2030ರ ವೇಳೆಗೆ 25–44 ವರ್ಷದ ಮಹಿಳೆಯರಲ್ಲಿ 45% ಮಂದಿ ಸ್ವಯಂ ಆಯ್ಕೆಯಂತೆ ಮದುವೆಯಾಗದೆ, ಮಕ್ಕಳಿಲ್ಲದೆ ಬದುಕುವುದನ್ನು ಆಯ್ಕೆ ಮಾಡಲಿದ್ದಾರೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಅನೇಕ ದೇಶಗಳಲ್ಲಿ ಮಹಿಳೆಯರು ಸಾಂಪ್ರದಾಯಿಕ ಗೃಹಜೀವನದ ಕಲ್ಪನೆಯನ್ನು ಬದಿಗೊತ್ತುತ್ತಿದ್ದಾರೆ.
ಜಗತ್ತಿನಲ್ಲಿ ತನ್ನ ಸಂಸ್ಕೃತಿ, ಆಚಾರಗಳಿಂದಲೇ ಹೆಚ್ಚಾಗಿ ಗುರುತಿಸಿಕೊಳ್ಳುವ ದೇಶ ಭಾರತ. ಈ ದೇಶದಲ್ಲಿ ಮದುವೆ ಎಂಬ ಪರಿಕಲ್ಪನೆಗೆ ವೈಶಿಷ್ಟ್ಯತೆಯೊಂದಿಗೆ ಕೆಲ ಚೌಕಟ್ಟುಗಳೂ ಇವೆ. ಮದುವೆಯಾಗುವುದೊಂದು ಜೀವನದ ನಿಶ್ಚಿತ ಗುರಿ ಎಂದು ಭಾವಿಸುತ್ತಿದ್ದ, ಅದನ್ನು ಪಾಲಿಸುತ್ತಿದ್ದ ಕಾಲವೊಂದಿತ್ತು. ಅದೀಗ ಬದಲಾಗಿ ಮದುವೆ ವೈಯಕ್ತಿಕ ಆಯ್ಕೆಯಾಗಿದೆ. ಇತ್ತೀಚಿನ ಕೆಲ ಶಾಕಿಂಕ್ ವರದಿಗಳು ಮದುವೆ ಕುರಿತ ಮಹಿಳೆಯರ ನಿರ್ಧಾರಗಳಲ್ಲಾದ ಬದಲಾವಣೆಯನ್ನು ಬಿಚ್ಚಿಡುತ್ತವೆ. ವಿಶೇಷವಾಗಿ ಮಹಿಳೆಯರು ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಸ್ವಾತಂತ್ರ್ಯ ಸೇರಿದಂತೆ ತಮ್ಮದೇ ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕುಗಳನ್ನು ಖಚಿತಪಡಿಸಿಕೊಂಡಾಗಿನಿಂದ ಮದುವೆಯನ್ನು ವಿಳಂಬಿಸುತ್ತಿದ್ದಾರೆ. ಕೆಲವರು ಸಂಪೂರ್ಣವಾಗಿ ನಿರಾಕರಿಸುತ್ತಿದ್ದಾರೆ. ನಗರದ ಕಾರ್ಪೊರೇಟ್ ಉದ್ಯೋಗಿಗಳಿಂದ ಹಿಡಿದು ಗ್ರಾಮೀಣ ಕಾಲೇಜು ವಿದ್ಯಾರ್ಥಿಗಳವರೆಗೆ ʼಮೊದಲು ನಾನು, ನಂತರ ಮದುವೆʼ ಎಂಬ ಮನೋಭಾವ ಇಂದಿನ ಮಹಿಳೆಯರ ಜೀವನದ ಗತಿಯನ್ನೇ ಬದಲಾಯಿಸುತ್ತಿದೆ.
2018ರಿಂದೀಚೆಗೆ ನಡೆದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳು ಈ ನಿರ್ಧಾರಕ್ಕೆ ಇನ್ನಷ್ಟು ಬಲ ನೀಡಿದ್ದು, ಕೆಲವು ರಾಜ್ಯಗಳಲ್ಲಿ ಮದುವೆ ವಯಸ್ಸಿನ ಸರಾಸರಿ ಗಡಿಯೇ ಮುಂದಕ್ಕೆ ಸರಿದಿದೆ. ಹಾಗಾದರೆ ಈ ದೊಡ್ಡ ಬದಲಾವಣೆಯ ಮೂಲ ಯಾವುದು? ರಾಜ್ಯವಾರು ಹಾಗೂ ನಗರ ಪ್ರದೇಶದ ಮಹಿಳೆಯರ ಮದುವೆ ದೃಷ್ಟಿಕೋನಗಳಲ್ಲಿ ಆಗಿರುವ ಬದಲಾವಣೆ ಎಂಥದ್ದು? ಅತಿಯಾದ ಮದುವೆ ಒತ್ತಡವಿದ್ದ ಭಾರತೀಯ ಸಮಾಜದಲ್ಲಿ ಈ ಹೊಸ ಪ್ರವೃತ್ತಿ ಹೇಗೆ ರೂಪುಗೊಳ್ಳುತ್ತಿದೆ?
