ನ್ಯಾಯಾಧೀಶರೇ ಧಾರ್ಮಿಕ ಪಕ್ಷಪಾತದ ಹೇಳಿಕೆಗಳನ್ನು ನೀಡಿದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ನ್ಯಾಯಾಲಯಗಳು ಜನರ ನಂಬಿಕೆಯ ಕೇಂದ್ರಗಳು. ಆದರೆ ಇಂತಹ ಹೇಳಿಕೆಗಳು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕುಂದುವಂತೆ ಮಾಡುತ್ತವೆ.
ಭಾರತದ ನ್ಯಾಯಾಂಗ ವ್ಯವಸ್ಥೆಯು ಸೆಕ್ಯುಲರಿಸಂ ಮತ್ತು ನ್ಯಾಯದ ಮೂಲ ತತ್ವಗಳ ಮೇಲೆ ನಿಂತಿದೆ. ಆದರೆ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ನೀಡಿದ ಹೇಳಿಕೆಯು ಈ ತತ್ವಗಳನ್ನು ಪ್ರಶ್ನಿಸುವಂತೆ ಮಾಡಿದೆ. “ನಾನು ಇನ್ನು ನಾಲ್ಕೂವರೆ ವರ್ಷಗಳ ಸೇವೆಯನ್ನು ಹೊಂದಿದ್ದೇನೆ. ಈ ನಾಲ್ಕೂವರೆ ವರ್ಷಗಳಲ್ಲಿ ನಾನು ನನ್ನ ಉತ್ಕೃಷ್ಟತೆಯನ್ನು ತೋರಿಸಬೇಕು. ಸನಾತನ ಧರ್ಮವನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕಿದೆ. ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವಾಗ ಸನಾತನ ಧರ್ಮ ಹೃದಯದಲ್ಲಿರಬೇಕು” ಎಂದು ಚೆನ್ನೈನ ದಾರಾ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಹೇಳಿಕೆಯು ಕೇವಲ ವೈಯಕ್ತಿಕ ನಂಬಿಕೆಯಾಗಿ ಕಾಣುತ್ತದೆಯೇ? ಅಥವಾ ಇದು ನ್ಯಾಯಾಂಗದ ನಿಷ್ಪಕ್ಷಪಾತತೆಯನ್ನು ದುರ್ಬಲಗೊಳಿಸುವ ಸಂಕೇತವೇ? ಎಂಬ ಪ್ರಶ್ನೆಗಳಿಗೆ ಈ ಹೇಳಿಕೆ ದಾರಿ ಮಾಡಿಕೊಟ್ಟಿದೆ.
ನ್ಯಾಯಾಲಯ ಎಂದರೆ ಧರ್ಮದ ಪೀಠವಲ್ಲ. ನ್ಯಾಯಮೂರ್ತಿ ಎಂದರೆ ಧರ್ಮಗುರು ಅಲ್ಲ ನ್ಯಾಯಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಒಬ್ಬ ನ್ಯಾಯಾಧೀಶನ ಹೃದಯದಲ್ಲಿ ಯಾವ ಧರ್ಮ ಇದ್ದರೂ, ನ್ಯಾಯದ ಕುರ್ಚಿಯಲ್ಲಿ ಕೂತ ಕ್ಷಣ ಅವನ ಮುಂದೆ ಇರುವುದೇ ಒಂದು ಪುಸ್ತಕ. ಅದು ಭಾರತದ ಸಂವಿಧಾನ. ಅಲ್ಲಿ “ಸನಾತನ”, “ಇಸ್ಲಾಂ”, “ಕ್ರೈಸ್ತ”, “ಜೈನ್” ಎಂಬ ಪದಗಳಿಲ್ಲ. ಅಲ್ಲಿ ಇರುವ ಪದಗಳು ಸಮಾನತೆ, ಸ್ವಾತಂತ್ರ್ಯ, ಧರ್ಮನಿರಪೇಕ್ಷತೆ, ನ್ಯಾಯ ಮಾತ್ರ.

