ಮೊದಲಿಗೆ RTI ಕೆಲವು ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಹಾದಿಯಲ್ಲಿ ಕ್ರಮಿಸಿತ್ತು. ಸಾರ್ವಜನಿಕ ಅಹಾರ ವಿತರಣಾ ವ್ಯವಸ್ಥೆ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಲ್ಲಿನ ಅವ್ಯವಸ್ಥೆಗಳನ್ನು ಬಯಲಿಗೆಳೆಯಿತು. ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿ, ಐಪಿಎಲ್, ಕಾಮನ್ ವೆಲ್ತ್ ಕ್ರೀಡೆ, 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು, ವ್ಯಾಪಮ್, ಹಾಗೂ ಕರ್ನಾಟಕದಲ್ಲಿನ ಭೂ ಹಾಗೂ ಗಣಿ ಹಗರಣಗಳನ್ನು ಹೊರಗೆಳೆಯಲು ಈ ಕಾಯ್ದೆಯು ಬಳಕೆಯಾಗಿತ್ತು.
ಮಾಹಿತಿ ಹಕ್ಕು ಕಾಯ್ದೆ -2005 (RTI) ವಿಶ್ವದ ಅತ್ಯಂತ ಪ್ರಗತಿಶೀಲ ಹಾಗೂ ಪಾರದರ್ಶಿಕೆಯ ಕಾನೂನುಗಳಲ್ಲಿ ಒಂದಾಗಿದೆ. ಪ್ರಾರಂಭದಲ್ಲಿ ಕ್ರಾಂತಿಯ ಪಥ ತುಳಿದು ಏಳುಬಿಳುಗಳ ನಡುವೆಯೂ ಮುನ್ನೆಡೆಯುತ್ತಿದ್ದ ಈ ಕಾಯ್ದೆಯನ್ನು ಬದಲಾವಣೆಯ ಬೆಳಕು ಕಾಣುವ ಮೊದಲೇ ನೆಲಕಚ್ಚಿಸಿದ್ದು ಆಕಸ್ಮಿಕವಾಗಿರದೆ, ಜನರ ಹಕ್ಕನ್ನು ಕಸಿಯುವ ಉದ್ದೇಶಪೂರ್ವಕ ಕಾರ್ಯತಂತ್ರವಾಗಿದೆ. ಮಾಹಿತಿಯು ನಾಗರಿಕರ ಮೂಲಭೂತ ಹಕ್ಕೆಂದು ಪರಿಗಣಿಸುವ ಈ ಕಾಯ್ದೆಯು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಮತ್ತು ಜನರ ಸಂಬಂಧದಲ್ಲಿ ಮೂಲಭೂತ ಬದಲಾವಣೆ ತರುವತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರ ಮತ್ತದರ ಅನುಷ್ಠಾನ ಸಂಸ್ಥೆಗಳು ತಮ್ಮ ನೀತಿ, ನಿರ್ಧಾರ ಹಾಗೂ ಕ್ರಮಗಳಿಗೆ ಉತ್ತರದಾಯಿಗಳಾಗುವಂತೆ ಒತ್ತಡ ಸೃಷ್ಟಿಸುವ ಮೂಲಕ ಆಡಳಿತದಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ಹೆಚ್ಚಿಸುವತ್ತ ಈ ಕಾಯ್ದೆಯು ಒಂದು ಪರಿಣಾಮಕಾರಿ ಸಾಧನವಾಗಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರದ ಆರ್ಟಿಕಲ್ 19(1)(a)ರಲ್ಲಿ RTI ತನ್ನ ಮೂಲವನ್ನು ಹೊಂದಿದೆಯೆಂದು ಸುಪ್ರೀಂಕೋರ್ಟ್ ಖಚಿತಪಡಿಸಿರುತ್ತದೆ.
NCPRI ಸಂಸ್ಥೆಯ ಕನ್ವಿನರ್ ಹಾಗೂ ಸ್ಥಾಪಕ ಸದಸ್ಯರಾದ ಅಂಜಲಿ ಭಾರದ್ವಾಜ್ ಅವರು ‘ದೇಶಾದ್ಯಂತ ಪ್ರತಿ ವರ್ಷ ಸುಮಾರು 60 ಲಕ್ಷ ಅರ್ಜಿಗಳನ್ನು ಈ ಕಾಯ್ದೆಯಡಿ ಸ್ವಿಕರಿಸಲಾಗುತ್ತಿದ್ದು, ಇದರಲ್ಲಿ ಸುಮಾರು ಶೇ.50ರಷ್ಟು ಅರ್ಜಿಗಳಿಗೆ ಮಾತ್ರ ಉತ್ತರ ದೊರಕುತ್ತದೆ’ ಎಂದಿರುವ ಇವರು ‘RTI ಅತ್ಯಂತ ಸಬಲೀಕರಣಗೊಳಿಸುವ ಕಾನೂನುಗಳಲ್ಲಿ ಒಂದಾಗಿದ್ದು, ಆಡಳಿತದಲ್ಲಿ ಜನರು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಮತ್ತು ಅವರು ಕೇವಲ ಮತದಾರರಾಗಿ ಉಳಿಯದೆ, ಸರ್ಕಾರದ ಕೆಲಸಗಳನ್ನು ಪ್ರಶ್ನಿಸುವ ಜಾಗೃತ ನಾಗರಿಕರಾಗಲು ಸಹಾಯ ಮಾಡಿದೆ’ ಎನ್ನುತ್ತಾರೆ (ಅನುಜಾ, ಅಕ್ಟೋಬರ್ 12, 2025, ದಿ ಹಿಂದು).
