ಭಾರತದಲ್ಲಿ ಸ್ವಾತಂತ್ರ್ಯ ಬಂದ ನಂತರ ಹರಿದುಹಂಚಿ ಹೋಗಿದ್ದ ರಾಜ್ಯಗಳನ್ನು ಒಂದುಗೂಡಿಸಿದ್ದು, 1956ರಲ್ಲಿ ನಡೆದ ಭಾಷಾವಾರು ಪ್ರಾಂತ್ಯಗಳ ರಚನೆ. ಅದರಂತೆ ಶಿಕ್ಷಣ ನೀತಿಗಳು ಸಹ ರೂಪುಗೊಂಡವು. ದಕ್ಷಿಣ ಭಾರತದ ರಾಜ್ಯಗಳಾದ ಅವಿಭಜಿತ ಆಂಧ್ರಪ್ರದೇಶದಲ್ಲಿ ‘ತೆಲುಗು’, ತಮಿಳುನಾಡಿನಲ್ಲಿ ‘ತಮಿಳು’, ಕೇರಳದಲ್ಲಿ ‘ಮಲಯಾಳಂ’ , ಕರ್ನಾಟಕದಲ್ಲಿ ‘ಕನ್ನಡ’ವನ್ನು ಆಧರಿಸಿ ಶಿಕ್ಷಣ ನೀತಿಗಳು ರಚನೆಯಾದವು. ಅದರ ಪ್ರಕಾರ ರಾಜ್ಯ ಶಿಕ್ಷಣ ನೀತಿಯಲ್ಲಿ ಐದನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ/ರಾಜ್ಯ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿತು. ಅದರ ಜೊತೆಗೆ ಎಲ್ಲಾ ರಾಜ್ಯಗಳಲ್ಲೂ ಇಂಗ್ಲಿಷ್ ಭಾಷೆಯನ್ನು ಕಲಿಸಬೇಕು ಎಂದು ಸೂಚಿಸಲಾಯಿತು.
ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು “ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು” ಎಂದು ಹೇಳಿದ್ದಾರೆ.
“ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಎಂಬುದು ಕಲಿಕೆಯ ಮಾಧ್ಯಮವಾಗಿದೆ. ಆದರೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಹೆಚ್ಚಿನ ಜನರು ಇಂಗ್ಲಿಷ್ ಮಾತನಾಡುವುದಿಲ್ಲ. ಅದಕ್ಕಾಗಿಯೇ ಶಿಕ್ಷಕರು ಮೊದಲು ಇಂಗ್ಲಿಷ್‌ನಲ್ಲಿ ಮಾತನಾಡಬೇಕು. ಇಂಗ್ಲಿಷ್ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನು ಓದಿ : ಶಿಕ್ಷಕರ ಕೊರತೆ | ಸರ್ಕಾರಿ ಶಾಲೆಗಳಿಗೆ ಬೀಗ: ಕಣ್ಣು ಹಾಯಿಸುವರೇ ಶಿಕ್ಷಣ ಸಚಿವರು?
ಮುಂದುವರೆದು, “ಒಬ್ಬ ವಿದ್ಯಾರ್ಥಿ ಉತ್ತಮ ಅಂಕ ಗಳಿಸಿದ್ದಾಗ್ಯೂ, ಉದ್ಯೋಗದ ಮಾರುಕಟ್ಟೆಯಲ್ಲಿ ಇಂಗ್ಲಿಷ್ ಮಾತನಾಡಲು ಬಾರದಿರುವುದರಿಂದ ಕೆಲಸ ಸಿಗುವುದು ಕಷ್ಟವಾಗುತ್ತದೆ. ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರಗಳಲ್ಲಿ ಇಂಗ್ಲಿಷ್ ಪ್ರಮುಖ ಭಾಷೆಯಾಗಿ ಮಾರ್ಪಟ್ಟಿದೆ” ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಎಂದರೇ ಮಾತ್ರವೇ ಅನ್ನ ಹುಟ್ಟಿಸುವ ಭಾಷೆ, ಕನ್ನಡ ಮಾಧ್ಯಮ ಎಂಬುದು ಉಪಯೋಗಕ್ಕೆ ಬಾರದ ಭಾಷೆ/ಶಿಕ್ಷಣ ಎಂಬುದನ್ನು ಸರ್ಕಾರವೇ ಪರೋಕ್ಷವಾಗಿ ಪ್ರತಿಪಾದಿಸುತ್ತಿದೆ. ಇನ್ನು ಕೆಲವೇ ದಶಕಗಳಲ್ಲಿ ಕನ್ನಡಿಗರಾದ ನಾವು ಅಧೋಗತಿಗೆ ತಲುಪುವ ಸಾಧ್ಯತೆಯೇ ಹೆಚ್ಚಿದೆ. ಇಲ್ಲಿವರೆಗೂ ಕರ್ನಾಟಕಕ್ಕೆ ತನ್ನದೇ ಆದ ಭಾಷಾ ನೀತಿಯನ್ನು ರಚಿಸದ, ಕನ್ನಡಕ್ಕಾಗಿ ಭಾಷಾ ಯೋಜನೆಯನ್ನು ರೂಪಿಸದ ಸರ್ಕಾರಗಳು ಕನ್ನಡದ ಅವನತಿಗೆ ನೇರ ಕಾರಣವಾಗುತ್ತಿವೆ.
