ಸಿದ್ದು-ಡಿಕೆ ಬ್ರೇಕ್‌ ಫಾಸ್ಟ್‌ | ಇದು ಬರಿ ಟ್ರೈಲರ್, ಪಿಕ್ಚರ್ ಅಭಿ ಬಾಕೀ ಹೈ!

Date:

ಸದ್ಯಕ್ಕೆ ಡಿ ಕೆ ಶಿವಕುಮಾರ್‌ ಸಚಿವ ಸಂಪುಟ ಪುನಾರಚನೆಗೆ ತಡೆಯೊಡ್ಡುವಲ್ಲಿ ಯಶಸ್ವಿಯಾದಂತೆ ಕಾಣುತ್ತಿದೆ. ಸಂಕ್ರಾಂತಿ ಹೊತ್ತಿಗೆ ರಾಜ್ಯದಲ್ಲಿ ಹೆಚ್ಚು ಅವಧಿಗೆ ಸಿಎಂ ಆದ ಪಟ್ಟವೂ ಸಿದ್ದರಾಮಯ್ಯ ಅವರಿಗೆ ಲಭಿಸಲಿದೆ. ಸಿದ್ದು-ಡಿಕೆ ಬ್ರೇಕ್‌ ಫಾಸ್ಟ್‌ನೊಳಗೆ ಅಡಗಿದೆ ಇನ್ನೂ ಸಾಕಷ್ಟು ಕೌತುಕ.

ಬಿಹಾರ ಫಲಿತಾಂಶ ಬಳಿಕ ಇಡೀ ದೇಶದ ರಾಜಕೀಯ ಆಸಕ್ತರ ಕಣ್ಣು ನೆಟ್ಟಿರುವುದು ಕರ್ನಾಟಕದ ಮೇಲೆ. ಅದರಲ್ಲೂ ಕಾಂಗ್ರೆಸ್‌ನ ಜೋಡೆತ್ತುಗಳ ಸ್ಪರ್ಧೆ ಮೇಲೆಯೇ ಎಲ್ಲರ ಕುತೂಹಲವಿದೆ. ‘ನಾಯಕತ್ವ ಬದಲಾವಣೆ’ಯೊಂದಿಗೆ ಹುಟ್ಟಿಕೊಂಡ ಕಾಂಗ್ರೆಸ್‌ನೊಳಗಿನ ‘ನವೆಂಬರ್‌ ಕ್ರಾಂತಿ’ ಏಕಾಏಕಿ ತುರುಸು ಪಡೆದು, ಪಕ್ಷದ ನೊಗಕ್ಕೆ ಕಟ್ಟಿದ ಜೋಡೆತ್ತುಗಳು ಇನ್ನೇನು ಕೊಳ್ಳು ಹರಿಯುತ್ತವೆ ಎನ್ನುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಹೈಕಮಾಂಡ್‌, ಕೈತಪ್ಪಿ ಹೋಗುತ್ತಿದ್ದ ಎರಡು ಎತ್ತುಗಳ ಮೂಗುದಾರವನ್ನು ಬಿಗಿಹಿಡಿದು ಮತ್ತೆ ರಾಜಕಾರಣದ ಓಟದ ಲಯಕ್ಕೆ ತಂದಿದೆ. ಅದರ ಫಲವೇ ಇಂದಿನ ‘ಬ್ರೇಕ್‌ ಫಾಸ್ಟ್‌’ ಮತ್ತು ಆ ಮೂಲಕ ಹೊರಹೊಮ್ಮಿದ ಬಿಗ್ ಬ್ರೇಕಿಂಗ್‌ ನ್ಯೂಸ್‌.

