ದೇಶದ ಗಡಿ ಭದ್ರತೆ, ಪಾಕಿಸ್ತಾನ ಮತ್ತು ಚೀನಾ ದೇಶಗಳೊಂದಿಗೆ ಇಲ್ಲಿಯ ತನಕ ನಡೆದಿರುವ ಪ್ರತಿಯೊಂದು ಯುದ್ಧ, ಗಡಿಸಂರಕ್ಷಣಾ ಕಾರ್ಯಗಳಲ್ಲಿ ಭಾರತೀಯ ಸೇನೆಯ ಬೆಂಗಾವಲಾಗಿದ್ದ ಈ ಶಾಂತಿಪ್ರಿಯ ಲಡಾಖ್ ಜನರು ಹೀಗೆ ಹಿಂಸೆಗಿಳಿದಿದ್ದಾದರೂ ಹೇಗೆ? ಅವರ ಬೇಡಿಕೆಗಳು ನ್ಯಾಯಯುತವೇ? ಲಡಾಕಿನ ಅಭಿವೃದ್ಧಿ, ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸೋನಂ ನಿಜಕ್ಕೂ ದೇಶದ್ರೋಹಿಯೇ ಎಂಬುದನ್ನು ವಿವೇಚಿಸಬೇಕಾಗಿದೆ.
ಕಳೆದ ಸೆಪ್ಟೆಂಬರ್ 24ರಂದು ಲಡಾಖ್‍ನ ರಾಜಧಾನಿ ಲೇಹ್‍ನಲ್ಲಿ ಹೆಚ್ಚಿನ ಸಾಂವಿಧಾನಿಕ ಭದ್ರತೆ ಮತ್ತು ರಾಜ್ಯ ಸ್ಥಾನಮಾನಕ್ಕಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹವು ಹಿಂಸಾಚಾರಕ್ಕೆ ತಿರುಗುತ್ತದೆ. ಪೋಲಿಸ್ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟರೆ, 80ಕ್ಕೂ ಹೆಚ್ಚು ಜನರು (30 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡಂತೆ) ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಪ್ರತಿಭಟನಾಕಾರರು ಅಲ್ಲಿನ ಬಿಜೆಪಿ ಕಚೇರಿ ಮತ್ತು ಪೊಲೀಸ್ ವ್ಯಾನ್‌ಗಳಿಗೆ ಬೆಂಕಿ ಹಚ್ಚಿರುತ್ತಾರೆ. ಯುವಜನರೇ ಪ್ರಮುಖವಾಗಿದ್ದ ಈ ಪ್ರತಿಭಟನೆಯನ್ನು ‘ಜೆನ್-ಝಡ್’ (ಜನರೇಶನ್ ಝಡ್ – ಅಂದರೆ ಇತ್ತೀಚೆಗೆ ನೇಪಾಲಿನಲ್ಲಿ ಯುವಜನಾಂಗವು ನಡೆಸಿದ ಹಿಂಸಾಚಾರಕ್ಕೆ ಸಮಾನವಾದುದು ಎಂಬರ್ಥದಲ್ಲಿ) ಎಂದು ಕರೆಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಕಳೆದ ಸುಮಾರು ಐದು ವರ್ಷಗಳಿಂದಲೂ ಲಡಾಖಿನ ಸಂವಿಧಾನಿಕ ಭದ್ರತೆ, ರಾಜ್ಯ ಸ್ಥಾನಮಾನ ಮತ್ತು ಅಲ್ಲಿನ ಪರಿಸರ ಸಂರಕ್ಷಣೆಗಾಗಿ ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದ ಲಡಾಖಿನ ಶಿಕ್ಷಣ ತಜ್ಞ, ಪರಿಸರ ಪ್ರೇಮಿ ಹಾಗೂ ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರು ಯುವಕರ ಈ ಹಿಂಸಾತ್ಮಕ ಹೊರಾಟಕ್ಕೆ ಪ್ರೇರಣೆ ನೀಡಿದ್ದಾರೆಂದು ಹಾಗೂ ಪಾಕಿಸ್ತಾನಿ ಗುಪ್ತಚರನೊಂದಿಗೆ ಸಂಪರ್ಕ ಹೊಂದಿರುವ ಕಾರಣ ಅವರಿಂದ ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಭದ್ರತೆಗೆ ಅಪಾಯವಿದೆಯೆಂಬ ಆರೋಪದಡಿ ರಾಷ್ಟ್ರೀಯ ಸುಭದ್ರತಾ ಕಾಯ್ದೆಯಡಿ ಬಂಧಿಸಿ ರಾಜಸ್ತಾನದ ಜೋಧ್‍ಪುರದ ಜೈಲಿಗೆ ಕಳುಹಿಸಲಾಗಿದೆ.
