ರಾಜ್ಯದ ಸಂಪನ್ಮೂಲಗಳನ್ನು ನಿರ್ಲಕ್ಷಿತ ಸಮುದಾಯಗಳ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಕಡೆಗೆ ನಿರ್ದೇಶಿಸುವ ಮೂಲಕ, ಸಿದ್ದರಾಮಯ್ಯನವರು ನಾಗರಿಕರನ್ನು ನೆರವು ಪಡೆಯುವ ನಿಷ್ಕ್ರಿಯ ಪಾಲುದಾರರ ಬದಲು ಅಭಿವೃದ್ಧಿಯಲ್ಲಿ ಭಾಗವಹಿಸುವ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ.
ಕರ್ನಾಟಕದ ಸಮಕಾಲೀನ ರಾಜಕೀಯ ಇತಿಹಾಸದಲ್ಲಿ, ಕೆಲವು ನಾಯಕರು ಮಾತ್ರ ಬಜೆಟ್ ಎನ್ನುವುದು ಲೆಕ್ಕಪತ್ರ ನಿರ್ವಹಣೆಗಿಂತ ಹೆಚ್ಚಿನದೆಂದು ಪರಿಗಣಿದ್ದಾರೆ. ಹಲವು ಅವಧಿಗಳ ವಿಸ್ತಾರದಲ್ಲಿ ಹದಿನೇಳು ಬಜೆಟ್‌ಗಳನ್ನು ಮಂಡಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಜೆಟ್ ಎನ್ನುವುದು “ಅಂಕಿ-ಸಂಖ್ಯೆಗಳನ್ನು ಕೂಡುವ ಮತ್ತು ಕಳೆಯುವ ನಿರ್ಜೀವ ಕೆಲಸವಲ್ಲ, ಬದಲಿಗೆ ಸಾಂವಿಧಾನಿಕ ಭರವಸೆಗಳನ್ನು ಜೀವಂತ ವಾಸ್ತವಗಳಾಗಿ ಪರಿವರ್ತಿಸಲು ಉದ್ದೇಶಿಸುವ ನೈತಿಕ ದಾಖಲೆಯಾಗಿದೆ” ಎಂದು ನಿರಂತರವಾಗಿ ಹೇಳುತ್ತಾ ಬಂದಿದ್ದಾರೆ. ಅವರ ಹಣಕಾಸು ಕಣ್ಣೋಟವು, ಅಂಬೇಡ್ಕರ್ ಚಿಂತನೆಯಿಂದ ಹಿಡಿದು ಸಮಾಜವಾದಿ ಮಾನವತಾವಾದದವರೆಗಿನ ಸೈದ್ಧಾಂತಿಕ ಪ್ರಭಾವಗಳಿಂದ ರೂಪುಗೊಂಡಿದೆ. ಸಾಮಾಜಿಕ ನ್ಯಾಯ, ಹಣಕಾಸು ವಾಸ್ತವಿಕತೆ ಮತ್ತು ಅಂತರ್ಗತ ಅಭಿವೃದ್ಧಿಯ ವಿಶಿಷ್ಟ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಾರ್ವಜನಿಕ ಜೀವನದಲ್ಲಿರುವ ಸಿದ್ದರಾಮಯ್ಯನವರು ಕಲ್ಯಾಣ ಯೋಜನೆಗಳು ಮತ್ತು ಬೆಳವಣಿಗೆಯ ನಡುವೆ ಇದೆ ಎಂದು ಭಾವಿಸಲಾದ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಅವರ ಬಜೆಟ್‌ಗಳು ಸಂಪನ್ಮೂಲ ಪುನರ್‌ವಿತರಣೆಯನ್ನು ಅಭಿವೃದ್ಧಿಯ ಮೇಲಿನ ಹೊರೆಯಾಗಿ ನೋಡುವ ಬದಲು, ಸಾಮಾಜಿಕ ಹೂಡಿಕೆಯು ಸುಸ್ಥಿರ ಹಣಕಾಸು ವಿಸ್ತರಣೆಯ ಅಡಿಪಾಯ ಎಂದು ಪ್ರತಿಪಾದಿಸುತ್ತವೆ. ರಾಜ್ಯದ ಸಂಪನ್ಮೂಲಗಳನ್ನು ನಿರ್ಲಕ್ಷಿತ ಸಮುದಾಯಗಳ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಕಡೆಗೆ ನಿರ್ದೇಶಿಸುವ ಮೂಲಕ, ಅವರು ನಾಗರಿಕರನ್ನು ನೆರವು ಪಡೆಯುವ ನಿಷ್ಕ್ರಿಯ ಪಾಲುದಾರರ ಬದಲು ಅಭಿವೃದ್ಧಿಯಲ್ಲಿ ಭಾಗವಹಿಸುವ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿದ್ದೀರಾ?: ‘ವಂದೇ ಮಾತರಂ’ ವಿರೋಧಿಸಿದ ನಾಗಾ ಪಕ್ಷ ‘ದೇಶದ್ರೋಹಿ’ ಆಗಲ್ವಾ ಮೋದಿಯವರೇ, ಸುಮ್ಮನಿದ್ದೀರಲ್ಲಾ?