ಹಲವು ಸಂಘಸಂಸ್ಥೆಗಳು RTI ಹುಟ್ಟಿಗೆ ಮಹತ್ತರ ಕೊಡುಗೆ ನೀಡಿವೆ. ಮೊದಲಿಗೆ ಚಳವಳಿಯನ್ನು ಸ್ಥಳೀಯವಾಗಿ ಪ್ರಾರಂಭಿಸಿದ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯು (MKSS) ನಂತರದಲ್ಲಿ ಅದನ್ನು ರಾಷ್ಟ್ರವ್ಯಾಪಿಗೊಳಿಸಿದರೆ, ನ್ಯಾಷನಲ್ ಕ್ಯಾಂಪೇನ್ ಫಾರ್ ಪಿಪಲ್ಸ್ ರೈಟು ಇನ್ಫರ್ಮೇಷನ್ (NCPRI) ಇದರ ನೀತಿ ರಚನೆ ಮತ್ತು ಅಂದಿನ ಸರ್ಕಾರ ಹಾಗೂ ಸಂಸತ್ತಿನ ಮೇಲೆ ಒತ್ತಡ ಸೃಷ್ಟಿಸುತ್ತದೆ. ಹೀಗೆ ಅನೇಕ ಸಂಸ್ಥೆ ಮತ್ತು RTI ವೇದಿಕೆಗಳು ಜಾಗೃತಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಲ್ಲಿಕೆ, ಮತ್ತು ಸತ್ಯಾಗ್ರಹದಂತಹ ವಿವಿಧ ಪ್ರಯತ್ನಗಳ ಮೂಲಕ ಈ ಕಾಯ್ದೆಯು ಜಾರಿಯಾಗುವ ಹಿನ್ನೆಲೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಕರ್ನಾಟಕದಲ್ಲಿ, ಕರ್ನಾಟಕ ರೈಟ್ ಟು ಇನ್ಫರ್ಮೇಷನ್ ಆಕ್ಟ್ (KRIA) ಡಿಸೆಂಬರ್ 2000ರಲ್ಲಿಯೇ ರಚಿತವಾಗಿದ್ದು, ಇದರಲ್ಲಿ ಕ್ರಿಯಾ ಕಟ್ಟೆ, ಸಿವಿಕ್ ಬೆಂಗಳೂರು, ಫೆವಾರ್ಡ್-ಕೆ ಸಂಸ್ಥೆಗಳ ಪಾತ್ರವು ಗಣನೀಯವಾಗಿರುವುದಲ್ಲದೆ, ರಾಷ್ಟ್ರ ಮಟ್ಟದ ಕಾಯ್ದೆಯ ರಚನೆಯಲ್ಲಿಯೂ ತಾಂತ್ರಿಕ ಮಾರ್ಗಸೂಚಿಗಳನ್ನು ಸಿದ್ದಪಡಿಸಲು ತಮ್ಮ ಕೊಡುಗೆ ನೀಡಿವೆ.
ಮೊದಲಿಗೆ RTI ಕೆಲವು ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಹಾದಿಯಲ್ಲಿ ಕ್ರಮಿಸಿತ್ತು. ಸಾರ್ವಜನಿಕ ಅಹಾರ ವಿತರಣಾ ವ್ಯವಸ್ಥೆ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ಅವ್ಯವಸ್ಥೆಗಳನ್ನು ಬಯಲಿಗೆಳೆಯಿತು. ಮುಂಬೈನ ಆದರ್ಶ ಹೌಸಿಂಗ್ ಸೊಸೈಟಿ, ಐಪಿಎಲ್, ಕಾಮನ್ ವೆಲ್ತ್ ಕ್ರೀಡೆ, 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು, ವ್ಯಾಪಮ್ ಹಾಗೂ ಕರ್ನಾಟಕದಲ್ಲಿನ ಭೂ ಹಾಗೂ ಗಣಿ ಹಗರಣಗಳನ್ನು ಹೊರಗೆಳೆಯಲು ಈ ಕಾಯ್ದೆಯು ಬಳಕೆಯಾಗಿತ್ತು. ಅಣ್ಣಾ ಹಜಾರೆಯವರ ನೇತೃತ್ವದ ಚಳವಳಿಯಲ್ಲಿ RTI ಮಾಹಿತಿಗಳು ಜನರನ್ನು ಜಾಗೃತಗೊಳಿಸಿ ಅಂದಿನ ಯುಪಿಎ ಸರ್ಕಾರವು ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದಲ್ಲದೆ, ಲಕ್ಷಾಂತರ ಜನರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಮತ್ತು ಸಂಶೋಧನೆ, ಬರವಣಿಗೆ, ಹಾಗೂ ಸುದ್ಧಿಗಾಗಿ ಅಗತ್ಯವಿರುವ ಮಾಹಿತಿ ಪಡೆಯಲು RTI ಬಳಕೆಯಾಗುತ್ತಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ರಾಜ್ಯ ಪೊಲೀಸ್ ವ್ಯವಸ್ಥೆ ಕೆಡಲು ಕಾರಣರಾರು?