2022ರಲ್ಲಿ ಭಾರತದ ಅಂಕಿಅಂಶ ಸಚಿವಾಲಯದ (MoSPI) ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಪ್ರಕಟಿಸಿದ ಸಾಮಾಜಿಕ ಅಂಕಿ ಅಂಶಗಳ ವರದಿ ಪ್ರಕಾರ, ಭಾರತದಲ್ಲಿ ಮದುವೆಯಾಗದ ಮಹಿಳೆಯರ ಪ್ರಮಾಣ 2011ರ 13.5% ರಿಂದ 2021ರಲ್ಲಿ 19.9%ಕ್ಕೆ ಏರಿಕೆಯಾಗಿದೆ.

Morgan Stanley ನಡೆಸಿದ ಇನ್ನೊಂದು ಅಧ್ಯಯನ, 2030ರ ವೇಳೆಗೆ 25–44 ವರ್ಷದ ಮಹಿಳೆಯರಲ್ಲಿ 45% ಮಂದಿ ಸ್ವಯಂ ಆಯ್ಕೆಯಂತೆ ಮದುವೆಯಾಗದೆ, ಮಕ್ಕಳಿಲ್ಲದೆ ಬದುಕುವುದನ್ನು ಆಯ್ಕೆ ಮಾಡಲಿದ್ದಾರೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಅನೇಕ ದೇಶಗಳಲ್ಲಿ ಮಹಿಳೆಯರು ಸಾಂಪ್ರದಾಯಿಕ ಗೃಹಜೀವನದ ಕಲ್ಪನೆಯನ್ನು ಬದಿಗೊತ್ತುತ್ತಿದ್ದಾರೆ. ʼಅಮೆರಿಕದಲ್ಲಿ ಮಹಿಳೆಯರು ಒಟ್ಟಿಗೆ ಇರಲು ಗುಂಪು ಗುಂಪಾಗಿ ಮನೆಗಳನ್ನು ತೆಗೆದುಕೊಂಡಿದ್ದಾರೆ; ಚೀನಾದಲ್ಲಿ ಏಳು ಮಹಿಳೆಯರು ಒಟ್ಟಿಗೆ ವಾಸಿಸಲು ಒಂದು ದೊಡ್ಡ ಮನೆಯನ್ನು ಖರೀದಿಸಿದ್ದಾರೆʼ ಎಂಬುದನ್ನೂ ಈ ವರದಿ ಉದಾಹರಿಸಿದೆ. “ಮಾನವರು ಒಬ್ಬರೇ ಬದುಕಲು ಸೃಷ್ಟಿಸಲ್ಪಟ್ಟಿಲ್ಲ. ಸಾಮಾನ್ಯ ಅನುಭವಗಳ ಮೇಲೆ ಸಮುದಾಯಗಳು ಖಂಡಿತವಾಗಿ ರೂಪುಗೊಳ್ಳುತ್ತವೆ” ಎಂದು ಗಾಂಧಿನಗರದ ಐಐಟಿ ಸಮಾಜ ಮತ್ತು ಸಂಸ್ಕೃತಿ ವಿಭಾಗದ ಮಾಸ್ಟರ್ಸ್ ವಿದ್ಯಾರ್ಥಿನಿ ಶಾಂಭೋಬಿ ಬಾಗ್ಚಿ ಹೇಳುತ್ತಾರೆ ಎಂದು ʼದ ಎಸ್ಟಾಬ್ಲಿಶ್ಡ್ʼ ವರದಿ ಮಾಡಿದೆ.