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಕ್ಕುಗಳ ಜೊತೆಗೆ ಸಾಮಾಜಿಕ ಮತ್ತು ಹಣಕಾಸು ಸಮಾನತೆ ಇರಬೇಕು ಎಂದು ಒತ್ತಿಹೇಳಿದ ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಅಡಿಪಾಯದ ಮೇಲೆ ಸಿದ್ದರಾಮಯ್ಯನವರ ವಿಚಾರಧಾರೆಯು ಬಲವಾಗಿ ನೆಲೆಗೊಂಡಿದೆ. ಐತಿಹಾಸಿಕವಾಗಿ ಹಿಂದುಳಿದ ಸಮುದಾಯಗಳು ಎದುರಿಸುವ ರಾಚನಿಕ ಅಸಮಾನತೆಗಳನ್ನು ಕಡಿಮೆ ಮಾಡಲು ರಾಜ್ಯವು ಆ ಸಮುದಾಯಗಳಿಗೆ ನಿರ್ದಿಷ್ಟವಾದ ಯೋಜನೆಗಳನ್ನು ರೂಪಿಸಬೇಕು ಎನ್ನುವುದನ್ನು ಸಿದ್ದರಾಮಯ್ಯನವರ ಹಣಕಾಸು ನೀತಿಯು ಮತ್ತೆ ಮತ್ತೆ ಹೇಳುತ್ತಲೇ ಬಂದಿವೆ. ಅವಕಾಶಗಳಿಂದ ಹೊರಹಾಕಲ್ಪಟ್ಟವರಿಗಾಗಿಯೇ ನಿರ್ದಿಷ್ಟವಾಗಿ ವಿದ್ಯಾರ್ಥಿವೇತನ, ಹಾಸ್ಟೆಲ್ ಸೌಲಭ್ಯ ಮತ್ತು ಉದ್ಯೋಗಾವಕಾಶದಂತಹ ಉಪಕ್ರಮಗಳನ್ನು ವಿಸ್ತರಿಸುವ ಅವರ ಬಜೆಟ್‌ಗಳು, ಸಾರ್ವಜನಿಕ ಕಾರ್ಯನೀತಿಯ ಮೂಲಕ ಸಮಾನತೆಯನ್ನು ಸಕ್ರಿಯಗೊಳಿಸಬೇಕು ಎಂಬ ನಂಬಿಕೆಯನ್ನು ವ್ಯಕ್ತಪಡಿಸುತ್ತವೆ.
ಪ್ರಜಾಸತ್ತಾತ್ಮಕ ಕ್ರಮಗಳ ಮೂಲಕ ಶ್ರೇಣೀಕರಣವನ್ನು ಕೆಡವಬೇಕು ಎಂಬ ರಾಮ ಮನೋಹರ ಲೋಹಿಯಾ ಅವರ ಸಮಾಜವಾದಿ ಚಿಂತನೆಯೂ ಅಷ್ಟೇ ಪ್ರಭಾವಶಾಲಿಯಾಗಿದೆ. ಈ ಚಿಂತನೆಯನ್ನು ಪ್ರತಿಬಿಂಬಿಸುವ ಸಿದ್ದರಾಮಯ್ಯ ಅವರ ಆಡಳಿತ ಮಾದರಿಯು, ಹಣಕಾಸು ಶಿಸ್ತನ್ನು ಪುನರ್ವಿತರಣಾ ಕಾರ್ಯಕ್ರಮಗಳೊಂದಿಗೆ ಸಂಯೋಜಿಸುತ್ತದೆ ಹಾಗೂ ರಾಜ್ಯವು ಹಣಕಾಸು ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ಅನುಕ್ರಮಿಕ ತೆರಿಗೆ ಪದ್ಧತಿ, ಮೂಲಸೌಕರ್ಯ ಹೂಡಿಕೆ ಮತ್ತು ಕಲ್ಯಾಣ ಯೋಜನೆಗಳ ವಿಸ್ತರಣೆಗಳು ಯೋಜಿತ ಚೌಕಟ್ಟಿನೊಳಗೆ ಒಟ್ಟಿಗೆ ಕಾರ್ಯನಿರ್ವಹಿಸುವಂತಹ ಮಾಪನಾಂಕ ನಿರ್ಣಯ ಮಾದರಿಯನ್ನು ರಾಜ್ಯದ ಮುಂದಿಟ್ಟಿದ್ದಾರೆ.