ಹೌದು, ‘ಇಬ್ಬರೂ ಒಟ್ಟಿಗೆ ಸಾಗುವುದೇ ನಮ್ಮ ನಡುವೆ ಆಗಿರುವ ಒಪ್ಪಂದ. ಪಕ್ಷದ ವರಿಷ್ಠರು ಸೂಚಿಸಿದಂತೆ ಈಗಲೂ ಮತ್ತು ಮುಂದೆಯೂ ನಡೆದುಕೊಳ್ಳುತ್ತೇವೆ. ಹೈಕಮಾಂಡ್‌ನ ಯಾವುದೇ ತೀರ್ಮಾನಕ್ಕೆ ಇಬ್ಬರೂ ಬದ್ಧರಾಗಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಒಟ್ಟಿಗೆ ಸುದ್ದಿಗೋಷ್ಠಿಯಲ್ಲಿ ಸಾರಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗೊಂದಲಕ್ಕೂ ತೆರೆ ಎಳೆದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕವನ್ನೇ ‘ನವೆಂಬರ್‌ ಕ್ರಾಂತಿ’ ಎಂದು ಬಣ್ಣಿಸಲಾಗಿತ್ತು. ಮಾಧ್ಯಮಗಳು ಕೂಡ ಹೆಚ್ಚು ಕಡಿಮೆ ಒಂದೂವರೆ ತಿಂಗಳಿಂದ ನವೆಂಬರ್‌ ಕ್ರಾಂತಿ ಬಗ್ಗೆ ವಾಂತಿ ಮಾಡಿದ್ದೇ ಹೆಚ್ಚು! ಬಿಹಾರ ಫಲಿತಾಂಶ ಪ್ರಕಟವಾದ ಮರು ದಿನ ಅಂದರೆ ನ.15ರಂದು ಸಿಎಂ ಸಿದ್ದರಾಮಯ್ಯ ಏಕಾಏಕಿ ರಾಹುಲ್‌ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ಕ್ಲೋಸ್‌ ಡೋರ್‌ ಮೀಟಿಂಗ್‌ ನಡೆಸಿದರೋ ಆ ಕ್ಷಣದಿಂದ ನವೆಂಬರ್‌ ಕ್ರಾಂತಿ ಕಿಚ್ಚು ಮತ್ತಷ್ಟು ಹೆಚ್ಚಿತು. ಸಚಿವ ಸಂಪುಟ ಪುನಾರಚನೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎನ್ನುವ ವಿಚಾರ ಎಲ್ಲಡೇ ಕ್ಷಣಾರ್ಧದಲ್ಲಿ ಹಬ್ಬಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಿ.ಕೆ ಶಿವಕುಮಾರ್‌ ಮತ್ತು ಡಿ.ಕೆ ಸುರೇಶ್‌ ಅಂದೇ ದೆಹಲಿಗೆ ಹೊರಟು ಬಂದರು. ಆದರೆ, ಹೈಕಮಾಂಡ್‌ ನಾಯಕರು ಡಿ.ಕೆ ಶಿವಕುಮಾರ್‌ ಭೇಟಿಗೆ ಅವಕಾಶವೇ ಕೊಡಲಿಲ್ಲ. ಎರಡು ದಿನ ದೆಹಲಿಯಲ್ಲಿದ್ದು, ‘ಬಂದ ದಾರಿಗೆ ಸುಂಕವಿಲ್ಲ’ ಎಂದುಕೊಂಡು ಕದಡಿದ ಮನಸ್ಸಿನೊಂದಿಗೆ ಬೆಂಗಳೂರಿಗೆ ಆಗಮಿಸಿದರು. ನಂತರ ಶುರುವಾಯಿತು ನೋಡಿ ಹೊಸ ರಾಜಕೀಯ ಲೆಕ್ಕಾಚಾರದ ಆಟ.