ಭಾಷೆ ಎಂದರೇ ಪದ ಸಾಮರ್ಥ್ಯದ ಮೇಲಿನ ಹಿಡತ. ಅದೇ ರೀತಿ ಕರ್ನಾಟಕದಲ್ಲಿರುವ 6 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಜನರು ಮಾತನಾಡುವುದು ಕನ್ನಡ ಅಥವಾ ಅವರ ಮಾತೃ ಭಾಷೆಯನ್ನು. ಭಾಷೆ ಬೆಳೆದರೆ, ಒಂದು ಸಮುದಾಯ ಬೆಳೆಯುತ್ತದೆ ಮತ್ತು ಸಂಸ್ಕೃತಿಯೂ ಬೆಳೆಯುತ್ತದೆ. ಮಾತೃ ಭಾಷೆಯ ಜೊತೆಗೆ ಇನ್ನೊಂದು ಭಾಷೆಯನ್ನು ಕಲಿಯುವುದು ‘ಭಾಷಾ ಸಾಮರಸ್ಯದ ಜೊತೆಗೆ ಸಾಂಸ್ಕೃತಿಕ ಕೊಡಕೊಳ್ಳುವಿಕೆ’ ಏರ್ಪಡುತ್ತದೆ. ಆದರೆ, ಇನ್ನೊಂದು ಭಾಷೆಯನ್ನು ಹೇರಿಕೆ ಮಾಡುವುದು ಎಷ್ಟು ಸರಿ.
ಸಾಮಾನ್ಯವಾಗಿ ಮಾತೃ ಭಾಷೆಯಲ್ಲಿ ಕಲಿತರೆ ಅಥವಾ ರಾಜ್ಯದ ಭಾಷೆಯಲ್ಲಿ ಕಲಿತರೆ ಉದ್ಯೋಗ ಸಿಗುವುದು ಕಡಿಮೆ ಎಂದು ಬಿಂಬಿಸಲಾಗುತ್ತಿದೆ. ನಮ್ಮ ರಾಜ್ಯದಷ್ಟೆ ಜನಸಂಖ್ಯೆ ಇರುವ ಜಪಾನ್ ಮತ್ತು ಜರ್ಮನ್ ದೇಶಗಳಲ್ಲಿ ತಮ್ಮ ನೆಲದ ಭಾಷೆಯನ್ನೇ ಪ್ರಾಧಾನ್ಯವಾಗಿ ಕಲಿಸಲಾಗುತ್ತದೆ. ಅದೇ ಭಾಷೆಯಲ್ಲಿ ಉನ್ನತ ಶಿಕ್ಷಣದವರೆಗೂ ಕಲಿಸಿ ಉದ್ಯೋಗವನ್ನು ಕೊಡಲಾಗುತ್ತದೆ. ಇಂಗ್ಲಿಷ್ ಎನ್ನುವುದು ದೇಶ-ದೇಶಗಳ ಸಂಪರ್ಕ ಬೆಳೆಯಲು ಅನುಕೂಲವಾಗಬೇಕೆ ವಿನಃ, ಅದೇ ಪ್ರಧಾನವಾದರೆ ಸಾವಿರಾರು ಭಾಷೆಗಳು ಅವನತಿ ಹೊಂದುವ ಹಂತಕ್ಕೆ ತಲುಪುತ್ತವೆ.
