ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ರಾಜಕೀಯ ಎದುರಾಳಿಗಳಷ್ಟೇ ಅಲ್ಲ, ಕಳೆದ 50-60 ವರ್ಷಗಳಿಂದ ರಕ್ಷಿಸಿಕೊಂಡು ಬಂದಿರುವ ಸಂವಿಧಾನ, ಜನತಂತ್ರ, ಬಹುತ್ವ, ಸೌಹಾರ್ದತೆ ಮತ್ತು ಸಾಮರಸ್ಯಗಳ ದೊಡ್ಡ ಶತ್ರುವಾಗಿವೆ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳದಿರುವುದು ದುರಂತ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಸಂಘಿಗಳಿಗೆ ಸಿಂಹಸ್ವಪ್ನವೆಂದರೆ ಸಿದ್ಧರಾಮಯ್ಯ, ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ತರಹದ ಬೆರಳೆಣಿಕೆಯ ಜನ ಮಾತ್ರ.
ರಾಜಕೀಯದಲ್ಲಿ ಸೈದ್ಧಾಂತಿಕ ಬದ್ಧತೆ ಕಾಣೆಯಾಗಿ ಬಹಳ ವರ್ಷಗಳೇ ಗತಿಸಿವೆ. ಕೆಟ್ಟದ್ದನ್ನು ವಿರೋಧಿಸಲು ಅದಕ್ಕಿಂತ ಕೆಟ್ಟದನ್ನು ಜೊತೆಯಲ್ಲಿ ಸೇರಿಸಿಕೊಳ್ಳಬೇಕು ಎನ್ನುವ ಅನುಕೂಲಸಿಂಧು ಹಾಗೂ ಅಪಾಯಕಾರಿ ನಿಲುವು ಎಪ್ಪತ್ತು-ಎಂಬತ್ತರ ದಶಕದಲ್ಲಿ ದೇಶದ ರಾಜಕೀಯ ಕ್ಷೇತ್ರ ಪ್ರವೇಶಿಸಿದೆ. ಇಂದಿರಾರ ರಾಜಕೀಯ ಸರ್ವಾಧಿಕಾರವನ್ನು ವಿರೋಧಿಸಲು ಈ ನೆಲದ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಎಲ್ಲಾ ಬಗೆಯ ಅಂತಃಪ್ರಜ್ಞೆಗೆ ಅಪಾಯಕಾರಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಜೊತೆಯಲ್ಲಿ ಸೇರಿಸಿಕೊಂಡು ಅದನ್ನು ಸಮರ್ಥಿಸಿಕೊಂಡ ಜಯಪ್ರಕಾಶ್ ನಾರಾಯಣ್ ಅವರ ಅವಸರದ ನಿಲುವು, ದೇಶ ಇಂದು ಬಂದು ತಲುಪಿರುವ ಅಧಃಪತನಕ್ಕೆ ಮೂಲ ಕಾರಣವಾಗಿದೆ. ಅನೇಕ ವೇಳೆ ಹಾದಿ ಬಿಟ್ಟು ನಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಅರ್ಥಪೂರ್ಣವಾದ ಐತಿಹಾಸಿಕ ಹಿನ್ನೆಲೆ ಇದೆ. ಅಂದಿನ ಕಾಂಗ್ರೆಸ್ಸಿಗರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿನ್ನೆಲೆ ಉಳ್ಳವರಾಗಿದ್ದರು. ಆದರೆ, ಇಂದಿನ ಕಾಂಗ್ರೆಸ್ಸಿಗರು ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕೀಯ ಮಾಡುತ್ತಿದ್ದು ಇವರಲ್ಲಿ ಯಾವುದೇ ಸೈದ್ಧಾಂತಿಕ ಬದ್ಧತೆ ಕಾಣುವುದಿಲ್ಲ. ಆ ಕಾರಣದಿಂದ ಇಂದು ಕಾಂಗ್ರೆಸ್ ಜನಮಾನಸದಿಂದ ಕಣ್ಮರೆಯಾಗುತ್ತಿದೆ. ಇಂದಿನ ಕಾಂಗ್ರೆಸ್ ಪಕ್ಷದ ಅಳಿದುಳಿದ ಅಸ್ತಿತ್ವವು ಬೇರೆ ಪರ್ಯಾಯಗಳಿಲ್ಲದೆ ಅದು ಕೇವಲ ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಒಂದಷ್ಟು ಸಂವೇದನಾಶೀಲ ಜನರ ಕಾರಣದಿಂದ ಉಳಿದಿದೆಯೇ ಹೊರತು ಅದರ ನಾಯಕತ್ವದಿಂದಲ್ಲ.
