ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನಂತರದಲ್ಲಿ ಜನಪರವಾದ, ಮಹಿಳಾಪರವಾದ ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಪರವಾಗಿ ಯೋಜಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆ ಅಪಾರವಾದುದು. ಅವರ ರಾಜಕೀಯ ಬದ್ಧತೆ ಮತ್ತು ಅಹಿಂದ ನಾಯಕತ್ವ ಈ ಬಗೆಯ ಜನಪ್ರಿಯತೆಗೆ ಕಾರಣ.
ಕರ್ನಾಟಕದ ಸಂದರ್ಭದಲ್ಲಿ ದೇವರಾಜ ಅರಸು ಅವರನ್ನು ಬಿಟ್ಟರೆ ಅತಿ ದೀರ್ಘಕಾಲದವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿಕೊಟ್ಟವರು ಮಾನ್ಯ ಸಿದ್ದರಾಮಯ್ಯನವರೇ. ಈಗ ಅರಸು ಅವರ ಅವಧಿಯನ್ನು ಮೀರಿಸಿ ಅವರು ಆಡಳಿತ ನಡೆಸುತ್ತಿರುವುದು ಕರ್ನಾಟಕದ ಮಟ್ಟಿಗೆ ಬಹುದೊಡ್ಡ ದಾಖಲೆಯೇ ಸೈ. ಈ ದಾಖಲೆ ಸುಖಾಸುಮ್ಮನೆ ಬರುವುದಲ್ಲ. ಸಾಧನೆ ಮತ್ತು ಜನಪ್ರಿಯತೆಯ ಪರಿಣಾಮದಲ್ಲಿ ಸಾಧಿತವಾಗುವುದು.
ಸಿದ್ದರಾಮಯ್ಯನವರ ಭಾಗ್ಯ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆಗಳು ಅವರ ಜನಪ್ರಿಯತೆಗೆ ಕಾರಣವಷ್ಟೇ ಅಲ್ಲ ಅವರ ಜನಪರ ಕಾಳಜಿಯ ಆಡಳಿತಾತ್ಮಕ ಸಾಧನೆ ಆಗಿರುವುದು ಮುಖ್ಯವಾದ ವಿಚಾರ. ಕರ್ನಾಟಕ ಸರ್ಕಾರಕ್ಕೆ ಆದರದ್ದೇ ಆದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದ್ದು ಅವರ ಕನ್ನಡ ಪರ ಧೋರಣೆಗೆ ಬಹುದೊಡ್ಡ ಉದಾಹರಣೆಯಾಗಿದೆ. ಅಲ್ಲದೇ ಬಸವಣ್ಣವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಆದೇಶ ಮಾಡಿರುವುದು ಅವರ ತಾತ್ವಿಕ ಬದ್ಧತೆಯ ದ್ಯೋತಕವಾಗಿದೆ.
ಕನ್ನಡ ನಾಡಿನ ಪ್ರಜ್ಞಾವಂತ ಸಾಹಿತಿಗಳನ್ನು, ಕಲಾವಿದರನ್ನು ಆಪ್ತತೆಯಿಂದ ಕಂಡು ಅವರ ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ತೆಗೆದುಕೊಳ್ಳುವ ಮನೋಭಾವ ಸಿದ್ದರಾಮಯ್ಯನವರದು. ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ, ಡಾ. ಯು. ಆರ್. ಅನಂತಮೂರ್ತಿ ಮತ್ತು ದೇವನೂರು ಮಹಾದೇವ ಅವರ ಮನೆಗೆ ಹೋಗಿದ್ದು ಅವರ ವೈಚಾರಿಕ ಮನೋಧರ್ಮದ ನಡವಳಿಕೆಗೆ ಸಾಕ್ಷಿಯಾಗಿದೆ.
