ಒಬ್ಬ ಸಾಮಾನ್ಯ ಕೈದಿಗೆ ಸಿಗದ ಸವಲತ್ತುಗಳು, ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಂತಹ ಗಂಭೀರ ಆರೋಪ ಹೊತ್ತ ದೇವಮಾನವನಿಗೆ ಸಿಗುತ್ತವೆ ಎಂದರೆ, ಕಾನೂನು ಎಲ್ಲರಿಗೂ ಒಂದೇ ಎಂಬ ಸಂವಿಧಾನದ ಆಶಯ ಇಲ್ಲಿ ಅಣಕಕ್ಕೀಡಾಗಿದೆ
ಧರ್ಮದ ಅಮಲು ಉಣಿಸಿ, ಅಧಿಕಾರಸ್ಥರ ಓಲೈಸಿ, ಅಪ್ರಾಪ್ತ ಬಾಲಕಿಯರ ಬದುಕನ್ನು ಕತ್ತಲಿಗೆ ತಳ್ಳುವ ‘ದೇವಮಾನವ’ರ ಮುಖವಾಡ ಕಳಚಿದ್ದರೂ, ಅವರಿಗೆ ಸಿಗುತ್ತಿರುವ ರಾಜಕೀಯ ಅಭಯಹಸ್ತ ವ್ಯವಸ್ಥೆಯ ಅಣಕ. ಆಸಾರಾಮ ಬಾಪು ಪ್ರಕರಣ ಕೇವಲ ಒಬ್ಬ ವ್ಯಕ್ತಿಯ ಕ್ರೌರ್ಯದ ಕತೆಯಲ್ಲ; ಅದು ಅತ್ಯಾಚಾರಿಗಳನ್ನು ರಕ್ಷಿಸುವ, ಸ್ತ್ರೀದ್ವೇಷವನ್ನೇ ಬಂಡವಾಳವಾಗಿಸಿಕೊಂಡಿರುವ ಪ್ರಸ್ತುತ ರಾಜಕೀಯ ವ್ಯವಸ್ಥೆಯ ‘ಪ್ಯಾಟರ್ನ್’ ಅನ್ನು ಎತ್ತಿ ತೋರಿಸುವ ಕನ್ನಡಿ.
ದೇಶದಲ್ಲಿ ‘ಬೇಟಿ ಬಚಾವೋ’ ಘೋಷಣೆ ಮೊಳಗುತ್ತಿರುವ ಕಾಲಘಟ್ಟದಲ್ಲೇ, ಅತ್ಯಾಚಾರ ಅಪರಾಧಿಗಳಿಗೆ ಹೂಮಾಲೆ ಹಾಕುವ, ಜಾಮೀನು ನೀಡಿ ಸತ್ಕರಿಸುವ ಮತ್ತು ಅತ್ಯಾಚಾರಿಗೆ ಬದಲಾಗಿ ಸಂತ್ರಸ್ತೆಯರ ಚಾರಿತ್ರ್ಯವಧೆ ಮಾಡುವ ಹೀನಸಂಸ್ಕೃತಿ ಅನಾವರಣಗೊಳ್ಳುತ್ತಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಸಾಕ್ಷಿಗಳನ್ನು ನಿರ್ದಯವಾಗಿ ಕೊಲೆಗೈದು, ಅಂತಿಮವಾಗಿ ಕಾನೂನಿನ ಕುಣಿಕೆಗೆ ಸಿಲುಕಿ ಜೈಲು ಪಾಲಾಗಿದ್ದ ಸ್ವಯಂ ಘೋಷಿತ ದೇವಮಾನವ ಆಸಾರಾಮ್ ಪ್ರಕರಣ ಮತ್ತು ಆತನಿಗೆ ಸಿಗುತ್ತಿರುವ ಪ್ರತ್ಯಕ್ಷ- ಪರೋಕ್ಷ ಬೆಂಬಲವು, ಭಾರತದ ಪ್ರಜಾಪ್ರಭುತ್ವ ಮತ್ತು ಮಹಿಳಾ ಸುರಕ್ಷತೆಯ ವಿಷಯದಲ್ಲಿ ಎದ್ದಿರುವ ಅತಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ.