ದೇಶದ ಗಡಿ ಸುಭದ್ರತೆ ಮತ್ತು ಪಾಕಿಸ್ತಾನ ಹಾಗೂ ಚೀನಾ ದೇಶಗಳೊಂದಿಗೆ ಇಲ್ಲಿಯ ತನಕ ನಡೆದಿರುವ ಪ್ರತಿಯೊಂದು ಯುದ್ಧ ಮತ್ತು ಗಡಿಸಂರಕ್ಷಣಾ ಕಾರ್ಯಗಳಲ್ಲಿ ಭಾರತೀಯ ಸೇನೆಯ ಬೆಂಗಾವಲಾಗಿದ್ದ ಈ ಶಾಂತಿಪ್ರಿಯ ಲಡಾಖ್ ಜನರು ಹೀಗೆ ಹಿಂಸೆಗಿಳಿದ್ದಾದರೂ ಹೇಗೆ? ಅವರ ಬೇಡಿಕೆಗಳು ನ್ಯಾಯಯುತವೇ? ಲಡಾಕಿನ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸೋನಂ ಅವರು ನಿಜಕ್ಕೂ ದೇಶದ್ರೋಹಿಯೇ ಎಂಬುದನ್ನು ವಿವೇಚಿಸಬೇಕಾಗಿದೆ. ಪುಟ್ಟ ಟಿಬೆಟ್ ಎಂದೇ ಕರೆಯಲ್ಪಡುವ ಲಡಾಖ್ ಪ್ರದೇಶದಲ್ಲಿ ಸುಮಾರು 40% ಜನರು ಟಿಬೆಟ್ ಬೌದ್ಧ ಮತೀಯರಿದ್ದಾರೆ.
ಸ್ವಾತಂತ್ರ್ಯ ನಂತರದಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದ ಲಡಾಖ್ ಆಗಸ್ಟ್ 2019ರಿಂದ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟು, ಕೇಂದ್ರ ಸರ್ಕಾರವು ನೇಮಿಸಿದ ಲೆಫ್ಟಿನೆಂಟ್ ಗವರ್ನರ್ ಅವರ ನೇರ ಆಡಳಿತ ಹೊಂದಿದೆ. ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳನ್ನು ಹೊಂದಿರುವ ಲಡಾಖ್‍ನಲ್ಲಿ ಸುಮಾರು 46% ಮುಸ್ಲಿಮರಿದ್ದು, ಹೆಚ್ಚಿನವರು ಕಾರ್ಗಿಲ್‍ನಲ್ಲಿದ್ದಾರೆ. ಅನ್ಯೋನ್ಯ ಜನಜೀವನವಿದ್ದ ಲಡಾಖ್ ಶಾಂತಿಪ್ರಿಯತೆಯ ಸಹಭಾಗಿ ಜೀವನಕ್ಕೆ ಹೆಸರಾಗಿತ್ತು. ಲಡಾಖ್ ಜನರ ದೇಶಭಕ್ತಿ ಮತ್ತು ಅವರ ಅನನ್ಯ ಸೇವೆಗಳು ನಾಗರಿಕ ಅಸ್ತಿತ್ವನ್ನು ಮೀರಿ, ಭಾರತೀಯ ಸೇನೆ, ಗುಪ್ತಚರ ಹಾಗೂ ಗಡಿ ರಕ್ಷಣಾ ಕಾರ್ಯತಂತ್ರದಲ್ಲಿ ಬಹು ಆಳವಾಗಿ ಮಿಳಿತವಾಗಿದೆ. ಇವರು ನೀಡಿರುವ ಅಪರಿಮಿತ ಸೇವೆಯನ್ನು ಸ್ಮರಿಸುವ ಸೇನೆಯ ಹಿರಿಯ ಅಧಿಕಾರಿಗಳು ಸೆಪ್ಟೆಂಬರ್ 24ರಂದು ಘಟಿಸಿದ ಹಿಂಸೆಯು ಆಶ್ಚರ್ಯ ಹುಟ್ಟಿಸುವುದಲ್ಲದೆ, ಇದನ್ನು ದೇಶದ್ರೊಹವೆಂದು ಬಣ್ಣಿಸುವುದು ಎಷ್ಟಕ್ಕೂ ಸರಿಯಲ್ಲವೆಂದಿದ್ದಾರೆ.

ಪಾಕಿಸ್ತಾನ ಮತ್ತು ಚೈನಾದ ಗಡಿ ಹಂಚಿಕೊಳ್ಳುವ ಲಡಾಖ್, ಅತಿ ಎತ್ತರದ ಯುದ್ಧಭೂಮಿ ಎಂದೇ ಕರೆಯಲ್ಪಡುವ ಸಿಯಾಚಿನ್ ಗ್ಲೇಸಿಯರ್ ಮತ್ತು 1999ರ ಯುದ್ಧ ಸ್ಥಳವಾದ ಕಾರ್ಗಿಲನ್ನು ಒಳಗೊಂಡಿದೆ. ಸಿಯಾಚಿನ್ ಗ್ಲೇಸಿಯರ್ ಮೇಲಿನ ಭಾರತದ ನಿಯಂತ್ರಣವು ಚೀನಾ ಪಾಕಿಸ್ತಾನಗಳ ನಡುವಿನ ಸಂಪರ್ಕವನ್ನು ತಡೆಯಲು ಅಗತ್ಯವಾದರೆ, ಇಲ್ಲಿನ ಭೂರಾಜಕೀಯದ ಕೂಡು ಹಾದಿಯು ಕಾರ್ಯತಂತ್ರದ ದೃಷ್ಟಿಯಿಂದ ದಕ್ಷಿಣ, ಮಧ್ಯ ಮತ್ತು ಪೂರ್ವ ಏಷ್ಯಾಗಳನ್ನು ಛೇದಿಸುವ ಬಫರ್ ವಲಯವಾಗಿರುವ ಕಾರಣ ಭಾರತವು ಇಲ್ಲಿ ತನ್ನ ಪ್ರಾದೇಶಿಕ ಪ್ರಭಾವ ಮತ್ತು ಭದ್ರತಾ ಕಾರ್ಯಗಳ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಗಳಿಂದ ಹಿಮಾಲಯದ ತಪ್ಪಲಿನಲ್ಲಿರುವ ಲಡಾಖ್ ಭಾರತದ ಗಡಿಭದ್ರತಾ ಕಾರ್ಯತಂತ್ರಗಳ ಅತಿಸೂಕ್ಷ್ಮ ಮತ್ತು ನಿರ್ಣಾಯಕ ಪ್ರದೇಶವಾಗಿದೆ ಎನ್ನುವುದು ಅನೇಕ ಅನುಭವಿ ಸೇನಾನಿಗಳ ಅಭಿಪ್ರಾಯವಾಗಿದೆ.
