ಕಬ್ಬು ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು & ಸರ್ಕಾರ, ಬೀದಿಯಲ್ಲಿ ರೈತ

Date:

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ರಸ್ತೆ ತಡೆ, ಪಾದಯಾತ್ರೆ, ಉಪವಾಸ ಹೀಗೆ ನಾನಾ ರೀತಿಯಲ್ಲಿ ರೈತರು ಹೋರಾಟ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ದಶಕಗಳಲ್ಲೇ ಅತಿ ದೊಡ್ಡ ಹೋರಾಟ ಎಂಬ ಹೆಗ್ಗಳಿಕೆಗೂ ಈ ಹೋರಾಟ ಪಾತ್ರವಾಗಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನೀಡಬೇಕು ಎಂಬ ಆಗ್ರಹಿಸಿ ಕಳೆದ ಒಂದು ವಾರದಿಂದ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ.

ಸುಮಾರು 35 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಇತ್ತೀಚಿನ ದಶಕಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರಿಂದ ಪ್ರತಿಭಟನೆ ನಡೆದಿರಲಿಲ್ಲ. ಸಂಖ್ಯೆಯ ದೃಷ್ಟಿಯಿಂದಲೂ ಬೆಳಗಾವಿ ರೈತರ ಹೋರಾಟ ಅತಿ ದೊಡ್ಡ ಹೋರಾಟವಾಗಿ ಬಿಂಬಿತವಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ರಸ್ತೆ ತಡೆ, ಪಾದಯಾತ್ರೆ, ಉಪವಾಸ ಹೀಗೆ ನಾನಾ ರೀತಿಯಲ್ಲಿ ರೈತರು ಹೋರಾಟ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡುವ ಮೂಲಕ ಹೋರಾಟದ ತೀವ್ರತೆಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಅಥಣಿ, ಬೈಲಹೊಂಗಲ, ಗೋಕಾಕ್‌ ಹಾಗೂ ಕಿತ್ತೂರು ಭಾಗದಲ್ಲೂ ಹೋರಾಟ ತೀವ್ರಗೊಳ್ಳುತ್ತಿದೆ. ಪಕ್ಕದ ಜಿಲ್ಲೆ ಬಾಗಲಕೋಟೆಗೂ ಕಬ್ಬು ಬೆಳೆಗಾರರ ಹೋರಾಟ ವಿಸ್ತರಣೆಯಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರೈತರ ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿ ರಾತ್ರಿ ಅಲ್ಲೇ ರೈತರೊಂದಿಗೆ ಕಳೆದಿದ್ದಾರೆ. ಇಡೀ ಪ್ರತಿಭಟನೆ ರಾಜಕೀಯಗೊಂಡಿದೆ ಎನ್ನುವ ಮಾತುಗಳ ಸಹ ಕೇಳಿಬರುತ್ತಿವೆ.

cane 1

ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಈ ಸರ್ಕಾರಕ್ಕೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಎಂಬುದು ಇಲ್ಲವೇ ಇಲ್ಲ. ಕಬ್ಬು ಬೆಳೆಗಾರರು ಎಂದರೆ ಸಕ್ಕರೆ ಕಾರ್ಖಾನೆ ಮತ್ತು ಸರ್ಕಾರದವರು ಕಾಲ ಕಸದಂತೆ ತಿಳಿದುಕೊಂಡಿದ್ದಾರೆ. 2018-19ರಲ್ಲೇ ನಾವು ಪ್ರತಿ ಟನ್‌ ಕಬ್ಬಿಗೆ 4,500 ರೂ. ಕೇಳುತ್ತಿದ್ದೇವೆ. ಈವರೆಗೂ ಈ ಬೇಡಿಕೆ ಈಡೇರಿಲ್ಲ. ಈಗ ಸಾರಿಗೆ ವೆಚ್ಚ ಹೊರತುಪಡಿಸಿ 3,500 ರೂ. ಕೇಳುತ್ತಿದ್ದೇವೆ. ಹಾಗೇ ನೋಡಿದರೆ ಇದು ಸಹ ಕಡಿಮೆಯೇ. ಆದರೆ ಸರ್ಕಾರದ ಜೊತೆ ಹಗ್ಗಾ ಜಗ್ಗಾಟ ಆಗಬಾರದು ಎಂದು ಯಾವ ಚೌಕಾಸಿಯೂ ಬೇಡ ಎಂದು ನಿರ್ಧರಿಸಿ ನಮ್ಮ ರೈತರು 3,500 ರೂ. ಕೇಳುತ್ತಿದ್ದಾರೆ. ಸರ್ಕಾರ ಈ ಬಾರಿ ಕೊಡದೇ ಇದ್ದರೆ ಪ್ರತಿಭಟನೆ ಇನ್ನೂ ದೊಡ್ಡದಾಗಿ ವಿಸ್ತರಣೆಯಾಗುತ್ತದೆ” ಎಂದರು.

