ತನ್ನ ಕಾರ್ಯವೈಖರಿಯ ನಿಗೂಢತೆಯಿಂದ ದೊರಕುವ ಲಾಭಗಳ ಕುರಿತು ಸಂಘವು ತನ್ನ ಸಂತಸವನ್ನು ಹೊರಹಾಕಿದ್ದು ಕೆಲವೊಮ್ಮೆ ಕಂಡುಬಂದಿದೆ. ಮೋಹನ್ ಭಾಗವತ್ ಅವರಂತಹ ಸಾರ್ವಜನಿಕ ವ್ಯಕ್ತಿಗಳು, ಸಂಘದಲ್ಲಿ ಕೇವಲ ‘ಸ್ಫೂರ್ತಿ’ಯನ್ನು ಹೊರತುಪಡಿಸಿ ಕೆದಕುವಂಥ ಯಾವ ಸಂಗತಿಯೂ ಇಲ್ಲ ಎಂದು ಪ್ರತಿಪಾದಿಸುತ್ತಾರಾದರೂ, ಆಂತರಿಕ ಸದಸ್ಯರಿಗಾಗಿಯೇ ಮೀಸಲಾದ ಸಂಘದ ಪ್ರಕಟಣೆಗಳು ಇದಕ್ಕೆ ಭಿನ್ನವಾದ ದನಿಯನ್ನು ಹೊಂದಿವೆ.
‘ಸಂಘವು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾರನ್ನೂ ನಿಯಂತ್ರಿಸುವುದಿಲ್ಲ,’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಆಗಸ್ಟ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಹೇಳಿಕೆ ನೀಡಿದರು. ಹಿಂದೂ ಬಲಪಂಥೀಯ ಸಿದ್ಧಾಂತದ ಮೂಲಸ್ಥಾನವಾಗಿರುವ ಆರ್‌ಎಸ್‌ಎಸ್ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಾಧನೆಯನ್ನು ಸಂಭ್ರಮಿಸಲು ಆಯೋಜಿಸಲಾದ ಸರಣಿ ಕಾರ್ಯಕ್ರಮಗಳಲ್ಲಿ ಭಾಗವತ್ ವರ್ತನೆಯು, ತಮ್ಮ ಮಕ್ಕಳಿಂದ ಅಂತರ ಕಾಯ್ದುಕೊಳ್ಳಲು ಬಯಸುವ ನಿರ್ಲಿಪ್ತ ಪೋಷಕರ ವರ್ತನೆಯಂತೆ ತೋರುತ್ತಿತ್ತು. ‘ಆರ್‌ಎಸ್‌ಎಸ್ ಹಲವು ಸಂಘಟನೆಗಳ ಬೃಹತ್ ಜಾಲದ ಕೇಂದ್ರಬಿಂದುವಾಗಿದ್ದರೂ ಯಾವುದನ್ನೂ ನಿಯಂತ್ರಿಸುವುದಿಲ್ಲ. ಅದರ ಅಂಗಸಂಸ್ಥೆಗಳು ಸ್ವತಂತ್ರ, ಸ್ವಾಯತ್ತ ಮತ್ತು ಕಾಲಕ್ರಮದಲ್ಲಿ ಸ್ವಾವಲಂಬಿಯಾಗಿ ಬೆಳೆದುಬಂದಿವೆ ಎಂದು ಅವರು ಪ್ರತಿಪಾದಿಸಿದರು. ಹಿಂದಿನಿಂದಲೂ ಆರ್‌ಎಸ್‌ಎಸ್ ತಾನು ಅಧಿಕೃತವಾಗಿ ಗುರುತಿಸುವ ಸುಮಾರು ಮೂರು ಡಜನ್‌ನಷ್ಟು ಅಂಗಸಂಸ್ಥೆಗಳನ್ನು ಹೊರತುಪಡಿಸಿ, ಇತರ ಸಾಂಸ್ಥಿಕ ಒಡನಾಡಿಗಳೊಂದಿಗಿನ ಸಂಬಂಧವನ್ನು ಪದೇ ಪದೇ ನಿರಾಕರಿಸುತ್ತ ಬಂದಿದೆ.
