ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಇದೀಗ ಗುಣಮಟ್ಟದ ಹಾಗೂ ಜೀವ ಉಳಿಸುವ ಚಿಕಿತ್ಸೆಯ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಜಿಲ್ಲಾಸ್ಪತ್ರೆಯ ನ್ಯೂರಾಲಜಿ ವಿಭಾಗದ ತಜ್ಞ ವೈದ್ಯ ಡಾ. ದರ್ಶನ್ ಬಿ ಅವರ ನೇತೃತ್ವದಲ್ಲಿ, ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಂದ ‘ಚಿಕಿತ್ಸೆ ಸಾಧ್ಯವಿಲ್ಲ’ ಎಂದು ವಾಪಸ್ ಕಳುಹಿಸಲ್ಪಟ್ಟ ಅನೇಕ ಕ್ಲಿಷ್ಟಕರ ನರಸಂಬಂಧಿ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚವಾಗುವ ಮೆದುಳು, ಬೆನ್ನುಹುರಿ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಸಮರ್ಥ ಚಿಕಿತ್ಸೆ ದೊರಕುತ್ತಿರುವುದು ಜಿಲ್ಲೆಯ ನಾಗರಿಕರಲ್ಲಿ ಹೊಸ ವಿಶ್ವಾಸ ಮತ್ತು ಆಶಾಭಾವನೆಯನ್ನು ಮೂಡಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಐದರಿಂದ ಹತ್ತು ಲಕ್ಷದವರೆಗೂ ವ್ಯಯವಾಗುವ ಮೆದುಳಿನ ಕ್ಯಾನ್ಸರ್, ಸ್ಟ್ರೋಕ್, ಅಪಘಾತದ ವೇಳೆ ತಲೆಗೆ ತೀವ್ರ ಪೆಟ್ಟು, ಬೆನ್ನುಮೂಳೆ ಮುರಿತ, ಪ್ಯಾರಾಲಿಸಿಸ್, ಬೆನ್ನುಹುರಿ ಟ್ಯೂಮರ್, ಬೆನ್ನಿನ ಡಿಸ್ಕ್ ಸೇರಿದಂತೆ ಹಲವು`ಕ್ಲಿಷ್ಟಕರ ಆರೋಗ್ಯ ಸಮಸ್ಯೆಯುಳ್ಳ ರೋಗಿಗಳಿಗೆ ತುಮಕೂರು ಜಿಲ್ಲಾಸ್ಪತ್ರೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ರಾಜ್ಯದ ಯಾವುದೇ ಜಿಲ್ಲಾಸ್ಪತ್ರೆಯಲ್ಲಿ ಸಾಧ್ಯವಾಗದ ನರಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಹಾಗೂ ತಜ್ಞವೈದ್ಯರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವುದು ಜಿಲ್ಲೆಯ ನಾಗರಿಕರಲ್ಲಿ ಸಮಾಧಾನ ತಂದಿದೆ.

ಮೂಲತಃ ತುಮಕೂರಿನ ವಾಣಿಜ್ಯೋದ್ಯಮಿ ಟಿ ಸಿ ಬಸವರಾಜು ಹಾಗೂ ವೈ ಸಿ ಶಿವಮ್ಮ ದಂಪತಿಯ ಸುಪುತ್ರ ಡಾ. ಬಿ ದರ್ಶನ್ ಅವರು, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್, ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಎಂಎಸ್ ಜನರಲ್ ಸರ್ಜರಿ, ತಮಿಳುನಾಡಿನ ತಂಜಾವೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಸಿಎಚ್ ನ್ಯೂರೋ ಸರ್ಜರಿ ಮಾಡಿ ಎಂಜಿಆರ್ ವಿವಿ ಟಾಪರ್ ಆಗಿ ಹೊರ ಹೊಮ್ಮಿದವರು. ಇವರ ಪ್ರತಿಭೆಯನ್ನು ಗುರುತಿಸಿದ ತಮಿಳುನಾಡು ಸರ್ಕಾರ, ಪ್ರತಿಷ್ಠಿತ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ನೇಮಿಸಿಕೊಂಡು ಕಳೆದ ವರ್ಷ ಜ.26ರಂದು ಬೆಸ್ಟ್ ಡಾಕ್ಟರ್ ಅವಾರ್ಡ್ ನೀಡಿ ಗೌರವಿಸಿತ್ತು. ಆದರೆ ಹುಟ್ಟೂರಿನ ಬಡವರಿಗೆ ಸೇವೆ ಸಲ್ಲಿಸಬೇಕೆಂಬ ವೈದ್ಯ ದರ್ಶನ್ ಅವರ ಅಭಿಲಾಷೆಯಿಂದಾಗಿ ತಿಂಗಳಿಗೆ 3.5 ಲಕ್ಷ ವೇತನ ದೊರೆಯುತ್ತಿದ್ದ ಹುದ್ದೆ ತೊರೆದು ತುಮಕೂರಿಗೆ ಆಗಮಿಸಿ ಆರಂಭಿಕವಾಗಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2025 ಮಾರ್ಚ್‌ನಿಂದ 4 ತಿಂಗಳ ಕಾಲ ಸೇವೆ ಸಲ್ಲಿಸಿದರು.