ಹಿಂದುತ್ವವಾದಿಗಳ ಗುಂಪು ಇಂದು ಅಫ್ಘಾನಿಸ್ತಾನದ ತಾಲಿಬಾನಿಗಳಂತೆ ವಿರಾಟವಾಗಿ ಹಾಗೂ ವಿಕೃತವಾಗಿ ಬೆಳೆದು ನಿಂತಿದೆ. ಹಾಗೆಂದು ಬಿಜೆಪಿಯ ಗೆಲುವು ನೆಹರು, ಇಂದಿರಾ, ರಾಜೀವರಂತೆ ಸ್ವಲ್ಪವಾದರೂ ನಿಷ್ಪಕ್ಷಪಾತ ಚುನಾವಣೆ ನಡೆಸುವ ಮೂಲಕ ಆಗಿಲ್ಲ ಎನ್ನುವುದು ಸ್ವತಃ ಬಿಜೆಪಿಗರಿಗೂ ತಿಳಿದಿದೆ. ಏನಾದರೂ ಆಗಲಿ, ಹೇಗಾದರೂ ಆಗಲಿ ಅಧಿಕಾರ ನಾಗಪುರದ ಚಿತ್ಪಾವನರ ಕಪಿಮುಷ್ಠಿಯಲ್ಲಿಯೇ ಇರಬೇಕು ಎನ್ನುವ ಬ್ರಾಹ್ಮಣವಾದಿಗಳ ಗುಪ್ತ ಅಜೆಂಡಾ ಈಗ ಗುಟ್ಟಾಗಿ ಉಳಿದಿಲ್ಲ. ಅದಕ್ಕಾಗಿ ಅವರು ಎಲ್ಲಾ ವಾಮ ಮಾರ್ಗಗಳನ್ನು ಹಿಡಿಯುತ್ತಿದ್ದಾರೆ. ಸಂಘ ಪರಿವಾರದ ಧ್ಯೇಯೋದ್ದೇಶಗಳು ಮತ್ತು ದೇಶಕ್ಕೆ ಅದರಿಂದಾಗಬಹುದಾದ ಅಪಾಯಗಳ ಕುರಿತು ಸರ್ದಾರ್ ಪಟೇಲ್ ಹಾಗೂ ನೆಹರೂರವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅದು ಅವರ ಉತ್ತರಾಧಿಕಾರಿಗಳಿಗೆ ತಿಳಿಯಲಿಲ್ಲ. ವಿಶೇಷವಾಗಿ 1990ರ ನಂತರ ಕಾಂಗ್ರೆಸ್ ಪಕ್ಷವನ್ನು ಅವನತಿಯ ಅಂಚಿಗೆ ದೂಡಿದ ಶ್ರೇಯ ಗುಪ್ತ ಸಂಘಿಯಾಗಿದ್ದ ಪಿ. ವಿ. ನರಸಿಂಹರಾಯರಿಗೆ ಸಲ್ಲುತ್ತದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಸೈದ್ಧಾಂತಿಕ ಬದ್ಧತೆ ಇರುವ ನಾಯಕರು ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ. ಅವರಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮಗ, ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರು ಪ್ರಮುಖರು. ಪ್ರಿಯಾಂಕ್ ಸಂಘದ ಕುರಿತು ಹೊಂದಿರುವ ಗಟ್ಟಿ ನಿಲುವು ಇಂದು ಕಾಂಗ್ರೆಸ್ ಪಕ್ಷದ ನಿಲುವು ಆಗಬೇಕು. ಆದರೆ, ಅದು ಆಗದಿರುವುದು ದುರಂತ. ಕೇಂದ್ರ ನಾಯಕ ರಾಹುಲ್ ಗಾಂಧಿಯವರ ಮನಸ್ಸಿನಂತೆ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ.

