ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯಬೇಕು ಮತ್ತು ಅರಾವಳಿಯನ್ನು ಉಳಿಸಬೇಕೆಂದು #SaveAravaliHills ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಅನೇಕ ಪರಿಸರವಾದಿಗಳು ಪೀಪಲ್ ಫಾರ್ ಅರಾವಳಿಸ್ ಮತ್ತು ಸರಿಸ್ಕಾ ಉಳಿಸಿ ಅಭಿಯಾನವು ಸುಪ್ರೀಂ ಕೋರ್ಟ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ವಿಶ್ವದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಅರಾವಳಿ ಬೆಟ್ಟಗಳ ಸಾಲುಗಳು ಕಳೆದ ಒಂದು ತಿಂಗಳಿಂದ ಸುದ್ದಿಯಲ್ಲಿವೆ. ಉತ್ತರದ ದೆಹಲಿಯಿಂದ, ರಾಜಸ್ಥಾನ ಮತ್ತು ಹರಿಯಾಣದ ಮೂಲಕ ದಕ್ಷಿಣದ ಗುಜರಾತಿನವರೆಗೆ ವ್ಯಾಪಿಸಿರುವ ಈ ಬೆಟ್ಟಗಳು ಭಾರತದ ಭೌಗೋಳಿಕ ಮತ್ತು ನೈಸರ್ಗಿಕ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿವೆ. ಸುಮಾರು ಎರಡು ಶತಕೋಟಿ ವರ್ಷಗಳಿಗಿಂತ ಹಳೆಯದಾದ ಅರಾವಳಿ ಪರ್ವತ ಶ್ರೇಣಿಗಳು “ಭಾರತದ ಶ್ವಾಸಕೋಶ”ಗಳೆಂದೇ ಪರಿಗಣಿಸಲ್ಪಟ್ಟಿವೆ. ರಾಜಸ್ಥಾನದ 15 ಜಿಲ್ಲೆಗಳಲ್ಲಿ ನಿಂತಿರುವ ಈ ಬೆಟ್ಟದ ಸಾಲುಗಳು ಭಾರತೀಯ-ಗಂಗಾ ಬಯಲು ಪ್ರದೇಶ ಮರುಭೂಮಿಯಾಗದಂತೆ ಪ್ರಮುಖ ಪರಿಸರ ತಡೆಗೋಡೆಯಾಗಿ ನಿಂತಿವೆ.
ಕಳೆದ ತಿಂಗಳು ಸುಪ್ರೀಂ ಕೋರ್ಟ್ ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್ ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂದು ಹೇಳಿದೆ. ಈ ನಿರ್ಧಾರದಿಂದ ಬೆಟ್ಟಗಳಲ್ಲಿನ ಅಕ್ರಮ ಗಣಿಗಾರಿಕೆಗೆ ಮುಕ್ತ ಆಹ್ವಾನ ನೀಡಿದಂತಾಗಿದೆ.
ಇದನ್ನೂ ಓದಿ : ಹರಿಯಾಣವನ್ನು ಕಾಡುತ್ತಿದೆ ಮಾಲಿನ್ಯ; ಆದರೂ, ಯಾಕೆ ಚುನಾವಣಾ ವಿಷಯವಾಗಿಲ್ಲ?
ಅರಾವಳಿಯ ಬೆಟ್ಟಗಳ ಸಾಲುಗಳಲ್ಲಿ ಶೇ 90% ಕ್ಕಿಂತ ಹೆಚ್ಚಿನ ಬೆಟ್ಟಗಳು 100 ಮೀಟರ್‌ಗಿಂತ ಕೆಳಗಿವೆ. ಹೀಗೆ ಸರ್ಕಾರವೇ ಮುಂದೆ ನಿಂತು ಗಣಿಗಾರಿಕೆ ಅವಕಾಶ ಮಾಡಿಕೊಡುತ್ತಿರುವುದು ಉಸಿರಾಡುವ ಗಾಳಿಯನ್ನು, ಕುಡಿಯುವ ನೀರನ್ನು ಉದ್ದೇಶಪೂರ್ವಕವಾಗಿ ಕಿತ್ತುಕೊಳ್ಳಲಾಗುತ್ತಿದೆ.
ಅರಾವಳಿ ಬೆಟ್ಟಗಳ ಪ್ರಾಮುಖ್ಯತೆ ಏನು?
