ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ರಕ್ಷಿಸಬೇಕಾದ ಕೇಂದ್ರ ಚುನಾವಣಾ ಆಯೋಗದ (ECI) ಸ್ವಾತಂತ್ರ್ಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೇರವಾಗಿ ಕಸಿದುಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆದ ಆಯುಕ್ತರ ನೇಮಕಾತಿ ಮತ್ತು ಅದರ ಹಿಂದಿರುವ ಕಾನೂನು ತಿದ್ದುಪಡಿಯು, ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಕಪ್ಪು ಚುಕ್ಕೆಯಾಗಿದೆ. ಆಯುಕ್ತರ ನೇಮಕಾಧಿಕಾರವನ್ನು ತನ್ನ ಕಪಿಮುಷ್ಠಿಯಲ್ಲಿಯೇ ಇಟ್ಟುಕೊಂಡು, ತಮಗೆ ಸರಿಹೊಂದುವ ಸಂಘದ ಹಿನ್ನೆಲೆಯವರನ್ನು ಆಯ್ಕೆ ಮಾಡಿ ಚುನಾವಣಾ ಪ್ರಕ್ರಿಯೆಯನ್ನು ತಮಗೆ ಬೇಕಾದಂತೆ ನಡೆಸುವ ಹುನ್ನಾರ ಇದರಲ್ಲಿ ಅಡಗಿದೆ ಎಂಬ ಆರೋಪ ನಿಜವಾಗುವಂತೆ ವೋಟ್ ಚೋರಿಯ ಸತ್ಯ ನಮ್ಮ ಮುಂದಿದೆ.
ನ್ಯಾಯಾಂಗ ತೀರ್ಪಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ
ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು 2023ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಸಮಿತಿ ನೇಮಕ ಮಾಡಬೇಕು ಎಂಬುದು ಆ ತೀರ್ಪಿನ ಸಾರವಾಗಿತ್ತು. ಆ ಮೂಲಕ, ಆಯೋಗವು ಸರ್ಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ನ್ಯಾಯಾಂಗವು ದಾರಿ ಮಾಡಿತ್ತು. ಆದರೆ, ಮೋದಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಪಾವಿತ್ರ್ಯವನ್ನು ಗೌರವಿಸಲಿಲ್ಲ. ಕೇವಲ ಒಂಬತ್ತು ತಿಂಗಳ ನಂತರ, 2023ರ ಡಿಸೆಂಬರ್‌ನಲ್ಲಿ, ಕೇಂದ್ರ ಸರ್ಕಾರವು “ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ-2023” ಅನ್ನು ಸಂಸತ್ತಿನಲ್ಲಿ ವಿವಾದಾತ್ಮಕವಾಗಿ ಅಂಗೀಕರಿಸಿತು. ಈ ಮೂಲಕ, ಸರ್ಕಾರವು ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹೇರಿತು.
ನೇಮಕಾತಿ ಸಮಿತಿಯಿಂದ ಸಿಜೆಐಗೆ ಕೊಕ್
ಸರ್ಕಾರ ಜಾರಿಗೆ ತಂದ ಹೊಸ ಕಾನೂನಿನ ಅತ್ಯಂತ ಅಪಾಯಕಾರಿ ಅಂಶವೆಂದರೆ, ನೇಮಕಾತಿ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಅವರನ್ನು ಹೊರಗಿಟ್ಟಿದ್ದು. ಸಿಜೆಐ ಸ್ಥಾನದ ಬದಲು, ಪ್ರಧಾನ ಮಂತ್ರಿಯವರು ನಾಮನಿರ್ದೇಶನ ಮಾಡಿದ ಕೇಂದ್ರ ಸಂಪುಟ ದರ್ಜೆ ಸಚಿವರೊಬ್ಬರನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಲಾಯಿತು.