ಇಂದಿನ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗ ಮಹತ್ವಾಕಾಂಕ್ಷೆಯ ಪ್ರಶ್ನೆಯಾಗಿ ಉಳಿದಿಲ್ಲ. ಅದು ಬದುಕು ಸಾಗಿಸುವ ಮತ್ತು ಸುರಕ್ಷತೆ ಗಿಟ್ಟಿಸಿಕೊಳ್ಳುವ ಅತ್ಯಂತ ಮುಖ್ಯ ಅಸ್ತ್ರವಾಗಿದೆ. ಹಣಕಾಸಿನ ಸ್ವಾತಂತ್ರ್ಯ ಇರುವುದೇ ಮಹಿಳೆಯರಿಗೆ ಅಂತಿಮ ಭರವಸೆ. ಮದುವೆ ಬಳಿಕ ಆರ್ಥಿಕ ಅವಲಂಬನೆಯಿಂದ ದೂರವಾಗಿ ಸ್ವಾವಲಂಬಿಯಾಗಲು ಇದು ಏಕೈಕ ದಾರಿ.
ಒಂದು ಕಾಲದಲ್ಲಿ ಮಹಿಳೆಯರಿಗೆ ಪೂರ್ವಿಕರ ಆಸ್ತಿಯಲ್ಲಿ ಹಕ್ಕೇ ಇರಲಿಲ್ಲ. ಇದೇ ಅನ್ಯಾಯದಿಂದ ಹೆಣ್ಣು ಮಗುವಿನ ವಿರುದ್ಧ ಭೇದ ಹುಟ್ಟಿಕೊಂಡಿತು. ಕಾನೂನಿನಲ್ಲಿ ಬದಲಾವಣೆ ಆಗುವಷ್ಟರಲ್ಲಿ, ಪಿತೃತ್ವವನ್ನು ಆಧರಿಸಿದ ಸಂಪ್ರದಾಯಗಳು ಮನೆ ಮನಸ್ಸುಗಳಲ್ಲಿ ‘ಮಹಿಳೆ ಪುರುಷನ ಮೇಲೆ ಅವಲಂಬಿತೆʼ ಎಂಬ ಹುರುಳಿಲ್ಲದ ಅರ್ಥವನ್ನು ಗಟ್ಟಿಯಾಗಿ ನೆಟ್ಟಿದ್ದವು.
ಆ ಕಾರಣದಿಂದ ಮಹಿಳೆಯರು, ಬದುಕಿನಲ್ಲಿ ಬರುವ ಪುರುಷನೇ ಆಕೆಯ ರಕ್ಷಕ, ಸ್ಥಾನಮಾನ, ಸಂಪತ್ತು, ಭದ್ರತೆ ಎಲ್ಲವೂ ಆತನೇ ಎಂದು ನಂಬುತ್ತಿದ್ದರು. ಆದರೆ ಈಗ ಹಾಗಿಲ್ಲ. ಕಾಲ ಬದಲಾದಂತೆ ಈ ಕಟ್ಟುಪಾಡುಗಳೂ ಬದಲಾಗುತ್ತಿವೆ.

2024ರ Bumble ಜಾಗತಿಕ ಡೇಟಿಂಗ್ ಟ್ರೆಂಡ್ಸ್ ವರದಿಯು ಸಂಬಂಧಗಳ ಬಗ್ಗೆ ಮಹಿಳೆಯರ ಮನೋಭಾವದಲ್ಲಿ ಸಂಭವಿಸಿದ ಮಹತ್ವದ ಬದಲಾವಣೆಯನ್ನು ಸ್ಪಷ್ಟವಾಗಿ ದಾಖಲಿಸಿದೆ. ವರದಿ ಪ್ರಕಾರ, ಸಮೀಕ್ಷೆಗೆ ಒಳಪಟ್ಟ ಮಹಿಳೆಯರಲ್ಲಿ 64% ಮಂದಿ ತಮಗೆ ಬೇಕಾದ ಸಂಬಂಧದ ಸ್ವರೂಪ ಮತ್ತು ಅದರಿಂದ ತಮ್ಮ ನಿರೀಕ್ಷೆಗಳ ಬಗ್ಗೆ ಈಗ ಹೆಚ್ಚು ಸ್ಪಷ್ಟತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಕಾಲಘಟ್ಟಗಳು ಬದಲಾದಂತೆ ವ್ಯಕ್ತಿಗತ ಮೌಲ್ಯಗಳು ಮತ್ತು ಭಾವನಾತ್ಮಕ, ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ದೊರಕುತ್ತಿರುವುದರಿಂದ, ಈ ಸ್ಪಷ್ಟತೆ ಹೊಸ ಡೇಟಿಂಗ್ ಸಂಸ್ಕೃತಿಯ ಪ್ರಮುಖ ಸೂಚಕವಾಗಿ ಕಾಣುತ್ತದೆ.