ಸುಮಾರು ಎರಡು ಶತಕೋಟಿ ವರ್ಷಗಳಷ್ಟು ಹಳೆಯದಾದ ಮತ್ತು ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಯಾದ ಅರಾವಳಿಯು ಇಂಡೋ-ಗಂಗಾ ಬಯಲು ಪ್ರದೇಶಗಳ ಮರುಭೂಮಿಗೆ ತಡೆಗೋಡೆಯಂತಿದೆ. ಪೂರ್ವಕ್ಕೆ ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಿಗೆ ಥಾರ್ ಮರುಭೂಮಿ ಹರಡುವುದನ್ನು ತಡೆಯುತ್ತದೆ. ಹವಾಮಾನವನ್ನು ಸ್ಥಿರವಾಗಿಟ್ಟುಕೊಳ್ಳುವ, ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಅಂತರ್ಜಲವನ್ನು ಮರುಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೆಹಲಿಯಿಂದ ಗುಜರಾತ್ ವರೆಗೆ ಸುಮಾರು 650 ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ಅರಾವಳಿ ಬೆಟ್ಟಗಳು, ಮರಳು ಶಿಲೆ, ಸುಣ್ಣದ ಕಲ್ಲು, ಅಮೃತಶಿಲೆ, ಬೆಣಚುಕಲ್ಲು ಮತ್ತು ಸೀಸ ತಾಮ್ರ, ಸತು, ಚಿನ್ನ ಮತ್ತು ಟಂಗ್‌ಸ್ಟನ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ.

ಇಷ್ಟೊಂದು ಸಮೃದ್ಧವಾಗಿರುವ ಬೆಟ್ಟಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಕಲ್ಲು ಮತ್ತು ಮರಳಿಗಾಗಿ ಅರಾವಳಿ ಬೆಟ್ಟಗಳನ್ನು ಅತಿಯಾಗಿ ಗಣಿಗಾರಿಕೆ ಮಾಡಲಾಗಿದೆ. ಇದರಿಂದ ಅಂತರ್ಜಲ ಪುನರ್‌ನಿರ್ಮಾಣ ಮತ್ತು ಗಾಳಿಯ ಮಟ್ಟವನ್ನು ಕುಸಿಯಲು ಕಾರಣವಾಗುತ್ತದೆ.
ಗಣಿಗಾರಿಕೆ ವಿರುದ್ಧ ತೆಗೆದುಕೊಂಡ ಕ್ರಮಗಳೇನು?
1990ರ ದಶಕದಿಂದಲೂ ಪರಿಸರ ಸಚಿವಾಲಯವು ಮಂಜುರಾದ ಯೋಜನೆಗಳಿಗೆ ಮಾತ್ರ ಗಣಿಗಾರಿಕೆ ಮಾಡಲು ಸೀಮಿತ ನಿಯಮಗಳೊಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. 2009 ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಹರಿಯಾಣದ ಫರಿದಾಬಾದ್, ಗುರುಗ್ರಾಮ್ ಮತ್ತು ಮೇವಾತ್ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಿತ್ತು. 2024ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ವ್ಯಾಪ್ತಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳು ಮತ್ತು ಹೊಸ ನವೀಕರಣಗಳನ್ನು ನೀಡುವುದನ್ನು ನಿಷೇಧಿಸಿ, ತಮ್ಮ ಕೇಂದ್ರಿಯ ಅಧಿಕಾರ ಸಮಿತಿಗೆ ಪರಿಸರದ ವಿವರವಾದ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿತ್ತು.
ಅರಾವಳಿ ಪರ್ವತ ಶ್ರೇಣಿಗಳು ಬರುವ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣ ವೈಜ್ಞಾನಿಕ ಮ್ಯಾಪಿಂಗ್ (ನಕ್ಷೆ) ತಯಾರಿಸುವುದು, ಗಣಿಗಾರಿಕೆ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ಸೂಕ್ಷ್ಮ ಪರಿಣಾಮಗಳ ಬಗ್ಗೆಯೂ ಮೌಲ್ಯಮಾಪನ ಮಾಡುವುದು ಮತ್ತು ಸಂರಕ್ಷಿತ ಆವಾಸಸ್ಥನಗಳು, ಜಲಮೂಲಗಳು, ಹುಲಿ ಕಾರಿಡಾರ್‌ಗಳು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದೊಳಗಿನ ಪ್ರದೇಶಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು ಮತ್ತು ಈ ಕೂಡಲೇ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಕೇಂದ್ರಿಯ ಅಧಿಕಾರ ಸಮಿತಿಗೆ ಆದೇಶಿಸಿತ್ತು.

