ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೆಲವು ಸಂಸ್ಥೆಗಳು ರಾಜ್ಯೋತ್ಸವವನ್ನು ಆಚರಿಸಲು ನಿರಾಕರಿಸಿದ್ದವು. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಈ ದಿನ.ಕಾಮ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ಪ್ರಶ್ನೆ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆಲವು ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನೀಡಿದಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಉತ್ತರ : ಕೇಂದ್ರ ಸರ್ಕಾರ ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಕರ್ನಾಟಕದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಸಂಸ್ಥೆಗಳಲ್ಲಿ ಕನ್ನಡಿಗರೇ ಇಲ್ಲ. ಇನ್ನು ಕೆಲವು ಕಡೆ 10 ರಿಂದ 15 ಜನ ಕನ್ನಡಿಗರಿದ್ದಾರೆ. ಇನ್ನೊಂದು ಕಡೆ ಕೇಂದ್ರ-ರಾಜ್ಯ ಸರ್ಕಾರದ ತಿಕ್ಕಾಟವೂ ಇದೆ. ಇದರ ನಡುವೆ 1990ರ ನಂತರ ಬಹು ರಾಷ್ಟ್ರೀಯ ಕಂಪನಿಗಳು ಬೆಂಗಳೂರಿಗೆ ಬಂದಿವೆ. ಈ ಕಂಪನಿಗಳು ಬಂದಾಗ ಉದ್ಯೋಗ ಸೃಷ್ಠಿ ಮಾಡುತ್ತೆವೆ ಎಂದು ಹೇಳಿಕೊಳ್ಳುತ್ತವೆ. ಆದರೆ ಸೃಷ್ಟಿ ಮಾಡುವ ಉದ್ಯೋಗದಲ್ಲಿ ಎಷ್ಟು ಕನ್ನಡಿಗರ ಪಾಲಾಗುತ್ತದೆ ಎಂಬುದನ್ನು ಯಾವ ಕಂಪನಿಯೂ ಹೇಳಿಕೊಳ್ಳುವುದಿಲ್ಲ. ಈ ಎರಡು ಕಾರಣಗಳಿಂದ ಬೆಂಗಳೂರಿನಲ್ಲಿ ಕನ್ನಡ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡದ ಪರವಾಗಿ ಯೋಚಿಸುವ, ಕೆಲಸ ಮಾಡುವ ಜನಗಳು ಕೂಡ ಹುಟ್ಟಿಕೊಳ್ಳುತ್ತಾರೆ. ಚರಿತ್ರೆಯ ಈ ಬೆಳವಣಿಗೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಹಜವಾಗಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಈಗ ಬದಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಹೇಳಿದ್ದೇವೆ. ಕರ್ನಾಟಕದಲ್ಲಿದ್ದು, ಈ ಮಣ್ಣಿನಲ್ಲಿ ನಡೆದಾಡುತ್ತ, ಇಲ್ಲಿನ ನೀರನ್ನು ಕುಡಿಯುತ್ತ, ಇಲ್ಲಿನ ಗಾಳಿಯನ್ನು ಸೇವಿಸುತ್ತ ಇರುವವರು ಸಂಪೂರ್ಣವಾಗಿ ಕರ್ನಾಟಕವನ್ನು ನಿರ್ಲ್ಯಕ್ಷಿಸುವುದು, ನಮ್ಮ ಫೆಡರಲ್ ವ್ಯವಸ್ಥೆಗೆ ವಿರುದ್ಧವಾದದ್ದು.
ಪ್ರಶ್ನೆ : ದ್ವಿಭಾಷಾ ನೀತಿ ಅಳವಡಿಕೆಯ ಬಗ್ಗೆ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಕೆಲಸ ಮಾಡುತ್ತಿದೆ?
ಉತ್ತರ : ದ್ವಿಭಾಷಾ ನೀತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಳವಾಗಿ ಅಭ್ಯಾಸ ನಡೆಸಿದೆ. 1227 ಪುಟಗಳ ಡಾಕ್ಯೂಮೆಂಟ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೆವೆ. 1968ರಿಂದ ದ್ವಿಭಾಷ ಸೂತ್ರವನ್ನು ಅಳವಡಿಸಿಕೊಂಡು ಬಂದ ತಮಿಳುನಾಡು ಹಾಗೂ ಅದೇ ವರ್ಷದಿಂದ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡು ಬಂದ ಕರ್ನಾಟಕ, ಇವೆಲ್ಲವನ್ನು ತೌಲನಿಕವಾಗಿ ನೋಡಿದರೆ, ಭಾಷೆ, ಸಾಹಿತ್ಯ, ಸಂಸ್ಕೃತಿಯಲ್ಲಿ ತಮಿಳುನಾಡು ಬಹಳ ಮುಂದೆ ಇದೆ. “ಓದಿದ್ರೆ ಕೆಲಸ ಸಿಗುತ್ತದೆ” ಎಂಬ ಭ್ರಮೆಯನ್ನು ವ್ಯಾಪಕವಾಗಿ ಹರಡಲಾಗಿದೆ. ಹಿಂದಿಯನ್ನು ಒಪ್ಪಿಕೊಳ್ಳಲು ಬೇಕಾದ ಅಂಕಿಅಂಶಗಳನ್ನು ಕೊಡಲು ಯಾರೂ ಸಿದ್ದರಿಲ್ಲ.
