10,194 ಕೋಟಿ ರೂ. ಅಕ್ರಮದ ಸುಳಿಯಲ್ಲಿ ‘ಸ್ಕಿಲ್ ಇಂಡಿಯಾ’: ಸಿಎಜಿ ವರದಿಯ ಆಘಾತಕಾರಿ ಮಾಹಿತಿ

Date:

ಸ್ಕಿಲ್ ಇಂಡಿಯಾ ಯೋಜನೆಯು ಉದ್ದೇಶದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದರೂ, ಅನುಷ್ಠಾನದ ಹಂತದಲ್ಲಿನ ಭ್ರಷ್ಟಾಚಾರದಿಂದಾಗಿ ಹಾದಿ ತಪ್ಪಿದೆ. ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ಬದಲಾಯಿಸುವ ಬದಲು, ಅವರನ್ನು ಕೇವಲ ನಕಲಿ ಅಂಕಿಅಂಶಗಳನ್ನಾಗಿ ಬಳಸಿಕೊಂಡಿರುವುದು ವಿಪರ್ಯಾಸ. ಸಿಎಜಿ ವರದಿ ಮತ್ತು ಮಾಧ್ಯಮಗಳ ಸತ್ಯಶೋಧನೆ ಕೇವಲ ಆರೋಪಗಳಲ್ಲ, ಅವು ವ್ಯವಸ್ಥೆಯ ಕನ್ನಡಿ. ಸರ್ಕಾರ ಈಗಲಾದರೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ‘ಸ್ಕಿಲ್ ಇಂಡಿಯಾ’ ಎಂದರೆ ‘ಸ್ಕ್ಯಾಮ್ ಇಂಡಿಯಾ’ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ.

“ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ” ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಘೋಷಣೆಯೊಂದಿಗೆ 2015ರಲ್ಲಿ ಆರಂಭವಾದ ಮಹತ್ವಾಕಾಂಕ್ಷೆಯ ‘ಸ್ಕಿಲ್‌ ಇಂಡಿಯಾ’ ಅಥವಾ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ, ಇದೀಗ ಅದೇ ಘೋಷಣೆಯನ್ನು ಅಣಕಿಸುವಂತೆ ಬರೋಬ್ಬರಿ 10,194 ಕೋಟಿ ರೂಪಾಯಿಗಳ ಬೃಹತ್ ಹಗರಣದ ಸುಳಿಯಲ್ಲಿ ಸಿಲುಕಿದೆ. ಭಾರತದ ಯುವಜನತೆಯನ್ನು ಕೌಶಲ ಸಂಪನ್ನರನ್ನಾಗಿ ಮಾಡಿ, ವಿಶ್ವದ ‘ಕೌಶಲ ರಾಜಧಾನಿ’ಯನ್ನಾಗಿ ದೇಶವನ್ನು ರೂಪಿಸುವ ಕನಸು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾಲಿಗೆ ಹಣ ಲೂಟಿ ಮಾಡುವ ಮಾರ್ಗವಾಗಿ ಮಾರ್ಪಟ್ಟಿದೆ ಎಂಬ ಆಘಾತಕಾರಿ ಸಂಗತಿಯನ್ನು ಭಾರತದ ಮಹಾಲೇಖಪಾಲರ(CAG) ವರದಿಗಳು ಎಳೆಎಳೆಯಾಗಿ ಬಿಚ್ಚಿಟ್ಟಿವೆ.

ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಯಾಗಿರುವ ಮತ್ತು ದೇಶದ ಖಜಾನೆಯ ಕಾವಲುಗಾರನಂತಿರುವ ಸಿಎಜಿ ಸಂಸತ್ತಿಗೆ ಸಲ್ಲಿಸಿದ ವರದಿಯು, ಕೌಶಲ ಅಭಿವೃದ್ಧಿ ಹೆಸರಿನಲ್ಲಿ ನಡೆದ ಹಗಲು ದರೋಡೆಯನ್ನು ಜಗಜ್ಜಾಹೀರು ಮಾಡಿದೆ. 2025-16 ರಿಂದ 2021-22ರ ಅವಧಿಯಲ್ಲಿ ಈ ಯೋಜನೆಗಾಗಿ ಸರ್ಕಾರ ಸುಮಾರು 14,448 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. ಇದರಲ್ಲಿ 13,288 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ, ಆತಂಕಕಾರಿ ವಿಷಯವೇನೆಂದರೆ, ಇದರಲ್ಲಿ ಸುಮಾರು 10,194 ಕೋಟಿ ರೂಪಾಯಿ ಹಣಕ್ಕೆ ಯಾವುದೇ ಸಮರ್ಪಕ ಲೆಕ್ಕವಿಲ್ಲ! ತೆರಿಗೆದಾರರ ಈ ಬೃಹತ್‌ ಮೊತ್ತ ಯಾರ ಜೇಬು ಸೇರಿದೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯೋಜನೆಯ ಮೂಲ ಉದ್ದೇಶ ಶಾಲಾ-ಕಾಲೇಜು ಅರ್ಧಕ್ಕೆ ಬಿಟ್ಟವರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗಾಧಾರಿತ ತರಬೇತಿ ನೀಡುವುದಾಗಿತ್ತು. ಆದರೆ, ಸಿಎಜಿ ಪರಿಶೀಲಿಸಿದ ದತ್ತಾಂಶಗಳ ಪ್ರಕಾರ, ಶೇ.94 ರಷ್ಟು ಫಲಾನುಭವಿಗಳ ಮಾಹಿತಿಯೇ ದೋಷಪೂರಿತವಾಗಿದೆ ಅಥವಾ ಲಭ್ಯವಿಲ್ಲ. ಸರ್ಕಾರ ಸುಮಾರು 1.10 ಕೋಟಿ ಯುವಕರಿಗೆ ತರಬೇತಿ ನೀಡಿದ್ದೇವೆ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ಸರಿಯಾದ ದಾಖಲೆಗಳು ಸಿಗುತ್ತಿರುವುದು ಕೇಲವೇ ಲಕ್ಷ ಅಭ್ಯರ್ಥಿಗಳಿಗೆ ಮಾತ್ರ. ಉಳಿದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತರಬೇತಿ ಪಡೆದವರು ಯಾರು? ಎಂಬ ಪ್ರಶ್ನೆಗೆ ಉತ್ತರ ಶೂನ್ಯ.

ಹಗರಣದ ಸ್ವರೂಪ ಎಷ್ಟೊಂದು ಆಳವಾಗಿದೆ ಎಂದರೆ, ಅಭ್ಯರ್ಥಿಗಳ ಬ್ಯಾಂಕ್ ಖಾತೆ ವಿವರಗಳಲ್ಲಿ ನಡೆದಿರುವ ವಂಚನೆ ಬೆಚ್ಚಿಬೀಳಿಸುವಂತಿದೆ. ನೇರ ನಗದು ವರ್ಗಾವಣೆ(DBT) ಮೂಲಕ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಸೇರಬೇಕಿತ್ತು. ಆದರೆ, ಸಾವಿರಾರು ಅಭ್ಯರ್ಥಿಗಳ ಬ್ಯಾಂಕ್‌ ಖಾತೆ ಸಂಖ್ಯೆಯ ಜಾಗದಲ್ಲಿ ‘’11111111111′, ‘123456789’, ಅಥವಾ ‘0’ ಎಂದು ನಮೂದಿಸಲಾಗಿದೆ. ಒಂದೇ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ನೂರಾರು ವಿದ್ಯಾರ್ಥಿಗಳಿಗೆ ಜೋಡಿಸಿ, ಹಣವನ್ನು ಗುಳಂ ಮಾಡಲಾಗಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ಆರ್ಥಿಕ ಅಪರಾಧವಾಗಿದೆ ಎಂಬುದು ವರದಿಯಿಂದ ಬಯಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನಕ್ಸಲ್ ನಿಗ್ರಹದ ನೆಪದಲ್ಲಿ ಪ್ರಕೃತಿ ಸಂಪತ್ತಿನ ಲೂಟಿಗಿಳಿಯಿತೇ ಸರ್ಕಾರ?

ಕೇವಲ ಬ್ಯಾಂಕ್ ಖಾತೆಗಳಲ್ಲದೆ, ಅಭ್ಯರ್ಥಿಗಳ ಗುರುತಿನ ಚೀಟಿ ಮತ್ತು ಭಾವಚಿತ್ರಗಳಲ್ಲಿಯೂ ಅಕ್ರಮ ನಡೆದಿದೆ. ಒಬ್ಬನೇ ವ್ಯಕ್ತಿಯ ಫೋಟೋವನ್ನು ಬಳಸಿ, ಬೇರೆ ಬೇರೆ ಹಸರುಗಳಲ್ಲಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಉದಾಹರಣೆ, ಒಬ್ಬ ವ್ಯಕ್ತಿ ಏಕಕಾಲದಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಕರ್ನಾಟಕದಲ್ಲಿ ತರಬೇತಿ ಪಡೆಯುತ್ತಿದ್ದಾನೆ ಎಂದು ತೋರಿಸಿ, ತರಬೇತಿ ಪಾಲುದಾರರು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ್ದಾರೆ. ಇಲ್ಲದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದಂತೆ ತೋರಿಸಿ ಕೋಟ್ಯಂತರ ರೂ. ಬಿಲ್‌ ಮಾಡಿಕೊಳ್ಳಲಾಗಿದೆ.

