ಜನಾಂದೋಲನವಾಗುತ್ತಿರುವ ವಿಜಯಪುರದ ಪಿಪಿಪಿ ವಿರೋಧಿ ಹೋರಾಟ

Date:

ಜಿಲ್ಲೆಯ ಮಂತ್ರಿಗಳು ಮತ್ತು ಶಾಸಕರುಗಳು ತಮ್ಮ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ತರಲಿ ಇಲ್ಲವೇ ರಾಜೀನಾಮೆ ಬಿಸಾಕಿ ಹೋರಾಟಕ್ಕೆ ಸೇರಲಿ ಆಗ ನಾವೇ ಇವರನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತೇವೆ ಎನ್ನುತ್ತಾರೆ ಇಲ್ಲಿನ ಜನರು. ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ತರಾತುರಿಯಲ್ಲಿ ಮುಖ್ಯಮಂತ್ರಿಯೊಂದಿಗೆ ಆಯೋಜಿಸಿದ ಮೊದಲ ಮಾತುಕತೆ ಯಾವುದೇ ಫಲ ನೀಡಲಿಲ್ಲ.

ಈ ಹಿಂದೆ ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲರಿಗೆ ಉತ್ತರಿಸುತ್ತಾ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲರವರು ‘ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್)ಯಡಿ ಎಂ ಬಿ ಪಾಟೀಲ ಅಥವಾ ನಾನು 500 ಕೋಟಿ ರೂಪಾಯಿ ಬಂಡವಾಳ ಹೂಡುತ್ತೇವೆ. ನಮಗೆ ನೀಡಿ’ ಎಂದು ಹೇಳಿದ್ದು ದೊಡ್ಡ ಸುದ್ದಿಯಾಯಿತು. ವಿಜಯಪುರ ಜಿಲ್ಲೆಯ ಜನತೆ ಹಲವು ದಶಕಗಳಿಂದ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಡುತ್ತಲೇ ಬಂದಿತ್ತು. ಆದರೀಗ ಅದು ಖಾಸಗಿಯವರ ಪಾಲಾಗುತ್ತದೆ. ಇರುವ ಸರಕಾರಿ ಆಸ್ಪತ್ರೆ ಸೌಲಭ್ಯವೂ ಜನರಿಗೆ ಸಿಗದಂತಾಗುತ್ತದೆ ಎಂದರಿತು ಜಿಲ್ಲೆಯ ಜನತೆ ಎಚ್ಚೆತ್ತು ಸರಕಾರಿ ವೈದ್ಯಕೀಯ ಹೋರಾಟ ಸಮಿತಿ ಮಾಡಿಕೊಂಡು ಪಕ್ಷಾತೀತ ಮತ್ತು ಪಾರದರ್ಶಕ ಹೋರಾಟ ನಡೆಸುತ್ತಿದ್ದಾರೆ.