ಕಿನ್ಯಾ ದೇಶದ ಅಂತಾರಾಷ್ಟ್ರೀಯ ವಿದ್ವಾಂಸರಾದ ಗೂಗಿ ವಾ ಥಿಯಾಂಗೋ, ಸಾಹಿತ್ಯದಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಬೇಕು ಎಂದು ಹೇಳುತ್ತಾರೆ. ಇಂಗ್ಲಿಷ್ ಎನ್ನುವ ಭಾಷೆ ಆಫ್ರಿಕಾ ಖಂಡದ ಸಂಸ್ಕೃತಿಯನ್ನು ನಾಶ ಮಾಡುವ ಬಗ್ಗೆ ಅರಿತ ಅವರು, ತಮ್ಮ ಮಾತೃ ಭಾಷೆ ‘ಗಿಕುಯು’ ಅಲ್ಲಿ ಬರೆಯುತ್ತಾರೆ. “ಆಫ್ರಿಕಾದ ಎಲ್ಲಾ ದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಮುಚ್ಚಬೇಕು” ಎಂದು ಕರೆ ಕೊಡುತ್ತಾರೆ. ಮಾತೃ ಭಾಷೆಯಲ್ಲಿ ಕಲಿತವರಿಗೆ ಉದ್ಯೋಗವನ್ನು ಕೊಡಬೇಕು ಎಂದು ಹೇಳುತ್ತಾರೆ. ಅದೇ ರೀತಿ ಕನ್ನಡದ ಅನೇಕ ಲೇಖಕರು, ವಿದ್ವಾಂಸರು, ಹೋರಾಟಗಾರರು ‘ಕನ್ನಡದಲ್ಲಿಯೇ ಶಿಕ್ಷಣ ಕೊಡುವ ಜೊತೆಗೆ ಉದ್ಯೋಗವನ್ನು ಕೊಡಬೇಕು’ ಎಂದು ಒತ್ತಾಯಿಸುತ್ತಾ ಬಂದಿದ್ದಾರೆ.
ಇದನ್ನು ಓದಿ : ವೈದ್ಯಕೀಯ ಶಿಕ್ಷಣ ಸಚಿವರು ಡಾ. ಶರಣಗೌಡ ಪಾಟೀಲ
ಇಂಗ್ಲಿಷ್ ಭಾಷೆಗೆ ಮಾನ್ಯತೆ ಕೊಡುವ ಸಚಿವರು, ಕನ್ನಡದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಯಾಕೆ ಚಿಂತಿಸುವುದಿಲ್ಲ. ಅಂದರೆ, ಮೆಡಿಕಲ್, ಇಂಜಿನಿಯರಿಂಗ್, ಟೆಕ್ನಾಲಜಿ, ವಿಜ್ಞಾನ, ಕಾನೂನಿನಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಪೂರ್ಣ ಕನ್ನಡ ಬಳಕೆಯಾಗುವ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಇಂಗ್ಲಿಷ್ ಕೇವಲ ಸಂಪರ್ಕ ಭಾಷೆಯಾಗಿ ಹಾಗೂ ಸಂವಹನ ಭಾಷೆಯಾಗಬೇಕು. ಅದರ ಜೊತೆ ಮಾತೃ ಭಾಷೆಯನ್ನು ಕಡೆಗಣಿಸಬಾರದು ಅಲ್ಲವೇ?.
ತರಗತಿ ಒಳಗಡೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಇಂಗ್ಲಿಷ್ ಭಾಷೆಯ ಸಂವಾದ ನಡೆದರೆ, ಅದನ್ನು ಕಲಿಕೆಯ ದೃಷ್ಟಿಯಿಂದ ಸ್ವೀಕರಿಸಬಹುದು. ಆದರೆ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಲ್ಲಿ ಇಂಗ್ಲಿಷ್ ಮಾತನಾಡಬೇಕು ಎಂದರೆ, ತಮ್ಮ ಮನೆಯ ಭಾಷೆಯನ್ನೋ ಅಥವಾ ರಾಜ್ಯದ ಭಾಷೆಯನ್ನೋ ಕಡೆಗಣಿಸಬೇಕು ಎಂದರ್ಥವೇ?
