ವರದಕ್ಷಿಣೆ ಸಾವು | 3 ತಿಂಗಳಲ್ಲಿ 508 ಮಂದಿಗೆ ಜಾಮೀನು: ಹೈಕೋರ್ಟ್ ನ್ಯಾಯಾಧೀಶರಿಗೆ ಸುಪ್ರೀಂ ತರಾಟೆ

Date:

ವರದಕ್ಷಿಣೆ ಆಧಾರಿತ ಸಾವು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಮೂರ್ತಿಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಧೀಶ ಪಂಕಜ್ ಭಾಟಿಯಾ ನೀಡಿರುವ ಜಾಮೀನು ಆದೇಶವೊಂದನ್ನು ‘ಅತ್ಯಂತ ಆಘಾತಕಾರಿ ಮತ್ತು ನಿರಾಶಾದಾಯಕ’ವೆಂದು ಸುಪ್ರೀಂ ಕೋರ್ಟ್‌ ಕರೆದಿದೆ. ಈ ಬೆನ್ನಲ್ಲೇ, ನ್ಯಾ. ಪಂಕಜ್‌ ಅವರು ತಮಗೆ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಿಯೋಜಿಸದಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

ನ್ಯಾಯಾಧೀಶ ಪಂಕಜ್ ಭಾಟಿಯಾ ಅವರು ಕಳೆದ 3 ತಿಂಗಳಲ್ಲಿ ಸುಮಾರು 510 ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಈ ಪೈಕಿ, 508 ಪ್ರಕರಣಗಳಲ್ಲಿ ಜಾಮೀನು ನೀಡಿದ್ದಾರೆ ಎಂಬ ಸಂಗತಿಯನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಬಹಿರಂಗಪಡಿಸಿದೆ. ಸುದ್ದಿಸಂಸ್ಥೆಯು 2025ರ ಅಕ್ಟೋಬರ್ ಮತ್ತು ಡಿಸೆಂಬರ್‌ ನಡುವೆ ನ್ಯಾಯಮೂರ್ತಿ ಪಂಕಜ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿರುವ ವರದಕ್ಷಿಣೆಗೆ ಸಂಬಂಧಿಸಿದ ಪ್ರಕರಣಗಳನ್ನು ವಿಶ್ಲೇಷಿಸಿದೆ. ಈ ವೇಳೆ, ಅವರ ಪೀಠವು ವಿಚಾರಣೆ ನಡೆಸಿದ ಒಟ್ಟು ಪ್ರಕರಣಗಳ ಪೈಕಿ 99.61% ಆರೋಪಿಗಳಿಗೆ ಜಾಮೀನು ನೀಡಿದ್ದಾರೆ.

ಅಲ್ಲದೆ, ಸಾವಿನ ಸಂದರ್ಭಗಳು ವಿಭಿನ್ನವಾಗಿದ್ದರೂ, ಜಾಮೀನು ಆದೇಶಗಳ ರಚನೆ, ಭಾಷೆ ಹಾಗೂ ಆದೇಶದ ಬಾಂಡ್ ಮೊತ್ತವು ಎಲ್ಲ ಪ್ರಕರಣಗಳಲ್ಲಿ ಒಂದೇ ರೀತಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾದ ಪ್ರಕರಣವು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಸುಷ್ಮಾ ದೇವಿ (28) ಅವರ ಸಾವಿಗೆ ಸಂಬಂಧಿಸಿದ್ದಾಗಿದೆ. ಆಕೆಯ ಮದುವೆಯಾದ ಮೂರು ತಿಂಗಳೊಳಗೆ ಆಕೆಯ ಮೃತದೇಹವು ಪತಿಯ ಮನೆಯ ವರಾಂಡದಲ್ಲಿ ಪತ್ತೆಯಾಗಿತ್ತು. ಮದುವೆಯ ಸಮಯದಲ್ಲಿ ತಾನು 3.5 ಲಕ್ಷ ರೂ. ನಗದು ನೀಡಿದ್ದಾಗಿ ಮತ್ತು ನಂತರ ವರನ ಕಡೆಯವರು ಕಾರು ಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಆಕೆಯ ತಂದೆ ತಿಳಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಪತಿಗೆ ನ್ಯಾಯಮೂರ್ತಿ ಭಾಟಿಯಾ ಅವರು ಜಾಮೀನು ನೀಡಿ ಆದೇಶಿಸಿದ್ದರು.

