ಲಡಾಖ್ ಜನರ ಹೋರಾಟದ ಹಾದಿಯೇ ಬದಲಾಗುತ್ತದೆಯೇ? ಅಷ್ಟಕ್ಕೂ ಇದು ಇಡೀ ಲಡಾಖ್ ಜನತೆಯ ನಿರ್ಧಾರವೇ ಅಥವಾ ಸೋನಮ್ ವಾಂಗ್‌ಚುಕ್ ಅವರ ಅಭಿಪ್ರಾಯವೇ? ಸೋನಮ್ ಅವರ ಈ ಹೇಳಿಕೆಯನ್ನು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಒಪ್ಪುತ್ತಾ? -ಹೀಗೆ ಹಲವು ಪ್ರಶ್ನೆಗಳು ಹುಟ್ಟಿವೆ. ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಲಡಾಖ್ ನಾಯಕ ಸಜ್ಜಾದ್ ಕಾರ್ಗಿಲಿ ಹೇಳಿದ್ದೇನು?
ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ರಾಜ್ಯ ಸ್ಥಾನಮಾನ ನೀಡಬೇಕು – ಹೀಗೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಐದು ವರ್ಷಗಳಿಗೂ ಅಧಿಕ ಕಾಲದಿಂದ ಹೋರಾಟ ನಡೆಯುತ್ತಲೇ, ಹಲವು ಬಾರಿ ಕೇಂದ್ರದೊಂದಿಗೆ ಮಾತುಕತೆಯೂ ನಡೆದಿದೆ. ಲಡಾಖ್ ಜನತೆಯ ಈ ಹೋರಾಟದ ಹಾದಿಯಲ್ಲಿ ಜತೆಯಾದವರು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಶಿಕ್ಷಣತಜ್ಞ ಸೋನಮ್ ವಾಂಗ್‌ಚುಕ್ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿ ಜೈಲು ಕೂಡಾ ಸೇರಿದರು. ಆದರೆ ಜೈಲಿನಿಂದ ಹೊರಬರುತ್ತಿದ್ದಂತೆ ವಾಂಗ್‌ಚುಕ್ ಇನ್ನಷ್ಟೂ ಮೆತ್ತಗಾದಂತೆ ಕಾಣುತ್ತಿದೆ, ರಾಜಿ ಒಪ್ಪಂದಕ್ಕೂ ಇಳಿದಿದ್ದಾರೆ!
2009ರಲ್ಲಿ ಬಿಡುಗಡೆಯಾದ ಜನಪ್ರಿಯ ಬಾಲಿವುಡ್ ಸಿನಿಮಾ ‘ಥ್ರೀ ಇಡಿಯಟ್ಸ್’ನ ಮೂರು ಪ್ರಮುಖ ಪಾತ್ರಗಳಲ್ಲಿ ಆಮಿರ್ ಖಾನ್ ನಟನೆಯ ರಾಂಚೋ (ರಣಚೋಢ್ ದಾಸ್ ಛಾಂಚದ್) ಪಾತ್ರಕ್ಕೆ ಸ್ಫೂರ್ತಿಯಾದ ಇಂಜಿನಿಯರ್ ಸೋನಮ್ ವಾಂಗ್‌ಚುಕ್ 2023ರಿಂದ ರಾಷ್ಟ್ರವ್ಯಾಪ್ತಿಯಾಗಿ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಲಡಾಖ್ ಹೋರಾಟ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?
ಲಡಾಖ್‌ನ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರ ನಂತರದಿಂದ ಲಡಾಖ್‌ನಲ್ಲಿ ದೀರ್ಘ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ 2023ರ ಜನವರಿಯಿಂದ ಸೋನಮ್ ಜತೆಯಾಗಿದ್ದಾರೆ. ಐದು ಬಾರಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದಾರೆ.