2013ರಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಉಸಿರಾಡುತ್ತಿರುವುದು ಸಿದ್ಧರಾಮಯ್ಯನವರ ನಾಯಕತ್ವದಿಂದ. ಕಾಂಗ್ರೆಸ್ ಪಕ್ಷದಲ್ಲಿ ಆರ್.ವಿ. ದೇಶಪಾಂಡೆ, ಡಿ. ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಡಾ. ಅಜಯಸಿಂಗ್ ತರಹದ ಅನೇಕ ಸಂಘನಿಷ್ಠರು ಅಥವಾ ಯಾವುದೇ ಸೈದ್ಧಾಂತಿಕ ನಿಲುವು ಹೊಂದಿರದ ಮೃದು ಹಿಂದುತ್ವವಾದಿ, ಅನುಕೂಲಸಿಂಧು ನಾಯಕರು ತುಂಬಿದ್ದಾರೆ. ಆ ಕಾರಣದಿಂದ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿಯೂ ಸಹಿತ ಸಂಘಿ ಮನಸ್ಥಿತಿಯ ಅಧಿಕಾರಿಗಳು, ಮತ್ತಿತರರು ಆಯಕಟ್ಟಿನ ಸ್ಥಾನಗಳನ್ನು ಅತಿಕ್ರಮಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂದು ಒಂದು ಬಲಶಾಲಿ ಸೈದ್ಧಾಂತಿಕ ಮಾತೃ ಸಂಸ್ಥೆಯ ಅಗತ್ಯವಿದೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ತೀವ್ರವಾದ ಅಧ್ಯಯನ ಹಾಗೂ ತರಬೇತಿ ವರ್ಗಗಳ ಅಗತ್ಯವಿದೆ. ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮತ್ತು ಸಂಘ ಕೇವಲ ರಾಜಕೀಯ ಎದುರಾಳಿಗಳು ಮಾತ್ರವಲ್ಲದೆ ಕಾಂಗ್ರೆಸ್ ಆಡಳಿತ ಕಳೆದ 50-60 ವರ್ಷಗಳಿಂದ ರಕ್ಷಿಸಿಕೊಂಡು ಬಂದಿರುವ ಸಂವಿಧಾನ, ಜನತಂತ್ರ, ಬಹುತ್ವ, ಸೌಹಾರ್ದತೆ ಮತ್ತು ಸಾಮರಸ್ಯಗಳ ದೊಡ್ಡ ಶತ್ರುವಾಗಿವೆ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳದಿರುವುದು ದುರಂತ. ತನ್ನದೆ ತಪ್ಪಿದ್ದರೂ ಎದುರಾಳಿಗಳ ಮೇಲೆ ಅಸಹ್ಯವಾಗಿ ಮುಗಿಬೀಳುವ ಬಿಜೆಪಿಯ ನಡೆಯನ್ನು ಕಾಂಗ್ರೆಸ್ ಗಮನಿಸಬೇಕಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಸಂಘಿಗಳಿಗೆ ಸಿಂಹ ಸ್ವಪ್ನವೆಂದರೆ ಸಿದ್ಧರಾಮಯ್ಯ, ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ತರಹದ ಬೆರಳೆಣಿಕೆಯ ಜನ ಮಾತ್ರ.