ಬಳಿಕ ತುಮಕೂರು ಸರ್ಕಾರಿ ಜಿಲ್ಲಾಸ್ಪತ್ರೆಯ ಟ್ರಾಮಾ ಕೇರ್ ನ್ಯೂರೋಸರ್ಜನ್ ಆಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದು, ಅಂದಿನಿಂದ ಜಿಲ್ಲಾಸ್ಪತ್ರೆ ನ್ಯೂರಾಲಜಿ ವಿಭಾಗದ ಸಬಲೀಕರಣಕ್ಕೆ ಮುಂದಾಗಿದ್ದಾರೆ. ಮೆಡಿಕಲ್ ಕಾಲೇಜು ಹಾಗೂ ದೊಡ್ಡ ಆಸ್ಪತ್ರೆಯಲ್ಲಿ ಮಾಡುತ್ತಿದ್ದ ಮೆದುಳು ಹಾಗೂ ಬೆನ್ನುಹುರಿಗೆ ಸಂಬಂಧಿಸಿದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆ ಹಂತದಲ್ಲಿಯೇ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಆಸ್ಪತ್ರೆ ಸೇರಿದ ಕಳೆದ 5 ತಿಂಗಳಲ್ಲಿ 25 ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು, ರೋಗಿಗಳು ಪೂರ್ಣ ಗುಣಮುಖರಾಗಿರುವುದು ದಾಖಲೆಯೆನಿಸಿದೆ. ವೈದ್ಯ ದರ್ಶನ್ ಅವರ ಮಾದರಿ ಸೇವೆಗೆ ಶ್ಲಾಘನೆ, ಪ್ರಶಂಸೆಗಳು ವ್ಯಕ್ತವಾಗುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಸುಮಾರು 25 ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲು ಜಿಲ್ಲಾ ಸರ್ಜನ್ ಡಾ. ಆಸ್ಟರ್ ಬೇಗ್ ಸೇರಿ ವೈದ್ಯಕೀಯ ಸಿಬ್ಬಂದಿ ವರ್ಗದ ಪೂರಕ ಸಹಕಾರ, ಪ್ರೋತ್ಸಾಹ ಕಾರಣ ಎಂದು ಸ್ಮರಿಸುವ ಡಾ.ದರ್ಶನ್ ಅವರು, “ನಾನು ತಮಿಳುನಾಡು ಸರ್ಕಾರದ ವೈದ್ಯ ಹುದ್ದೆ ತೊರೆದು ತುಮಕೂರಿಗೆ ವಾಪಸ್ ಮರಳಿದಾಗ ಖಾಸಗಿ ಆಸ್ಪತ್ರೆ, ಕಾಲೇಜುಗಳಿಂದ ಹೆಚ್ಚಿನ ವೇತನದ ಆಫರ್‌ಗಳು ಬಂದವು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಸೇವೆ ಸಲ್ಲಿಸಬೇಕೆಂಬ ಮನದ ಉತ್ಕಟ ಬಯಕೆ, ತಂದೆ-ತಾಯಿಯ ಅಭಿಲಾಷೆಯಂತೆ ಜಿಲ್ಲಾ ಸರ್ಜನ್ ಡಾ. ಆಸ್ಟರ್ ಬೇಗ್ ಅವರ ಆಹ್ವಾನದ ಮೇರೆಗೆ ತುಮಕೂರು ಜಿಲ್ಲಾಸ್ಪತ್ರೆ ಸೇರಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಪ್ರಸಕ್ತ ನರರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಸವಾಲಿನ ಶಸ್ತ್ರಚಿಕಿತ್ಸೆಗೂ ತುಮಕೂರು ಜಿಲ್ಲಾಸತ್ರೆ ಸಜ್ಜಾಗಿರುವುದು ಸಮಾಧಾನ ತರಿಸಿದೆ” ಎಂದು ಈದಿನ.ಕಾಮ್ ಗೆ ಪ್ರತಿಕ್ರಿಯಿಸಿದರು.