ಆದರೆ, ಸಂಘದ ಪ್ರಭಾವವು ಈ ಸೀಮಿತ ವಲಯವನ್ನು ಮೀರಿ ವಿಸ್ತರಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾಗವತ್ ಅವರ ಈ ಹೇಳಿಕೆಗೆ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ‘ಆರ್‌ಎಸ್‌ಎಸ್ ವಿಶ್ವದ ಅತಿದೊಡ್ಡ ಎನ್‌ಜಿಒ’ ಎಂದು ಘೋಷಿಸಿದ್ದರು. ಭಾಗವತ್ ಅವರ ಹೇಳಿಕೆಗಳು ಯಾವ ಅಸ್ಪಷ್ಟತೆಯನ್ನು ಮರೆಮಾಚಲು ಪ್ರಯತ್ನಿಸಿದ್ದವೋ, ಮೋದಿಯವರ ಹೇಳಿಕೆಯು ಅದೇ ಅಸ್ಪಷ್ಟತೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿತು. ಸಮಾಜದ ಅನೇಕ ವಲಯಗಳಲ್ಲಿ ಹರಡಿಕೊಂಡಿರುವ ಆರ್‌ಎಸ್‌ಎಸ್ ಸಂಯೋಜಿತ ಸಂಸ್ಥೆಗಳ ವ್ಯಾಪಕ ಜಾಲ ಮತ್ತು ಸಂಘದ ಶಕ್ತಿಗೆ ಕಾರಣವಾಗಿರುವ ಅವುಗಳ ಒಟ್ಟಾರೆ ವ್ಯಾಪ್ತಿಯನ್ನು ಇದು ಸೂಚಿಸುತ್ತದೆ.

ಈ ಜಾಲದ ಗಾತ್ರ, ಸ್ವರೂಪ ಮತ್ತು ಅದರ ಸ್ವಭಾವವನ್ನು ಇಂದಿನವರೆಗೂ ಪ್ರಾಯೋಗಿಕವಾಗಿ ಏಕೆ ತನಿಖೆಗೆ ಒಳಪಡಿಸಲಾಗಿಲ್ಲ? ಏಕೆಂದರೆ, ಪರಿಸ್ಥಿತಿಯನ್ನು ಇದೇ ರೀತಿ ಉಳಿಸಿಕೊಳ್ಳುವಲ್ಲಿ ‘ಸಂಘ’ವು ಆಸಕ್ತಿ ಹೊಂದಿದೆ. ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಲಾಗಿರುವಂತೆ, ಆರ್.ಎಸ್.ಎಸ್. (RSS) ನೋಂದಾಯಿತ ಸಂಸ್ಥೆಯಲ್ಲ. ಅದು ಒಂದು ಸರಕಾರೇತರ ಸಂಸ್ಥೆಯಾಗಲೀ (NGO), ಧಾರ್ಮಿಕ ದತ್ತಿಯಾಗಲೀ ಅಥವಾ ಇನ್ಯಾವುದೇ ರೀತಿಯ ಕಾನೂನುಬದ್ಧ ಅಸ್ತಿತ್ವವನ್ನಾಗಲೀ ಹೊಂದಿಲ್ಲ. ದಾಖಲೆಗಳಲ್ಲಿ ಯಾವುದೇ ಕುರುಹು ಇಲ್ಲದ ಈ ಸ್ಥಿತಿಯನ್ನು ಬಳಸಿಕೊಂಡು, ಸಂಘವು ತನ್ನ ಆದಾಯದ ಮೂಲಗಳಾಗಲೀ ಅಥವಾ ತನ್ನ ಸದಸ್ಯರು ಯಾರೆಂಬುದನ್ನಾಗಲೀ ಬಹಿರಂಗಪಡಿಸದೆಯೇ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೇಗೆ ಸ್ಥಾಪಿಸಿದೆ ಎಂಬುದನ್ನು ‘ದಿ ಕ್ಯಾರವಾನ್’ ಪತ್ರಿಕೆಯ ಜುಲೈ ಸಂಚಿಕೆಯಲ್ಲಿ ಪ್ರಕಟವಾದ ‘ಆರ್‌ಎಸ್‌ಎಸ್ ಅಸ್ತಿತ್ವದಲ್ಲಿಯೇ ಇಲ್ಲ’ (The RSS does not exist) ಎಂಬ ಶೀರ್ಷಿಕೆಯ ಮುಖಪುಟ ಲೇಖನವು ಸಾಬೀತುಪಡಿಸಿದೆ. ಇನ್ನೂ ಮುಖ್ಯವಾದ ಸಂಗತಿಯೆಂದರೆ, ಆರ್‌ಎಸ್‌ಎಸ್ ತನ್ನ ಬದಲಿ ಪ್ರತಿನಿಧಿಗಳ (proxies) ಮೂಲಕ ಬಹಿರಂಗವಾಗಿಯೇ ಕೆಲಸ ಮಾಡುತ್ತಿದ್ದರೂ, ಆ ಪ್ರತಿನಿಧಿಗಳು ಯಾರು ಮತ್ತು ಅವರೊಂದಿಗೆ ತಾನು ಎಂತಹ ಸಂಪರ್ಕ ಹೊಂದಿದೆ ಎಂಬ ಪ್ರಶ್ನೆ ಎದುರಾದಾಗಲೆಲ್ಲ ನುಣುಚಿಕೊಳ್ಳುತ್ತ ಬಂದಿದೆ.