ಹಿಂದುಳಿದ ವರ್ಗಗಳು ಮತ್ತು ಅಂಚಿಗೆ ದೂಡಲ್ಪಟ್ಟ ಸಮುದಾಯಗಳ ಸಬಲೀಕರಣಕ್ಕೆ ಒತ್ತು ನೀಡುವ ಸಿದ್ದರಾಮಯ್ಯನವರ ಕ್ರಮವು ದೇವರಾಜ ಅರಸು ಅವರ ಪರಂಪರೆಯನ್ನು ಮುಂದುವರೆಸುತ್ತದೆ. ಆದರೆ, ಜಾತಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಹಿಂದಿನ ಪುನರ್ ವಿತರಣಾ ರಾಜಕೀಯಕ್ಕಿಂತ ಭಿನ್ನವಾಗಿ, ಸಿದ್ದರಾಮಯ್ಯ ಅವರು ಸಾಮಾಜಿಕ ವಿಭಜನೆಗಳನ್ನು ಮತ್ತಷ್ಟು ಆಳಗೊಳಿಸದೆಯೇ ಕೊರತೆಗಳನ್ನು ಪರಿಹರಿಸುವ, ಸೂಕ್ಷ್ಮವಾದ ಸಮಗ್ರ ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಅವರ ಬಜೆಟ್‌ಗಳು ಪ್ರಾದೇಶಿಕ ಮತ್ತು ಸಾಮಾಜಿಕ ಹಿತಾಸಕ್ತಿಗಳ ನಡುವಿನ ಸಮತೋಲನವನ್ನು ಕಾಯ್ದುಕೊಂಡೇ ವಿಶಾಲ ತಳಹದಿಯ ಅಭಿವೃದ್ಧಿ ಕಾರ್ಯಸೂಚಿಯನ್ನು ಮುಂದಿಡುತ್ತವೆ.
ಬಸವಣ್ಣನವರ ಕಾಯಕ (ಶ್ರಮದ ಘನತೆ) ಮತ್ತು ದಾಸೋಹದ (ಎಲ್ಲರ ಒಳಿತಿಗಾಗಿ ಸಂಪತ್ತಿನ ಹಂಚಿಕೆ) ಆದರ್ಶಗಳಿಂದ ಸ್ಫೂರ್ತಿ ಪಡೆದಿರುವ ಸಿದ್ದರಾಮಯ್ಯನವರು, ಆಧುನಿಕ ರಾಜಕೀಯ ಸಿದ್ಧಾಂತಗಳ ಆಚೆಗೆ, ಕರ್ನಾಟಕದ ದೇಸೀಯ ಸಂಪ್ರದಾಯಗಳನ್ನು ಹೆಚ್ಚಾಗಿ ಉಲ್ಲೇಖಿಸುತ್ತಾರೆ. ಈ ತತ್ವಗಳು ಜೀವನೋಪಾಯ ಮಾರ್ಗಗಳ ಸೃಷ್ಟಿ, ಸಾಮಾಜಿಕ ಭದ್ರತೆ ಮತ್ತು ಸಂಪನ್ಮೂಲಗಳ ಸಮಾನ ಹಂಚಿಕೆ ಬಗೆಗಿನ ಅವರ ಒಲವನ್ನು ರೂಪಿಸಿವೆ. ಅಭಿವೃದ್ಧಿ ಮತ್ತು ಹಣಕಾಸು ಬೆಳವಣಿಗೆಗಳು ಅರ್ಥಪೂರ್ಣವಾಗಬೇಕಾದರೆ ಆಡಳಿತವು ದುರ್ಬಲ ವರ್ಗಗಳಿಗೆ ಆದ್ಯತೆ ನೀಡಬೇಕು ಎನ್ನುವ ಅವರ ನಿಲುವಿನ ಹಿಂದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮೇಲಕ್ಕೆತ್ತಬೇಕು ಎನ್ನುವ ಗಾಂಧಿವಾದಿ ಕಲ್ಪನೆಯು ಕೆಲಸಮಾಡುತ್ತದೆ.