ಆರಂಭದಿಂದಲೂ ಕೊಂಚ ಮೋದಿ ಭಕ್ತರಾಗಿಯೇ ಇದ್ದವರೂ, ಲಡಾಖ್‌ನ ಜನರ ಯಾವುದೇ ಬೇಡಿಕೆಗೆ ಮೋದಿ ಸರ್ಕಾರ ಮಣಿಯುತ್ತಿಲ್ಲ ಎಂದಾಗ ಮಾಜಿ ಮೋದಿ ಭಕ್ತ ಎಂದೆನಿಸಿಕೊಂಡರು, ಕೇಂದ್ರದ ಧೋರಣೆಗಳನ್ನು ಟೀಕಿಸಲು ಆರಂಭಿಸಿದರು. ಅಷ್ಟರವರೆಗೆ ಲಡಾಖ್, ಜಮ್ಮು ಕಾಶ್ಮೀರಕ್ಕಷ್ಟೇ ಸೀಮಿತವಾಗಿದ್ದ ಲಡಾಖ್ ಜನರ ಹೋರಾಟ ಹೋರಾಟಕ್ಕೆ ಸೋನಮ್ ಕೈಜೋಡಿಸುತ್ತಿದ್ದಂತೆ ಇಡೀ ದೇಶದ ಗಮನ ಸೆಳೆಯಿತು. ಹೋರಾಟಗಾರರ, ಪತ್ರಕರ್ತರ ನಿಯೋಗಗಳು ಲಡಾಖ್‌ಗೆ ಭೇಟಿ ನೀಡಿತು, ಲಡಾಖಿಗರ ಮತ್ತು ಸೋನಮ್ ಬೆಂಬಲಕ್ಕೆ ನಿಂತಿತು. ಇವಿಷ್ಟು ಆಗುತ್ತಿದ್ದಂತೆ ಕೇಂದ್ರ ಸರ್ಕಾರದ ಕಣ್ಣು ಸೋನಮ್ ಮೇಲೆ ಬಿತ್ತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲೇಹ್‌ನಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ. ಅದಾಗಲೇ ಸೋನಮ್ ಅವರನ್ನೇ ಗುರಿಯಾಗಿಸಿಕೊಂಡಿದ್ದ ಕೇಂದ್ರದ ಮೋದಿ ಸರ್ಕಾರ ಈ ಹಿಂಸಾಚಾರದ ಸಂಪೂರ್ಣ ಹೊಣೆಯನ್ನು ಸೋನಮ್ ವಾಂಗ್‌ಚುಕ್ ಮೇಲೆ ಹಾಕಿತು. ರಾಷ್ಟ್ರೀಯ ಭದ್ರತಾ ಕಾಯ್ದೆ- ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಿತು. 150ಕ್ಕೂ ಅಧಿಕ ದಿನಗಳ ಕಾಲ ಜೈಲಿನಲ್ಲಿದ್ದ ಸೋನಮ್ ವಾಂಗ್‌ಚುಕ್ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಗದ ಕೇಂದ್ರ ಕೊನೆಗೂ ಎನ್‌ಎಸ್‌ಎ ಕೈಬಿಟ್ಟಿತು, ಸೋನಮ್ ಜೈಲಿನಿಂದ ಹೊರಬಂದರು. ಇವಿಷ್ಟು ಬೆಳವಣಿಗೆ ನಂತರ ಸೋನಮ್ ವರಸೆ ಕೊಂಚ ಬದಲಾದಂತೆ ಕಾಣುತ್ತಿದೆ. ಬಿಡುಗಡೆಯ ನಂತರ ದೆಹಲಿಯಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ, “ಒಟ್ಟಾರೆ ಎರಡು ಮುಖ್ಯ ಬೇಡಿಕೆಗಳಿವೆ – ಆರನೇ ಪರಿಚ್ಛೇದದಡಿ ರಕ್ಷಣೆ ಮತ್ತು ರಾಜ್ಯ ಸ್ಥಾನಮಾನ. ಎರಡೂ ಸಿಗದಿದ್ದರೆ ಒಂದಾದರೂ ಸಾಕು. ಅದೇ ರೀತಿ ಸಂಭಾಷಣೆ ಮುಂದುವರಿಸುತ್ತೇವೆ” ಎಂದು ಸೋನಮ್ ಹೇಳಿಕೊಂಡಿದ್ದಾರೆ. ಅಂದರೆ ಜೈಲಿನಿಂದ ಹೊರಬರುತ್ತಿದ್ದಂತೆ ಮಾಜಿ ಮೋದಿ ಭಕ್ತ ಮತ್ತೆ ಬದಲಾಗುತ್ತಿದ್ದಾರೆಯೇ?
ಇವೆಲ್ಲವೂ ಲಡಾಖ್ ಜನರ ಹೋರಾಟದ ಹಾದಿಯೇ ಬದಲಾಗುತ್ತದೆಯೇ? ಅಷ್ಟಕ್ಕೂ ಇದು ಇಡೀ ಲಡಾಖ್ ಜನತೆಯ ನಿರ್ಧಾರವೇ ಅಥವಾ ಸೋನಮ್ ವಾಂಗ್‌ಚುಕ್ ಅವರ ಅಭಿಪ್ರಾಯವೇ? ಸೋನಮ್ ಅವರ ಈ ಹೇಳಿಕೆಯನ್ನು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಒಪ್ಪುತ್ತಾ? -ಹೀಗೆ ಹಲವು ಪ್ರಶ್ನೆಗಳು ಹುಟ್ಟಿವೆ.
ಈ ಬಗ್ಗೆ ಈ ದಿನ.ಕಾಮ್ ಜತೆ ಮಾತನಾಡಿದ ಕೆಡಿಎ ಹಿರಿಯ ಸದಸ್ಯ, ಲಡಾಖ್ ಹೋರಾಟಗಾರ ಸಜ್ಜಾದ್ ಕಾರ್ಗಿಲಿ, “ಸೋನಮ್ ವಾಂಗ್‌ಚುಕ್ ಅವರು ‘ವಿನ್ ವಿನ್ ಸಿಚುವೇಷನ್’ ಕಡೆ (ಇಬ್ಬರಿಗೂ ಲಾಭವಾಗುವ ನಿರ್ಧಾರ) ಸಾಗಬೇಕು ಎಂದು ಹೇಳಿದ್ದಾರೆ. ರಾಜ್ಯ ಸ್ಥಾನಮಾನ ಅಥವಾ ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಎಂಬ ಎರಡು ಆಗ್ರಹದಲ್ಲಿ ಒಂದು ಸಾಕು ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆಯೇ ಎಂಬುದು ನನಗೆ ಸ್ಪಷ್ಟವಿಲ್ಲ. ಆದರೆ ನಾವು ರಾಜಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ಸೋನಮ್ ಅವರು ಹೇಳಿರುವುದು ನಿಜ” ಎಂದಿದ್ದಾರೆ.

