ದಲಿತರ ಜೀವಕ್ಕೆ ಕಿಂಚಿತ್ತೂ ಬೆಲೆ ಇರದಂತೆ ವರ್ತಿಸುವ ಈ ನೆಲದ ಬಲಿತ ಸಮುದಾಯಗಳ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲದಂತಾಗಿದೆ ಹೋಳಿ ಹಬ್ಬದ ಶುಭಾಷಯ ಕೋರಿದ ದಲಿತ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಉತ್ತರ ಪ್ರದೇಶದ ಲಕ್ನೋವಿನ ದುಗ್ಗಬ ಗ್ರಾಮದ ಸೂರಜ್ ಗೌತಮ್ ಕೊಲೆಯಾದ ಯುವಕ.
ಮಾರ್ಚ್ 4, ಊರಿಗೆ ಊರೇ ಹೋಳಿ ಸಂಭ್ರಮದಲ್ಲಿದ್ದಾಗ ಮಧ್ಯಪ್ರದೇಶದ ಲಕ್ನೋ ಜಿಲ್ಲೆಯ ಬೆಗರಿಯಾ ಗ್ರಾಮದಲ್ಲಿ ದಲಿತ ಯುವಕನ ರಕ್ತದ ಓಕುಳಿ ಹರಿದಿದೆ. ಸ್ಥಳೀಯರ ಹೇಳಿಕೆಯ ಪ್ರಕಾರ ಕೊಲೆಯಾದ ಗೌತಮ್ ತನ್ನ ಊರಿನ ನಿವಾಸಿ ಮನೋರ್ ತಿವಾರಿಗೆ ಹ್ಯಾಪಿ ಹೋಳಿ ಎಂದು ಶುಭ ಕೋರಿದ್ದಾನೆ. ಇದರಿಂದ ರೊಚ್ಚಿಗೆದ್ದ ತಿವಾರಿ ಸಂತ್ರಸ್ಥ ಯುವಕನೊಡನೆ ಜಗಳಕ್ಕಿಳಿದಿದ್ದಾನೆ. ತಿವಾರಿಯ ಸಹೋದರಿ ಶಿವಾನಿ ತಾಯಿ ರಂಜನ ಸಹ ಗೌತಮ್‌ನೊಡನೆ ಸಂಘರ್ಷಕ್ಕಿಳಿದು ಅವಾಚ್ಯ ಶಬ್ಧಗಳಿಂದ ಯುವಕನನ್ನು ನಿಂದಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ ಶಿವಾನಿ ತಾನು ಹೊದ್ದುಕೊಂಡಿದ್ದ ಶಾಲ್ ಒಳಗಿದ್ದ ಚಾಕು ಹೊರಗೆಳೆದು ಮೂರುಬಾರಿ ಯುವಕನನ್ನು ತಿವಿದಿದ್ದಾಳೆ. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿ ತೀವ್ರ ಗಾಯಗಳಿಂದ ನರಳುತ್ತಿದ್ದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.
ಗೌತಮ್ ಅಗಲಿಕೆಯಿಂದ ನೊಂದ ಆತನ ಕುಟುಂಬಸ್ಥರ ಆಕ್ರಂದನ ಕರುಳು ಹಿಂಡುವಂತಿದೆ. ಪೋಷಕರು ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಅವಲತ್ತುಕೊಂಡ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದು, ಹೆತ್ತವರ ಅಳಲು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಕಳೆದ ಹತ್ತು ವರ್ಷದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಹೆಚ್ಚಳ:
2012ರಲ್ಲಿ ಸುಮಾರು 651 ದಲಿತರ ಕೊಲೆ ಪ್ರಕರಣಗಳು ದಾಖಲಾಗಿದ್ದರೆ, 2022ರ ವೇಳೆಗೆ ಈ ಸಂಖ್ಯೆ 975ಕ್ಕೆ ಏರಿದೆ. ಅಂದರೆ ದಶಕದಲ್ಲಿ ಸುಮಾರು 50% ಹೆಚ್ಚಳ ಕಂಡುಬಂದಿದೆ. 2023ರ ಅಂಕಿ ಅಂಶಗಳ ಪ್ರಕಾರ 57,789 ಪರಿಶಿಷ್ಟ ಜಾತಿಯ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಂಡ ದಲಿತ ಯುವಕರ ಪಟ್ಟಿಯಲ್ಲಿ ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶ ರಾಜ್ಯಗಳು ಮೊದಲ ಸ್ಥಾನದಲ್ಲಿ ನಿಂತಿವೆ. 