ಸತ್ತು ಹೋದ ಕಬ್ಬು ನಿಯಂತ್ರಣ ಮಂಡಳಿ!

“ಮಹಾರಾಷ್ಟ್ರದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಇಲ್ಲದಿದ್ದರೂ ಅಲ್ಲಿನ ರೈತರಿಗೆ ಒಳ್ಳೆಯ ದರ ಸಿಗುತ್ತಿದೆ. ಕರ್ನಾಟಕದಲ್ಲಿರುವ ಕಬ್ಬು ನಿಯಂತ್ರಣ ಮಂಡಳಿಯು ಇಲ್ಲಿನ ರೈತರಿಗೆ ವರದಾನ ಆಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರಿಗೆ ಅನುಕೂಲಕರ ವಾತಾವರಣ ಕಲ್ಪಿಸಿ ಸರ್ಕಾರದ ಕೈಗೊಂಬೆಯಾಗಿದೆ. ರಾಜ್ಯ ಕಬ್ಬು ನಿಯಂತ್ರಣ ಮಂಡಳಿಯಲ್ಲಿರುವ ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್‌) ರಾಜ್ಯಾಧ್ಯಕ್ಷರೂ ಆಗಿರುವ ಬಡಗಲಪುರ ನಾಗೇಂದ್ರ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಏನು ಮಾಡುತ್ತಿದ್ದಾರೆ? ಅವರಿಗೆ ಬರೀ ಮೈಸೂರು ಭಾಗ ಮಾತ್ರವೇ ಕಣ್ಣಿಗೆ ಕಾಣುತ್ತದೆ. ಉತ್ತರ ಕರ್ನಾಟಕ ರೈತರ ಸಮಸ್ಯೆ ಅವರಿಗೆ ಬೇಡವಾಗಿದೆ. ಕಬ್ಬು ನಿಯಂತ್ರಣ ಮಂಡಳಿ ರಾಜ್ಯದಲ್ಲಿ ಸತ್ತು ಹೋಗಿದೆ” ಎಂದು ಕಿಡಿಕಾರಿದರು.

“ಕಬ್ಬು ಬೆಳೆಗಾರರಿಗೆ ಗುಜರಾತ್‌ನಲ್ಲಿ ಪ್ರತಿ ಟನ್‌ ಕಬ್ಬಿಗೆ 4,450 ರೂ., ಪಂಜಾಬ್‌ನಲ್ಲಿ 4,000 ರೂ., ಉತ್ತರ ಪ್ರದೇಶದಲ್ಲಿ 9,800 ರೂ., ಹಾಗೂ ಮಹಾರಾಷ್ಟ್ರದಲ್ಲಿ 3,450 ರೂ. ಸಿಗುತ್ತಿದೆ. ಕರ್ನಾಟಕದಲ್ಲಿ ಕೇವಲ 2,500ರಿಂದ 2,700 ರೂ. ಮಾತ್ರ ಸಿಗುತ್ತಿದೆ. ಎಲ್ಲ ರಾಜ್ಯಗಳು ಕಬ್ಬು ಬೆಳೆಗಾರರಿಗೆ ಉತ್ತಮ ದರ ನೀಡುತ್ತಿರುವಾಗ ಕರ್ನಾಟಕಕ್ಕೆ ಏನಾಗಿದೆ? ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ರೈತರಿಂದ ಬರೀ ಲಾಭ ಬೇಕು” ಎಂದು ವಾಗ್ದಾಳಿ ನಡೆಸಿದರು.

“ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಜೆಪಿ ಪರ ಬಳಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ತಮ್ಮದೇ ಸರ್ಕಾರದ ಅವಧಿಯಲ್ಲಿ ಆಗ ಇವರು ಕತ್ತೆ ಕಾಯುತ್ತಿದ್ದರಾ? ನಮ್ಮ ಸಂಕಟ ಆಗ ವಿಜಯೇಂದ್ರನಿಗೆ ತಿಳಿಯಲಿಲ್ವಾ? ಯಾರು ಎಷ್ಟೇ ಇದನ್ನು ರಾಜಕೀಯಗೊಳಿಸಲಿ. ನಮ್ಮ ರೈತ ಸಂಘಟನೆಗಳ ನಾಯಕರಿಗೂ ನಾವು ಎಚ್ಚರಿಕೆ ನೀಡಿದ್ದೇವೆ. ಸರ್ಕಾರದೊಂದಿಗೆ ನಾಲ್ಕು ಗೋಡೆಗಳ ವೈಯಕ್ತಿಕ ಲಾಭದ ಸಭೆಗಳನ್ನು ಮಾಡುವಂತಿಲ್ಲ. ಸಿದ್ದರಾಮಯ್ಯ ಅಕ್ಕ ಪಕ್ಕ ಯಾರು ಓಡಾಡುತ್ತಿದ್ದಾರೆ ಎಂಬುದನ್ನು ರಾಜ್ಯ ಗಮನಿಸಿದೆ. ಏನೇ ಇದ್ದರೂ ಪ್ರತಿಭಟನಾ ಸ್ಥಳದಲ್ಲೇ ಎಲ್ಲವೂ ನಿರ್ಧಾರವಾಗಬೇಕು” ಎಂದು ಆಗ್ರಹಿಸಿದರು.

ಸಿದಗೌಡ ಮೋದಗಿ
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರು

ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್‌) ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ನಾವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂದು ಬೇರೆ ಬೇರೆ ನೋಡುವುದಿಲ್ಲ. ಅಕ್ಟೋಬರ್‌ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ಭಾಗದಲ್ಲಿ ನಮ್ಮ ಸಂಘಟನೆಯಿಂದ ಸಭೆ ಮಾಡಿದ್ದೆವು. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳು ರೈತರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರು. ನ.10ಕ್ಕೆ ನಮ್ಮ ಸಂಘಟನೆಯಿಂದ ಅಲ್ಲಿ ಪ್ರತಿಭಟನೆ ನಡೆಯುವುದಿತ್ತು. ಅಷ್ಟರಲ್ಲಿ ಬೆಳಗಾವಿ ಭಾಗದಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ” ಎಂದು ತಿಳಿಸಿದರು.

“ಕಬ್ಬು ನಿಯಂತ್ರಣ ಮಂಡಳಿ ಸದಸ್ಯನಾಗಿ ರೈತರ ಪರವಾಗಿ ಏನು ಕೆಲಸ ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದೇನೆ. ತೂಕದಲ್ಲಾಗುವ ಮೋಸವನ್ನು ತಡೆಗಟ್ಟಲು ದಿಟ್ಟ ಕ್ರಮಕೈಕೊಂಡಿದ್ದೇವೆ. ರೈತರಿಗೆ 3,500 ಸರ್ಕಾರ ಕೊಡಬೇಕು ಎಂಬುದು ನಮ್ಮ ಆಗ್ರಹ ಸಹ ಆಗಿದೆ. ಬುಧವಾರ ಸಂಜೆ ನಾವು ಸಭೆ ಕರೆದಿದ್ದು, ಬೆಳಗಾವಿ ಭಾಗದ ರೈತರೊಂದಿಗೆ ನಾವು ಹೇಗೆ ನಿಲ್ಲಬೇಕು ಎಂಬುದು ಚರ್ಚಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡುತ್ತೇವೆ” ಎಂದು ಸ್ಪಷ್ಟನೆ ನೀಡಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ
ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್‌) ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