ಆ ದೇಶವನ್ನು ಫೆಬ್ರವರಿ 9ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ರದ್ದುಗೊಳಿಸಿತು. ಆಗ; “ಆಕ್ಷೇಪಾರ್ಹ ಆದೇಶವನ್ನು ಓದಿದಾಗ ಹೈಕೋರ್ಟ್ ಏನು ಹೇಳಲು ಪ್ರಯತ್ನಿಸುತ್ತಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ… ವರದಕ್ಷಿಣೆ ಸಾವಿನಂತಹ ಅತ್ಯಂತ ಗಂಭೀರ ಅಪರಾಧದಲ್ಲಿ ಆರೋಪಿಯ ಪರವಾಗಿ ಜಾಮೀನು ನೀಡಲು ಹೈಕೋರ್ಟ್ ಯಾವ ವಿವೇಚನೆಯನ್ನು ಬಳಸಿದೆ ಎಂಬುದು ತಿಳಿಯುತ್ತಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿತ್ತು. ಪ್ರಕರಣದ ಆರೋಪಿ ಶರಣಾಗಬೇಕೆಂದು ಆದೇಶಿಸಿತು.

ಮುಂದುವರೆದು, “ಮರಣೋತ್ತರ ಪರೀಕ್ಷೆಯು ಸಾವಿಗೆ ಉಸಿರುಗಟ್ಟಿಸುವಿಕೆ ಕಾರಣವೆಂದು ಹೇಳುತ್ತದೆ. ಘಟನೆಯು ಸಂತ್ರಸ್ತೆ ಮದುವೆಯಾದ ಕೇವಲ ಮೂರು ತಿಂಗಳಲ್ಲಿ ನಡೆದಿದೆ. ಪ್ರಕರಣವು ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಸೆಕ್ಷನ್ 118ರ ಅಡಿಯಲ್ಲಿ ಕ್ರಮಕ್ಕೆ ಅರ್ಹವಾಗಿದೆ. ಅಪರಾಧದ ಸ್ವರೂಪ, ವಿಧಿಸಲಾದ ಶಿಕ್ಷೆ, ಆರೋಪಿ ಮತ್ತು ಮೃತರ ನಡುವಿನ ಸಂಬಂಧ, ಘಟನೆ ನಡೆದ ಸ್ಥಳ ಹಾಗೂ ದಾಖಲೆಯಲ್ಲಿರುವ ವೈದ್ಯಕೀಯ ಪುರಾವೆಗಳನ್ನು ಹೈಕೋರ್ಟ್ ಪರಿಶೀಲಿಸಬೇಕಿತ್ತು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಆದೇಶ ಬಂದ ಕೆಲವು ದಿನಗಳ ನಂತರ, ನ್ಯಾಯಮೂರ್ತಿ ಭಾಟಿಯಾ ಅವರು ತಮಗೆ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಿಯೋಜಿಸದಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಂತಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಟೀಕೆಗಳು ತಮ್ಮ ಮೇಲೆ ಭಾರಿ ನಿರುತ್ಸಾಹದಾಯಕ ಮತ್ತು ಆಘಾತಕಾರಿ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ.