ಈ ಹೋರಾಟ ಇದೀಗ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಈ ಹೋರಾಟ ಕೇವಲ ಬಿಜಾಪುರಕ್ಕಷ್ಟೇ ಸಿಮಿತವಾಗದೇ ಇದೀಗ ತುಮಕೂರು ಕೋಲಾರ ದಾವಣಗೆರೆಗೂ ವ್ಯಾಪಿಸುತ್ತಿದೆ. ಸರಕಾರ ವೈದ್ಯಕೀಯ ಕ್ಷೇತ್ರವನ್ನು ಮತ್ತು ವೈದ್ಯಕೀಯ ಶಿಕ್ಷಣವನ್ನು ಚಿನ್ನದ ತತ್ತಿಇಡುವ ಕೋಳಿಯಾಗಿಸಿ ಖಾಸಗಿಯವರಿಗೆ ಧಾರೆ ಎರೆಯುವ ಸರಕಾರದ ನೀತಿಯನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ. ಎಂದೋ‌ ಸತ್ತು ಗೋರಿ ಸೇರಿದ ಈ ಪಿಪಿಪಿ ಯೋಜನೆಯನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ರಾಜ್ಯದ ಜನತೆ ಆಗ್ರಹಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಜಾ ಪ್ರಭುತ್ವದಲ್ಲಿ ಶಿಕ್ಷಣ, ಆರೋಗ್ಯ, ಸಾರಿಗೆಗಳಂತಹ ಕ್ಷೇತ್ರದಲ್ಲಿ ಸರ್ಕಾರ ಯಾವುದೇ ಲಾಭ ನಷ್ಟದ ಮೀನಾಮೇಷ ಎಣಿಸದೇ ಹಣಕಾಸು ನೆರವು ನೀಡಬೇಕು. ಆರೋಗ್ಯವಂತ ಭಾರತ ನಿರ್ಮಿಸುವುದರ ಮೊದಲ ಹೆಜ್ಜೆಯೇ ಇದು. ಆದರೆ ಇಂದು ನಮ್ಮನ್ನಾಳುವ ಸರಕಾರಗಳು ಬಂಡವಾಳಿಗರ ಮತ್ತು ಕಾರ್ಪೋರೇಟ್ ಮನೆತನಗಳ ಮೇಲಿನ ಪ್ರೀತಿ ಮತ್ತು ವ್ಯಾಮೋಹದಿಂದಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಧಾರೆ ಎರೆಯುತ್ತಿವೆ. ಇದರ ಪರಿಣಾಮ‌ ಜನರ ಮೇಲೆ ಯಾವ ರೀತಿ ಬೀರುತ್ತದೆ ಎಂಬ ಕನಿಷ್ಠ ಕಾಳಜಿಯೂ ಇಲ್ಲದೆ ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ.

ಒಬ್ಬ ಮನುಷ್ಯನಿಗೆ ನೂರಾರು ಕೋಟಿ ಅಸ್ತಿ ಇದ್ದರೂ, ತಲೆಕೂದಲಿನಷ್ಟು ಬಂಧು ಬಳಗವಿದ್ದರೂ ಅನಾರೋಗ್ಯಕ್ಕೆ ತುತ್ತಾದಾಗ, ಬದುಕಿಗಿಂತ ಸಾವೇ ವಾಸಿ ಎಂಬ ಭಾವದಿ ಕಣ್ಣೀರು ಹಾಕುತ್ತಾ ಮಂಡಿಯೂರುವುದೇ ವೈದ್ಯಲೋಕದ ಮುಂದೆ. ಸಿರಿವಂತನಂತೆಯೇ ಬಡವನಿಗೂ ಬದುಕುವ, ಆರೋಗ್ಯ ಸೌಲಭ್ಯ ಪಡೆಯುವ ಹಕ್ಕು ಮತ್ತು ಅವಕಾಶ ಪ್ರಜಾಪ್ರಭುತ್ವದಲ್ಲಿ ಇಲ್ಲಿವರೆಗೂ ಇದೆ. ಆದರೆ ಕಾರ್ಪೋರೇಟ್ ಮನೆತನಗಳ ಕೆನ್ನಾಲಿಗೆಯು ಇಂದು ಸಾರ್ವಜನಿಕ ಆರೊಗ್ಯ ವ್ಯವಸ್ಥೆಯ ಮೇಲೂ‌ ಬಿದ್ದಿದೆ. ವಿವಿಧ ಕ್ಷೇತ್ರಗಳ ಖಾಸಗೀಕರಣ ನೇರವಾಗಿ ಪರಿಣಾಮ ಬೀರಿದರೂ ಜನತೆ ಮಾತ್ರ ಅದರ ಪರಿಣಾಮವನ್ನು ಪರೋಕ್ಷವಾಗಿ ಮತ್ತು ನಿಧಾನಕ್ಕೆ ಅನುಭವಿಸುತ್ತಿದ್ದರು. ಆದರೆ ಆರೋಗ್ಯ ಕ್ಷೇತ್ರದ ಖಾಸಗೀಕರಣ ಹಾಗಲ್ಲ. ಅದರ‌ ಪರಿಣಾಮವೇ ಘನಘೋರ ಮತ್ತು ಹೃದಯ ವಿದ್ರಾವಕ!!