ಆಸಾರಾಮನ’ಕರ್ಮಕಾಂಡ’ ಮತ್ತು ರಕ್ತಸಿಕ್ತ ಹಾದಿ
ಗುಜರಾತಿನ ಸಾಬರಮತಿ ನದಿತೀರದ ಗುಡಿಸಲಿನಿಂದ ಭಾರೀ ಸಾಮ್ರಾಜ್ಯ ಕಟ್ಟಿದ ಅಸುಮಲ್ ಸಿಂಧಿ ಉರ್ಫ್ ಆಸಾರಾಮ ಬಾಪು, ಧರ್ಮದ ಹೆಸರಿನಲ್ಲಿ ಜನರನ್ನು ಮರುಳು ಮಾಡಿದ್ದು ವಾಸ್ತವ. ಆದರೆ ಆತನ ಕಾವಿಯ ಒಳಗೆ ಅಡಗಿದ್ದ ಕಾಮುಕತೆಯ ಕರಾಳ ಮುಖ ಬಯಲಿಗೆ ಬಂದಿದ್ದು 2013ರಲ್ಲಿ. ಜೋಧಪುರದ ತನ್ನದೇ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಆತ ನಡೆಸಿದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಆದರೆ ಈ ಪ್ರಕರಣದ ಭಯಾನಕತೆ ಅಡಗಿರುವುದು ಕೇವಲ ಅತ್ಯಾಚಾರದಲ್ಲಿ ಮಾತ್ರವಲ್ಲ, ನಂತರ ನಡೆದ ವಿದ್ಯಮಾನಗಳಲ್ಲಿ. ಆಸಾರಾಮನ ವಿರುದ್ಧ ಸಾಕ್ಷಿ ಹೇಳಲು ಮುಂದಾದವರ ಮೇಲೆ ನಡೆದ ಹಲ್ಲೆಗಳು, ಒಂಬತ್ತು ಪ್ರಮುಖ ಸಾಕ್ಷಿಗಳ ಮೇಲೆ ನಡೆದ ದಾಳಿಗಳು ಮತ್ತು ಮೂವರ ನಿಗೂಢ ಹತ್ಯೆಗಳು – ಇವೆಲ್ಲವೂ ಆತ ಹೊಂದಿದ್ದ ಮಾಫಿಯಾ ಸ್ವರೂಪದ ಹಿಡಿತವನ್ನು ಜಗಜ್ಜಾಹೀರು ಮಾಡಿತ್ತು. ಇಷ್ಟೆಲ್ಲಾ ಆದರೂ, ಆತನ ಭಕ್ತಗಣ ಮತ್ತು ರಾಜಕೀಯ ಪೋಷಕರು ಆತನನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಲಿಲ್ಲ ಎಂಬುದು ವ್ಯವಸ್ಥೆಯ ನೈತಿಕ ಅಧಃಪತನಕ್ಕೆ ಸಾಕ್ಷಿ.

ಬಿಜೆಪಿ ಮತ್ತು ಅತ್ಯಾಚಾರಿಗಳ ರಕ್ಷಣೆಯ ಪ್ರವೃತ್ತಿ
ಆಸಾರಾಮನ ಪ್ರಕರಣವನ್ನು ಪ್ರತ್ಯೇಕವಾಗಿ ನೋಡಲಾಗದು. ಕಳೆದ ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಆಡಳಿತ ವ್ಯವಸ್ಥೆ ಮತ್ತು ಅದರ ಪರಿವಾರದ ಸಂಘಟನೆಗಳು ಲೈಂಗಿಕ ದೌರ್ಜನ್ಯ ಆರೋಪಿಗಳ ವಿಷಯದಲ್ಲಿ ತಾಳಿರುವ ನಿಲುವು ಒಂದು ನಿರ್ದಿಷ್ಟ ಪ್ರವೃತ್ತಿಯನ್ನು ಅನುಸರಿಸುತ್ತಿದೆ. ಅದು ಉನ್ನಾಂವ್ ದ ಕುಲದೀಪ್ ಸಿಂಗ್ ಆಗಿರಲಿ, ಚಿನ್ಮಯಾನಂದ ಆಗಿರಲಿ, ಅಥವಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪ ಹೊತ್ತ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಗಿರಲಿ; ಅಧಿಕಾರಸ್ಥರ ಪ್ರತಿಕ್ರಿಯೆ ಯಾವಾಗಲೂ ಆರೋಪಿಗಳ ಪರವಾಗಿಯೇ ಇರುತ್ತದೆ. ಈ ಆರೋಪಿಗಳು-ಅಪರಾಧಿಗಳು ಬಿಜೆಪಿಯ ರಾಜಕೀಯ ಶಕ್ತಿ ಸಾಮರ್ಥ್ಯಕ್ಕೆ ನೀರೆರೆದವರು ಎಂಬುದೇ ಮುಖ್ಯ ಮಾನದಂಡ.