ನ್ಯಾಯಮೂರ್ತಿ ಭಾಟಿಯಾ ಜಾಮೀನು ನೀಡಿದ ಪ್ರಕರಣಗಳು

ವರದಕ್ಷಿಣೆಗೆ ಸಂಬಂಧಿಸಿದ ಸಾವು ಎಂದು ಆರೋಪಿಸಲಾದ, ಐಪಿಸಿ ಸೆಕ್ಷನ್ 304 ಬಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದಾಖಲಾದ 510 ಪ್ರಕರಣಗಳನ್ನು ಕಳೆದ ಮೂರು ತಿಂಗಳುಗಳಲ್ಲಿ ಭಾಟಿಯಾ ವಿಚಾರಣೆ ನಡೆಸಿದ್ದಾರೆ.  ಈ ಪ್ರಕರಣಗಳಲ್ಲಿ ಎಲ್ಲ ಘಟನೆಗಳು ಮದುವೆಯಾದ ನಂತರದ ಸರಾಸರಿ ಮೂರೂವರೆಯಿಂದ ನಾಲ್ಕು ವರ್ಷಗಳ ಅಂತರದಲ್ಲಿಯೇ ನಡೆದಿವೆ. ಈ ಪ್ರಕರಣಗಳ ಅರ್ಜಿದಾರರಲ್ಲಿ 362 ಪತಿಗಳು, 68 ಅತ್ತೆಯಂದಿರು ಹಾಗೂ 63 ಮಾವಂದಿರು ಆರೋಪಿಗಳಾಗಿದ್ದಾರೆ. ಇವರಲ್ಲದೆ ನಾದಿನಿಯರು, ಭಾವಂದಿರು ಹಾಗೂ ಇತರ ಸಂಬಂಧಿಕರು ಕೂಡ ಭಾಗೊಯಾಗಿದ್ದಾರೆ. ಆರು ಪ್ರಕರಣಗಳಲ್ಲಿ, ಮೃತರು ಸಾವಿನ ಸಮಯದಲ್ಲಿ ಗರ್ಭಿಣಿಯಾಗಿದ್ದರು ಎಂದು ವರದಿಯಾಗಿದೆ.

340 ಪ್ರಕರಣಗಳಲ್ಲಿ, ಮರಣೋತ್ತರ ಪರೀಕ್ಷೆಯ ವರದಿಗಳು, ಸಾವಿನ ಕಾರಣ ‘ನೇಣು ಹಾಕಿಕೊಂಡಿರುವುದು’ ಕಾರಣವೆಂದು ಉಲ್ಲೇಖಿಸಲಾಗಿದೆ. 27 ಪ್ರಕರಣಗಳಲ್ಲಿ ವಿಷ ಸೇವನೆ, 16ರಲ್ಲಿ ಉಸಿರುಗಟ್ಟಿಸುವಿಕೆ, 11ರಲ್ಲಿ ಸುಟ್ಟ ಗಾಯಗಳು, ತಲಾ 7 ಪ್ರಕರಣಗಳಲ್ಲಿ ಕುತ್ತಿಗೆ ಹಿಸುಕುವುದು ಮತ್ತು ತಲೆಗೆ ಪೆಟ್ಟು ಬಿದ್ದಿರುವುದು ಹಾಗೂ 4 ಪ್ರಕರಣಗಳಲ್ಲಿ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿತ್ತು. 10 ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳಲ್ಲಿ, ಅರ್ಜಿದಾರರು ‘ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ’ ಎಂದು ಪಾಟಿಯಾ ಅವರ ಆದೇಶಗಳು ವಿವರಿಸಿವೆ.

