ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಮತ್ತೆ ಜೈಲು ಸೇರಿರುವ ದರ್ಶನ್ ದಿಂಬಿಲ್ಲ, ನಿದ್ದೆಯಿಲ್ಲ, ಸರಿಯಾದ ಊಟ ಇಲ್ಲ ಎಂದು ಹೇಳುತ್ತಾ ಪರದಾಡುತ್ತಿದ್ದಾರೆ.
‘ಡಿ ಬಾಸ್’ ಎಂದೇ ಫೇಮಸ್ ಆಗಿರುವ ದರ್ಶನ್ ತೂಗುದೀಪ ಅವರು ತಮ್ಮ ಅಭಿಮಾನಿಗಳಿಗೆ ದೇವರಾದರೇ, ಕಾನೂನಿನ ಮುಂದೆ ಆರೋಪಿ. ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಿರುವ ದರ್ಶನ್, ತಮ್ಮ ಅಭಿಮಾನಿಗಳಿಗೆ ಆದರ್ಶವಾಗಬೇಕಿತ್ತು. ಆದರೆ, ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದಾರೆ. ಕಷ್ಟ ಪಟ್ಟು ಜೀವನದಲ್ಲಿ ಯಶಸ್ಸು ಕಂಡಿದ್ದ ಅವರಿಗೆ ಸುಖವಾಗಿ ಬಾಳುವ ಅವಕಾಶ ಇತ್ತು. ಆದರೆ, ಅಹಂಕಾರ ಮತ್ತು ಹಿಂಸೆಯ ಹಾದಿಯಲ್ಲಿ ನಡೆದು ಅವರು ಕಷ್ಟಪಡುವುದಲ್ಲದೇ, ಅವರ ಕುಟುಂಬವನ್ನೂ ಸಂಕಷ್ಟಕ್ಕೆ ದೂಡಿದ್ದಾರೆ. ಈಗ ಹಾಸಿಗೆ, ದಿಂಬು ಹಾಗೂ ಬೆಡ್ ಶೀಟ್‌ಗಾಗಿ ಪರದಾಡುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರು ಹಾಸಿಗೆ, ದಿಂಬು ಮತ್ತು ಬೆಡ್ ಶೀಟ್ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಅವರ ಮನವಿಗೆ ಕೋರ್ಟ್ ಮನ್ನಣೆ ನೀಡಿಲ್ಲ. ನಿರಾಕರಿಸಿದೆ.
“ನನಗೆ ಬೆನ್ನು ನೋವು ಇದೆ. ಆರೋಗ್ಯ ಸಮಸ್ಯೆಯಿದೆ. ಜತೆಗೆ, ಜೈಲಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಹಾಗಾಗಿ, ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ ಶೀಟ್ ನೀಡಬೇಕೆಂದು ಜೈಲಿನ ಅಧಿಕಾರಿಗಳಿಗೆ ಸೂಚಿಸಬೇಕು” ಎಂದು ನ್ಯಾಯಲಯಕ್ಕೆ ಮನವಿ ಮಾಡಿದ್ದರು.

ಆದರೆ, ನಗರದ 57ನೇ ಸಿಸಿಎಚ್ ನ್ಯಾಯಾಲಯ ಹೆಚ್ಚುವರಿ ಸೌಲಭ್ಯ ನೀಡುವುದಕ್ಕೆ ನಿರಾಕರಿಸಿದೆ. ಜೈಲು ಕೈಪಿಡಿ ಪ್ರಕಾರವೇ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದೆ.
ಅಷ್ಟೇ ಅಲ್ಲದೇ, ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವಂತೆಯೂ ದರ್ಶನ್ ಅವರು ಮನವಿ ಮಾಡಿದ್ದರು. ಅವಶ್ಯವಿದ್ದರೆ ಕ್ವಾರಂಟೈನ್ ಬ್ಯಾರಕ್‌ನಿಂದ ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವ ನಿರ್ಧಾರವನ್ನ ಜೈಲು ಅಧಿಕಾರಿಗಳೇ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ. ತಿಂಗಳಿಗೊಮ್ಮೆ ಮನೆಯಿಂದ ಬೆಡ್ ಶೀಟ್ ಹಾಗೂ ಬಟ್ಟೆ ಒದಗಿಸಲು ಕೋರ್ಟ್ ಸೂಚನೆ ನೀಡಿದೆ.
ಕಾರಾಗೃಹದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಕಾನೂನು ಸೇವಾ ಪ್ರಾಧಿಕಾರವು ಜೈಲಿನ ಕೈಪಿಡಿ ಅನುಸಾರವೇ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವರದಿ ಸಲ್ಲಿಸಿತ್ತು. ಆ ವರದಿಯ ಆಧಾರ ಮೇಲೆ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
2024 ಜೂನ್ 8ರಂದು ದರ್ಶನ್ ಮತ್ತು ಪವಿತ್ರಾ ಕಡೆಯ ಹುಡುಗರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿ ಹಾಕಿದ್ದರು. ಆ ಬಳಿಕ, 9ರ ರಾತ್ರಿಗೆ ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ಫೋನ್ ಮಾಡಿ ಕರೆಸಿಕೊಂಡಿದ್ದರು. ಆವೇಶದಲ್ಲಿದ್ದ ದರ್ಶನ್ ಅವರು ಅರೆಜೀವವಾಗಿದ್ದ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಈ ಸಾವಿಗೆ ದರ್ಶನ್ ನೇರವಾಗಿ ಕಾರಣನಾಗಿದರು. ದರ್ಶನ್ ಅವರ ಬೂಟಿನೇಟಿಗೆ ರೇಣುಕಾಸ್ವಾಮಿ ಸ್ಥಳದಲ್ಲೇ ಶವವಾದ. ನಂತರ ಆರೋಪಿಗಳು ಶವವನ್ನು ಮೋರಿಗೆ ಎಸೆದು ಹೋಗಿದ್ದರು. 10ರಂದು ಬೆಳ್ಳಂಬೆಳಗ್ಗೆ ಕಾಮಾಕ್ಷಿಪಾಳ್ಯ ಬಳಿಯ ಅಪಾರ್ಟ್‌ಮೆಂಟ್ ಪಕ್ಕದಲ್ಲಿನ ಮೋರಿಯಲ್ಲಿ ಜರ್ಜರಿತಗೊಂಡ ಸಣಕಲು ಶವವೊಂದನ್ನು ನಾಯಿಗಳು ಎಳೆದಾಡುತ್ತಿದ್ದುದನ್ನು ನೋಡಿದ ಅಲ್ಲಿನ ಸೆಕ್ಯುರಿಟಿ ಗಾರ್ಡ್ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಖ್ಯಾತ ನಟ ದರ್ಶನ್ ಆರೋಪಿಯಾಗಿರುವ ಈ ಪ್ರಕರಣ ಎಸಿಪಿ ಚಂದನ್ ತರಹದ ಪೊಲೀಸ್ ಅಧಿಕಾರಿಯ ಕೈಗೆ ಸಿಗದೇ ಬೇರೆ ಪೊಲೀಸರ ಕೈಗೆ ಸಿಕ್ಕಿದ್ದರೇ, ಬಹುಶಃ ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿಯೇ ಇಲ್ಲ ಎಂದು ಸಾಕ್ಷಿಗಳನ್ನ ನಾಶ ಮಾಡುವುದು ದೊಡ್ಡ ಕೆಲಸವೇನೂ ಆಗುತ್ತಿರಲಿಲ್ಲ. ಆದರೆ, ಹಾಗೆ ಆಗಿಲ್ಲ. ಬದಲಾಗಿ ಆರೋಪಿಗಳು ಜೈಲಿನಲ್ಲಿದ್ದಾರೆ. ಇದು ಅಧಿಕಾರಿಯ ಬದ್ಧತೆಯನ್ನು ತೋರಿಸುತ್ತದೆ.
ಈ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ದರ್ಶನ್ ಅವರು ನಾಲ್ವರು ಯುವಕರಿಗೆ ಹಣವನ್ನ ನೀಡಿ ಪೊಲೀಸರಿಗೆ ಶರಣಾಗುವಂತೆ ಹೇಳಿದ್ದರು. ಅದರಂತೇಯೇ, ಪೊಲೀಸ್ ಠಾಣೆಗೆ ತೆರಳಿದ ಯುವಕರು ವಿಚಾರಣೆಯ ಸಮಯದಲ್ಲಿ ದರ್ಶನ್ ಹೆಸರು ಬಾಯಿಬಿಟ್ಟರು. ಈ ಪ್ರಕರಣದಿಂದ ಬಚಾವಾಗಲು ಶತಾಯಗತಾಯ ಪ್ರಯತ್ನಪಟ್ಟ ದರ್ಶನ್ ಅವರು ತಾವು ತೋಡಿದ ಹಳ್ಳಕ್ಕೆ ಅವರೇ ಬಿದ್ದರು.
ಈ ಲೇಖನ ಓದಿದ್ದೀರಾ? ಕನೇರಿ ಸ್ವಾಮೀಜಿಗೆ ಉಗಿದ ಸುಪ್ರೀಂ ಕೋರ್ಟ್- ಬೆಂಬಲಿಸಿದವರಿಗೂ ಪಾಠ
ಬಳಿಕ ಜೈಲು ಸೇರಿದ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ಸ್ನೇಹಿತರ ಜತೆಗೆ ಹರಟೆ ಹೊಡೆಯುತ್ತ ಟೀ ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಇದು ದೊಡ್ಡ ವಿವಾದವಾಗಿ ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಆ ನಂತರ ಬೆನ್ನು ನೋವಿನ ಸಮಸ್ಯೆ ಹೇಳಿದ ದರ್ಶನ್ ಅವರು ಜಾಮೀನು ಪಡೆದು ಜೈಲಿನಿಂದ ಹೊರಬಂದು ಡೆವಿಲ್ ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದರು. ಇನ್ನೇನೂ ಡೆವಿಲ್ ಚಿತ್ರದ ಪ್ರಮೋಷನ್ ಮಾಡಬೇಕೆಂಬ ಸಿದ್ಧತೆಯಲ್ಲಿದ್ದಾಗ ಸುಪ್ರಿಂ ಕೋರ್ಟ್ ದರ್ಶನ್ ಮತ್ತು ಪವಿತ್ರಾಗೆ ಶಾಕ್ ನೀಡಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್ ಅವರು ದಿಂಬಿಲ್ಲ, ನಿದ್ದೆಯಿಲ್ಲ, ಸರಿಯಾದ ಊಟ ಇಲ್ಲ ಎಂದು ಸಮಸ್ಯೆಗಳನ್ನು ಹೇಳುತ್ತಿದ್ದಾರೆ.
