“ತಮಗಿಂತ ಹಿಂದುಳಿದವರು ಕಣ್ಣಮುಂದೆ ಇರುವಾಗ ನಮ್ಮನ್ನು ಎಸ್‌ಟಿಗೆ ಸೇರಿಸಿ ಎಂದು ಕುರುಬರು ಆಗ್ರಹಿಸುತ್ತಿರುವುದು ಎಷ್ಟು ಸರಿ?” ಎಂಬುದು ನಾಯಕ ಸಮುದಾಯದ ಬರೆಹಗಾರರೊಬ್ಬರ ಪ್ರಶ್ನೆ.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವೆ ನಡೆದಿರುವ ಪರಸ್ಪರ ಮಾತುಕತೆಗಳು ಪರಿಶಿಷ್ಟ ಪಂಗಡ (ಎಸ್.ಟಿ.) ಮೀಸಲಾತಿಯೊಳಗೆ ವರ್ಗೀಕರಣದ ಮಹತ್ವವನ್ನು ಮುನ್ನಲೆಗೆ ತಂದಿದೆ.
ಕುರುಬರನ್ನು ಎಸ್‌ಟಿಗೆ ಸೇರಿಸಬೇಕೆಂಬ ಚರ್ಚೆಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಉಗ್ರಪ್ಪ, “ತಟ್ಟೆ, ಊಟ ತಾರದೆ ಬಂದರೆ ಜನರ ಧ್ವನಿಯಾಗಿ ಹೋರಾಡಲು ಸಿದ್ಧನಿದ್ದೇನೆ. ಯಾರೇ ತಪ್ಪು ಮಾಡಿದರೂ ಅವರ ಮುಖಕ್ಕೆ ಹೇಳುತ್ತೇನೆ. ಬೊಮ್ಮಾಯಿ ಅವರು ಕುರುಬರನ್ನು ಎಸ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದರು. ನನ್ನ ಸಮಾಜ ಸ್ವಾರ್ಥಿ ಆಗಲು ಸಿದ್ಧರಿಲ್ಲ. ಆದರೆ, ನನ್ನ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ. ನೀವು ನಮ್ಮ ಜತೆಯಲ್ಲಿ ಸಹಪಂಕ್ತಿಯಲ್ಲಿ ಕೂರಬೇಕು ಎಂದುಕೊಂಡಿದ್ದರೆ ಪಾಲು ತಗೆದುಕೊಂಡು ಬನ್ನಿ. ಮುಂದೊಂದು ದಿನ ನಾಯಕ ಸಮಾಜದವರು ರಾಜ್ಯದ ಸಿಎಂ ಆಗಬೇಕು. ಅಧಿಕಾರ ಶಾಶ್ವತ ಅಲ್ಲ. ಸಿದ್ದರಾಮಯ್ಯ ಅವರೇ ನೀವು ಎಷ್ಟು ದಿನ ಸಿಎಂ ಆಗಿದ್ದರೂ ಒಂದಲ್ಲ ಒಂದು ದಿನ ಮಾಜಿ ಆಗುತ್ತೀರಿ. ನಿಮ್ಮ ವಿಚಾರಧಾರೆಯ ರಥ ಎಳೆಯುವ ಜನರನ್ನು ಗುರುತಿಸಿ, ಹೊಸ ರಾಜಕೀಯ ಅಧ್ಯಾಯ ಸೃಷ್ಟಿಸಿ. ನಮ್ಮೊಟ್ಟಿಗೆ ನಿಮ್ಮ ತಟ್ಟೆ, ಊಟ ತಂದು ಜತೆಯಲ್ಲಿ ಕುಳಿತು ತಿನ್ನಿ” ಎಂದಿದ್ದಾರೆ.