ಕನ್ನಡದ ಹಿರಿಯ ಬರಹಗಾರರು ಹಾಗೂ ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ‘ಈದಿನ’ ಜೊತೆ ಮಾತನಾಡಿ “ಪಠ್ಯ-ಪುಸ್ತಕ ಅಥವಾ ತರಗತಿಯಲ್ಲಿ ಇಂಗ್ಲಿಷ್ ನಲ್ಲಿ ಬೋಧನೆ ಮಾಡುವುದಾದರೆ ಮಾಡಲಿ. ಅದರ ಜೊತೆಗೆ ಇಂಗ್ಲಿಷ್ ಪದಗಳ ಅರ್ಥವನ್ನು ಕನ್ನಡದಲ್ಲಿಯೂ ಹೇಳಬೇಕು. ಪಿಯು ಮತ್ತು ಪದವಿ ಹಂತಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳು ಆಯ್ಕೆಯಾಗಿರಬೇಕು. ಸ್ನಾತಕೋತ್ತರ ಹಾಗೂ ತಾಂತ್ರಿಕ ಶಿಕ್ಷಣದ ವಿಚಾರದಲ್ಲಿ ತರಗತಿ ಒಳಗಡೆ ಇಂಗ್ಲಿಷ್ ನಲ್ಲಿ ಬೋಧನೆ ಮಾಡಲಿ. ವೈದ್ಯಕೀಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಉಪಯೋಗಿಸುವುದು ಉತ್ತಮ” ಎಂದು ಅಭಿಪ್ರಾಯಪಟ್ಟರು.
“ಮುಂದೆ ಅದೇ ವೈದ್ಯರು ಕನ್ನಡದ ರೋಗಿಗಳಿಗೆ ಚಿಕಿತ್ಸೆ ಕೊಡುವರು. ರೋಗಿಗಳು ಕನ್ನಡದಲ್ಲಿ ಖಾಯಿಲೆ ಬಗ್ಗೆ ಹೇಳಿಕೊಂಡರೆ, ವೈದ್ಯರು ಚಿಕಿತ್ಸೆ ಬಗ್ಗೆ ಇಂಗ್ಲಿಷ್ ನಲ್ಲಿ ಹೇಳುವುದು ಸರಿಯಲ್ಲ. ಆದ್ದರಿಂದ ಎರಡೂ ಭಾಷೆಯ ಜ್ಞಾನ ಅವಶ್ಯಕ. ಆದರೆ, ಕ್ಯಾಂಪಸ್ ಒಳಗಡೆ ಇಂಗ್ಲಿಷ್ ಮಾತನಾಡಬೇಕು ಎಂದು ಒತ್ತಡ ಹಾಕುವುದು ತಪ್ಪು. ತರಗತಿಗೂ ಕ್ಯಾಂಪಸ್ಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಬೋಧನೆ ಮತ್ತು ಕಲಿಕೆಯಲ್ಲಿ ಇಂಗ್ಲಿಷ್ ಹೆಚ್ಚಿನ ಪ್ರಮಾಣದಲ್ಲಿ ಇರಲಿ ಎಂದು ಮಂತ್ರಿಗಳು ಹೇಳಿದ್ದರೆ, ಅದನ್ನು ಒಪ್ಪಬಹುದು. ಅದರ ಹೊರತಾಗಿ ಕರ್ನಾಟಕದ ಶಿಕ್ಷಣದಲ್ಲಿ ಇಂಗ್ಲಿಷ್ ಪ್ರಧಾನವಾಗಿರಬೇಕು ಎಂದು ಹೇಳಿದರೆ ಸೂಕ್ತವಾದ ತಿಳುವಳಿಕೆಯಲ್ಲ. ಉನ್ನತ ಶಿಕ್ಷಣ ಸಚಿವರು ತಮ್ಮ ಮಾತನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು” ಎಂದು ಆಗ್ರಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ‘ಈದಿನ’ ಜೊತೆ ಮಾತನಾಡಿ, “ನಮ್ಮ ಯುವಕರಿಗೆ ಉನ್ನತ ಶಿಕ್ಷಣದಲ್ಲಿ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯವನ್ನು ಹೇಳಿಕೊಡಬೇಕು. ಕರ್ನಾಟಕಕ್ಕೆ ಬರುವ ಕಂಪನಿಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುವ ಹಾಗೆ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ಕೌಶಲ್ಯ ಕಲಿಸುವ ಬಗ್ಗೆ ಯೋಚಿಸಬೇಕು” ಎಂದು ಅಭಿಪ್ರಾಯಪಟ್ಟರು.