ರಾಜವೈಭೋಗದಿಂದ ಇದ್ದ ನಟ ದರ್ಶನ್ ಅವರು ಸೆರೆಮನೆಯಲ್ಲಿರಲು ಕಂಗಾಲಾಗಿದ್ದಾರೆ. ಬೆನ್ನು ನೋವು ಸಮಸ್ಯೆ ಎಂದು ಜಾಮೀನು ಪಡೆದರೇ, ಸುಪ್ರೀಂ ಕೋರ್ಟ್ ತೀರ್ಪು ಅವರಿಗೆ ನಿರಾಶೆ ಉಂಟು ಮಾಡಿತ್ತು. ಕ್ವಾರಂಟೈನ್ ಸೆಲ್‌ನಲ್ಲಿ ಇರೋದಕ್ಕೆ ನಿರಾಕರಿಸಿದ ಅವರು ಫಂಗಸ್ ಸಮಸ್ಯೆ, ಸೂರ್ಯನ ಬೆಳಕಿನ ಕೊರತೆಯಿಂದ ಅನಾರೋಗ್ಯ ಎಂದು ಕೋರ್ಟ್‌ಗೆ ತಿಳಿಸಿದರು.

ಇನ್ನು ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಮಯದಲ್ಲಿ ನ್ಯಾಯಾಧೀಶರಿಗೆ ಒಂದು ಮನವಿ ಇದೆ ಎಂದು ಹೇಳಿ, “ನಾನು ಬಿಸಿಲು ನೋಡಿ ಈಗಾಗಲೇ 30 ದಿನಗಳಾಗಿವೆ. ಕೈಯಲ್ಲಿ ಫಂಗಸ್ ಬಂದಿದೆ. ನನಗೆ ಬೇರೆ ಯಾವ ಸವಲತ್ತೂ ಬೇಡ, ಕೋರ್ಟ್ ವಿಷ ನೀಡಲಿ,” ಎಂದು ಕೇಳಿಕೊಂಡಿದ್ಧರು. 2024ರ ಜೂನ್‌ನಿಂದ ಆರಂಭವಾದ ದರ್ಶನ್ ಅವರ ಜೈಲು ಜೀವನ, 2025ರಲ್ಲಿ ಹೆಚ್ಚು ಕಠಿಣಗೊಂಡಿದೆ.
ಯಾವುದೇ ವಿಶೇಷ ಸೌಲಭ್ಯ ಪಡೆಯದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರಿಂದ, ಅವರು ಸಾಮಾನ್ಯ ಕೈದಿಗಳಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಠಿಣ ನಿಯಮಗಳ ನಡುವೆ ಬದುಕುತ್ತಿದ್ದಾರೆ. ಈ ಸ್ಥಿತಿಯಿಂದಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದರು.
ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ದರ್ಶನ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಇವರನ್ನ ಫಾಲೋ ಮಾಡುವಾಗ ಇವರಿಗೆಲ್ಲ ಮಾದರಿಯಾಗಬೇಕಿದ್ದ ಇವರು ಕೊಲೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿ ಆರೋಪಿ ಸ್ಥಾನದಲ್ಲಿ ನಿಂತು ಜೈಲು ಸೇರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಯಾರೂ ಕೂಡ ಕೊಲೆ ಆರೋಪದಲ್ಲಿ ಜೈಲು ಸೇರಿಲ್ಲ. ಬಂಧನವಾಗಿಲ್ಲ. ಮೇರು ನಟರು ಅವರ ಅಭಿಮಾನಿಗಳಿಗೆ ಮಾದರಿಯಾಗಿ ಬದುಕಿದ್ದಾರೆ. ಆದರೆ, ಕರ್ನಾಟಕದ ಇತಿಹಾಸದಲ್ಲಿಯೇ ಕೊಲೆ ಕೃತ್ಯದಲ್ಲಿ ಆರೋಪಿಯಾಗಿ ದರ್ಶನ್ ಅವರು ಜೈಲು ಸೇರಿ ಕೆಟ್ಟ ಉದಾಹರಣೆಯಾಗಿದ್ದಾರೆ. ಮೇರು ನಟರೊಬ್ಬರು ಈ ರೀತಿ ಕೊಲೆ ಕೃತ್ಯಗಳಲ್ಲಿ ಆರೋಪಿಯಾಗಿ ಬಂಧನವಾಗಿರುವುದು ಚಿತ್ರರಂಗಕ್ಕೆ ಕಳಂಕ.