ಅದೇ ರೀತಿ ಕರ್ನಾಟಕದಲ್ಲಿ ರಾಜ್ಯ ಶಿಕ್ಷಣ ನೀತಿಯ ಭಾಗವಾಗಿಯೇ ದ್ವಿಭಾಷ ನೀತಿ ಬಂದಿರೋದು. ಇದರ ಪ್ರಕಾರ ಕನ್ನಡ ಮೊದಲ ಅಥವಾ ಎರಡನೆ ಭಾಷೆಯಾಗಿ ಉಳಿಯುತ್ತದೆ. ಕರ್ನಾಟಕದಲ್ಲಿ ನೀವು ಮೊದಲ ಅಥವಾ ಎರಡನೇ ಭಾಷೆಯಾಗಿದರೂ ಕನ್ನಡವನ್ನು ತೆಗೆದುಕೊಳ್ಳಲೇಬೇಕು.
ಹಿಂದಿ ಕಲಿತರೆ ರಾಷ್ಟ್ರೀಯತೆ ಗಟ್ಟಿಯಾಗುತ್ತದೆ ಎಂದು ರಾಜಕೀಯಗೊಳಿಸಿದ್ದಾರೆ. ಅದು ದೇಶದ ಭಾಷೆ ಅಂತ ಭ್ರಮೆ ಸೃಷ್ಟಿಸಿದ್ದಾರೆ. ಭಾಷೆ ಮನುಷ್ಯನ ಜಾಗೃತಿಗೆ ಸಂಬಂಧಪಟ್ಟಿದ್ದು. ಆದ್ದರಿಂದ ದ್ವಿಭಾಷ ಸೂತ್ರವನ್ನು ಕರ್ನಾಟಕ ಸರ್ಕಾರ ಜಾರಿಗೆ ತರಬೇಕು.
ಪ್ರಶ್ನೆ : ಕರ್ನಾಟಕದಲ್ಲಿ ಹಲವು ಬೊರ್ಡ್‌ಗಳಲ್ಲಿ ಇರುವ ಕನ್ನಡವೇ ತಪ್ಪಾಗಿ ಇರುತ್ತದೆ. ಇದರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನಾದರೂ ಕೆಲಸ ಮಾಡುತ್ತಿದ್ದೆಯಾ?
ಉತ್ತರ : ಕರ್ನಾಟಕದಲ್ಲಿ 1 ಲಕ್ಷದ 10 ಸಾವಿರ ಊರಿನ ಹೆಸರುಗಳು ಇವೆ. ಈಗ ನಾವು ಹಲವಾರು ಸಂಘಟನೆ, ವಿದ್ಯಾರ್ಥಿಗಳು ಎಲ್ಲರನ್ನು ಒಳಗೊಂಡು “ನಮ್ಮ ಊರಿನ ಹೆಸರು, ನಮ್ಮ ಉಸಿರು” ಎಂಬ ಚಳುವಳಿಯನ್ನು ಆರಂಭಿಸುತ್ತಿದ್ದೆವೆ. ಹೊಸ ಊರು ಕಟ್ಟಿದರೆ ಹೊಸ ಹೆಸರಿಡಿ, ಆದರೆ ಹಳೆ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂಬ ಜಾಗೃತಿ ಮೂಡಬೇಕು. ಈ 1 ಲಕ್ಷದ 10 ಸಾವಿರ ಊರುಗಳಲ್ಲಿ ಶೇ 80ರಷ್ಟು ಕನ್ನಡ ಪದಗಳು ಇರುವ ಹೆಸರುಗಳಿವೆ. ನೀರು, ಬೆಟ್ಟ, ಒಣಭೂಮಿ ಇವುಗಳಿಂದ ಬಂದ ಪದಗಳು. ಉದಾಹರಣೆಗೆ ಕೂಡಲಸಂಗಮ. ಭೀಮ ನದಿ ಹಾಗೂ ಕೃಷ್ಣ ನದಿ ಸೇರುವ ಜಾಗ. ಇದೆ ರೀತಿ ಕರ್ನಾಟಕದಲ್ಲಿ ಬಹುತೇಕ ಊರುಗಳು ಕನ್ನಡದ್ದೆ ಪದಗಳಿವೆ.
ಪ್ರಶ್ನೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾಡಿದ ಯಾವ ಶಿಫಾರಸ್ಸು ಸರ್ಕಾರ ಅಳವಡಿಸಿಕೊಂಡಿದೆ?