WhatsApp Image 2025 12 28 at 4.48.44 PM1

ಆಸ್ಪತ್ರೆಯಲ್ಲಿರುವ ರೋಗಿಗಳು ಗುಣಮುಖರಾಗಿ ಮನೆಗೆ ಬರುವ ಬದಲು ಸಾವಿನ ಬಾಗಿಲಿಗೆ ನೂಕಲ್ಪಡುತ್ತಾರೆ. ಬಡ ಮತ್ತು ಸಾಮಾನ್ಯ ಕುಟುಂಬಗಳ ವಯೋವೃದ್ದರಿಗಂತೂ ಬದುಕುವಾಸೆ ತೊರೆದು ಸದ್ಗತಿ ಬಯಸುತ್ತಾರೆ. ದುಡ್ಡಿಲ್ಲದಿದ್ದರೆ, ಜಗವ ನೋಡಿ ಕಿಲಕಿಲನೆ ನಗಬೇಕಾದ ಮಗು ಕೂಡಾ ಗರ್ಭದಲ್ಲೇ ವಿಲವಿಲ ಒದ್ದಾಡಿ ಸಾಯಬೇಕಾಗುತ್ತದೆ. ಇಂತಹ ಅಸಂಖ್ಯಾತ ಘಟನೆಗಳ ನರಕವೇ ಆರೋಗ್ಯ ಕ್ಷೇತ್ರದ ಖಾಸಗೀಕರಣ! ಮತ್ತು ಈ ನರಕದ ದ್ವಾರಬಾಗಿಲೇ ಪಿಪಿಪಿ!! ಈ ಪಿಪಿಪಿ ಮಾದರಿಯ ವಿರುದ್ದ ವಿಜಯಪುರದ ಜನತೆ ಅಭೂತಪೂರ್ವವಾಗಿ ಸಮರ ಸಾರಿದ್ದಾರೆ. ಕೆಲ ಕಾಗದದ ಚೂರುಗಳಿಲ್ಲ ಎಂಬ ಕಾರಣಕ್ಕೆ ಬದುಕಬೇಕಾದ ಜೀವಗಳು, ದೇಶದ ಭವಿಷ್ಯದ ಕನಸುಗಳು ಗೋರಿ ಸೇರುವುದು ಯಾವ ನ್ಯಾಯ? ಎಂದು ಪ್ರಶ್ನಿಸುವ ಜನತೆಯ ಮಾತಲ್ಲಿ ಹದಗೆಟ್ಟ ಆರೋಗ್ಯ ವ್ಯವಸ್ಥೆಯ ವಿರುದ್ದದ ಆಕ್ರೋಶದಲ್ಲಿ ಕಾಣುತ್ತಿದೆ. ಪಿಪಿಪಿಯು ಬಡವರ, ದೀನ ದಲಿತರ, ವಿರೋಧಿಯಾದದ್ದು. ದಮನಿತ, ಶೋಷಿತ, ಜನರಿಗೆಂದೆ ಇರುವ ಸರ್ಕಾರಿ ಸಂಸ್ಥೆಗಳು ಖಾಸಗೀಕರಣಗೊಂಡರೆ ಈ ಜನರಿಗಿರುವ ಆರೋಗ್ಯ ಸೌಲಭ್ಯವನ್ನೇ ಕಿತ್ತುಕೊಂಡಂತಾಗುತ್ತದೆ. ವೈದ್ಯಕೀಯ ಶಿಕ್ಷಣವೂ ಬಡವರ ಮತ್ತು‌ ಹಿಂದುಳಿದ ವರ್ಗದವರಿಂದ ಕಿತ್ತುಕೊಂಡಂತಾಗುತ್ತದೆ.