ಇದೇ ವರದಿ, ಮಹಿಳೆಯರೆಲ್ಲ ತಮ್ಮ ಜೀವನದಲ್ಲಿ ‘ತಪ್ಪು ಸಂಬಂಧಕ್ಕಿಂತ ಒಂಟಿತನವೇ ಉತ್ತಮ’ ಎಂಬ ನಿಲುವನ್ನು ಬಲವಾಗಿ ಅಳವಡಿಸಿಕೊಂಡಿರುವುದನ್ನೂ ತೋರಿಸುತ್ತದೆ. ಹೊಂದಿಕೆಯಾಗದ, ಒತ್ತಡ ತಂದೊಡ್ಡುವ ಅಥವಾ ಮಾನಸಿಕವಾಗಿ ಹಾನಿ ಉಂಟುಮಾಡಬಹುದಾದ ಸಂಬಂಧಗಳಿಗೆ ಜೋತುಬೀಳುವ ಬದಲು, ತಮ್ಮ ವೈಯಕ್ತಿಕ ಗುರಿಗಳು ಮತ್ತು ಸುಖಕ್ಕೆ ಆದ್ಯತೆ ನೀಡುವ ಮನೋಭಾವ ಹೆಚ್ಚಾಗಿದೆ. ಇದರಿಂದ ಸಾಂಪ್ರದಾಯಿಕ ಒತ್ತಡಗಳು ಮತ್ತು ಸಮಾಜದ ನಿರೀಕ್ಷೆಗಳು ಕ್ರಮೇಣ ಕಡಿಮೆಯಾಗುತ್ತಿವೆ ಮತ್ತು ಮಹಿಳೆಯರು ತಮ್ಮ ಆಯ್ಕೆಯನ್ನು ಸ್ವತಂತ್ರವಾಗಿ ನಿರ್ಧರಿಸುವ ಪ್ರವೃತ್ತಿ ಬಲವಾಗುತ್ತಿದೆ.
Bumble ಡೇಟಿಂಗ್ ಟ್ರೆಂಡ್ಸ್ ವರದಿ-2024, ಮಹಿಳೆಯರ ಸಂಬಂಧದ ದೃಷ್ಟಿಕೋನದಲ್ಲಿ ಮೂಡಿರುವ ‘ಸ್ಪಷ್ಟತೆ ಮತ್ತು ಸ್ವಾಯತ್ತತೆ’ ಎಂಬ ಎರಡು ಮುಖ್ಯ ಬದಲಾವಣೆಗಳನ್ನು ಹೈಲೈಟ್ ಮಾಡುತ್ತದೆ. ವೈಯಕ್ತಿಕ ಕಲ್ಯಾಣ, ಸುರಕ್ಷತೆ ಮತ್ತು ಮೌಲ್ಯಗಳ ಹೊಂದಾಣಿಕೆಗಳು ಪ್ರಮುಖ ಆಯಾಮಗಳಾಗಿರುವ ಹೊಸ ಡೇಟಿಂಗ್ ಸಂಸ್ಕೃತಿಯೊಂದು ರೂಪುಗೊಳ್ಳುತ್ತಿರುವ ಹಿನ್ನೆಲೆ, ಡೇಟಿಂಗ್ ಆ್ಯಪ್‌ಗಳು ಮತ್ತು ಸಮಾಜದ ಒಟ್ಟು ಸಂವಹನದಲ್ಲಿಯೂ ಮಹಿಳೆಯರ ನಿರೀಕ್ಷೆಗಳು ಹೆಚ್ಚು ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿವೆ.