ಕನ್ನಡ ಹೋರಾಟಗಾರರಾದ ಅರುಣ್ ಜಾವಗಲ್ ‘ಈದಿನ’ ಜೊತೆ ಮಾತನಾಡಿ, “ನಾವು ಕೃತಕ ಬುದ್ಧಿಮತ್ತೆ(AI) ಯುಗದಲ್ಲಿದ್ದೇವೆ. ಯಾವ ಭಾಷೆಯಿಂದ, ಯಾವ ಭಾಷೆಗೆ ಬೇಕಾದರೂ ಅನುವಾದಿಸುವಷ್ಟು ತಂತ್ರಜ್ಞಾನ ಬೆಳೆದಿದೆ. ಆದರೆ ಸರ್ಕಾರ ತರುತ್ತಿರುವ ಬಲವಂತದ ಭಾಷಾ ನೀತಿಗಳು ವಿಭಜನೆಯನ್ನು ಸೃಷ್ಟಿಸುತ್ತದೆ” ಎಂದರು.
“ಉನ್ನತ ಶಿಕ್ಷಣ ಸಚಿವರು ವಿವಿ ಕ್ಯಾಂಪಸ್‌ಗಳಲ್ಲಿ ಇಂಗ್ಲಿಷ್ ಮಾತನಾಡಬೇಕು ಎಂದು ಹೇಳುವುದು ಹಾಗೂ ಇಂಗ್ಲಿಷ್ ನಿಮಗೆ ಆತ್ಮವಿಶ್ವಾಸ ಬೆಳೆಸುತ್ತದೆ ಎಂದು ಹೇಳುವುದು ವಸಾಹತುಶಾಹಿ ಮನಸ್ಥಿತಿ. ಆತ್ಮವಿಶ್ವಾಸ ಬರುವುದು ಉತ್ತಮ ಶಿಕ್ಷಣವನ್ನು ನೀಡಿ ಜ್ಞಾನ ಅಭಿವೃದ್ಧಿಯಾಗುವುದರಿಂದಲೇ ಹೊರತು, ಒಬ್ಬರ ಮಾತೃಭಾಷೆಯನ್ನು ತ್ಯಜಿಸುವುದರಿಂದಲ್ಲ” ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಕ್ಕೆ ಕನ್ನಡವೇ ಪ್ರಮುಖ ಸಮಸ್ಯೆಯಂತೆ ಕಾಣುತ್ತಿದೆ. ಇಂಗ್ಲಿಷ್ ಭಾಷೆಗೆ ಒತ್ತು ಕೊಡುತ್ತಿರುವ ಸರ್ಕಾರದ ಬಳಿ ಎಷ್ಟು ಜನರಿಗೆ ಇಂಗ್ಲಿಷ್ ಭಾಷೆಯಿಂದ ಉದ್ಯೋಗ ಪಡೆದಿದ್ದಾರೆ ಎಂಬ ಅಂಕಿಅಂಶಗಳಿವೆಯಾ? ಕನ್ನಡದ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡದೆ, ಬೂಟಾಟಿಕೆಯಿಂದ ಕನ್ನಡ ಭಾಷೆಯ ಮೇಲೆ ಅಭಿಮಾನ ಹೊಂದಿರುವಂತೆ ಕಾಣುತ್ತದೆ. ಸರ್ಕಾರ, ಶಿಕ್ಷಣ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪರ ಸಂಘಟನೆಗಳು ಮುಂದಿನ ಪೀಳಿಗೆಗೆ ಕನ್ನಡವನ್ನು ಸಂಪೂರ್ಣ ಅಪ್ರಯೋಜಕ ಮತ್ತು ಅಪ್ರಸ್ತುತ ಮಾಡಲು ಬಿಡಬಾರದು. ಶಿಕ್ಷಣ ಕ್ಷೇತ್ರವೇ ಕನ್ನಡವನ್ನು ಅಮಾನ್ಯಗೊಳಿಸಿದರೆ, ಮಾನ್ಯಗೊಳಿಸುವವರಾರು?