ಉಗ್ರಪ್ಪನವರ ಉಗ್ರ ಭಾಷಣ ಹೀಗೆಯೇ ಮುಂದುವರಿದಿತ್ತು. “ಕುರುಬರನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆ ಮಾಡುವುದಕ್ಕೂ ಮುನ್ನ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಕುರುಬರು ಬುಡಕಟ್ಟು ಸಮುದಾಯಕ್ಕೆ ಸೇರಿದವರೇ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಕುರುಬರು ಒಬಿಸಿಯಿಂದ ಎಸ್ಟಿಗೆ ಸೇರ್ಪಡೆಯಾಗುತ್ತಾರೆ ಎಂದಾದರೆ ಆ ಕ್ಷಣದಿಂದಲೇ ಶಿಕ್ಷಣ, ಉದ್ಯೋಗ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿನ ಎಸ್ಟಿ ಮೀಸಲಾತಿಯನ್ನು ಶೇ. 14ಕ್ಕೆ ಹೆಚ್ಚಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರದಿಂದ ಒತ್ತಡ ಹೇರಬೇಕು” ಎಂದು ಆಗ್ರಹಿಸಿದ್ದಾರೆ.
ಅಂದರೆ ಕುರುಬರನ್ನು ಎಸ್ಟಿಗೆ ಸೇರಿಸಲು ಆಕ್ಷೇಪಿಸದಿದ್ದರೂ, ಪಾಲನ್ನು ಹೆಚ್ಚಿಸಿ ಎಂಬುದು ಉಗ್ರಪ್ಪನವರ ಅಭಿಪ್ರಾಯ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕುರುಬರನ್ನು STಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಇದು ಆಕಸ್ಮಿಕವಲ್ಲ, ಮಹಾ ಷಡ್ಯಂತ್ರದ ಭಾಗ
ಮುಂದುವರಿದು, “ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು STಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ ಒಡನಾಟ ಆಗಲೂ ಚೆನ್ನಾಗಿತ್ತು. ಈಗಲೂ ಚೆನ್ನಾಗಿದೆ. ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಟ ಚನ್ನಾಗಿತ್ತು. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು STಗೆ ಸೇರಿಸಿದರು. ವಾಲ್ಮೀಕಿ, ಬೇಡ ಮತ್ತು ನಾಯಕ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು” ಎನ್ನುತ್ತಾರೆ.
“ಈಗ ಕುರುಬರನ್ನು STಗೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಹೋರಾಟ ಮಾಡಿದರು. ಸಿಎಂ ಆಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ. ಕುರುಬರನ್ನು STಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಉಗ್ರಪ್ಪನವರ ಮಾತುಗಳನ್ನು ಆಲಿಸಿದರೆ, ಕುರುಬರನ್ನು ಎಸ್‌ಟಿಗೆ ಸೇರಿಸುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಒಮ್ಮತವಿದೆ, ಆದರೆ ಪಾಲು ಹೆಚ್ಚಿಸಬೇಕೆಂಬ ಕೂಗು ಇದೆ. ಕುರುಬರನ್ನು ಸೇರಿಸಿದಾಗ ಸಹಜವಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕಾಗುತ್ತದೆ ಮತ್ತು ಮೀಸಲಾತಿ ಹಂಚಿಕೆಯನ್ನು ನಿಗದಿಪಡಿಸುವುದು ಅನಿವಾರ್ಯವಾಗುತ್ತದೆ. ಇಲ್ಲವಾದರೆ ನಾಯಕ ಮತ್ತು ಕುರುಬ ಸಮುದಾಯದ ನಡುವೆ ವೈಷಮ್ಯ ಬೆಳೆಯಲು ಕಾರಣವಾಗುತ್ತದೆ. ಒಂದಂತೂ ಸತ್ಯ- ಕುರುಬರನ್ನು ಎಸ್‌ಟಿಗೆ ಸೇರಿಸಲಿ ಅಥವಾ ಬಿಡಲಿ, ಪರಿಶಿಷ್ಟ ಪಂಗಡಗಳಲ್ಲಿ ಒಳಮೀಸಲಾತಿ ಜಾರಿಗೆ ತರಬೇಕಾದ ಅಗತ್ಯತೆ ಇದ್ದೇ ಇದೇ ಎಂಬುದು ಎಲ್ಲ ಸಮಾನತಾವಾದಿಗಳ ಆಶಯ.
