಿತು. ಆದರೆ ಅವರು ತಿರಸ್ಕರಿಸಿದರು. ಈ ಸಂಚಿನಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕೂಡಾ ಭಾಗಿಯಾಗಿದ್ದಾರೆ. ಉದ್ದೇಶ- 2004 ಲೋಕಸಭಾ ಚುನಾವಣೆಯಲ್ಲಿ BJPಗೆ ಗೆಲುವು ತರಲು ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವುದಾಗಿತ್ತು

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆರೆಸ್ಸೆಸ್‌ ಮತ್ತು ವಿಎಚ್‌ಪಿಯ ಗುಪ್ತ ಶಕ್ತಿಗಳು ಸಕ್ರಿಯಗೊಂಡವು. ಶಿಂದೆಯವರ ಪ್ರಕಾರ, ಈ ಸ್ಫೋಟಗಳು ಮುಸ್ಲಿಮರನ್ನು ಭಯಭೀತಗೊಳಿಸಿ, ಹಿಂದೂಗಳಲ್ಲಿ ಭಯೋತ್ಪಾದನೆಯ ಬಗ್ಗೆ ಭಯ ಉಂಟುಮಾಡಿ, ಬಿಜೆಪಿಗೆ ರಾಜಕೀಯ ಲಾಭ ತರುವ ಉದ್ದೇಶದಿಂದ ನಡೆದಿವೆ. ಅವರು ಸ್ಫೋಟದ ಸ್ಥಳಗಳಲ್ಲಿ ಮುಸ್ಲಿಮರಿಗೆ ಸಂಬಂಧಪಟ್ಟ ಪುರಾವೆಗಳನ್ನು ಬಿಟ್ಟು ಹೋಗುತ್ತಿದ್ದರು. ಹೀಗೆ ಅಮಾಯಕ ಮುಸ್ಲಿಮರ ತಲೆಗೆ ಆರೋಪ ಕಟ್ಟುವ ಷಡ್ಯಂತ್ರ ಮಾಡಿದ್ದರು ಎಂದು ಆರೋಪಿಸಿದ್ದರು.

ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ದಿಗ್ವಿಜಯ ಸಿಂಗ್ ಈ ಅಫಿಡವಿಟ್ ಅನ್ನು ಬೆಂಬಲಿಸಿ, ಶಿಂದೆಯ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು. ಕಾಂಗ್ರೆಸ್‌ ಮತ್ತು ಬೇರೆ ವಿಪಕ್ಷಗಳು ಎಷ್ಟೇ ಆರೋಪ ಮಾಡಿದ್ದರೂ ಬಿಜೆಪಿ, ಆರೆಸ್ಸೆಸ್‌ ಈ ಆರೋಪವನ್ನು ಬಲವಾಗಿ ಅಲ್ಲಗಳೆಯುವುದು ಸಾಧ್ಯವಾಗಲಿಲ್ಲ.

ಇದನ್ನೂ ಓದಿ ನಿಮ್ಮ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!

CBI ತನಿಖೆಯಲ್ಲಿ ಕೆಲವು ಆರೋಪಗಳು (ರಾವಿ ದೇವ್‌ರ ತರಬೇತಿ) ದೃಢಪಟ್ಟಿವೆ. ಆದರೆ ಶಿಂದೆಯವರನ್ನು ಸಾಕ್ಷಿಯಾಗಿ ಪರಿಗಣಿಸಲಿಲ್ಲ. ಆರೆಸ್ಸೆಸ್‌ ಇದು ಸುಳ್ಳು ಆರೋಪ ಎಂದು ಹೇಳಿತ್ತು. 2023ರಲ್ಲಿ ನ್ಯಾಯಾಲಯ ತಿರಸ್ಕರಿಸಿದ್ದರೂ, 2025ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಮತ್ತೆ ಚರ್ಚೆಯಲ್ಲಿದೆ. ವಿಶೇಷವಾಗಿ ಆರೆಸ್ಸೆಸ್‌ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ನಂದೇಡ್ (2006), ಮಾಲೆಗಾಂವ್ (2006, 2008), ಮೆಕ್ಕಾ ಮಸೀದ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ ವಿಧ್ವಂಸಕ ಕೃತ್ಯಗಳಲ್ಲಿ ಆರೆಸ್ಸೆಸ್‌ ಕೈವಾಡದ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