ವಾಸ್ತವದಲ್ಲಿ, ಸಂಘದ ಸಾರ್ವಜನಿಕ ಪ್ರಚಾರ ಸಾಮಗ್ರಿಗಳಲ್ಲೂ ಈ ಸಂಸ್ಥೆಗಳು ನಿಖರವಾಗಿಯೂ ಏನು, ಎಂಥವು ಎಂಬುದರ ಬಗ್ಗೆ ಗೊಂದಲಮಯ ವಿವರಣೆಗಳನ್ನಷ್ಟೆ ಕಾಣಬಹುದು. ಈ ಸಾಮಗ್ರಿಗಳಲ್ಲಿ, ಒಂದೇ ಪಠ್ಯದಲ್ಲಿ ಒಂದಕ್ಕೊಂದು ವಿರುದ್ಧವಾಗಿ ತೋರುವ ವಿವರಗಳಿವೆ. ಉದಾಹರಣೆಗೆ, ರಾಕೇಶ್ ಸಿನ್ಹಾ ಅವರ 2019ರ ಪುಸ್ತಕ ‘ಅಂಡರ್‌ಸ್ಟ್ಯಾಂಡಿಂಗ್ ಆರ್‌ಎಸ್‌ಎಸ್’ನಲ್ಲಿ, ಈ ಸಂಘಟನೆಗಳನ್ನು ಒಟ್ಟಾರೆಯಾಗಿ ‘ಅಂಗಸಂಸ್ಥೆಗಳು’ (affiliates), ‘ಅವಯವಗಳು’ (organs), ‘ವೇದಿಕೆಗಳು’ (fronts), ಅಥವಾ ಆರ್‌ಎಸ್‌ಎಸ್‌ನಿಂದ ಹುಟ್ಟಿಕೊಂಡ ‘ಸಂತತಿ’ (progeny) ಎಂದು ವಿವರಿಸಲಾಗಿದೆ. ಒಂದು ವರ್ಷದ ಹಿಂದೆ ಪ್ರಕಟವಾದ ರತನ್ ಶಾರದಾ ಅವರ ‘ಆರ್‌ಎಸ್‌ಎಸ್ 360: ಡಿಮಿಸ್ಟಿಫೈಯಿಂಗ್ ರಾಷ್ಟ್ರೀಯ ಸ್ವಯಂಸೇವಕ್ ಸಂಘ್’ ಪುಸ್ತಕವು ಸಹ ‘ಅಂಗಸಂಸ್ಥೆ’, ‘ಆರ್‌ಎಸ್‌ಎಸ್-ಪ್ರೇರಿತ,’ ‘ಯೋಜನೆಗಳು,’ ‘ಸಹೋದರ ಸಂಸ್ಥೆಗಳು,’ ‘ಮಿತ್ರ ಸಂಸ್ಥೆಗಳು,’ ‘ಆರ್‌ಎಸ್‌ಎಸ್-ಸಂಬಂಧಿತ ಸಂಸ್ಥೆಗಳು’ ಮತ್ತು ಆರ್‌ಎಸ್‌ಎಸ್‌ನಿಂದ ‘ನಡೆಸಲ್ಪಡುವ’ ‘ಸಹವರ್ತಿ ಸಂಸ್ಥೆಗಳು’ ಎಂದು ಬಗೆಬಗೆಯಾಗಿ ಕರೆಯುತ್ತಾ ಪದಗಳೊಡನೆ ಆಟವಾಡುತ್ತಿರುವಂತೆ ತೋರುತ್ತದೆ.
