ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ ಉಳಿಯುವುದೆಲ್ಲವೂ ಮೋದಿಮಯ. ಸರ್ಕಾರದ ಪರವಾದ ಐಟಿ ಸೆಲ್ ಖಾತೆಗಳು ಮತ್ತು ಪ್ರಧಾನಿಯನ್ನು ಹೊಗಳುವ ಭಜನಾ ಮಂಡಳಿಗಳು ಮಾತ್ರ ಉಳಿಯುವುದು ಎಂಬುದು ಸತ್ಯಾಂಶ. ವಿಮರ್ಶೆಯೇ ಇಲ್ಲದ ಪ್ರಜಾಪ್ರಭುತ್ವವು ಸರ್ವಾಧಿಕಾರಕ್ಕೆ ಸಮ.
1975ರ ಜೂನ್ 25ರ ಮಧ್ಯರಾತ್ರಿ ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವು ಪತ್ರಿಕೆ ಕಚೇರಿಗಳ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗಿತ್ತು. ಪತ್ರಕರ್ತರನ್ನು ಜೈಲಿಗಟ್ಟಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹತ್ತಿಕ್ಕಲಾಗಿತ್ತು. ಇದನ್ನು ಪದೇ ಪದೇ ನೆನಪಿಸಿಕೊಳ್ಳುವವರು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು. ಆ ಕರಾವಳ ದಿನಗಳು ಮತ್ತೆ ಬರಬಾರದು. ನಾವು ಬರಲು ಬಿಡಲ್ಲ ಎಂದು ಹೇಳಿಕೊಳ್ಳುತ್ತಲೇ ನಮ್ಮನ್ನು ಅಘೋಷಿತ ತುರ್ತು ಪರಿಸ್ಥಿತಿಗೆ ದೂಡುತ್ತಲಿದ್ದಾರೆ. ತುರ್ತು ಪರಿಸ್ಥಿತಿಯನ್ನು ಟೀಕಿಸುವ ಅದೇ ಸರ್ಕಾರವು ಇದೀಗ ದೇಶವನ್ನು ಮತ್ತೊಂದು ರೀತಿಯ ‘ಡಿಜಿಟಲ್ ತುರ್ತುಪರಿಸ್ಥಿತಿ’ಗೆ ನೂಕುತ್ತಿದೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆನ್ಸಾರ್‌ಶಿಪ್ ಕಾಗದದ ರೂಪದಲ್ಲಿರುವ ಪತ್ರಿಕೆಗಳ ಮೇಲಿತ್ತು. ಮಾಧ್ಯಮಗಳು ಸರ್ಕಾರದ ವಿರುದ್ಧ ಸುದ್ದಿ ಪ್ರಕಟಿಸುವುದನ್ನು ತಡೆಯಲಾಗಿತ್ತು. ಆದರೆ ಇಂದು ಸರ್ಕಾರದ ಈ ‘ಎಮರ್ಜೆನ್ಸಿ’ ಡಿಜಿಟಲ್ ರೂಪಕ್ಕೆ ಇಳಿದಿದೆ. ಅಲ್ಗಾರಿದಮ್ ಮತ್ತು ಐಟಿ ಕಾಯ್ದೆಯ ರೂಪದಲ್ಲಿದೆ. ಸರ್ಕಾರದ ವಿಫಲತೆಗಳನ್ನು ಪ್ರಶ್ನಿಸುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸದ್ದಿಲ್ಲದೆಯೇ ನಿರ್ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾವು ಅವುಗಳನ್ನು ಕಾನೂನು, ಕಾಯ್ದೆ ಎಂಬ ದೃಷ್ಟಿಯಿಂದ ನೋಡುತ್ತಿದ್ದೇವೆ. ನಿಯಮ ಒಪ್ಪದು ಎನ್ನುತ್ತೇವೆ. ಆದರೆ ಯಾವ ನಿಯಮ, ಯಾರು ರೂಪಿಸಿದ ನಿಯಮ, ಸರಿಯಾಗಿ ಪಾಲನೆ ನಡೆಯುತ್ತಿದೆಯೇ ಎಂಬ ಆಯಾಮದಲ್ಲಿ ನಾವೊಮ್ಮೆ ಇಣುಕಿ ನೋಡಲೇಬೇಕು. ಹೀಗೆ ದೃಷ್ಟಿ ಹಾಯಿಸಿದಾಗ ನಮಗೆ ನಿಧಾನವಾಗಿ ಕಾಣುವುದು ಎಲ್ಲವೂ ಮೋದಿಮಯ!