Siddaramaiah 1 8

ನ.20ರಂದು ಸಿದ್ದರಾಮಯ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದ ದಿನವೇ ಡಿ.ಕೆ ಶಿವಕುಮಾರ್‌ ಬಣದಲ್ಲಿ ಗುರುತಿಸಿಕೊಂಡ ಬೆರಳೆಣಿಕೆಯಷ್ಟು ನಾಯಕರು ದೆಹಲಿಗೆ ದೌಡಾಯಿಸಿ, ಡಿ.ಕೆ ಪರ ಬ್ಯಾಟ್‌ ಬೀಸಿದರು. ಈ ಬೆಳವಣಿಗೆಗೆ ಅಷ್ಟು ಶಕ್ತಿ ಸಿಗಲಿಲ್ಲ. ನಂತರ ಒಕ್ಕಲಿಗ ಸ್ವಾಮೀಜಿಗಳು ಮತ್ತು ಒಕ್ಕಲಿಗರ ಸಂಘ ಮುಂದೆ ಬಂದು, ಪಕ್ಷಕ್ಕೆ ದುಡಿದ ಡಿ.ಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಸಿಗಬೇಕು ಎಂದು ಬಹಿರಂಗವಾಗಿ ಘೋಷಿಸಿತು.

ಡಿ.ಕೆ ಶಿವಕುಮಾರ್‌ ಹೊಸ ತಂತ್ರವೋ ಗೊತ್ತಿಲ್ಲ. ಅವರ ಸಾಮಾಜಿಕ ಜಾಲತಾಣದಲ್ಲಿ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ’ ಎನ್ನುವ ಪೋಸ್ಟರ್‌ವೊಂದು ಕಾಣಿಸಿತು. ಇದು ಪರೋಕ್ಷವಾಗಿ ‘ಸಿದ್ದರಾಮಯ್ಯ ಮಾತುಕೊಟ್ಟಿದ್ದಾರೆ, ಅವರು ಮಾತು ಉಳಿಸಿಕೊಳ್ಳಲಿ’ ಎಂಬಂತಿತ್ತು. ಸಿದ್ದರಾಮಯ್ಯ ಸಹ ಇದನ್ನು ನೋಡಿಕೊಂಡು ಸುಮ್ಮನೇ ಕೂರಲಿಲ್ಲ. ಡಿ.ಕೆ ಶಿವಕುಮಾರ್‌ಗೆ ನೇರಾನೇರ ಕೌಂಟರ್‌ ಕೊಟ್ಟು, “ನಮ್ಮ ಸುತ್ತಮುತ್ತಲ ಜಗತ್ತನ್ನು ಜನರ ಪಾಲಿಗೆ ಉತ್ತಮಗೊಳಿಸದೇ ಹೋದರೆ ನುಡಿಯೊಂದು ಅಧಿಕಾರ ಎನಿಸಿಕೊಳ್ಳಲಾಗದು.‌ ಕರ್ನಾಟಕಕ್ಕೆ ನಾವು ನೀಡಿರುವ ವಾಗ್ದಾನವು ಕೇವಲ ಘೋಷಣೆಯಲ್ಲ, ಅದು ನಮ್ಮ ಪಾಲಿಗೆ ಸರ್ವಸ್ವವೂ ಆಗಿದೆ” ಎಂದು ಕಾಲೆಳೆದರು.

ಅಲ್ಲಿಗೆ ಅಷ್ಟು ದಿನಗಳ ಕಾಲ ಘನತೆಯಿಂದ ನಡೆದುಕೊಂಡು ಬಂದಿದ್ದ ಇಬ್ಬರು ನಾಯಕರು ಉದ್ದೇಶಪೂರ್ಕವಾಗಿಯೇ ತಮ್ಮ ಘನತೆ ಮರೆತು ಸಾಮಾಜಿಕ ಜಾಲತಾಣದಲ್ಲಿ ಸಮರಕ್ಕೆ ಇಳಿದು, ಸಿಎಂ ಕುರ್ಚಿ ಜಗಳವನ್ನು ಬೀದಿಗೆ ತಂದರು. ಜನರು ನಿರೀಕ್ಷಿಸದ ಬೆಳವಣಿಗೆಯೊಂದು ಇಬ್ಬರಿಂದಲೂ ಘಟಿಸಿತು. ಹಾದಿಬೀದಿಯಲ್ಲಿ ಜನ ಮಾತನಾಡಲು ಆರಂಭಿಸಿದರು. ಬಿಜೆಪಿಯವರು ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರ ಬಿದ್ದರೆ ತಾವೂ ಸರ್ಕಾರ ರಚನೆಗೆ ಸಿದ್ಧರಿದ್ದೇವೆ ಎನ್ನುವ ಮಾತನ್ನು ಡಿ.ವಿ ಸದಾನಂದಗೌಡ ಹೇಳಿಯೇ ಬಿಟ್ಟರು.