ಇಲ್ಲಿನ ಕಠಿಣ ಭೂಪ್ರದೇಶ, ಹವಾಮಾನ, ಹೆಪ್ಪುಗಟ್ಟಿದ ನದಿಕಣಿವೆಗಳು, ದೂರ ದಾರಿಯ ಪರ್ವತ ಮಾರ್ಗ ಹಾಗೂ ಗುಪ್ತ ಮಾರ್ಗಗಳ ಬಗ್ಗೆ ಸರಿಸಾಟಿ ಇಲ್ಲದ ಜ್ಞಾನ ಹೊಂದಿರುವ ಲಡಾಖ್ ಜನರು ಈ ದೇಶ ಕಂಡ ಎಲ್ಲಾ ಯುದ್ಧ ಮತ್ತು ಇತರೆ ಸೇನಾ ಕಾರ್ಯಾಚರಣೆಗಳಲ್ಲಿ ಸೇನೆಯ ಹೆಗಲಿಗೆ ಹೆಗಲು ಜೋಡಿಸಿ ನೀಡಿರುವ ಸೇವೆಗಳು ಬಹು ಅನನ್ಯವಾದುದೆಂದು ಹೇಳಲಾಗಿದೆ. ಹಿಮ ಚಿರತೆಗಳು ಎಂದೇ ಹೆಸರಾದ ಲಡಾಖಿ ಸ್ಕೌಟ್ಸ್ ಮತ್ತು ಪರ್ವತ ಪದಾತಿದಳಗಳು ಈ ಎತ್ತರದ ಪದೇಶದ ಯುದ್ಧದಲ್ಲಿ ವಿಶೇಷ ಪರಿಣತಿ ಹೊಂದಿದ್ದು, ಗಡಿ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. 1500 ಅಡಿಗಳಿಗೂ ಎತ್ತರದ ಪ್ರದೇಶಗಳಿಗೆ ಹೊಂದಿಕೊಳ್ಳುವ ಇವರ ದೇಹ ಪ್ರಕೃತಿಯು ಸೇನಾ ಕಾರ್ಯಚರಣೆಗಳಿಗೆ ಅನುಕೂಲವಾಗಿದೆ. ಇದರೊಂದಿಗೆ, ಗಡಿಯಲ್ಲಿರುವ ಸೈನಿಕರಿಗೆ ಅಗತ್ಯ ಸಾಮಾಗ್ರಿ, ಇಂಧನ, ವಸತಿ ಹಾಗೂ ಆಹಾರ ಒದಗಿಸುವುದು, ವಿದೇಶಿಗರ ಚಲನವಲನ ಮತ್ತು ನುಸುಳುಕೋರರ ಬಗ್ಗೆ ಸೂಕ್ಷ್ಮ ಗಮನ ವಹಿಸುತ್ತಾ ಮಾಹಿತಿ ರವಾನಿಸುವ ಕೆಲಸಗಳಲ್ಲಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ತೀರ್ವ ದೇಶಪ್ರೇಮ ಹೊಂದಿರುವ ನಿಷ್ಠಾವಂತ ಗಡಿ ರಕ್ಷಕರು ಎಂದು ಭಾರತೀಯ ಸೇನೆಯು ಗುರುತಿಸುತ್ತದೆ. ಇಂತಹ ಜನರ ಮತ್ತು ಸೂಕ್ಷ್ಮ ಗಡಿ ಪ್ರದೇಶವಾದ ಲಡಾಖಿನ ವಿಷಯದಲ್ಲಿ ಸರ್ಕಾರವು ಬಹು ಜವಾಬ್ದಾರಿಯಿಂದ ವರ್ತಿಸದಿದ್ದರೆ ಗಡಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂಬುದು ನಿವೃತ್ತ ಹಿರಿಯ ಸೇನಾಧಿಕಾರಿಗಳೊಬ್ಬರ ಎಚ್ಚರಿಕೆಯ ಮಾತಾಗಿದೆ.
ಶಾಂತಿಪ್ರಿಯತೆಗೆ ಹೆಸರಾದ ಈ ಜನರು ಅದರಲ್ಲೂ ಮುಖ್ಯವಾಗಿ ಯುವಜನಾಂಗವು ಸೆಪ್ಟೆಂಬರ್ 24ರಂದು ಹಿಂಸಾಚಾರದಲ್ಲಿ ತೊಡಗಿದ್ದೇಕೆ? ಮತ್ತವರ ಬೇಡಿಕೆಯಾದರೂ ಏನು?