ತುಮಕೂರು ನಿವಾಸಿ ಸುಧಾ ಗೋವಿಂದರಾಜು ಈ ದಿನಕ್ಕೆ ಪ್ರತಿಕ್ರಿಯಿಸಿ, “ಮದುವೆ ಅನ್ನೋದು ವೈಯಕ್ತಿಕ ಆಯ್ಕೆ. ಆದರೆ ಈಗ ಆ ಸಂಪ್ರದಾಯ ಅಷ್ಟೇನೂ ತನ್ನ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎನಿಸುತ್ತದೆ. ಆದರೆ ಕಾಂಪ್ಲಿಕೇಟ್ ಅಂತು ಆಗಿದೆ. ನನಗೀಗ 32 ವರ್ಷ, ಉದ್ಯೋಗದಲ್ಲಿದ್ದೀನಿ, ನನಗೀಗ ಮದುವೆ ಮೇಲೆ ಆಸಕ್ತಿ ಇಲ್ಲ. ಕೌಟುಂಬಿಕ ಒತ್ತಡಗಳು ಎಲ್ಲಾ ಕಾಲಕ್ಕೂ ಇರುತ್ತವೆ. ಹಾಗಂತ ನಮ್ಮ ವೈಯಕ್ತಿಕ ಆಸೆಗಳನ್ನ ಬದಲಾಯಿಸಿಕೊಳ್ಳೋದು ಸಾಧ್ಯವಿಲ್ಲ. ಒಂದು ವೇಳೆ ಬದಲಾಯಿಸಿಕೊಂಡರೂ ಮುಂದಿನ ಎಷ್ಟೋ ವರ್ಷಗಳು ಇಷ್ಟವಿಲ್ಲದ ಸಂಬಂಧದೊಟ್ಟಿಗೆ ಬದುಕಬೇಕಾಗಿಬರಬಹುದು, ಸರಿಹೊಂದಲ್ಲ ಅನ್ನೋ ಕಾರಣಕ್ಕೆ ಬೇರೆಯೂ ಆಗಬಹುದು. ಬೇರೆಯಾಗುವುದಾದರೆ ಮದುವೆ ಯಾಕಾಗಬೇಕು? ಮದುವೆ ಬೇಕಾ ಬೇಡವಾ ಎನ್ನುವ ಮೊದಲು ಈ ಸ್ಪಷ್ಟತೆ ಇರಬೇಕು. ನನ್ನ ಸುತ್ತ ಮುತ್ತ ಇರುವ ಸ್ನೇಹಿತರನ್ನೇ ನೋಡುವುದಾದರೆ, ಮದುವೆಯಾದಮೇಲೆ ಖುಷಿಯಾಗಿದ್ದೀವಿ ಅಂತ ಹೇಳೋರು ತುಂಬಾನೆ ಕಡಿಮೆ. ಒಳ್ಳೆಯ ಪಾರ್ಟ್‌ನರ್ ಸಿಗುವುದು ವಿರಳಾತಿವಿರಳ. ಹಾಗೆ ಸಿಕ್ಕಿದವರು ಖುಷಿಯಾಗಿರಲಿ. ಕುಟುಂಬಗಳು ಒಪ್ಪಿ ಮಾಡಿಕೊಂಡ ಅರೇಂಜ್ಡ್ ಮ್ಯಾರೇಜ್‌ಗಳು, ತಾವೇ ಒಪ್ಪಿ ಮಾಡಿಕೊಂಡ ಲವ್ ಮ್ಯಾರೇಜ್‌ಗಳು, ಲಿವಿನ್‌ಗಳು ಬಹುತೇಕ ಫೇಲ್ ಆಗ್ತಿವೆ. ಡಿವೋರ್ಸ್ ಪ್ರಮಾಣ ಎಷ್ಟಿದೆ ಎಂದು ಕೇಳುವುದೇ ಬೇಡ. ಮದುವೆಯಾಗದ ಮಹಿಳೆಯರು ಜೀವನದಲ್ಲಿ ಹೆಚ್ಚು ಖುಷಿಯಿಂದಿರುತ್ತಾರಂತೆ, ವರದಿಗಳೂ ಅದನ್ನೇ ಹೇಳುತ್ತವೆ. ಜೀವನದಲ್ಲಿ ಸಂಗಾತಿ ಅಂತ ಬೇಕಾಗಬಹುದು. ಆದರೆ ಅದಕ್ಕೆ ಮದುವೆಯೇ ಆಗಬೇಕು ಎಂದಿಲ್ಲ. ಆ ಸಂಗಾತಿ ಒಬ್ಬ ಒಳ್ಳೆಯ ಸ್ನೇಹಿತನಾಗಿರಬಹುದು, ಸಂಬಂಧಿಯಾಗಿರಬಹುದು, ಪ್ರತಿಫಲಾಪೇಕ್ಷೆ ಇಲ್ಲದ ಯಾರು ಬೇಕಾದರೂ ಒಬ್ಬರಿಗೊಬ್ಬರು ಬೆಂಬಲಿಸುವಂತವರು ಜೊತೆಗಿರಬಹುದು” ಎಂದರು.