ಸಿದ್ದರಾಮಯ್ಯ ಅವರ ಬಜೆಟ್‌ಗಳ ವೈಶಿಷ್ಟ್ಯ ಇರುವುದು ಸಾಂವಿಧಾನಿಕ ನೈತಿಕತೆಯನ್ನು ಹಣಕಾಸು ಯೋಜನೆಯೊಂದಿಗೆ ಸಂಯೋಜಿಸುವ ಪ್ರಯತ್ನದಲ್ಲಿ. ಕಲ್ಯಾಣ ಯೋಜನೆಗಳನ್ನು ಅಲ್ಪಾವಧಿಯ ಜನಪ್ರಿಯ ಚಟುವಟಿಕೆಗಳಾಗಿಸದೆ, ಜನರ ಖರೀದಿ ಶಕ್ತಿಯನ್ನು, ಮಾನವ ಸಾಮರ್ಥ್ಯವನ್ನು ಮತ್ತು ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವ ದೀರ್ಘಾವಧಿಯ ಹೂಡಿಕೆಗಳಾಗಿ ರೂಪಿಸುತ್ತಾರೆ. ಸಾಮಾಜಿಕ ಸುರಕ್ಷತೆ ಒದಗಿಸುವುದರಲ್ಲಿ ರಾಜ್ಯದ ಪಾತ್ರವನ್ನು ಕಡಿಮೆ ಮಾಡುವ ನವಉದಾರವಾದಿ ನೀತಿಗೆ ಈ ವಿಧಾನವು ಸವಾಲು ಒಡ್ಡುತ್ತದೆ. ಸಾರ್ವಜನಿಕ ವೆಚ್ಚದ ಮೂಲಕ ಐತಿಹಾಸಿಕ ಅಸಮತೋಲನವನ್ನು ಸರಿಪಡಿಸುವ ಅಭಿವೃದ್ಧಿ ಮಾದರಿಯಾಗಿ ಇದು ರೂಪುಗೊಂಡಿದೆ.
ಅವರ ಅಧಿಕಾರದ ಅವಧಿಯಲ್ಲಿ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯದ ಸ್ವಾಯತ್ತತೆಗೆ ಬಲವಾದ ಬದ್ಧತೆಯನ್ನು ತೋರಲಾಗಿದೆ. ನ್ಯಾಯಯುತವಾದ ಆರ್ಥಿಕ ವಿಕೇಂದ್ರೀಕರಣ ಮತ್ತು ಒಕ್ಕೂಟ ರಚನೆಯೊಳಗೇ ಕರ್ನಾಟಕದ ಆರ್ಥಿಕ ಹಕ್ಕುಗಳನ್ನು ಸಮರ್ಥಿಸುವ ಮೂಲಕ ಸಿದ್ದರಾಮಯ್ಯ ಅವರು ಸ್ಥಳೀಯ ವಾಸ್ತವಗಳಿಗೆ ಸೂಕ್ತವಾದಂತಹ ಕಲ್ಯಾಣ ಯೋಜನೆಗಳನ್ನು ಮತ್ತು ಅಭಿವೃದ್ಧಿ ನೀತಿಗಳನ್ನು ರೂಪಿಸಲು ರಾಜ್ಯಗಳನ್ನು ಸಬಲಗೊಳಿಸುವುದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಕಲ್ಯಾಣ ಯೋಜನೆಗಳ ಮೂಲಕ ಸಾಧಿಸುವ ಅಭಿವೃದ್ಧಿಯು ಹಣಕಾಸು ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುವುದಿಲ್ಲ ಎನ್ನುವುದನ್ನು ಅವರ ಆಡಳಿತದ ಅವಧಿಯು ತೋರಿಸಿದೆ. ಸಮತೆ ಮತ್ತು ದಕ್ಷತೆಗಳು ವಿರೋಧಾತ್ಮಕ ಗುರಿಗಳಲ್ಲ, ಬದಲಿಗೆ ಒಂದಕ್ಕೊಂದು ಪೂರಕವಾಗಿವೆ ಎನ್ನುವುದು ಸಿದ್ದರಾಮಯ್ಯ ಅವರ ಬಲವಾದ ಪ್ರತಿಪಾದನೆ. ಅವರ ಆಡಳಿತದ ಅವಧಿಯಲ್ಲಿ ಕರ್ನಾಟಕ ಸಾಧಿಸಿರುವ ಬೆಳವಣಿಗೆಯು ಸಾಮಾಜಿಕ ವಲಯದ ಮೇಲೆ ಮಾಡಿರುವ ವಿಸ್ತೃತ ವೆಚ್ಚ ಹಾಗೂ ಬಲವಾದ ಆರ್ಥಿಕ ಸ್ಥಿತಿಯ ಸೂಚಕಗಳು ಜೊತೆಜೊತೆಯಲ್ಲಿ ಸಾಗಬಲ್ಲವು ಎನ್ನುವುದಕ್ಕೆ ಪುರಾವೆ ಒದಗಿಸುತ್ತವೆ.