ಇಂತಹ ಅಸ್ಥಿರ ಭಾಷೆಯಿಂದಾಗಿ, ಸಂಘದ ಬಗೆಗಿನ ಸಂಶೋಧನೆ ಮತ್ತು ವರದಿಗಾರಿಕೆಯು ಅನಿಶ್ಚಿತತೆ ಮತ್ತು ಗೊಂದಲದ ವಾತಾವರಣದಲ್ಲಿ ಸಿಲುಕಿಕೊಂಡಿದೆ. ಪತ್ರಕರ್ತರು ಮತ್ತು ವಿಶ್ಲೇಷಕರಿಗೆ ಆರ್‌ಎಸ್‌ಎಸ್‌ನ ಆಂತರಿಕ ಕಾರ್ಯವೈಖರಿಯನ್ನು ಅರಿಯಲು ಸಾಧ್ಯವಾಗದಂತೆ ಎಲ್ಲ ಕದಗಳನ್ನೂ ಮುಚ್ಚಿರುವುದರಿಂದ, ಅವರ ಅಧ್ಯಯನವು ಬಹುತೇಕ ಅದರ ಸಿದ್ಧಾಂತ, ಅಥವಾ ಭಾರತೀಯ ಜನತಾ ಪಕ್ಷ ಅಥವಾ ವಿಶ್ವ ಹಿಂದೂ ಪರಿಷತ್ತಿನಂತಹ, ಸಂಘದ ಹೆಚ್ಚು ಗೋಚರವಾಗುವ ಅಂಗಸಂಸ್ಥೆಗಳಿಗೆ ಸೀಮಿತವಾಗಿದೆ. ಇದರ ಪರಿಣಾಮವಾಗಿ, ಆರ್‌ಎಸ್‌ಎಸ್ ಏನು ಮಾಡುತ್ತದೆ ಎನ್ನುವುದಕ್ಕಿಂತ ಅದು ಏನು ಹೇಳುತ್ತದೆ ಎಂಬುದಕ್ಕೆ ಸೀಮಿತವಾಗಿದೆ. ರಾಷ್ಟ್ರೀಯತೆಯ ಬಗೆಗಿನ ಅದರ ಬೃಹತ್ ಘೋಷಣೆಗಳು, ಜಾತಿ ವ್ಯವಸ್ಥೆ ಮತ್ತು ಭಾರತದಲ್ಲಿ ಮುಸ್ಲಿಮರ ಸ್ಥಾನಮಾನದ ಕುರಿತಾದ ದ್ವಂದ್ವ ನಿಲುವುಗಳೇ ಚರ್ಚೆಯ ಮುನ್ನೆಲೆಯಲ್ಲಿವೆ. ಆದರೆ, ಬೃಹತ್ ಹಾಗೂ ಗೌಪ್ಯ ಜಾಲದ ಮೂಲಕ ಅಧಿಕಾರವನ್ನು ಹೇಗೆ ನಿರ್ಮಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎಂಬ ‘ದೈನಂದಿನ ಕಾರ್ಯವೈಖರಿ’ ಎಲೆಮರೆಯಲ್ಲೇ ಉಳಿದಿದೆ. ಇದರಿಂದ ಸಂಘಕ್ಕೆ ಅಪಾರವಾದ ಲಾಭವಿದೆ. ಇದು ಸಂಸ್ಥೆಗೆ ಮೂಲಭೂತ ಪರಿಶೀಲನೆ ಮತ್ತು ಉತ್ತರದಾಯಿತ್ವದಿಂದ ನುಣುಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಎಷ್ಟರಮಟ್ಟಿಗೆ ಎಂದರೆ, ಅದು ಶತಮಾನೋತ್ಸವದ ಸಂದರ್ಭದಲ್ಲಿ ತನ್ನ ಪ್ರಬಲ ಶಕ್ತಿಯ ಪ್ರದರ್ಶನ ಮಾಡುತ್ತಿದ್ದರೂ ಅದರ ಸಂಪನ್ಮೂಲಗಳು ಎಲ್ಲಿಂದ ಹರಿದುಬರುತ್ತವೆ, ಅದು ಎಲ್ಲಿ ಅಧಿಕಾರ ಚಲಾಯಿಸುತ್ತದೆ ಮತ್ತು ಅದರ ಪ್ರಭಾವ ಎಲ್ಲಿ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಖಚಿತವಾದ ಮಾಹಿತಿ ಯಾರಿಗೂ ಇಲ್ಲ.

ಇದಲ್ಲದೆ, ಹಿಂದುತ್ವದ ಆಶಯಗಳ ಕುರಿತಾದ ಚರ್ಚೆಗಳ ಮೇಲೆಯೇ ಅತಿಯಾದ ಗಮನ ಹರಿಸಿರುವುದು, ಬಲಪಂಥೀಯ ಹಿಂದೂ ಸಂಘಟನೆಗಳ ಸಾಂಸ್ಥಿಕ ಸ್ವರೂಪದ ಬಗೆಗಿನ ನಮ್ಮ ತಿಳುವಳಿಕೆಯನ್ನು ಸೀಮಿತಗೊಳಿಸಿದೆ. ಕೇವಲ ಸಿದ್ಧಾಂತವೊಂದೇ ಈ ಚಳವಳಿಯನ್ನು ಒಗ್ಗೂಡಿಸಿ ಹಿಡಿದಿಟ್ಟಿದೆ ಹಾಗೂ ಎಲ್ಲ ಹಿಂದುತ್ವ ಪ್ರತಿಪಾದಕರೂ ಸಂಘಟಿತರಾಗಿ, ಸಂಘದ (ಸಂಘ ಪರಿವಾರ) ಅವಿಭಾಜ್ಯ ಅಂಗವಾಗಿದ್ದಾರೆ ಎಂಬ ತಪ್ಪು ಕಲ್ಪನೆಗೆ ಇದು ಎಡೆಮಾಡಿಕೊಟ್ಟಿದೆ.