ಕ್ಲಿನಿಕಲ್ ಸೈಕಾಲಜಿಸ್ಟ್ ದೀಪಾ ಬಿ. ರಾಮ್ ಹೀಗೆ ವಿವರಿಸುತ್ತಾರೆ.. “ಮಹಿಳೆಯರು ಮದುವೆಯನ್ನು ವಿಳಂಬಿಸುತ್ತಿರುವುದು ಅಥವಾ ಸಂಪೂರ್ಣವಾಗಿ ನಿರಾಕರಿಸುತ್ತಿರುವುದು ಸಾಮಾಜಿಕ ಬದಲಾವಣೆ ಮಾತ್ರವಲ್ಲ, ಒಂದು ಮಹತ್ವದ ಮಾನಸಿಕ ಪರಿವರ್ತನೆ. ಶಿಕ್ಷಣ, ವೃತ್ತಿ ಮತ್ತು ಆರ್ಥಿಕ ಸ್ವಾವಲಂಬನೆಯ ಮೂಲಕ ಮಹಿಳೆಯರಲ್ಲಿ ಸ್ವ-ಅಸ್ತಿತ್ವದ ಅರಿವು ಹೆಚ್ಚಾಗಿದೆ. ಪರಿಣಾಮವಾಗಿ ಮದುವೆಯನ್ನು ತಡಗೊಳಿಸುವ ಅಥವಾ ನಿರಾಕರಿಸುವ ನಿರ್ಧಾರವು ಆತುರವಲ್ಲದೆ, ಚಿಂತಿತ ಆಯ್ಕೆಯಾಗಿ ಹೊರಹೊಮ್ಮುತ್ತಿದೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಇದೇ ವೇಳೆ, ಮಹಿಳೆಯರು ತಮ್ಮ ಸುತ್ತಮುತ್ತಲಿನ ವೈವಾಹಿಕ ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿಚ್ಛೇದನ, ಕೌಟುಂಬಿಕ ಹಿಂಸೆ, ಮಾನಸಿಕ- ದೈಹಿಕ ದೌರ್ಜನ್ಯ, ಹೊಂದಾಣಿಕೆ ಹೆಸರಿನಲ್ಲಿ ಮಹಿಳೆಯರು ಅನುಭವಿಸುವ ನೋವುಗಳು ಅವರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುತ್ತಿವೆ. ಮನೋವಿಜ್ಞಾನದಲ್ಲಿ ಇದನ್ನು vicarious trauma ಎಂದು ಕರೆಯಲಾಗುತ್ತದೆ. ಅಂದರೆ, ಇತರರ ನೋವುಗಳನ್ನು ನೋಡಿ ತಾವೇ ಆ ನೋವನ್ನು ಅನುಭವಿಸುವಂತಹ ಭಾವನಾತ್ಮಕ ಪ್ರತಿಕ್ರಿಯೆ. ʼಅವಳಿಗೆ ಆದದ್ದು ನನಗೂ ಆಗಬಹುದುʼ ಎಂಬ ಅಜ್ಞಾತ ಭಯ ಮಹಿಳೆಯರಲ್ಲಿ ಮದುವೆಯ ಕುರಿತು ಎಚ್ಚರಿಕೆಯ ಮನೋಭಾವವನ್ನು ಹುಟ್ಟಿಸುತ್ತಿದೆ. ಇದು ಮದುವೆಯ ವಿರುದ್ಧದ ದ್ವೇಷ ಎನ್ನುವುದಕ್ಕಿಂತ ಆತ್ಮರಕ್ಷಣೆಯ ಮನಸ್ಥಿತಿ. ಮದುವೆಯ ನಂತರ ಮಹಿಳೆಯರ ಮೇಲೆ ಬೀಳುವ ಅಸಮಾನ ಜವಾಬ್ದಾರಿಗಳೂ ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹಲವು ಸಂಶೋಧನೆಗಳು ತೋರಿಸುವಂತೆ, ಇಂದಿಗೂ ಮದುವೆಯಾದ ಮಹಿಳೆಯರ ಮೇಲೆ ಮನೆ ಕೆಲಸ, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಮೊದಲಾದ ಹೊಣೆಗಾರಿಕೆಗಳು ಅತಿಯಾಗಿ ಹೇರಲ್ಪಡುತ್ತವೆ. ಇದನ್ನು ಮನೋವಿಜ್ಞಾನಿಗಳು emotional labor ಎಂದು ವಿವರಿಸುತ್ತಾರೆ. ಈ ಅಸಮಾನ ಭಾರವನ್ನು ನಿರಂತರ ಗಮನಿಸುವ ಮಹಿಳೆಯರಿಗೆ ಮದುವೆ ಒಂದು ನಿರಂತರ ಹೊಣೆಗಾರಿಕೆಯ ವ್ಯವಸ್ಥೆಯಂತೆ ಕಾಣತೊಡಗುತ್ತದೆ. ಈ ಭಾವನೆಯೇ ಮದುವೆಯನ್ನು ಮುಂದೂಡುವ ಅಥವಾ ತಿರಸ್ಕರಿಸುವ ನಿರ್ಧಾರಕ್ಕೆ ದಾರಿ ಮಾಡಿಕೊಡುತ್ತಿದೆ.