ಈ ಶಿಫಾರಸುಗಳನ್ನು ನ್ಯಾಯಾಲಯವು ನವೆಂಬರ್ 2025 ರ ತನ್ನ ಆದೇಶದಲ್ಲಿ ಕೈಗೆತ್ತಿಕೊಂಡಿತು. ಇದಲ್ಲದೆ, ಜೂನ್ 2025 ರಲ್ಲಿ, ಕೇಂದ್ರವು ಅರಾವಳಿ ‘ಗ್ರೀನ್ ವಾಲ್'(ಹಸಿರು ಗೋಡೆ) ಯೋಜನೆಯನ್ನು ಪ್ರಾರಂಭಿಸಿತು. ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ 29 ಜಿಲ್ಲೆಗಳಲ್ಲಿ ಅರಾವಳಿಗಳ ಸುತ್ತಲಿನ 5 ಕಿ.ಮೀ. ಬಫರ್ ಪ್ರದೇಶದಲ್ಲಿ ಹಸಿರು ಹೊದಿಕೆಯನ್ನು ವಿಸ್ತರಿಸುವುದು ಯೋಜನೆಯ ಉದ್ದೇಶವಾಗಿದೆ. ಈ ಉಪಕ್ರಮವು 2030ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಶಿಥಿಲಗೊಂಡ ಭೂಮಿಯನ್ನು ಪುನಃಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಹೇಳಿದೆ.
ತನಿಖಾ ವರದಿಗಳು ಏನು ಹೇಳುತ್ತವೆ?
ಸುಪ್ರೀಂ ಕೋರ್ಟ್ 2023ರ ತೀರ್ಪಿನಲ್ಲಿ ಅರಾವಳಿಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿ ಆದೇಸ ಹೊರಡಿಸಿದೆ. ಆದರೆ ಸರ್ಕಾರ 2024ರಲ್ಲಿ ಸಲ್ಲಿಸಿದ ವರದಿಗಳನ್ನು ಗಮನಿಸಿದರೆ, ಈ ನಿಷೇಧಿತ ಪ್ರದೇಶಗಳಲ್ಲಿ 110 ಗಣಿಗಳಿದ್ದು, ಅವುಗಳಲ್ಲಿ 68 ಸಕ್ರಿಯವಾಗಿವೆ ಎಂದು ಹೇಳಿದೆ. ಆ ನಂತರ ಈ ವ್ಯಾಪ್ತಿಯಲ್ಲಿ ಎಲ್ಲಾ ಗಣಿಗಾರಿಕೆಯನ್ನು ತಡೆಯಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಆದರೆ NDTV ನಡೆಸಿದ ತನಿಖಾ ವರದಿಯೂ ಬೇರೆಯದೆ ಮಾಹಿತಿಯನ್ನು ನೀಡುತ್ತದೆ. ಈ ವರದಿಯ ಪ್ರಕಾರ ಅರಾವಳಿ ಶ್ರೇಣಿಯ ಭಾಗವಾಗಿರುವ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಅಭಯಾರಣ್ಯದಲ್ಲಿ ಗಣಿಗಾರಿಕೆ ಮುಂದುವರೆದಿರುವುದು ಕಂಡು ಬರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಯಂತ್ರಗಳು ನಿಷ್ಕ್ರಿಯದಂತೆ ಕಂಡರೂ, ರಾತ್ರಿ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ದೃಢಪಡಿಸಿದ್ದಾರೆ ಎಂದು ವರದಿಯಲ್ಲಿ ಬಂದಿದೆ. ಈ ರೀತಿಯ ಅಕ್ರಮ ಗಣಿಗಾರಿಕೆಯೂ ಪರಿಸರವನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ.

ಪರಿಸರದ ಮೇಲಾಗುವ ಪರಿಣಾಮವೇನು?