2019ರಲ್ಲಿ 15 ವರ್ಷದ ದಲಿತ ಹುಡುಗಿಯೊಬ್ಬಳು ಭಾರತದ ಆಡಳಿತ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಪ್ರಭಾವಿ ಭೂ ಮಾಲೀಕರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದಳು ದಲಿತರು ಮತ್ತು ಬುಡಕಟ್ಟು ಜನಾಂಗದವರು ನಿರಂತರ ಶೋಷಣೆಗೆ ಒಳಗಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ, ಹಾಗೂ ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ 5ನೇ ಸ್ಥಾನದಲ್ಲಿರುವ ಈ ರಾಜ್ಯದಲ್ಲಿ ಪೋಲಿಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡರು. ಇದಾದ ಎರಡು ವರ್ಷಗಳ ನಂತರ ಆಕೆಯ ಸಹೋದರನನ್ನು 2023 ರಲ್ಲಿ ಹೊಡೆದು ಕೊಂದ ದುಷ್ಕರ್ಮಿಗಳು 2024ರಲ್ಲಿ ಆಕೆಯ ಚಿಕ್ಕಪ್ಪನನ್ನು ಹತ್ಯೆ ಮಾಡಿದ ಮರುದಿನವೇ ಅಂಜನಾ ಅಗರ್ವಾಲ್ ಎಂಬ ಈ ಹುಡುಗಿ ನಿಗೂಢವಾಗಿ ಸಾವನ್ನಪ್ಪಿದ್ದಳು. ನಾಲ್ಕು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದ್ದು ಇದೆಲ್ಲವೂ ಮೇಲ್ಜಾತಿಯ ಮನೆ ಮಾಲೀಕರು ನಡೆಸಿದ್ದಾರೆಂಬ ಹಲ್ಲೆಯ ಆರೋಪಕ್ಕೆ ಸಂಬಧಿಸಿದ ಪ್ರಕರಣಗಳು.
ರಾಜಸ್ಥಾನದಲ್ಲಿ 9 ವರ್ಷದ ಬಾಲಕನನ್ನು ನೀರಿನ ಮಡಿಕೆ ಮುಟ್ಟಿದ್ದಕ್ಕೆ ಅಮಾನುಷವಾಗಿ ಥಳಿಸಿ ಹಲ್ಲೆ ಮಾಡಲಾಯಿತು ಶಾಲೆಯ ಶಿಕ್ಷಕನೆ ಇಂತಹ ಅಮಾನವೀಯ ಕೃತ್ಯ ಎಸಗಿದ್ದ. ತೀವ್ರ ಹಲ್ಲೆಗೊಳಗಾದ ಬಾಲಕ ಇಂದ್ರ ಅಗರ್ವಾಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ. 2018ರಲ್ಲಿ ತಮಿಳುನಾಡಿನ ಶಿವಗಂಗ ಜಿಲ್ಲೆಯಲ್ಲಿ ಮೇಲ್ಜಾತಿ ತೇವರ್ ಸಮುದಾಯದವರ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತ ಕಾರಣಕ್ಕೆ ಇಬ್ಬರು ದಲಿತ ಸಮುದಾಯದ ಇಬ್ಬರನ್ನು ಕೊಲೆ ಮಾಡಲಾಯಿತು.
ಗುಜಾರಾತಿನಲ್ಲಿ ಕೆಳಜಾತಿಯ ರೈತ ಯುವಕ ಕುದುರೆ ಹೊಂದಿದ್ದ, ಮತ್ತು ಕುದುರೆ ಸವಾರಿ ಮಾಡಿದನೆಂಬ ಕಾರಣಕ್ಕೆ ಅವನನ್ನು ಮನಬಂದಂತೆ ಥಳಿಸಿ ಕೊಂದರು . ಸಂತ್ರಸ್ಥ ತಂದೆ ಪೋಲೀಸರ ವಿಚಾರಣೆಯ ವೇಳೆ ದಲಿತರು ಕುದುರೆ ಏರುವಂತಿಲ್ಲ , ಅದು ಮೇಲ್ಜಾತಿ ಮಾತ್ರ ಹೊಂದಿರುವ ಸವಲತ್ತು ಎಂದು ಮಗನಿಗೆ ಎಚ್ಚರಿಕೆ ನೀಡಿದ್ದೆ ಎಂದು ಅಳಲು ತೋಡಿಕೊಂಡಿದ್ದರು . ಭಾರತದ ಉತ್ತರದ ಕೆಲ ರಾಜ್ಯಗಳಲ್ಲಿ ದಲಿತರು ಕುದುರೆ ಸಾಕಲು, ಕುದುರೆ ಸವಾರಿ ಮಾಡಲು ಜಾತಿಯ ಅಳತೆಗೋಲಿದೆ . ಬಲಿತವರ ಶಕ್ತಿಯ, ಸವಲತ್ತಿನ ಪ್ರದರ್ಶನವಾಗಿ ಕುದುರೆಯನ್ನು ಬಳಸಿಕೊಳ್ಳುವ ಇಂತಹ ಪ್ರದೇಶಗಳಲ್ಲಿ ಪ್ರದೀಪ್ ರಾಥೋಡ್ ಕುದುರೆಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಯುವಕ. ʼನನ್ನ ಮಗನಿಗೆ ಕುದುರೆಗಳ ಮೇಲಿದ್ದ ಪ್ರೀತಿಯೇ ಅವನ ಸಾವಿಗೆ ಕಾರಣವಾಯಿತುʼ ಇದು ಭುಜದತ್ತೆರ ಮಗನನ್ನು ಕಳೆದುಕೊಂಡಎಂಬ ನೊಂದ ಅಸಹಾಯಕ ತಂದೆಯ ಮಾತು
2018 ರಲ್ಲಿ ತಮಿಳುನಾಡಿನ ಶಿವಗಂಗ ಜಿಲ್ಲೆಯ ಆರ್ಮುಗಂ ಮತ್ತು ಶಣ್ಮುಗನಾಥನ್ ದೇವಸ್ಥಾನದ ಮುಂದೆ ತಮ್ಮ ಪಾಡಿಗೆ ಕುಳಿತು ಮಾತನಾಡುತ್ತಿದ್ದರು. ಅದೇ ದೇವಸ್ಥಾನದ ಮುಂದೆ ಹಾದುಹೋದ ಮೂವರು ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹೀನಾಯವಾಗಿ ಥಳಿಸಿ ನಿರುಪದ್ರವಿ ಅಮಾಯಕರ ಜೀವ ತೆಗೆದರು.
ದಲಿತ ಹದಿಹರೆಯದ ಬಾಲಕನಿಗೆ ಮೂತ್ರವನ್ನು ಕುಡಿಸಿದ ಅಮಾನವೀಯ ಘಟನೆ 2024ರ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶದ ಶ್ರವಸ್ತಿ ಜಿಲ್ಲೆಯಲ್ಲಿ ವರದಿಯಾಗಿತ್ತು, 15 ವರ್ಷದ ಅಪ್ರಾಪ್ತ ಬಾಲಕ ಸೋಷಿಯಲ್ ಈವೆಂಟ್‌ಗಳಲ್ಲಿ ಧ್ವನಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ. ರಾತ್ರಿ ಎಂದಿನಂತೆ ತನ್ನ ಕೆಲಸ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಅವನನ್ನು ಅಡ್ಡಗಟ್ಟಿದ ಮೇಲ್ಜಾತಿಯ ದಿಲೀಪ್, ಸತ್ಯಂ, ಕಿಶನ್ ಎಂಬ ಮೂವರು ಯುವಕರು ಮಧ್ಯದ ಬಾಟಲಿಯಲ್ಲಿ ಮೂತ್ರ ಹುಯ್ದು ಅದನ್ನು ಬಲವಂತವಾಗಿ ದಲಿತ ಬಾಲಕನಿಗೆ ಕುಡಿಸಿದರು.
ಪರಿಶಿಷ್ಟ ಜಾತಿಗೆ ಸೇರಿದ ಯುವಕ ಮೇಘವಾಲ್ ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಬದಲಿಸಿಕೊಂಡ ಜೀವನಶೈಲಿ ಹಾಗೂ ಮೀಸೆ ಬಿಟ್ಟ ರೀತಿಯನ್ನು ಸಹಿಸದ ಜಾತಿವಾದಿಗಳಾದ ರಮೇಶ್ ಸಿಂಗ್ ರಾಜ್ ಪುರೋಹಿತ್ ಮತ್ತು ಸೂರಜ್ ಸಿಂಗ್ ರಾಜ್ ಪುರೋಹಿತ್ ದ್ವಿಚಕ್ರ ವಾಹನದಲ್ಲಿ 800 ಕಿ.ಮೀ ದೂರ ಹಿಂಬಾಲಿಸಿ ಮೇಘವಾಲ್ ಹತ್ಯೆ ಮಾಡಿದರು. ರಾಜಸ್ತಾನದಲ್ಲಿ ಮೀಸೆಯನ್ನು ಜಾತಿ ಗರಿಮೆಯ, ಬಲ್ಲಿದನೆಂಬ ಹೆಮ್ಮೆಯ ಪ್ರತೀಕವಾಗಿ ನೋಡಲಾಗುತ್ತದೆ. ಇಂತಹ ರೋಗಗ್ರಸ್ಥ ಮನೋಭಾವದವರಿಗೆ ದಲಿತರು ಉತ್ತಮ ಜೀವನ ಶೈಲಿ ಅನುಸರಿಸಿದರೆ ಜೀವಹರಣ ಮಾಡುವಷ್ಟು ಕ್ರೋಧ ಹುಟ್ಟುವುದು ಈ ನೆಲದ ದುರಂತ.