ಸರ್ಕಾರದ ಪರ 2:1ರ ನಿರ್ಣಾಯಕ ಬಹುಮತ
ಈ ಬದಲಾವಣೆಯಿಂದಾಗಿ, ನೂತನ ಆಯ್ಕೆ ಸಮಿತಿಯು ಪ್ರಧಾನಿ (ಅಧ್ಯಕ್ಷರು), ಕೇಂದ್ರ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ (ಸದಸ್ಯರು) ಎಂಬ ಮೂವರು ಸದಸ್ಯರನ್ನು ಒಳಗೊಂಡಿದೆ. ಈ ಸಮಿತಿಯಲ್ಲಿ ಸರ್ಕಾರದ ಪರ ಇಬ್ಬರು ಸದಸ್ಯರಿದ್ದರೆ, ವಿರೋಧ ಪಕ್ಷದ ನಾಯಕ ಕೇವಲ ಒಬ್ಬರೇ ಇರುತ್ತಾರೆ. ಇದು ಆಯುಕ್ತರ ಆಯ್ಕೆಯಲ್ಲಿ ಸರ್ಕಾರಕ್ಕೆ 2:1ರ ನಿರ್ಣಾಯಕ ಬಹುಮತವನ್ನು ಖಚಿತಪಡಿಸಿತು. ವಿರೋಧ ಪಕ್ಷದ ನಾಯಕ ಆಕ್ಷೇಪಿಸಿದರೂ, ಅವರ ಆಕ್ಷೇಪಣೆಗೆ ಬೆಲೆಯಿಲ್ಲದಂತೆ ಆಯ್ಕೆ ಪ್ರಕ್ರಿಯೆ ನಡೆಯಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿತು.
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಆಯುಕ್ತರ ಸ್ಥಾನ ಖಾಲಿ
ಇದೇ ವಿವಾದಾತ್ಮಕ ಪರಿಸ್ಥಿತಿಯ ನಡುವೆಯೇ, 2024ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಚುನಾವಣಾ ಆಯುಕ್ತರ ಎರಡು ಸ್ಥಾನಗಳು ಖಾಲಿಯಾದವು. ಈ ನಿರ್ಣಾಯಕ ಸಮಯದಲ್ಲಿ, ಪ್ರಜಾಪ್ರಭುತ್ವದ ಆಧಾರಸ್ತಂಭವಾದ ಆಯೋಗವು ಸಂಪೂರ್ಣವಾಗಿ ಸರ್ಕಾರೇತರ ವ್ಯಕ್ತಿಗಳಿಂದ ತುಂಬಬೇಕಿತ್ತು. ಆದರೆ, ಹೊಸ ಕಾನೂನಿನಿಂದಾಗಿ, ಆಯೋಗವು ಸರ್ಕಾರದ ನೇರ ಹಿಡಿತದಲ್ಲಿ ಸಿಲುಕುವಂತಾಯಿತು.

ವಿವಾದದ ಕೇಂದ್ರಬಿಂದು; ಗ್ಯಾನೇಶ್ ಕುಮಾರ್ ನೇಮಕ
ಹೊಸ ಮತ್ತು ವಿವಾದಾತ್ಮಕ ಕಾನೂನಿನ ಅಡಿಯಲ್ಲಿ ನೇಮಕಗೊಂಡ ಮೊದಲ ಆಯುಕ್ತರಲ್ಲಿ ಮಾಜಿ ಐಎಎಸ್ ಅಧಿಕಾರಿ ಗ್ಯಾನೇಶ್ ಕುಮಾರ್ ಪ್ರಮುಖರು. 2024ರ ಮಾರ್ಚ್‌ನಲ್ಲಿ ಪ್ರಧಾನಿ ನೇತೃತ್ವದ ಸಮಿತಿಯು ಇವರ ಹೆಸರನ್ನು ಅಂತಿಮಗೊಳಿಸಿ ಚುನಾವಣಾ ಆಯುಕ್ತರನ್ನಾಗಿ (ನಂತರ ಸಿಇಸಿ) ನೇಮಕ ಮಾಡಿತು. ಈ ನೇಮಕಾತಿಯು ಪ್ರಜಾಪ್ರಭುತ್ವ ವಿರೋಧಿ ನಡೆಗೆ ಸಾಕ್ಷಿಯಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?
ಗ್ಯಾನೇಶ್ ಕುಮಾರ್ ಅವರ ಹಿಂದಿನ ಸೇವಾವಧಿಯು ಅವರನ್ನು ವಿವಾದದ ಕೇಂದ್ರಕ್ಕೆ ತಂದಿದೆ. ಅವರು ಕೇಂದ್ರ ಗೃಹ ಸಚಿವಾಲಯದಲ್ಲಿ ಮಹತ್ವದ ಹುದ್ದೆಯಲ್ಲಿದ್ದಾಗ, ಕೇಂದ್ರ ಸರ್ಕಾರದ ರಾಜಕೀಯವಾಗಿ ಸೂಕ್ಷ್ಮ ನಿರ್ಧಾರಗಳಾದ ಸಂವಿಧಾನದ 370ನೇ ವಿಧಿಯ ರದ್ದತಿ ಮತ್ತು ರಾಮಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿರೋಧ ಪಕ್ಷಗಳು ಈ ನೇಮಕಾತಿಯನ್ನು ತೀವ್ರವಾಗಿ ಖಂಡಿಸಿ, ಇದು ಮೋದಿ ಸರ್ಕಾರದ ‘ಉಡುಗೊರೆ’ ಎಂದು ಆಕ್ರೋಶ ವ್ಯಕ್ತಪಡಿಸಿದವು. ಆಡಳಿತಾರೂಢ ಬಿಜೆಪಿಯ ಪ್ರಮುಖ ನಿರ್ಧಾರಗಳನ್ನು ಅನುಷ್ಠಾನಗೊಳಿಸಿದ ಅಧಿಕಾರಿಗೆ, ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯೋಗದಂತಹ ಉನ್ನತ ಸ್ಥಾನ ನೀಡುವುದು, ಸರ್ಕಾರದ ಕೃಪಾಪೋಷಣೆಯನ್ನು ಸೂಚಿಸುತ್ತದೆ. ಇದು ಆಯೋಗದ ನಿಷ್ಪಕ್ಷಪಾತದ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿದವು.