2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಟ್ಟು, ಕೇಂದ್ರಾಡಳಿತ ಘೋಷಣೆಯಾದಾಗ ಇಲ್ಲಿನ ಜನರು ಸಂತಸ ವ್ಯಕ್ತಪಡಿಸಿದರೆ, ಸೋನಂ ವಾಂಗ್ಚುಕ್‌ರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತಾರೆ. ಆದರೆ, ಶಾಸಕಾಂಗವಿಲ್ಲದ ಕೇಂದ್ರಾಡಳಿತವು ಲಡಾಖಿಗೆ ಉಪಯೋಗವಿಲ್ಲವೆಂದು ತಿಳಿದಾಗ ಅಲ್ಲಿನ ಜನರು ನಿರಾಶೆಗೊಳ್ಳುತ್ತಾರೆ.
ಪ್ರಸ್ತುತದ ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವು ಲಡಾಖ್‍ನ ಅಸ್ತಿತ್ವ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಲು ವಿಫಲವಾಗಿ, ಜನರಲ್ಲಿ ಅನ್ಯಭಾವವನ್ನು ಉಂಟುಮಾಡಿದೆ. ಆರ್ಟಿಕಲ್ 370ರ ರದ್ದತಿ ಕಾರಣ ಹೊರಗಿನವರು ಭೂಮಿಯನ್ನು ಖರೀದಿಸಬಹುದಾದ್ದರಿಂದ ಕಡಿವಾಣವಿಲ್ಲದೆ ಹೆಚ್ಚುವ ಕೈಗಾರೀಕರಣ ಮತ್ತು ಪ್ರವಾಸೋದ್ಯಮಗಳು ಈಗಾಗಲೇ ಕೊರತೆಯಲ್ಲಿರುವ ಅಲ್ಲಿನ ಸೂಕ್ಷ್ಮ ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ಬಳಕೆಯಿಂದ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ತರುತ್ತದೆಂಬುದು ಅಲ್ಲಿನವರ ಕಳಕಳಿಯಾಗಿದೆ. ರಾಜ್ಯಕ್ಕೆ ಮೀಸಲಾದ ಲೋಕಸೇವಾ ಆಯೋಗದ ಕೊರತೆಯಿಂದ ಸ್ಥಳೀಯರಿಗೆ ಉದ್ಯೋಗ ಭದ್ರತೆ ಇರದ ಕಾರಣ ಕೆಲಸಗಳು ಹೊರಗಿನವರ ಪಾಲಾಗುವ ಭಯ ಅವರನ್ನು ಕಾಡುತ್ತಿದೆ.
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಿಂದ ನಡೆದ PLFS ಸಮೀಕ್ಷೆ ಪ್ರಕಾರ 2022-23ರಲ್ಲಿ ಲಡಾಖ್‍ನ ಶೇ.26.5ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ 13.4ಕ್ಕಿಂತ ಗಣನೀಯವಾಗಿ ಹೆಚ್ಚಿದೆ ಎಂದು ದಿ ಟ್ರಿಬ್ಯೂನ್ ಪತ್ರಿಕೆಯು 18ನೇ ಡಿಸೆಂಬರ್ 2023ರಲ್ಲಿ ವರದಿ ಮಾಡಿದೆ.
ಲಡಾಖ್ ಭೂವೈಜ್ಞಾನಿಕವಾಗಿ ಶ್ರೀಮಂತ ಪ್ರದೇಶವಾಗಿದ್ದು, ಅನೇಕ ಖನಿಜಾಂಶಗಳ ನಿಕ್ಷೇಪಗಳನ್ನು ಹೊಂದಿದೆ. ಸರ್ಕಾರವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಿದ್ದು, ಕೈಗಾರಿಕೆ ಮತ್ತು ಭೂಮಿ ಹಂಚಿಕೆಯ ನೀತಿಗಳನ್ನು ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಸೌರ ಮತ್ತು ವಾಯು ಶಕ್ತಿಯ ಪಾರ್ಕ್ ನಿರ್ಮಿಸುವ ಬೃಹತ್ ಯೋಜನೆಗಾಗಿ ಚಾಂಗ್‍ಥಾಂಗ್ ಪ್ರದೇಶದ ಸಾವಿರಾರು ಎಕರೆಗಳ ಎತ್ತರದ ಹುಲ್ಲುಗಾವಲು ಪ್ರದೇಶವನ್ನು ಹಂಚಿಕೆ ಮಾಡಲಿದೆ. ಇದರಿಂದಾಗಿ, ಪಶ್ಮಿನಾ ಮೇಕೆಗಳನ್ನು ಸಾಕುವ ಸ್ಥಳೀಯ ಅಲೆಮಾರಿ ಸಮುದಾಯವು ತಮ್ಮ ಸಾಂಪ್ರದಾಯಿಕ ಮೇವಿನ ಭೂಮಿಯನ್ನು ಕಳೆದುಕೊಳ್ಳುವ ಭೀತಿ ಹೊಂದಿದ್ದಾರೆ. ಜೊತೆಗೆ ಇತರೆ ಸಣ್ಣ ಮತ್ತು ಮಧ್ಯಮ ಮಟ್ಟದ ಸುಮಾರು 1000ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವ ತಯಾರಿ ನಡೆದಿದೆ. ಲಡಾಖ್ ಜನರಿಗೆ ಅಭಿವೃದ್ಧಿಯ ಪ್ರಾಮುಖ್ಯತೆ ಗೊತ್ತಿದೆಯಾದರೂ, ಅತಿ ಸೂಕ್ಷ್ಮ ಪರಿಸರದ ಈ ಪ್ರದೇಶಕ್ಕೆ ಸೂಕ್ತವಲ್ಲದ ಬೃಹತ್ ಅಭಿವೃದ್ಧಿ ಯೋಜನೆಗಳು ಹೆಚ್ಚಿನ ಪರಿಸರ ನಾಶಕ್ಕೆ ದಾರಿಯಾಗುವ ಜೊತೆಗೆ ಮುಂದೆ ದೊಡ್ಡ ಮಟ್ಟದ ಪ್ರಾಕೃತಿಕ ಅವಘಡಗಳು ಜರುಗುತ್ತವೆಂಬುದು ಸ್ಥಳಿಯರ ವಾದವಾಗಿದೆ. ಸೋನಮ್‍ರವರು ಮೊದಲಿಗೆ ಕೇಂದ್ರ ಸರ್ಕಾರದ ಸೌರಶಕ್ತಿ ಬಳಕೆಯ ವಿಚಾರವನ್ನು ಸ್ವಾಗತಿಸಿದ್ದು ನಿಜವಿದ್ದರೂ, ಅದು ಸಣ್ಣ ಘಟಕಗಳ ಸುಸ್ಥಿರತೆಯಳ್ಳ ಪರಿಸರ ಸ್ನೇಹಿ ವಿಧಾನದ ಯೋಜನೆ ಇರಬಹುದೆಂಬ ಕಲ್ಪನೆಯಾಗಿತ್ತೇ ಹೊರತು, ಪರಿಸರ ನಾಶಕ್ಕೆ ಮೂಲವಾಗುವ ಇಂತಹ ಬೃಹತ್ ಯೋಜನೆಯನ್ನಲ್ಲ ಎಂದು ಹೇಳಲಾಗಿದೆ.