ಜಾತಿ ನಂಜಿಗೆ ಪ್ರೀತಿಯೇ ಮದ್ದು; ದಲಿತ ಯುವಕ ಗರ್ಬಾ ವೀಕ್ಷಿಸಿದರೆ ಕೊಲ್ಲುತ್ತಾರೆ, ದಲಿತನೊಬ್ಬ ಮೀಸೆ ಬಿಟ್ಟರೆ ಇವರಿಂದ ಸಹಿಸಲಾಗದು, ದಲಿತ ಮದುಮಗ ಕುದುರೆಯೇರಿ ದಿಬ್ಬಣ ಹೊರಟರೆ ಇವರ ರಕ್ತ ಕುದಿಯುತ್ತದೆ, ದಲಿತ ಯುವಕ ಅಂಬೇಡ್ಕರನ ಗೀತೆ ಮೊಬೈಲ್ ಟೋನ್ ಇಟ್ಟದಕ್ಕೆ ಕಿರಿಕಿರಿಗೊಂಡು ಅವನನ್ನು ಕೊಂದು ಹಾಕುತ್ತಾರೆ, ದಲಿತ ಮಗು ತಾನು ಕಲಿಯಲು ಬಂದ ಶಾಲೆಯ ನೀರಿನ ಮಡಿಕೆಯನ್ನು ಮುಟ್ಟಿದನೆಂದು ಜಾತ್ಯತೀತತೆ, ಸಮಾನತೆಯ ಪಾಠ ಹೇಳಿಕೊಡಬೇಕಿದ್ದ ಶಿಕ್ಷಕನಿಂದಲೇ ಹಲ್ಲೆಗೊಳಗಾಗುತ್ತಾನೆ. ಕೆದಕುತ್ತಾ ಹೋದರೆ ಲೆಕ್ಕವಿರದಷ್ಟು ಇಂತಹ ಹೀನಾಯ ಪ್ರಕರಣಗಳು ತೆರದುಕೊಳ್ಳುತ್ತವೆ.
ಇದು ದೂರದ ಯುಪಿ, ಬಿಹಾರ, ಮಧ್ಯಪ್ರದೇಶದಲ್ಲಷ್ಟೇ ನಡೆದ ಘಟನೆಗಳಾದರೆ ದಕ್ಷಿಣದ ರಾಜ್ಯಗಳು ಇದರಿಂದ ಹೊರತಾಗಿಲ್ಲ. ಮೊನ್ನೆಯಷ್ಟೇ ತಮಿಳುನಾಡಿನ ಶಿವಗಂಗ ಜಿಲ್ಲೆಯ ದಲಿತ ಎಂಜಿನಿಯರಿಂಗ್ ವಿದ್ಯಾರ್ಥಿ ಆಕಾಶ್ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಎರಡು ತಿಂಗಳಲ್ಲಿ ನಾಲ್ವರು ದಲಿತರು ಪೋಲಿಸ್ ದೌರ್ಜನ್ಯದಿಂದ ಜೀವ ಕಳೆದುಕೊಂಡಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದ ಗಾದೆಗೆ ಸದೃಷ್ಯ ನಿದರ್ಶನವಾಗಿದೆ. ಮಹಾ ಮಾನವತವಾದಿಗಳಾದ ಬುದ್ಧ, ಬಸವ, ಅಂಬೇಡ್ಕರರ ಚಿಂತನೆಗಳು ಜನಿಸಿದ ಈ ನೆಲದಲ್ಲಿ ಇಂತಹ ಕೌರ್ಯ ಅಟ್ಟಹಾಸ ಮೆರೆಯುತ್ತಿರುವುದು ನಮ್ಮ ದೌರ್ಭಾಗ್ಯವೋ ಅಥವಾ ಅಸಹಾಯಕತೆಯೋ ನಿರ್ಣಯಿಸಲು ಅಸಾಧ್ಯ. ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಪಂಪನ ತತ್ವ ನಮ್ಮ ಎದೆಯ ದನಿಯಾಗಬೇಕು. ಪ್ರೀತಿ, ಕರುಣೆ, ಮನುಷ್ಯತ್ವವೇ ನಮ್ಮ ಮೌಲ್ಯಗಳಾದಾಗ ಮಾತ್ರ ಜಗತ್ತು ಜೀವಪರವಾಗಲು ಸಾಧ್ಯ.