ಆಯೋಗದ ನಿಷ್ಪಕ್ಷಪಾತದ ನಂಬಿಕೆ ಕುಸಿತ
ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆ ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಆದರೆ, ನೇಮಕಾತಿ ಸಮಿತಿಯಲ್ಲಿ ನ್ಯಾಯಾಂಗದ ಪಾತ್ರವನ್ನು ತೆಗೆದುಹಾಕಿದ ನಂತರ ಮತ್ತು ಗ್ಯಾನೇಶ್ ಕುಮಾರ್ ಅವರಂತಹ ಆಡಳಿತ ಪಕ್ಷದ ನಿರ್ಧಾರಗಳ ಅನುಷ್ಠಾನದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ನೇಮಕದಿಂದಾಗಿ, ಆಯೋಗದ ನಿಷ್ಪಕ್ಷಪಾತದ ಮೇಲೆ ಸಾರ್ವಜನಿಕ ನಂಬಿಕೆ ತೀವ್ರವಾಗಿ ಕುಸಿದಿದೆ.
ರಕ್ಷಾ ಕವಚದ ರಾಜಕೀಯ ತಂತ್ರ
ಕೇಂದ್ರ ಸರ್ಕಾರವು ಹೊಸ ಕಾನೂನಿನಲ್ಲಿ ಚುನಾವಣಾ ಆಯುಕ್ತರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಸಮಾನವಾದ ಮಹಾಭಿಯೋಗ (Impeachment) ವಿಧಾನಕ್ಕೆ ಬದಲಾಯಿಸಿದೆ. ಸರ್ಕಾರವು ಇದನ್ನು ‘ರಕ್ಷಾ ಕವಚ’ ಎಂದು ಸಮರ್ಥಿಸುತ್ತದೆ. ಆದರೆ, ನೇಮಕಾತಿಯ ಸಂಪೂರ್ಣ ನಿಯಂತ್ರಣವನ್ನು ಸರ್ಕಾರವೇ ಹೊಂದಿರುವಾಗ, ಈ ರಕ್ಷಾ ಕವಚವು ವಾಸ್ತವವಾಗಿ ಆಯುಕ್ತರು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಲು ಮತ್ತಷ್ಟು ಉತ್ತೇಜನ ನೀಡುತ್ತದೆ ಎಂಬ ಟೀಕೆಗಳಿವೆ.
ಸಾಂವಿಧಾನಿಕ ಸ್ವಾತಂತ್ರ್ಯಕ್ಕೆ ನೇರ ಬೆದರಿಕೆ
ಸಂವಿಧಾನದ ಪ್ರಕಾರ, ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿಗಳಿಲ್ಲದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಸ್ವಾಯತ್ತವಾಗಿರಬೇಕು. ಆದರೆ, ಈ ಹೊಸ ನೇಮಕಾತಿ ಪ್ರಕ್ರಿಯೆಯು ಆಯೋಗವನ್ನು ವಾಸ್ತವವಾಗಿ ಕೇಂದ್ರ ಸರ್ಕಾರದ ಒಂದು ವಿಭಾಗವನ್ನಾಗಿ ಪರಿವರ್ತಿಸುತ್ತಿದೆ. ಇದು ದೇಶದ ಸಂವಿಧಾನವು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಮೂಲ ಸ್ವರೂಪಕ್ಕೆ ನೇರ ಬೆದರಿಕೆಯಾಗಿದೆ.

