ಜಿಲ್ಲೆಯ ಮತ್ತು ರಾಜ್ಯದ ರಾಜಕೀಯ ಇಷ್ಟೊಂದು ನಿರ್ಲಜ್ಜವಾದಾಗಲೂ ಜನ ತಮ್ಮ ಭರವಸೆಯನ್ನು ಕಳೆದುಕೊಂಡಿಲ್ಲ. ಜನ ತಮ್ಮ ಹಕ್ಕಿಗಾಗಿ ತಮ್ಮೆಲ್ಲ ಇತಿಮಿತಿಗಳನ್ನು ಮೀರಿ ಒಂದಾಗಿ ಹೋರಾಡುತ್ತಿದ್ದಾರೆ. ಹೋರಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ರಾಜಕಾರಣಿಗಳ ರಾಜಕೀಯ ಏನೇ ಇರಲಿ ಜನರು ಬಹಳ ತಾಳ್ಮೆ, ದಿಟ್ಟತನ, ನಿರಂತರತೆಯನ್ನು ಕಾಪಾಡಿಕೊಳ್ಳುವ ಮಹದಾಸೆ ಹೊಂದಿದ್ದಾರೆ.
ರಾಜ್ಯ ಸರಕಾರವು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪಿಪಿಪಿ ಹೆಸರಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸ ಹೊರಟಿದೆ. ಯಾವ ಜಿಲ್ಲೆಗಳಲ್ಲಿ ಜನಮಾನಸ ಸತ್ತಂತಿದೆಯೋ ಆ ಜಿಲ್ಲೆಗಳಲ್ಲಿ ಇಂಥ ಪಿಪಿಪಿ ಯೋಜನೆಯಡಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಮುಂದಾಗುತ್ತಿದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜನರಿಂದ ತೀವ್ರ ವಿರೋಧ ಬಂತು. ಹಲವು ದಶಕಗಳಿಂದ ಸರಕಾರಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಹಾಗೂ ಶ್ರಮಾಧಾರಿತ ಕೈಗಾರಿಕೆಗಳು ಬೇಕು ಎಂಬುದು ಜನರ ಮೂಲಭೂತ ಬೇಡಿಕೆಯಾಗಿದೆ. ಖಾಸಗಿ ಸಹಭಾಗಿತ್ವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಜಿಲ್ಲೆಯ ನೂರಾರು ಸಂಘಟನೆಗಳು ತಮ್ಮ ವೈಯಕ್ತಿಕ ಅಸ್ಮಿತೆಯನ್ನು ಪಕ್ಕಕ್ಕಿಟ್ಟು ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಆರಂಭಿಸಿವೆ. ಧರಣಿ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಜಿಲ್ಲೆಯಾದ್ಯಂತ ಇಂದು ಈ ಹೋರಾಟ ಮನೆ ಮಾತಾಗಿದೆ. ಸರಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಆಕ್ರೋಶ ಹೆಚ್ಚುತ್ತಾ ಹೋಗುತ್ತಿದೆ.
ಈ ಹೋರಾಟ ಜನರ ಪ್ರತಿನಿಧಿಗಳೆಂದು ಕರೆಸಿಕೊಳ್ಳುವವರಿಗೆ ಕೊನೆಗೂ ಇತ್ತಕಡೆ ನೋಡುವಂತೆ ಮಾಡಿತು. ಆರಂಭದಲ್ಲಿ ಸಚಿವ ಶಿವಾನಂದ ಪಾಟೀಲರು ಬಂದರು. ನಂತರದಲ್ಲಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲರು ಬಂದರು. ಇಬ್ಬರೂ ಈ ಹೋರಾಟ ಬೆಂಬಲಿಸಿದರು. ನಿಮ್ಮದು ನ್ಯಾಯಯುತ ಹೋರಾಟ, ನಾವು ಬೆಂಬಲಿಸುತ್ತೇವೆ ಮುಖ್ಯಮಂತ್ರಿಗಳಿಗೆ ಮನವೊಲಿಸುತ್ತೇವೆ ಎಂದು ಹೇಳಿದರು. ಆದರೆ ಪ್ರತಿ ಗುರುವಾರ ನಡೆಯುವ ಕ್ಯಾಬಿನೇಟ್ ನಲ್ಲಿ ಇವಾರಾರೂ ಧ್ವನಿ ಎತ್ತಲೇ ಇಲ್ಲ ಎಂದು ಇದೇ ಸರಕಾರದ ಇತರ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು ಹೇಳುತ್ತಾರೆ. ಕ್ಯಾಬಿನೆಟ್ ದಾಖಲೆಗಳೂ ಕೂಡಾ ಇದನ್ನೇ ಹೇಳುತ್ತಿವೆ. ಮುಂದೆ ನವೆಂಬರ್ ಒಂದರಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಬಳಿಗೆ ಹೋರಾಟ ಸಮಿತಿಯ ನಿಯೋಗ ಒಯ್ಯುವುದಾಗಿ ಹೇಳಿದರು. ಇದನ್ನೇ ಆಧಾರವಾಗಿಟ್ಟುಕೊಂಡು ಹೋರಾಟ ಸಮಿತಿಯ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದರು. ಭೇಟಿಯಾದ ದಿನವೇ ಮುಖ್ಯಮಂತ್ರಿಗಳ ಭೇಟಿಗೆ ಉಸ್ತುವಾರಿ ಸಚಿವರು ದಿನಾಂಕವನ್ನೂ ನಿಗದಿಪಡಿಸಿದರು.