ಮೊದಲಿನಿಂದಲೂ ಸಂಬಂಧಿಸಿದ ಅಧಿಕಾರಿಗಳು ಮಾಹಿತಿಗಳನ್ನು ಸುಲಭವಾಗಿ ನೀಡುತ್ತಿದ್ದರೂ ಎಂದೇನೂ ಇರಲಿಲ್ಲವಾದರೂ, ಕಾಯ್ದೆಯನುಸಾರವಿದ್ದಲ್ಲಿ ಮಾಹಿತಿಯನ್ನು ನಿರಾಕರಿಸುವಂತಿರಲಿಲ್ಲ. ನಿರಾಕರಿಸಿದ ಅಧಿಕಾರಿಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದಾಗಿದ್ದ ಕಾರಣ, ಕೇಳಿದ ಮಾಹಿತಿಯು ದೊರಕುವ ಸಂಭವವಿತ್ತು. ಆದರೂ, ಎಲ್ಲಾ ಸರ್ಕಾರಗಳಲ್ಲಿಯೂ RTI ಅರ್ಜಿ ಸಲ್ಲಿಸಿದವರನ್ನು ಸರ್ಕಾರದ ವಿರೋಧಿಗಳು ಎಂದೇ ಭಾವಿಸುವ ಅಧಿಕಾರಿಗಳಿಗೆ ಸಾಮಾನ್ಯ ಪ್ರಜೆಯೂ ಸಹ ನಮ್ಮ ಅಧಿಕಾರವನ್ನು ಪ್ರಶ್ನಿಸುವಂತಾಯಿತು ಎಂಬ ಅಸಮಧಾನದ ಜೊತೆಗೆ ಉಪೇಕ್ಷೆಯ ಧೋರಣೆ ಇವರದು. ಸರ್ಕಾರಕ್ಕೆ ಮಾತ್ರ ತಾವು ಉತ್ತರದಾಯಿಗಳೆಂದು ನಂಬಿರುವ ಇವರಿಗೆ ಜನರೇ ಸರ್ಕಾರ ಎಂಬುದು ಕೇವಲ ಕಾಗದದ ಮೇಲಿನ ಅಕ್ಷರಗಳಾಗಿವೆ. ಟೋಬಿ ಮೆಂಡೆಲ್ (1999) ಹೇಳಿರುವ ಪ್ರಜಾಪ್ರಭುತ್ವದ ಪಾರದರ್ಶಕತೆಯ ತತ್ವಗಳಾದ ಗರಿಷ್ಠ ಬಹಿರಂಗಪಡಿಸುವಿಕೆ, ಸ್ವರ್ಯಪ್ರೇರಿತ ಪ್ರಕಟಣೆ, ಸಾರ್ವಜನಿಕ ಹಿತಾಸಕ್ತಿ, ಸರಳ ಮತ್ತು ಸುಲಭ ಲಭ್ಯತೆ, ವಿವೇಚನಾಯುಕ್ತ ಮುಕ್ತ ಸಮಾಲೋಚನೆ ಮತ್ತು ಉತ್ತರದಾಯಿತ್ವ – ಇತ್ಯಾದಿಗಳು ಮಾಹಿತಿ ಹಕ್ಕಿನ ಸಾರವಾಗಿದೆ ಎನ್ನುವುದು ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಇವರ ಅಸಮಾಧಾನ ಮತ್ತು ಅಸಡ್ಡೆಯ ನಡುವೆಯೂ ಕಾಯ್ದೆಯ ಬಲದಿಂದಾಗಿ RTI ಕಾಯ್ದೆಯನ್ನು ತಕ್ಕಮಟ್ಟಿಗಾದರೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಿತ್ತು. ಆದರೆ, 2019ರ ನಂತರದ ಬೆಳವಣಿಗೆಗಳು ಈ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಮಾಹಿತಿ ಪಡೆಯುವ ಸಾಧ್ಯತೆಗಳನ್ನು ವಿರಳ ಮತ್ತು ವಿಳಂಬಗೊಳಿಸುತ್ತಿದೆ.