ಇದನ್ನು ಓದಿದ್ದೀರಾ?: ಇಸ್ರೇಲ್‌ಗೆ ತೈಲ, ಇರಾನ್‌ಗೆ ನೀರಿನ ಅಭಾವ, ಅಮೆರಿಕ್ಕೆ ಅನಗತ್ಯ ವೆಚ್ಚ: ಯುದ್ಧದ ಭೀಕರ ಪರಿಣಾಮಗಳು
ಒಟ್ಟಾರೆಯಾಗಿ, ಸಿದ್ದರಾಮಯ್ಯ ಅವರ ಹದಿನೇಳು ಬಜೆಟ್‌ಗಳು ಆಯಾ ಕಾಲದ ಹಣಕಾಸು ದಾಖಲೆಗಳಿಗಿಂತ ಹೆಚ್ಚಿನದನ್ನು ಹೇಳುತ್ತವೆ. ಯಾವುದೇ ಆಡಳಿತವು ಐತಿಹಾಸಿಕ ಅಸಮಾನತೆಗಳನ್ನು ಸಕ್ರಿಯವಾಗಿ ನಿವಾರಿಸಬೇಕು ಎಂಬ ನಂಬಿಕೆಯಲ್ಲಿ ಬೇರೂರಿರುವ ರಾಜಕೀಯ ಹಣಕಾಸು ನೀತಿಯನ್ನು ಅವು ನಿರೂಪಿಸುತ್ತವೆ. ಹೂಡಿಕೆ ಮತ್ತು ಬೆಳವಣಿಗೆಯನ್ನು ಸ್ಥಿರವಾಗಿ ಉಳಿಸಿಕೊಂಡೇ ಸಂಪನ್ಮೂಲಗಳ ಮರುವಿತರಣೆ ವಿಧಾನಗಳನ್ನು ಹಣಕಾಸು ನೀತಿಯೊಳಗೆ ಅಳವಡಿಸುವ ಮೂಲಕ ಅಭಿವೃದ್ಧಿಯನ್ನು ಸಂಪತ್ತು ಸೃಷ್ಟಿಯಿಂದ ಮಾತ್ರವಲ್ಲದೆ, ಆ ಸಂಪತ್ತನ್ನು ಎಷ್ಟು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂಬುದರ ಮೂಲಕ ಅಳೆಯುವ ಮಾದರಿಯನ್ನು ಅವರು ಮುಂದಿಟ್ಟಿದ್ದಾರೆ.
ಕರ್ನಾಟಕವು ಮುಂದುವರೆಯುತ್ತಿರುವಂತೆ, ಸಿದ್ದರಾಮಯ್ಯ ಅವರ ಬಜೆಟ್ ಪರಂಪರೆಯ ಮಹತ್ವವನ್ನು ಈ ನೋಟದಲ್ಲಿ ಗ್ರಹಿಸಬಹುದಾಗಿದೆ: ಸಂವಿಧಾನದ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯಿಂದ ನಿರ್ದೇಶಿಸಲ್ಪಟ್ಟ ಹಣಕಾಸು ಯೋಜನೆಯು ಹೆಚ್ಚು ನ್ಯಾಯಯುತವಾದ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜವನ್ನು ನಿರ್ಮಿಸುವ ಪ್ರಬಲ ಸಾಧನವಾಗಿದೆ.
–ಡಾ. ಎಸ್. ಜಾಫೆಟ್, ಕುಲಪತಿಗಳು, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಸಂದರ್ಶಕ ಪ್ರಾಧ್ಯಾಪಕರು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ.