ಪಾರದರ್ಶಕವಾದ ಮತ್ತು ಪಕ್ಷಾತೀತವಾದ ಜನ ಚಳವಳಿ ಇಂದಿನ ಗಳಿಗೆಯ ಅವಶ್ಯಕತೆಯಾಗಿದೆ. ಆದರೆ ಈ ಕಾರ್ಯಕ್ಕೆ ನಾವು ಮುಂದಾಗುವಾಗ ನಮಗೆ ಗೊತ್ತಿಲ್ಲದೆ ನಾವೇ ಕಟ್ಟಿಕೊಂಡ ಕೆಲವು ಹಗ್ಗಗಳು ತಡೆಹಿಡಿಯುತ್ತವೆ. ಬೇರೆಯವರು ಬಡಿದ ಗೂಟಗಳಿಗೆ ನಮ್ಮನ್ನು ನಾವೇ ಕಟ್ಟಿಕೊಂಡಿರುತ್ತೇವೆ. ನಮ್ಮ ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ವೈಚಾರಿಕತೆ, ಸಿದ್ದಾಂತ, ಸಂಘಟನೆ, ಮತ, ಪಂಥ, ಪಕ್ಷಗಳ ದಾಟಿ ನಮ್ಮ ಭವಿಷ್ಯಕ್ಕಾಗಿ ನಮ್ಮ ಜನಕ್ಕಾಗಿ ನಮ್ಮ ನೆಲಕ್ಕಾಗಿ ನಾವು ಒಂದಾಗಲೇಬೇಕಾಗಿದೆ ಎನ್ನುತ್ತಾರೆ ಪೊರೆ ಕಳಚಿದ ಹಾವಿನಂತೆ ಹೊಸ ಹುರುಪಿನಿಂದ ಒಂದಾದ ಜಿಲ್ಲೆಯ ತಮ್ಮ ಸಂಘಟನೆಗಳ ಅಸ್ಮಿತೆಯನ್ನು ಪಕ್ಕಕ್ಕೆ ಸರಿಸಿ ಹೋರಾಟ ಮಾಡುತ್ತಿರುವ ವಿವಿಧ ಸಂಘಟನೆಯ ಮುಖಂಡರುಗಳು. “ಈಗಿಲ್ಲದಿದ್ದರೆ, ಇನ್ನೆಂದೂ ಇಲ್ಲ” ಎಂಬ ಧ್ಯೇಯವಾಕ್ಯದೊಂದಿಗೆ ಈ ಹೋರಾಟ ಹಳ್ಳಿ ಹಳ್ಳಿಗೂ ಮನೆ ಮಾತಾಗುತ್ತಿದೆ.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಹೋರಾಟಕ್ಕೆ ಬರುತ್ತಿದ್ದಾರೆ. ಹಳ್ಳಿ ಹಳ್ಳಿಗಳಿಂದಲೂ ಪತ್ರಗಳು ಮುಖ್ಯಮಂತ್ರಿಗಳ ಕಚೇರಿ ಮುಟ್ಟುತ್ತಿವೆ. ರಕ್ತ ಸಹಿ ಸಂಗ್ರಹ, ಪಂಜಿನ ಮೆರವಣಿಗೆಗಳು ನಡೆದವು, ಜಿಲ್ಲೆಯ ಕವಿಗಳು ವೇದಿಕೆಯಲ್ಲೇ ಬಂದು ಕವಿಗೋಷ್ಠಿ ನಡೆಸಿದರು. ಅರ್ಕೆಸ್ಟ್ರಾ ತಂಡಗಳು ಬಂದು ಹೋರಾಟದ ವೇದಿಕೆಯಲ್ಲೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮ ಪಂಚಾಯತಿಗಳಿಂದಲೂ ಪಿಡಿಓಗಳ ಮೂಲಕ ಮನವಿಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿದರು. ತಮ್ಮ ಮನೆಯ ಮುಂದೆ ಹಾಕುವ ರಂಗೋಲಿಗಳಲ್ಲೂ ಹೋರಾಟದ ಘೋಷಣೆಗಳು ಹಾಕಿದರು. ಇದೀಗ ಆಹೋರಾತ್ರಿ‌ ಧರಣಿಯನ್ನೂ ಭಜನಾ ಮಂಡಳಿಗಳು ಧರಣಿಯಲ್ಲಿ ಬಂದು ಭಾಗವಹಿಸುತ್ತಿವೆ.