ಪರಿಶಿಷ್ಟ ಜಾತಿ ಮೀಸಲಾತಿಯನ್ನು ವರ್ಗೀಕರಿಸಬೇಕೆಂದು 35 ವರ್ಷಗಳ ಕಾಲ ಹೋರಾಟ ನಡೆಯಿತು. ಅಂತಿಮವಾಗಿ 2024ರ ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಒಳಮೀಸಲಾತಿಯನ್ನು ಎತ್ತಿಹಿಡಿಯಿತು ಮತ್ತು ಪರಿಶಿಷ್ಟರ ಮೀಸಲಾತಿ ವರ್ಗೀಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದಿತು. ಒಳಮೀಸಲಾತಿ ಜಾರಿಗಾಗಿ ಮುಂಚೂಣಿಯಲ್ಲಿ ನಿಂತು 35 ವರ್ಷ ಹೋರಾಟ ನಡೆಸಿದ ಮಾದಿಗ ಸಮುದಾಯ ಅಂತಿಮವಾಗಿ ತನ್ನ ಪಾಲನ್ನು ಪಡೆಯುವತ್ತ ಹೆಜ್ಜೆ ಇಟ್ಟಿದೆ. ಪರಿಶಿಷ್ಟರ ಮೀಸಲಾತಿಗೆ ಆದೇಶವಾಗಿದ್ದರೂ ಕೆಲವು ತಾಂತ್ರಿಕ ಸಮಸ್ಯೆಗಳಿರುವುದನ್ನು ಬಗೆಹರಿಸಲು ಹೋರಾಟಗಳು ಮುಂದುವರಿದಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಸಂಬಂಧಿಸಿದಂತೆ ಸಲಹೆ ನೀಡಲು ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯು ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಏರಿಸಿತ್ತು. ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ ಹಲವು ದಿನ ಹೋರಾಟ ನಡೆಸಿದ್ದರು. ಮೀಸಲಾತಿಯನ್ನು ಹೆಚ್ಚಿಸಿದ್ದು ಸ್ವಾಗತಾರ್ಹ. ದೇಶದ ಕೆಲವು ರಾಜ್ಯಗಳಲ್ಲಿ ಎಸ್‌ಟಿ ಮೀಸಲಾತಿ ದೊಡ್ಡ ಮಟ್ಟದಲ್ಲಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಎಸ್‌ಟಿ ಮೀಸಲಾತಿ ಪ್ರಮಾಣಕ್ಕೂ ಅದರೊಳಗಿರುವ ಜಾತಿಗಳ ಜನಸಂಖ್ಯೆಗೂ ವ್ಯತ್ಯಾಸವಿತ್ತು. ಮೂರು ಪರ್ಸೆಂಟ್ ಮೀಸಲಾತಿಯಲ್ಲಿ 52 ಸಮುದಾಯಗಳು ಗುದ್ದಾಡಬೇಕಿತ್ತು. ಈ ಮೂರರಲ್ಲಿ ಹೆಚ್ಚಿನ ಪಾಲು ನಾಯಕ ಸಮುದಾಯದವರೇ ಪಡೆದದ್ದು ಸುಳ್ಳಲ್ಲ. ಆದರೆ ನಾಯಕ ಸಮುದಾಯದೊಳಗಿನ ಕೆಲವು ಚಿಂತಕರು, “ನಾವು ಒಬಿಸಿ ಪಟ್ಟಿಯಲ್ಲಿ ಇದ್ದಿದ್ದರೆ ನಾಯಕರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ನಮ್ಮನ್ನು ಎಸ್‌ಟಿ ಪಟ್ಟಿಗೆ ಹಾಕಿದಾಗ, ಹೆಚ್ಚೇನೂ ಸಿಗಲಿಲ್ಲ. ಯಾಕೆಂದರೆ ಅಲ್ಲಿದ್ದದ್ದು ಕೇವಲ 3 ಪರ್ಸೆಂಟ್ ಮಾತ್ರ. ಹೀಗಾಗಿ ಒಳಮೀಸಲಾತಿ ಹೆಚ್ಚಳವು ಅನಿವಾರ್ಯವಾಗಿತ್ತು. ಈಗ ಮೀಸಲಾತಿ ಹೆಚ್ಚಳವಾಗಿದೆ. ನಾಯಕರು ಇನ್ನುಳಿದ ಎಸ್‌ಟಿಗಳೊಂದಿಗೆ ಮೀಸಲಾತಿಯನ್ನು ಹಂಚಿಕೊಳ್ಳಬೇಕಾಗಿದೆ” ಎಂದು ಅಭಿಪ್ರಾಯಪಡುತ್ತಾರೆ.