ಸಿದ್ದರಾಮಯ್ಯನವರ ರಾಜಕೀಯ ಇಚ್ಚಾಶಕ್ತಿ ಬಡವರ, ವಂಚಿತರ, ಮಹಿಳೆಯರ, ದೀನ- ದಲಿತರ ಪರವಾಗಿ ಬದ್ಧವಾಗಿದೆ ಎಂಬುದನ್ನು ಅವರ ಆಡಳಿತದ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದ್ದೇವೆ. ಶಕ್ತಿ ಯೋಜನೆಯಿಂದ ರಾಜ್ಯದ ಆರ್ಥಿಕತೆಯು ಸುಧಾರಿಸುತ್ತಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ವಹಿವಾಟುಗಳು ಹೆಚ್ಚಾಗಿವೆ. ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಆರ್ಥಿಕತೆಗೆ ಅನುಕೂಲವಾಗಿದೆ.
ವಿದ್ಯಾರ್ಥಿನಿಯರ ಬೆನ್ನಿಗೊಂದು ರೆಕ್ಕೆ ಕಟ್ಟಿದೆ ಶಕ್ತಿ ಯೋಜನೆ. ಕೆಲವರಿಗೆ ಬಾಲ್ಯ ವಿವಾಹಕ್ಕೆ ಇಲ್ಲವೇ ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯ ಪರಿಸ್ಥಿತಿ ಇತ್ತು. ಈಗ ಅಂತಹವರು ಹೊಸ ಭರವಸೆ ತುಂಬಿಕೊಂಡು ಶಾಲಾ-ಕಾಲೇಜಿಗೆ ಹೋಗುತ್ತಿದ್ದಾರೆ. ಪಂಜರದಿಂದ ಹಾರಿಬಿಟ್ಟ ಹಕ್ಕಿಗಳಂತೆ ಶಾಲೆ/ಕಾಲೇಜು ಎಷ್ಟೇ ದೂರವಿರಲಿ ಶಕ್ತಿ ಯೋಜನೆಯ ಲಾಭ ಪಡೆದು ಉಚಿತವಾಗಿ ಹೋಗಿ ಬರುತ್ತಿದ್ದಾರೆ.
ಮಹಿಳೆಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಋತುಚಕ್ರ ರಜೆಯನ್ನು ಘೋಷಿಸಿದೆ. ಇದೊಂದು ಐತಿಹಾಸಿಕ ಮಹತ್ವದ ಹೆಜ್ಜೆಯಾಗಿದೆ. ಅಲ್ಲದೇ ಕಳೆದ ಬಜೆಟ್ ನಲ್ಲಿ ರಾಜ್ಯ ಸರ್ಕಾರ 20 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾಮೊಗ್ರಫಿ ಯಂತ್ರಗಳು ಮತ್ತು ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಲ್ಪೋಸ್ಕೋಪಿ ಉಪಕರಣಗಳ ಖರೀದಿಗೆ 21 ಕೋಟಿ ರೂಪಾಯಿಗಳನ್ನು ನೀಡಿದ್ದು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸಮಾಧಾನ ಮೂಡಿಸಿದೆ. ಕ್ಯಾನ್ಸರ್ ವಿರುದ್ಧ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಇದು ಕ್ಯಾನ್ಸರಿನಿಂದ ಬಳಲುತ್ತಿರುವ ಮಹಿಳೆಯರ ಆತಂಕವನ್ನು ದೂರ ಮಾಡಿದೆ. ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಸಂಶೋಧನೆಗಳು ಮತ್ತು ಬೆಳವಣಿಗೆಗಳು ಆಗಿದ್ದರೂ ಅವು ಜನಸಾಮಾನ್ಯರನ್ನು ತಲುಪುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರವು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಪ್ರಯೋಗಾಲಯಗಳ ಸ್ಥಾಪನೆಗೆ ಮುಂದಾಗಿರುವುದು ಮುಖ್ಯಮಂತ್ರಿಗಳ ಮತ್ತು ಸರ್ಕಾರ ಜನರ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ.