ಯತಿ ನರಸಿಂಹಾನಂದ್, ತಪನ್ ಘೋಷ್ ಮತ್ತು ದತ್ತಾತ್ರೇಯ ಹೊಸಬಾಳೆ – ಈ ಮೂವರೂ ಸಂಘದ ಚೌಕಟ್ಟಿನೊಳಗೆ ಸಮಾನವಾಗಿ ನೆಲೆಗೊಂಡಿದ್ದಾರೆ ಎಂಬ ಗ್ರಹಿಕೆ ಸಾಮಾನ್ಯವಾಗಿದ್ದು, ಈ ಮೂವರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗುತ್ತದೆ. ಆದರೆ, ಈ ಚಳವಳಿಯನ್ನು ಬೆಂಬಲಿಸುವವರೆಲ್ಲರೂ ಏಕರೂಪದ ಸೈದ್ಧಾಂತಿಕ ಬದ್ಧತೆಯನ್ನು ಹೊಂದಿದ್ದಾರೆ ಮತ್ತು ಒಂದು ಜಾಲವನ್ನು ಒಗ್ಗೂಡಿಸಲು ಕೇವಲ ಸಿದ್ಧಾಂತವೊಂದೇ ಸಾಕು ಎಂಬ ಆಲೋಚನಾ ಕ್ರಮವು ಪದೇ ಪದೇ ಹುಸಿಯಾಗುತ್ತಲೇ ಬಂದಿದೆ. ಉದಾಹರಣೆಗೆ ಈ ಮೂವರನ್ನೇ ತೆಗೆದುಕೊಳ್ಳುವುದಾದರೆ; ನರಸಿಂಹಾನಂದ್ ಅವರಿಗೆ ಸಂಘದೊಂದಿಗೆ ಯಾವುದೇ ಗುರುತಿಸಬಹುದಾದ ಸಂಪರ್ಕಗಳಿಲ್ಲ, ಮಾತ್ರವಲ್ಲದೆ ಸಂಘವು ಸಾಕಷ್ಟು ತೀವ್ರಗಾಮಿಯಾಗಿಲ್ಲ ಎಂದು ಅವರು ಆಗಾಗ್ಗೆ ಟೀಕಿಸುತ್ತಾರೆ. ಘೋಷ್ ಅವರಂತೂ ತಾವು ಸಂಘದಿಂದ ದೂರ ಸರಿದಿರುವುದಾಗಿ ಹೇಳಿಕೊಂಡಿದ್ದಾರೆ. ಹೊಸಬಾಳೆಯವರು ಸಂಘದ ಸರಕಾರ್ಯವಾಹರಾಗಿದ್ದಾರೆ (ಪ್ರಧಾನ ಕಾರ್ಯದರ್ಶಿ).
ಸಂಘ ಪರಿವಾರದ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ಹೇಗೆ ಸ್ಪಷ್ಟವಾದ ಸೈದ್ಧಾಂತಿಕ ಸ್ವರೂಪ ಹೊಂದಿಲ್ಲವೋ ಅದೇ ರೀತಿ ಎಲ್ಲಾ ಹಿಂದುತ್ವ ಸಂಘಟನೆಗಳೂ ಆರೆಸ್ಸೆಸ್‍ನ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಬಲಪಂಥೀಯ ಹಿಂದೂ ಸಂಘಟನೆಗಳ ಕುರಿತಾದ ನಿಗೂಢತೆಯನ್ನು ಭೇದಿಸಿ ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ. ಇತರೆ ಯಾವುದೇ ಚಳವಳಿಗಳಂತೆಯೇ ಇದೂ ಕೂಡ ರಕ್ತ-ಮಾಂಸದ ಮನುಷ್ಯರು ಹಾಗೂ ಭೌತಿಕ ಅಸ್ತಿತ್ವ ಮತ್ತು ಗೋಜಲಾದ ಸಂಬಂಧಗಳ ಸಂಕೀರ್ಣತೆಯನ್ನು ಒಳಗೊಂಡಿದೆ. ಸಂಘದ ಒಳಗಿನ ಮತ್ತು ಹೊರಗಿನ ಹಿಂದುತ್ವ ಪ್ರತಿಪಾದಕರ ನಡುವೆಯೂ ಸಂಘರ್ಷಗಳು ವ್ಯಾಪಕವಾಗಿವೆ. ಈ ಸಂಘರ್ಷಗಳನ್ನು ನಿರ್ವಹಿಸಲು, ಅವುಗಳಿಗೆ ಸೂಕ್ತ ದಿಕ್ಕು ತೋರಿಸಲು ಮತ್ತು ನಿಯಂತ್ರಿಸಲು ಸಂಘವು ತನ್ನ ಅಗಾಧ ಶಕ್ತಿಯನ್ನು ವ್ಯಯಿಸುತ್ತಿದೆ.