ಒಂದು ಕಾಲದಲ್ಲಿ ದೇಶಕ್ಕೆ ಚಕ್ರಾಧಿಪತಿ ಎಂಬಂತೆ ಮೆರೆದ ಕಾಂಗ್ರೆಸ್‌ ಈಗ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರ ಸ್ಥಾನದಲ್ಲಿದೆ. ಇದಕ್ಕೆ ಕಾಂಗ್ರೆಸ್‌ನ ಸ್ವಯಂಕೃತ ಅಪರಾಧವೂ ಸೇರಿದಂತೆ ಮೋದಿ ಅವಧಿಯ ಚುನಾವಣೆ ವ್ಯವಸ್ಥೆ ಸುತ್ತ ಕೇಳಿಬಂದಿರುವ ಮತಗಳ್ಳತನ ಎಂಬ ಗಂಭೀರ ಆರೋಪಗಳ ಅಡಿಯಲ್ಲಿ ಅನೇಕ ರಾಜ್ಯಗಳನ್ನು ಕಾಂಗ್ರೆಸ್‌ ಕಳೆದುಕೊಂಡಿರುವ ಬಗ್ಗೆ ರಾಹುಲ್‌ ಗಾಂಧಿ ಅವರೇ ದೊಡ್ಡ ಹೋರಾಟ ಕಟ್ಟುತ್ತಿದ್ದಾರೆ.

ದೇಶದಲ್ಲಿ ಎರಡನೇ ಅತಿ ದೊಡ್ಡ ಆರ್ಥಿಕ ಸಂಪನ್ಮೂಲ ರಾಜ್ಯವಾಗಿರುವ ಕರ್ನಾಟಕವನ್ನು ಯಾವುದೇ ಪಕ್ಷದ ಹೈಕಮಾಂಡ್‌ ಅಷ್ಟು ಸುಲಭವಾಗಿ ಕಡೆಗಣಿಸಿ ಮುನ್ನಡೆಯುತ್ತಾರಾ? ಸಾಧ್ಯವೇ ಇಲ್ಲ. ಕಾಂಗ್ರೆಸ್‌ ಕೂಡ ಉಳಿದ ಮೂರು ರಾಜ್ಯಗಳನ್ನಾದರೂ ಉಳಿಸಿಕೊಳ್ಳೋಣ ಎನ್ನುವ ಬಲವಾದ ತುಡಿತದಿಂದ ಹೈಕಮಾಂಡ್‌ ರಾಜ್ಯದಲ್ಲಿ ಬಿಗಡಾಯಿಸಿದ್ದ ಗದ್ದುಗೆ ಗೊಂದಲಕ್ಕೆ ಮದ್ದು ಅರೆದಿದೆ. ಪೋಸ್ಟರ್‌ ಕದನಕ್ಕೆ ಕೂಡಲೇ ಬ್ರೇಕ್‌ ಹಾಕಿದ ಹೈಕಮಾಂಡ್‌, ಇಬ್ಬರು ನಾಯಕರ ನಡುವೆ ಬ್ರೇಕ್‌ ಫಾಸ್ಟ್‌ ಸಭೆ ಆಯೋಜಿಸಿ, ಎಲ್ಲದಕ್ಕೂ ಬ್ರೇಕ್‌ ಹಾಕಿದೆ. ಹೈಕಮಾಂಡ್‌ ನಡೆ ನಿಜಕ್ಕೂ ಶ್ಲಾಘನೀಯವಾದುದು. ಯಾರಿಂದ ಸಮಸ್ಯೆ ಆರಂಭವಾಗಿತ್ತೋ ಅವರಿಂದಲೇ ಜಾಣತಣದಿಂದ ಸಮಸ್ಯೆಯನ್ನು ತಿಳಿಗೊಳಿಸಿದೆ.