ಕ್ಯಾನ್ಸರ್ ರೋಗಿಗಳು ತಮ್ಮ ಸ್ಥಳದಿಂದ ದೂರದ ರಾಜಧಾನಿ ಬೆಂಗಳೂರಿಗೆ ಬಂದು ವಿವಿಧ ಆಸ್ಪತ್ರೆಗಳಿಗೆ ಎಡತಾಕಿ ಚಿಕಿತ್ಸೆ ಪೂರ್ಣಗೊಳಿಸಲು ಆಸ್ತಿ ಮಾರುವ ಸ್ಥಿತಿಯಿದೆ. ಜೀವ ಉಳಿಸಿಕೊಳ್ಳಲು ಸಾಲದ ಕುಣಿಕೆಯಲ್ಲಿ ಜಾರುತ್ತಿರುವ ಕುಟುಂಬಗಳ ಸಂಖ್ಯೆಯು ಹೆಚ್ಚಾಗಿದೆ. ಇದನ್ನು ಮನಗಂಡು ಕ್ಯಾನ್ಸರ್ ಚಿಕಿತ್ಸೆ ಸುಲಭವಾಗುವಂತೆ ಪ್ರತಿ ಜಿಲ್ಲೆಯಲ್ಲಿ ಒಂದು ಡೇ ಕೇರ್ ಕೀಮೋಥೆರಪಿ ಕೇಂದ್ರ ಸ್ಥಾಪನೆಗೆ ಸರ್ಕಾರ ಇಪ್ಪತ್ತು ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಇದು ಕ್ಯಾನ್ಸರಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಆಶಾದಾಯಕ ಭಾವನೆ ಹುಟ್ಟಿಸಿದೆ. ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಏಳು ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಕಟ್ಟಡ ಆರಂಭಿಸಲು ಹಲವು ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿರಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಲಸಾಮಾನ್ಯರ ಆರೋಗ್ಯ ರಕ್ಷಣೆಗೆ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಮುಂದಾಗಿ ಅದಕ್ಕಾಗಿ ರೂ.221 ಕೊಟ್ಟಿರುವ ವಹಿಸಲು ಮುಂದಾಗಿರುವುದು ಶ್ಲಾಘನೀಯ. ಇವೆಲ್ಲವೂ ಸಿದ್ದರಾಮಯ್ಯನವರಿಗೆ ಜನಾರೋಗ್ಯದ ಬಗೆಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ಮರ್ಯಾದೆಗೇಡು ಹತ್ಯೆ ವಿರೋಧಿ ಕಾನೂನು ತರಲು ಮುಂದಾಗಿರುವುದು ಅವರ ಸಾಮಾಜಿಕ ಬದ್ಧತೆಯನ್ನು ಸಾರುತ್ತದೆ. ಮೌಢ್ಯ ಇಂದಿಗೂ ದೂರವಾಗಿಲ್ಲ. ಇತ್ತೀಚೆಗೆ ಹುಬ್ಬಳ್ಳಿಯ ಬಳಿಯ ಹಳ್ಳಿಯೊಂದರಲ್ಲಿ ಗರ್ಭಿಣಿ ಮಗಳನ್ನು ಹೆತ್ತ ತಂದೆಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಗಳು ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದೇ ಈ ಕೃತ್ಯಕ್ಕೆ ಕಾರಣ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಘಟನೆ ಮರುಕಳಿಸಬಾರದು ಮತ್ತು ಅಂತರ್ಜಾತಿ ವಿವಾಹಿತರಿಗೆ ಕಾನೂನಿನ ರಕ್ಷಣೆ ಅವಶ್ಯಕತೆಯನ್ನು ಮನಗಂಡು ಮಾನ್ಯ ಸಿದ್ದರಾಮಯ್ಯನವರು ಮರ್ಯಾದೆಗೇಡು ಹತ್ಯೆ ವಿರೋಧಿ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದಾರೆ.