ಇದನ್ನು ಓದಿದ್ದೀರಾ? ಕೇಂದ್ರದ ಕದ ತಟ್ಟಿದ ‘ಸ್ಕೀಮ್’ ನೌಕರರು; ಭರವಸೆ ಪೂರೈಸುವುದೇ ಮೋದಿ ಸರ್ಕಾರ?
ಸದ್ಯ ಸಾಮಾಜಿಕ ಜಾಲತಾಣಗಳು ರಾಜಕೀಯ ಸಿದ್ಧಾಂತಗಳ ಪ್ರಚಾರದ ವೇದಿಕೆ. ಆದರೆ ಭಾರತದಲ್ಲಿ ಬಿಜೆಪಿಯ ಬಲಪಂಥೀಯ ಸಿದ್ಧಾಂತಕ್ಕೆ ಮಾತ್ರ ಅವಕಾಶ. ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ, ವಿಮರ್ಶಿಸುವ ಅಥವಾ ಪ್ರಶ್ನಿಸುವ ಧ್ವನಿಗಳನ್ನು ಸದ್ದಿಲ್ಲದೆ ಅಡಗಿಸಲಾಗುತ್ತಿದೆ. ಅದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 69A ಎಂಬ ಅಸ್ತ್ರವನ್ನು ಬಳಸಲಾಗುತ್ತಿದೆ. ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿ ಉಳಿದಿಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಡಿಜಿಟಲ್ ಸೆನ್ಸಾರ್‌ಶಿಪ್’.
ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸುವ ಅಧಿಕಾರವನ್ನು ಹೊಂದಿದೆ. ದೇಶದ ರಕ್ಷಣೆ, ಸಾರ್ವಭೌಮತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಗಂಭೀರ ಕಾರಣಗಳಿದ್ದರೆ ಖಾತೆಗಳನ್ನು ಸರ್ಕಾರ ಅಳಿಸಿಹಾಕಬಹುದು. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದೇ ಬೇರೆ. ಜತೆಗೆ ಈ ಕಾಯ್ದೆಯಡಿ ಕಾರಣ ತಿಳಿಸದೆ ಕ್ರಮ ಜರುಗಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯೂ ಆಗುತ್ತಿದೆ.
ವಾಸ್ತವದಲ್ಲಿ ಸುಪ್ರೀಂ ತೀರ್ಪು ಉಲ್ಲಂಘನೆಯಲ್ಲವೇ?
ಸರ್ಕಾರ ನೀಡುವ ಹೆಚ್ಚಿನ ನಿರ್ಬಂಧದ ಆದೇಶಗಳು ರಹಸ್ಯವಾಗಿರುತ್ತವೆ. ಅಂದರೆ ಬಳಕೆದಾರನಿಗೆ ತನ್ನ ಖಾತೆಯನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಕನಿಷ್ಠ ಮಾಹಿತಿಯೂ ನೀಡಲಾಗುತ್ತಿಲ್ಲ. ಇನ್ನು ಸಹಯೋಗ್ ಪೋರ್ಟಲ್ ಮೂಲಕ ಸರ್ಕಾರ ಸಾವಿರಾರು ಯುಆರ್‌ಎಲ್‌ಗಳನ್ನು (URLs) ಮತ್ತು ಖಾತೆಗಳನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಆದೇಶಿಸುತ್ತಿದೆ. 2014ರಿಂದ 2020ರ ಅವಧಿಯಲ್ಲಿ ಕೇಂದ್ರವು ಒಟ್ಟು 19,172 ಸಾಮಾಜಿಕ ಮಾಧ್ಯಮ ಖಾತೆಗಳು ಅಥವಾ ಯುಆರ್‌ಎಲ್ (URL)ಗಳನ್ನು ನಿರ್ಬಂಧಿಸಿದೆ. 2014ರಲ್ಲಿ ಕೇವಲ 471ರಷ್ಟಿದ್ದ ಈ ಸಂಖ್ಯೆಯು 2020ರ ವೇಳೆಗೆ 9,849ಕ್ಕೆ ಏರಿಕೆಯಾಗಿದೆ. ಅಂದರೆ ಸುಮಾರು 2,000 ಪ್ರತಿಶತದಷ್ಟು ಹೆಚ್ಚಳ ಕಂಡುಬಂದಿದೆ. 2024 ಮತ್ತು 2025ರ ಅವಧಿಯಲ್ಲಿ ಈ ಪ್ರಮಾಣವು ಇನ್ನೂ ಹೆಚ್ಚಾಗಿದ್ದು, ಸಾವಿರಾರು ಖಾತೆಗಳನ್ನು ನಿರ್ಬಂಧಿಸಲಾಗಿದೆ. ಈ ಪೈಕಿ ಬಹುತೇಕ ಖಾತೆಗಳು ಮೋದಿ ನೀತಿಗಳನ್ನು ಟೀಕಿಸುವ, ವ್ಯಂಗ್ಯಚಿತ್ರಗಳನ್ನು ಹಂಚಿಕೊಳ್ಳುವ ಅಥವಾ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವ ಖಾತೆಗಳಾಗಿದೆ.