ಇದನ್ನೂ ಓದಿ: ತುಮಕೂರು | ಜಗತ್ತೇ ಪ್ರೀತಿಗಾಗಿ ಹಂಬಲಿಸುತ್ತಿದೆ : ಮಲ್ಲಿಕಾ ಬಸವರಾಜು
ಆಸ್ಪತ್ರೆ ನ್ಯೂರಾಲಜಿ ವಿಭಾಗದಲ್ಲಿ ಗಂಭೀರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ನರರೋಗ ತಜ್ಞ ಡಾ.ದರ್ಶನ್ ಬಿ ಅವರನ್ನು ಜಿಲ್ಲಾಸ್ಪತ್ರೆಗೆ ನೇಮಿಸಿಕೊಂಡ ಬಳಿಕ 3 ಮೆದುಳು ಶಸ್ತ್ರಚಿಕಿತ್ಸೆ, 18 ಸ್ಪೈನಲ್ ಕಾರ್ಡ್ ಸರ್ಜರಿ ಸೇರಿದಂತೆ 25 ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ತುಮಕೂರು ಜಿಲ್ಲಾಸ್ಪತ್ರೆ ಬರೀ ಜಿಲ್ಲೆಯವರಿಗೆ ಮಾತ್ರವಲ್ಲ ನೆರೆಯ ಜಿಲ್ಲೆಯ ನಾಗರಿಕರೂ ಇಲ್ಲಿಗೆ ಬಂದು ಸೇವೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಆಸ್ಟರ್ ಬೇಗ್ ಸಂತಸ ವ್ಯಕ್ತಪಡಿಸಿದರು.
ಡಾ. ದರ್ಶನ್ ಬಿ ಅವರಂತಹ ಸಮರ್ಪಿತ ವೈದ್ಯರ ಸೇವೆಯಿಂದ ತುಮಕೂರು ಜಿಲ್ಲಾಸ್ಪತ್ರೆ ಕೇವಲ ಚಿಕಿತ್ಸಾ ಕೇಂದ್ರವಾಗಿಯಲ್ಲದೆ, ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಜೀವದ ಭರವಸೆಯ ಕೇಂದ್ರವಾಗುತ್ತಿದೆ. ಹೆಚ್ಚಿನ ವೇತನ, ಪ್ರತಿಷ್ಠಿತ ಹುದ್ದೆಗಳನ್ನು ತ್ಯಜಿಸಿ ಹುಟ್ಟೂರಿನ ಜನರಿಗಾಗಿ ಸೇವೆ ಸಲ್ಲಿಸುವ ಅವರ ನಿರ್ಧಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಶಕ್ತಿಯನ್ನು ಸ್ಮರಿಸುತ್ತದೆ. ಜಿಲ್ಲಾ ಸರ್ಜನ್ ಡಾ. ಆಸ್ಟರ್ ಬೇಗ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿಯ ಸಹಕಾರದೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ನರರೋಗ ಚಿಕಿತ್ಸೆಗೆ ಹೊಸ ಅಧ್ಯಾಯ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲಾಸ್ಪತ್ರೆ ರಾಜ್ಯದ ಪ್ರಮುಖ ನ್ಯೂರೋ ಚಿಕಿತ್ಸಾ ಕೇಂದ್ರವಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.