“ನಾವೂ ಕೂಡಾ ಸಂಧಾನ ಮಾತುಕತೆ ಮಾಡಬೇಕು ಎಂದೇ ಹೇಳುತ್ತೇವೆ. ಆದರೆ ಈ ಸಂಧಾನ ಫಲಪ್ರದವಾಗಿರಬೇಕು. ಇದು ನಮ್ಮ ಬೇಡಿಕೆಯಾಗಿದೆ. ಹಾಗೆಯೇ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಏನೇ ಇದ್ದರೂ ಲಡಾಖ್‌ನ ಕೆಡಿಎ, ಎಲ್‌ಎಬಿ ನಿರ್ಧಾರ ತೆಗೆದುಕೊಳ್ಳುತ್ತದೆ. ಈವರೆಗೂ ನಾವು ಬೇಡಿಕೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
ಇನ್ನು ಸೋನಮ್ ಅವರು ಜೈಲಿನಿಂದ ಹೊರಬಂದ ಬಳಿಕ ಸಭೆ ನಡೆದಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ಗಿಲಿ, “ಈವರೆಗೂ ಯಾವುದೇ ಸಭೆ ಆಗಿಲ್ಲ. ಆದರೆ ಸೋನಮ್ ಅವರು ಇನ್ನೆರಡು ದಿನಗಳಲ್ಲಿ ನಮ್ಮ ಪ್ರತಿಭಟನೆಯ ಜತೆ ಮತ್ತೆ ಸೇರಲಿದ್ದಾರೆ. ನಾವು ಅವರನ್ನು ಭೇಟಿಯಾಗಿ, ಮಾತುಕತೆ ನಡೆಸುತ್ತೇವೆ. ಅಷ್ಟಕ್ಕೂ ಸೋನಮ್ ಅವರು ಈ ಹೋರಾಟಕ್ಕೆ ಬೆಂಬಲ ನೀಡಿದವರೇ ಹೊರತು ಈ ಚಳವಳಿಯ ಮುಂದಾಳತ್ವ ವಹಿಸಿದ್ದವರಲ್ಲ. ಏನೇ ನಿರ್ಧಾರವಿದ್ದರೂ ಅದನ್ನು ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
ಅಷ್ಟಕ್ಕೂ ಸೋನಮ್ ವಾಂಗ್‌ಚುಕ್ ಹೇಳಿಕೆ ಈಗ ರಾಜಕೀಯ, ಸಾಮಾಜಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೋನಮ್ ಹೇಳಿಕೆಯು ಬರೀ ಒಂದು ಹೇಳಿಕೆಯಾಗಿ ಉಳಿದಿಲ್ಲ. ಅವರ ಹೋರಾಟದ ಹಾದಿಯಲ್ಲಿನ ದೊಡ್ಡ ಬದಲಾವಣೆಯಂತೆ ಕಾಣುತ್ತಿದೆ. ಇದರೊಂದಿಗೆ ಸೋನಮ್ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗಳನ್ನು ಹಾಡಿಹೊಗಳಿರುವುದೂ ಮುನ್ನೆಲೆಗೆ ಬರುತ್ತಿದೆ.
ಸೋನಮ್ ಆರಂಭದಿಂದಲೂ ಪ್ರಧಾನಿ ಮೋದಿ ಅವರಿಗೆ ಹಲವು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದವರು. 370ನೇ ವಿಧಿ ರದ್ದಾದಾಗ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಕ್ಕೆ ಮೋದಿ ಅವರನ್ನು ಶ್ಲಾಘಿಸಿದ್ದರು. ಮೋದಿ ಅವರ ‘ವಿಕಸಿತ ಭಾರತ’ದ ಕನಸಿನ ಮೇಲೆ ಭರವಸೆಯಿದೆ. ಆದರೆ, ಆ ಅಭಿವೃದ್ಧಿ ಲಡಾಖ್‌ನ ಪರಿಸರವನ್ನು ನಾಶಪಡಿಸಬಾರದು ಎಂಬ ಹೇಳಿಕೆಗಳನ್ನು ನೀಡಿದವರು. ಏನೇ ಆದರೂ ಲಡಾಖ್ ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು, ಅದು ಬಿಜೆಪಿಯೇ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಎಂದು ಆಗಾಗೇ ಕೇಂದ್ರ ಸರ್ಕಾರವನ್ನು ನೆನಪಿಸುತ್ತಾ ಬಂದವರು. ಆದರೆ ಜೈಲು ಸೇರಿ ಹೊರಬರುತ್ತಿದ್ದಂತೆ ಕೊಂಚ ಮೆತ್ತಗಾಗಿದ್ದಾರೆ. ಇದಕ್ಕೆ ಕೇಂದ್ರದಿಂದ ಸೋನಮ್ ಮೇಲಿರುವ ಒತ್ತಡವೇ ಕಾರಣವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