ಇತ್ತೀಚಿನ ದಿನಗಳಲ್ಲಿ ಸಾಂಘಿಕವಾಗಿ ಬಿಜೆಪಿ ಹಾಗೂ ಸಂಘಿಗಳ ಮೇಲೆ ಕಾಂಗ್ರೆಸ್ಸಿಗರು ದಾಳಿ ಮಾಡಿದ್ದನ್ನು ನಾನು ನೋಡಿಯೇ ಇಲ್ಲ. ಹೋಗಲಿ ಪ್ರಿಯಾಂಕ್, ಸಿದ್ಧರಾಮಯ್ಯನಂತವರ ಮಾತನ್ನು ಸಮರ್ಥಿಸಿಕೊಳ್ಳಲು ಇವರಿಗೇನು ಸಮಸ್ಯೆ ಎನ್ನುವುದು ನಿಗೂಢವೇನಲ್ಲ. ಲಿಂಗಾಯತ ಮಠಾಧೀಶರ ವಿರುದ್ಧ ಸಂಘಿ ಕಾವಿಧಾರಿ ಕನೇರಿ ಸ್ವಾಮಿ ನಾಲಿಗೆ ಹರಿಬಿಟ್ಟಿದ್ದನ್ನು ಬಿ. ಎಲ್. ಸಂತೋಷ್ ಸಮರ್ಥಿಸುತ್ತಿದ್ದಂತೆ ಬಿಜೆಪಿಯ ಎಲ್ಲಾ ನಾಯಕರು ಘಟನೆಯ ಹಿನ್ನೆಲೆ ತಿಳಿದುಕೊಳ್ಳದೆ ಸಾಲು ಸಾಲಾಗಿ ಒಂದೇ ರಾಗ ಹಾಡಿದ್ದು ಆ ಪಕ್ಷದ ನಾಯಕರ ಬೌದ್ದಿಕ ದಿವಾಳಿತನವೇ ಆಗಿದ್ದರೂ ಅವರಲ್ಲಿನ ಒಗ್ಗಟ್ಟೂ ಗಮನಾರ್ಹ, ಆದರೆ ಅದು ಕಾಂಗ್ರೆಸ್ ನಾಯಕರಲ್ಲಿ ಕಾಣಸಿಗುವುದಿಲ್ಲ. ಸಂಘದ ಕುರಿತು ಪ್ರಿಯಾಂಕ್ ಎತ್ತಿದ ಪ್ರಶ್ನೆಗಳಿಗೆ ಇಡೀ ಕಾಂಗ್ರೆಸ್ ಧ್ವನಿಗೂಡಿಸಬೇಕಿತ್ತು. ತಾನು ಮುಖ್ಯಮಂತ್ರಿಯಾಗಬೇಕು ಎನ್ನುವವರು ಸದನದಲ್ಲಿ ಸಂಘಗೀತೆ ಹಾಡುತ್ತಾರೆ. ಪಕ್ಷವನ್ನು ಅಧಿಕಾರಕ್ಕೇರಿಸಿದ ಗ್ಯಾರಂಟಿ ಯೋಜನೆಗಳನ್ನು ದೇಶಪಾಂಡೆ ಸಾರ್ವಜನಿಕವಾಗಿ ಟೀಕಿಸುತ್ತಾರೆ. ಸ್ವತಃ ಸಿದ್ಧರಾಮಯ್ಯನವರು ಸಂಘಿ ಪತ್ರಕರ್ತನೊಬ್ಬನಿಗೆ ಸಲುಗೆ ಕೊಡುತ್ತಾರೆ. ಇದು ಇವತ್ತಿನ ಕಾಂಗ್ರೆಸ್ ಪಕ್ಷದ ಅವಸ್ಥೆ. ಸಂವೇದನಾಶೀಲ ಮಂತ್ರಿ ಎನ್ನಿಸಿಕೊಳ್ಳುವ ಕೃಷ್ಣ ಭೈರೇಗೌಡರ ಮೌನ ಬೇಸರ ತರಿಸುತ್ತದೆ. ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್ ಮುಂತಾದವರು ಸಿದ್ಧರಾಮಯ್ಯ ನಂತರ ಮುಂಬರುವ ದಿನಗಳಲ್ಲಿನ ಸವಾಲುಗಳನ್ನು ಎದುರಿಸಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಅಗತ್ಯವಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?