2019ರ ಅಂತ್ಯದಲ್ಲಿ ನಾನು “ಒಂದು ಇಲಾಖೆಯ ನಿಗದಿತ ಕಾರ್ಯಕ್ರಮದಡಿ, ನಿಗದಿತ ಅವಧಿಯಲ್ಲಿ ಒಟ್ಟು ರಾಜ್ಯದ ನಿಗದಿಸಿದ ಮೊತ್ತ ಮತ್ತು ಖರ್ಚಾದ ಮೊತ್ತವೆಷ್ಟು” ಎಂದು ಮಾಹಿತಿ ಕೇಳಿ ಆ ಇಲಾಖೆಯ ಮುಖ್ಯ ಕಚೇರಿಗೆ ಅರ್ಜಿ ಹಾಕಿದ್ದೆ. ಇದು ರಾಜ್ಯದ ಒಟ್ಟು ಮಾಹಿತಿಯಾದ ಕಾರಣ, ಅದು ಮುಖ್ಯ ಕಚೇರಿಯಲ್ಲಿಯೇ ದೊರಕಬೇಕು ಎಂಬುದು ನನ್ನ ತಿಳಿವಳಿಕೆಯಾಗಿತ್ತು. ಮರುಜವಾಬು ಸಮಯದೊಳಗೆ ಬಂದಿತ್ತಾದರೂ, ಅದು ಜಿಲ್ಲಾ ಪಂಚಾಯಿತಿಗಳಿಗೆ ಮಾಹಿತಿ ಕೊಡಲು ತಿಳಿಸಿರುವ ಪತ್ರದ ನಕಲಾಗಿತ್ತು. ಆನಂತರ, ಜಿಲ್ಲೆಗಳಿಂದ, ತಾಲ್ಲೂಕು ಅಧಿಕಾರಿಗಳಿಗೆ ಬರೆದ ಪತ್ರದ ನಕಲುಗಳು ಬಂದವು. ತದನಂತರ ತಾಲೂಕಿನ ಅಧಿಕಾರಿಗಳು ತಮ್ಮ ಎಲ್ಲಾ ಪಂಚಾಯಿತಿಗಳಿಗೂ ಬರೆದ ಪತ್ರದ ನಕಲುಗಳು ಬಂದವೇ ಹೊರತು ಕೇಳಿದ ಮಾಹಿತಿ ಮಾತ್ರ ಬರಲಿಲ್ಲ! ಅವರು ಬಿಟ್ಟು… ಇವರು ಬಿಟ್ಟು … ಅವರಾರು? ಎಂಬಂತೆ ಸುಮಾರು ಮೂರು ತಿಂಗಳ ನಂತರದಿಂದ ಪಂಚಾಯಿತಿಗಳಿಂದ ವರ್ಷವಿಡೀ ಪತ್ರಗಳು ಹರಿದು ಬರತೊಡಗಿದವು! ನನ್ನ ವರದಿ ಎಂದೋ ಮುಗಿದಿದ್ದ ಕಾರಣ ಪಂಚಾಯಿತಿಗಳು ನೀಡಿದ ಮಾಹಿತಿಯನ್ನು ಬಳಸಿಕೊಳ್ಳಲಿಲ್ಲ. ಒಂದು ವೇಳೆ ಬಳಸಿಕೊಳ್ಳಬಹುದಾಗಿದ್ದರೂ, ಸುಮಾರು 5000 ಪಂಚಾಯಿತಿಗಳಿಂದ ಬಂದ ಮಾಹಿತಿಯನ್ನು ಗಣಕೀಕರಣಗೊಳಿಸಿ ರಾಜ್ಯದ ಒಟ್ಟು ಮೊತ್ತ ಎಷ್ಟು ಎಂಬುದನ್ನು ಕಂಡುಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತಿತ್ತು. ಅಂತಿಮದಲ್ಲಿ ಎಲ್ಲರಿಗೂ ಅನಾವಶ್ಯಕ ಕೆಲಸವಾಗಿ, ಅಂಚೆ ಕಚೇರಿಗೆ ಮಾತ್ರ ಲಾಭವಾಗಿತ್ತು!?
RTI ಹೊರಾಟಗಾರರು ಹಾಗೂ ಕ್ರಿಯಾ ಕಟ್ಟೆಯ ಸಂಚಾಲಕರಾದ ರವೀಂದ್ರನಾಥ ಗುರು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ (ಅಕ್ಷೋಬರ್ 13, 2022) ನೀಡಿದ ಸಂದರ್ಶನದಲ್ಲಿ “ಅಧಿಕಾರಿಗಳಿಗೆ ಈಗ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಅವರು ಮಾಹಿತಿ ನೀಡುತ್ತಾರಾದರೂ, ಆ ಮಾಹಿತಿಯಿಂದ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸ ಅವರಲ್ಲಿದೆ” ಎಂದಿದ್ದಾರೆ. ಅಂತೆಯೇ, 2017ರಲ್ಲಿ ಸಲ್ಲಿಸಿದ ತಮ್ಮ ಅರ್ಜಿಯ ವಿಚಾರಣೆ 2022ರಲ್ಲಿ ಬಂದರೆ, ಈ ವಿಳಂಬಿತ ಮಾಹಿತಿಗೆ ಯಾವ ಬೆಲೆಯೂ ಇರುವುದಿಲ್ಲವೆಂದು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಕಾಲಕ್ರಮೇಣ ಈ ಕಾನೂನು ಮತ್ತದರ ನಿಯಮಗಳನ್ನು ಹಂತ ಹಂತವಾಗಿ ದುರ್ಬಲಗೊಳಿಸಲಾಗುತ್ತಿದೆ ಎಂದಿದ್ದಾರೆ.