ಬ್ರೇಕ್‌ ಫಾಸ್ಟ್‌ ಸಭೆ ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಜಂಟಿಯಾಗಿ ಸುದ್ದಿಗಾರರೊಂದಿಗೆ ಕೆಲವೇ ವಿಷಯ ಹಂಚಿಕೊಂಡರೂ ಅವರ ಒಟ್ಟಾರೆ ಮಾತುಗಳು ಬೇರೆಯದ್ದನ್ನೇ ಧ್ವನಿಸುತ್ತಿವೆ. “ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈ ಕಮಾಂಡಿಗೆ ಮಾಹಿತಿ ನೀಡಲಾಗುವುದು. ಕೆಲವು ಶಾಸಕರು ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿರಬಹುದು. ಹಾಗೆಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ” ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.

ಅತ್ತ ಡಿ.ಕೆ ಶಿವಕುಮಾರ್‌, “ನಾಯಕತ್ವ ವಿಚಾರದಲ್ಲಿ ನನ್ನದು ಹಾಗೂ ಸಿಎಂ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುಔು. ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಕಷ್ಟದ ಸಮಯದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಹತ್ತರ ಪಾತ್ರ ನಿರ್ವಹಿಸಲಿದೆ. ಇಷ್ಟು ದಿನ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಮುಂದೆಯೂ ಅದೇ ರೀತಿ ಕೆಲಸ ಮಾಡಲು ಅಚಲ ನಿರ್ಧಾರ ಕೈಗೊಂಡಿದ್ದೇವೆ. ಇಂದು ನಾನು ಹಾಗೂ ಸಿಎಂ ಅವರು ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದು, ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಭೋಜನಕೂಟಕ್ಕೆ ಬರಲಿದ್ದಾರೆ” ಎಂದು ಹೇಳಿದ್ದಾರೆ.

Siddaramaiah 2 3

ಇಷ್ಟು ದಿನ ನಡೆದ ‘ನವೆಂಬರ್‌ ಕ್ರಾಂತಿ’ ಆಟಕ್ಕೆ ಬ್ರೇಕ್‌ ಫಾಸ್ಟ್‌ ಸಭೆ ಮೂಲಕ ತೆರೆ ಬಿದ್ದಿದೆ. ಇನ್ಮುಂದೆ ಇದೆ ಅಸಲಿ ಆಟ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಇಷ್ಟು ದಿನಗಳ ಕಾಲ ನಾನೇ ಐದು ವರ್ಷ ಸಿಎಂ ಎಂದು ಎದೆಯುಬ್ಬಿಸಿಕೊಂಡು ಹೇಳುತ್ತಿದ್ದ ಸಿದ್ದರಾಮಯ್ಯ ಈಗ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ವರಸೆ ಬದಲಾಯಿಸಿದ್ದಾರೆ. ಅಧಿಕಾರ ಹಂಚಿಕೆ ಆಗಿದೆಯಾ ಎಂದು ಸುದ್ದಿಗಾರರು ಪಟ್ಟು ಹಿಡಿದು ಪ್ರಶ್ನಿಸಿದಾಗ, “ನಿಮಗೆಲ್ಲ ಉತ್ತರಿಸಲಾರೆ, ಅದು ಹೈಕಾಂಡ್‌ಗೆ ಬಿಟ್ಟ ವಿಚಾರ” ಎಂದಿದ್ದಾರೆ. ಇಂದಿನ ಬೆಳವಣಿಗೆ ನೋಡಿದರೆ ಸೌಹಾರ್ದಯುತವಾಗಿ ಡಿ.ಕೆ ಶಿವಕುಮಾರ್‌ ಅವರಿಗೆ ಸಿಎಂ ಕುರ್ಚಿ ಬಿಟ್ಟುಕೊಡಬಹುದು ಎನ್ನುವ ಮಾತುಗಳೇ ಹೆಚ್ಚು ಕೇಳಿಬರುತ್ತಿವೆ. ಆದರೆ, ಯಾವಾಗ ಎಂಬುದು ಸದ್ಯದ ಪ್ರಶ್ನೆ.