ಕ್ಷೇತ್ರ ಮಟ್ಟದ ವಾಸ್ತವ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಮಾಧ್ಯಮಗಳ ತನಿಖಾ ವರದಿಗಳ ಪ್ರಕಾರ, ಕಾಗದದ ಮೇಲೆ ‘ಸಕ್ರಿಯ’ ಎಂದು ತೋರಿಸಲಾದ ಸಾವಿರಾರು ತರಬೇತಿ ಕೇಂದ್ರಗಳು ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲ. ಕೆಲವು ಕಡೆ ಬೀಗ ಜಡಿದ ಕೊಠಡಿಗಳು, ಪಾಳುಬಿದ್ದ ಕಟ್ಟಡಗಳು ಮತ್ತು ದನದ ಕೊಟ್ಟಿಗೆಗಳಂತಹ ಜಾಗಗಳನ್ನು ‘ಅತ್ಯಾಧುನಿಕ ಕೌಶಲ ತರಬೇತಿ ಕೇಂದ್ರ’ಗಳೆಂದು ಬಿಂಬಿಸಲಾಗಿದೆ. ಅಧಿಕಾರಿಗಳು ತಪಾಸಣೆಗೆ ಹೋದಾಗ, ಅಲ್ಲಿ ಸ್ಕಿಲ್ ಇಂಡಿಯಾದ ಬೋರ್ಡ್‌ಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ.

ಕೌಶಲ ತರಬೇತಿ ನೀಡಲು ಅರ್ಹ ತರಬೇತುದಾರರು ಇರುವುದು ಕಡ್ಡಾಯ. ಆದರೆ, ಸ್ಕಿಲ್‌ ಇಂಡಿಯಾ ಪೋರ್ಟಲ್‌ನಲ್ಲಿರುವ ದತ್ತಾಂಶದ ಪ್ರಕಾರ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ತರಬೇತುದಾರರು ಐಡಿ ಜಾಗದಲ್ಲಿ “Null’ ಅಥವಾ ‘0’ ಎಂದು ದಾಖಲೆ ಸೃಷ್ಟಿಸಲಾಗಿದೆ. ಸುಮಾರು 57,000 ಕ್ಕೂ ಹೆಚ್ಚು ತರಬೇತುದಾರರ ದಾಖಲೆಗಳು ಅನುಮಾನಾಸ್ಪದವಾಗಿದ್ದು, ಇದು ತರಬೇತಿಯ ಗುಣಮಟ್ಟದ ಅಣಕವಾಗಿದೆ.

ಸ್ಕಿಲ್ ಇಂಡಿಯಾ ಯೋಜನೆಯು ಖಾಸಗಿ ಎನ್‌ಜಿಒಗಳು ಮತ್ತು ತರಬೇತಿ ಪಾಲುದಾರರ ಪಾಲಿಗೆ ಒಂದು ‘ಸಮಾನಾಂತರ ಮಾಯಾಲೋಕ’ವಾಗಿ (Parallel NGO Universe) ಮಾರ್ಪಟ್ಟಿದೆ. ತರಬೇತಿ ನೀಡುವ ಕಾಳಜಿಗಿಂತ, ಸರ್ಕಾರದ ಅನುದಾನ ಪಡೆಯುವುದೇ ಇವರ ಮುಖ್ಯ ಉದ್ದೇಶವಾಗಿತ್ತು. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ (NSDC) ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಶಾಮೀಲಾಗುವಿಕೆಯಿಂದಾಗಿ, ಈ ಖಾಸಗಿ ಸಂಸ್ಥೆಗಳು ಯಾವುದೇ ಭಯವಿಲ್ಲದೆ ನಕಲಿ ಬಿಲ್ ಸೃಷ್ಟಿಸುವ ದಂಧೆಯಲ್ಲಿ ತೊಡಗಿದ್ದವು.