ಉತ್ತರ : ಮೊದಲನೆಯದು, ನಾವು 22 ಜಿಲ್ಲೆಗಳಿಗೆ ಹೋಗಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೆವೆ. ನಿಮ್ಮ ಜಿಲ್ಲೆಯಲ್ಲಿ ಕನ್ನಡ ಅನುಷ್ಟಾನ ಹೇಗಾಗಿದೆ ಎಂದು ಕೇಳಿದ್ದೆವೆ. ಉದಾಹರಣೆಗೆ ಹಾಸನ, ಮೈಸೂರು, ಬೀದರ್, ಕಾರವಾರ ಹಾಗೂ ಉಡುಪಿಯಲ್ಲಿ ಕನ್ನಡ ಅನುಷ್ಠಾನ ಚೆನ್ನಾಗಿ ಆಗಿದೆ. ನಮ್ಮ ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಾಗಿ ಕೆಲವು ಜಿಲ್ಲೆಗಳು ಅಳವಡಿಸಿಕೊಂಡಿದೆ. ಇನ್ನು ಕೆಲವು ಜಿಲ್ಲೆಗಳು ನಿರೀಕ್ಷೆಯನ್ನು ಹುಸಿಗೊಳಿಸಿದೆ. ಜಿಲ್ಲಾಧಿಕಾರಿಗಳು ಪ್ರಾಧಿಕಾರ ಕೊಟ್ಟಂತಹ ಯಾವ ಆದೇಶವನ್ನು ಮಾಡದೆ ಉಳಿಸಿಲ್ಲ. ಆದರೆ ಕೆಳ ಹಂತದ ಅಧಿಕಾರಿಗಳು ಇದನ್ನು ಜವಾಬ್ದಾರಿ ವಹಿಸದೆ ಕಾರ್ಯನಿರ್ವಹಿಸಿದ್ದಾರೆ. ಎರಡನೆಯದು, ನಾಮಫಲಕಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಕೆಲಸಗಳಾಗಿವೆ. 60/40 ಇರುವ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕು.
ಪ್ರಶ್ನೆ : ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂದು ಸರೋಜಿ ಮಹಿಷಿ ವರದಿ ಹೇಳಿದೆ. ಆದರೆ ಈ ಕಾಯ್ದೆ ಜಾರಿಯಾಗುವಲ್ಲಿ ಎಡವುತ್ತಿರುವುದೇಕೆ?
ಉತ್ತರ : ಕರ್ನಾಟಕಕ್ಕೆ ದೊಡ್ಡ ದೊಡ್ಡ ಕಂಪನಿಗಳು ಬಂದಾಗ ಸರ್ಕಾರವೂ ಸಹ ಕನ್ನಡಿಗರಿಗೆ ಉದ್ಯೋಗ ಕೊಡುತ್ತದೆ ಎಂದು ಹೇಳುತ್ತದೆ. ಉದಾಹರಣೆಗೆ ತುಮಕೂರು ಬಳಿ ಆ್ಯಪಲ್ ಕಂಪನಿಗೆ 400 ಎಕರೆ ಜಾಗವನ್ನು ಕೊಡಲಾಗಿದೆ. ಇದರಲ್ಲಿ ಎಷ್ಟು ಕನ್ನಡಿಗರು ಉದ್ಯೋಗದಲ್ಲಿದ್ದಾರೆ ಎಂದು ನೋಡಿದರೆ, ಬೆರಳೆಣಿಕೆಯಷ್ಟು.
ಈಗ ಕರ್ನಾಟಕ ಬೃಹತ್ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದ್ದು. ಈ ಕಂಪನಿಗಳು ಹಾಕುವ ದುಡ್ಡು, ಸೃಷ್ಟಿ ಮಾಡುವ ಉದ್ಯೋಗ, ಆ ಉದ್ಯೋಗಗಳು ನಿರೀಕ್ಷಿಸುವ ಕೌಶಲ್ಯಗಳು. ಈ ಕೌಶಲ್ಯಗಳನ್ನು ಎದುರಿಸಿ ಕೆಲಸ ತೆಗೆದುಕೊಳ್ಳುವ ಕನ್ನಡಿಗರ ಸಂಖ್ಯೆ ಎಷ್ಟು ಎಂದರೆ ಅದು ಸಹ ಬೆರಳೆಣಿಕೆಯಷ್ಟು. ಅದಕ್ಕಾಗಿ ಸರ್ಕಾರವೇ, ನಮ್ಮ ಯುವಕ/ಯುವತಿಯರಿಗೆ ಕೌಶಲ್ಯ ಕಲಿಸುವ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಕನ್ನಡಿಗರು ಹೆಚ್ಚು ಉದ್ಯೋಗಗಳನ್ನು ಪಡೆಯಬೇಕು ಎಂಬುದು ನಮ್ಮೆಲ್ಲರ ಆಶಯ. ಅದಕ್ಕಾಗಿ ಸರ್ಕಾರದ ಕ್ರಮವು ಬಹಳ ಮುಖ್ಯವಾಗುತ್ತದೆ. ನಮ್ಮ ಯುವಕ/ಯುವತಿಯರಿಗೆ ಕೌಶಲ್ಯ ಕಲಿಸುವುದರ ಜೊತೆಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರ ಕಾಯ್ದೆಯನ್ನು ತರಬೇಕು.