ಸನಾತನ ಧರ್ಮವು ಹಿಂದೂ ಧರ್ಮದ ಒಂದು ಪ್ರಾಚೀನ ರೂಪವಾಗಿದ್ದು, ಅದು ಕರ್ಮ, ಧರ್ಮ ಮತ್ತು ಮೋಕ್ಷದಂತಹ ತತ್ವಗಳನ್ನು ಒಳಗೊಂಡಿದೆ. ಆದರೆ ನ್ಯಾಯಾಂಗದಲ್ಲಿ ನ್ಯಾಯವು ಸಂವಿಧಾನದ ಮೇಲೆ ಆಧಾರಿತವಾಗಿರಬೇಕು, ಯಾವುದೇ ಧಾರ್ಮಿಕ ಗ್ರಂಥದ ಮೇಲಲ್ಲ. ಭಾರತದ ಸಂವಿಧಾನದ 14ನೇ ಅನುಚ್ಛೇದವು ಸಮಾನತೆಯ ಹಕ್ಕನ್ನು ಖಾತರಿಪಡಿಸುತ್ತದೆ, ಮತ್ತು 15ನೇ ಅನುಚ್ಛೇದವು ಧರ್ಮದ ಆಧಾರದಲ್ಲಿ ತಾರತಮ್ಯವನ್ನು ನಿಷೇಧಿಸುತ್ತದೆ. ನ್ಯಾಯಾಧೀಶರು ಪ್ರಮಾಣ ಮಾಡುವಾಗ ಸಂವಿಧಾನವನ್ನು ರಕ್ಷಿಸುವುದಾಗಿ ಹೇಳಿರುತ್ತಾರೆಯೇ ವಿನಃ ಯಾವುದೇ ಧರ್ಮವನ್ನಲ್ಲ.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಹೇಳಿಕೆಯು ಸನಾತನ ಧರ್ಮವನ್ನು ಕರ್ತವ್ಯ ನಿರ್ವಹಣೆಯ ಮಾರ್ಗದರ್ಶಕವಾಗಿ ಮುಂದಿಡುತ್ತದೆ. ಆದರೆ ಇದು ಹೇಗೆ ನ್ಯಾಯದ ಜೊತೆ ಸಂಬಂಧ ಹೊಂದಿದೆ? ಸನಾತನ ಧರ್ಮದಲ್ಲಿ ಕರ್ಮ ಮತ್ತು ಧರ್ಮದ ತತ್ವಗಳು ಇದ್ದರೂ, ಅವುಗಳು ವೈಯಕ್ತಿಕ ನೈತಿಕತೆಗೆ ಸಂಬಂಧಿಸಿವೆಯೇ ಹೊರತು ಕಾನೂನು ವ್ಯವಸ್ಥೆಗಲ್ಲ. ಉದಾಹರಣೆಗೆ, ಹಿಂದೂ ಧರ್ಮದಲ್ಲಿ ವರ್ಣಾಶ್ರಮ ಧರ್ಮದಂತಹ ಕೆಲವು ಪ್ರಾಚೀನ ಪದ್ಧತಿಗಳು ಇಂದಿನ ಸಮಾನತೆಯ ತತ್ವಗಳೊಂದಿಗೆ ಹೊಂದಿಕೊಳ್ಳುವುದಿಲ್ಲ. ಇಂತಹ ಧಾರ್ಮಿಕ ನಂಬಿಕೆಗಳನ್ನು ನ್ಯಾಯದ ಜೊತೆ ಮಿಶ್ರಣ ಮಾಡಿದರೆ, ಅದು ಪಕ್ಷಪಾತಕ್ಕೆ ಕಾರಣವಾಗತ್ತೆ. ಸನಾತನ ಧರ್ಮವು ಶಾಂತಿ ಮತ್ತು ಸಹಿಷ್ಣುತೆಯನ್ನು ಬೋಧಿಸುತ್ತದೆ ಎಂದು ಹೇಳುವವರು ಇದ್ದರೂ, ಅದನ್ನು ನ್ಯಾಯಾಧೀಶರ ಹೃದಯದಲ್ಲಿ ಇಟ್ಟುಕೊಳ್ಳುವುದು ಸಾರ್ವಜನಿಕ ಕರ್ತವ್ಯಕ್ಕೆ ಸರಿ ಹೊಂದುವುದಿಲ್ಲ. ನ್ಯಾಯ ಎಂಬುದು – ಧರ್ಮ, ಜಾತಿ ಅಥವಾ ಲಿಂಗದಿಂದ ಮುಕ್ತವಾಗಿರಬೇಕು.

ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಹೇಳಿಕೆಯು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಬೇರೆ ಧರ್ಮದವರಿಗೆ ನ್ಯಾಯ ಸಾಧ್ಯವೇ? ಈ ಪ್ರಶ್ನೆ ಅಪಾಯಕಾರಿಯಲ್ಲ ಇದು ಅನಿವಾರ್ಯ. ಸನಾತನ ಧರ್ಮವನ್ನು ಮುಂದಿಟ್ಟುಕೊಂಡು, ಅನ್ಯಾಯಕ್ಕೊಳಗಾದ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇತರ ಧರ್ಮಗಳವರಿಗೆ ನ್ಯಾಯ ಒದಗಿಸುವುದು ಸಾಧ್ಯವೇ? ಭಾರತದ ನ್ಯಾಯಾಂಗದಲ್ಲಿ ನಿಷ್ಪಕ್ಷಪಾತತೆಯು ಅತ್ಯಂತ ಮುಖ್ಯ. ಆದರೆ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಘೋಷಿಸಿದರೆ, ಅದು ಪಕ್ಷಪಾತದ ಆರೋಪಕ್ಕೆ ಕಾರಣವಾಗುತ್ತದೆ. ಯೋಚಿಸಿ, ಒಂದು ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಸಮುದಾಯದ ವಿರುದ್ಧ ದೂರು ಸಲ್ಲಿಸಿದರೆ, ಸನಾತನ ಧರ್ಮವನ್ನು ಹೃದಯದಲ್ಲಿ ಇಟ್ಟುಕೊಂಡ ನ್ಯಾಯಾಧೀಶರು ಹೇಗೆ ನಿಷ್ಪಕ್ಷರಾಗಿರಲು ಸಾಧ್ಯ? ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಹಿಂಸೆಯ ಪ್ರಕರಣಗಳು ಹೆಚ್ಚಿವೆ. ಗೋರಕ್ಷಣೆ, ಲವ್ ಜಿಹಾದ್ ಮುಂತಾದವುಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಅನ್ಯಾಯ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರ ಧಾರ್ಮಿಕ ಹೇಳಿಕೆಗಳು ಅಲ್ಪಸಂಖ್ಯಾತರಲ್ಲಿ ಭಯವನ್ನು ಸೃಷ್ಟಿಸುತ್ತವೆ. ನ್ಯಾಯಾಧೀಶರು ಧರ್ಮವನ್ನು ಮುಂದಿಟ್ಟುಕೊಂಡರೆ, ಅದು ಸಂವಿಧಾನದ ಸೆಕ್ಯುಲರಿಸಂ ಅನ್ನ ಉಲ್ಲಂಘಿಸುತ್ತದೆ. ಹಾಗಾಗಿ ನ್ಯಾಯವನ್ನು ಮಾತ್ರ ಮನಸ್ಸಿನಲ್ಲಿ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು.ನ್ಯಾಯಾಧೀಶರ ಹೃದಯದಲ್ಲಿ ಇರಬೇಕಾದದ್ದು, ಧರ್ಮವಲ್ಲ — ಸಂವಿಧಾನ, ನಂಬಿಕೆ ಅಲ್ಲ — ಸಾಕ್ಷ್ಯ , ಭಕ್ತಿ ಅಲ್ಲ — ತರ್ಕ, ಪುರಾಣವಲ್ಲ — ಕಾನೂನು ವೈಯಕ್ತಿಕವಾಗಿ ಯಾರೇ ಆಗಿರಲಿ, ಯಾವ ಧರ್ಮದಲ್ಲೇ ಹುಟ್ಟಿರಲಿ ನ್ಯಾಯಮೂರ್ತಿಯ ಕುರ್ಚಿಯಲ್ಲಿ ಕೂತ ಕ್ಷಣ, ಅವರು ಧರ್ಮರಹಿತ ಆಗಿರಬೇಕು. ಅದೇ ನಿಜವಾದ ಧರ್ಮನಿರಪೇಕ್ಷತೆ. ಯಾಕಂದ್ರೆ ನ್ಯಾಯ ಧರ್ಮಕ್ಕಿಂತ ದೊಡ್ಡದು.