ಈ ರೀತಿಯ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕೂತಂತೆ ಇದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಸ್ತಾಪಿಸಿದ ಹೊಸ ವ್ಯಾಖ್ಯಾನವು ಪರಿಸರ ತಜ್ಞರನ್ನು ಮತ್ತಷ್ಟು ಗಾಬರಿಗೊಳಿಸಿದೆ. ಸುಪ್ರೀಂ ಕೋರ್ಟ್‌ಗೆ ಸಚಿವಾಲಯವು ಸಲ್ಲಿಸಲಾದ ಕರಡಿನಲ್ಲಿ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರವಿರುವ ಪರ್ವತಗಳನ್ನು ಮಾತ್ರ ಸಂರಕ್ಷಿತ ಅರಾವಳಿ ಶ್ರೇಣಿಯ ಭಾಗವಾಗಿ ವರ್ಗೀಕರಿಸಬೇಕೆಂದು ಸೂಚಿಸಿದೆ. ಇದರಿಂದ ನೇರವಾಗಿ ಬೆಟ್ಟಗಳಲ್ಲಿನ ಅಕ್ರಮ ಗಣಿಗಾರಿಕೆಗೆ ಮುಕ್ತ ಆಹ್ವಾನ ನೀಡಿದಂತಾಗಿದೆ.
ಗಣಿಗಾರಿಕೆ, ಅತಿಕ್ರಮಣ ಮತ್ತು ನಗರೀಕರಣದಿಂದಾಗಿ ಅರಾವಳಿಗಳು ಈಗಾಗಲೇ ಅವನತಿಗೆ ಒಳಗಾಗುತ್ತಿವೆ. “ಗಣಿಗಾರಿಕೆಗೆ ಹೆಚ್ಚಿನ ಬೆಟ್ಟಗಳು ಮತ್ತು ಕಾಡುಗಳನ್ನು ಕಳೆದುಕೊಳ್ಳುವುದರಿಂದ ವನ್ಯಜೀವಿಗಳ ಆವಾಸಸ್ಥಾನ ಕುಗ್ಗುತ್ತದೆ ಮತ್ತು ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತದೆ ಮತ್ತು ಮರುಭೂಮಿ ಹೆಚ್ಚಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಗಾಳಿಯು ಹದಗೆಡುತ್ತದೆ. ನೀರಿನ ಕೊರತೆ ಮತ್ತು ಹವಾಮಾನ ವೈಪರೀತ್ಯಗಳು ಉಲ್ಬಣಗೊಳ್ಳುತ್ತವೆ. ವಾಯುವ್ಯ ಭಾರತದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಆಹಾರ ಮತ್ತು ನೀರಿನ ಸುರಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅರಾವಳಿ ಬೆಟ್ಟಗಳು ಚಿಕ್ಕ ಮತ್ತು ದೊಡ್ಡ ಗಾತ್ರದಲ್ಲಿವೆ. ಈಗ 100 ಮೀ. ಕೆಳಗಿನ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಬಿಟ್ಟರೆ, ಸಾವಿರಾರು ಮರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಗಣಿಗಾರಿಕೆ ಅವಕಾಶ ಕೊಡುವುದರಿಂದ, ಮಳೆ ಕಡೆಮೆಯಾಗುವ ಮತ್ತು ತಾಪಮಾನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ವಾಯುವ್ಯ ಭಾರತದ ಅರಾವಳಿ ಪಟ್ಟಿಯಾದ್ಯಂತ ಶಾಖದ ಒತ್ತಡವನ್ನು ಹೆಚ್ಚಾಗುತ್ತದೆ ಎಂದು ಪರಿಸರ ಶಾಸ್ತ್ರಜ್ಞೆ ಪಿಯಾ ಸೇಥಿ ಹೇಳಿದ್ದಾರೆ.
ವಾಟರ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತರಾಗಿರುವ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಜಲ ಸಂರಕ್ಷಣಾ ತಜ್ಞ ರಾಜೇಂದ್ರ ಸಿಂಗ್ ಅವರು, “ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಅಂತರ್ಜಲ ಮರು ನಿರ್ಮಾಣದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಈಗಾಗಲೇ ಅರಾವಳಿಯ ಭಾಗದಲ್ಲಿ ಬರುವ ಅನೇಕ ಜಿಲ್ಲೆಗಳು ನೀರಿನ ಕೊರತೆಯಿಂದ ಬಳಲುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅರಾವಳಿ ಬೆಟ್ಟಗಳ ಸಾಲುಗಳ ಎತ್ತರವೆಷ್ಟು?