ಈ ಎಲ್ಲಾ ಕಾರಣಗಳಿಂದ ಅಲ್ಲಿನ ಜನರು ಹಾಗೂ ಲಡಾಖ್ ಸಂಘಟನೆಗಳು (ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್) ಸೋನಮ್ ವಾಂಗ್‍ಚುಕ್ ಅವರ ನೇತೃತ್ವದಲ್ಲಿ ಸುಮಾರು ಐದು ವರ್ಷಗಳಿಂದಲೂ ಅಹಿಂಸಾತ್ಮಕ ಸತ್ಯಾಗ್ರಹಗಳನ್ನು ನಡೆಸುತ್ತಲೇ ಬಂದಿವೆ. ಕಳೆದ ವರ್ಷ ಇವರು ಲಡಾಕ್‍ನಿಂದ ದೆಹಲಿ ತನಕ ಸುಮಾರು 1000 ಕಿ.ಮೀ. ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿ ತಮ್ಮ ಪ್ರತಿಭಟನೆ ನಡೆಸಿದ್ದು ದೇಶದ ಗಮನ ಸೆಳೆದಿತ್ತು. ಹೀಗೆ ಸುದೀರ್ಘ ಹಾಗೂ ಶಾಂತಿಯುತ ಸತ್ಯಾಗ್ರಹಗಳ ಮೂಲಕ ತಮ್ಮ ಭೂಮಿ, ಉದ್ಯೋಗ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಕಾಪಿಡುವ ಸಲುವಾಗಿ ಲಡಾಖ್ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದಡಿ ಆದಿವಾಸಿ ಸ್ಥಾನ, ರಾಜ್ಯಕ್ಕೆ ಸೀಮಿತವಾದ ಸಾರ್ವಜನಿಕ ಸೇವಾ ಆಯೋಗ ಹಾಗೂ ಎರಡು ಸಂಸದೀಯ ಸ್ಥಾನಗಳು ಬೇಕೆಂಬ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು.

ಬಿಜೆಪಿ ಪಕ್ಷವೂ ಸಹ, 2019ರ ಲೋಕಸಭಾ ಮತ್ತು ಲಡಾಖ್ ಸ್ವಾಯತ್ತ ಗಿರಿ ಅಭಿವೃದ್ಧಿ ಮಂಡಳಿಯ 2020ರ ಚುನಾವಣೆಗಳಲ್ಲಿ ಲಡಾಖಿಗೆ ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ ಆರನೇ ಪರಿಚ್ಛೇದದ ಸವಲತ್ತು ನೀಡುವ ಪ್ರಮುಖ ಭರವಸೆಗಳನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡು ಗೆಲುವನ್ನು ಪಡೆದಿತ್ತು. ಅಲ್ಲದೆ, 4ನೇ ಸೆಪ್ಟೆಂಬರ್ 2019ರಲ್ಲೇ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು ‘ಆದಿವಾಸಿ ಸ್ಥಾನʼವನ್ನು ರಾಜ್ಯಕ್ಕೆ ನೀಡಬಹುದೆಂಬ ಶಿಫಾರಸ್ಸು ಮಾಡಿ “ಈ ಸ್ಥಾನವು ಸ್ಥಳಿಯರಿಗೆ ಪ್ರಜಾಪ್ರಭುತ್ವ ಅಧಿಕಾರವನ್ನು ಒದಗಿಸುವ ಮೂಲಕ ಅಲ್ಲಿನ ವಿಶಿಷ್ಟ ಸಂಸ್ಕೃತಿ ಮತ್ತು ಪ್ರದೇಶದ ರಕ್ಷಣೆಯನ್ನು ಪ್ರೋತ್ಸಾಹಿಸಲು ಸಹಾಯಕವಾಗಿದೆ” ಎಂದು ಹೇಳಿರುವುದನ್ನು ದಿ ಹಿಂದು ಪತ್ರಿಕೆಯು 26ರ ಸೆಪ್ಟೆಂಬರ್ 2025ರಂದು ವರದಿ ಮಾಡಿದೆ.