ಇದನ್ನೂ ಓದಿ: ಚಿನ್ನದ ಆಸೆಬಿಟ್ಟು ಬೆಳ್ಳಿಯ ಬೆನ್ನತ್ತಿದ ಆಭರಣಪ್ರಿಯರು
ಕೆಲವು ಮಹಿಳೆಯರ ನಿರ್ಧಾರಗಳ ಹಿಂದೆ ಅವರ ಬಾಲ್ಯ ಮತ್ತು ಕುಟುಂಬದ ಅನುಭವಗಳೂ ಕಾರಣವಾಗಿವೆ. ತಂದೆ–ತಾಯಿ ನಡುವಿನ ನಿರಂತರ ಕಲಹ, ಪಿತೃ ಪ್ರಧಾನ ನಿಯಂತ್ರಣ, ಭಾವನಾತ್ಮಕ ನಿರ್ಲಕ್ಷ್ಯವನ್ನು ಕಂಡು ಬೆಳೆದ ಮಹಿಳೆಯರಲ್ಲಿ avoidant attachment style ಬೆಳೆಯುವ ಸಾಧ್ಯತೆ ಹೆಚ್ಚು ಎಂದು ಮನೋವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ. ಇಂತಹ ಮಹಿಳೆಯರಿಗೆ ಆಪ್ತ ಸಂಬಂಧಗಳು ಭದ್ರತೆಯ ಬದಲು ಬಂಧನದ ಭಾವನೆ ನೀಡಬಹುದು. ಪರಿಣಾಮ, ಮದುವೆ ಎಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವ ಪ್ರಕ್ರಿಯೆಯಂತೆ ಕಾಣತೊಡಗುತ್ತದೆ. ಕೌನ್ಸೆಲಿಂಗ್ ತಜ್ಞರು ಇದನ್ನು ʼಸಂಬಂಧ ಭಯʼ (commitment anxiety/phobia) ಎಂದು ವಿವರಿಸುತ್ತಾರೆ.
ಡಿಜಿಟಲ್ ಯುಗವೂ ಮಹಿಳೆಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿದೆ. ಡೇಟಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ಅನೇಕ ಆಯ್ಕೆಗಳನ್ನು ನೀಡುತ್ತಿರುವುದರಿಂದ, ಇನ್ನೂ ಉತ್ತಮ ಸಂಗಾತಿ ಸಿಗಬಹುದು ಎಂಬ ಭಾವನೆ ಹೆಚ್ಚಾಗಿದೆ. ಮನೋವಿಜ್ಞಾನದಲ್ಲಿ ಇದನ್ನು decision fatigue ಎಂದು ಕರೆಯಲಾಗುತ್ತದೆ. ಅತಿಯಾದ ಆಯ್ಕೆಗಳು ನಿರ್ಧಾರ ತೆಗೆದುಕೊಳ್ಳುವುದನ್ನೇ ಕಷ್ಟಕರವಾಗಿಸುತ್ತವೆ. ಇದರ ಪರಿಣಾಮವಾಗಿ ಮದುವೆ ಎಂಬ ದೊಡ್ಡ ನಿರ್ಧಾರವನ್ನು ಮುಂದೂಡುತ್ತಲೇ ಹೋಗುವ ಪ್ರವೃತ್ತಿ ಬೆಳೆಯುತ್ತದೆ.