ಮದುವೆಯಾಗುತ್ತಿರುವ ವಧು ವರರ ಕೈಗಳಲ್ಲೂ ಮದುವೆ ಸಂದರ್ಭದಲ್ಲೆ ‘ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಿ’, ‘ಜನವಿರೋಧಿ ಪಿಪಿಪಿ ಬೇಡ’ ಎಂಬ ಪ್ರತಿಭಟನಾ ಫಲಕಗಳು ಕಾಣುತ್ತಿವೆ. ತಾಲ್ಲೂಕು ಹೋಬಳಿಗಳಲ್ಲೂ ಹೋರಾಟ ಬೆಳೆಯುತ್ತಿವೆ. ಒಟ್ಟನಲ್ಲಿ ಪಿಪಿಪಿ ವಿರೋಧಿ ಹೋರಾಟವು ವಿಜಯಪುರ ಜಿಲ್ಲೆಯಲ್ಲಿ ನೈಜ ಜನಾಂದೋಲನವಾಗಿ ಪರಿವರ್ತನೆ ಹೊಂದಿದೆ. ಅನಿವಾಸಿ ವಿಜಯಪುರದ ಜನರು ತಂಡ ತಂಡವಾಗಿ ಬಂದು ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಸಾಹಿತಿ ಅರವಿಂದ ಮಾಲಗತ್ತಿ, ಹೋರಾಟಗಾರ ಸಿದ್ದನಗೌಡ ಪಾಟೀಲ, ಚಿಂತಕ ಜಿ ಬಿ ಪಾಟೀಲರ ನೇತೃತ್ವದ ತಂಡ ವಿಜಯಪುರಕ್ಕೆ ಭೇಟಿನೀಡಿ ಹೋರಾಟ ಬೆಂಬಲಿಸಿ ತವರು ನೆಲದ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ಜಿಲ್ಲೆಯಲ್ಲಿರುವ ಅನಿವಾಸಿಗರು ಕೂಡಾ ಸರಕಾರಿ ವೈದ್ಯಕೀಯ ಕಾಲೇಜು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದಾರೆ. ವಿಜಯಪುರದ ಕೆಲ ಶಾಸಕರನ್ನು ಒಳಗೊಂಡಂತೆ ಬೇರೆ ಜಿಲ್ಲೆಯ ಶಾಸಕರುಗಳೂ ಸದನದಲ್ಲಿ ದ್ವನಿ ಎತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಜನರು ಹೋರಾಟದ ಹೊಸ ಸಂಸ್ಕೃತಿ ಮತ್ತು ಮಾದರಿ ಸೃಷ್ಟಿಸಿದ್ದಾರೆ. ಈ ಹೋರಾಟ ಯಾರ ವಿರುದ್ದವೂ ಅಲ್ಲ ಯಾರ ಪರವೂ ಅಲ್ಲ, ಜಿಲ್ಲೆಯ ಪರವಾಗಿದೆ.‌ ಪಿಪಿಪಿ ವಿರೋಧಿಸುವವರೆಲ್ಲರೂ ನಮ್ಮವರೇ ಪಿಪಿಪಿ‌ ಸಮರ್ಥಿಸುವವರೆಲ್ಲರೂ ಜಿಲ್ಲೆಯ ಜನರ ವಿರೋಧಿಗಳಷ್ಟೇ. ಎನ್ನುವ ಸರಳ ಸತ್ಯಾಂಶವನ್ನು ಜಿಲ್ಲೆಯ ಜನರ ಮನೆ‌ಮನೆಗೂ ಮನ ಮನಕ್ಕೂ ಮುಟ್ಟಿಸಲಾಗಿದೆ. ಹೋರಾಟ ಪಾರದರ್ಶಕವಾಗಿದ್ದರೆ ಪ್ರಾಮಾಣಿಕವಾಗಿದ್ದರೆ ಎಲ್ಲವನ್ನೂ ಎಲ್ಲರನ್ನೂ ಗೆಲ್ಲುತ್ತಾ ಹೋಗುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆ ಇದು.

ಸರಕಾರ ತನ್ನ ಬಳಿ ದುಡ್ಡಿಲ್ಲ ಅದಕ್ಕೆ ಪಿಪಿಪಿ ಮಾದರಿಯಲ್ಲಿ ಆರಂಭಿಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲರು ಹೇಳುತ್ತಿದ್ದರಾದರೂ ವಾಸ್ತವದ ಅಂಶವೇ ಬೇರೆ. ಬೇರೆ ಬೇರೆ ಜಿಲ್ಲೆಗಳಿಗೆ ಹಣ ಬರುತ್ತದೆ ಬಿಜಾಪುರಕ್ಕೆ ಮಾತ್ರ ಹಣ ಏಕೆ ಬರುವುದಿಲ್ಲ? ಸರಕಾರ ಮತ್ತು ಸರಕಾರದ ಈ ಧೋರಣೆ ಪ್ರತಿಭಟಿಸದ ಶಾಸಕರು ಜಿಲ್ಲೆಗೆ ದ್ರೋಹ ಬಗೆದಂತಲ್ಲವೇ? ಜಿಲ್ಲೆಗೆ ಇಷ್ಟೊಂದು ಘೋರ ಅನ್ಯಾಯವಾಗುವಾಗ ರಾಜಕಾರಣಿಗಳು ರಾಜಕಾರಣ (ಮೊದಲು ರಾಜಕಾರಣಕ್ಕೆ ಸಮಾಜ ಸೇವೆ ಎಂಬ ಹೆಸರಿತ್ತು) ಮಾಡುವುದಾದರೂ ಯಾವ ಪುರುಷಾರ್ಥಕ್ಕೆ ಎನ್ನುವ ಪ್ರಶ್ನೆಗಳಿಗೆ ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ನಿರುತ್ತರವಾಗುತ್ತಿವೆ.

ಜಿಲ್ಲೆಯ ಮಂತ್ರಿಗಳು ಮತ್ತು ಶಾಸಕರುಗಳು ತಮ್ಮ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ತರಲಿ ಇಲ್ಲವೇ ರಾಜೀನಾಮೆ ಬಿಸಾಕಿ ಹೋರಾಟಕ್ಕೆ ಸೇರಲಿ ಆಗ ನಾವೇ ಇವರನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತೇವೆ ಎನ್ನುತ್ತಾರೆ ಇಲ್ಲಿನ ಜನರು. ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರವರು ತರಾತುರಿಯಲ್ಲಿ ಅರೆಬರೆಯಾಗಿ ಮುಖ್ಯಮಂತ್ರಿಯೊಂದಿಗೆ ಆಯೋಜಿಸಿದ ಮೊದಲ ಮಾತುಕತೆ ಯಾವುದೇ ಫಲ ನೀಡಲಿಲ್ಲ. ಅದು ಕೇವಲ ಕಾಟಾಚಾರಕ್ಕೆಂಬಂತೆ ಇತ್ತು. ಇದೀಗ ರಾಣಿ ಚೆನ್ನಮ್ಮ ಮೂರ್ತಿ ಅನಾವರಣಕ್ಕೆ ವಿಜಯಪುರ ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಲಿ. ಇಲ್ಲವೇ ನಮ್ಮ ಜಿಲ್ಲೆಗೆ ಬರುವುದೇ ಬೇಡ ಎನ್ನುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿ ಯುವಕರು. ಕೊರೆವ ಚಳಿಯಲ್ಲೂ ಆಹೋರಾತ್ರಿ ಧರಣಿಯನ್ನು ನಡೆಸುತ್ತಿದ್ದಾರೆ. ಮಹಿಳೆಯರು, ವಯೋವೃದ್ದರು ಕೂಡಾ ಈ ಕೊರೆವ ಚಳಿಗಂಜದೆ ಅಹೋರಾತ್ರಿ‌ ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರವಾಸಕ್ಕೆಂದು ಬಂದ ವಿದೇಶಿ ಪ್ರವಾಸಿಗರೂ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕಮ್ಯೂನಿಸ್ಟ್ ಎಲ್ಲಾ ರಾಜಕೀಯ ಪಕ್ಷಗಳು ಹೋರಾಟವನ್ನು ಬೆಂಬಲಿಸಿವೆ. ಈ‌ ಹೋರಾಟಕ್ಕೆ ಸಿಗುತ್ತಿರುವ ಜನಬೆಂಬಲ ಕಂಡು ಕಾಂಗ್ರೆಸ್ ಪಕ್ಷದಲ್ಲಂತೂ ಅಲ್ಲೋಲ ಕಲ್ಲೋಲವಾಗುತ್ತಿದೆ.