2024ರ ಅಕ್ಟೋಬರ್‌ನಲ್ಲಿ ಭಾರತೀಯ ಅರಣ್ಯ ಸಮೀಕ್ಷೆ ಸ್ವತಃ ಪ್ರಸ್ತಾಪವಿಟ್ಟು, 30 ಮೀಟರ್ ಎತ್ತರವಿರುವ 4.57ರ ಇಳಿಜಾರಿನಲ್ಲಿರುವ ಗುಡ್ಡಗಳನ್ನು ಸಂರಕ್ಷಿಸಬೇಕು ಎಂದು ಹೇಳಕೊಂಡಿತ್ತು. ಭಾರತೀಯ ಅರಣ್ಯ ಸಮೀಕ್ಷೆಯ ಆಂತರಿಕ ಮೌಲ್ಯಮಾಪನದ ಪ್ರಕಾರ ರಾಜಸ್ಥಾನದ 15 ಜಿಲ್ಲೆಗಳಲ್ಲಿ ವ್ಯಾಪಿಸಿರುವ 12,081 ಗುಡ್ಡಗಳು 20 ಮೀಟರ್ ಗಳಷ್ಟು ಎತ್ತರದಲ್ಲಿವೆ. ಇವುಗಳಲ್ಲಿ 1,048 ಗುಡ್ಡಗಳು ಅಂದರೆ, ಶೇ 8.7 ರಷ್ಟು ಮಾತ್ರ 10 ಮೀಟರ್ ಗಿಂತ ಎತ್ತರ ಇವೆ. ಅಂದರೆ ಪರಿಸರ ಸಚಿವಾಲಯ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಅರಾವಳಿಯ ಶೇ 90 ರಷ್ಟು ಬೆಟ್ಟಗಳು 100 ಮೀ.ಗಿಂತ ಕಡಿಮೆ ಇವೆ. ಹೊಸ ನಿಯಮದಲ್ಲಿ ತೋರಿಸಿರುವ ಪ್ರಕಾರ ಅರಾವಳಿ ಬೆಟ್ಟಗಳಲ್ಲಿ 1594 ಬೆಟ್ಟಗಳು 80 ಮೀಟರ್ ಎತ್ತರದಲ್ಲಿವೆ, 2656 ಬೆಟ್ಟಗಳು 60 ಮೀಟರ್ ಎತ್ತರದಲ್ಲಿವೆ ಮತ್ತು 50,009 ಬೆಟ್ಟಗಳು 49 ಮೀಟರ್ ಎತ್ತರದಲ್ಲಿವೆ, ಸುಮಾರು 1,07,494 ಬೆಟ್ಟಗಳು 20 ಮೀಟರ್ ಗಿಂತ ಕಡಿಮೆ ಇವೆ. ಈ ದತ್ತಾಂಶದ ಪ್ರಕಾರ ಲಕ್ಷಾಂತರ ಬೆಟ್ಟಗಳಿರುವ ಸಾಲುಗಳು ಗಣಿಗಾರಿಕೆಗೆ ಆಕ್ರಮಿಸಿಕೊಂಡರೆ, ಭಾರತದ ಶ್ವಾಸಕೋಶದಂತಿರುವ ಅರಾವಳಿ ಪ್ರದೇಶವೇ ಜೀವ ತೆಗೆಯುವ ಸಾಧನವಾಗುತ್ತದೆ.

ಪರಿಸರವಾದಿಗಳ ಆಕ್ರೋಶ?
ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯಬೇಕು ಮತ್ತು ಅರಾವಳಿಯನ್ನು ಉಳಿಸಬೇಕೆಂದು #SaveAravaliHills ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಅನೇಕ ಪರಿಸರವಾದಿಗಳು ಪೀಪಲ್ ಫಾರ್ ಅರಾವಳಿಸ್ ಮತ್ತು ಸರಿಸ್ಕಾ ಉಳಿಸಿ ಅಭಿಯಾನವು ಸುಪ್ರೀಂ ಕೋರ್ಟ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ನವೆಂಬರ್ 20 ರಂದು ಅರಾವಳಿಯಲ್ಲಿ ಗಣಿಗಾರಿಕೆಗೆ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಾದ್ಯಂತ ಅರಾವಲ್ಲಿಗಳನ್ನು ‘ನಿರ್ಣಾಯಕ ಪರಿಸರ ವಲಯ’ ಎಂದು ಘೋಷಿಸಲು ಅದು ಸರ್ಕಾರವನ್ನು ಆಗ್ರಹಿಸಲಾಗಿದೆ. ಅರಾವಳಿಗಳಲ್ಲಿನ ಮಾನವ ವಾಸಸ್ಥಳ, ಕೃಷಿ ಪ್ರದೇಶಗಳು, ಜಲಮೂಲಗಳು, ವನ್ಯಜೀವಿ ಸೂಕ್ಷ್ಮ ವಲಯಗಳ ಬಳಿ ಇರುವ ಎಲ್ಲಾ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ.