ಉದ್ಯೋಗ ಸೃಷ್ಟಿಯ ವಿಷಯದಲ್ಲಿಯೂ ಅಂಕಿಅಂಶಗಳು ವಾಸ್ತವಕ್ಕೆ ದೂರವಾಗಿವೆ. ‘ಕೌಶಲ ಪಡೆದರೆ ಉದ್ಯೋಗ ಗ್ಯಾರಂಟಿ’ ಎಂಬ ಭರವಸೆ ಹುಸಿಯಾಗಿದೆ. ತರಬೇತಿ ಪಡೆದವರಲ್ಲಿ ಒಂದಷ್ಟು ಜನರಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದರೂ, ಅದರಲ್ಲಿಯೂ ಅನೇಕರಿಗೆ ಸಿಕ್ಕಿರುವ ಕೆಲಸಗಳು ಅವರು ಪಡೆದ ತರಬೇತಿಗೆ ಸಂಬಂಧವೇ ಇಲ್ಲದವು. ಡಾಟಾ ಎಂಟ್ರಿ ಕಲಿತವರಿಗೆ ಡೆಲಿವರಿ ಕೆಲಸ, ಎಲೆಕ್ಟ್ರಿಷಿಯನ್ ತರಬೇತಿ ಪಡೆದವರಿಗೆ ಕೂಲಿ ಕೆಲಸ ಸಿಕ್ಕಿರುವುದನ್ನು ‘ಸ್ಕಿಲ್ ಜಾಬ್ಸ್’ ಎಂದು ಬಿಂಬಿಸಲಾಗಿದೆ. ಉಳಿದ ಲಕ್ಷಾಂತರ ಪ್ರಮಾಣೀಕೃತ ಅಭ್ಯರ್ಥಿಗಳು ಇಂದಿಗೂ ನಿರುದ್ಯೋಗಿಗಳಾಗಿಯೇ ಅಲೆದಾಡುತ್ತಿದ್ದಾರೆ.

ರಾಜಕೀಯವಾಗಿ ಈ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನು “ಸ್ವತಂತ್ರ ಭಾರತದ ಅತಿದೊಡ್ಡ ಹಗರಣ” ಎಂದು ಕರೆದಿದ್ದು, ಪ್ರಧಾನಿಯವರ ಮೌನವನ್ನು ಪ್ರಶ್ನಿಸಿದೆ. “ಕೇಂದ್ರ ಸರ್ಕಾರದ ಮೂಗಿನಡಿಯಲ್ಲೇ 10,000 ಕೋಟಿ ಲೂಟಿಯಾದರೂ ಚೌಕಿದಾರರು ಏನು ಮಾಡುತ್ತಿದ್ದರು?” ಎಂದು ವಿರೋಧ ಪಕ್ಷಗಳು ಲೇವಡಿ ಮಾಡಿವೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಂದ ಹಣ ವಸೂಲಿ ಮಾಡಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.

ಟೀಕೆಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೌಶಲ ಅಭಿವೃದ್ಧಿ ಸಚಿವಾಲಯ, ಸುಮಾರು 178 ತರಬೇತಿ ಪಾಲುದಾರರನ್ನು ಕಪ್ಪು ಪಟ್ಟಿಗೆ  ಸೇರಿಸಿರುವುದಾಗಿ ಮತ್ತು 41 ಎಫ್‌ಐಆರ್ ದಾಖಲಿಸಿರುವುದಾಗಿ ತಿಳಿಸಿದೆ. “ನಾವು ವ್ಯವಸ್ಥೆಯನ್ನು ಶುದ್ಧೀಕರಿಸುತ್ತಿದ್ದೇವೆ ಮತ್ತು PMKVY 4.0 ಆವೃತ್ತಿಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಪಾರದರ್ಶಕತೆ ತರುತ್ತಿದ್ದೇವೆ” ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಈಗಾಗಲೇ ಪೋಲಾಗಿರುವ ಸಾವಿರಾರು ಕೋಟಿ ಹಣವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ.

ಸ್ಕಿಲ್ ಇಂಡಿಯಾ ಯೋಜನೆಯು ಉದ್ದೇಶದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದರೂ, ಅನುಷ್ಠಾನದ ಹಂತದಲ್ಲಿನ ಭ್ರಷ್ಟಾಚಾರದಿಂದಾಗಿ ಹಾದಿ ತಪ್ಪಿದೆ. ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ಬದಲಾಯಿಸುವ ಬದಲು, ಅವರನ್ನು ಕೇವಲ ನಕಲಿ ಅಂಕಿಅಂಶಗಳನ್ನಾಗಿ ಬಳಸಿಕೊಂಡಿರುವುದು ವಿಪರ್ಯಾಸ. ಸಿಎಜಿ ವರದಿ ಮತ್ತು ಮಾಧ್ಯಮಗಳ ಸತ್ಯಶೋಧನೆ ಕೇವಲ ಆರೋಪಗಳಲ್ಲ, ಅವು ವ್ಯವಸ್ಥೆಯ ಕನ್ನಡಿ. ಸರ್ಕಾರ ಈಗಲಾದರೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ‘ಸ್ಕಿಲ್ ಇಂಡಿಯಾ’ ಎಂದರೆ ‘ಸ್ಕ್ಯಾಮ್ ಇಂಡಿಯಾ’ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ. ಇಲ್ಲದಿದ್ದರೆ, ಅಭಿವೃದ್ಧಿಯ ಕನಸು ಕಾಣುವ ಕೋಟ್ಯಂತರ ಯುವಕರಿಗೆ ನಂಬಿಕೆ ದ್ರೋಹ ಬಗೆದಂತಾಗುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...