ಈ ಜನಪರ ಕಾಯ್ದೆಯು ತನ್ನ ಮಹತ್ವ ಕಳೆದುಕೊಳ್ಳಲು ಅನೇಕ ಕಾರಣಗಳಿವೆ. ಮುಖ್ಯವಾಗಿ ಜನರಿಗೆ ಮಾಹಿತಿ ಒದಗಿಸಿ ಅವರು ತಮ್ಮ ಆಡಳಿತ ವೈಖರಿಯನ್ನು ಪ್ರಶ್ನಿಸುವಂತೆ ಮಾಡುವುದಾಗಲಿ ಅಥವಾ ತಮ್ಮ ಭ್ರಷ್ಟಾಚಾರಗಳನ್ನು ತಾವೇ ಬಯಲಿಗೆಳೆದುಕೊಳ್ಳಲು ಯಾವ ಸರ್ಕಾರಕ್ಕೂ ಬೇಕಾಗಿಲ್ಲ. ಪ್ರಜಾಪ್ರಭುತ್ವವನ್ನು ಜನರು ಮತ ನೀಡುವ ಮಟ್ಟಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಜನ ಸಹಭಾಗಿತ್ವ, ಪ್ರಶ್ನಿಸುವಿಕೆ ಮತ್ತು ಪಾರದರ್ಶಕತೆ ಎಂಬುದು ಸರ್ಕಾರ ಮತ್ತದರ ಅಧಿಕಾರಿಗಳಿಗೆ ಒಗ್ಗದ ಪದಗಳಾಗಿವೆ. ಇಂತಹ ಮನಸ್ಥಿತಿಯನ್ನು ಬದಲಾಯಿಸ ಹೊರಟಿದ್ದ ಈ ಕಾಯ್ದೆಯನ್ನು ಹತ್ಯೆಗೊಳಿಸುವ ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ಆರ್‌ಟಿಐ ಹೊರಾಟಗಾರರ ಅಭಿಪ್ರಾಯವಾಗಿದೆ.
2019ರಲ್ಲಿ ಯಾವ ಚರ್ಚೆಗಳಿಗೂ ಅವಕಾಶವಿಲ್ಲದೆ ತರಾತುರಿಯಲ್ಲಿ ಆಗಿನ ಕೇಂದ್ರ ಸರ್ಕಾರವು ಮಾಡಿದ ತಿದ್ದುಪಡಿ ಮತ್ತು 2023ರಲ್ಲಿ ಹೊರತಂದ ಡಿಜಿಟಲ್ ಖಾಸಗಿ ದತ್ತಾಂಶ ಸಂರಕ್ಷಣಾ ಕಾಯ್ದೆ ಹಾಗೂ ಆಡಳಿತಾತ್ಮಕ ನ್ಯೂನ್ಯತೆಗಳು RTI ಕಾಯ್ದೆಯನ್ನು ಉಸಿರಾಡುತ್ತಿರುವ ಶವವಾಗಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಬೃಹತ್ ಮೂಲಭೂತ ಹಕ್ಕು ಮತ್ತು ಮಾನವ ಹಕ್ಕುಗಳ ಒಂದು ಭಾಗವೆಂದು ವ್ಯಾಖ್ಯಾನಿಸಲಾಗಿದ್ದ RTI ಕಾಯ್ದೆಯನ್ನು ತಿದ್ದುಪಡಿ ಮಾಡಲು ಚಲಾಯಿಸಿದ ಏಕಪಕ್ಷೀಯ ಅಧಿಕಾರವು ಪ್ರಜಾಪ್ರಭುತ್ವದ ಸಾರ್ವಜನಿಕ ಸಿದ್ದಾಂತಗಳನ್ನು ವಿಕೃತಗೊಳಿಸುವ ದುರಂತ ನಡೆಯುತ್ತದೆ.
ಮಾಹಿತಿಗಳು ದೊರೆಯದೇ ಇದ್ದಾಗ ಅಥವಾ ವಿಳಂಬವಾದಲ್ಲಿ, ಅದನ್ನು ಪ್ರಶ್ನಿಸಲು ಕಾಯ್ದೆಯಡಿ ಸ್ಥಾಪಿತವಾದ ಸ್ವಾಯತ್ತ ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದವು. 2019ರಲ್ಲಿ RTI ಕಾಯ್ದೆಯ ಸೆಕ್ಷನ್ 13, 16 ಮತ್ತು 27ರಲ್ಲಾದ ತಿದ್ದುಪಡಿಗಳು ಆಯೋಗಗಳ ಅಧಿಕಾರವನ್ನು ಕುಂಠಿತಗೊಳಿಸಿ, ಅವುಗಳು ಸರ್ಕಾರದ ಹತೋಟಿಯಡಿ ತರಲಾಗಿದೆ. ತಿದ್ದುಪಡಿ ನಂತರದಿಂದ, ಆಯುಕ್ತರುಗಳ ಅಧಿಕಾರವಧಿ, ಅವರ ವೇತನ, ಭತ್ಯೆ ಮತ್ತು ಸೇವಾ ನಿಯಮಗಳನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಚುನಾವಣಾ ಆಯುಕ್ತರ ಸ್ಥಾನಕ್ಕೆ ಸಮನಾಗಿದ್ದ ಇವರ ಸ್ಥಾನಗಳ ದರ್ಜೆಯನ್ನು ಸರ್ಕಾರಿ ಸಾಮಾನ್ಯ ಕಾಯದರ್ಶಿಗಳ ದರ್ಜೆಗೆ ಇಳಿಸಲಾಗಿದೆ. ಸರ್ಕಾರದ ನಿಯಂತ್ರಣದೊಳಗಿನ ಮಾಹಿತಿ ಆಯುಕ್ತರರು ಸರ್ಕಾರದ ವಿರುದ್ಧವಾಗಿ ತೀರ್ಮಾನ ಕೊಡುವುದನ್ನು ನಿರೀಕ್ಷಿಸಲಾಗದು. ಬೇಕೆಂದೇ ಮಾಹಿತಿ ನಿರಾಕರಿಸುವ ಅಧಿಕಾರಿಗಳ ಮೇಲೆ ದಂಡ ವಿಧಿಸದಿರುವುದು RTI ಕಾಯ್ದೆಯ ಹಲ್ಲು ಕಿತ್ತಂತಾಗಿ, ಅಧಿಕಾರಿ ವರ್ಗವು ಪಾರದರ್ಶಕತೆಯನ್ನು ಅಲಕ್ಷಿಸುತ್ತಿದೆ ಎನ್ನುತ್ತಾರೆ ರವೀಂದ್ರನಾಥ ಗುರು.