2015ರ ಐತಿಹಾಸಿಕ ಶ್ರೇಯಾ ಸಿಂಘಾಲ್ ವಿರುದ್ದ ಕೇಂದ್ರ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 69A ಅಡಿ ಕಾರಣ ತಿಳಿಸದೆ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಯಾವುದೇ ಮಾಹಿತಿಯನ್ನು ನಿರ್ಬಂಧಿಸುವ ಮೊದಲು ಲಿಖಿತ ಕಾರಣಗಳನ್ನು ನೀಡಬೇಕು. ಸೆಕ್ಷನ್ 69A ಅನ್ನು ಅತೀ ಅಗತ್ಯವಿದ್ದಾಗ ಮಾತ್ರ ಬಳಸಬೇಕು. ಬಳಕೆದಾರನಿಗೆ ತನ್ನ ವಾದವನ್ನು ಮಂಡಿಸಲು ಅವಕಾಶ ನೀಡಬೇಕು ಎಂದೂ ತಿಳಿಸಿದೆ.
ಇದನ್ನು ಓದಿದ್ದೀರಾ? ಅದಾನಿ ಕುರಿತ 138 ವೀಡಿಯೊಗಳನ್ನು ಡಿಲೀಟ್ ಮಾಡಲು ಕೇಂದ್ರ ಆದೇಶ; ಸರ್ಕಾರದ ವಕಾಲತ್ತು ಯಾಕೆ?
ಆದರೆ ಇತ್ತೀಚಿನ ದಿನಗಳಲ್ಲಿ ಸೆಕ್ಷನ್ 69A ರ ದುರುಪಯೋಗ ಮಾಡಲಾಗುತ್ತಿದೆ. ಮೋದಿ ಸರ್ಕಾರದ ಈ ಕ್ರಮದ ವಿರುದ್ದ ‘X’ (ಟ್ವಿಟ್ಟರ್) ನಂತಹ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದೆ. ಯಾವುದೇ ಪೂರ್ವ ಮಾಹಿತಿ ನೀಡದೆಯೇ ಇಡೀ ಖಾತೆಗಳನ್ನೇ ನಿರ್ಬಂಧಿಸಲು ಒತ್ತಡ ಹೇರಲಾಗುತ್ತಿದೆ ಎಂದು ಎಕ್ಸ್ ಈಗಾಗಲೇ ಆರೋಪಿಸಿವೆ. ನಿರ್ದಿಷ್ಟ ಟ್ವೀಟ್ ಅಥವಾ ಪೋಸ್ಟ್ ಅನ್ನು ಡಿಲೀಟ್ ಮಾಡುವ ಬದಲಾಗಿ ಇಡೀ ಖಾತೆಯನ್ನೇ ನಿರ್ಬಂಧಿಸುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧ ಎಂದು ಎಕ್ಸ್ ವಾದಿಸಿದೆ. ಈ ಸಂಬಂಧ ಎಕ್ಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ. ಕೇಂದ್ರ ಸರ್ಕಾರವು ರಾಜಕೀಯ ವಿಮರ್ಶಕರ ಖಾತೆಗಳನ್ನು ಗುರಿ ಮಾಡುತ್ತಿದೆ ಎಂದು ವಾದಿಸಿದೆ.
