ಸುಧಾಕರನ್ 63 ವರ್ಷಗಳ ಕಾಲ ಸಿಪಿಐಎಂಗಾಗಿ ದುಡಿದವರು. ಆದರೆ ಈಗ ತಮ್ಮನ್ನು ಜಿಲ್ಲಾ ಮತ್ತು ರಾಜ್ಯ ನಾಯಕತ್ವವು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿದೆ, ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನಿಸದೆ ದೂರ ಇಡುತ್ತಿದೆ ಎಂಬುದು ಸುಧಾಕರನ್ ಆರೋಪ. 2026ರ ಪಕ್ಷದ ಸದಸ್ಯತ್ವ ನವೀಕರಣದಿಂದ ದೂರ ಉಳಿಯುವ ಸೂಚನೆಯನ್ನೂ ನೀಡಿದ್ದಾರೆ. ಚುನಾವಣೆಗೂ ಮುನ್ನ ನಡೆದಿರುವ ಈ ಬೆಳವಣಿಗೆ ಸಿಪಿಐಎಂ ಅನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಇನ್ನೆರಡು ತಿಂಗಳಲ್ಲಿ ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕೇರಳದ ರಾಜಕೀಯ ಇತಿಹಾಸದಲ್ಲೇ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಎಲ್‌ಡಿಎಫ್ ಇದೀಗ ಮೂರನೇ ಬಾರಿಗೆ ಗದ್ದುಗೆ ತಮ್ಮಲ್ಲೇ ಉಳಿಸಿಕೊಳ್ಳಲು ಸಿದ್ಧವಾಗುತ್ತಿದೆ. ಸಿಪಿಐಎಂ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಯಲ್ಲಿ ಹಿರಿಯ ನಾಯಕರುಗಳ ಹೆಸರು ಮರೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಪಕ್ಷದೊಳಗೆ ಅಸಮಾಧಾನ ಶುರುವಾಗಿದೆ. ಹಿರಿಯ ನಾಯಕರು ಬಹಿರಂಗವಾಗಿ ಬಂಡಾಯ ಏಳಲು ಆರಂಭಿಸಿದ್ದಾರೆ.
ಸಿಪಿಐಎಂ ಹಿರಿಯ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಚುನಾವಣೆ ಹೊಸ್ತಿಲಲ್ಲಿ ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಕಾರಣವಾಗಿದೆ. ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ನಾಯಕರುಗಳು ಈಗ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಮಾಜಿ ಸಚಿವ ಮತ್ತು ಹಿರಿಯ ನಾಯಕ ಜಿ. ಸುಧಾಕರನ್, ಪಕ್ಷದ ನಾಯಕತ್ವದ ವಿರುದ್ಧವಾಗಿ ತೀವ್ರ ಆಕ್ರೋಶ ಹೊರಹಾಕಿರುವುದು ಸದ್ಯ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಸುಧಾಕರನ್ 63 ವರ್ಷಗಳ ಕಾಲ ಸಿಪಿಐಎಂಗಾಗಿ ದುಡಿದವರು. ಆದರೆ ಈಗ ತಮ್ಮನ್ನು ಜಿಲ್ಲಾ ಮತ್ತು ರಾಜ್ಯ ನಾಯಕತ್ವವು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿದೆ, ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನಿಸದೆ ದೂರ ಇಡುತ್ತಿದೆ ಎಂಬುದು ಸುಧಾಕರನ್ ಅವರ ಆರೋಪ. ಪಕ್ಷದ ನಾಯಕರುಗಳ ಜತೆಗಿನ ತನ್ನ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿರುವುದು ಮಾತ್ರವಲ್ಲದೆ 2026ರ ಪಕ್ಷದ ಸದಸ್ಯತ್ವ ನವೀಕರಣದಿಂದ ದೂರ ಉಳಿಯುವ ಸೂಚನೆಯನ್ನೂ ನೀಡಿದ್ದಾರೆ. ಚುನಾವಣೆಗೂ ಮುನ್ನ ನಡೆದಿರುವ ಈ ಬೆಳವಣಿಗೆ ಸಿಪಿಐಎಂ ಅನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಇನ್ನೊಂದೆಡೆ ಪಾಲಕ್ಕಾಡ್ ಜಿಲ್ಲೆಯ ಶೊರ್ನೂರ್ ಕ್ಷೇತ್ರದ ಮಾಜಿ ಶಾಸಕರಾದ ಪಿ.ಕೆ. ಸಸಿ ಪಾಲಕ್ಕಾಡ್‌ನಲ್ಲಿ ಪಕ್ಷದ ವಿರುದ್ಧ ಬಂಡಾಯ ನಾಯಕರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ 600ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ಸಸಿ ಅವರು ಸಿಪಿಐ(ಎಂ) ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಇ.ಎನ್. ಸುರೇಶ್ ಬಾಬು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಜಿಲ್ಲಾ ನಾಯಕತ್ವವು ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ಜಿಲ್ಲಾ ಕಾರ್ಯದರ್ಶಿಯು ಸ್ಪಿರಿಟ್ ಮಾಫಿಯಾವನ್ನು ಬೆಂಬಲಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಸದ್ಯ ಪಕ್ಷ ವಿರೋಧಿ ಚಟುವಟಿಕೆಗಳ ಕಾರಣ ನೀಡಿ ಸಸಿ ಅವರನ್ನು ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ.