ಕೊನೆಗೆ ನಿಗದಿತ ದಿನ ನವೆಂಬರ್ 19ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೆ ಭೇಟಿಯಾಗಲು ನಿಯೋಗದಲ್ಲಿ ಬರುವಂತೆ ಉಸ್ತುವಾರಿ ಸಚಿವರು ಹೇಳಿದರು. ಅಂತೆಯೇ ನಿಯೋಗ ಬೆಂಗಳೂರು ತಲುಪಿತು. ಅಲ್ಲಿ ಹೋದಾಗ ಮುಖ್ಯಮಂತ್ರಿಗಳ ಕಾರ್ಯಚಟುವಟಿಕೆಗಳ ಪಟ್ಟಿಯಲ್ಲಿ ಈ ವಿಷಯವೇ ಇರಲಿಲ್ಲ. ನಮ್ಮ ಜಿಲ್ಲೆಯ ಸಚಿವರು ತುಂಬಾ ಪ್ರಭಾವಿಯಾಗಿದ್ದಾರೆ. ಅದಿಲ್ಲದೆಯೂ ನಮ್ಮ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳೊಡನೆ ಮಾತನಾಡಿ ಬೇಡಿಕೆ ಈಡೇರಿಸಬಲ್ಲರು ಎಂದು ಹೋರಾಟ ಸಮಿತಿ ನಂಬಿತ್ತು. ಆದರೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋದಾಗ ಸಂಬಂಧಿತ ಯಾವುದೇ ಇಲಾಖಾ ಅಧಿಕಾರಿಗಳಿರಲಿಲ್ಲ, ಸಚಿವರಿರಲಿಲ್ಲ, ಅವಶ್ಯಕವಿರುವಷ್ಟು ಸಮಯವೂ ಕೊಡದೆ, ಒಂದೆಡೆ ಕುಳಿತು ಕೂಡಾ ಮುಖ್ಯಮಂತ್ರಿಗಳು ಮಾತನಾಡಲಿಲ್ಲ. ದಾರಿಯಲ್ಲಿ ಹೋಗುತ್ತಾ ಮಾತನಾಡಿದಂತಿತ್ತು.