ಐದು ವರ್ಷಗಳಿಂದ ಬೇರೆ ಬೇರೆ ಅವಧಿಗಳಲ್ಲಿ ನಡೆದಿದ್ದ ಸತ್ಯಾಗ್ರಹಗಳ ಭಾಗವಾಗಿ 10ನೇ ಸೆಪ್ಟೆಂಬರ್‌ನಲ್ಲಿ ಲೇಹ್‍ನಲ್ಲಿ ಮುಂದುವರಿದ ಉಪವಾಸ ಸತ್ಯಾಗ್ರಹವು 24ರಂದು ಮೊದಲ ಸಲ ಹಿಂಸೆಗೆ ತಿರುಗುತ್ತದೆ. ಇದರಿಂದಾಗಿ ಉಪವಾಸ ಸತ್ಯಾಗ್ರಹದ ನಾಯಕತ್ವ ವಹಿಸಿದ್ದ ಸೋನಮ್ ಅವರು ಸತ್ಯಾಗ್ರಹವನ್ನು ನಿಲ್ಲಿಸುತ್ತಾರೆ.
ಸೆಪ್ಟೆಂಬರ್ 24ರಂದು ನಡೆದದ್ದಾದರೂ ಏನು? ಹಲವು ಮೂಲಗಳ ಪ್ರಕಾರ, ಸೆ. 23ರಂದು ಸತ್ಯಾಗ್ರಹದಲ್ಲಿದ್ದ ಇಬ್ಬರು ವೃದ್ಧರು ತೀರ್ವವಾಗಿ ಅಸ್ವಸ್ಥರಾದ ಸುದ್ದಿಯು ಜನರ ಅಸಮಾಧಾನಕ್ಕೆ ಕಾರಣವಾಗಿ, ಲಡಾಖ್ ಅಪೆಕ್ಸ್ ಸಂಸ್ಥೆಯ ಯುವ ವಿಭಾಗವು ಸೆಪ್ಟೆಂಬರ್ 24ರಂದು ಲೇಹ್‍ನ ಸಂಪೂರ್ಣ ಬಂದ್‍ಗೆ ಕರೆ ನೀಡುತ್ತದೆ. 24ರಂದು ಯುವಗುಂಪು ರಸ್ತೆಯಲ್ಲಿ ಮೆರವಣಿಗೆ ಹೊರಟಿದ್ದಾಗ ಘರ್ಷಣೆ ಉಂಟಾಗಿ, ಕಲ್ಲು ತೂರಾಟ ನಡೆಯುತ್ತದೆ. ಗಲಭೆ ಮುಂದುವರೆದು ಪೊಲೀಸರ ಗುಂಡೇಟಿನಿಂದ ನಾಲ್ಕು ಜನರು (ಇದರಲ್ಲಿ ಒಬ್ಬರು ಕಾರ್ಗಿಲ್ ಯುದ್ಧದಲ್ಲಿ ಸೇವೆ ನೀಡಿದ ಸೈನಿಕರು) ಮರಣ ಹೊಂದಿ, ಸುಮಾರು 30 ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 80 ಜನರು ಗಾಯಗೊಳ್ಳುತ್ತಾರೆ. ಗಲಭೆಯಲ್ಲಿನ ಗುಂಪು ಬಿಜೆಪಿಯ ಕಚೇರಿ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಇಡುತ್ತದೆ. ಯುವಕರು ಜನರೇಷನ್-ಝಡ್ ಮಾದರಿಯ ಹಿಂಸೆಯಲ್ಲಿ ತೊಡಗಲು ಸೋನಂ ಅವರು ಪ್ರೇರಣೆ ನೀಡಿರುವುದಲ್ಲದೆ ದೇಶದ ಸುಭದ್ರತೆ ಧಕ್ಕೆ ಉಂಟುಮಾಡುವ ಕಾರ್ಯದಲ್ಲಿ ತೊಡಗಿದ್ದಾರೆಂಬ ಆರೋಪದಡಿ ಸರ್ಕಾರವು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರನ್ನು ಬಂಧಿಸಿರುತ್ತದೆ. ಜೊತೆಗೆ ಸುಮಾರು 50 ಯವಕರನ್ನೂ ಸಹ ಬಂಧಿಸಿದ್ದು, ಈ ಘಟನೆಯಲ್ಲಿ ನೇಪಾಲಿಗರ ಮತ್ತು ಇತರೆ ವಿದೇಶಿ ಕೈವಾಡವೂ ಇದೆಯೆಂದು ಸರ್ಕಾರ ಹೇಳಿರುತ್ತದೆ.