ಇನ್ನು ‘ಫ್ರೀಡಂ ಹೌಸ್’ ಮತ್ತು ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ನೀಡಿದ ವರದಿಗಳ ಪ್ರಕಾರ, ದೇಶದಲ್ಲಿ ಇಂಟರ್ನೆಟ್ ಸ್ವಾತಂತ್ರ್ಯ ಗಣನೀಯವಾಗಿ ಕುಸಿದಿದೆ. ರೈತ ಹೋರಾಟ ಅಥವಾ ಇತರ ಜನಪರ ಚಳವಳಿಗಳ ಸಮಯದಲ್ಲಿ ಸಾವಿರಾರು ಖಾತೆಗಳನ್ನು ನಿರ್ಬಂಧಿಸಲಾಗಿರುವುದೇ ಇದಕ್ಕೆ ಸಾಕ್ಷಿ. ಸರ್ಕಾರದ ಪರವಾಗಿ ಸುಳ್ಳು ಸುದ್ದಿ ಹರಡುವ ಅಥವಾ ದ್ವೇಷ ಭಾಷಣ ಮಾಡುವ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಕೇವಲ ಸರ್ಕಾರವನ್ನು ಪ್ರಶ್ನಿಸುವ ವ್ಯಕ್ತಿಗಳ ಖಾತೆಗಳನ್ನು ‘ಸಾರ್ವಜನಿಕ ಸುವ್ಯವಸ್ಥೆ’ಯ ಹೆಸರಿನಲ್ಲಿ ನಿರ್ಬಂಧಿಸಲಾಗುತ್ತಿದೆ. ಹೀಗಾದಾಗ ‘ಡಿಜಿಟಲ್ ಇಂಡಿಯಾ’ ಎಂಬುದು ‘ಡಿಜಿಟಲ್ ಸೆರೆಮನೆ’ ಆಗುವುದು ಖಂಡಿತ.
1975ರ ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯವರನ್ನು ಟೀಕಿಸುವುದು ಅಪರಾಧವಾಗಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲೂ ಅದೇ ನಡೆಯುತ್ತಿರುವುದು. ಆದರೆ ಘೋಷಿತವಲ್ಲ, ಅಘೋಷಿತ. ಮೋದಿ ಸರ್ಕಾರದ ವೈಫಲ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದರೆ ಅದು ಘೋರ ಅಪರಾಧವಾಗುತ್ತಿದೆ. ವಿರೋಧಿಗಳಿಗೆ ‘ದೇಶದ್ರೋಹ’ದ ಪಟ್ಟ ಕಟ್ಟಲಾಗುತ್ತಿದೆ. ‘ಸಾರ್ವಜನಿಕ ಶಾಂತಿಕೆ ಧಕ್ಕೆ’ ತಂದ ಆರೋಪ ಹೊರಿಸಲಾಗುತ್ತಿದೆ.
ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ ಉಳಿಯುವುದೆಲ್ಲವೂ ಮೋದಿಮಯ. ಸರ್ಕಾರದ ಪರವಾದ ಐಟಿ ಸೆಲ್ ಖಾತೆಗಳು ಮತ್ತು ಪ್ರಧಾನಿಯನ್ನು ಹೊಗಳುವ ಭಜನಾ ಮಂಡಳಿಗಳು ಮಾತ್ರ ಉಳಿಯುವುದು ಎಂಬುದು ಸತ್ಯಾಂಶ. ವಿಮರ್ಶೆಯೇ ಇಲ್ಲದ ಪ್ರಜಾಪ್ರಭುತ್ವವು ಸರ್ವಾಧಿಕಾರಕ್ಕೆ ಸಮ. ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು, ಜನಸಾಮಾನ್ಯರ ಪ್ರಶ್ನೆಗಳನ್ನು ಡಿಜಿಟಲ್ ಲೋಕದಿಂದಲೇ ಅಳಿಸಿ ಹಾಕುವುದು ‘ಡಿಜಿಟಲ್ ಸರ್ವಾಧಿಕಾರ’ ಅಲ್ಲವೇ? ಇದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ? ಹಿಟ್ಲರ್‌ನ ಸರ್ವಾಧಿಕಾರಕ್ಕೂ ಇಂದಿನ ಸರ್ಕಾರದ ಈ ಧೋರಣೆಗೂ ವ್ಯತ್ಯಾಸ ಕಾಣುತ್ತದೆಯೇ? ಹೀಗೆಯೇ ಮುಂದುವರಿದರೆ, ಸಾಮಾಜಿಕ ಮಾಧ್ಯಮಗಳು ಕೇವಲ ಪ್ರಧಾನಿ ಮೋದಿಯವರ ಮತ್ತು ಸರ್ಕಾರದ ಪರವಾಗಿರುವ ‘ಜೈಕಾರದ ವೇದಿಕೆ’ಗಳಾಗಿ ಮಾರ್ಪುಡುವುದು ಖಚಿತ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