ಮುಖ್ಯಮಂತ್ರಿಗಳು ಬಂದಾಗ ‘ಇವರು ನಮ್ಮ ಜಿಲ್ಲೆಯವರು, ಪಿಪಿಪಿ ವಿರೋಧಿಸಿ ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ’ ಎಂದು ಹೊರಗಿನವರಂತೆ ಹೋರಾಟಗಾರರನ್ನು ಪರಿಚಯಿಸಿದ್ದನ್ನು ಬಿಟ್ಟರೆ ವಿಷಯದ ಆಳ ಅಗಲವನ್ನು ಪರಿಚಯಿಸಲೇ ಇಲ್ಲ. ಮುಖ್ಯಮಂತ್ರಿಗಳಂತೂ ‘ಓಹೋ, ನಿಮಗೆ ಪಿಪಿಪಿ ಬೇಡ್ವೋ, ಹಾಗಿದ್ದರೆ ಬಿಡಿ, ನಿಮಗೆ ವೈದ್ಯಕೀಯ ಕಾಲೇಜೇ ಬೇಡ’ ಎಂಬ ಉಡಾಫೆ ಉತ್ತರ ನೀಡಿದರು. ಆಗ ಉಸ್ತವಾರಿ ಸಚಿವರು ತಮ್ಮ ಜಿಲ್ಲೆಯಿಂದ ಬಂದ ಜನರ ಈ ಗಂಭೀರ ಬೇಡಿಕೆಯ ಬಗ್ಗೆ ಪ್ರಬಲ ವಕಾಲತ್ತನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಬೇಕಿತ್ತು. ಈ ಮುಖ್ಯ ಕೆಲಸ ಮಾಡಲಿಲ್ಲ. ಬದಲಾಗಿ ವಿಷಯಾಂತರ ಮಾಡಿ ನಿಯೋಗಕ್ಕೆ ಸಂಬಂಧವಿಲ್ಲದ ವಿಷಯಗಳನ್ನು ಮಾತನಾಡತೊಡಗಿದರು. ಮುಖ್ಯಮಂತ್ರಿಗಳು ಹೋದ ನಂತರ ಉಸ್ತುವಾರಿ ಸಚಿವರು ಕನಿಷ್ಠ ಹೋರಾಟಗಾರರೊಂದಿಗೆ ನಿಂತು ಸಮಾಲೋಚಿಸದೇ ಮುಖ್ಯಮಂತ್ರಿಯ ಹಿಂದೆಯೇ ಹೊರಟು ಹೋದರು. ಇದು ವಿಜಯಪುರ ಜಿಲ್ಲೆಗೆ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳು ಸೇರಿ ಬಗೆದ ನಿರ್ಲಕ್ಷ್ಯವಲ್ಲದೆ ಇನ್ನೇನು? ಜಿಲ್ಲೆಯನ್ನು ಪ್ರತಿನಿಧಿಸಿ ಬಂದ ಹೋರಾಟಗಾರರ ನಿಯೋಗವನ್ನು ಆವರಣದಲ್ಲೇ ನಿಲ್ಲಿಸಿ ಕಾಟಾಚಾರಕ್ಕೆಂಬಂತೆ ಮಾತುಕತೆ ಮಾಡಿಸಿ ಕಳುಹಿಸಿರುವುದು ಜಿಲ್ಲೆಯ ಜನರಿಗೆ ಮತ್ತು ತಮ್ಮ ಮತಕ್ಷೇತ್ರದ ಜನತೆಗೆ ಮಾಡಿದ ಅವಮಾನವಲ್ಲದೇ ಇನ್ನೇನು?
ಜಿಲ್ಲೆಯಲ್ಲಿರುವ ಇನ್ನೋರ್ವ ಸಚಿವರಾದ ಶಿವಾನಂದ ಪಾಟೀಲರು ‘ನಾನೂ ಒಮ್ಮೆ ಮುಖ್ಯಮಂತ್ರಿಗಳ ಮನವೊಲಿಸಲು ಪ್ರಯತ್ನಿಸುವೆ, ಒಟ್ಟಾಗಿ ಪ್ರಯತ್ನಸೋಣ’ ಎನ್ನುತ್ತಿದ್ದಾರೆ. ಇವರು ಏನು ಮಾಡುತ್ತಾರೆ ಜಿಲ್ಲೆಯ ಜನತೆಯೇ ಕಾದು ನೋಡಬೇಕು. ನಗರ ಶಾಸಕ ಬಸನಗೌಡ ಪಾಟೀಲರವರೂ ಸದನದಲ್ಲೊಮ್ಮೆ ರೂ. 500 ಕೋಟಿ ಹೂಡುವುದಾಗಿ ಹೇಳಿದ್ದರಾದರೂ ಒಮ್ಮೆ ಮಾಧ್ಯಮದ ಮುಂದೆ ನಾನೂ ಸರಕಾರಿ ವೈದ್ಯಕೀಯ ಕಾಲೇಜನ್ನೇ ಬಯಸುವೆ ಎಂದಿದ್ದರಂತೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಹಾಗೂ ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲರವರು ಬಂದು ಹೋರಾಟ ಬೆಂಬಲಿಸಿದರು. ಇವರುಗಳು ಬೆಳಗಾವಿಯ ಅಧಿವೇಶನದಲ್ಲಿ ಏನು ಮಾಡುತ್ತಾರೆನ್ನುವುದು ಕುತೂಹಲವಿದೆ. ಜೊತೆಗೆ ಮುದ್ದೇಬಿಹಾಳ ಮತ್ತು ಸಿಂದಗಿಯ ಶಾಸಕರು ಈ ವಿಷಯದ ಬಗ್ಗೆ ಒಮ್ಮೆಯೂ ಮಾತೆತ್ತಿಲ್ಲ. ನಾಗಠಾಣದ ಶಾಸಕರಾದ ವಿಠ್ಠಲ ಕಟಕದೊಂಡರವರು ಉಸ್ತುವಾರಿ ಸಚಿವರ ಹಿಂಬಾಲಕರಂತೆ ಒಮ್ಮೆ ಹೋರಾಟದ ವೇದಿಕೆಗೆ ಬಂದು ಹೋದದ್ದು ಬಿಟ್ಟರೆ ಒಮ್ಮೆಯೂ ತುಟಿ ಬಿಚ್ಚಿಲ್ಲ.
ರಾಜ್ಯಸಭಾ ಸದಸ್ಯೆರಾಗಿರುವ ಸುಧಾಮೂರ್ತಿಯವರು ವಿಜಯಪುರ ಜಿಲ್ಲೆಯನ್ನು ಅಭಿವೃದ್ದಿ ಮಾಡುವುದಾಗಿ ದತ್ತು ತೆಗೆದುಕೊಂಡಿದ್ದಾರೆ. ಹೋದಲ್ಲೆಲ್ಲ ಬಿಜಾಪುರದ ಮೇಲಿನ ಪ್ರೇಮವನ್ನು ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ ಹೊರತು ಜಿಲ್ಲೆಯ ಅಭಿವೃದ್ದಿಗೆ ವಿಶೇಷ ಕನಸುಗಳು ಅವರಲ್ಲಿಲ್ಲ. ಮೊನ್ನೆ ವಿಜಯಪುರಕ್ಕೆ ಬಂದಾಗ ಹೋರಾಟವನ್ನು ಬೆಂಬಲಿಸುವ ಕನಿಷ್ಠ ಸೌಜನ್ಯ ಮತ್ತು ಕಾಳಜಿಯನ್ನು ತೋರಿಸಿಲ್ಲ. ಇತ್ತ ಸಂಸದ ರಮೇಶ ಜಿಗಜಿಣಗಿಯವರು ನಾನು ಏಮ್ಸ್ ತರುತ್ತೇನೆ ಎಂದು ಹೇಳುತ್ತಿದ್ದರಾದರೂ ಅದಕ್ಕೆ ಸಂಬಂಧಿಸಿದಂತೆ ನಿರಂತರ ಪ್ರಯತ್ನ ಕಾಣುತ್ತಿಲ್ಲ.

ವಿರೋಧ ಪಕ್ಷವಾದ ಬಿಜೆಪಿಯ ಅಧ್ಯಕ್ಷರು ಒಮ್ಮೆ ಕಾಟಾಚಾರಕ್ಕೆ ಬಂದು ಹೋಗಿದ್ದಾರಷ್ಟೇ. ಒಂದೇ ಒಂದು ಚಿಕ್ಕ ಪ್ರತಿಭಟನೆಯನ್ನೂ ಮಾಡಿಲ್ಲ. ಈ ಬೇಡಿಕೆಯ ಬಗ್ಗೆ ಬಿಜೆಪಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೋ ಅಥವಾ ಜಿಲ್ಲೆಯ ಇಡೀ ಬಿಜೆಪಿ ಪಕ್ಷವನ್ನು ಕಾಂಗ್ರೆಸ್‌ಗೆ ಒತ್ತೆ ಇಟ್ಟಿದ್ದಾರೋ ಅವರೇ ಹೇಳಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮುಖಂಡರುಗಳು ಆಯಾ ಪಕ್ಷಗಳ ಅಧಿಕಾರಸ್ಥ ಶಾಸಕರುಗಳ ಹಂಗಿನಲ್ಲಿದ್ದಾರೋ? ಅಥವಾ ಮೂರು ಪಕ್ಷಗಳು ಸೇರಿ ಜಿಲ್ಲೆಯ ನಿಸ್ಸಹಾಯಕ ಜನರಿಗೆ ಒಟ್ಟಾಗಿ ದ್ರೋಹ ಬಗೆಯುವ ಹುನ್ನಾರಲ್ಲಿದ್ದಾರೋ ತಿಳಿಯುತ್ತಿಲ್ಲ. ಈ ಮೂರು ಪಕ್ಷದ ಮಹನೀಯರು ಧ್ವನಿಯು ಎತ್ತಕಡೆ ಇದೆ ಎನ್ನುವುದು ತಿಳಿಯುತ್ತಿಲ್ಲ.