ಈ ಎಲ್ಲಾ ಆರೋಪಗಳನ್ನು ಸ್ಥಳೀಯರು ಮತ್ತು ಲಡಾಖ್ ಸಂಸ್ಥೆಗಳು ತಳ್ಳಿಹಾಕಿದ್ದು, ಈ ಆರೋಪಗಳು ಅದರಲ್ಲೂ ಮುಖ್ಯವಾಗಿ ಸೋನಂ ವಾಂಗ್ಚುಕ್ ಇವರ ಮೇಲಿನ ಆರೋಪವು ಹುರುಳಿಲ್ಲದ್ದು ಎಂದಿದೆ. ಸರ್ಕಾರವು ತನ್ನದೇ ಭರವಸೆಗಳನ್ನು ಇಷ್ಟು ದೀರ್ಘಕಾಲವಾದರೂ ಪೂರೈಸದೆ ಯುವಕರ ಸಹನೆಯನ್ನು ಮಿತಿಮೀರಿ ಪರೀಕ್ಷಿಸಿದ ಪರಿಣಾಮ ಇದಾಗಿದೆ. ಇದರೊಂದಿಗೆ ನಿರುದ್ಯೋಗದಿಂದ ಹತಾಶರಾದ ಯುವಕರು, ತಮ್ಮ ಕಣ್ಣೆದುರೇ ಪೊಲೀಸರು ನಾಲ್ವರನ್ನು ಗುಂಡಿಕ್ಕಿ ಕೊಂದ ಘಟನೆಯಿಂದ ಒಳಗೆ ಕುದಿಯುತ್ತಿದ್ದ ಕೋಪದ ಕಟ್ಟೆಯೊಡೆದು ಅವರನ್ನು ಹಿಂಸೆಗಿಳಿಯುವಂತೆ ಮಾಡಿತು ಎಂದಿದ್ದಾರೆ.

ನೇಪಾಲಿಯರ ಅಥವಾ ಇನ್ನಾವುದೇ ವಿದೇಶಿಗರ ಕೈಗೊಂಬೆ ಆಗುವಷ್ಟು ಮೂರ್ಖರಲ್ಲ ಲಡಾಖ್ ಜನರು, ಇದು ಕೇವಲ ನಮಗೆ ಕೆಟ್ಟ ಹೆಸರು ತರಲು ಮಾಡಿರುವ ಆರೋಪಗಳಾಗಿವೆ ಎನ್ನುತ್ತಾರೆ ಲಡಾಖ್ ಸಂಘಟನೆಗಳ ಪದಾಧಿಕಾರಿಗಳು. ಲಡಾಖ್ ಜನರ ಬೇಡಿಕೆಗಳು ನ್ಯಾಯಯುತವಾಗಿವೆ ಎಂಬುದು ರಾಜಕೀಯ ವಿಶ್ಲೇಷಕರ, ಅಭಿವೃದ್ಧಿ ತಜ್ಞರ ಮತ್ತು ನಿವೃತ್ತ ಸೇನಾಧಿಕಾರಿಗಳ ಅಭಿಪ್ರಾಯವಾಗಿದೆ. ಈ ಘಟನೆಗೂ ಮೊದಲೇ ಗೃಹ ಸಚಿವಾಲಯವು ನಿಗದಿಸಿದ್ದ ಅಕ್ಟೋಬರ್ ಆರರ ಸಭೆಗೆ ಸೋನಂ ಅವರು ಬರದಂತೆ ತಡೆಯುವ ಹುನ್ನಾರವೆಂದು ಕೆಲವರು ಆರೋಪಿಸಿದರೆ, ಸೋನಂ ಅವರು ಲಡಾಖ್ ಪ್ರದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದು, ಗಾಂಧಿವಾದಿಯಾಗಿರುವ ಇವರು ದೇಶದ್ರೋಹದ ಕೃತ್ಯದಲ್ಲಿ ತೊಡಗಿದ್ದಾರೆಂಬ ಸರ್ಕಾರದ ಆರೋಪವನ್ನು ನಂಬಲು ಸಾಧ್ಯವಿಲ್ಲ ಎಂಬುದು ಹೆಚ್ಚಿನವರ ಮಾತಾಗಿದೆ. ಈಗಾಗಲೇ ಜೋಧ್‍ಪುರ ಜೈಲಿನೆದುರು ಅವರ ಬಂಧನವನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಇದನ್ನೂ ಓದಿ ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ಸ್ಥಿತಿಯಲ್ಲಿ RSS; ದೇವನೂರರ ಮನೋಜ್ಞ ವಿಶ್ಲೇಷಣೆ
ಲಡಾಖ್ ಸಂಘಟನೆಗಳು ಸರ್ಕಾರದ ನಡೆಗಳನ್ನು ಬಹುವಾಗಿ ಟೀಕಿಸಿದ್ದು, ಘಟನೆಯನ್ನು ನ್ಯಾಯಾಂಗ ತನಿಖೆ ಗೊಳಪಡಿಸುವಂತೆ ಆಗ್ರಹಿಸಿ, ಸೋನಂ ಇವರನ್ನು ಸೇರಿದಂತೆ ಬಂಧನದಲ್ಲಿರುವ ಎಲ್ಲರನ್ನು ನಿಯಮ ರಹಿತವಾಗಿ ಬಿಡುಗಡೆ ಮಾಡುವ ತನಕ ಸರ್ಕಾರದ ಜೊತೆಗೆ ಮಾತುಕತೆ ಇಲ್ಲವೆಂದು ಹೇಳಿಕೆ ನೀಡಿದ್ದಾವೆ. ಈ ನಡುವೆ, ಸೋನಂ ಅವರ ಪತ್ನಿ ಗೀತಾಂಜಲಿ ಅಂಗ್ಮೋರವರು ಸರ್ಕಾರದ ಆರೋಪವು ಶುದ್ಧ ಸುಳ್ಳಾಗಿರುವ ಕಾರಣ ಸೋನಂ ಅವರನ್ನು ಬಿಡುಗಡೆಗೊಳಿಸುವಂತೆ ಸುಪ್ರಿಂ ಕೊರ್ಟ್‍ಗೆ ಅರ್ಜಿ ಸಲ್ಲಿಸುತ್ತಾರೆ. ಸುಪ್ರಿಂಕೋರ್ಟ್ ಸೋನಂ ಅವರ ಬಂಧನದ ಕಾರಣಗಳನ್ನು ಅವರ ಪತ್ನಿಯೊಂದಿಗೆ ಹಂಚಿಕೊಳ್ಳಲು ಸರ್ಕಾರಕ್ಕೆ ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ನಿಗದಿಸಿದೆ.