ಮೌನವೇ ಸಮ್ಮತಿ: ಅತ್ಯಾಚಾರದಂತಹ ಗಂಭೀರ ಆರೋಪಗಳು ಕೇಳಿಬಂದಾಗ ಆಳುವ ಪಕ್ಷದ ನಾಯಕರು ತೋರುವ ನಿಗೂಢ ಮೌನ, ಆರೋಪಿಗಳಿಗೆ ಪರೋಕ್ಷ ಬೆಂಬಲ ನೀಡಿದಂತೆಯೇ ಸರಿ. ಆಸಾರಾಮನ ವಿಷಯದಲ್ಲೂ ಗುಜರಾತ್ ಮತ್ತು ಕೇಂದ್ರದ ಅನೇಕ ಪ್ರಭಾವಿ ನಾಯಕರು ಆತನ ಜೊತೆಗಿನ ನಂಟನ್ನು ಕಡಿದುಕೊಳ್ಳಲು ಬಹುಕಾಲ ಹಿಂದೇಟು ಹಾಕಿದ್ದರು.
ಸಂತ್ರಸ್ತೆಯರ ಮೇಲೆಯೇ ಗೂಬೆ: “ಅತ್ಯಾಚಾರಕ್ಕೆ ಬರೀ ಪುರುಷರಲ್ಲ, ಮಹಿಳೆಯರೂ ಕಾರಣ,” ಎಂದು ನಿರ್ಭಯಾ ಪ್ರಕರಣದ ಸಂದರ್ಭದಲ್ಲಿ ಇದೇ ಆಸಾರಾಮ ಹೇಳಿಕೆ ನೀಡಿದ್ದ. ಇಂತಹ ವಿಕೃತ ಮನಸ್ಥಿತಿಯನ್ನು ಖಂಡಿಸಬೇಕಾದ ರಾಜಕೀಯ ನಾಯಕರು, ಅಂತಹ ಹೇಳಿಕೆಗಳನ್ನು ‘ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಅತ್ಯಾಚಾರಿಗಳನ್ನು ‘ಸಂಸ್ಕಾರಿ ಬ್ರಾಹ್ಮಣರು’ ಎಂದು ಕರೆದು ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಸನ್ಮಾನಿಸಿದ ಘಟನೆ ಇದಕ್ಕೆ ಜ್ವಲಂತ ಉದಾಹರಣೆ.
ಕಾನೂನು ಹೋರಾಟದ ಹಾದಿತಪ್ಪಿಸುವುದು: ಆಸಾರಾಮನಂತಹ ಪ್ರಭಾವಿಗಳು ಜೈಲು ಸೇರಿದ ನಂತರವೂ ಜಾಮೀನು, ಪೆರೋಲ್ ಹೆಸರಿನಲ್ಲಿ ಹೊರಬರಲು ನಡೆಸುವ ಪ್ರಯತ್ನಗಳಿಗೆ ಸರ್ಕಾರದ ಮಟ್ಟದಲ್ಲಿ ಸಿಗುವ ಮೃದು ಧೋರಣೆ ಆಘಾತಕಾರಿ. ರಾಮ್ ರಹೀಮ್ ಸಿಂಗ್ ಚುನಾವಣಾ ಸಂದರ್ಭಗಳಲ್ಲಿ ಪದೇ ಪದೇ ಪೆರೋಲ್ ಮೇಲೆ ಹೊರಬರುವುದು ಮತ್ತು ಆತನ ಆಶೀರ್ವಾದ ಪಡೆಯಲು ಬಿಜೆಪಿ ನಾಯಕರು ಸಾಲುಗಟ್ಟಿ ನಿಲ್ಲುವುದು ಯಾವ ಸಂದೇಶವನ್ನು ರವಾನಿಸುತ್ತದೆ?