“ಎಸ್‌ಟಿ ಮೀಸಲಾತಿ ಎಂದ ತಕ್ಷಣ ‘ನಾಯಕ’ ಸಮುದಾಯವೇ ಪ್ರಧಾನವಾಗಿ ಕಾಣುವುದು ಸುಳ್ಳಲ್ಲ. ಪಾಳೇಗಾರಿ ಸಂಸ್ಕೃತಿಯು ನಮ್ಮ ಪಳೆಯುಳಿಕೆ ಎಂಬ ಹುಸಿ ಅಹಂ ಭಾವವು ಸಮುದಾಯದೊಳಗೆ ಬೆಳೆದಿದೆ. ಆದರೆ ಸರ್ಕಾರಿಯೇತರ ವಲಯದಲ್ಲಿ ಮೇಲ್ವರ್ಗದ ಕಣ್ಣಿಗೆ ನಾವು ಎಸ್‌ಟಿಗಳಷ್ಟೇ, ಮೀಸಲಾತಿ ಕಾರಣಕ್ಕೆ ನಮ್ಮನ್ನು ಅಸ್ಪೃಶ್ಯರಂತೆಯೇ ಕಾರ್ಪೊರೇಟ್ ಜಗತ್ತು ನೋಡುತ್ತದೆ. ನಾಯಕ ಸಮುದಾಯದ ಕೆಲವು ಬಿಕ್ಕಟ್ಟುಗಳನ್ನು ಹೊರಗಿನ ಸಮಾಜ ಅರ್ಥ ಮಾಡಿಕೊಂಡಿಲ್ಲ. ಪೊಳ್ಳು ಫ್ರೈಡ್ ಸಮುದಾಯದೊಳಗೆ ಬೆಳೆಯುತ್ತಿದೆ. ಮೈಸೂರು, ಮಧ್ಯಕರ್ನಾಟಕ ಭಾಗದಲ್ಲಿನ ನಾಯಕರು ಒಂದಿಷ್ಟು ಮುಂದುವರಿದಿದ್ದರೂ ಹೈದ್ರಾಬಾದ್ ಕರ್ನಾಟಕ ಭಾಗದ ನಾಯಕರು ತೀರಾ ಹಿಂದುಳಿದಿದ್ದಾರೆ. ಆದರೆ ಕರ್ನಾಟಕದ ಸಮಗ್ರ ನಾಯಕ ಸಮುದಾಯದೊಳಗಿರುವ ಸ್ಪೃಶ್ಯ ಭಾವನೆಯನ್ನು ಉದ್ಧೀಪಿಸಿ, ಸಮುದಾಯವನ್ನು ಅಂಧಕಾರಕ್ಕೆ ತಳ್ಳುವ ಕೆಲಸ ಆಗುತ್ತಿದೆ. ನಿಜಕ್ಕೂ ನಾಯಕ ಸಮುದಾಯ ಹಿಂದುಳಿದಿದೆ. ಸಮುದಾಯದ ಸ್ಥಿತಿಗತಿಯ ಕುರಿತು ಖಚಿತವಾದ ಅಧ್ಯಯನಗಳು ಆಗಿಯೇ ಇಲ್ಲ. ಎಸ್‌ಸಿ ಮೀಸಲಾತಿ ವರ್ಗೀಕರಣಕ್ಕಾಗಿ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿದಂತೆ, ಎಸ್‌ಟಿಗಳ ಸಮೀಕ್ಷೆಯನ್ನೂ ಹಮ್ಮಿಕೊಳ್ಳಬೇಕು. ಆಗ ಮಾತ್ರ ನಾಯಕರ ಹಿಂದುಳಿದಿರುವಿಕೆ ಗೊತ್ತಾಗುತ್ತದೆ. ಎಸ್‌ಸಿಗಳ ಸ್ಥಿತಿಗತಿಗಳ ಚರ್ಚೆಗಳ ಸಂದರ್ಭದಲ್ಲಿ ಸಮಗ್ರ ಎಸ್‌ಟಿ ಸಮುದಾಯಗಳ ಪರಿಸ್ಥಿತಿಯೂ ಪರಿಗಣನೆಗೆ ಒಳಗಾಗುವುದಿಲ್ಲ. ಎಸ್‌ಟಿಗಳ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ” ಎಂಬುದು ನಾಯಕ ಸಮುದಾಯದಿಂದ ಬಂದ ಚಿಂತಕರೊಬ್ಬರ ಅಭಿಪ್ರಾಯ.