ಜಾಮೀನು ಆದೇಶಗಳಲ್ಲಿ ಗಮನಿಸಿದಂತೆ, 510 ಆರೋಪಿಗಳಲ್ಲಿ 356 ಜನರು ಒಂದು ವರ್ಷಕ್ಕಿಂತ ಕಡಿಮೆ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರು. ಆ 356 ಮಂದಿಯಲ್ಲಿ ಐವರು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಜೈಲಿನಲ್ಲಿದ್ದರು. 104 ಮಂದಿ 1-3 ತಿಂಗಳುಗಳು, 142 ಆರೋಪಿಗಳು 3-6 ತಿಂಗಳುಗಳು ಹಾಗೂ 105 ಮಂದಿ 6-12 ತಿಂಗಳುಗಳ ಕಾಲ ಕಸ್ಟಡಿಯಲ್ಲಿದ್ದರು. 52 ಜಾಮೀನು ಆದೇಶಗಳಲ್ಲಿ ಆರೋಪಿಗಳು 12-24 ತಿಂಗಳ ಕಾಲ ಕಸ್ಟಡಿಯಲ್ಲಿದ್ದರು ಎಂದು ತಿಳಿಸಲಾಗಿದೆ. ಉಳಿದಂತೆ, ಸುಮಾರು 31 ಮಂದಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರು.

ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆಯು ಅಸ್ವಾಭಾವಿಕವಾಗಿ ಮರಣ ಹೊಂದಿದಾಗ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಪುರಾವೆಗಳಿದ್ದಾಗ ಅನ್ವಯಿಸುತ್ತದೆ. ಕಾನೂನಿನ ಪ್ರಕಾರ, ಈ ಅಂಶಗಳು ದಾಖಲೆಯಲ್ಲಿ ಕಂಡುಬಂದಲ್ಲಿ, ವಿಚಾರಣೆಯ ಸಮಯದಲ್ಲಿ ಸಾವಿಗೆ ಬೇರೆ ಕಾರಣಗಳಿವೆ ಎಂಬುದು ಸಾಬೀತಾಗದ ಹೊರತು, ಪತಿಯ ಮನೆಯವರೇ ವರದಕ್ಷಿಣೆ ಸಾವಿಗೆ ಕಾರಣ ಎಂದು ನ್ಯಾಯಾಲಯಗಳು ಭಾವಿಸಬೇಕಾಗುತ್ತದೆ.

ಈ ಲೇಖನ ಓದಿದ್ಧೀರಾ?: ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಭಾಟಿಯಾ ಅವರು ವಿಚಾರಣೆ ನಡೆಸಿ ಜಾಮೀನು ನೀಡಿರುವ 510 ಆದೇಶಗಳಲ್ಲಿ, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಆರೋಪಿಗಳು ಕಸ್ಟಡಿಯಲ್ಲಿ ಕಳೆದ ಸಮಯ ಹಾಗೂ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಗಮನಿಸಿ ಜಾಮೀನು ನೀಡಲಾಗಿದೆ. ಸುಮಾರು ಅರ್ಧದಷ್ಟು ಪ್ರಕರಣಗಳಲ್ಲಿ (253) ‘ಸಾವಿಗೆ ಸ್ವಲ್ಪ ಮೊದಲು’ ಕಿರುಕುಳ ನೀಡಲಾಗಿದೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲವೆಂದು ಆದೇಶಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಕಂಡುಕೊಂಡಿದೆ.

ಹೆಚ್ಚಿನ ಆದೇಶಗಳಲ್ಲಿ, ನ್ಯಾಯಮೂರ್ತಿ ಭಾಟಿಯಾ ಅವರು, “ಅರ್ಜಿದಾರರ ಪರ ವಕೀಲರು, ಎಜಿಎ (ಹೆಚ್ಚುವರಿ ಸರ್ಕಾರಿ ವಕೀಲರು) ಅವರ ವಾದವನ್ನು ಆಲಿಸಲಾಗಿದೆ ಮತ್ತು ದಾಖಲೆಯನ್ನು ಪರಿಶೀಲಿಸಲಾಗಿದೆ” ಎಂದು ಬರೆದಿದ್ದಾರೆ. ಜೊತೆಗೆ, ಎಫ್‌ಐಆರ್ ಸಂಖ್ಯೆ, ಬಳಸಲಾದ ಸೆಕ್ಷನ್‌ಗಳು, ಜೈಲುವಾಸದ ಅವಧಿ, ಅರ್ಜಿದಾರರ ಕ್ರಿಮಿನಲ್ ಹಿನ್ನೆಲೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿದ್ದಾರೆ.