ಸಿಎಂ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ, “ಸಿಎಂ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಮುರಿದು ದಾಖಲೆ ಸೃಷ್ಟಿಸುವ ತವಕದಲ್ಲಿದ್ದಂತೆ ಕಾಣುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆಗಿದ್ದ ಹೆಗ್ಗಳಿಕೆ ದೇವರಾಜ ಅರಸು ಹೆಸರಿನಲ್ಲಿದೆ. ಅರಸು ಅವರು ಬೇರೆ ಬೇರೆ ಅವಧಿಯಲ್ಲಿ 7 ವರ್ಷ 7 ತಿಂಗಳು ರಾಜ್ಯದ ಸಿಎಂ ಆಗಿದ್ದರು. ಈಗ ಸಿದ್ದರಾಮಯ್ಯ ಏಳು ವರ್ಷ ಐದು ತಿಂಗಳು ಪೂರ್ಣಗೊಳಿಸಿದ್ದಾರೆ. 2026 ಜನವರಿ 5 ತಲುಪಿದರೆ ಅರಸು ಅವರನ್ನು ಸಿದ್ದರಾಮಯ್ಯ ಹಿಂದಿಕ್ಕುತ್ತಾರೆ. ಬಳಿಕ ಬಜೆಟ್‌ ಮಂಡಿಸಿ ಸಿಎಂ ಕುರ್ಚಿಯಿಂದ ಇಳಿಯಬಹುದು” ಎನ್ನುತ್ತಾರೆ.

ಈ ಮಾಹಿತಿ ನೂರಕ್ಕೆ ನೂರರಷ್ಟು ಖಚಿತವಿಲ್ಲ. ಆದರೆ, ಡಿ.ಕೆ ಶಿವಕುಮಾ‌ರ್‌ ಮತ್ತು ಸಿದ್ದರಾಮಯ್ಯ ನಡುವೆ ಅಧಿಕಾರ ಒಪ್ಪಂದ ನಡೆದಿದೆ ಎನ್ನುತ್ತವೆ ಮೂಲಗಳು. ಅದು 3+2 ಫಾರ್ಮೂಲಾ ಅಡಿ (3 ವರ್ಷ ಸಿದ್ದರಾಮಯ್ಯ ಮತ್ತು 2 ವರ್ಷ ಡಿ.ಕೆ ಶಿವಕುಮಾರ್) ಅಧಿಕಾರ ಹಂಚಿಕೆ ಆಗಿರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುವವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ ಶಿವಕುಮಾರ್‌ ಅವರೇ ಮುಂದುವರಿಯುವುದು. ಸಿಎಂ ಸ್ಥಾನಕ್ಕೆ ಡಿ.ಕೆ ಬರುತ್ತಾರೆ ಎಂದಾದರೆ ಕನಿಷ್ಠ 3ರಿಂದ 5 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದು. ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಹೊಸಬರನ್ನು ನೇಮಿಸುವುದು. ಇಲ್ಲ ಕೊನೆಯ ಒಂದು ವರ್ಷ ಡಿ.ಕೆ ಶಿವಕುಮಾರ್‌ಗೆ ಸಿಎಂ ಗದ್ದುಗೆ ಬಿಟ್ಟುಕೊಟ್ಟು 2028ರ ಚುನಾವಣೆಯ ಸಿಎಂ ಅಭ್ಯರ್ಥಿಯಾಗಿ ಡಿ.ಕೆ ಶಿವಕುಮಾರ್‌ ಅವರನ್ನು ಮುನ್ನೆಲೆಗೆ ತರುವುದು.