ನ್ಯಾಯಾಧೀಶರೇ ಧಾರ್ಮಿಕ ಪಕ್ಷಪಾತದ ಹೇಳಿಕೆಗಳನ್ನು ನೀಡಿದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ನ್ಯಾಯಾಲಯಗಳು ಜನರ ನಂಬಿಕೆಯ ಕೇಂದ್ರಗಳು. ಆದರೆ ಇಂತಹ ಹೇಳಿಕೆಗಳು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕುಂದುವಂತೆ ಮಾಡುತ್ತವೆ. ಉದಾಹರಣೆಗೆ, ಕಳೆದ ವರ್ಷಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ರಾಕೇಶ್ ಕಿಶೋರ್ ಎಂಬ ವ್ಯಕ್ತಿ ಚಪ್ಪಲಿ ಎಸೆದ ಘಟನೆಗೂ ಈ ನಾಡು ಸಾಕ್ಷ್ಯವಾಗಿದೆ. ಕೋರ್ಟಿನಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ “ಸನಾತನ ಧರ್ಮಕ್ಕೆ ಆಗುವ ಅಪಮಾನವನ್ನು ಸಹಿಸುವುದಿಲ್ಲ”ವೆಂದು ಹೇಳುತ್ತ ರಾಕೇಶ್ ಕಿಶೋರ್ ಎಂಬ ವಕೀಲ ತಾನು ಧರಿಸಿದ್ದ ಶೂ ಎಸೆದಿದ್ದಾನೆ.
ದೇಶದ ನ್ಯಾಯಾಂಗ ವ್ಯವಸ್ಥೆಯ ಪ್ರತಿನಿಧಿಯಾಗಿರುವ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವುದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅವಮಾನ. ದೇಶದ ಸಾರ್ವಭೌಮತ್ವ, ಪ್ರಜಾಪ್ರಭುತ್ವದ ಮೇಲಿನ ದಾಳಿ ಇದಾಗಿತ್ತು. ಕಾನೂನಿನ ಶಿಷ್ಟತೆ ಕಾಪಾಡಬೇಕಾದವರಿಂದಲೇ ಸಂವಿಧಾನದ ಕಗ್ಗೊಲೆ ನಡೆಯುತ್ತಿದೆ. ಅದು ಅಸಮಾಧಾನದ ಸಂಕೇತ.

ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳು ಧರ್ಮವನ್ನಲ್ಲ, ನ್ಯಾಯವನ್ನು ಮನಸ್ಸಿನಲ್ಲಿ ಇಟ್ಟು ಕರ್ತವ್ಯ ನಿರ್ವಹಿಸಬೇಕು. ಸಂವಿಧಾನದ ಆಶಯವು ಸೆಕ್ಯೂಲರ್ ರಾಷ್ಟ್ರವನ್ನು ನಿರ್ಮಿಸಲು ಸಹಾಯ ಮಾಡತ್ತೆ. ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗಳು ಸಾರ್ವಜನಿಕ ಕರ್ತವ್ಯದಲ್ಲಿ ಮಿಶ್ರಣವಾಗಬಾರದು. ಇಂತಹ ಹೇಳಿಕೆಗಳನ್ನು ತಡೆಯಲು, ನ್ಯಾಯಾಂಗದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳು ಬೇಕು. ನ್ಯಾಯಾಧೀಶರು ಧಾರ್ಮಿಕ ವಿಷಯಗಳಲ್ಲಿ ಕೊಡುವ ಸಾರ್ವಜನಿಕ ಹೇಳಿಕೆಗಳನ್ನು ತಪ್ಪಿಸಬೇಕು. ಇದರಿಂದ ಮಾತ್ರ ನ್ಯಾಯಾಂಗದ ಮೇಲಿನ ವಿಶ್ವಾಸವು ಬೆಳೆಯುತ್ತದೆ. ಕೊನೆಯಲ್ಲಿ, ನ್ಯಾಯಮೂರ್ತಿಗಳ ಹೃದಯದಲ್ಲಿ ಧರ್ಮವಲ್ಲ, ಸಂವಿಧಾನ ಮತ್ತು ನ್ಯಾಯವೇ ಇರಬೇಕು. ಇದು ಭಾರತದ ಜನರಿಗೆ ನ್ಯಾಯದ ಭರವಸೆ ನೀಡುತ್ತದೆ.