ರೈತರು ಧರಣಿ ನಡೆಸುತ್ತಿರುವ ಮೂಡಲಗಿ ತಾಲ್ಲೂಕಿನ ರೈತ ಹೋರಾಟಗಾರ ದೀಪಕ್‌ ಜುಂಜರವಾಡ ಅವರು ಮಾತನಾಡಿ, “ನಮ್ಮ ಭಾಗದಲ್ಲಿ ಒಂದು ಎಕರೆ ಹೊಲದಲ್ಲಿ 40-60 ಟನ್‌ ಕಬ್ಬು ಬೆಳೆಯುತ್ತೇವೆ. ಸದ್ಯ ರೈತರಗೆ ಪ್ರತಿ ಟನ್‌ ಕಬ್ಬಿಗೆ ರೈತರಿಗೆ ಎಫ್‌ಆರ್‌ಪಿ ನಿಯಮದಡಿ 2,600ವರೆಗೂ ಸಿಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಟನ್‌ ಕಬ್ಬಿಗೆ ಕನಿಷ್ಠ 2000 ರೂ ಉಳಿಯುತ್ತಿದೆ. ಸರ್ಕಾರದ ವಿಚಾರಕ್ಕೆ ಬರೋಣ; ಸಕ್ಕರೆ, ಮೊಲಾಸಸ್‌, ಪವರ್‌, ಇಥೆನಾಲ್‌, ಸ್ಪೀರಿಟ್‌ಗ ಸೇರಿದಂತೆ ಪ್ರತಿ ಟನ್‌ ಕಬ್ಬಿನಿಂದ ಸರ್ಕಾರಕ್ಕೆ 5-6 ಸಾವಿರ ವರೆಗೂ ತೆರಗೆ ಸಂಗ್ರಹವಾಗುತ್ತಿದೆ. ಯಾರು ಲಾಭದಲ್ಲಿ ಇದ್ದಾರೆ ಹೇಳಿ? ಇಷ್ಟೆಲ್ಲ ಲಾಭ ಮಾಡಿಕೊಳ್ಳುತ್ತಿರುವ ಸರ್ಕಾರ ತನ್ನ ಪಾಲಿನಲ್ಲಿ ಕನಿಷ್ಠ 1000 ರೂ. ರೈತರಿಗೆ ಕೊಡಲು ಏನು ದಾಡಿ” ಎಂದು ಕಟುವಾಗಿ ಪ್ರಶ್ನಿಸಿದರು.

ಏನಿದು ಎಫ್ಆರ್‌ಪಿ?

ಎಫ್‌ಆರ್‌ಪಿ ಎಂದರೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ.). ಶೇ.9.50 ರಿಕವರಿ ಆಧಾರದ ಮೇಲೆ ಎಫ್.ಆರ್.ಪಿ. ನಿಗದಿ ಪಡಿಸಬೇಕಿತ್ತು. 2013-14ರಲ್ಲಿ ಶಾಸನಬದ್ಧ ಸಮಿತಿ ರಚನೆ ಆಗಿದೆ.‌ ರೈತರ ಅವಿರತ ಹೋರಾಟ ಫಲವಾಗಿ ಕರ್ನಾಟಕ ಕಬ್ಬು(ಖರೀದಿ ಮತ್ತು ಸರಬರಾಜು ನಿಯಂತ್ರಣ) ವಿಧೇಯಕ 2013 ಜಾರಿಗೆ ಬಂದು ಕಾನೂನು ಬದ್ಧ ಸಮಿತಿ ರಚನೆ ಆಗಿದೆ. ಆ ಕಾನೂನನ್ನು ಅಸ್ತ್ರವಾಗಿ ಬಳಸಿಕೊಂಡು ಇಳುವರಿ ಆಧಾರದ ಮೇಲೆ ಕಬ್ಬು ದರ ನಿಗದಿಪಡಿಸುವಂತೆ ಹೋರಾಟ ಶುರುವಾಯಿತು. ಆಗ ಕಾರ್ಖಾನೆ ಮಾಲೀಕರು ಒಟ್ಟಾಗಿ ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಿ ಶೇ.9.50 ಇದ್ದ ರಿಕವರಿಯನ್ನು ಶೇ. 10.25ಕ್ಕೆ ಏರಿಸಿದರು. ಇದು ರೈತರಿಗೆ ಮಾಡಿದ ದೊಡ್ಡ ಮೋಸ. ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಆ ವೇಳೆ ಸಕ್ಕರೆ ಸಂಸ್ಥೆಯವರು ಇಳುವರಿ ಹೆಚ್ಚು ಬರುವ ಕಬ್ಬಿನ ತಳಿ ಅಭಿವೃದ್ಧಿ ಪಡಿಸಿ ವಿತರಿಸುವುದಾಗಿ ಭರವಸೆ ನೀಡಿದ್ದರು. ಅದು ಇದುವರೆಗೂ ಈಡೇರಿಲ್ಲ‌ ಎಂಬುದು ಸಿದಗೌಡ ಮೋದಗಿ ಅವರ ಆರೋಪ.