ಇನ್ನು, 2023ರ ಡಿಜಿಟಲ್ ಖಾಸಗಿ ದತ್ತಾಂಶ ಸಂರಕ್ಷಣಾ ಕಾಯ್ದೆಯು RTI ಕಾಯ್ದೆಯ ತಿರುಳನ್ನೆ ಇಲ್ಲವಾಗಿಸಿ, ಅದನ್ನು ದುರ್ಬಲಗೊಳಸಲು ಬಳಸಿದ ಮತ್ತೊಂದು ಅಸ್ತ್ರವಾಗಿದೆ. RTI ಕಾಯ್ದೆಯಲ್ಲಿ ಮೊದಲು ಯಾವುದೇ ಮಾಹಿತಿಯು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದ್ದು, ಖಾಸಗಿ ಮಾಹಿತಿಯನ್ನು ಪಡೆಯಲು ಅವಕಾಶವಿತ್ತು. ಆದರೆ ಡಿಜಿಟಲ್ ಕಾಯ್ದೆಯ ಸೆಕ್ಷನ್ 8(1)(ರಿ) ತಿದ್ದುಪಡಿಯು ಖಾಸಗಿ ಮಾಹಿತಿಯನ್ನು ನಿರಾಕರಿಸಲು ಒಂದು ದೊಡ್ಡ ನೆಪವಾಗಿ ಬಳಕೆಯಾಗುತ್ತಿದೆ. ಅಂದರೆ ಸರ್ಕಾರಿ ಕಾರ್ಯಕ್ರಮದ ಫಲಾನುಭವಿಯಾಗಿ, ಸರ್ಕಾರಿ ಉದ್ಯೋಗಿಗಳ ಸಂಬಳ, ರಾಜಕಾರಣಿಗಳ ಆದಾಯದ ಮೂಲ, ಖಾಸಗಿ ಕಂಪೆನಿ ಮಾಲೀಕರ ಆದಾಯ /ತೆರಿಗೆ ಇತ್ಯಾದಿಗಳು ‘ಖಾಸಗಿ ಮಾಹಿತಿ’ ಎಂಬ ನೆಪದಡಿ ನಿರಾಕರಣೆಗೆ ಒಳಗಾಗುವ ಕಾರಣ ಭ್ರಷ್ಟಾಚಾರ ಬಯಲು ಮಾಡಲಾಗದು. ಮಾಹಿತಿ ಕೊಡಲು ವಿಳಂಬಿಸುತ್ತಿರುವ ಅಧಿಕಾರಿಗಳಿಗೆ ಆಯುಕ್ತರೇ ‘ನೀವು ಮಾಹಿತಿ ಕೊಡುವ ಅಗತ್ಯವಿಲ್ಲವೆಂದು’ ಹೇಳುವ ಘಟನೆಗಳೂ ಸಹ ಸಂಭವಿಸುತ್ತಿವೆಯೆಂಬ ಆತಂಕ ವ್ಯಕ್ತಪಡಿಸುತ್ತಾರೆ ಆರ್‌ಟಿಐ ಕಾರ್ಯಕರ್ತರೊಬ್ಬರು.
ಇದಿಷ್ಟೇ ಅಲ್ಲದೆ, ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಸರ್ಕಾರವು ಆಯುಕ್ತರ ನೇಮಕಾತಿಯನ್ನು ವಿಳಂಬಗೊಳಿಸುವ ಕಾರಣ ಬಹಳಷ್ಟು ಹುದ್ದೆಗಳು ಬಹುಮಟ್ಟಿಗೆ ಖಾಲಿ ಇದ್ದು, ಪ್ರಕರಣಗಳು ಇತ್ಯರ್ಥವಾಗದೆ ಬಾಕಿಯಾಗುತ್ತಿವೆ. ಕೇಂದ್ರದ ಹಂತದಲ್ಲಿ (ಸಿಐಸಿ) ಒಂದು ಮುಖ್ಯ ಮಾಹಿತಿ ಆಯುಕ್ತರು ಜೊತೆಗೆ ಹತ್ತು ಮಾಹಿತಿ ಆಯುಕ್ತರನ್ನು ಹೊಂದಿರಬೇಕು. ಅಂತೆಯೇ, ಪ್ರತಿ ರಾಜ್ಯವೂ ಒಬ್ಬ ಮುಖ್ಯ ಆಯುಕ್ತರು ಹಾಗೂ 10 ಮಾಹಿತಿ ಆಯುಕ್ತರನ್ನು ಒಳಗೊಂಡ ರಾಜ್ಯ ಮಾಹಿತಿ ಆಯೋಗವನ್ನು (ಎಸ್‍ಐಸಿ) ಹೊಂದಿರಬೇಕಾಗುತ್ತದೆ.