ತನ್ನ ಕಾರ್ಯವೈಖರಿಯ ನಿಗೂಢತೆಯಿಂದ ದೊರಕುವ ಲಾಭಗಳ ಕುರಿತು ಸಂಘವು ತನ್ನ ಸಂತಸವನ್ನು ಹೊರಹಾಕಿದ್ದು ಕೆಲವೊಮ್ಮೆ ಕಂಡುಬಂದಿದೆ. ಮೋಹನ್ ಭಾಗವತ್ ಅವರಂತಹ ಸಾರ್ವಜನಿಕ ವ್ಯಕ್ತಿಗಳು, ಸಂಘದಲ್ಲಿ ಕೇವಲ ‘ಸ್ಫೂರ್ತಿ’ಯನ್ನು ಹೊರತುಪಡಿಸಿ ಕೆದಕುವಂಥ ಯಾವ ಸಂಗತಿಯೂ ಇಲ್ಲ ಎಂದು ಪ್ರತಿಪಾದಿಸುತ್ತಾರಾದರೂ, ಆಂತರಿಕ ಸದಸ್ಯರಿಗಾಗಿಯೇ ಮೀಸಲಾದ ಸಂಘದ ಪ್ರಕಟಣೆಗಳು ಇದಕ್ಕೆ ಭಿನ್ನವಾದ ದನಿಯನ್ನು ಹೊಂದಿವೆ.
ಉದಾಹರಣೆಗೆ, ಆರ್‌ಎಸ್‌ಎಸ್‌ನ ಚಿಂತಕ ರತನ್ ಶಾರದಾ, ‘ಆರ್‌ಎಸ್‌ಎಸ್‌ನ ಅದೃಷ್ಟವೋ ಅಥವಾ ಇತರೆ ಸಂಘಟನೆಗಳ ದೌರ್ಭಾಗ್ಯವೋ, ಯಾರೂ ಕೂಡ ಈ ದೃಷ್ಟಿಕೋನದಿಂದ (ಅಂದರೆ ಆರ್‌ಎಸ್‌ಎಸ್ ಒಂದು ಬೃಹತ್ ಜಾಲವನ್ನು ಸಂಘಟಿಸುತ್ತಿದೆ ಎಂಬ ನೆಲೆಯಲ್ಲಿ) ಸಂಘವನ್ನು ಅಧ್ಯಯನ ಮಾಡಿಲ್ಲ ಅಥವಾ ಸಂಶೋಧನೆಗೆ ಒಳಪಡಿಸಿಲ್ಲ. ವಿಮರ್ಶಕರ ದೃಷ್ಟಿ ಯಾವಾಗಲೂ ಆರ್‌ಎಸ್‌ಎಸ್‌ನಲ್ಲಿ ತಪ್ಪು ಹುಡುಕುವುದರ ಮೇಲೆಯೇ ನೆಟ್ಟಿರುತ್ತದೆ. ಆದರೆ ಆರ್‌ಎಸ್‌ಎಸ್ ಪಾಲಿಗೆ, ತನ್ನ ಆಂತರಿಕ ವಲಯದಲ್ಲಿ ಹಾಗೂ ತನ್ನೊಂದಿಗೆ ಗುರುತಿಸಿಕೊಂಡಿರುವ ಸಹವರ್ತಿ ಸಂಘಟನೆಗಳೊಂದಿಗೆ ‘ಸಮನ್ವಯ’ ಸಾಧಿಸುವುದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಈ ಬೃಹತ್ ‘ಹಿಂದೂ ಅವಿಭಕ್ತ ಕುಟುಂಬ’ವು ಸೌಹಾರ್ದಯುತವಾಗಿ ಅಸ್ತಿತ್ವದಲ್ಲಿರುವುದರ ಹಿಂದಿನ ಗುಟ್ಟೂ ಕೂಡ ಇದೇ ಆಗಿದೆ’ ಎಂದು ಬರೆಯುತ್ತಾರೆ.