ಬೆಳಗಾವಿ ಅಧಿವೇಶನದಲ್ಲಿಯೂ ವಿಜಯಪುರ ಜನರ ಆಶಯವನ್ನು ರಾಜ್ಯ ಸರ್ಕಾರ ಈಡೇರಿಸಲಿಲ್ಲ. ಉತ್ತರ ಕರ್ನಾಟಕದ ಅಭಿವೃದ್ದಿಗೆಂದೇ ಈ‌ ಅಧಿವೇಶನ ಎಂದು ಬಿಂಬಿಸುತ್ತಾ ಬಂದರೂ ವಿಜಯಪುರದಲ್ಲಿ ನಾಲ್ಕು ತಿಂಗಳಿಂದ‌ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ‌ ನಡೆಯುತ್ತಿರುವ ಹೋರಾಟಕ್ಕೂ ಬೆಲೆ ಕೊಡಲಿಲ್ಲ. ಒಂದಂತೂ ಸತ್ಯ, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಇದನ್ನೂ ಓದಿ ವಿಜಯಪುರದ ಪಿಪಿಪಿ ವಿರೋಧಿ ಹೋರಾಟ ಮತ್ತು‌ ರಾಜಕೀಯ ಚಕ್ರವ್ಯೂಹ

1962 ರಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಿದಾಗ ಅವರ ತೂಕದಷ್ಟು ಬಂಗಾರ ನೀಡಿ ದೇಶಕ್ಕೆ ಕೊಡುಗೆ ಕೊಟ್ಟಿದ್ದು ವಿಜಯಪುರ ಜಿಲ್ಲೆ. ನೆನಪಿಸಿಕೊಳ್ಳಬೇಕಾದ ಮತ್ತು ಹೆಮ್ಮೆಪಟ್ಟುಕೊಳ್ಳಬೇಕಾದ ರೋಮಾಂಚಕಾರಿ ಸಂಗತಿ ಎಂದರೆ ತೀವ್ರ ಬರಗಾಲದಿಂದ ತತ್ತರಿಸುತ್ತಿದ್ದ ಆ ದಿನಗಳಲ್ಲೂ ಜಿಲ್ಲೆಗೆ ಪ್ರಧಾನಿಯನ್ನು ಆಹ್ವಾನಿಸಿ ಪ್ರಧಾನಿಯನ್ನು ತುಲಾಭಾರ ಮಾಡಿ ದೇಶಕ್ಕೆ ನೀಡಿದ ಈ ಕೊಡುಗೆ ಎಂದಿಗೂ ಅಜರಾಮರ!!