ಗ್ರಾಮೀಣ ಭಾರತದಲ್ಲಿ ಈ ರೀತಿ ಬದಲಾವಣೆಗಳು ನಿಧಾನವಾದರೂ ಇತ್ತೀಚೆಗೆ ಸ್ಪಷ್ಟ ಸ್ವರೂಪ ಪಡೆಯುತ್ತಿವೆ. ಕಳೆದ ಆರೇಳು ವರ್ಷಗಳಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಜೀವನ ಶೈಲಿಯಲ್ಲಿ ಗಣನೀಯ ಬದಲಾವಣೆಗಳು ಕಂಡುಬರುತ್ತಿವೆ. ಕಾಲೇಜಿಗೆ ಹೋಗುವ ಪ್ರಮಾಣ ಹೆಚ್ಚಾಗಿದೆ. ಹಳ್ಳಿಗಳಲ್ಲಿನ ಕೃಷಿ, ದಿನಗೂಲಿ ಆಧಾರಿತ ಜೀವನದಲ್ಲಿ ಬೇಸತ್ತ ಬಹುತೇಕ ಹೆಣ್ಣುಮಕ್ಕಳು ನಗರಗಳಿಗೆ ಕೆಲಸ ಅರಸಿ ಹೋಗುತ್ತಿದ್ದಾರೆ. ಆದರೂ ಗ್ರಾಮಗಳಲ್ಲಿ ಮದುವೆಯ ಸಂಪ್ರದಾಯದ ಒತ್ತಡ ಇನ್ನೂ ಬಲವಾಗಿಯೇ ಇದೆ. ಕುಟುಂಬದ ಗೌರವ, ಜಾತಿ, ಸಂಪ್ರದಾಯಗಳು ಮಹಿಳೆಯರ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತಿವೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಮದುವೆ ಮಾಡಿಕೊಳ್ಳುವ ವಯಸ್ಸು ಹಿಂದಿನ 18-20 ವರ್ಷದ ಗಡಿ ದಾಟಿ 22-25ಕ್ಕೆ ಬಂದು ನಿಂತಿದೆ. 25 ದಾಟಿದ ಬಹುತೇಕ ಹೆಣ್ಣುಮಕ್ಕಳು ಮದುವೆಯನ್ನು ನಿರಾಕರಿಸಿ ಸಿಂಗಲ್ ಆಗಿರಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಆನ್‌ಲೈನ್ ಕಿರುಕುಳ; ಇದು ಡಿಜಿಟಲ್ ಭೂತಗಳ ಬೆನ್ನಟ್ಟುವ ಕಾಲ!
ಭಾರತೀಯ ಸಮಾಜದಲ್ಲಿ ಮದುವೆ ಎಂದರೆ ಬದುಕಿನ ಅವಿಭಾಜ್ಯ ಸಂಪ್ರದಾಯವೆಂದು ನಂಬಿದ್ದ ಕಾಲದಿಂದ, ಅದು ವೈಯಕ್ತಿಕ ಆಯ್ಕೆ ಮತ್ತು ಅವಕಾಶಗಳ ವಿಷಯವಾಗಿ ಪರಿವರ್ತಿತವಾಗಿರುವ ಕಾಲಕ್ಕೆ ಮಹಿಳೆಯರು ಧೈರ್ಯವಾಗಿ ಹೆಜ್ಜೆ ಹಾಕಿದ್ದಾರೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಗೌರವಗಳು ಮಹಿಳೆಯರಿಗೆ ತಮ್ಮ ಬದುಕಿನ ಮಾರ್ಗವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳುವ ಶಕ್ತಿ ನೀಡಿ, ಸಂಪ್ರದಾಯಗಳ ಕಟ್ಟುಪಾಡುಗಳನ್ನು ಪ್ರಶ್ನಿಸುವಂತೆ ಮಾಡಿವೆ. ಇದು ಕೇವಲ ಮದುವೆ ಕುರಿತು ಬದಲಾದ ಅಭಿಪ್ರಾಯವಲ್ಲ, ಇದು ಅವರ ಜೀವನ, ಬದುಕು, ಭವಿಷ್ಯದ ಕುರಿತು ತಾವು ತೆಗೆದುಕೊಳ್ಳುವ ಹಕ್ಕಿನ ಪುನರುಜ್ಜೀವನವೇ ಆಗಿದೆ. ಮುಂದಿನ ದಶಕದಲ್ಲಿ ಈ ಪ್ರವೃತ್ತಿ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆಗಳಿದ್ದು, ಭಾರತದಲ್ಲಿ ಮಹಿಳೆಯರ ವೈಯಕ್ತಿಕ ಸ್ವಾಯತ್ತತೆ ಹಾಗೂ ಜೀವನದ ಗುಣಮಟ್ಟ ಹೆಚ್ಚಿಸುವ ದಾರಿಯಲ್ಲಿ ಇದು ಮಹತ್ವದ ಸಾಮಾಜಿಕ ಪರಿವರ್ತನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.