ಸ್ತ್ರೀದ್ವೇಷದ ರಾಜಕೀಯ ಮತ್ತು ಮತ ಬ್ಯಾಂಕ್
ಆಸಾರಾಮನಂತಹ ಅಪರಾಧಿಗಳು ಜೈಲಿನಲ್ಲಿದ್ದರೂ ಅಥವಾ ಜಾಮೀನಿನ ಮೇಲೆ ಹೊರ ಬಂದರೂ, ಅವರ ಪ್ರಭಾವ ಕುಂದದಿರಲು ಮುಖ್ಯ ಕಾರಣ ‘ಮತಬ್ಯಾಂಕ್ ರಾಜಕಾರಣ’. ಈ ದೇವ ಮಾನವರು ಹೊಂದಿರುವ ಲಕ್ಷಾಂತರ ಅನುಯಾಯಿಗಳನ್ನು ತಮ್ಮ ಮತಗಟ್ಟೆಯನ್ನಾಗಿ ಪರಿವರ್ತಿಸಿಕೊಳ್ಳುವ ತಂತ್ರಗಾರಿಕೆ ರಾಜಕೀಯ ಪಕ್ಷಗಳದ್ದು. ಚುನಾವಣೆಗಳನ್ನು ಗೆಲ್ಲುವುದು ಇವುಗಳ ದಾರಿ ಮತ್ತು ಗುರಿ. ಇದಕ್ಕಾಗಿ ಎಂತಹ ಹೀನ ಕೃತ್ಯವನ್ನಾದರೂ ಕಡೆಗಣಿಸಲು ಸಿದ್ಧವಿರುತ್ತವೆ. ಬಿಜೆಪಿಯ ಹಿನ್ನೆಲೆಯಲ್ಲಿ ಈ ನಡೆ ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತದೆ. ಮಹಿಳೆಯರನ್ನು ಪೂಜಿಸುವ ದೈವಗಳನ್ನಾಗಿ ಬಿಂಬಿಸುತ್ತಲೇ, ಅವರ ಮೇಲೆ ಅತ್ಯಾಚಾರ ದೌರ್ಜನ್ಯ ನಡೆದಾಗ ಮೌನ ವಹಿಸುವುದು ಅಥವಾ ಆರೋಪಿ ಕಾವಿಧಾರಿ ಆಗಿದ್ದರೆ ಆತನ ರಕ್ಷಣೆಗೆ ನಿಲ್ಲುವುದು ಬಿಜೆಪಿಯ ಅಲಿಖಿತ ನಿಯಮವೇ ಆದಂತಿದೆ. ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ರ್ಯಾಲಿ ನಡೆಸಿದ್ದು ಯಾರು ಎಂಬ ಕಟುಸತ್ಯ ಇತಿಹಾಸದ ಪುಟಗಳಿಂದ ಸಲೀಸಾಗಿ ಅಳಿಸಿಹೋಗುವುದಿಲ್ಲ.

ನ್ಯಾಯಾಂಗದ ಮೇಲಿನ ಒತ್ತಡ ಮತ್ತು ನಾಟಕ
ಆಸಾರಾಮನಂತಹ ಪ್ರಕರಣಗಳಲ್ಲಿ ನ್ಯಾಯ ಸಿಗುವುದು ಒಂದು ಸುದೀರ್ಘ ನಾಟಕದಂತೆ ಭಾಸವಾಗುತ್ತದೆ. ಪೋಕ್ಸೊ ಕಾಯ್ದೆಯಡಿ ಬಂಧಿತನಾಗಿದ್ದರೂ, ಆತನನ್ನು ಶಿಕ್ಷಿಸಲು ಸಾಕ್ಷಿಗಳು ಪ್ರಾಣತ್ಯಾಗ ಮಾಡಬೇಕಾಯಿತು. ಪೊಲೀಸ್ ಅಧಿಕಾರಿಗಳು ಜೀವ ಬೆದರಿಕೆ ಎದುರಿಸಬೇಕಾಯಿತು. ಇಷ್ಟೆಲ್ಲಾ ಆದರೂ, ಆತ ಆರೋಗ್ಯದ ನೆಪವೊಡ್ಡಿ ಅಥವಾ ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಹೊರಬರಲು ಹವಣಿಸುತ್ತಲೇ ಇರುತ್ತಾನೆ.