ಇನ್ಮುಂದೆ ಸಿದ್ದು ಬಣದ ನಾಯಕರು ಮತ್ತು ಡಿಕೆ ಬಣದ ನಾಯಕರು ಹೇಗೆ ನಡೆದುಕೊಳ್ಳಲಿದ್ದಾರೆ ಎಂಬುದು ಸಹ ಯಕ್ಷಪ್ರಶ್ನೆಯಾಗಿದೆ. ಈಗಾಗಲೇ 2028ಕ್ಕೆ ಸಿಎಂ ಕುರ್ಚಿಗೆ ನಾನು ಫೈಟ್‌ ಮಾಡುವೆ ಎಂದು ಸಿದ್ದು ಆಪ್ತ ಸಚಿವ ಸತೀಶ್‌ ಜಾರಕಿಹೊಳಿ ಬೇರೆ ಹೇಳಿದ್ದಾರೆ. ದಲಿತ ಸಿಎಂ ಆಟ ಇನ್ನೂ ಚಾಲ್ತಿಯಲ್ಲಿದೆ. ಇದೆಲ್ಲವೂ ಕೂಡ ಮುಂದಿನ ಆಟವನ್ನು ಮತ್ತಷ್ಟು ರಂಗೇರಿಸಬಹುದು.

ಸಿದ್ದರಾಮಯ್ಯ ಅವರ ರಾಜಕೀಯ ಹೋರಾಟ ನೋಡಿ ಹೇಳುವುದಾದರೆ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅಷ್ಟು ಸುಲಭವಾಗಿ ಡಿ ಕೆ ಶಿವಕುಮಾರ್‌ ಅವರಿಗೆ ಸಿಎಂ ಕುರ್ಚಿ ಬಿಟ್ಟುಕೊಡುತ್ತಾರೆ ಅಂತ ಹೇಳಲಾಗದು. ಕಾಂಗ್ರೆಸ್‌ನೊಳಗೆ ಮುಂದಿನ ತಮ್ಮ ಸ್ಥಾನ ಏನು ಎನ್ನುವುದು ಖಚಿತವಾಗುವವರೆಗೂ ಅಧಿಕಾರದಿಂದ ಸಿಎಂ ಕೆಳಗೆ ಇಳಿಯುವ ಮಾತೇ ಇಲ್ಲ ಎನ್ನುತ್ತಾರೆ ಸಿಎಂ ಆಪ್ತರು.

ಡಿಸೆಂಬರ್‌ 8ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಡಿ ಕೆ ಶಿವಕುಮಾರ್‌ ತಕ್ಷಣಕ್ಕೆ ಸಚಿವ ಸಂಪುಟ ಪುನಾರಚನೆಗೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂಕ್ರಾಂತಿ ಹೊತ್ತಿಗೆ ಮತ್ತೆ ಈ ಬೆಳವಣಿಗೆಗಳು ಮುನ್ನೆಲೆಗೆ ಬರಬಹುದು. ಅಷ್ಟೊತ್ತಿಗೆ ರಾಜ್ಯದಲ್ಲಿ ಹೆಚ್ಚು ಅವಧಿಗೆ ಸಿಎಂ ಆದ ಪಟ್ಟವೂ ಸಿದ್ದರಾಮಯ್ಯ ಅವರಿಗೆ ಲಭಿಸಲಿದೆ. ರಾಜಕೀಯದಲ್ಲಿ ಮುಂದಿನ ಬೆಳವಣಿಗೆಗಳು ಹೀಗೆ ಅಂತ ಹೇಳಲು ಸಾಧ್ಯವಿಲ್ಲ. ಕಾದು ನೋಡಬೇಕಿದೆ ಸಿದ್ದು-ಡಿಕೆ ಬ್ರೇಕ್‌ ಫಾಸ್ಟ್‌ ನಡುವಿನ ಕೌತುಕವನ್ನು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...