ಸಾವಿರಾರು ಇತರ ಸಂಘಟನೆಗಳಿಂದ ‘ತಂತ್ರಗಾರಿಕೆಯ ಅಂತರ’ ಕಾಯ್ದುಕೊಳ್ಳುವ ಮೂಲಕ ಸಂಘವು ಹಲವು ರೀತಿಯಲ್ಲಿ ಲಾಭ ಪಡೆಯುತ್ತಿದೆ. ಇದರಿಂದಾಗಿ ಕಾನೂನು ಅಥವಾ ಆರ್ಥಿಕ ಪರಿಶೀಲನೆಯಿಂದ ದೂರವಿರಲು ಸಂಘಕ್ಕೆ ಅನುಕೂಲವಾಗಿದೆ. ತನ್ನ ಕೆಲಸಗಳನ್ನು ಇತರರಿಗೆ ವಹಿಸಿಕೊಡುವ ಮೂಲಕ, ಸಂದರ್ಭ ಬಂದಾಗ ‘ನಮಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಪುರಾವೆ ಸಹಿತ ನಿರಾಕರಿಸುವ ಅವಕಾಶವನ್ನು ಇದು ಒದಗಿಸುತ್ತದೆ. ನಾಯಕತ್ವದ ಪೈಪೋಟಿಗಳನ್ನು ಸರಿಹೊಂದಿಸುವ ಮೂಲಕ ಆಂತರಿಕ ಒತ್ತಡವನ್ನು ನಿರ್ವಹಿಸಲು ಇದು ನೆರವಾಗುತ್ತದೆ. ಏಕಕಾಲಕ್ಕೆ ಎಲ್ಲರಿಗೂ ಬೇಕಾದಂತೆ ಬೇರೆ ಬೇರೆ ರೀತಿಯ ಸಂದೇಶಗಳನ್ನು ನೀಡಲು ಇದು ಅನುವು ಮಾಡಿಕೊಡುತ್ತದೆ. ಇದೊಂದು ‘ಸ್ವಿಚ್‌ಬೋರ್ಡ್’ನಂತೆ ಕೆಲಸ ಮಾಡುತ್ತದೆ; ಅಗತ್ಯವಿದ್ದಾಗ ಈ ಸಂಘಟನೆಗಳ ಸಂಪರ್ಕವನ್ನು ಸಕ್ರಿಯಗೊಳಿಸಬಹುದು ಅಥವಾ ಮರೆಮಾಚಬಹುದು. ಈ ವಿಸ್ತೃತವಾದ, ಆದರೆ ಗುಪ್ತವಾದ ಕಾರ್ಯ ವಿಭಜನೆಯು ಸಮಾಜದಲ್ಲಿ ಸಂಘದ ವಿಸ್ತರಣೆಗೆ ನಿರ್ಣಾಯಕವಾಗಿ ಪರಿಣಮಿಸಿದೆ. ಈ ಮೂಲಕ ಅದು ಏಕಕಾಲಕ್ಕೆ ಅನೇಕ ವಲಯಗಳಲ್ಲಿ ಬಲಪಂಥೀಯ ಉಪಸ್ಥಿತಿಯನ್ನು ಖಚಿತಪಡಿಸುತ್ತವೆ, ವೈವಿಧ್ಯಮಯ ಪ್ರೇಕ್ಷಕರನ್ನು ತಲುಪುತ್ತವೆ, ಕ್ಷೇತ್ರ ವಿಸ್ತರಣೆಗೆ ಅವಕಾಶಗಳನ್ನು ತೆರೆಯುತ್ತದೆ ಮತ್ತು ಸಂಘಕ್ಕಾಗಿ ಹೊಸ ನೆಲೆಗಟ್ಟುಗಳನ್ನು ರೂಪಿಸುತ್ತದೆ.
ಆದರೆ ಸಂಘದ ಈ ನಿಗೂಢತೆಯು ಮತ್ತೊಂದು ಉದ್ದೇಶವನ್ನೂ ಪೂರೈಸುತ್ತದೆ; ಅದೇನೆಂದರೆ, ತನ್ನ ಪ್ರಭಾವಲಯವನ್ನು ಹಿಗ್ಗಿಸುವುದು ಮತ್ತು ತನ್ನ ಗಾತ್ರವನ್ನು ಉತ್ಪ್ರೇಕ್ಷಿಸಿ ತೋರಿಸುವುದು. ಇಂದು ಬಲಪಂಥೀಯ ಹಿಂದೂ ಶಕ್ತಿಗಿರುವ ರಾಜಕೀಯ ಅಧಿಕಾರವು, ತಳಮಟ್ಟದಿಂದ ತಾನಾಗಿಯೇ ರೂಪುಗೊಂಡ ಜನಜಾಗೃತಿಯೊಂದರ ಸ್ವಾಭಾವಿಕ ಅಭಿವ್ಯಕ್ತಿ ಎಂಬ ಭಾವನೆಯನ್ನು ಇದು ಮೂಡಿಸುತ್ತದೆ. ಇಲ್ಲಿ ಮುಚ್ಚಿಡುತ್ತಿರುವುದು ಸಂಘದ ಯೋಜನೆಗಳಿಗಿರುವ ಬೆಂಬಲವನ್ನಾಗಲೀ ಅಥವಾ ಸ್ವತಃ ಆ ಸಂಘಟನೆಗಳನ್ನಾಗಲೀ ಅಲ್ಲ; ಬದಲಾಗಿ, ಈ ಇಡೀ ವ್ಯವಸ್ಥೆಯ ಹಿಂದೆ ನಡೆಯುತ್ತಿರುವ ‘ಸಂಘಟಿತ ನಿರ್ವಹಣೆ’ಯ (coordination) ವಾಸ್ತವವನ್ನು. ಈ ಅಲೆಯು ಹಿಂದೂ ರಾಷ್ಟ್ರೀಯವಾದಿ ಭಾವನೆಗಳು ಪವಾಡಸದೃಶ ರೀತಿಯಲ್ಲಿ ತಾವಾಗಿಯೇ ಸಂಘಟಿತಗೊಂಡು ಸೃಷ್ಟಿಯಾದ ಸ್ವಾಭಾವಿಕ ಅಲೆಯಲ್ಲ ಎಂಬುದನ್ನು ಲಭ್ಯವಿರುವ ಸಾಕ್ಷ್ಯಗಳು ದೃಢಪಡಿಸುತ್ತವೆ. ಬದಲಾಗಿ, ಇದೊಂದು ವ್ಯವಸ್ಥಿತವಾಗಿ ಮತ್ತು ಯೋಜನಾಬದ್ಧವಾಗಿ ರೂಪಿಸಲಾದ ಬೃಹತ್ ಆಡಳಿತಾತ್ಮಕ ಜಾಲವಾಗಿದೆ. ತೆರೆಮರೆಯಲ್ಲಿರುವ ಸಂಘದ ಕೈವಾಡ ಕಣ್ಣಿಗೆ ಕಾಣಿಸದಿದ್ದಾಗ, ಅದು ಸರ್ವವ್ಯಾಪಿಯಾಗಿದೆ ಎಂದು ಅವಸರದಿಂದ ಮತ್ತು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಆದರೆ ಸಂಘವು ಅನಂತವಾದುದೂ ಅಲ್ಲ, ಹಾಗೆಯೇ ಅರಿಯಲು ಅಸಾಧ್ಯವಾದುದೂ ಅಲ್ಲ. ಸುಮಾರು ಆರು ವರ್ಷಗಳ ಕಾಲ ನಡೆಸಲಾದ, ನಾನು ಕೂಡ ನೇತೃತ್ವ ವಹಿಸಿದ್ದ ವಿಶೇಷ ತನಿಖೆಯೊಂದರ ಫಲವಾಗಿ, ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್‌ನ ಜಾಲದ ನಕ್ಷೆಯೊಂದನ್ನು ರೂಪಿಸಲಾಗಿದೆ. ಪ್ರಸ್ತುತ ‘ಸೈನ್ಸ್ ಪೋ’ನ ‘ಸೆಂಟರ್ ಡಿ ರಿಸರ್ಚಸ್ ಇಂಟರ್ ನ್ಯಾಷನಲ್ಸ್’ನಲ್ಲಿ (CERI) ಸಂಗ್ರಹವಾಗಿರುವ ಮತ್ತು ‘ದಿ ಕ್ಯಾರವಾನ್’ ಪತ್ರಿಕೆಯು ಸತ್ಯಾಸತ್ಯತೆ (fact-check) ಪರಿಶೀಲಿಸಿ ಬಿಡುಗಡೆ ಮಾಡಿರುವ ಈ ದತ್ತಾಂಶಗಳು, ಸಂಘದೊಂದಿಗೆ ಸ್ಪಷ್ಟವಾದ, ಪತ್ತೆ ಹಚ್ಚಬಹುದಾದ ಮತ್ತು ಭೌತಿಕವಾದ ನಂಟು ಹೊಂದಿರುವ 2,500ಕ್ಕೂ ಹೆಚ್ಚು ಸಂಸ್ಥೆಗಳನ್ನು ಬಹಿರಂಗಪಡಿಸಿವೆ.
(ಅನುವಾದ ಮಾಲಿಕೆ -೨ ನಾಳೆ)
ಅನುವಾದ-ಚೇತನಾ ತೀರ್ಥಹಳ್ಳಿ
"ಸೀಯಿಂಗ್ ದ ಸಂಘ್" (Seeing the Sangh) ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸುತ್ತಲೂ ಇರುವ ಸಾಂಸ್ಥಿಕ ಅಂಗಸಂಸ್ಥೆಗಳ ವಿಶ್ವದ ಮೊದಲ ಸಮಗ್ರ ನಕ್ಷೆಯಾಗಿದೆ. ಸದ್ಯಕ್ಕೆ 2,500ಕ್ಕೂ ಹೆಚ್ಚು ಸಂಸ್ಥೆಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಇದು ಸೈನ್ಸ್ ಪೋ ದ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಸ್ಟಡೀಸ್ (CERI) ಸಂಗ್ರಹದಿಂದ ಪಡೆಯಲಾಗಿದೆ. ದಿ ಕ್ಯಾರವಾನ್ ಪತ್ರಿಕೆಯಿಂದ ಫ್ಯಾಕ್ಟ್-ಚೆಕ್ ಮಾಡಿ ಪ್ರಕಟಿಸಲಾಗಿದೆ.