ಒಂದು ವೇಳೆ ಆಸಾರಾಮನಿಗೆ ಈಗ ಜಾಮೀನು ಅಥವಾ ಪೆರೋಲ್ ರೂಪದ ಪರಿಹಾರ ಸಿಕ್ಕಿ ಹೊರಬರುತ್ತಿದ್ದರೆ ಅದು ಕೇವಲ ನ್ಯಾಯಾಂಗದ ಪ್ರಕ್ರಿಯೆಯಲ್ಲ, ಬದಲಿಗೆ ಆತನನ್ನು ರಕ್ಷಿಸಲು ವ್ಯವಸ್ಥಿತವಾಗಿ ಹೆಣೆಯಲಾದ ರಾಜಕೀಯ ಷಡ್ಯಂತ್ರದ ಫಲ ಎನ್ನಲಡ್ಡಿಯಿಲ್ಲ. ಒಬ್ಬ ಸಾಮಾನ್ಯ ಕೈದಿಗೆ ಸಿಗದ ಸವಲತ್ತುಗಳು, ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಂತಹ ಗಂಭೀರ ಆರೋಪ ಹೊತ್ತ ದೇವ ಮಾನವನಿಗೆ ಸಿಗುತ್ತದೆ ಎಂದರೆ, ಕಾನೂನು ಎಲ್ಲರಿಗೂ ಒಂದೇ ಎಂಬ ಸಂವಿಧಾನದ ಆಶಯ ಇಲ್ಲಿ ಅಣಕಕ್ಕೀಡಾಗಿದೆ.
ಅಪ್ರಾಪ್ತ ಬಾಲಕಿಯ ನಂಬಿಕೆಗೆ ದ್ರೋಹ ಬಗೆದು, ಆಕೆಯ ಶೀಲ ಹರಣ ಮಾಡಿದ ಆಸಾರಾಮ್ ಕರ್ಮಕಾಂಡವನ್ನು ಮರೆಮಾಚಿ, ಆತನನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿರುವ ಶಕ್ತಿಗಳು ದೇಶದ ಹೆಣ್ಣುಮಕ್ಕಳಿಗೆ ಎಂತಹ ಸುರಕ್ಷತೆ ನೀಡಬಲ್ಲವು? ಅತ್ಯಾಚಾರಿಗಳ ಜಾತಿ, ಧರ್ಮ ಮತ್ತು ರಾಜಕೀಯ ಒಲವು ನೋಡಿ ನ್ಯಾಯ ನಿರ್ಧರಿಸುವ ಈ ಕೆಟ್ಟ ಪರಿಪಾಠಕ್ಕೆ ಕೊನೆ ಯಾವಾಗ? ‘ನಾರಿ ಶಕ್ತಿ’ಯ ಬಗ್ಗೆ ಮಾತನಾಡುವ ಪ್ರಧಾನಿ ಮತ್ತು ಅವರ ಪಕ್ಷ, ತಮ್ಮದೇ ಸಿದ್ಧಾಂತದ ಅಡಿಯಲ್ಲಿ ಆಶ್ರಯ ಪಡೆದಿರುವ, ಅಥವಾ ತಮ್ಮ ಬೆಂಬಲದ ಅಗತ್ಯವಿರುವ ಇಂತಹ ಲೈಂಗಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ತೋರುವರೇ? ಅಥವಾ ಮತಗಳ ಮತ್ತು ಅಧಿಕಾರದ ದಾಹಕ್ಕಾಗಿ ಅತ್ಯಾಚಾರಿಗಳಿಗೆ ‘ಸಂಸ್ಕಾರಿ’ ಪಟ್ಟ ಕಟ್ಟಿ ರಕ್ಷಣೆ ಕೊಡುವ ಈ ಪ್ರವೃತ್ತಿ ಹೀಗೆಯೇ ಮುಂದುವರಿಯುವುದೇ?