ಇದನ್ನೂ ಓದಿರಿ: ಶಾಲಾ ಅವಧಿಯಲ್ಲಿ ಶಿಕ್ಷಣೇತರ ಕೆಲಸಗಳಿಗೆ ಶಿಕ್ಷಕರ ಬಳಕೆ ಕುರಿತು ಏನಿದೆ ನಿಯಮ?
ನಾಯಕರು ಹಿಂದುಳಿದಿದ್ದಾರೆ ಎನ್ನುವ ವಾದ ಮಂಡಿಸುವ ಆ ಸಮುದಾಯದ ಪ್ರಜ್ಞಾವಂತರು, ಒಳಮೀಸಲಾತಿಗೆ ವಿರೋಧವನ್ನೇನೂ ವ್ಯಕ್ತಪಡಿಸುವುದಿಲ್ಲ. Infact ನಾಯಕ ಸಮುದಾಯ ಮೀಸಲಾತಿ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಬೀದಿಗಿಳಿದ ಉದಾಹರಣೆಗಳೂ ಇಲ್ಲ. ಮೀಸಲಾತಿ ಹೆಚ್ಚಳಕ್ಕೆ ಸ್ವಾಮೀಜಿಯವರು ಹೋರಾಟಕ್ಕೆ ಕುಳಿತಾಗ, ಬಹಳ ದಿನಗಳ ನಂತರವಷ್ಟೇ ಸಮುದಾಯದ ಬೆಂಬಲ ದೊರಕಿತ್ತು. ಒಳಮೀಸಲಾತಿ ತರಲು ಹೊರಟರೆ ನಾಯಕರು ವಿರೋಧಿಸುವಷ್ಟು ಮಟ್ಟಕ್ಕೆ ಹೋಗಲಾರರು ಎಂಬುದು ಸಮುದಾಯದೊಳಗಿನವರ ಮಾತು.
“ನಿಜ, ಎಸ್‌ಟಿಗಳ ಸ್ಥಿತಿಗಳ ಬಗ್ಗೆ ಚಿಂತಕವಲಯ ಗಂಭೀರವಾಗಿ ಚರ್ಚೆಗಳನ್ನ ನಡೆಸದೆ ಇರುವುದು ಸ್ಪಷ್ಟ. ಈ ಕಾರಣದಿಂದ ನಾಯಕ ಸಮುದಾಯದೊಳಗೆ ಕೋಮುವಾದಿ ರಾಜಕೀಯ ವ್ಯವಸ್ಥೆಯು ಭ್ರಮಾತ್ಮಕ ಪಾಳೇಗಾರಿಕೆಯನ್ನು ಉದ್ಧೀಪಿಸಲು ಯತ್ನಿಸುತ್ತಿದೆ. ಸಮುದಾಯದ ಒಳಗೂ ಆತ್ಮಾವಲೋಕನ ಆಗಬೇಕಿದೆ. ಇದು ನಾಯಕ ಸಮುದಾಯದ ಬಿಕ್ಕಟ್ಟಿನದ್ದಾದರೆ, ಪರಿಶಿಷ್ಟ ಪಂಗಡದಲ್ಲಿನ ನೈಜ ಬುಡಕಟ್ಟು ಜನರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ” ಎನ್ನುತ್ತಾರೆ ಮತ್ತೊಬ್ಬ ಬರೆಹಗಾರರು.