ಇತ್ತೀಚೆಗಷ್ಟೇ ಪಿಕೆ ಸಸಿ ಅವರು ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KTDC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಸಿ ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಪಾಲಂ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.
ಮುಖ್ಯವಾಗಿ ಸಿಪಿಐಎಂ ಜಾರಿಗೆ ತಂದಿರುವ 75 ವರ್ಷಗಳ ವಯೋಮಿತಿಯ ನಿಯಮವೂ ಕೊಂಚ ಅಸಮಾಧಾನ ಸೃಷ್ಟಿಸಿದೆ. ಯುವ ನಾಯಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಿಪಿಐಎಂನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಕೇಂದ್ರ ಸಮಿತಿ ಮತ್ತು ಪಾಲಿಟ್ ಬ್ಯೂರೋ (Polit Bureau) ಸದಸ್ಯರಿಗೆ 75 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ಈ ನಿಯಮದಿಂದಾಗಿ ಅನಿವಾರ್ಯವಾಗಿ ಅನೇಕ ಅನುಭವಿ ನಾಯಕರು ಸಮಿತಿಗಳಿಂದ ಹೊರಬೀಳುವಂತಾಗಿದೆ. ಆದರೆ, ಈ ನಿಯಮವನ್ನು ಕೇವಲ ಕೆಲವು ನಾಯಕರನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ಎಂಬ ಟೀಕೆಗಳೂ ಇವೆ.
ಈ ಹಿಂದೆ ವಯೋಮಿತಿ 80 ಆಗಿತ್ತು. ಆದರೆ ಅದನ್ನು 2022ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ 23ನೇ ಪಾರ್ಟಿ ಕಾಂಗ್ರೆಸ್‌ನಲ್ಲಿ 75ಕ್ಕೆ ಇಳಿಸಲಾಗಿದೆ. ರಾಜ್ಯ ಸಮಿತಿಗಳೂ ಈ ನಿಯಮವನ್ನು ಪಾಲಿಸುವ, ವಯೋಮಿತಿ ನಿಗದಿಪಡಿಸುವ ಅಧಿಕಾರವನ್ನು ಆಯಾ ರಾಜ್ಯ ಘಟಕಗಳಿಗೆ ನೀಡಲಾಗಿದೆ. ಅದರಂತೆ 2025ರ ಏಪ್ರಿಲ್‌ನಲ್ಲಿ ನಡೆದ 24ನೇ ಪಾರ್ಟಿ ಕಾಂಗ್ರೆಸ್‌ನಲ್ಲಿ ಪ್ರಕಾಶ್ ಕಾರಟ್, ಬೃಂದಾ ಕಾರಟ್ ಮತ್ತು ಮಾಣಿಕ್ ಸರ್ಕಾರ್ ಸೇರಿದಂತೆ ಹಲವು ಹಿರಿಯ ನಾಯಕರು ಪಾಲಿಟ್ ಬ್ಯೂರೋದಿಂದ ಕೆಳಗಿಳಿದಿದ್ದಾರೆ. ಆದರೆ ಯುವ ನಾಯಕರಿಗೆ ಮಣೆ ಹಾಕುವ ಭರದಲ್ಲಿ ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಎದ್ದು ಕಾಣುತ್ತಿದೆ.
ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅಥವಾ ನಾಯಕತ್ವದ ಕೊರತೆ ವೇಳೆ ಅನಿವಾರ್ಯವಿದ್ದಾಗ ಪಕ್ಷದ ಹಿರಿಯ ನಾಯಕರಿಗೆ ಈ ನಿಯಮದಿಂದ ವಿನಾಯಿತಿ ನೀಡುವ ಅವಕಾಶವೂ ಇದೆ. 80 ವರ್ಷವಾಗಿರುವ ಕಾರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವಯೋಮಿತಿ ಸಡಿಲಿಕೆ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆದಿವೆ. ಆದರೆ ಇತರೆ ಹಿರಿಯ ನಾಯಕರಿಗೆ ಈ ವಯೋಮಿತಿ ಸಡಿಲಿಕೆಯ ಅವಕಾಶ ಸಿಕ್ಕದಿರುವುದು ಕೇರಳದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ. ಅದರಲ್ಲೂ ಕೇರಳದಲ್ಲಿ ವ್ಯಕ್ತಿ ಆರಾಧನೆಯಡಿ ಸಿಪಿಐಎಂ ಸಿಲುಕಿದೆ ಎಂಬ ಆರೋಪಗಳು ಕೇಳಿಬಂದಿದೆ. ಸಿಎಂ ಪಿಣರಾಯಿ ವಿಜಯನ್ ಅವರ ಸುತ್ತ ಅಧಿಕಾರ ಕೇಂದ್ರೀಕೃತವಾಗುತ್ತಿದೆ, ಇದರಿಂದಾಗಿ ಪಕ್ಷದ ಸಂಘಟನಾ ಚೌಕಟ್ಟು ಸಡಿಲಗೊಳ್ಳುತ್ತಿದೆ ಎಂಬುದು ಹಿರಿಯ ನಾಯಕರುಗಳ ಆರೋಪ.