ಸತರ್ಕ್ ನಾಗರಿಕ ಸಂಘಟನೆಯು ಬಿಡುಗಡೆ ಮಾಡಿದ 2024-25ರ ಮಾಹಿತಿ ಆಯೋಗಗಳ ಪ್ರಗತಿ ವರದಿಯಲ್ಲಿ ಕಂಡುಬಂದ ಮುಖ್ಯ ಅಂಶಗಳು ಹೀಗಿವೆ. ಜುಲೈ 2014 ಮತ್ತು ಅಕ್ಟೋಬರ್ 2025ರ ನಡುವೆ ಮುಖ್ಯ ಮಾಹಿತಿ ಆಯುಕ್ತರನ್ನೂ ಒಳಗೊಂಡಂತೆ ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿ ಇದ್ದು, ಅನೇಕ ಆಯೋಗಗಳು ಕಾರ್ಯನಿರ್ವಹಿಸುತ್ತಿಲ್ಲ ಅಥವಾ ಕಡಿಮೆ ಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜುಲೈ 2024 ರಿಂದ 2025ರ ಅಕ್ಟೋಬರ್ 7ರ ತನಕ ದೇಶದ ಆರು ರಾಜ್ಯ ಆಯೋಗಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದವು. ಸಿಐಸಿಯಲ್ಲಿ ಮುಖ್ಯ ಮಾಹಿತಿ ಆಯುಕ್ತರ ಹುದ್ದೆ ಖಾಲಿ ಇದ್ದು, ಸೆಪ್ಟೆಂಬರ್ 2025ರ ವೇಳೆಗೆ ಇಲ್ಲಿ ಕೇವಲ ಇಬ್ಬರು ಆಯುಕ್ತರು ಮಾತ್ರ ಉಳಿದಿದ್ದರು. ಒಟ್ಟು 29 ಆಯೋಗಗಳಲ್ಲಿ, 20 ಆಯೋಗಗಳು 23-24ರ ವರದಿಯನ್ನು ಪ್ರಕಟಿಸಿರುವುದಿಲ್ಲ, 90%ಕ್ಕೂ ಹೆಚ್ಚು ದಂಡ ವಿಧಿಸಬಹುದಾದ ಪ್ರಕರಣಗಳಲ್ಲಿ ಆಯುಕ್ತರು ಮಾಹಿತಿ ನಿರಾಕರಿಸಿದ ಅಧಿಕಾರಿಗಳಿಗೆ ದಂಡ ವಿಧಿಸದೆ ಕೇವಲ ಎಚ್ಚರಿಕೆ ನೀಡಿರುತ್ತಾರೆ ಅಥವಾ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇವೆಲ್ಲಾ ಕಾರಣಗಳಿಂದ ಜೂನ್ 30, 2025ರ ವೇಳೆಗೆ ದೇಶದಲ್ಲಿ ಒಟ್ಟು 4.15 ಲಕ್ಷ ಮೇಲ್ಮನವಿ ಮತ್ತು ದೂರುಗಳು ಬಾಕಿ ಉಳಿದಿದ್ದರೆ, ಮಹಾರಾಷ್ಟ್ರವು ದೇಶದಲ್ಲಿಯೇ ಅತಿ ಹೆಚ್ಚಿನ ಬಾಕಿ ಹೊಂದಿದೆ. ಕರ್ನಾಟಕ ಎರಡನೆ ಸಾಲಿನಲ್ಲಿದ್ದು ಒಟ್ಟು 47825 ಪ್ರಕರಣಗಳು ಬಾಕಿ ಉಳಿಸಿಕೊಂಡಿದೆ. ಇದೇ ವೇಗವನ್ನು ಅನುಸರಿಸಿದರೆ, ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸುಮಾರು 20-25 ವರ್ಷಗಳು ಹಿಡಿಯಬಹುದು ಎಂಬಂತಹ ಆತಂಕಕಾರಿ ವಿಷಯಗಳನ್ನು ಈ ವರದಿ ಬಯಲುಗೊಳಿಸಿದೆ.
ಸಿವಿಕ್-ಬೆಂಗಳೂರು ಸಂಸ್ಥೆಯ ಮುಖ್ಯಸ್ಥರು ಮತ್ತು ಕ್ರಿಯಾಕಟ್ಟೆಯ ಪ್ರಮುಖ ಸದಸ್ಯರಾದ ಕಾತ್ಯಾಯಿನಿ ಚಾಮರಾಜ್ ಅವರು ರಾಜ್ಯ ಆಯುಕ್ತರ ನೇಮಕಾತಿ ಪ್ರಕ್ರಿಯೆಯು ಈ ವ್ಯವಸ್ಥೆಯ ಅವನತಿಗೆ ಕಾರಣವಾಗಿ, ನೇಮಕಾತಿಗಳನ್ನು ರಾಜಕೀಯಗೊಳಿಸಲಾಗಿದೆ. ಅದು ನಿಲ್ಲಬೇಕಾಗಿದ್ದು, ನೇಮಕಾತಿಯಲ್ಲಿ ಪಾರದರ್ಶಕ ಪ್ರಕ್ರಿಯೆ ತರಬೇಕಿದೆ. ಕೇವಲ ನಿವೃತ್ತಿ ಹೊಂದಿದ ಅಧಿಕಾರಿಗಳನ್ನಲ್ಲದೆ, ಬೇರೆ ಕ್ಷೇತ್ರದಿಂದಲೂ ಆಯುಕ್ತರನ್ನು ಆಯ್ಕೆ ಮಾಡಿಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದ್ದರೂ, ಹಾಗೆ ನಡೆಯುತ್ತಿಲ್ಲ ಎಂದಿರುವುದನ್ನು ಸಿಟಿಜನ್ ಮ್ಯಾಟರ್ಸ್ ಪತ್ರಿಕೆ ವರದಿ ಮಾಡಿದೆ. (ವೈದ್ಯ ಆರ್, ಆಗಸ್ಟ್ 17, 2022).