ಜಾಮೀನು ನೀಡುವ ಆದೇಶವು ಹೆಚ್ಚಾಗಿ ಹೀಗಿರುತ್ತಿದ್ದವು; “ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಗಣಿಸಿ, ಸಂತ್ರಸ್ತೆಯ ಸಾವಿಗೆ ಸ್ವಲ್ಪ ಮೊದಲು ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಸೂಚಿಸಲು ಅರ್ಜಿದಾರರ ವಿರುದ್ಧ ಯಾವುದೇ ಪುರಾವೆಗಳಿಲ್ಲ. ಅರ್ಜಿದಾರರು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಅಲ್ಲದೆ, ಅರ್ಜಿದಾರರು ಕೆಲ ದಿನಗಳನ್ನು ಜೈಲಿನಲ್ಲಿ ಕಳೆದಿರುವುದರಿಂದ, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ ಎಂದು ನಾನು ಅಭಿಪ್ರಾಯಪಡುತ್ತೇನೆ. ಅದರಂತೆ, ಜಾಮೀನು ಅರ್ಜಿಯನ್ನು ಅಂಗೀಕರಿಸಲಾಗಿದೆ” ಎಂದು ಬರೆದಿದ್ದಾರೆ.

510 ಪ್ರಕರಣಗಳಲ್ಲಿ ಬಹುತೇಕ ಒಂದೇ ರೀತಿ ಅಂತಿಮ ನಿರ್ದೇಶನಗಳನ್ನು ಭಾಟಿಯಾ ನೀಡಿದ್ದಾರೆ. ಆರೋಪಿಯು ತಲಾ 20,000 ರೂ.ಗಳ ಇಬ್ಬರು ಶ್ಯೂರಿಟಿಗಳೊಂದಿಗೆ ವೈಯಕ್ತಿಕ ಬಾಂಡ್ ಸಲ್ಲಿಸಿದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಆದೇಶಗಳಲ್ಲಿ ಬರೆದಿದ್ದಾರೆ.

ಜಾಮೀನು ನಿರಾಕರಿಸಿದ ತೀರ್ಪುಗಳು

ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಭಾಟಿಯಾ ಅವರು ಜಾಮೀನು ನಿರಾಕರಿಸಿದ್ದಾರೆ. ಸರ್ವಜೀತ್ ಕುಮಾರ್ ಎಂಬುವವರ ಪ್ರಕರಣದಲ್ಲಿ, ಅವರ ಪತ್ನಿಯು 90%ರಷ್ಟು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು. ಘಟನೆಯ ದಿನ ತನಗೆ ಹಲ್ಲೆ ಮತ್ತು ಬೆದರಿಕೆ ಹಾಕಲಾಗುತ್ತಿದೆ ಎಂದು ಆಕೆ ತನ್ನ ತಂದೆಗೆ ತಿಳಿಸಿದ್ದರು ಎಂಬುದನ್ನು  ನ್ಯಾಯಮೂರ್ತಿ ಭಾಟಿಯಾ ಆದೇಶದಲ್ಲಿ ದಾಖಲಿಸಿದ್ದಾರೆ. ಅಪರಾಧ ನಡೆದ ರೀತಿಯನ್ನು ಪರಿಗಣಿಸಿ ಜಾಮೀನಿಗೆ ಇದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ರಿಷಿತೋಷ್ ಯಾದವ್ ಎಂಬ ಪತಿಯು ತನ್ನ ಪತ್ನಿಯ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ಮರಣೋತ್ತರ ಪರೀಕ್ಷೆಯು ತಲೆಗೆ ಬಿದ್ದ ಗುಂಡೇಟನ್ನು ದೃಢಪಡಿಸಿತ್ತು. ಇದು ಐಪಿಸಿ ಸೆಕ್ಷನ್ 302ರ ಅಡಿಯ ಅಪರಾಧವಾಗಿರುವುದರಿಂದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...