ಇದನ್ನು ಓದಿದ್ದೀರಾ? ಕೇರಳದ ಸುನ್ನಿ ಸಂಘಟನೆ ‘ಸಮಸ್ತ’ ಚುನಾವಣಾ ಸಾಧನ: ಬಣಗಳ ಮುಷ್ಠಿಯಲ್ಲಿ ಅಧಿಕಾರ ಭವಿಷ್ಯ
ಈ ಎಲ್ಲಾ ಅಸಮಾಧಾನಗಳ ನಡುವೆಯೇ ಕೇರಳ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಿಂದ ಹಿರಿಯ ನಾಯಕರುಗಳ ಹೆಸರು ಮಾಯವಾಗಿರುವುದು ಕಾರ್ಯಕರ್ತರಲ್ಲಿ ಕೊಂಚ ಕಸಿವಿಸಿಗೆ ಕಾರಣವಾಗಿದೆ. ಹೊಸ ನಾಯಕತ್ವಕ್ಕಾಗಿ ಈ ವಯೋಮಿತಿ ನಿಯಮ ಅಗತ್ಯ ಎನ್ನುವವರು, ವಿಜಯನ್ ಬಳಿ ಬೊಟ್ಟು ಮಾಡಿ ತೋರಿಸಿದವರಿಗೆ ಉತ್ತರಿಸಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ. ಆದರೆ ಸಿಪಿಐಎಂ ತಂತ್ರವೇ ಬೇರೆಯದ್ದು. ಅಭ್ಯರ್ಥಿಗಳ ಪಟ್ಟಿಯಲ್ಲಿ ಯುವ ನಾಯಕರು, ಮಹಿಳೆಯರು ಮತ್ತು ವೃತ್ತಿಪರರಿಗೆ ಹೆಚ್ಚಿನ ಸ್ಥಾನ ನೀಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ತಡೆಯುವುದು ಸಿಪಿಐಎಂ ತಂತ್ರ.
ಇವೆಲ್ಲವೂ ತಳಮಟ್ಟದ ಸಂಘಟನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ದಶಕಗಳಿಂದ ಈ ಹಿರಿಯ ನಾಯಕರುಗಳೊಂದಿಗೆಯೇ ಗುರುತಿಸಿಕೊಂಡಿರುವ ಹಳೆಯ ಕಾರ್ಯಕರ್ತರು ಚುನಾವಣಾ ಪ್ರಚಾರದಿಂದ ದೂರ ಉಳಿದರೆ, ಎಲ್‌ಡಿಎಫ್ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಅದರಲ್ಲೂ ವಿಶೇಷವಾಗಿ ಕ್ರೈಸ್ತ ಸಮುದಾಯದಂತಹ ನಿರ್ಣಾಯಕ ಮತದಾರರನ್ನು ಸೆಳೆಯಲು ಹಿರಿಯ ನಾಯಕರ ಪ್ರಭಾವ ಅಗತ್ಯ.
ಏನೇ ಆದರೂ ಸಿಪಿಐಎಂ ಮೇಲೆ ಹಲವು ವರುಷಗಳಿಂದ ಇರುವ ಒಂದೇ ಆರೋಪ ಹೊಸಬರಿಗೆ ಅವಕಾಶ ನೀಡದು ಎಂಬುದು. ಇದೀಗ ಈ ಆರೋಪವನ್ನು ಪರಿಗಣಿಸಿರುವ ಸಿಪಿಐಎಂ ಪಕ್ಷವನ್ನು ನವೀಕರಿಸುವ ಹಾದಿಯಲ್ಲಿ ಸಾಗುತ್ತಿದೆ. ಸ್ಥಳೀಯ ಮಟ್ಟದಿಂದಲೂ ಯುವಜನರಿಗೆ ನಾಯಕತ್ವವನ್ನು ನೀಡುತ್ತಿದೆ. ಇದೀಗ ಕೇರಳದಂತಹ ರಾಜ್ಯದಲ್ಲಿ ಅನುಭವಿ ಹಿರಿಯರನ್ನು ಸಂಪೂರ್ಣವಾಗಿ ಕೈಬಿಡುವುದು ಸಿಪಿಐಎಂಗೆ ವರದಾನವಾಗಲಿದೆಯೇ ಅಥವಾ ಮುಳುವಾಗಲಿದೆಯೇ ಎಂಬುದು 2026ರ ಚುನಾವಣಾ ಫಲಿತಾಂಶವೇ ನಿರ್ಧರಿಸಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