ಹುದ್ದೆಗಳ ಕೊರತೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಅಂಜಲಿ ಭಾರದ್ವಾಜ್ ಮತ್ತು ಇತರರು ಸುಪ್ರಿಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ, 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ್ದು, ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಮತ್ತು ಸಂಬಂಧಿತ ಸರ್ಕಾರಗಳು ನೇಮಕಾತಿ ಪ್ರಕ್ರಿಯೆಯನ್ನು ಎರಡು ತಿಂಗಳು ಮೊದಲೇ ಪ್ರಾರಂಭಿಸಬೇಕು ಎಂದು ಹೇಳಿರುತ್ತದೆ. ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರ ಹೇಳಿಕೆಯಂತೆ ಕರ್ನಾಟಕದ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ (ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ನವೆಂಬರ್ 17, 2025). ಕೇಂದ್ರದಲ್ಲಿಯೂ (ಸಿಐಸಿ) ಎಲ್ಲಾ ಹುದ್ದೆಗಳು ಭರ್ತಿಯಾಗಿ, ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇನ್ನೂ ಅನೇಕ ರಾಜ್ಯಗಳಲ್ಲಿ ಸುಧಾರಣೆ ಕಂಡುಬಂದಿಲ್ಲದ ಕಾರಣ ಪ್ರಕರಣಗಳ ಬಾಕಿಯ ಬೆಟ್ಟವೇ ಬೆಳೆಯಬಹುದಾಗಿದೆ.
ಇದನ್ನೂ ಓದಿ Eko | ಶಬ್ಧಗಳಿಲ್ಲದ ಪಿತೃತ್ವದ ಪ್ರತಿಧ್ವನಿ
ಜನರು ದುರುದ್ದೇಶದಿಂದ ಕೇವಲ ಅಧಿಕಾರಿಗಳ ಪೀಡನೆಗಾಗಿ RTI ಬಳಕೆ ಮಾಡಿಕೊಳ್ಳುತ್ತಿದ್ದು, ಕಚೇರಿಗಳ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗಿದೆ ಎಂಬಂತಹ ಕಾರಣಗಳಿಂದ ಮಾಹಿತಿಯನ್ನು ನಿರಾಕರಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ RTI ಹೋರಾಟಗಾರರು. ಇದರಲ್ಲಿ ಸ್ವಲ್ಪಮಟ್ಟಿನ ಸತ್ಯವಿದೆಯಾದರೂ, ಇತರೆ ಎಲ್ಲಾ ಕಾನೂನುಗಳಲ್ಲಿಯೂ ಇಂತಹ ದುರ್ಬಳಕೆಯನ್ನು ಕಾಣಬಹುದು. ಆದ್ದರಿಂದ ಈ ನೆಪವೊಡ್ಡಿ ಒಂದು ಜನಪರ ಕಾಯ್ದೆಯನ್ನೇ ಬಲಿ ಕೊಡುವುದು ನ್ಯಾಯ ಸಮ್ಮತವಲ್ಲ.
2005ರ ಮಾಹಿತಿ ಹಕ್ಕು, ಮತ್ತು 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಹಾಗೂ 2009ರ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು – ಈ ಮೂರು ಮಹತ್ವದ ಕಾಯ್ದೆಗಳನ್ನು ದುರ್ಬಲಗೊಳಿಸಿದ ರೀತಿಯು ಜನರು ತಮ್ಮ ಹಕ್ಕನ್ನು ಚಲಾಯಿಸುವುದು ಸರ್ಕಾರಗಳಿಗೆ ಆಗಿ ಬರುವುದಿಲ್ಲ ಎನ್ನುವುದಕ್ಕೆ ನಾವುಗಳು ಸಾಕ್ಷೀಭೂತರಾಗಿದ್ದೇವೆ. ನಾಗರಿಕರ ಹಕ್ಕನ್ನು ಹತ್ತಿಕ್ಕುವ ಇಂತಹ ಪ್ರಯತ್ನಗಳು ಸಂವಿಧಾನಿಕ ಸಿದ್ದಾಂತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸುವ ದಿಕ್ಕಿನತ್ತ ಸಾಗಿವೆ. ಈ ಪರಿಸ್ಥಿತಿಯಲ್ಲಿ ಅನೇಕ RTIಗಾಗಿ ಹೊರಡುತ್ತಿರುವ ಸಂಘಸಂಸ್ಥೆ ಮತ್ತು ವ್ಯಕ್ತಿಗಳ ಬಿಡದ ಛಲವು ಈ ಜನಪರ ಮತ್ತು ಪ್ರಗತಿಶೀಲ ಕಾಯ್ದೆಗೆ ಜೀವ ತುಂಬುವ ಭರವಸೆ ನೀಡಿದ್ದು, ಅದಕ್ಕೆ ಸಾರ್ವಜನಿಕರ ಸಂಪೂರ್ಣ ಬೆಂಬಲದ ಅವಶ್ಯಕತೆ ಇದೆ.

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.