ಇದನ್ನೂ ಓದಿ ಪ್ರಾಥಮಿಕ ಶಿಕ್ಷಣವಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣವೂ ಸರ್ಕಾರದ ಜವಾಬ್ದಾರಿ
ಜಿಲ್ಲೆಯ ಮತ್ತು ರಾಜ್ಯದ ರಾಜಕೀಯ ಇಷ್ಟೊಂದು ನಿರ್ಲಜ್ಜವಾದಾಗಲೂ ಜನ ತಮ್ಮ ಭರವಸೆಯನ್ನು ಕಳೆದುಕೊಂಡಿಲ್ಲ. ಜನ ತಮ್ಮ ಹಕ್ಕಿಗಾಗಿ ತಮ್ಮೆಲ್ಲ ಇತಿಮಿತಿಗಳನ್ನು ಮೀರಿ ಒಂದಾಗಿ ಹೋರಾಡುತ್ತಿದ್ದಾರೆ. ಹೋರಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ರಾಜಕಾರಣಿಗಳ ರಾಜಕೀಯ ಏನೇ ಇರಲಿ, ಜನ ಬಹಳ ತಾಳ್ಮೆ, ದಿಟ್ಟತನ, ನಿರಂತರತೆಯನ್ನು ಕಾಪಾಡಿಕೊಳ್ಳುವ ಮಹದಾಸೆ ಹೊಂದಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಮುಂದೊಮ್ಮೆ ಮನೆಯಲ್ಲಿ ಕುಳಿತು ಜನಾದೇಶ ಪಾಲಿಸುವೆ ಎಂದು ಮಾತನಾಡುವ ಮುಂಚೆ ಜಿಲ್ಲೆಯ ಜನರು ಸದ್ಯಕ್ಕೆ ಕೊಟ್ಟ ಅಧಿಕಾರ, ಅಂತಸ್ತನ್ನು ಸದುಪಯೋಗ ಮಾಡಿಕೊಂಡು ಪಕ್ಷಬೇಧ ಮರೆತು ಜಿಲ್ಲೆಯ ಋಣ ತೀರಿಸಲಿ.
ಒಟ್ಟಿನಲ್ಲಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜೇ ಬೇಕು ಹೊರತು ಪಿಪಿಪಿ ಮಾದರಿಯ ಹಂಗಿನರಮನೆಯ ಕೊಡುಗೆ ಬೇಕಿಲ್ಲವೆಂಬ ದಿಟ್ಟವಾದ ಅನಿಸಿಕೆ ಜಿಲ್ಲೆಯ ಜನಮಾನಸದಲ್ಲಿ ಈ ಹೋರಾಟವು ಗಟ್ಟಿಗೊಳಿಸಿದೆ. ರಾಜಕೀಯದ ಚಕ್ರವ್ಯೂಹವನ್ನು ಭೇದಿಸಿ ಸರಕಾರಿ ವೈದ್ಯಕೀಯ ಕಾಲೇಜನ್ನು ಪಡೆದೇ ತಿರುವ ಪ್ರತಿಜ್ಞೆ ಮಾಡಿ ಜಿಲ್ಲೆಯ ಜನತೆ ಧೀರೋದಾತ್ತ ಹೋರಾಟವನ್ನು ಕೆಚ್ಚೆದೆಯಿಂದ ಮುನ್ನಡೆಸುತ್ತಿದ್ದಾರೆ.

ಸಿ ಬಿ ಪಾಟೀಲ
ನಿವೃತ್ತ ಜಂಟಿ ನಿರ್ದೇಶಕರು, ವಿಜಯಪುರ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ
ಹೋರಾಟ ಸಮಿತಿಯ ಸದಸ್ಯರು