SAMJHAUTA
ಬಾಂಬ್‌ ಸ್ಫೋಟದಿಂದ ಸುಟ್ಟು ಹೋದ ಸಂಜೋತಾ ಎಕ್ಸ್‌ಪ್ರೆಸ್ ರೈಲು

ಗುಡ್ಡಗಾಡು ಪ್ರದೇಶದಲ್ಲಿ ಬುಡಕಟ್ಟು ಜನರಿಗೆ ನೆರವಾಗುವ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ನೆಪದಲ್ಲಿ ಆರೆಸ್ಸೆಸ್‌ ತನ್ನ ಕುಕೃತ್ಯಗಳಿಗೆ ಕಾಲಾಳುಗಳನ್ನು ತಯಾರಿಸುತ್ತಿದೆ. ದಕ್ಷಿಣ ಭಾರತ ರಾಜ್ಯಗಳ ಕುಗ್ರಾಮಗಳಲ್ಲಿ ವಸತಿ ಶಾಲೆಗಳನ್ನು ತೆರೆದು ಈಶಾನ್ಯ ರಾಜ್ಯಗಳ ಮಕ್ಕಳನ್ನು ಕರೆತಂದು ಸಂಘ ತರಬೇತಿ ಕೊಡಲಾಗುತ್ತಿದೆ. ಇದೇನೂ ಹೊಸ ವಿಷಯ ಅಲ್ಲ. ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಮುಗ್ಧ ಮಕ್ಕಳ ಮಿದುಳಿಗೆ ಕೋಮು ವಿಷ ತುಂಬಿ ಮತ್ತೆ ಅವರದೇ ಊರುಗಳಿಗೆ ಕಳಿಸಿ ಅಲ್ಲಿ ಮತ್ತೆ ಸಂಘ ಸಿದ್ಧಾಂತವನ್ನು ಪ್ರಚಾರ ಮಾಡುವ ಕೆಲಸಕ್ಕೆ ಹಚ್ಚುತ್ತಾರೆ. ಹೆಚ್ಚೆಂದರೆ ಹೈಸ್ಕೂಲು ಶಿಕ್ಷಣಕ್ಕೆ ಅವರ ಭವಿಷ್ಯ ಮುಕ್ತಾಯಗೊಳ್ಳುತ್ತಿದೆ. ಉನ್ನತ ಶಿಕ್ಷಣ, ಉದ್ಯೋಗ ಕೊಡಿಸುವ ಯಾವ ಕಾಳಜಿಯೂ ಇಲ್ಲ. ಹೀಗೆ ದೇಶದ ಮೂಲೆ ಮೂಲೆಗೂ ಆರೆಸ್ಸೆಸ್‌ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಮನೆ ಮನೆಗೂ ತೆರಳಿ ಪ್ರಚಾರ ನಡೆಸುವುದಕ್ಕೆ ಆರೆಸ್ಸೆಸ್‌ನ ಸ್ವಯಂ ಸೇವಕರು ರಾತ್ರಿ ಹಗಲೆನ್ನದೇ ದುಡಿಯುತ್ತಾರೆ. ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡುತ್ತ, ಹಿಂದೂ ಧರ್ಮ ರಕ್ಷಣೆಯ ಹುಸಿ ಭರವಸೆ ತುಂಬಿ ರಾಜಕೀಯದ ರಾಕ್ಷಸ ಶಕ್ತಿಯಾಗಿ ಆರೆಸ್ಸೆಸ್‌ ಬೆಳೆದಿದೆ. ಆ ಬೆಳವಣಿಗೆಯ ಹಿಂದೆ ಬಾಂಬ್ ಸ್ಫೋಟದಂತಹ ಕರಾಳ ಚರಿತ್ರೆ ಇದೆ. ಆರೆಸ್ಸೆಸ್‌ ನಾಯಕರ ಕೈಗಳಿಗೆ ರಕ್ತದ ಕಲೆ ಅಂಟಿದೆ.

ಶಾಲೆ, ಕಾಲೇಜುಗಳ ಮಕ್ಕಳು ಆರೆಸ್ಸೆಸ್‌ನ ಜಾಲಕ್ಕೆ ಬಹಳ ಸುಲಭವಾಗಿ ಸಿಲುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಸ್ಥಳಗಳಲ್ಲಿ ಆರೆಸ್ಸೆಸ್‌ ಚಟುವಟಿಕೆ ನಡೆಸುವುದಕ್ಕೆ ನಿಷೇಧ ಹೇರುವುದು ಸೂಕ್ತ ನಿರ್ಧಾರವಾಗಿದೆ. ತಮಿಳುನಾಡು ಸರ್ಕಾರ ಈಗಾಗಲೇ ಈ ಕ್ರಮ ಜಾರಿಗೆ ತಂದಿದೆ. ಕರ್ನಾಟಕ ಸರ್ಕಾರ ಅಂತಹ ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...