ನನಗೆ, ಬಂಜಗೆರೆ ಜಯಪ್ರಕಾಶ್, ಕುಂ. ವೀರಭದ್ರಪ್ಪ ಮತ್ತು ಬಿ.ಟಿ. ಲಲಿತಾನಾಯಕ್ ಅವರಿಗೆ ಜೀವ ಬೆದರಿಕೆ ಪತ್ರಗಳು ಬಂದಾಗ ನಾವು ಅವರನ್ನು ಭೇಟಿಯಾಗಿ ಈ ವಿಷಯ ತಿಳಿಸಿದಾಗ ಅವರು ತಕ್ಷಣ ಸ್ಪಂದಿಸಿದರು. ಈ ಕೃತ್ಯ ಭೇದಿಸಲು ಪೊಲೀಸ್ ಇಲಾಖೆಯಲ್ಲಿ ಕಮಿಟಿಯೊಂದನ್ನು ರಚಿಸಿದರು. ಕಮಿಟಿ ತಕ್ಷಣ ಕಾರ್ಯೋನ್ಮುಖವಾಗಿ ಅನಾಮಧೇಯ ಮುಖೇಡಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಪುಸ್ತಕ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ತಕ್ಷಣ ತಮ್ಮನ್ನು ಕಾಣಬಯಸುವರಿಗೆ ಹೂಗುಚ್ಛವನ್ನು ತರುವ ಬದಲು ಪುಸ್ತಕ ಕೊಡುಗೆ ನೀಡಬೇಕೆಂದು ಆದೇಶಿಸಿದರು. ಅಲ್ಲದೇ ಕಳೆದ ಸಾಲಿನ ಬಜೆಟ್ಟಿನಲ್ಲಿ ಪುಸ್ತಕ ಖರೀದಿಗೆ 10 ಕೋಟಿ ರೂಪಾಯಿಗಳನ್ನು ಘೋಷಿಸಿದರು.
ಇದನ್ನೂ ಓದಿ ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ
ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯನವರು ಮಹಿಳಾ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ತಡೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಿದ್ದರು. ಉಗ್ರಪ್ಪನವರ ನೇತೃತ್ವದ ಸಮಿತಿಯ ಸದಸ್ಯರನ್ನಾಗಿ ನನ್ನನ್ನೂ ಸೇರಿದಂತೆ ಎ. ಜ್ಯೋತಿ, ಕೆ.ಎಸ್.ವಿಮಲಾ, ಗೌರಿ ಲಂಕೇಶ್, ಲೀಲಾ ಸಂಪಿಗೆ, ಎನ್. ಪ್ರಭಾ ಹೀಗೆ ಅನೇಕ ಮಹಿಳಾ ಹೋರಾಟಗಾರ್ತಿಯರನ್ನು ನೇಮಿಸಿದ್ದರು. ನಾವು ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ಸಾವಿರಾರು ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದ್ದೇವೆ. ಆ ವರದಿಯನ್ನು ಜಾರಿಗೆ ತಂದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ.
ಸಿದ್ದರಾಮಯ್ಯನವರು ಶಾಸಕರಾಗಿ, ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ, ಸಚಿವರಾಗಿ, ಅರ್ಥ ಸಚಿವರಾಗಿ, ಉಪ ಮುಖ್ಯಮಂತ್ರಿಗಳಾಗಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಮುಖ್ಯಮಂತ್ರಿಗಾಳಾಗಿ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಎಲ್ಲಾ ಹುದ್ದೆಗಳಲ್ಲಿ ಹೆಚ್ಚು ಸಮಾಜಮುಖಿಯಾಗಿ ನಡೆದಿದ್ದಾರೆ ಎಂಬುದೇ ಅವರ ವ್ಯಕ್ತಿತ್ವದ ವಿಶೇಷತೆ. ಕರ್ನಾಟಕ ಎಂದೂ ಮರೆಯಬಾರದ ಮತ್ತು ಮರೆಯಲಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

ಡಾ ವಸುಂಧರಾ ಭೂಪತಿ
ವೈದ್ಯೆ, ಹಿರಿಯ ಲೇಖಕಿ