ಕರಾವಳಿ ಕರ್ನಾಟಕ ಮತ್ತು ಮಲೆನಾಡು, ಕೊಡಗು ಭಾಗದಲ್ಲಿ ಬರುವ ಟ್ರೈಬ್‌ಗಳು ಹೆಚ್ಚಿನದಾಗಿ ಹಿಂದುಳಿದವರು. ನಿಜವಾದ ಬುಡಕಟ್ಟು ಜನರಾದ ಇವರು, ಅಕ್ಷರಶಃ ಅವಕಾಶ ವಂಚಿತರು. ಮೂಲಭೂತ ಸೌಕರ್ಯಗಳೂ ಇಲ್ಲದೆ ಬದುಕುತ್ತಿರುವವರು. ಇನ್ನೊಂದೆಡೆ ಜೇನು ಕುರುಬ, ಗೋಂಡಾದಂತಹ ಸಮುದಾಯಗಳ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪಡೆದು ವಂಚಿಸಿರುವ ಉದಾಹರಣೆಗಳೂ ಕಂಡುಬಂದಿವೆ.
ಇಷ್ಟೆಲ್ಲ ಸಂಕೀರ್ಣತೆಗಳು ಎಸ್‌ಟಿ ಮೀಸಲಾತಿಯೊಳಗೆ ಇವೆ. ಇದ್ದ ಕಡಿಮೆ ಅವಕಾಶದಲ್ಲಿ ಹೆಚ್ಚು ಪಾಲು ಪಡೆದದ್ದು ನಾಯಕರೇ ಎಂಬುದು ನಿಜವಾದರೂ ಈಗ ಪಾಲು ಹೆಚ್ಚಾಗಿದೆ. ಕಾಡಿನೊಂದಿಗೆ ಬದುಕಿನ ನಿಜವಾದ ಟ್ರೈಬ್‌ಗಳಿಗೆ ಈಗ ಎಸ್‌ಟಿ ಮೀಸಲಾತಿ ಸವಲತ್ತು ದೊರಕಬೇಕಾಗಿದೆ. ಆದರೆ ಕುರುಬರನ್ನು ಎಸ್‌ಟಿಗೆ ಸೇರಿಸಬಹುದೇ? ಹಿಂದುಳಿದ ಸಮುದಾಯಗಳ ಪೈಕಿ ಹೆಚ್ಚು ಪಾಲು ಪಡೆದವರು ಕುರುಬರೇ ಆಗಿದ್ದಾರೆ. ಕುರುಬರಿಗಿಂತ ಹೆಚ್ಚು ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿವೆ. “ತಮಗಿಂತ ಹಿಂದುಳಿದವರು ಕಣ್ಣಮುಂದೆ ಇರುವಾಗ ನಮ್ಮನ್ನು ಎಸ್‌ಟಿಗೆ ಸೇರಿಸಿ ಎಂದು ಕುರುಬರು ಆಗ್ರಹಿಸುತ್ತಿರುವುದು ಎಷ್ಟು ಸರಿ?” ಎಂಬುದು ನಾಯಕ ಸಮುದಾಯದ ಬರೆಹಗಾರರೊಬ್ಬರ ಪ್ರಶ್ನೆ. ಇಷ್ಟೆಲ್ಲ ತಕರಾರುಗಳ ನಡುವೆಯೂ ಎಸ್‌ಟಿ ಮೀಸಲಾತಿಯೊಳಗೆ ಸಾಮಾಜಿಕ ನ್ಯಾಯ ತರಬೇಕೆಂಬುದನ್ನು ನಾಯಕ ಸಮುದಾಯದ ವಿಚಾರವಂತರು ಅಲ್ಲಗಳೆಯುವುದಿಲ್ಲ. ಆದರೆ ಕೋಮುವಾದಿ ರಾಜಕೀಯ ವ್ಯವಸ್ಥೆಯು ನಾಯಕ ಸಮುದಾಯದೊಳಗೆ ಇರುವ ಪೊಳ್ಳು ಜಾತಿ ಅಹಮಿಕೆಯನ್ನು ಉದ್ಧೀಪಿಸಿ, ದಿಕ್ಕುತಪ್ಪಿಸುವ ಆತಂಕವೂ ಸಮುದಾಯದೊಳಗೆ ದಟ್ಟವಾಗುತ್ತಿದೆ. ಕುರುಬರನ್ನು ಉದ್ದೇಶಪೂರ್ವಕವಾಗಿ ಎಸ್‌ಟಿ ಸೇರಿಸಿ, ನಾಯಕರಿಗೆ ಅನ್ಯಾಯ ಮಾಡಲು ಯತ್ನಿಸಲಾಗುತ್ತದೆ ಎಂಬುದನ್ನು ಪ್ರತಿಪಾದಿಸುವ ಜೊತೆಗೆ, ಒಳಮೀಸಲಾತಿ ಬಂದರೆ ನಾಯಕರಿಗೆ ಅನ್ಯಾಯವಾಗುತ್ತದೆ ಎಂದು ಪ್ರಚೋದಿಸುವ ಸಾಧ್ಯತೆಯೂ ಇದೆ. ಇದನ್ನು ಮನಗಂಡಿರುವ ಅನೇಕ ನಾಯಕ ಸಮುದಾಯದ ಚಿಂತಕರು, “ಸಾಮಾಜಿಕ ನ್ಯಾಯದ ರಥವನ್ನು ನಾವಾಗಿಯೇ ಎಳೆಯಬೇಕು. ಎಸ್‌ಟಿ ಪಟ್ಟಿಯಲ್ಲಿರುವ ತೀರಾ ಹಿಂದುಳಿದ ಸಮುದಾಯಗಳಿಗೆ ನ್ಯಾಯ ದೊರಕಿಸಿ, ನಾವೆಲ್ಲ ಬಾಬಾಸಾಹೇಬರ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕು” ಎನ್ನುತ್ತಾರೆ.
‘ಈದಿನ’ದ ಜೊತೆ ಮಾತನಾಡಿದ ಬರೆಹಗಾರ ಅರುಣ್ ಜೋಳದಕೂಡ್ಲಿಗಿ, “ಇದೀಗ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಬಗ್ಗೆ ಕರ್ನಾಟಕ ಸರಕಾರ ಹಂಚಿಕೆಯ ತೀರ್ಮಾನಕ್ಕೆ ಬಂದರೂ ಅಲೆಮಾರಿಗಳು ಪ್ರತ್ಯೇಕ ಶೇ. 1 ರಷ್ಟು ಮೀಸಲಾತಿಗಾಗಿ ಸದ್ಯಕ್ಕೆ ದೆಹಲಿಯಲ್ಲಿ ಧರಣಿನಿರತವಾಗಿವೆ. ಹೀಗಿರುವಾಗ ಪರಿಶಿಷ್ಟ ಪಂಗಡಗಳಲ್ಲಿಯೂ ಒಳಮೀಸಲಾತಿಯ ಕೂಗು ಎದ್ದಿದೆ. ಕಾರಣ ಈಗಿರುವ ಪರಿಶಿಷ್ಟ ಪಂಗಡದ ಸೌಲಭ್ಯಗಳಲ್ಲಿ ಬಹುಪಾಲು ಫಲಾನುಭವಿಗಳು ವಾಲ್ಮೀಕಿ ನಾಯಕ ಸಮುದಾಯವಾಗಿದೆ. ಕಾರಣ ಸ್ವತಃ ನಾಯಕ ಸಮುದಾಯವೆ ಮುಂದೆ ಬಂದು ಪರಿಶಿಷ್ಟ ಪಂಗಡದ ಒಳ ಮೀಸಲಾತಿಯ ಹಂಚಿಕೆಗಾಗಿ ದನಿ ಎತ್ತಬೇಕಾಗಿದೆ. ಹಾಗಾದಲ್ಲಿ ಈಗಿರುವ ಪರಿಶಿಷ್ಟ ಪಂಗಡದಲ್ಲಿ ಬಹುಸಂಖ್ಯಾತರಾಗಿರುವ ವಾಲ್ಮೀಕಿ ನಾಯಕ ಸಮುದಾಯಕ್ಕೆ ತನ್ನ ಪಾಲು ದಕ್ಕಿಯೂ ಉಳಿದ ಸಮುದಾಯಗಳಿಗೆ ಜನಸಂಖ್ಯಾವಾರು ಮೀಸಲಾತಿಯ ಪಾಲು ಹಂಚಿಕೆಯಾಗಬೇಕಿದೆ. ಹೀಗಾದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಬಯಸುತ್ತಿರುವ ಕುರುಬ, ಗೊಲ್ಲ ಸಮುದಾಯಗಳು ತಾವು ಸೇರುವುದಾದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ಹೋರಾಡಬೇಕಾಗುತ್ತದೆ” ಎಂದರು.
ಇದನ್ನೂ ಓದಿರಿ: ʼದೀಕ್ಷಾ ಬ್ರ್ಯಾಂಡ್ʼ ಮೂಲಕ ಸ್ವಾವಲಂಬನೆ ಬದುಕು; PMFME ಯೋಜನೆಯಿಂದ ಯಶಸ್ಸು ಕಂಡ ಮಹಿಳಾ ಉದ್ಯಮಿ
ಹಿರಿಯ ಪತ್ರಕರ್ತ ಅಹೋಬಳಪತಿ ಪ್ರತಿಕ್ರಿಯಿಸಿ, “ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಸ್‌ಟಿ ಒಳಮೀಸಲಾತಿ ಜಾತಿಯಾದ ಬಹಳ ಒಳ್ಳೆಯ ಬೆಳವಣಿಗೆ. ಅದಕ್ಕೂ ಮೊದಲು ಪರಿಶಿಷ್ಟ ಪಂಗಡಗಳ ಸ್ಥಿತಿಗತಿಯ ಅಧ್ಯಯನ ಆಗುವ ಅಗತ್ಯವಿದೆ. ಒಳಮೀಸಲಾತಿ ಇಂದಿನ ಅಗತ್ಯ” ಎಂದರು.
ಪರಿಶಿಷ್ಟ ಪಂಗಡಕ್ಕೆ ಕುರುಬರನ್ನು ಸೇರಿಸಬೇಕೆಂಬ ಕೂಗು, ಅದಕ್ಕಾಗಿ ಕಾನೂನು ತಿದ್ದುಪಡಿ ಮಾಡುವ ಅಗತ್ಯತೆ- ಎಲ್ಲವೂಗಳ ಜೊತೆಗೆ ಎಸ್‌ಟಿಗೆ ಕುರುಬರನ್ನು ಸೇರಿಸಿದರೆ, ಎಸ್‌ಟಿಯೊಳಗೆ ಒಳಮೀಸಲಾತಿ ಜಾರಿಗೆ ತರಬೇಕಾಗುತ್ತದೆ. ಕುರುಬರನ್ನು ಎಸ್‌ಟಿಗೆ ಸೇರಿಸಲಿ, ಸೇರಿಸದೆ ಇರಲಿ, ಪರಿಶಿಷ್ಟ ಪಂಗಡದೊಳಗೆ ಮೀಸಲಾತಿ ವರ್ಗೀಕರಣ ಆಗಲೇಬೇಕಾಗಿರುವುದು ಸಾಂವಿಧಾನಿಕ ನ್ಯಾಯವಾಗುತ್ತದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