ವಿಪಕ್ಷಗಳ ವಿರೋಧ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ಸ್ಪಷ್ಟ ಎಚ್ಚರಿಕೆ
ಚುನಾವಣಾ ಆಯೋಗದ ನೇಮಕಾತಿ ಕಾನೂನು ಮತ್ತು ಗ್ಯಾನೇಶ್ ಕುಮಾರ್ ಅವರ ನೇಮಕಾತಿಯನ್ನು ವಿರೋಧಿಸಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮತ್ತು ಹೊರಗೆ ಪ್ರಬಲ ವಿರೋಧ ವ್ಯಕ್ತಪಡಿಸಿವೆ. ಈ ನೇಮಕಾತಿಗಳು ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸರ್ಕಾರದ ಉದ್ದೇಶಪೂರ್ವಕ ತಂತ್ರ ಎಂದು ಅವುಗಳು ಬಲವಾಗಿ ವಾದಿಸಿವೆ. ಚುನಾವಣಾ ಆಯೋಗದ ಈ ವಿವಾದಾತ್ಮಕ ವರ್ತನೆಯ ವಿರುದ್ಧ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಂಭೀರ ವಾಗ್ದಾಳಿ ನಡೆಸಿದ್ದಾರೆ. “ಚುನಾವಣಾ ಆಯೋಗವು ಮತಗಳ್ಳರನ್ನು ರಕ್ಷಿಸುತ್ತಿದೆ. ಇವರು ದೇಶದ ಪ್ರಜಾಪ್ರಭುತ್ವವನ್ನೇ ನಾಶ ಮಾಡುತ್ತಿದ್ದಾರೆ. ನೀವಿದನ್ನು ಆಕ್ರಮಣವೆಂದು ಭಾವಿಸಿ ತಪ್ಪಿಸಿಕೊಳ್ಳಬಹುದು ಎಂದುಕೊಂಡರೆ, ಮತ್ತೊಮ್ಮೆ ಯೋಚಿಸಿ. ಸಮಯ ಬೇಕಾಗಬಹುದು, ಆದರೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿಯನ್ನು ನಾವು ಸುಮ್ಮನೆ ಬಿಡುವುದಿಲ್ಲ. ಒಬ್ಬೊಬ್ಬರನ್ನೇ ಹಿಡಿಯುತ್ತೇವೆ,” ಎಂದು ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ದೃಢ ನಿರ್ಧಾರವನ್ನು ಪ್ರಕಟಿಸಿ, ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ಕಾಯ್ದೆಯು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದ್ದರೂ, ಸರ್ಕಾರವು ನ್ಯಾಯಾಂಗದ ದೃಷ್ಟಿಯನ್ನು ಅಲಕ್ಷಿಸಿ ಕಾನೂನನ್ನು ಜಾರಿಗೊಳಿಸಿದೆ. ಪ್ರಸ್ತುತ, ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ನ್ಯಾಯಾಂಗವು ಈ ವಿವಾದಾತ್ಮಕ ಕಾನೂನಿನ ಬಗ್ಗೆ ತೆಗೆದುಕೊಳ್ಳುವ ನಿರ್ಧಾರವು ಆಯೋಗದ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ.
ಸಾಂವಿಧಾನಿಕ ಸಂಸ್ಥೆಯ ‘ಕೇಸರಿಕರಣ’ದ ಆತಂಕ
ಕೇಂದ್ರ ಸರ್ಕಾರದ ಇತ್ತೀಚಿನ ನಡೆಗಳು, ಚುನಾವಣಾ ಆಯೋಗವನ್ನು ಆಡಳಿತ ಪಕ್ಷದ ಹಿತಾಸಕ್ತಿಗಳಿಗೆ ಅನುಗುಣವಾಗಿ ‘ಕೇಸರಿಕರಣ’ ಮಾಡುವ ಸ್ಪಷ್ಟ ಪ್ರಯತ್ನವಾಗಿ ಕಾಣುತ್ತಿವೆ. ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟು, ತಮ್ಮದೇ ಆಪ್ತ ಅಧಿಕಾರಿಯನ್ನು ಪ್ರಮುಖ ಹುದ್ದೆಯಲ್ಲಿ ಕೂರಿಸುವ ಈ ತಂತ್ರವು, ಮುಂಬರುವ ಚುನಾವಣೆಗಳ ನ್ಯಾಯಸಮ್ಮತತೆ ಮತ್ತು ಸಂವಿಧಾನದ ಭವಿಷ್ಯದ ಮೇಲೆ ಗಾಢವಾದ ಕರಿನೆರಳನ್ನು ಮೂಡಿಸಿದೆ. ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ಅತ್ಯಂತ ಕರಾಳ ಅಧ್ಯಾಯವಾಗಿ ದಾಖಲಾಗಿದೆ.