ಲಡಾಖ್ | ಅಭಿವೃದ್ಧಿಯ ಆಶ್ವಾಸನೆ ನೀಡಿ ಜನರನ್ನು ವಂಚಿಸಿದ ಕೇಂದ್ರ ಸರ್ಕಾರ
ಬಂಧಿಸಿದ್ದ ಪ್ರತಿಭಟನಾಕಾರರಲ್ಲಿ ಸುಮಾರು 26 ಜನರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಈ ಘಟನೆಯ ಸುತ್ತ ಹಲವು ಪ್ರಶ್ನೆಗಳು ಎದ್ದಿದ್ದು, ಅವುಗಳಿಗೆ ಕೇಂದ್ರ ಸರ್ಕಾರವು ಉತ್ತರಿಸಬೇಕಿದೆ. ಸರ್ಕಾರವು ತಾನೇ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿಲ್ಲವೇಕೆ? ಹಲವಾರು ಪ್ರಶಸ್ತಿಗಳಿಸಿರುವ, ಸರ್ಕಾರವೇ ತನ್ನ ಹೊಸ ಶಿಕ್ಷಣ ನೀತಿಗೆ ಸಲಹೆ ಪಡೆದುಕೊಳ್ಳುತ್ತಿದ್ದ ಶಿಕ್ಷಣತಜ್ಞ, ಪರಿಸರ ಸಂರಕ್ಷಣೆಯ ಅನ್ವೇಷಿಗನಾದ ಪರಿಸರ ವಿಜ್ಞಾನಿ, ಚೀನಾ ವಸ್ತುಗಳನ್ನು ತ್ಯಜಿಸಲು ಕರೆನೀಡಿದ್ದ ಸ್ವದೇಶಿ, ಅಹಿಂಸಾತ್ಮಾಕ ಮಾರ್ಗದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಗಾಂಧಿವಾದಿ ಸೋನಂ ಅವರು ಅಚಾನಕ್ಕಾಗಿ ಪಾಕಿಸ್ತಾನಿ ಏಜೆಂಟರಾಗಿದ್ದು ಹೇಗೆ? ಇಂತಹ ಗಂಭೀರ ಆರೋಪಕ್ಕೆ ನೀಡಿರುವ ಪುರಾವೆ (ಪಾಕಿಸ್ತಾನದಲ್ಲಿ ನಡೆದ ಪರಿಸರ ಸಂಬಂಧಿ ಕಾರ್ಯಗಾರದಲ್ಲಿ ಅವರು ಭಾಗವಹಿಸಿದ್ದರು ಎಂಬುದು) ಎಷ್ಟೊಂದು ಬಾಲಿಶ! ಹಾಗಾದರೆ ಕ್ರಿಕೆಟಿನಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಹೋಗುವ ಆಟಗಾರರೆಲ್ಲರೂ ಪಾಕಿಸ್ತಾನಿ ಏಜೆಂಟರೇ ಎಂಬ ಅವರ ಮಡದಿಯ ಪ್ರಶ್ನೆಗೆ ನಿಮ್ಮ ಉತ್ತರವೇನು? ನನ್ನ ಮಗನನ್ನು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿಗಳು ಕೊಲ್ಲಲಾಗಲಿಲ್ಲ, ಆದರೆ ಈ ದೇಶದ ಪೊಲೀಸರು ಅವನನ್ನು ಕೊಂದರು! ಗುಂಡೇಟಿನಿಂದ ಮಡಿದ ಕಾರ್ಗಿಲ್ ಸೈನಿಕನ ತಂದೆಯೊಬ್ಬರ (ಅವರೂ ಸಹ ನಿವೃತ್ತ ಸೈನಿಕರು) ಹತಾಶೆಯ ಮಾತು ಇದಾಗಿದೆ. ನೇರವಾಗಿ ತಲೆಗೆ ಗುಂಡು ಹೊಡೆದು ಸಾಯಿಸಲು ನನ್ನ ಮಗನೇನು ಭಯೋತ್ಪಾದಕನೇ? ಪ್ರತಿಭಟನೆಯಲ್ಲಿನ ಜನರನ್ನು ನಿಯಂತ್ರಿಸುವುದು ಹೇಗೆಂದು ಪೊಲೀಸರಿಗೆ ತಿಳಿದಿರಲಿಲ್ಲವೇ? ಎಂಬಾತನ ಪ್ರಶ್ನೆಗಳಿಗೆ ಉತ್ತರವಿದೆಯೇ?
ಜನರೊಂದಿಗೆ ಕಲೆತು ಮಾತಾಡಿ, ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಬದ್ಧತೆಯ ಮೂಲಕ ಲಡಾಖ್ ಜನರಿಗೆ ನ್ಯಾಯ ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಬೇಕೆಂದು ಜನರ ಒತ್ತಾಸೆಯಾಗಿದೆ.
ಗಾಜಾ ಜನರ ಜೊತೆಗೆ ನಿಂತ ಯೂರೋಪಿಗರು: ಮೋದಿ ಮನ ಮಿಡಿಯುವುದು ಯಾವಾಗ?

ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್ ಕಾಮ್'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.