cane 2

ಕಬ್ಬು ಇದು ವಾರ್ಷಿಕ ಮತ್ತು ವಾಣಿಜ್ಯ ಬೆಳೆ. ವರ್ಷಕ್ಕೊಮ್ಮೆ ನಿಚ್ಚಳವಾಗಿ ದೊಡ್ಡ ಆದಾಯ ತಂದುಕೊಡುತ್ತದೆ.‌ ಹಾಗಾಗಿ, ನೀರಾವರಿ ಸೌಲಭ್ಯ ಹೊಂದಿರುವ ರೈತರು ಆದಾಯ ಮೂಲದ ಖಾತ್ರಿಗಾಗಿ ಹೆಚ್ಚಾಗಿ ಕಬ್ಬು ಬೆಳೆಯಲು ಮುಂದಾಗುತ್ತಾರೆ. ಅದರಲ್ಲೂ ಬೆಳಗಾವಿ ಜಿಲ್ಲೆ ಕಬ್ಬು ಬೆಳೆಯಲು ಇಡೀ ರಾಜ್ಯದಲ್ಲೇ ಮುಂದಿದೆ. ಜಿಲ್ಲೆಯಲ್ಲಿ ಈ ವರ್ಷ ಅಂದಾಜು 2.90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಹಿಂದಿನ ವರ್ಷ ಜಿಲ್ಲೆಯ 29 ಕಾರ್ಖಾನೆಗಳಲ್ಲಿ 1 ಕೋಟಿ 7 ಲಕ್ಷ 91 ಸಾವಿರ 376 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಇದರಿಂದ 8 ಲಕ್ಷ 77,357 ಟನ್ ಸಕ್ಕರೆ ಉತ್ಪಾದನೆ ಆಗಿದೆ. ಕಳೆದ ವರ್ಷ ರಾಜ್ಯದಲ್ಲಿ ಒಟ್ಟು 5 ಕೋಟಿ 40 ಲಕ್ಷ ಟನ್ ಕಬ್ಬನ್ನು 81 ಕಾರ್ಖಾನೆಗಳು ನುರಿಸಿದ್ದವು. 41 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.

ಇದನ್ನೂ ಓದಿ ಟನಲ್‌ ರಸ್ತೆ ಯೋಜನೆ ಬಗ್ಗೆ ತಜ್ಞರು ಹೇಳುವುದೇನು? ಬೆಂಗಳೂರಿಗೆ ಇದು ಪೂರಕವೇ?

ಬೆಳಗಾವಿ ರಾಜಕಾರಣವನ್ನು ಆಳುತ್ತಿರುವುದರಲ್ಲಿ ಸಕ್ಕರೆ ಕಾರ್ಖಾನೆಗಳ ಪಾತ್ರವೂ ಬಹಳವಿದೆ. ಬೆಳಗಾವಿಯ ಜಿಲ್ಲೆಯಲ್ಲೇ 29 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಸಹಕಾರಿ ಸಂಘದ ಸಕ್ಕರೆ ಕಾರ್ಖಾನೆಗಳು ರಾಜಕೀಯ ನಾಯಕರ ಹಿಡಿತಕ್ಕೆ ಸಿಕ್ಕಿವೆ. ಜೊತೆಗೆ ವೈಯಕ್ತಿಕವಾಗಿ ಶಶಿಕಲಾ ಜೊಲ್ಲೆ, ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ, ರಮೇಶ್‌ ಕತ್ತಿ, ಉಮೇಶ್‌ ಕತ್ತಿ, ಪ್ರಭಾಕರ್‌ ಕೋರೆ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಚನ್ನರಾಜ್ ಹಟ್ಟಿಹೊಳಿ ಸಕ್ಕರೆ ಕಾರ್ಖಾನೆಗಳು ನೆಲೆಯೂರಿವೆ. ಕೆಲವು ಖಾಸಗಿ ಸಕ್ಕರೆ ಕಾರ್ಖಾನೆಗಳು ಸಹ ಇವೆ. ಇದೆಲ್ಲವೂ ಕಬ್ಬಿನ ರಾಜಕಾರಣ ಜೊತೆ ಬೆರೆತು ಒಟ್ಟಾರೆ ರೈತರನ್ನೇ ಹಿಂಡಿ ಹಿಪ್ಪೆ ಮಾಡುತ್ತಿವೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...