ಇಂಥ ಭವ್ಯ ಪರಂಪರೆಯ ಜಿಲ್ಲೆಗೆ ಕನಿಷ್ಠ ಒಂದು ಸರಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿಲ್ಲ ಇಂದಿನ ಕಾಂಗ್ರೆಸ್ ಸರಕಾರಕ್ಕೆ. ಈಗಲಾದರೂ ಜಿಲ್ಲೆಯ ಸಚಿವರುಗಳು, ಶಾಸಕರುಗಳು ತಮ್ಮೆಲ್ಲರ ರಾಜಕೀಯ ಭವಿಷ್ಯ ಬರೆದ ಜಿಲ್ಲೆಯ ಋಣ ತೀರಿಸುವ ‌ಸುವರ್ಣಾವಕಾಶ ಅವರ ಮುಂದೆ ಇದೆ. ಈ‌ ಅವಕಾಶವನ್ನು ಅವರು ಬಳಸಿಕೊಳ್ಳುವರೋ ಅಥವಾ ಕಾಲಿಂದ ತಳ್ಳುವರೋ ಎನ್ನುವುದು ಕಾಲ ಉತ್ತರಿಸುತ್ತದೆ. ರಾಜಾಕರಣಿಗಳು ಏನೇ ಮಾಡಲಿ ನಾವು‌ಮಾತ್ರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ತಂದೇ ತರುತ್ತೇವೆ ಎನ್ನುತ್ತಾರೆ ಜಿಲ್ಲೆಯ ಹೋರಾಟಗಾರರು‌ ಮತ್ತು ಜಿಲ್ಲೆಯ ಸಂಘ ಸಂಸ್ಥೆಗಳು ಮುಖ್ಯಸ್ಥರುಗಳು. ಅಂದಹಾಗೆ ”ಪ್ರಾಣ‌ ಕೊಟ್ಟೇವು; ಆದರೆ ಸರಕಾರಿ ವೈದ್ಯಕೀಯ ಕಾಲೇಜು ಬಿಡೆವು” ಹೋರಾಟಗಾರರ ಘೋಷ ವಾಕ್ಯ‌ವಾಗಿದೆ. ಕಾರ್ಪೋರೇಟ್ ಮನೆತನಗಳ ವಿರುದ್ದ ಗಟ್ಟಿಯಾಗಿ ನಡೆಯುತ್ತಿರುವ ಈ‌ ಸಂಘರ್ಷವು ತುಳಿಯಲೆತ್ನಿಸಿದಷ್ಟು ಹೆಚ್ಚು ಪುಟಿದೇಳುತ್ತಾ ಇದೀಗ ನೂರು‌ ದಿನಗಳನ್ನು ಪೂರೈಸಿದೆ. ಜಿಲ್ಲೆಯ ಸಚಿವರ, ಶಾಸಕರುಗಳ ನಿದ್ದೆಗೆಡಿಸಿದೆ. ಈ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ತಂತ್ರಗಳಷ್ಟೇ ಅಲ್ಲ, ಕುತಂತ್ರಗಳ ಮಧ್ಯೆಯೂ ರಾಜ್ಯದ ಗಮನ ಸೆಳೆಯುತ್ತಿದೆ.

WhatsApp Image 2025 12 29 at 2.57.17 PM
ಲಲಿತಾ ಬಿಜ್ಜರಗಿ
+ posts

ನಿವೃತ್ತ ಉಪನ್ಯಾಸಕರು ಮತ್ತು ಪಿಪಿಪಿ ವಿರೋಧಿ ಹೋರಾಟ ಸಮಿತಿ ಸದಸ್ಯರು

ಪೋಸ್ಟ್ ಹಂಚಿಕೊಳ್ಳಿ:

ಲಲಿತಾ ಬಿಜ್ಜರಗಿ
ಲಲಿತಾ ಬಿಜ್ಜರಗಿ
ನಿವೃತ್ತ ಉಪನ್ಯಾಸಕರು ಮತ್ತು ಪಿಪಿಪಿ ವಿರೋಧಿ ಹೋರಾಟ ಸಮಿತಿ ಸದಸ್ಯರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...