ಸಂಘಿಗಳೊಂದಿಗೆ ಯಾವುದೇ ರೀತಿಯಲ್ಲಿ ರಾಜಿ, ಮರ್ಜಿ, ಒಳ ಒಪ್ಪಂದ ಇಲ್ಲದ ನಾಯಕರು ಮಾತ್ರ ಕಾಂಗ್ರೆಸ್ ಪಕ್ಷವನ್ನು ಉಳಿಸಬಲ್ಲರು. ಈ ನೆಲದ ಬಹುತ್ವ, ಸಾಮರಸ್ಯ, ಜನತಂತ್ರ, ಸಂವಿಧಾನ, ಸಾಮಾಜಿಕ ನ್ಯಾಯಗಳ ರಕ್ಷಣೆಯನ್ನು ಆದ್ಯತೆಯಾಗಿಸಿಕೊಳ್ಳುವ ಮೂಲಕ ಮಾತ್ರ ಕಾಂಗ್ರೆಸ್ ಉಳಿಯಬಲ್ಲದು. ಕಾಂಗ್ರೆಸ್ ಈ ಹಾದಿಯಲ್ಲಿ ರಚನಾತ್ಮಕವಾಗಿ ಕಾರ್ಯ ಮಾಡಿದರೆ ಈ ದೇಶವನ್ನು ಉಳಿಸಿಬಲ್ಲದು. ಇಲ್ಲದಿದ್ದರೆ ಸಂಘಿಗಳು ಈ ದೇಶವನ್ನು ಇನ್ನಿಲ್ಲದಂತೆ ಮುಗಿಸಿ ಬಿಡುತ್ತಾರೆ. ಒಂದು ನೂರು ವರ್ಷಗಳ ಸುದೀರ್ಘ ಅವಧಿಯ ತನ್ನ ಅಕ್ರಮ ಅಸ್ತಿತ್ವದಲ್ಲಿ ಸಂಘ ತನಗೆ ಎದುರಾಗುವ ಯಾವ ಸೈದ್ಧಾಂತಿಕ ಪ್ರಶ್ನೆಗಳಿಗೂ ನೇರವಾಗಿ ಉತ್ತರಿಸಿದ ದಾಖಲೆಗಳಿಲ್ಲ. ಆದರೆ, ಬೆನ್ನ ಹಿಂದೆ ನಿಂತು ತನ್ನನ್ನು ಪ್ರಶ್ನಿಸಿದವರ ವೈಯಕ್ತಿಕ ನಿಂದನೆ, ಚಾರಿತ್ರ್ಯವಧೆ, ಅವಹೇಳನ, ಅಪಪ್ರಚಾರ ಮತ್ತು ಕೆಲವು ಸಂದರ್ಭಗಳಲ್ಲಿ ಅವರನ್ನು ಭೌತಿಕವಾಗಿ ಮುಗಿಸಿ ಹಾಕುವ ಹೇಡಿತನ ಸಂಘ ಸದಾ ಪ್ರದರ್ಶಿಸುತ್ತ ಬಂದಿದೆ. ಸಂಘ ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮ ಹೊಂದಿಲ್ಲ ಎನ್ನುವುದಕ್ಕೆ ಅದರ ನೋಂದಾಯಿಸದೇ ಇರುವ ಅಕ್ರಮ ಅಸ್ತಿತ್ವ ಮತ್ತು ಸಂಶಯಾಸ್ಪದ ಚಟುವಟಿಕೆಗಳೇ ಸಾಕ್ಷಿಯಾಗಿವೆ. ಅದು ಹುಟ್ಟಿದಾಗಿನಿಂದ ಈ ದೇಶದ ಮೂಲ ಸಿದ್ಧಾಂತವನ್ನು ವಿರೋಧಿಸಿಕೊಂಡೇ ಬಂದಿದೆ. ಸ್ವಾತಂತ್ರ್ಯ ಚಳವಳಿಯನ್ನು ದಿಕ್ಕು ತಪ್ಪಿಸಿದೆ, ಬ್ರಿಟಿಷರೊಂದಿಗೆ ಕೈಜೋಡಿಸಿದೆ. ಹಾಗಾಗಿ ಭವಿಷ್ಯತ್ತಿನಲ್ಲಿ ಸಂಘದ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಜನರೆದುರಿಗೆ ತೆರೆದಿಡಲು ಕಾಂಗ್ರೆಸ್ ಪಕ್ಷ ತನ್ನೊಳಗೆ ಒಂದು ಪ್ರತ್ಯೇಕ ವಿಭಾಗವನ್ನೇ ರಚಿಸಬೇಕಾಗಿದೆ. ಅದಕ್ಕೆ ಪ್ರಿಯಾಂಕ್ ಖರ್ಗೆಯಂತವರ ನಾಯಕತ್ವದ ಅಗತ್ಯವಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




